ಮೊದಲನೇ ವಾಚನ: ರೋಮನರಿಗೆ 8:31-39
ಸಹೋದರರೇ, ಹೀಗಿರುವಲ್ಲಿ ನಾವು ಏನು ಹೇಳೋಣ? ದೇವರೆ ನಮ್ಮ ಪರ ಇರುವಾಗ ನಮ್ಮನ್ನು ವಿರೋಧಿಸುವವರು ಯಾರು? ದೇವರು ತಮ್ಮ ಸ್ವಂತ ಪುತ್ರನನ್ನೇ ನಮ್ಮೆಲ್ಲರಿಗಾಗಿ ಕೊಡಲು ಹಿಂಜರಿಯಲಿಲ್ಲ. ತಮ್ಮ ಪುತ್ರನನ್ನೇ ಬಲಿದಾನವಾಗಿ ಅರ್ಪಿಸಿದ ದೇವರು ಮತ್ತೇನನ್ನ ತಾನೇ ನಮಗೆ ವರದಾನವಾಗಿ ಕೊಡದಿರಲಾರರು? ದೇವರೆ ಆರಿಸಿಕೊಂಡವರ ಮೇಲೆ ಯಾರು ತಾನೇ ದೋಷಾರೋಪಣೆ ಮಾಡಬಲ್ಲರು? ದೇವರೇ ಅವರನ್ನು ನಿರ್ದೋಷಿಗಳೆಂದು ನಿರ್ಣಯಿಸಿರುವಾಗ ಅವರನ್ನು ದೋಷಿಗಳೆಂದು ನಿರ್ಣಯಿಸುವವರು ಯಾರು? ಪ್ರಾಣತ್ಯಾಗ ಮಾಡಿದ್ದಲ್ಲದೆ ಪುನರುತ್ಥಾನ ಹೊಂದಿದ ಕ್ರಿಸ್ತ ಯೇಸುವೇ ದೇವರ ಬಲಪಾರ್ಶ್ವದಲ್ಲಿದ್ದುಕೊಂಡು ನಮ್ಮ ಪರವಾಗಿ ಬಿನ್ನಯಿಸುತ್ತಿದ್ದಾರೆ. ಕ್ರಿಸ್ತ ಯೇಸುವಿನ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲು ಯಾರಿಂದ ಸಾಧ್ಯ? ಕಷ್ಟ - ಸಂಕಟ, ಇಕ್ಕಟ್ಟು - ಬಿಕ್ಕಟ್ಟು, ಹಿಂಸೆ - ಬಾದೆ ಇವುಗಳಿಃದ ಸಾಧ್ಯವೇ? ಎಂದಿಗೂ ಇಲ್ಲ ಪವಿತ್ರಗ್ರಂಥದಲ್ಲಿ ಹೀಗೆ ಬರೆಯಲಾಗಿದೆ: "ದಿನವಿಡೀ ನಿಮಗೋಸ್ಕರವೇ ಸಾವಿಗೀಡಾಗುತಿಹೆವು ನಾವು; ಮಧ್ಯಸ್ಥಾನಕ್ಕೆ ಒಯ್ದ ಕುರಿಗಳಂತೆ ಪರಿಗಣಿತರಾಗುತಿಹೆವು ನಾವು." ನಮ್ಮನ್ನು ಪ್ರೀತಿಸಿದ ಯೇಸುಕ್ರಿಸ್ತರ ಮುಖಾಂತರ ಇವೆಲ್ಲವುಗಳಲ್ಲಿಯೂ ನಾವು ಪೂರ್ಣ ಜಯಶಾಲಿಗಳಾಗುತ್ತೇವೆ. ಸಾವಾಗಲಿ ಜೀವವಾಗಲಿ, ದೇವದೂತರಾಗಲಿ ದುರಾತ್ಮರಾಗಲಿ ಈಗಿನ ಸಂತತಿಗಳೇ ಆಗಲಿ, ಭವಿಷ್ಯದ ಆಗುಹೋಗುಗಳೇ ಆಗಲಿ, ಯಾವ ಶಕ್ತಿಗಳೇ ಆಗಲಿ ನಮ್ಮ ಪ್ರಭು ಯೇಸುಕ್ರಿಸ್ತರಲ್ಲಿ ತೋರಿಬಂದ ದೈವಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲಾರವು. ಅಂತೆಯೇ, ಮೇಲಣ ಲೋಕವಾಗಲಿ, ಕೆಳಗಿನ ಲೋಕವಾಗಲಿ, ಸೃಷ್ಟಿ ಸಮಸ್ತಗಳಲ್ಲಿ ಯಾವುದೇ ಆಗಲಿ, ಆ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಇದು ನಿಶ್ಚಯ.
