15.01.2020 - "ಅಕ್ಕಪಕ್ಕದ ಊರುಗಳಿಗೆ ಹೋಗೋಣ. ಅಲ್ಲೂ ನಾನು ಶುಭಸಂದೇಶವನ್ನು ಸಾರಬೇಕು"

ಮೊದಲನೇ ವಾಚನ: 1 ಸಮುವೇಲ 3:1-10, 19-20

ಬಾಲಕ ಸಮುವೇಲ ಏಲಿಯ ನೇತೃತ್ವದಲ್ಲಿ ಸರ್ವೇಶ್ವರನ ಸೇವೆ ಮಾಡುತ್ತಾ ಬಂದನು. ಆ ಕಾಲದಲ್ಲಿ ದೇವೋಕ್ತಿಗಳು  ವಿರಳ ಆಗಿದ್ದವು; ದೇವದರ್ಶನಗಳು ಅಪರೂಪವಾಗಿ ಬಿಟ್ಟಿದ್ದವು. ಏಲಿಯ ಕಣ್ಣುಗಳು ದಿನ ದಿನಕ್ಕೂ ಮೊಬ್ಬಾಗುತ್ತಾ ಬಂದು ಕುರುಡನಂಥಾಗಿ ಬಿಟ್ಟಿದ್ದನು. ಒಂದು ರಾತ್ರಿ ಅವನು ತನ್ನ ಕೋಣೆಯಲ್ಲಿ ಮಲಗಿದ್ದನು. ಸಮುವೇಲನು ಸರ್ವೇಶ್ವರನ ಮಂದಿರದಲ್ಲಿ ದೇವರ ಮಂಜೂಷವಿದ್ದ ಸ್ಥಳದಲ್ಲಿ ಮಲಗಿದ್ದನು. ದೇವರ ದೀಪ ಇನ್ನೂ ಉರಿಯುತ್ತಿತ್ತು. ಆಗ ಸರ್ವೇಶ್ವರ ಸ್ವಾಮಿ ಸಮುವೇಲನನ್ನು ಕರೆದರು. ಸಮುವೇಲನು "ಇಗೋ ಬಂದೆ" ಎಂದು ಉತ್ತರಕೊಟ್ಟು, ಒಡನೆ ಏಲಿಯನ ಬಳಿಗೆ ಹೋಗಿ, "ಇಗೋ ಬಂದಿದ್ದೇನೆ; ನೀವು ನನ್ನನ್ನು ಕರೆದಿರಲ್ಲವೆ?" ಎಂದನು. ಏಲಿ, "ನಾನು ನಿನ್ನನ್ನು ಕರೆಯಲಿಲ್ಲ; ಹೋಗಿ ಮಲಗಿಕೋ" ಎಂದನು. ಸಮುವೇಲನು ಹೋಗಿ ಮಲಗಿದನು. ಸರ್ವೇಶ್ವರ ಪುನಃ "ಸಮುವೇಲನೇ," ಎಂದು ಕರೆದರು. ಸಮುವೇಲನು ಕೂಡಲೆ ಎದ್ದು ಏಲಿಯನ ಬಳಿಗೆ ಹೋಗಿ, "ಇಗೋ ಬಂದಿದ್ದೇನೆ; ನೀವು ನನ್ನನ್ನು ಕರೆದಿರಲ್ಲವೇ?" ಎಂದನು. ಅವನು, "ಮಗನೇ, ನಾನು ನಿನ್ನನ್ನು ಕರೆಯಲಿಲ್ಲ; ಹೋಗಿ ಮಲಗಿಕೋ," ಎಂದನು. ಈವರೆಗೂ ಸಮುವೇಲನಿಗೆ ಸರ್ವೇಶ್ವರನ ನೇರ ಅನುಭವ ಆಗಿರಲಿಲ್ಲ. ದೇವರ ವಾಣಿ ಅವನಿಗೆ ಕೇಳಿಸಿರಲಿಲ್ಲ. ಸರ್ವೇಶ್ವರ ಸಮುವೇಲನನ್ನು ಮೂರನೆಯ ಸಾರಿ ಕರೆದರು. ಅವನು ತಟ್ಟನೆ ಏಲಿಯನ ಹತ್ತಿರ ಓಡಿ, “ಇಗೋ, ಬಂದಿದ್ದೇನೆ, ನನ್ನನ್ನು ಕರೆದಿರಲ್ಲಾ,” ಎಂದನು. ಹುಡುಗನನ್ನು ಕರೆದವರು ಸರ್ವೇಶ್ವರನೇ ಎಂದು ಏಲಿಗೆ ತಿಳಿಯಿತು. ಅವನು ಸಮುವೇಲನಿಗೆ, “ಹೋಗಿ ಮಲಗಿಕೋ; ಮತ್ತೆ ಅವರು ನಿನ್ನನ್ನು ಕರೆದರೆ, ‘ಸರ್ವೇಶ್ವರ, ಅಪ್ಪಣೆಯಾಗಲಿ; ತಮ್ಮ ದಾಸ ಕಾದಿದ್ದಾನೆ,’ ಎಂದು ಹೇಳು,” ಎಂದನು. ಸಮುವೇಲನು ಹಿಂದಿರುಗಿ ಹೋಗಿ ತನ್ನ ಸ್ಥಳದಲ್ಲೇ ಮಲಗಿಕೊಂಡನು. ಸರ್ವೇಶ್ವರ ಪ್ರತ್ಯಕ್ಷರಾಗಿ ಹಿಂದಿನಂತೆಯೇ “ಸಮುವೇಲನೇ, ಸಮುವೇಲನೇ,” ಎಂದರು. ಸಮುವೇಲನು, “ಅಪ್ಪಣೆಯಾಗಲಿ, ತಮ್ಮ ದಾಸನಾದ ನಾನು ಕಾದಿದ್ದೇನೆ,” ಎಂದನು. ಸಮುವೇಲನು ದೊಡ್ಡವನಾಗುತ್ತಾ ಬಂದನು. ಸರ್ವೇಶ್ವರ ಅವನೊಡನೆ ಇದ್ದರು. ಆದುದರಿಂದಲೆ ಅವನು ಪ್ರವಾದನೆ ಮಾಡಿದವುಗಳಲ್ಲಿ ಒಂದೂ ತಪ್ಪಿ ಹೋಗಲಿಲ್ಲ. ಸರ್ವೇಶ್ವರ ಅವನನ್ನು ತಮ್ಮ ಪ್ರವಾದಿಯನ್ನಾಗಿ ನೇಮಿಸಿಕೊಂಡರು. ಈ ಸಂಗತಿ ದಾನ್ ಊರಿನಿಂದ ಬೇರ್ಷೆಬದವರೆಗಿದ್ದ ಎಲ್ಲ ಇಸ್ರಯೇಲರಿಗೆ ತಿಳಿಯಿತು.

