ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

05.01.2020 - "ಇಸ್ರಯೇಲನ್ನು ಪರಿಪಾಲಿಸುವವನು ನಿನ್ನಿಂದಲೇ ಉದಯಿಸಲಿರುವನು"

ಮೊದಲನೇ ವಾಚನ: ಯೆಶಾಯ  60:1-6 

ನಿನಗೆ ಬೆಳಕು ಬಂದಿದೆ ಜೆರುಸಲೇಮೇ, ಏಳು, ಪ್ರಕಾಶಿಸು; ನಿನ್ನ ಮೇಲೆ ಉದಯಿಸಿದೆ ಸರ್ವೇಶ್ವರನ ತೇಜಸ್ಸು. ಇಗೋ ಜಗತ್ತನು ಮುತ್ತಿದೆ ಕತ್ತಲು, ಜನಾಂಗಗಳನು ಆವರಿಸಿದೆ ಕಾರ್ಗತ್ತಲು. ನಿನ್ನ ಮೇಲಾದರೋ ಉದಯಿಸುವನು ಸರ್ವೇಶ್ವರನು, ನಿನ್ನಲ್ಲಿ ಗೋಚರವಾಗುವುದು ಆತನಾ ತೇಜಸ್ಸು. ರಾಷ್ಟ್ರಗಳು ಬರುವವು ನಿನ್ನ ಬೆಳಕಿಗೆ, ಅರಸರು ನಿನ್ನ ಉದಯದ ಶೋಭೆಗೆ. ನೀ ನೋಡು ಸುತ್ತಮುತ್ತಲು ಕಣ್ಣೆತ್ತಿ, ಬರುತಿಹರು ನಿನ್ನ ಮಕ್ಕಳೆಲ್ಲರು ಗುಂಪಾಗಿ. ದೂರದಿಂದ ಬರುತಿಹರು ಗಂಡುಮಕ್ಕಳು, ಕಂಕುಳಿನಲ್ಲಿ ಹೊತ್ತ ಆ ಹೆಣ್ಣುಮಕ್ಕಳು. ಇದನ್ನು ನೋಡಿ ನೀ ಬೆಳಗುವೆ ಕಾಂತಿಯಿಂದ, ಉಬ್ಬುವುದು ನಿನ್ನ ಎದೆ ಆನಂದದಿಂದ. ಹರಿಯುವುದು ನಿನ್ನೆಡೆಗೆ ಸಮುದ್ರ ವ್ಯಾಪಾರ ಸಮೃದ್ಧಿ, ದೊರಕುವುದು ನಿನಗೆ ಅನ್ಯಜನಾಂಗಗಳ ಆಸ್ತಿಪಾಸ್ತಿ. ತುಂಬಿರುವುದು ನಿನ್ನೊಳು ಒಂಟೆಗಳ ಗುಂಪುಗಳು, ಮಿದ್ಯಾನಿನ, ಏಫದ ಪ್ರಾಯದ ಒಂಟೆಗಳು. ಬರುವರೆಲ್ಲರು ಶೆಬದಿಂದ, ತರುವರು ಬಂಗಾರ, ಧೂಪಗಳನು ಸಾರುವರೆಲ್ಲರು ಸರ್ವೇಶ್ವರನ ಸ್ತುತ್ಯಕಾರ್ಯಗಳನ್ನು. 

ಕೀರ್ತನೆ: 72:1-2, 7-8, 10-11, 12-13 

ಶ್ಲೋಕ: ರಾಜರುಗಳು ಸಾಷ್ಟಾಂಗವೆರಗಲಿ ಸರ್ವೇಶ್ವರಸ್ವಾಮಿಗೆ 

1.  ತಿಳಿಸು ನಿನ್ನ ನ್ಯಾಯವನು ದೇವಾ, ರಾಜನಿಗೆ
     ಕಲಿಸು ನಿನ್ನ ನೀತಿಯನು ರಾಜಕುವರನಿಗೆ
     ಆತನಾಳಲಿ ನಿನ್ನ ಪ್ರಜೆಯನು ನೀತಿಯಿಂದ
     ಪರಿಪಾಲಿಸಲಿ ದೀನದಲಿತರನು ನ್ಯಾಯದಿಂದ

2.  ಬೆಳೆಯಲಿ ಆತನ ಪಾಲನೆಯಲಿ ನ್ಯಾಯನೀತಿ
     ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ ಶಾಂತಿ
     ಸಾಗರದಿಂದ ಸಾಗರದವರೆಗಿರಲಿ ಆತನ ಅಧಿಪತ್ಯ
     ಮಹಾನದಿಯಿಂದ ಭುವಿ ಎಲ್ಲೆಯವರೆಗಿರಲಿ ಆತನ ಪ್ರಭುತ್ವ

