ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

10.10.2019 - "ನಿಮ್ಮ ತಂದೆ ತಮ್ಮನ್ನು ಕೇಳಿಕೊಳ್ಳುವವರಿಗೆ ಪವಿತ್ರಾತ್ಮ ಅವರನ್ನೇ ಅನುಗ್ರಹಿಸಬಲ್ಲರು"

ಮೊದಲನೇ ವಾಚನ: ಮಲಾಕಿಯನ 3:13-4:2 

"ನೀವು ನನಗೆ ಕಠಿಣವಾದ ಮಾತುಗಳನ್ನಾಡಿದ್ದೀರಿ," ಎನ್ನುತ್ತಾರೆ ಸರ್ವೇಶ್ವರ. "ನೀವು, "ನಿನಗೆ ವಿರುದ್ಧವಾಗಿ ನಾವು ಮಾತನಾಡಿದ್ದೇನು?" ಎಂದು ಕೇಳುತ್ತೀರೋ? ದೇವರಿಗೆ ಸೇವೆ ಮಾಡುವುದು  ವ್ಯರ್ಥ. ಅವರು ಹೇಳಿದಂತೆ ನಾವು ನಡೆದುಕೊಳ್ಳುವುದರಿಂದ ಪ್ರಯೋಜನವೇನು? ನಮ್ಮ ಕೃತ್ಯಗಳಿಗಾಗಿ ಸೇನಾಧೀಶ್ವರ ಸರ್ವೇಶ್ವರನ ಮುಂದೆ ದುಃಖಪಡುವುದರಿಂದ ಲಾಭವೇನು? ಆಹಂಕಾರಿಗಳೇ ಭಾಗ್ಯವಂತರು; ದುಷ್ಕರ್ಮಿಗಳು ಚೆನ್ನಾಗಿ ಅಭಿವೃದ್ಧಿಯಾಗುತ್ತಿದ್ದಾರೆ, ಅಷ್ಟೆ ಅಲ್ಲ, ದೇವರನ್ನೇ ಪರಿಕ್ಷೆಗೆ ಗುರಿಪಡಿಸಿ ಸುರಕ್ಷಿತವಾಗಿದ್ದಾರೆ," ಎಂದು ನೀವು ಹೇಳಿದ್ದೀರಿ. ಇಂಥ ಮಾತುಗಳನ್ನು ಕೇಳಿ, ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರು ತಮ್ಮ ತಮ್ಮಲ್ಲೇ ಮಾತನಾಡಿಕೊಂಡರು. ಸರ್ವೇಶ್ವರ ಅವರಿಗೆ ಕಿವಿಗೊಟ್ಟು ಆಲಿಸಿದರು. ಭಯಭಕ್ತಿಯಿಂದ ತಮ್ಮ ನಾಮ ನಾಮಸ್ಮರಣೆ ಮಾಡುವವರ ಹೆಸರುಗಳನ್ನು ತಮ್ಮ ಮುಂದಿದ್ಧ ದಾಖಲೆ ಪುಸ್ತಕದಲ್ಲಿ ಬರೆಸಿದರು. ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: "ಇವರು ನನ್ನ ಜನರು; ನಾನು ಕಾರ್ಯತತ್ಪರನಾಗುವ ದಿನದಂದು ಅವರು ನನಗೆ ಸ್ವಕೀಯ ಜನರಾಗಿರುವರು.  ತಂದೆಯೊಬ್ಬನು ತನ್ನ ಸೇವೆ ಮಾಡುವ ಮಗನನ್ನು ಕಾಪಾಡುವಂತೆ ನಾನು ಅವರನ್ನು ಕಾಪಾಡುವೆನು. ಆಗ ಸಜ್ಜನರಿಗೂ ದುರ್ಜನರಿಗೂ, ದೇವರಸೇವೆ ಮಾಡುವವರಿಗೂ ಮಾಡದವರಿಗೂ ಇರುವ ವ್ಯತ್ಯಾಸವನ್ನು ಮತ್ತೆ ನೀವು ಮನಗಾಣುವಿರಿ. "ಇಗೋ, ಆ ದಿನ ಬರುತ್ತಿದೆ. ಒಲೆಯಂತೆ ಉರಿಯುತ್ತಿದೆ.  ಎಲ್ಲ ಆಹಾಂಕಾರಿಗಳು, ದುಷ್ಕರ್ಮಿಗಳು, ಒಣಹುಲ್ಲಿನಂತೆ ಆಗಿಹೋಗಿದ್ದಾರೆ. ಆದ್ದರಿಂದ ಬರಲಿರುವ ಆ ದಿನದಂದು ಸುಟ್ಟು ಭಸ್ಮವಾಗುತ್ತಾರೆ. ಬುಡ ರೆಂಬೆಸಹಿತ ಬೂದಿಯಾಗುತ್ತದೆ," ಎನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರ, "ನನ್ನ ನಾಮದಲ್ಲಿ ಭಯಭಕ್ತಿಯಿಂದ ಇರುವ ನಿಮಗಾದರೋ ಜೀವೋದ್ಧಾರಕನೆಂಬ ಸೂರ್ಯನು ಉದಯಿಸಿ, ಸುಕ್ಷೇಮವನ್ನೀಯುವ ಕಿರಣಗಳನ್ನು ಬೀರುವನು. ಕೊಟ್ಟಿಗೆಯಿಂದ ಹೊರಬಂದ ಕರುಗಳಂತೆ ನೀವು ಕುಣಿದು ಕುಪ್ಪಳಿಸುವಿರಿ. 

