ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

21.01.2020 - “ಸಬ್ಬತ್ ದಿನ ಇರುವುದು ಮನುಷ್ಯನಿಗಾಗಿ ಹೊರತು ಮನುಷ್ಯ ಇರುವುದು ಸಬ್ಬತ್ತಿಗಾಗಿ ಅಲ್ಲ"

ಮೊದಲನೇ ವಾಚನ: 1 ಸಮುವೇಲ 16:1-13

ಸರ್ವೇಶ್ವರಸ್ವಾಮಿ ಸಮುವೇಲನಿಗೆ, “ನಾನು ಸೌಲನನ್ನು ಇಸ್ರಯೇಲರ ಅರಸನಾಗಿರುವುದಕ್ಕೆ ಅಯೋಗ್ಯನೆಂದು ತಳ್ಳಿಬಿಟ್ಟೆನಲ್ಲವೆ? ನೀನು ಅವನಿಗಾಗಿ ಎಷ್ಟರವರೆಗೆ ದುಃಖಿಸುತ್ತಿರುವೆ? ಕೊಂಬನ್ನು ಎಣ್ಣೆಯಿಂದ ತುಂಬಿಸಿಕೊಂಡು ಬಾ; ನಾನು ನಿನ್ನನ್ನು ಬೆತ್ಲೆಹೇಮಿನವನಾದ ಜೆಸ್ಸೆಯನ ಬಳಿಗೆ ಕಳುಹಿಸುತ್ತೇನೆ. ಅವನ ಮಕ್ಕಳಲ್ಲೊಬ್ಬನನ್ನು ಅರಸನನ್ನಾಗಿ ಆರಿಸಿಕೊಂಡಿದ್ದೇನೆ,” ಎಂದು ಹೇಳಿದರು. ಅದಕ್ಕೆ ಸಮುವೇಲನು, “ನಾನು ಹೋಗುವುದು ಹೇಗೆ? ಇದು ಸೌಲನಿಗೆ ಗೊತ್ತಾದರೆ ಅವನು ನನ್ನನ್ನು ಕೊಂದು ಹಾಕುವನಲ್ಲವೇ?” ಎಂದನು. ಆಗ ಸರ್ವೇಶ್ವರ, “ನೀನು ಒಂದು ಕಡಸನ್ನು ತೆಗೆದುಕೊಂಡು ಹೋಗು. ಸರ್ವೇಶ್ವರನಿಗೆ ಬಲಿಯರ್ಪಣೆ ಮಾಡಲು ಬಂದಿದ್ದೇನೆ ಎಂದು ಹೇಳಿ ಜೆಸ್ಸೆಯನನ್ನು ಅದಕ್ಕೆ ಆಮಂತ್ರಿಸು. ಆಮೇಲೆ ನೀನು ಮಾಡಬೇಕಾದುದನ್ನು ನಾನೇ ತಿಳಿಸುತ್ತೇನೆ; ನಾನು ಯಾರನ್ನು ತೋರಿಸುತ್ತೇನೋ ಅವನನ್ನೇ ನೀನು ಅಭಿಷೇಕಿಸಬೇಕು,” ಎಂದರು. ಸರ್ವೇಶ್ವರ ಹೇಳಿದಂತೆಯೇ ಸಮುವೇಲನು ಬೆತ್ಲೆಹೇಮಿಗೆ ಹೋದನು. ಆ ಊರಿನ ಹಿರಿಯರು ನಡುನಡುಗುತ್ತಾ ಬಂದು, ಅವನನ್ನು ಎದುರುಗೊಂಡು, “ನಿನ್ನ ಆಗಮನ ನಮಗೆ ಶುಭಕರವಾಗಿದೆಯೇ?” ಎಂದು ಕೇಳಿದರು. ಅವನು, “ಹೌದು ಶುಭಕರವಾಗಿದೆ; ಸರ್ವೇಶ್ವರನಿಗೆ ಬಲಿಯನ್ನರ್ಪಿಸುವುದಕ್ಕೆ ಬಂದಿದ್ದೇನೆ. ನೀವು ಶುದ್ಧರಾಗಿ ನನ್ನ ಜೊತೆಯಲ್ಲಿ ಬಲಿಯರ್ಪಣೆಗೆ ಬನ್ನಿ,” ಎಂದು ಹೇಳಿ ಜೆಸ್ಸೆಯನನ್ನೂ ಅವನ ಮಕಳನ್ನೂ ಶುದ್ಧೀಕರಿಸಿ ಅವರನ್ನೂ ಬಲಿಯರ್ಪಣೆಗೆ ಆಮಂತ್ರಿಸಿದನು. ಅವರು ಬಂದರು. ಸಮುವೇಲನು ಎಲೀಯಾಬನನ್ನು ನೋಡಿ ತನ್ನಷ್ಟಕ್ಕೆ, “ನಿಶ್ಚಯವಾಗಿ ಸರ್ವೇಶ್ವರ ಅಭಿಷೇಕಕ್ಕೆ ಆರಿಸಿಕೊಂಡವನು ನನ್ನ ಮುಂದೆಯೇ ಇದ್ದಾನೆ,” ಎಂದುಕೊಂಡನು. ಆದರೆ ಸರ್ವೇಶ್ವರ ಸ್ವಾಮಿ ಸಮುವೇಲನಿಗೆ, “ನೀನು ಅವನ ಚೆಲುವಿಕೆಯನ್ನಾಗಲಿ ಎತ್ತರವನ್ನಾಗಲಿ ನೋಡಬೇಡ; ನಾನು ಅವನನ್ನು ತಳ್ಳಿ ಬಿಟ್ಟಿದ್ದೇನೆ. ಸರ್ವೇಶ್ವರ ಮನುಷ್ಯರಂತೆ ಬಹಿರಂಗದ ತೋರಿಕೆಯನ್ನು ನೋಡುವುದಿಲ್ಲ; ಅಂತರಂಗವನ್ನೇ ವೀಕ್ಷಿಸುತ್ತಾನೆ,” ಎಂದರು. ಜೆಸ್ಸೆಯನು ಅಬೀನಾದಾಬನನ್ನು ಸಮುವೇಲನ ಬಳಿಗೆ ಬರ ಮಾಡಲು ಸಮುವೇಲನು, “ಸರ್ವೇಶ್ವರ ಇವನನ್ನೂ ಆರಿಸಿಕೊಳ್ಳಲಿಲ್ಲ,” ಎಂದು ಹೇಳಿದನು. ತರುವಾಯ ಜೆಸ್ಸೆಯನು ಶಮ್ಮ ಎಂಬವನನ್ನು ಬರ ಮಾಡಲು ಸಮುವೇಲನು, “ಸರ್ವೇಶ್ವರ ಇವನನ್ನೂ ಆರಿಸಿಕೊಳ್ಳಲಿಲ್ಲ,” ಎಂದು ಹೇಳಿದನು. ಹೀಗೆ ಜೆಸ್ಸೆಯನು ತನ್ನ ಮಕ್ಕಳಲ್ಲಿ ಏಳು ಮಂದಿಯನ್ನೂ ಅವನ ಬಳಿಗೆ ಬರ ಮಾಡಿದರೂ ಅವನು, “ಸರ್ವೇಶ್ವರ ಇವರನ್ನು ಆರಿಸಿಕೊಳ್ಳಲಿಲ್ಲ,” ಎಂದು ನುಡಿದನು. ಅನಂತರ ಸಮುವೇಲನು ಜೆಸ್ಸೆಯನನ್ನು, “ನಿನ್ನ ಮಕ್ಕಳೆಲ್ಲಾ ಇಷ್ಟೇ ಮಂದಿಯೋ?” ಎಂದು ಕೇಳಿದನು. ಅವನು, “ಇವರೆಲ್ಲರಿಗಿಂತಲೂ ಚಿಕ್ಕವನು ಒಬ್ಬನಿದ್ದಾನೆ; ಅವನು ಕುರಿಮೇಯಿಸುವುದಕ್ಕೆ ಹೋಗಿದ್ದಾನೆ,” ಎಂದು ಉತ್ತರಕೊಟ್ಟನು. ಆಗ ಸಮುವೇಲನು, “ಅವನನ್ನು ಇಲ್ಲಿಗೆ ಬರಮಾಡು; ಅವನು ಬರುವವರೆಗೂ ನಾವು ಊಟಕ್ಕೆ ಕುಳಿತುಕೊಳ್ಳಬಾರದು,” ಎಂದು ಹೇಳಿದನು. ಜೆಸ್ಸೆಯನು ಅವನನ್ನು ಕರೆತರಿಸಿದನು. ಅವನು ಕೆಂಬಣ್ಣದವನು, ಸುಂದರ ನೇತ್ರನು, ಹಾಗು ನೋಟಕ್ಕೆ ರಮಣೀಯನು. ಸರ್ವೇಶ್ವರ ಸಮುವೇಲನಿಗೆ, “ಎದ್ದು ಇವನನ್ನು ಅಭಿಷೇಕಿಸು; ನಾನು ಆರಿಸಿಕೊಂಡವನು ಇವನೇ,” ಎಂದು ಆಜ್ಞಾಪಿಸಿದರು. ಸಮುವೇಲನು ಎಣ್ಣೆಯ ಕೊಂಬನ್ನು ತೆಗೆದುಕೊಂಡು ಅವನನ್ನು ಅವನ ಸಹೋದರರ ಮಧ್ಯದಲ್ಲಿ ಅಭಿಷೇಕಿಸಿದನು. ಕೂಡಲೆ ಸರ್ವೇಶ್ವರನ ಆತ್ಮವು ದಾವೀದನ ಮೇಲೆ ಬಂದು ನೆಲೆಗೊಂಡಿತು. ಅನಂತರ ಸಮುವೇಲನು ರಾಮಾಕ್ಕೆ ಹೊರಟು ಹೋದನು.