ಕೀರ್ತನೆ: 109:21-22, 26-27, 30-31
ಶ್ಲೋಕ: ಹೇ ಪ್ರಭೂ, ಅಚಲ ಪ್ರೀತಿಯಿಂದ ನನ್ನ ರಕ್ಷಿಸಯ್ಯಾ
ಶುಭಸಂದೇಶ: ಲೂಕ 13:31-35
ಕೆಲವು ಮಂದಿ ಫರಿಸಾಯರು ಯೇಸುಸ್ವಾಮಿಯ ಬಳಿಗೆ ಬಂದು, "ಇಲ್ಲಿಂದ ಹೊರಟು ಹೋಗಿಬಿಡಿ, ಹೆರೋದನು ನಿಮ್ಮನ್ನು ಕೊಲ್ಲಬೇಕೆಂದಿದ್ದಾನೆ," ಎಂದರು. ಅದಕ್ಕೆ ಯೇಸು, "ನೀವು ಹೋಗಿ ಆ ನರಿಗೆ ಹೀಗೆಂದು ತಿಳಿಸಿರಿ: ಇಂದು ಮತ್ತು ನಾಳೆ ದೆವ್ವಗಳನ್ನು ಬಿಡಿಸುತ್ತೇನೆ. ರೋಗಿಗಳನ್ನು ಗುಣಪಡಿಸುತ್ತೇನೆ, ಮೂರನೆಯ ದಿನ ನನ್ನ ಕಾರ್ಯ ಸಿದ್ಧಿಗೆ ಬರುವುದು. ಹೇಗೂ ಇಂದು, ನಾಳೆ ಮತ್ತು ನಾಡಿದ್ದು ನಾನು ನನ್ನ ಮಾರ್ಗವನ್ನು ಮುಂದುವರಿಸಬೇಕು ಪ್ರವಾದಿಯಾದವನು ಜೆರುಸಲೇಮಿನ ಹೊರಗೆ ಕೊಲೆಗೀಡಾಗುವುದು ಸಲ್ಲದು. ಓ ಜೆರುಸಲೇಮೇ, ಜೆರುಸಲೇಮೇ, ಪ್ರವಾದಿಗಳ ಕೊಲೆಪಾತಕಿಯೇ, ದೇವರು ನಿನ್ನ ಬಳಿಗೆ ಕಳುಹಿಸಿದವರನ್ನು ಕಲ್ಲುಗಳಿಂದ ಹೊಡೆಯುವವಳೇ, ಕೋಳಿ ತನ್ನ ಮರಿಗಳನ್ನು ರೆಕ್ಕೆಗಳಡಿ ಸೇರಿಸಿಕೊಳ್ಳುವಂತೆ, ನಾನು ನಿನ್ನ ಮಕ್ಕಳನ್ನು ಒಂದಾಗಿ ಸೇರಿಸಿ ಅಪ್ಪಿಕೊಳ್ಳಲು ಎಷ್ಟೋ ಬಾರಿ ಅಪೇಕ್ಷಿಸಿದೆ. ಆದರೆ ನೀನು ಒಪ್ಪಲಿಲ್ಲ. ಇಗೋ, ನಿಮ್ಮ ದೇವಾಲಯ ಪಾಳುಬೀಳುವುದು. "ಸರ್ವೇಶ್ವರನ ನಾಮದಲ್ಲಿ ಬರುವವರು ಧನ್ಯರು," ಎಂದು ನೀವಾಗಿ ಹೇಳುವ ದಿನದವರಿಗೂ ನೀವು ನನ್ನನ್ನು ಕಾಣಲಾರಿರಿ, ಎಂಬುದು ನಿಶ್ಚಯ," ಎಂದರು.
No comments:
Post a Comment