ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

23.01.2020

ಮೊದಲನೇ ವಾಚನ: 1 ಸಮುವೇಲ 18:6-9; 19:1-7

ದಾವೀದನು ಫಿಲಿಷ್ಟಿಯರನ್ನು ಸಂಹರಿಸಿ ಸರ್ವಸೈನಿಕರೊಡನೆ ಹಿಂದಿರುಗಿ ಬರುವಾಗ ಇಸ್ರಯೇಲರ ಎಲ್ಲ ಪಟ್ಟಣಗಳಿಂದ ಮಹಿಳೆಯರು ಹೊರಗೆ ಬಂದು, ತಾಳ ತಮ್ಮಟೆಗಳನ್ನು ಹಿಡಿದು, ಸಂತೋಷದಿಂದ ಹಾಡುತ್ತಾ ಕುಣಿಯುತ್ತಾ, ಅರಸ ಸೌಲನನ್ನು ಎದುರುಗೊಂಡರು. ಅವರು: “ಸೌಲ ಕೊಂದನು ಸಾವಿರಗಟ್ಟಳೆ ದಾವೀದನೋ ಕೊಂದನು ಹತ್ತು ಸಾವಿರಗಟ್ಟಳೆ,” ಎಂದು ಪರಸ್ಪರ ಹಾಡಿದರು. ಈ ಮಾತುಗಳು ಸೌಲನಿಗೆ ಹಿಡಿಸಲಿಲ್ಲ. ಅವನು ಕೋಪದಿಂದ, “ದಾವೀದನು ಹತ್ತು ಸಾವಿರಗಟ್ಟಳೆ ಕೊಂದನೆಂದೂ ನಾನು ಸಾವಿರಗಟ್ಟಳೆ ಮಾತ್ರ ಕೊಂದೆನೆಂದು ಹಾಡುತ್ತಾರಲ್ಲಾ! ಹಾಗಾದರೆ ಅವನನ್ನು ರಾಜನನ್ನಾಗಿ ಮಾಡುವುದೊಂದೇ ಕಡಿಮೆ!” ಎಂದುಕೊಂಡನು. ಅಂದಿನಿಂದ ಸೌಲನು ದಾವೀದನ ಮೇಲೆ ಕಣ್ಣಿಟ್ಟನು. ದಾವೀದನನ್ನು ಕೊಲ್ಲಬೇಕೆಂದು ಸೌಲನು ತನ್ನ ಮಗ ಯೋನಾತಾನನಿಗೂ ಎಲ್ಲಾ ಪರಿವಾರದವರಿಗೂ ಆಜ್ಞಾಪಿಸಿದನು. ಆದರೆ ಯೋನಾತಾನನು ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದನು. ಆದುದರಿಂದ ಅವನು ದಾವೀದನಿಗೆ, “ನನ್ನ ತಂದೆ ಸೌಲನು ನಿನ್ನನ್ನು ಕೊಲ್ಲಬೇಕೆಂದಿರುತ್ತಾರೆ. ನೀನು ಜಾಗರೂಕತೆಯಿಂದಿರು; ನಾಳೆ ಬೆಳಿಗ್ಗೆ ಒಂದು ಗುಟ್ಟಾದ ಸ್ಥಳದಲ್ಲಿ ಅಡಗಿಕೊಂಡಿರು. ನನ್ನ ತಂದೆಯ ಬಳಿಯಲ್ಲಿದ್ದು ನಿನ್ನ ಬಗ್ಗೆ ಅವರೊಡನೆ ಮಾತಾಡಿ ಗೊತ್ತಾದ ವಿಷಯವನ್ನು ನೀನು ಅವಿತುಕೊಂಡಿರುವ ಸ್ಥಳಕ್ಕೆ ಬಂದು ತಿಳಿಸುವೆನು,” ಎಂದು ಹೇಳಿದನು. ತರುವಾಯ ಅವನು ತನ್ನ ತಂದೆಯ ಮುಂದೆ ದಾವೀದನನ್ನು ಹೊಗಳಿದನು. “ಒಡೆಯರಾದ ತಾವು ತಮ್ಮ ಸೇವಕ ದಾವೀದನಿಗೆ ಅನ್ಯಾಯ ಮಾಡಬಾರದು; ಅವನು ನಿಮಗೆ ದ್ರೋಹ ಮಾಡಲಿಲ್ಲ; ಅವನು ಮಾಡಿದ್ದೆಲ್ಲವು ನಿಮ್ಮ ಹಿತಕ್ಕಾಗಿಯೇ. ತನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಿ ಆ ಫಿಲಿಷ್ಟಿಯನನ್ನು ಕೊಂದನು; ಸರ್ವೇಶ್ವರ ಇಸ್ರಯೇಲರಿಗೆ ಮಹಾ ಜಯವನ್ನುಂಟುಮಾಡಿದರು. ನೀವೂ ಅದನ್ನು ನೋಡಿ ಸಂತೋಷಪಟ್ಟಿರಿ; ದಾವೀದನನ್ನು ನಿಷ್ಕಾರಣವಾಗಿ ಕೊಂದು ನಿರ್ದೋಷಿಯ ರಕ್ತವನ್ನು ಸುರಿಸಿದ ಅಪರಾಧಕ್ಕೆ ನೀವೇಕೆ ಗುರಿ ಆಗುತ್ತೀರಿ?” ಎಂದನು. ಸೌಲನು ಯೋನಾತಾನನ ಮಾತುಗಳನ್ನು ಆಲಿಸಿದನು. “ಸರ್ವೇಶ್ವರನಾಣೆ, ಅವನನ್ನು ಕೊಲ್ಲುವುದಿಲ್ಲ,” ಎಂದು ಪ್ರಮಾಣಮಾಡಿದನು. ಆಗ ಯೋನಾತಾನನು ದಾವೀದನನ್ನು ಕರೆದು ಅವನಿಗೆ ಈ ಮಾತುಗಳನ್ನು ತಿಳಿಸಿ ಸೌಲನ ಬಳಿಗೆ ಕರೆದುತಂದನು. ದಾವೀದನು ಮುಂಚಿನಂತೆ ಸೌಲನ ಸನ್ನಿಧಿಯಲ್ಲೇ ಇರುವಂತೆ ಏರ್ಪಾಡಾಯಿತು.