3.  ಕಷ್ಟಗಳನರ್ಪಿಸಲಿ ತಾರ್ಷಿಷ್ ಹಾಗೂ ದ್ವೀಪದ್ವೀಪದ ರಾಜರುಗಳು
     ಕಾಣಿಕೆಗಳ ತಂದೊಪ್ಪಿಸಲಿ ಶೆಬಾ ಹಾಗೂ ಸೆಬಾದ ರಾಜರುಗಳು
     ರಾಜರುಗಳು ಸಾಷ್ಟಾಂಗವೆರಗಲಿ ಆತನಿಗೆ
     ಘನರಾಷ್ಟ್ರಗಳು ಸೇವೆಸಲ್ಲಿಸಲಿ ಆತನಿಗೆ

4.  ಏಕೆನೆ ಕಾಪಾಡುವನಾತ ಮೊರೆಯಿಡುವ ಬಡವರನು
     ಉದ್ದರಿಸುವನಾತ ದಿಕ್ಕಿಲ್ಲದ ದೀನದಲಿತರನು
     ದೀನದರಿದ್ರರಿಗೆ ದಯೆಯ ತೋರುವನು
     ದಲಿತರ ಪ್ರಾಣವನು ಕಾಪಾಡುವನು

ಎರಡನೇ ವಾಚನ: ಎಫೆಸಿಯರಿಗೆ  3:2-3, 5-6 

ದೇವರು ತಮ್ಮ ಕೃಪಾತಿಶಯದ ಬಗ್ಗೆ ಸಾರುವ ಹೊಣೆಯನ್ನು ನಿಮ್ಮ ಸಲುವಾಗಿ ನನಗೆ ಕೊಟ್ಟಿರುತ್ತಾರೆಂಬುದನ್ನು ನೀವೇ ಬಲ್ಲಿರಿ. ದೇವರು ತಮ್ಮ ನಿಗೂಢ ಯೋಜನೆಯನ್ನು ನನಗೆ ಪ್ರಕಟಗೊಳ್ಳಿಸಿದ್ದಾರೆ. ಇದರ ಬಗ್ಗೆ ನಾನು ಮೊದಲೇ ನಿಮಗೆ ಸಂಕ್ಷೇಪವಾಗಿ ಬರೆದಿದ್ದೇನೆ. ಹಿಂದಿನ ಕಾಲದವರಿಗೆ ಈ ರಹಸ್ಯವನ್ನು ತಿಳಿಸಿರಲಿಲ್ಲ. ಆದರೆ ಈಗ ದೇವರು ಪವಿತ್ರಾತ್ಮರ  ಪೂಜ್ಯ ಪ್ರೇಷಿತರಿಗೂ ಪ್ರವಾದಿಗಳಿಗೂ ಅದನ್ನು ಪ್ರಕಟಿಸಿದ್ದಾರೆ. ಶುಭಸಂದೇಶದ ಮೂಲಕ ಅನ್ಯಜನರೂ ಯೇಸುಕ್ರಿಸ್ತರಲ್ಲಿ ದೇವಜನರೋಡನೆ ಸಹಬಾಧ್ಯರು, ಹಕ್ಕುದಾರರು, ಒಂದೇ ಶರೀರದ ಅಂಗಗಳು, ಹಾಗೂ ದೇವರು ಮಾಡಿದ ವಾಗ್ದಾನದಲ್ಲಿ ಪಾಲುಗಾರರು - ಇದೇ ಆ ರಹಸ್ಯ. 


