ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

07.10.2019 - "ದಯೆ ತೋರಿದವನೇ ನೆರೆಯವನು,"

ಮೊದಲನೇ ವಾಚನ: ಯೋನನ 1:1-2:1-2, 10 


ಒಂದು ದಿನ ಅಮಿತ್ತಾಯನ ಮಗನಾದ ಯೋನನಿಗೆ ಸರ್ವೇಶ್ವರಸ್ವಾಮಿಯ ವಾಣಿ ಕೇಳಿಸಿತು. "ನಿನೆವೆ ಮಹಾನಗರದ ನಿವಾಸಿಗಳು ಎಷ್ಟು ದುಷ್ಟರೆಂಬುದು ನನಗೆ ತಿಳಿದುಬಂದಿದೆ. ನೀನು ಅಲ್ಲಿಗೆ ಹೋಗು. ಅವರನ್ನು ಕಟುವಾಗಿ ಖಂಡಿಸು," ಆದರೆ ಯೋನನು ಆ ಸ್ವಾಮಿಯ ಸನ್ನಿಧಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಿನೆವೆಗೆ ಹೋಗುವುದರ ಬದಲು ತಾರ್ಷಿಷಿಗೆ ಅಭಿಮುಖವಾಗಿ ಓಡಿಹೋಗಲು ಹೊರಟನು.  ಜೊಪ್ಪ ಎಂಬ ಊರನ್ನು ತಲುಪಿದಾಗ ತಾರ್ಷಿಷಿಗೆ ಹೊರಡಲಿದ್ದ ಹಡಗೊಂದನ್ನು ಕಂಡನು. ಪ್ರಯಾಣದ ದರವನ್ನು ತೆತ್ತು ಸಹ ನಾವಿಕರೊಂದಿಗೆ ಹಡಗನ್ನು ಹತ್ತಿದನು. ಹೀಗೆ ಯೋನನು ಸರ್ವೇಶ್ವರಸ್ವಾಮಿಯ ಸನ್ನಿಧಿಯಿಂದ ದೂರ ಹೋಗಬಹುದೆಂದು ಭಾವಿಸಿದನು. ಆದರೆ ಸರ್ವೇಶ್ವರ ಸಮುದ್ರದಲ್ಲಿ ಬಿರುಗಾಳಿಯೊಂದನ್ನು ಬರ ಮಾಡಿದರು. ಅಲೆಗಳ ಹೊಡೆತಕ್ಕೆ ಹಡಗು ನುಚ್ಚು ನೂರಾಗಿ ಒಡೆದು ಹೋಗುವುದರಲ್ಲಿತ್ತು. ದಿಗ್ಬ್ರಾಂತರಾದ ನಾವಿಕರು ಪ್ರಾಣ ರಕ್ಷಣೆಗಾಗಿ ತಮ್ಮ ದೇವ ದೇವತೆಗಳ ಮೊರೆ ಹೊಕ್ಕರು. ಪ್ರಾಣಾಪಾಯದಿಂದ ಪಾರಾಗಲು ತಮ್ಮಲ್ಲಿದ್ದ ಸರಕು ಸಾಮಗ್ರಿಗಳನ್ನು ಸಮುದ್ರಕ್ಕೆ ಎಸೆದರು. ಇಷ್ಟರೊಳಗೆ ಯೋನನು ಹಡಗಿನ ತಳಭಾಗಕ್ಕೆ ಇಳಿದು ಹೋಗಿ ಹಾಯಾಗಿ ಮಲಗಿದ್ದನು. ಅವನಿಗೆ ಗಾಢ ನಿದ್ರೆ ಹತ್ತಿತ್ತು. ಇದನ್ನು ಕಂಡ ನೌಕಾಧಿಕಾರಿ ಅಲ್ಲಿಗೆ ಬಂದು, ಅವನನ್ನು ಎಬ್ಬಿಸುತ್ತಾ: "ಏನಯ್ಯಾ, ಹಾಯಾಗಿ ಇಲ್ಲಿ ನಿದ್ರೆ ಮಾಡುತ್ತಿದ್ದೀಯಲ್ಲ, ಎದ್ದೇಳು. ನಿನ್ನ ದೇವರಿಗೆ ಮೊರೆಯಿಡು. ಅವರಾದರೂ ನಮ್ಮ ಮೇಲೆ ಕರುಣೆತೋರಿ, ನಾವು ನಾಶವಾಗದಂತೆ ಕಾಪಾಡಿಯಾರು," ಎಂದನು.ಆಮೇಲೆ ನಾವಿಕರು: "ನಮಗೆ ಸಂಭವಿಸಿರುವ ಈ ದುರಂತಕ್ಕೆ ಕಾರಣ ಯಾರಿರಬಹುದು? ಬನ್ನಿ, ಚೀಟುಹಾಕಿ ನೋಡೋಣ" ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಂಡರು. ಹಾಗೆ ಮಾಡಿದಾಗ ಚೀಟು ಯೋನನ ಹೆಸರಿಗೆ ಬಂತು. ಆಗ ನಾವಿಕರು: "ನೀನು ಯಾರು? ಎಲ್ಲಿಂದ ಬಂದೆ? ಯಾವ ಕೆಲಸದ ಮೇಲೆ ಬಂದೆ? ನೀನು ಯಾವ ಜನಾಂಗದವನು? ಈ ದುರಂತಕ್ಕೆ ಕಾರಣ ಯಾರು?" ಎಂದು ಪ್ರಶ್ನಿಸಿದರು. ಅದಕ್ಕೆ ಯೋನನು: ಸರ್ವೇಶ್ವರನ ಭಕ್ತನು ನಾನು," ಎಂದು ಉತ್ತರಿಸಿದನು. ಅಲ್ಲದೆ ತಾನು ಆ ಸ್ವಾಮಿಯ ಸನ್ನಿಧಿಯಿಂದ ಓಡಿ ಹೋಗುತ್ತಿರುವುದಾಗಿಯೂ ತಿಳಿಸಿದನು. ಇದನ್ನು ಕೇಳಿದ್ದೇ ನಾವಿಕರು ಭಯಭ್ರಾಂತರಾದರು. "ಎಂಥಾ ತಪ್ಪು ಮಾಡಿದೆ!" ಎಂದು ಅವನನು ಖಂಡಿಸಿದರು. ಆಗ ಬಿರುಗಾಳಿ ಮತ್ತಷ್ಟು ತೀವ್ರಗೊಳ್ಳುತ್ತಿತ್ತು. ನಾವಿಕರು ಯೋನನಿಗೆ: "ಸಮುದ್ರ ಶಾಂತವಾಗಬೇಕಾದರೆ ನಿನ್ನನ್ನು ಏನು ಮಾಡಬೇಕು? ಹೇಳು," ಎಂದು ಕೇಳಿದರು. ಯೋನನು: "ನನ್ನನ್ನು ಎತ್ತಿ ಸಮುದ್ರಕ್ಕೆ ಎಸೆಯಿರಿ. ಆಗ ಅದು ಶಾಂತವಾಗುವುದು. ನೀವು ಇಂಥ ಭೀಕರ ಬಿರುಗಾಳಿಗೆ ತುತ್ತಾಗಲು ನಾನೇ ಕಾರಣ. ಇದನ್ನು ನಾನು ಚೆನ್ನಾಗಿ ಬಲ್ಲೆ." ಎಂದನು. ನಾವಿಕರು ಅವನ ಸಲಹೆಗೆ ಒಪ್ಪದೆ, ಹಡಗನ್ನು ದಡಕ್ಕೆ ಸಾಗಿಸಲು ತಮ್ಮ ಶಕ್ತಿ ಸಾಮರ್ಥ್ಯವನ್ನೆಲ್ಲ ಪ್ರಯೋಗಿಸಿ ಹುಟ್ಟು ಹಾಕಿದರು. ಆದರೆ ಸಾಧ್ಯವಾಗಲಿಲ್ಲ. ಸಮುದ್ರವು ಅಲ್ಲೋಲಕಲ್ಲೋಲವಾಗುತ್ತಲೇ ಇತ್ತು. ಆಗ ಅವರು ಬೇರೆ ದಿಕ್ಕು ತೋಚದೆ ಸರ್ವೇಶ್ವರಸ್ವಾಮಿಗೆ ಮೊರೆಯಿಡುತ್ತಾ: "ಸ್ವಾಮೀ, ಈ ನಿರಪರಾಧಿಯ ಪ್ರಾಣಹಾನಿಗೆ ನಾವು ಹೊಣೆಯಲ್ಲ. ಇದಕ್ಕಾಗಿ ನಮ್ಮನ್ನು ನಾಶಮಾಡಬೇಡಿ. ಇದೆಲ್ಲವೂ ಸಂಭವಿಸಿರುವುದು ನಿಮ್ಮ ಚಿತ್ತವಲ್ಲವೇ?" ಎಂದು ದೈನ್ಯದಿಂದ ಪ್ರಾರ್ಥಿಸಿದರು. ಬಳಿಕ ಅವರು ಯೋನನನ್ನು ಎತ್ತಿ ಸಮುದ್ರಕ್ಕೆ ಎಸೆದರು. ತಕ್ಷಣವೇ, ಭೋರ್ಗರೆಯುತ್ತಿದ್ದ ಸಮುದ್ರ ಶಾಂತವಾಯಿತು. ಇದನ್ನು ಕಂಡ ಜನರು ಸರ್ವೇಶ್ವರಸ್ವಾಮಿಗೆ ಬಹುವಾಗಿ ಭಯಪಟ್ಟರು: ಯಜ್ಞವನ್ನು ಅರ್ಪಿಸಿ, ಹರಕೆಗಳನ್ನು ಸಲ್ಲಿಸಿದರು. ಇತ್ತ ಸರ್ವೇಶ್ವರಸ್ವಾಮಿಯ ಆಜ್ಞಾನುಸಾರ ದೊಡ್ಡ ಮೀನೊಂದು ಬಂದು ಯೋನನನ್ನು ನುಂಗಿತು. ಅವನು ಅದರ ಹೊಟ್ಟೆಯಲ್ಲಿ ಮೂರು ಹಗಲು, ಮೂರು ಇರುಳು ಇದ್ದನು. ಆ ಮೀನಿನ ಹೊಟ್ಟೆಯೊಳಗಿಂದಲೇ ಯೋನನು ಸರ್ವೇಶ್ವರಸ್ವಾಮಿ ದೇವರಿಗೆ ಈ ರೀತಿ ಪ್ರಾರ್ಥನೆ ಮಾಡಿದನು: "ಸಂಕಟದಲಿ, ಸರ್ವೇಶ್ವರಾ, ನಾ ನಿನಗೆ ಮೊರೆಯಿಟ್ಟೆ ನೀನೆನ್ನ ಮೊರೆಗೆ ಕಿವಿಕೊಟ್ಟೆ. ಪಾತಾಳದಂತರಾಳದಿಂದ ನಿನ್ನ ನೆರವನ್ನು ಬೇಡಿದೆ ನೀನೆನ್ನ ಪ್ರಾರ್ಥನೆಯನ್ನಾಲಿಸಿದೆ. ಸರ್ವೇಶ್ವರಸ್ವಾಮಿಯ ಆಜ್ಞೆಯ ಪ್ರಕಾರ ಆ ಮೀನು ಯೋನನನ್ನು ದಡದ ಮೇಲೆ ಕಕ್ಕಿತು. 

