ಮೊದಲನೇ ವಾಚನ: ಸಿರಾಖ 35:12-14, 16-18
ಲಂಚದೋಪಾದಿ ಕಾಣಿಕೆ ತರಬೇಡ, ಆತನು ಅವುಗಳನ್ನು ಅಂಗೀಕರಿಸುವುದಿಲ್ಲ ಅಕ್ರಮವಾದ ಬಲಿಯ ಮೇಲೆ ಮನಸ್ಸಿಡಬೇಡ, ಆತ ನ್ಯಾಯಾಧೀಶ, ಆತನಲ್ಲಿ ಮುಖದಾಕ್ಷಿಣ್ಯವಿಲ್ಲ ಬಡವನ ವಿರೋಧವಾಗಿ ಯಾರನ್ನೂ ಅಂಗೀಕರಿಸನಾತ ಅನ್ಯಾಯಕ್ಕೀಡಾದವನ ಮೊರೆಯನು ಆಲಿಸುವನಾತ. ತಿರಸ್ಕರಿಸನಾತ ಯಾವ ದಿಕ್ಕುದೆಸೆಯಿಲ್ಲದವರ ವಿನಂತಿಯನು ಅಂಗೀಕೃತನಾಗುವನು ಇಂಥವನ ಪ್ರಾರ್ಥನೆ ಮುಟ್ಟುವುದು ಗಗನಮಂಡಲವನು. ಮೇಘಮಂಡಲವನು ದಾಟುವುದು ದೀನನ ಪ್ರಾರ್ಥನೆ ಅವನಿಗೆ ಉಪಶಮನವೇ ಇರದು ಅದು ದೇವರ ಸನ್ನಿದಿ ಸೇರುವವರೆಗೆ. ಅವನು ಅಲ್ಲಿಂದ ಏಳುವುದಿಲ್ಲ ಮಹೋನ್ನತನು ಸದುತ್ತರ ಕೊಡುವವರೆಗೆ ಆತ ಉತ್ತರ ಕೊಡುವುದು ನ್ಯಾಯತೀರಿಸಿದ ನಂತರವೇ.
ಕೀರ್ತನೆ: 34:2-3, 17-18, 19, 23
ಶ್ಲೋಕ: ನಿರ್ಗತಿಗನು ಮೊರೆಯಿಡಲು ಪ್ರಭು ಕಿವಿಗೊಟ್ಟನು
ಎರಡನೇ ವಾಚನ: 2 ತಿಮೊಥೇಯನಿಗೆ 4:6-8, 16-18
ಅತಿ ಪ್ರಿಯನೇ, ನಾನು ಯಜ್ಞಪಶುವಾಗಿ ಅರ್ಪಿತನಾಗುವ ಸಮಯವು ಬಂದಿದೆ. ಈ ಲೋಕದಿಂದ ತೆರಳಬೇಕಾದ ಕಾಲವೂ ಕೂಡಿಬಂದಿದೆ. ಬಾಳಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ನನ್ನ ಓಟವನ್ನು ಮುಗಿಸಿದ್ದೇನೆ. ವಿಶ್ವಾಸವನ್ನು ಕಾಪಾಡಿಕೊಂಡಿದ್ದೇನೆ. ಇನ್ನು ನನಗೆ ಉಳಿದಿರುವುದು ಒಂದೇ: ಸಜ್ಜನರಿಗೆ ಸಲ್ಲುವಂಥ ಜಯಮಾಲೆ ನನಗೀಗ ಸಿದ್ಧವಾಗಿದೆ. ಅದನ್ನು ನೀತಿವಂತ ನ್ಯಾಯಾಧಿಪತಿಯಾದ ಪ್ರಭು ಆ ದಿನದಂದು ನನಗೆ ಕೊಡುವರು; ನನಗೆ ಮಾತ್ರವಲ್ಲ, ಅವರ ಪ್ರತ್ಯಕ್ಷತೆಯನ್ನು ಪ್ರೀತಿಯಿಂದ ನಿರೀಕ್ಷಿಸುತ್ತಿರುವ ಎಲ್ಲರಿಗು ಕೊಡುವರು. ನಾನು ಮೊದಲನೆಯ ಸಾರಿ ವಿಚಾರಣೆಗೆ ಒಳಗಾಗಿ ಪ್ರತಿವಾದಿಸುತ್ತಿದ್ದಾಗ ಯಾರೂ ನನ್ನ ಪರವಾಗಿ ನಿಲ್ಲಲಿಲ್ಲ. ಎಲ್ಲರೂ ನನ್ನನ್ನು ಕೈಬಿಟ್ಟರು. ದೇವರು ಅವರನ್ನು ಕ್ಷಮಿಸಲಿ. ಆದರೆ ಪ್ರಭು ನನಗೆ ಬೆಂಬಲವಾಗಿ ನಿಂತರು. ನಾನು ಶುಭಸಂದೇಶವನ್ನು ಸಂಪೂರ್ಣವಾಗಿ ಸಾರುವಂತೆಯೂ ಅನ್ಯಧರ್ಮಿಾಯರೆಲ್ಲರು ಅದನ್ನು ಕೇಳುವಂತೆಯೂ ಮಾಡಿದರು. ಅಲ್ಲದೆ, ಸಿಂಹದ ಬಾಯಿಂದಲೂ ನನ್ನನ್ನು ಸಂರಕ್ಷಿಸಿದರು. ಪ್ರಭು ನನ್ನನ್ನು ಸಕಲ ಕೇಡುಗಳಿಂದ ರಕ್ಷಿಸಿ, ತಮ್ಮ ಸ್ವರ್ಗಸಾಮ್ರಾಜ್ಯಕ್ಕೆ ನನ್ನನ್ನು ಸುರಕ್ಷಿತವಾಗಿ ಸೇರಿಸುವರು. ಯುಗಯುಗಾಂತರಕ್ಕೂ ಅವರಿಗೆ ಮಹಿಮೆ ಸಲ್ಲಲಿ. ಆಮೆನ್.
