ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

17.01.2020 - “ಇಂಥ ಕಾರ್ಯವನ್ನು ನಾವು ನೋಡಿದ್ದೇ ಇಲ್ಲ!”

ಮೊದಲನೇ ವಾಚನ: 1 ಸಮುವೇಲ 8:4-7, 10-22

ಇಸ್ರಯೇಲರ ಹಿರಿಯರೆಲ್ಲರೂ ಕೂಡಿ ರಾಮಾದಲ್ಲಿದ್ದ ಸಮುವೇಲನ ಬಳಿಗೆ ಬಂದು, “ತಾವಂತೂ ಮುದುಕರಾದಿರಿ; ನಿಮ್ಮ ಮಕ್ಕಳು ನಿಮ್ಮ ಮಾರ್ಗದಲ್ಲಿ ನಡೆಯುವುದಿಲ್ಲ. ಆದುದರಿಂದ ಬೇರೆ ಎಲ್ಲ ಜನಾಂಗಗಳಿಗಿರುವಂತೆ ನಮಗೂ ಒಬ್ಬ ಅರಸನನ್ನು ನೇಮಿಸಿ; ಅವನೇ ನಮ್ಮ ನ್ಯಾಯಸ್ಥಾಪಕನಾಗಿರಲಿ,” ಎಂದರು. ‘ನ್ಯಾಯಸ್ಥಾಪನೆಗಾಗಿ ನಮಗೊಬ್ಬ ಅರಸನನ್ನು ನೇಮಿಸಿ ಕೊಡಿ’ ಎಂಬ ಮಾತಿಗೆ ಸಮುವೇಲನು ದುಃಖಪಟ್ಟನು. ಸರ್ವೇಶ್ವರನನ್ನು ಪ್ರಾರ್ಥಿಸಿದನು. ಸರ್ವೇಶ್ವರ ಅವನಿಗೆ, “ಜನರು ಹೇಳಿದಂತೆಯೇ ಮಾಡು; ಅವರು ನಿನ್ನನ್ನಲ್ಲ, ನನ್ನನ್ನು ತಿರಸ್ಕರಿಸಿದ್ದಾರೆ. ನನ್ನ ಆಳ್ವಿಕೆ ಬೇಡವೆನ್ನುತ್ತಾರೆ. ಸಮುವೇಲನು ಅರಸಬೇಕೆಂದು ಕೋರಿದ ಜನರಿಗೆ, ಸರ್ವೇಶ್ವರನ ಮಾತುಗಳನ್ನೆಲ್ಲಾ ತಿಳಿಸಿದನು. “ಅರಸನ ಅಧಿಕಾರ ಎಷ್ಟೆಂದು ಕೇಳಿರಿ: ಅವನು ನಿಮ್ಮ ಮಕ್ಕಳನ್ನು ತೆಗೆದುಕೊಂಡು ತನ್ನ ಸಾರಥಿಗಳನ್ನಾಗಿಯೂ ರಾಹುತರನ್ನಾಗಿಯೂ ಮಾಡಿಕೊಳ್ಳುವನು; ಅವರು ಅವನ ರಥಗಳ ಮುಂದೆ ಓಡಬೇಕಾಗುವುದು. ಕೆಲವರನ್ನು ಸಹ ಸಹಸ್ರಾಧಿಪತಿಗಳನ್ನಾಗಿಯೂ ಕೆಲವರನ್ನು ಪಂಚಾ ಶತಾಧಿಪತಿಗಳನ್ನಾಗಿಯೂ ನೇಮಿಸುವನು. ಇನ್ನು ಕೆಲವರು ಅವನ ಭೂಮಿಯನ್ನು ಉಳುವವರೂ, ಪೈರನ್ನು ಕೊಯ್ಯುವವರೂ, ಯುದ್ಧಾಯುಧ, ರಥಸಾಮಗ್ರಿಗಳನ್ನು ಮಾಡುವವರೂ ಆಗಬೇಕು. ಇದಲ್ಲದೆ ಅವನು ನಿಮ್ಮ ಹೆಣ್ಣು ಮಕ್ಕಳನ್ನು ಪರಿಮಳ ದ್ರವ್ಯ ಮಾಡುವುದಕ್ಕೂ, ಅಡುಗೆ ಮಾಡುವುದಕ್ಕೂ, ರೊಟ್ಟಿ ಸುಡುವುದಕ್ಕೂ ನೇಮಿಸಿಕೊಳ್ಳುವನು. ನಿಮ್ಮ ಉತ್ತಮವಾದ ಹೊಲಗಳನ್ನೂ ದ್ರಾಕ್ಷಿ ತೋಟಗಳನ್ನೂ ಎಣ್ಣೆ ಮರದ ತೋಪುಗಳನ್ನೂ ಕಿತ್ತುಕೊಂಡು ತನ್ನ ಸೇವಕರಿಗೆ ಕೊಡುವನು. ನಿಮ್ಮ ಧಾನ್ಯ ದ್ರಾಕ್ಷಿಗಳಲ್ಲಿ ದಶಮಾಂಶವನ್ನು ತೆಗೆದುಕೊಂಡು ತನ್ನ ಅಧಿಕಾರಿಗಳಿಗೂ ಪರಿವಾರದವರಿಗೂ ಕೊಡುವನು. ನಿಮ್ಮ ದಾಸ ದಾಸಿಯರನ್ನು ಹಾಗು ಉತ್ತಮವಾದ ಎತ್ತು ಕತ್ತೆಗಳನ್ನು ತನಗಾಗಿ ದುಡಿಸಿಕೊಳ್ಳುವನು. ಕುರಿ ಹಿಂಡುಗಳಲ್ಲೂ ಹತ್ತರಲ್ಲೊಂದು ಭಾಗವನ್ನು ತೆಗೆದುಕೊಳ್ಳುವನು; ನೀವೂ ಅವನಿಗೆ ಗುಲಾಮರಾಗಿರಬೇಕು. ಆಗ, ನೀವು ಆರಿಸಿಕೊಂಡ ಅರಸನ ನಿಮಿತ್ತ, ಆ ದಿನದಲ್ಲಿ ಬೇಸತ್ತು ಸರ್ವೇಶ್ವರನಿಗೆ ಮೊರೆಯಿಡುವಿರಿ; ಆಗ ಅವರು ನಿಮ್ಮನ್ನು ಲಕ್ಷಿಸುವುದಿಲ್ಲ,” ಎಂದನು. ಹೀಗೆ ಸಮುವೇಲನು ಎಷ್ಟು ಹೇಳಿದರೂ ಜನರು ಕೇಳದೆ ಹೋದರು. “ಅದಿರಲಿ; ನಮಗೆ ಅರಸನನ್ನು ಕೊಡು; ನಾವು ಇತರ ಜನಾಂಗಗಳಂತೆ ಆಗಬೇಕು. ನಮ್ಮ ನ್ಯಾಯಗಳನ್ನು ತೀರಿಸಿ, ನಮಗೆ ಮುಂದಾಗಿ ಹೊರಟು, ನಮ್ಮ ಪರವಾಗಿ ಯುದ್ಧ ಮಾಡುವ ಒಬ್ಬ ಅರಸನು ಬೇಕು,” ಎಂದು ಹೇಳಿದರು. ಸಮುವೇಲನು ಜನರ ಈ ಎಲ್ಲ ಮಾತುಗಳನ್ನು ಸರ್ವೇಶ್ವರನಿಗೆ ತಿಳಿಸಿದನು. ಸರ್ವೇಶ್ವರ ಅವನಿಗೆ, “ಅವರ ಇಷ್ಟದಂತೆ ಅವರಿಗೊಬ್ಬ ಅರಸನನ್ನು ನೇಮಿಸು,” ಎಂದರು. ಆಗ ಸಮುವೇಲನು ಇಸ್ರಯೇಲರಿಗೆ, “ನಿಮ್ಮ ನಿಮ್ಮ ಊರುಗಳಿಗೆ ಹೋಗಿರಿ,” ಎಂದು ಅಪ್ಪಣೆ ಕೊಟ್ಟನು.