ಶುಭಸಂದೇಶ: ಮತ್ತಾಯ 2:1-12 

ಯೇಸುಸ್ವಾಮಿ ಜನಿಸಿದ್ದು ಹೆರೋದರಸನ ಕಾಲದಲ್ಲಿ: ಜುದೇಯ ನಾಡಿನ ಬೆತ್ಲೆಹೇಂ ಎಂಬ ಊರಿನಲ್ಲಿ. ಕೆಲವು ಜ್ಯೋತಿಷಿಗಳು ಪೂರ್ವದಿಕ್ಕಿನಿಂದ ಹೊರಟು ಜೆರುಸಲೇಮಿಗೆ ಬಂದರು. "ಯೆಹೂದ್ಯರ ಅರಸ ಹುಟ್ಟಿದ್ದಾರಲ್ಲವೇ  ಅವರೆಲ್ಲಿ?"  ಎಂದು  ವಿಚಾರಿಸಿದರು; "ಅವರನ್ನು ಸೂಚಿಸುವ ನಕ್ಷತ್ರ ಪೂರ್ವದಲ್ಲಿ ಉದಯಿಸಿದ್ದನ್ನು ಕಂಡು ಅವರನ್ನು ಆರಾಧಿಸಲು ಇಲ್ಲಿಗೆ ಬಂದಿದ್ದೇವೆ" ಎಂದರು. ಇದನ್ನು ಕೇಳಿದ್ದೇ  ಹೆರೋದರಸನು ಬಹಳ ತಳಮಳಗೊಂಡನು; ಅಂತೆಯೇ ಜೆರುಸಲೇಮ್ ಆದ್ಯಂತವೂ ಗಲಿಬಿಲಿಗೊಂಡಿತು. ಯೆಹೂದ್ಯರ ಎಲ್ಲ ಮುಖ್ಯ ಯಾಜಕರನ್ನೂ ಧರ್ಮಶಾಸ್ತ್ರಿಗಳನ್ನೂ ಅವನು ಸಭೆ ಸೇರಿಸಿದನು. " ಕ್ರಿಸ್ತ ಹುಟ್ಟಬೇಕಾದುದು ಎಲ್ಲಿ?" ಎಂದು ಅವರನ್ನು ವಿಚಾರಿಸಿದನು. ಅದಕ್ಕೆ ಅವರು "ಜುದೇಯದಲ್ಲಿರುವ ಬೆತ್ಲೆಹೇಮಿನಲ್ಲೇ ಹುಟ್ಟುವನು; ಏಕೆಂದರೆ "ಜುದೇಯ ನಾಡಿನ ಬೆತ್ಲೆಹೇಮೇ, ಜುದೇಯದ ಪ್ರಮುಖ ಪಟ್ಟಣಗಳಲ್ಲಿ ನೀನು ಅಲ್ಪಳೇನು ಅಲ್ಲ. ಕಾರಣ ನನ್ನ ಪ್ರಜೆ ಇಸ್ರಯೇಲನ್ನು ಪರಿಪಾಲಿಸುವವನು ನಿನ್ನಿಂದಲೇ ಉದಯಿಸಲಿರುವನು", ಎಂದು ಪ್ರವಾದಿ ಬರೆದಿದ್ದಾನೆ. ಎಂದು ಉತ್ತರವಿತ್ತನು. ಆಗ ಹೆರೋದನು ಆ ಜ್ಯೋತಿಷಿಗಳನ್ನು ಗೋಪ್ಯವಾಗಿ ಬರಮಾಡಿಕೊಂಡು ಅವರಿಗೆ ನಕ್ಷತ್ರ ಕಾಣಿಸಿಕೊಂಡ ಕಾಲವನ್ನು ಸ್ಪಷ್ಟವಾಗಿ ಕೇಳಿ ತಿಳಿದುಕೊಂಡನು. ಆನಂತರ ಅವರನ್ನು ಬೆತ್ಲೆಹೇಮಿಗೆ ಕಳುಹಿಸಿಕೊಡುತ್ತಾ, 'ನೀವು ಹೋಗಿ ಆ ಮಗುವನ್ನು ಚೆನ್ನಾಗಿ ಹುಡುಕಿರಿ; ಕಂಡಕೂಡಲೇ ನನಗೆ ಬಂದು ತಿಳಿಸಿರಿ. ನಾನು ಹೋಗಿ ಆ ಮಗುವನ್ನು ಆರಾಧಿಸಬೇಕು," ಎಂದು ಹೇಳಿದನು. ಜ್ಯೋತಿಷಿಗಳು ಅರಸನ ಮಾತಿಗೆ ತಲೆಬಾಗಿ ಹೊರಟರು. ಪೂರ್ವದಿಕ್ಕಿನಲ್ಲಿ ಮೊದಲೇ ಅವರಿಗೆ ಕಾಣಿಕೊಂಡಿದ್ದ ನಕ್ಷತ್ರ ಪುನಃ ಕಾಣಿಸಿಕೊಂಡಿತು. ಅವರು ಪರಮಾನಂದಭರಿತರಾದರು. ಆ ನಕ್ಷತ್ರ ಅವರ ಮುಂದೆ ಮುಂದೆ ಸಾಗುತ್ತಾ ಮಗು ಇದ್ದ ಸ್ಥಳದ ಮೇಲೆ ಬಂದು ನಿಂತುಬಿಟ್ಟಿತು. ಜ್ಯೋತಿಷಿಗಳು ಆ ಮನೆಯನ್ನು ಪ್ರವೇಶಿಸಿ ಮಗುವನ್ನು ತಾಯಿ ಮರಿಯಳ ಬಳಿ ಕಂಡು ಅದಕ್ಕೆ ಸಾಷ್ಟಾಂಗವೆರಗಿ ಆರಾಧಿಸಿದರು. ತಮ್ಮ ತಮ್ಮ ಬೊಕ್ಕಸಗಳನ್ನು ಬಿಚ್ಚಿ ಚಿನ್ನ, ಪರಿಮಳದ್ರವ್ಯ ಮತ್ತು ರಕ್ತಬೋಳ ಇವುಗಳನ್ನು ಮಗುವಿಗೆ ಪಾದಕಾಣಿಕೆಯಾಗಿ ಸಮರ್ಪಿಸಿದರು. ಹೆರೋದನ ಬಳಿಗೆ ಹಿಂದಿರುಗಬಾರದೆಂದು ಕನಸಿನಲ್ಲಿ ದೈವಾಜ್ಞೆಯಾದ್ದರಿಂದ, ಅವರು ಬೇರೆ ಮಾರ್ಗವಾಗಿ ತಮ್ಮ ದೇಶಕ್ಕೆ ಮರಳಿದರು.

No comments:

Post a Comment