ಶುಭಸಂದೇಶ: ಲೂಕ 18:9-14
ಕೆಲವರು ತಾವೇ ಸತ್ಪುರುಷರು ಎಂದುಕೊಂಡು ಇತರನ್ನು ತುಚ್ಛವಾಗಿ ಕಾಣುತ್ತಿದ್ದರು. ಅಂಥವರನ್ನು ಉದ್ದೇಶಿಸಿ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು: "ಒಮ್ಮೆ, ಇಬ್ಬರು ಪ್ರಾರ್ಥನೆಮಾಡಲು ದೇವಾಲಯಕ್ಕೆ ಹೋದರು. ಇವರಲ್ಲಿ ಒಬ್ಬನು ಫರಿಸಾಯನು, ಇನ್ನೊಬ್ಬನು ಸುಂಕವಸೂಲಿಯವನು. ಫರಿಸಾಯನು ಮುಂದೆ ನಿಂತು ತನ್ನಷ್ಟಕ್ಕೆ ಹೀಗೆ ಪ್ರಾರ್ಥನೆಮಾಡಿದ: "ಓ ದೇವರೇ, ನಾನು ಇತರರ ಹಾಗೆ ಅಲ್ಲ. ಅವರೋ ಕೊಳ್ಳೆಗಾರರು, ಅನ್ಯಾಯಗಾರರು, ವ್ಯಭಿಚಾರಿಗಳು.ನಾನು ಈ ಸುಂಕದವನಂತೆಯೂ ಅಲ್ಲ. ಇದಕ್ಕಾಗಿ ನಿಮಗೆ ಧನ್ಯವಾದವನ್ನು ಸಲ್ಲಿಸುತ್ತೇನೆ. ನಾನಾದರೋ ವಾರಕ್ಕೆ ಎರಡು ದಿನ ಉಪವಾಸವ್ರತವನ್ನು ಕೈಗೊಳ್ಳುತ್ತೇನೆ; ನನ್ನ ಆದಾಯದಲ್ಲಿ ಹತ್ತನೆಯ ಒಂದು ಪಾಲನ್ನು ನಿಮಗೆ ಸಲ್ಲಿಸುತ್ತೇನೆ." ಸುಂಕವಸೂಲಿಯವನಾದರೋ ದೂರದಲ್ಲೇ ನಿಂತು, ತಲೆಯನ್ನೂ ಮೇಲಕ್ಕೆ ಎತ್ತದೆ, "ಓ ದೇವರೇ, ನಾನು ಪಾಪಿ; ನನಗೆ ದಯೆತೋರಿ," ಎನ್ನುತ್ತಾ ಎದೆಬಡಿದುಕೊಂಡ. ದೇವರ ದೃಷ್ಟಿಯಲ್ಲಿ ಪಾಪಮುಕ್ತನಾಗಿ ಮನೆಗೆ ತೆರಳಿದವನು ಈ ಸುಂಕ ವಸೂಲಿಯವನು, ಆ ಫರಿಸಾಯನಲ್ಲ, ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಏಕೆಂದರೆ, ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವವನನ್ನು ದೇವರು ಕೆಳಗಿಳಿಸುವರು. ತನ್ನನ್ನು ತಾನೇ ಕೆಳಗಿಳಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು.
1
No comments:
Post a Comment