ಕೀರ್ತನೆ: 56:2-3, 9-10, 10-11, 12-13
ಶ್ಲೋಕ: ದೇವರಲ್ಲಿ ನಿರ್ಭೀತ ನಂಬಿಕೆ ನನಗೆ

ಶುಭಸಂದೇಶ: ಮಾರ್ಕ 3:7-12

ಯೇಸುಸ್ವಾಮಿ ತಮ್ಮ ಶಿಷ್ಯರ ಜೊತೆಯಲ್ಲಿ ಗಲಿಲೇಯ ಸರೋವರದ ತೀರಕ್ಕೆ ಹೊರಟು ಹೋದರು. ಸಾವಿರಾರು ಜನರು ಅವರನ್ನು ಹಿಂಬಾಲಿಸಿದರು. ಈ ಜನರು ಯೇಸು ಮಾಡುತ್ತಿದ್ದ ಮಹತ್ಕಾರ್ಯಗಳ ಸಮಾಚಾರವನ್ನು ಕೇಳಿ, ಗಲಿಲೇಯ ಪ್ರಾಂತ್ಯದಿಂದ, ಜುದೇಯ ಪ್ರಾಂತ್ಯದಿಂದ, ಜೆರುಸಲೇಮ್ ನಗರದಿಂದ, ಇದುಮೇಯ ಪ್ರಾಂತ್ಯದಿಂದ, ಜೋರ್ಡನ್ ನದಿಯ ಪೂರ್ವ ಪ್ರದೇಶ ಹಾಗೂ ಟೈರ್-ಸಿದೋನ್ ಪಟ್ಟಣಗಳ ಸುತ್ತಮುತ್ತಲಿಂದ ಬಂದಿದ್ದರು. ಜನಸಂದಣಿ ಅಧಿಕವಾಗುತ್ತಿದ್ದುದರಿಂದ ಅವರು ತಮ್ಮ ಮೈಮೇಲೆ ಬಿದ್ದಾರೆಂದು ಯೇಸು, ತಮಗೆ ಒಂದು ದೋಣಿಯನ್ನು ಸಿದ್ಧವಾಗಿಡಲು ಶಿಷ್ಯರಿಗೆ ಹೇಳಿದರು. ಯೇಸು ಅನೇಕರನ್ನು ಗುಣಪಡಿಸಿದ್ದರಿಂದ ರೋಗಿಗಳೆಲ್ಲರೂ ಅವರನ್ನು ಮುಟ್ಟಬೇಕೆಂದು ಮುನ್ನುಗ್ಗಿ ಮೇಲೆ ಮೇಲೆ ಬೀಳುತ್ತಿದ್ದರು. ದೆವ್ವಗಳು ಸಹ ಅವರನ್ನು ಕಂಡಾಗಲೆಲ್ಲಾ ಅವರ ಪಾದಕ್ಕೆರಗಿ, “ನೀವು ದೇವರ ಪುತ್ರ,” ಎಂದು ಕಿರುಚುತ್ತಿದ್ದವು. ಆದರೆ ಯೇಸು, ತಾವು ಯಾರೆಂಬುದನ್ನು ಪ್ರಕಟಿಸಬಾರದೆಂದು ಅವುಗಳಿಗೆ ಕಟ್ಟಪ್ಪಣೆ ಮಾಡುತ್ತಿದ್ದರು.

No comments:

Post a Comment