ಕೀರ್ತನೆ: 40:2, 5, 7-8, 8-9, 10

ಶ್ಲೋಕ: ಪ್ರಭೂ, ನಿಮ್ಮ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ

ಶುಭಸಂದೇಶ: ಮಾರ್ಕ 1:29-39


ಯೇಸುಸ್ವಾಮಿ ಪ್ರಾರ್ಥನಾ ಮಂದಿರದಿಂದ ಹೊರಟು ಯಕೋಬ ಮತ್ತು ಯೊವಾನ್ನನ ಸಂಗಡ ಸಿಮೋನ ಅಂದ್ರೇಯನ ಮನೆಗೆ ಹೋದರು. ಸಿಮೋನನ ಅತ್ತೆ ಜ್ವರದಿಂದ ಮಲಗಿದ್ದಳು. ಇದನ್ನು ಯೇಸುವಿಗೆ ತಿಳಿಸಿದರು. ಯೇಸು ಆಕೆಯ ಬಳಿಗೆ ಹೋಗಿ ಕೈ ಹಿಡಿದು ಎಬ್ಬಿಸಿದರು. ಜ್ವರ ಬಿಟ್ಟು ಹೋಯಿತು. ಆಕೆ ಅವರೆಲ್ಲರನ್ನು ಸತ್ಕರಿಸಿದಳು. ಸಂಜೆ ಸೂರ್ಯ ಮುಳುಗಿದ ಮೇಲೆ ಜನರು ರೋಗಿಗಳನ್ನೂ ದೆವ್ವ ಹಿಡಿದವರನ್ನೂ ಯೇಸುವಿನ ಬಳಿಗೆ ಕರೆ ತಂದರು. ಊರಿಗೆ ಊರೇ ಆ ಮನೆಯ ಬಾಗಿಲಲ್ಲಿ ನೆರೆಯಿತು. ನಾನಾ ರೋಗಗಳಿಂದ ನರಳುತ್ತಿದ್ದವರನ್ನು ಯೇಸು ಗುಣಪಡಿಸಿದರು. ದೆವ್ವ ಹಿಡಿದವರಿಂದ ದೆವ್ವ ಬಿಡಿಸಿದರು. ತಾವು ಯಾರೆಂಬುದನ್ನು ದೆವ್ವಗಳು ಅರಿತಿದ್ದುದರಿಂದ ಯೇಸು ಅವುಗಳಿಗೆ ಮಾತನಾಡಲು ಅವಕಾಶ ಕೊಡಲಿಲ್ಲ. ಮುಂಜಾನೆ ಬೆಳಕು ಹರಿಯುವ ಮುನ್ನ ಯೇಸು ಸ್ವಾಮಿ ಎದ್ದು ಏಕಾಂತ ಪ್ರದೇಶಕ್ಕೆ ಹೋಗಿ ಪ್ರಾರ್ಥನೆ ಮಾಡುತ್ತಿದ್ದರು. ಇತ್ತ, ಸಿಮೋನನೂ ಅವನ ಜೊತೆಗಾರರೂ ಯೇಸುವನ್ನು ಹುಡುಕಿಕೊಂಡು ಹೋದರು. ಅವರನ್ನು ಕಂಡ ಕೂಡಲೇ, "ಎಲ್ಲರು ತಮ್ಮನ್ನೇ ಹುಡುಕುತ್ತಿದ್ದಾರೆ," ಎಂದು ತಿಳಿಸಿದರು. ಅದಕ್ಕೆ ಯೇಸು, "ಅಕ್ಕಪಕ್ಕದ ಊರುಗಳಿಗೆ ಹೋಗೋಣ. ಅಲ್ಲೂ ನಾನು ಶುಭಸಂದೇಶವನ್ನು ಸಾರಬೇಕು. ನಾನು ಬಂದಿರುವುದು ಈ ಉದ್ದೇಶಕ್ಕಾಗಿಯೇ," ಎಂದರು. ಅನಂತರ ಯೇಸು ಗಲಿಲೇಯ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಅಲ್ಲಿನ ಪ್ರಾರ್ಥನಾ ಮಂದಿರಗಳಲ್ಲಿ ಪ್ರಬೋಧಿಸುತ್ತಾ ದೆವ್ವಗಳನ್ನು ಬಿಡಿಸುತ್ತಾ ಬಂದರು.

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...