ಮೊದಲನೇ ವಾಚನ: ರೋಮನರಿಗೆ 6:12-18
ಸಹೋದರರೇ, ಆದ್ದರಿಂದ ದೈಹಿಕ ದುರಿಚ್ಛೆಗಳಿಗೆ ದಾಸರಾಗಿ ನೀವು ನಡೆಯದಂತೆ, ನಿಮ್ಮ ನಶ್ವರ ಶರೀರಗಳ ಮೇಲೆ ಪಾಪವು ತನ್ನ ದಬ್ಬಾಳಿಕೆಯನ್ನು ಇನ್ನೆಂದಿಗೂ ನಡೆಸದಿರಲಿ. ನಿಮ್ಮ ದೇಹದ ಯಾವುದೇ ಅಂಗವು ದುಷ್ಕೃತ್ಯವನ್ನೆಸಗುವ ಸಾಧನವಾಗುವಂತೆ ಪಾಪದ ಕಾರ್ಯಕ್ಕೆ ಅದನ್ನು ಒಪ್ಪಿಸದಿರಿ. ಬದಲಾಗಿ ಸತ್ತು ಜೀವಕ್ಕೆ ಬಂದವರಂತೆ ದೇವರಿಗೆ ನಿಮ್ಮನ್ನೇ ಸಮರ್ಪಿಸಿಕೊಳ್ಳಿರಿ; ನಿಮ್ಮ ಅಂಗಗಳನ್ನು ಸತ್ಕಾರ್ಯ ಸಾಧನೆಗಳನ್ನಾಗಿ ದೇವರಿಗೆ ಒಪ್ಪಿಸಿಕೊಂಡಿರಿ. ಏಕೆಂದರೆ ಪಾಪವು ಇನ್ನೆಂದಿಗೂ ನಿಮ್ಮ ಮೇಲೆ ದಬ್ಬಾಳಿಕೆ ನಡೆಸಲಾಗದು; ನೀವಿನ್ನು ಧರ್ಮಶಾಸ್ತ್ರಕ್ಕೆ ಅಧೀನರಲ್ಲ. ದೈವಾನುಗ್ರಹಕ್ಕೆ ಮಾತ್ರ ಅಧೀನರು. ಹಾಗಾದರೆ ಏನು ಹೇಳೋಣ? ಧರ್ಮಶಾಸ್ತ್ರಕ್ಕೆ ಅಧೀನರಾಗಿರದೆ ದೈವಾನುಗ್ರಹಕ್ಕೆ ಅಧೀನರಾಗಿರುವ ನಾವು ಪಾಪಮಾಡುತ್ತಲೇ ಜೀವಿಸೋಣವೆ? ಸರ್ವಥಾ ಇಲ್ಲ. ಯಾರ ಕೈ ಕೆಳಗೆ ಗುಲಾಮರಾಗಿರಲು ನಿಮ್ಮನ್ನೇ ಒಪ್ಪಿಸಿಕೊಳ್ಳುತ್ತೀರೋ ಅವರಿಗೆ ನೀವು ಶರಣಾಗುತ್ತೀರಿ. ನೀವು ಪಾಪಕ್ಕೆ ಗುಲಾಮರಾದರೆ ಮರಣವೇ ನಿಮಗೆ ಗತಿ; ದೇವರಿಗೆ ಶರಣಾದರೆ ಸತ್ಸಂಬಂಧವೇ ಅದರ ಸತ್ಪರಿಣಾಮ. ದೇವರಿಗೆ ಸ್ತುತಿಸ್ತೋತ್ರ ಸಲ್ಲಲಿ. ಏಕೆಂದರೆ, ಹಿಂದೊಮ್ಮೆ ನೀವು ಪಾಪಕ್ಕೆ ಗುಲಾಮರಾಗಿದ್ದರೂ ನಿಮಗೆ ಕಲಿಸಿದ ಬೋಧನೆಯನ್ನು ನೀವು ಮನಃಪೂರ್ವಕವಾಗಿ ಅಂಗೀಕರಿಸಿ ವಿಧೇಯರಾದಿರಿ; ಪಾಪಬಂಧನದಿಂದ ಬಿಡುಗಡೆ ಹೊಂದಿ ದೇವಸಂಬಂಧಕ್ಕೆ ಒಳಗಾದಿರಿ.
ಕೀರ್ತನೆ: 124:1-3, 4-6, 7-8
ಶ್ಲೋಕ: ನಮಗುದ್ಧಾರ ಪ್ರಭುವಿನ ನಾಮದಲಿ
ಶುಭಸಂದೇಶ: ಲೂಕ 12:39-48
ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ಕಳ್ಳನು ಬರುವ ಗಳಿಗೆಯು ಮನೆಯ ಯಜಮಾನನಿಗೆ ತಿಳಿದರೆ, ಅವನು ತನ್ನ ಮನೆಗೆ ಕನ್ನಹಾಕಲು ಬಿಡುವನೇ? ಇಲ್ಲ. ಇದನ್ನು ಚೆನ್ನಾಗಿ ತಿಳಿದುಕೊಂಡು ನೀವು ಸಹ ಸಿದ್ಧರಾಗಿರಿ. ಏಕೆಂದರೆ, ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು," ಎಂದರು. ಆಗ ಪೇತ್ರನು, "ಪ್ರಭೂ, ನೀವು ಹೇಳಿದ ಈ ಸಾಮತಿ ನಮಗೆ ಮಾತ್ರ ಅನ್ವಯಿಸುತ್ತದೋ ಅಥವಾ ಎಲ್ಲರಿಗೋ?"ಎಂದು ಕೇಳಿದನು. ಅದಕ್ಕೆ ಪ್ರಭು ಹೀಗೆಂದರು: "ಪ್ರಮಾಣಿಕನೂ ವಿವೇಕಿಯೂ ಆದ ಮೇಸ್ತ್ರಿ ಯಾರು? ಕಾಲಕಾಲಕ್ಕೆ ಸರಿಯಾಗಿ ಕೂಲಿಯಾಳುಗಳಿಗೆ ದವಸಧಾನ್ಯವನ್ನು ಅಳೆದುಕೊಟ್ಟು, ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಯಜಮಾನನು ನೇಮಿಸಿದ್ದ ಮೇಸ್ತ್ರಿಯೇ. ಯಜಮಾನನು ಮನೆಗೆ ಹಿಂದಿರುಗಿ ಬಂದಾಗ ಆ ಸೇವಕನು ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನೆರವೇರಿಸುತ್ತಿದ್ದರೆ ಅವನು ಧನ್ಯನು. ಅಂಥವನನ್ನು ಯಜಮಾನನು ತನ್ನ ಎಲ್ಲ ಆಸ್ತಿಪಾಸ್ತಿಗೆ ಆಡಲಿತಗಾರನನ್ನಾಗಿ ನೇಮಿಸುವನೆಂದು ನಿಮಗೆ ನಿಜವಾಗಿ ಹೇಳುತ್ತೇನೆ. ಆದರೆ ಆ ಸೇವಕನು ತನ್ನಲ್ಲೇ, "ನನ್ನ ಯಜಮಾನ ಬಹಳ ತಡಮಾಡಿ ಬರುತ್ತಾನೆ", ಎಂದುಕೊಂಡು ಗಂಡಾಳು ಹೆಣ್ಣಾಳು ಎನ್ನದೆ ಹೊಡೆಯುವುದಕ್ಕೂ ಅಮಲೇರುವಷ್ಟು ತಿಂದು ಕುಡಿಯುವುದಕ್ಕೂ ತೊಡಗಿದರೆ ಅವನು ನಿರೀಕ್ಷಿಸದ ದಿನದಲ್ಲಿ, ತಿಳಿಯದ ಗಳಿಗೆಯಲ್ಲಿ ಯಜಮಾನನು ಬಂದು ಅವನನ್ನು ಚಿತ್ರಹಿಂಸೆಗೂ ವಿಶ್ವಾಸವಿಹೀನರ ದುರ್ಗತಿಗೂ ಗುರಿಮಾಡುವನು. ಸೇವಕನು ಯಜಮಾನನ ಇಷ್ಟಾರ್ಥವನ್ನು ಅರಿತುಕೊಂಡಿದ್ದರೂ ಅಜಾಗರೂಕನಾಗಿ ಇದ್ದರೆ ಕಠಿಣ ಶಿಕ್ಷೆಗೆ ಗುರಿಯಾಗುತ್ತಾನೆ. ಅರಿಯದೆ ಅಜಾಗರೂಕನಾಗಿದ್ದರೆ ಕಡಿಮೆ ಶಿಕ್ಷೆಗೆ ಗುರಿಯಾಗುತ್ತಾನೆ. ಹೆಚ್ಚು ಪಡೆದವನಿಂದ ಹೆಚ್ಚು ನಿರೀಕ್ಷಿಸಲಾಗುವುದು. ಇನ್ನೂ ಹೆಚ್ಚು ವಹಿಸಿಕೊಂಡವನಿಂದ ಇನ್ನೂ ಹೆಚ್ಚಾಗಿ ಕೇಳಲಾಗುವುದು."
No comments:
Post a Comment