ಕೀರ್ತನೆ: 89:16-17, 18-19

ಶ್ಲೋಕ: ಪ್ರಭೂ, ಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು.

ಶುಭಸಂದೇಶ: ಮಾರ್ಕ 2:1-12

ಕೆಲವು ದಿನಗಳು ಕಳೆದ ಬಳಿಕ ಯೇಸುಸ್ವಾಮಿ ಮತ್ತೊಮ್ಮೆ ಕಫೆರ್ನವುಮಿಗೆ ಬಂದರು. ಅವರು ಮನೆಯಲ್ಲಿದ್ದಾರೆಂಬ ಸುದ್ದಿ ಹಬ್ಬಿತು. ಜನರು ಗುಂಪು ಗುಂಪಾಗಿ ಅಲ್ಲಿಗೆ ಬಂದರು. ಇದರಿಂದಾಗಿ ಮನೆಯೊಳಗೆ ಮಾತ್ರವಲ್ಲ, ಹೊರಗಡೆಯೂ ಸ್ಥಳ ಸಾಲದೆ ಹೋಯಿತು. ಯೇಸು ಅಲ್ಲಿ ಸೇರಿದ್ದ ಜನಸ್ತೋಮಕ್ಕೆ ದೇವರ ವಾಕ್ಯವನ್ನು ಬೋಧಿಸತೊಡಗಿದರು. ಆಗ ಒಬ್ಬ ಪಾಶ್ರ್ವ ವಾಯು ರೋಗಿಯನ್ನು ನಾಲ್ವರಿಂದ ಹೊರಿಸಿಕೊಂಡು ಕೆಲವರು ಅಲ್ಲಿಗೆ ಬಂದರು. ಜನಸಂದಣಿಯ ನಿಮಿತ್ತ ಅವನನ್ನು ಯೇಸುವಿನ ಸಮೀಪಕ್ಕೆ ಸಾಗಿಸಲು ಸಾಧ್ಯವಾಗಲಿಲ್ಲ. ಆದುದರಿಂದ ಅವರು ಯೇಸು ಇದ್ದ ಮನೆಯ ಮೇಲ್ಛಾವಣಿಯನ್ನು ತೆರೆದು, ದೊಡ್ಡ ಕಿಂಡಿಯೊಂದನ್ನು ಮಾಡಿ, ರೋಗಿಯನ್ನು ಹಾಸಿಗೆಯ ಸಮೇತ ಕೆಳಗಿಳಿಸಿದರು. ಯೇಸು ಅವರ ವಿಶ್ವಾಸವನ್ನು ಮೆಚ್ಚಿ ಆ ಪಾರ್ಶ್ವವಾಯು ರೋಗಿಗೆ, “ಮಗು, ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ,” ಎಂದರು. ಆಗ, ಅಲ್ಲೇ ಕುಳಿತಿದ್ದ ಧರ್ಮಶಾಸ್ತ್ರಿಗಳಲ್ಲಿ ಕೆಲವರು, “ಇವನೇಕೆ ಹೀಗೆ ಮಾತನಾಡುತ್ತಾನೆ? ಇದು ದೇವದೂಷಣೆ! ದೇವರೊಬ್ಬರ ಹೊರತು ಪಾಪಗಳನ್ನು ಕ್ಷಮಿಸಲು ಬೇರೆ ಯಾರಿಂದ ಸಾಧ್ಯ?” ಎಂದು ತಮ್ಮ ಮನಸ್ಸಿನಲ್ಲೇ ಆಲೋಚಿಸಿಕೊಳ್ಳುತ್ತಿದ್ದರು. ಅವರು ಹೀಗೆ ಯೋಚಿಸುತ್ತಿರುವುದನ್ನು ಯೇಸು ತಕ್ಷಣ ಗ್ರಹಿಸಿಕೊಂಡು ಅವರಿಗೆ, “ನೀವು ನಿಮ್ಮ ಮನಸ್ಸಿನಲ್ಲಿ ಹೀಗೆ ಆಲೋಚಿಸುತ್ತಿರುವುದು ಏಕೆ? ಈ ಪಾರ್ಶ್ವವಾಯು  ರೋಗಿಗೆ, ‘ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ,’ ಎಂದು ಹೇಳುವುದು ಸುಲಭವೋ ಅಥವಾ ‘ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ’ ಎನ್ನುವುದು ಸುಲಭವೋ? ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸಲು ನರಪುತ್ರನಿಗೆ ಅಧಿಕಾರವುಂಟೆಂದು ಈ ಮೂಲಕ ನಿಮಗೆ ಖಚಿತವಾಗಬೇಕು,” ಎಂದು ಹೇಳಿ, ಆ ಪಾರ್ಶ್ವವಾಯು ರೋಗಿಯನ್ನು ನೋಡಿ, “ನಾನು ನಿನಗೆ ಆಜ್ಞಾಪಿಸುತ್ತೇನೆ; ಏಳು, ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು,” ಎಂದರು. ಎಲ್ಲರೂ ನೋಡುತ್ತಿದ್ದ ಹಾಗೆ ಅವನು ಎದ್ದು ನಿಂತನು; ತನ್ನ ಹಾಸಿಗೆಯನ್ನು ತಾನೇ ಎತ್ತಿಕೊಂಡು ಹೊರಟು ಹೋದನು. ನೆರೆದಿದ್ದ ಎಲ್ಲರೂ ಆಶ್ಚರ್ಯಚಕಿತರಾಗಿ, “ಇಂಥ ಕಾರ್ಯವನ್ನು ನಾವು ನೋಡಿದ್ದೇ ಇಲ್ಲ!”, ಎಂದು ದೇವರನ್ನು ಕೊಂಡಾಡಿದರು.

No comments:

Post a Comment