ಯೋನ: 2:3, 4, 5, 8 

ಶ್ಲೋಕ: ಸರ್ವೇಶ್ವರಾ, ಮೇಲಕ್ಕೆತ್ತಿದೆ ಎನ್ನ ಜೀವಸಹಿತ 

ಶುಭಸಂದೇಶ: ಲೂಕ 10:25-37 


ಒಬ್ಬ ಶಾಸ್ತ್ರಜ್ಞನು ಎದ್ದು ಯೇಸುಸ್ವಾಮಿಯನ್ನು ಪರೀಕ್ಷಿಸುವ ಉದ್ದೇಶದಿಂದ "ಬೋಧಕರೇ, ಅಮರಜೀವ ನನಗೆ ಪ್ರಾಪ್ತಿಯಾಗಬೇಕಾದರೆ ನಾನು ಮಾಡಬೇಕಾದುದು ಏನು?" ಎಃದು ಕೇಳಿದನು. ಅದಕ್ಕೆ ಯೇಸು, "ಧರ್ಮಶಾಸ್ತ್ರದಲ್ಲಿ ಏನು ಬರೆದಿದೆ? ಹೇಗೆ ಪಠಿಸುತ್ತೀಯೆ?" ಎಂದು ಮರುಪ್ರಶ್ನೆ ಹಾಕಿದರು. ಅವನು, "ನಿನ್ನ ಸರ್ವೇಶ್ವರನಾದ ದೇವರನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸು ಮತ್ತು ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು" ಎಂದಿದೆ," ಎಂದು ಉತ್ತರಕೊಟ್ಟನು. ಯೇಸು, "ಸರಿಯಾಗಿ ಉತ್ತರಕೊಟ್ಟೆ. ಅದರಂತೆ ಮಾಡು. ನಿನಗೆ ಅಮರಜೀವ ಲಭಿಸುವುದು," ಎಂದರು. ಆದರೆ ಆ ಶಾಸ್ತ್ರಜ್ಞನು ತನ್ನನ್ನು ತಾನೇ ಸಮರ್ಥಿಸಿಕೊಳ್ಳಲು, "ನನ ನೆರೆಯವನು ಯಾರು?" ಎಂದು ಯೇಸುವನ್ನು ಮತ್ತೆ ಪ್ರಶ್ನಿಸಿದನು. ಯೇಸು ಅವನಿಗೆ ಹೀಗೆಂದು ವಿವರಿಸಿದರು: "ಒಬ್ಬನು ಜೆರುಸಲೇಮಿನಿಂದ ಇಳಿದು ಜೆರಿಕೋವಿಗೆ ಪ್ರಯಾಣ ಮಾಡುತ್ತಿದ್ದಾಗ, ದರೋಡೆಗಾರರ ಕೈಗೆ ಸಿಕ್ಕಿಬಿದ್ದ. ದರೋಡೆಗಾರರು ಅವನನ್ನು ಸುಲಿಗೆ ಮಾಡಿ, ಹೊಡೆದು ಬಡಿದು, ಅರೆಜೀವ ಮಾಡಿ, ಅಲ್ಲೇ  ಬಿಟ್ಟುಹೋದರು. ಅದೇ ಮಾರ್ಗವಾಗಿ ಒಬ್ಬ ಯಾಜಕನು ಹಾದು ಹೋಗಬೇಕಾಗಿ ಬಂದಿತು. ಈತನು ಅವನನ್ನು ಕಂಡದ್ದೇ  ಆಚೆ ಬಳಸಿಕೊಂಡು ಹೋದ. ಹಾಗೆಯೇ ಲೇವಿಯೊಬ್ಬನು ಆ ಸ್ಥಳಕ್ಕೆ ಬಂದು ಅವನನ್ನು ನೋಡಿ, ಹಾಗೆಯೇ ಬಳಸಿಕೊಂಡು ಹೋದ. ಆದರೆ ಆ ಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದ ಒಬ್ಬ ಸಮಾರಿಯದವನು ಅಲ್ಲಿಗೆ ಬಂದಾಗ, ಅವನನ್ನು ಕಂಡು ಕನಿಕರಪಟ್ಟ. ಹತ್ತಿರಕ್ಕೆ ಹೋಗಿ ಅವನ ಗಾಯಗಳಿಗೆ ಎಣ್ಣೆಯನ್ನೂ ದ್ದಾಕ್ಷಾರಸವನ್ನೂ ಹಚ್ಚಿ ಅವುಗಳಿಗೆ ಬಟ್ಟೆ ಕಟ್ಟಿದ. ಬಳಿಕ ಅವನನ್ನು ತನ್ನ ಸ್ವಂತ  ವಾಹಕಪಶುವಿನ ಮೇಲೆ ಹತ್ತಿಸಿಕೊಂಡು ಒಂದು ಛತ್ರಕ್ಕೆ ಕರೆದುಕೊಂಡು ಹೋಗಿ, ಆರೈಕೆ ಮಾಡಿದ. ಮಾರನೆಯ ದಿನ ಎರಡು ದಿನಾರಿ ನಾಣ್ಯಗಳನ್ನು ಛತ್ರದವನಿಗೆ ಕೊಟ್ಟು, "ಇವನನ್ನು ಚೆನ್ನಾಗಿ ನೋಡಿಕೊ, ಇದಕ್ಕಿಂತ ಹೆಚ್ಚು ವೆಚ್ಚವಾದರೆ ನಾನು ಹಿಂದಿರುಗಿ ಬರುವಾಗ ಸಲ್ಲಿಸುತ್ತೇನೆ," ಎಂದ. "ದರೋಡೆಗಾರರ ಕೈಗೆ ಸಿಕ್ಕಿದವನಿಗೆ ಈ ಮೂವರಲ್ಲಿ ಯಾರು ನೆರೆಯವರೆಂದು ನಿನಗೆ ತೋರುತ್ತದೆ?" ಎಂದು ಯೇಸು ಆ ಶಾಸ್ತ್ರಜ್ಞನನ್ನು ಕೇಳಿದರು. ಅದಕ್ಕೆ ಯೇಸು, "ದಯೆ ತೋರಿದವನೇ ನೆರೆಯವನು," ಎಂದನು. ಆಗ ಯೇಸು, "ಹೋಗು, ನೀನೂ ಹಾಗೆಯೇ ಮಾಡು," ಎಂದು ಹೇಳಿದರು.

No comments:

Post a Comment