ಕೀರ್ತನೆ: 89:20, 21-22, 27-28

ಶ್ಲೋಕ: ನನ್ನ ದಾಸ ದಾವೀದನನು ಗುರುತಿಸಿರುವೆ

ಶುಭಸಂದೇಶ: ಮಾರ್ಕ 2:23-28


ಅದೊಂದು ಸಬ್ಬತ್ ದಿನ. ಯೇಸುಸ್ವಾಮಿ ಗೋದಿಯ ಹೊಲಗಳಲ್ಲಿ ಹಾದು ಹೋಗುತ್ತಿದ್ದರು. ಜೊತೆಯಲ್ಲಿದ್ದ ಅವರ ಶಿಷ್ಯರು ತೆನೆಗಳನ್ನು ಕೀಳಲಾರಂಭಿಸಿದರು. ಇದನ್ನು ಕಂಡ ಫರಿಸಾಯರು, “ನೋಡು, ಸಬ್ಬತ್‍ದಿನದಲ್ಲಿ ನಿಷಿದ್ಧವಾದುದನ್ನು ನಿನ್ನ ಶಿಷ್ಯರು ಮಾಡುತ್ತಿದ್ದಾರೆ, ಇದು ಸರಿಯೇ?” ಎಂದು ಯೇಸುವನ್ನು ಪ್ರಶ್ನಿಸಿದರು. ಅದಕ್ಕೆ ಯೇಸು, “ಹಿಂದೆ, ಅರಸ ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದು, ಉಣ್ಣಲು ಏನೂ ಇಲ್ಲದಿದ್ದಾಗ ಏನು ಮಾಡಿದರೆಂಬುದನ್ನು ನೀವು ಓದಿರಬೇಕಲ್ಲವೇ? ಪ್ರಧಾನಯಾಜಕ ಅಬಿಯಾತರನ ಕಾಲದಲ್ಲಿ ಅವನು ದೇವಮಂದಿರದೊಳಕ್ಕೆ ಹೋಗಿ, ಯಾಜಕನ ಹೊರತು ಬೇರೆ ಯಾರೂ ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನೇ ತಿಂದ; ಅಲ್ಲದೆ, ತನ್ನ ಸಂಗಡ ಇದ್ದವರಿಗೂ ಕೊಟ್ಟನಲ್ಲವೇ?” ಎಂದು ಅವರನ್ನು ಕೇಳಿದರು. ಬಳಿಕ ಯೇಸು ಅವರಿಗೆ, “ಸಬ್ಬತ್ ದಿನ ಇರುವುದು ಮನುಷ್ಯನಿಗಾಗಿ ಹೊರತು ಮನುಷ್ಯ ಇರುವುದು ಸಬ್ಬತ್ತಿಗಾಗಿ ಅಲ್ಲ. ಆದುದರಿಂದ ನರಪುತ್ರನು ಸಬ್ಬತ್ತಿಗೂ ಒಡೆಯ,” ಎಂದರು.

No comments:

Post a Comment