ಕೀರ್ತನೆ: 1:1-2, 3, 4, 6 

ಶ್ಲೋಕ: ಪ್ರಭುವಿನಲ್ಲೇ ಭರವಸೆಯಿಟ್ಟು ನಡೆವಾತನು ಧನ್ಯನು 

ಶುಭಸಂದೇಶ: ಲೂಕ 11:5-13 

ಯೇಸುಸ್ವಾಮಿ ಶಿಷ್ಯರಿಗೆ ಹೀಗೆಂದರು: "ನಿಮ್ಮಲ್ಲಿ ಒಬ್ಬನು ತನ್ನ ಸ್ನೇಹಿತನ ಮನೆಗೆ ನಡುರಾತ್ರಿಯಲ್ಲಿ ಹೋಗುತ್ತಾನೆಂದು ಭಾವಿಸೋಣ: ಅವನು, "ಗೆಳೆಯಾ, ನನಗೆ ಮೂರು ರೊಟ್ಟಿಗಳನ್ನು ಸಾಲವಾಗಿ ಕೊಡು. ಪ್ರಯಾಣದಲ್ಲಿದ್ದ ನನ್ನ ಸ್ನೇಹಿತನೊಬ್ಬನು ಅನಿರೀಕ್ಷಿತವಾಗಿ ನನ್ನ ಮನೆಗೆ ಈಗತಾನೆ ಬಂದಿದ್ದಾನೆ. ಅವನಿಗೆ ಊಟಕ್ಕಿಡಲು ನನ್ನಲ್ಲಿ ಏನೂ ಇಲ್ಲ," ಎಂದು ಕೇಳಲು, ಈ ಸ್ನೇಹಿತ ಒಳಗಿನಿಂದಲೇ, "ನನಗೆ ತೊಂದರೆ ಕೊಡಬೇಡ; ಬಾಗಿಲು ಹಾಕಿ ಆಗಿದೆ; ನನ್ನ ಮಕ್ಕಳು ನನ್ನ ಕೂಡ ಮಲಗಿದ್ದಾರೆ; ನಾನು ಎದ್ದು ಬಂದು ಕೊಡುವುದಕ್ಕಾಗುವುದಿಲ್ಲ," ಎಂದು ಉತ್ತರ ಕೊಡುವುದು ಸಹಜವಲ್ಲವೇ? ಆದರೂ, ತನ್ನ ಗೆಳೆಯ ಇವನು ಎದ್ದು ಬಂದುಕೊಡದೆ ಇದ್ದರೂ, ನಾಚಿಕೆಪಡದೆ ಕೇಳುತ್ತಲೇ ಇದ್ದಾನಲ್ಲಾ ಎಂಬ ಕಾರಣದಿಂದಾದರೂ ಅವನು ಎದ್ದು ಬಂದು ಕೇಳಿದಷ್ಟನ್ನು ಕೊಡುತ್ತಾನೆಂಬುದು ನಿಜ. ಆದುದರಿಂದ "ಕೇಳಿರಿ, ನಿಮಗೆ ದೊರಕುವುದು; ಹುಡುಕಿರಿ, ನಿಮಗೆ ಸಿಗುವುದು; ತಟ್ಟಿರಿ, ನಿಮಗೆ ಬಾಗಿಲು ತೆರೆಯಲಾಗುವುದು. ಏಕೆಂದರೆ ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ದೊರಕುವುದು; ಹುಡುಕುವವನಿಗೆ ಸಿಗುವುದು; ತಟ್ಟುವವನಿಗೆ ಬಾಗಿಲು ತೆರೆಯಲಾಗುವುದು. ನಿಮ್ಮಲ್ಲಿ ಯಾವ ತಂದೆ ತಾನೇ ತನ್ನ ಮಗ ಮಿಾನನ್ನು  ಕೇಳಿದರೆ ಹಾವನ್ನು ಕೊಡುತ್ತಾನೆ? ಅಥವಾ ಮೊಟ್ಟೆಯನ್ನು ಕೇಳಿದರೆ ಚೇಳನ್ನು ಕೊಡುತ್ತಾನೆ? ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ, ಅವಕ್ಕಿಂತಲೂ ಹೆಚ್ಚಾಗಿ ಸ್ವರ್ಗದಲ್ಲಿರುವ ನಿಮ್ಮ ತಂದೆ ತಮ್ಮನ್ನು ಕೇಳಿಕೊಳ್ಳುವವರಿಗೆ ಪವಿತ್ರಾತ್ಮ ಅವರನ್ನೇ ಅನುಗ್ರಹಿಸಬಲ್ಲರು! ಎಂದು ನಾನು ನಿಮಗೆ ಹೇಳುತ್ತೇನೆ."

No comments:

Post a Comment