ಮೊದಲನೇ ವಾಚನ: ರೋಮನರಿಗೆ 8:18-25
ಸಹೋದರರೇ, ಇಂದಿನ ಕಾಲದಲ್ಲಿ ನಾವು ಅನುಭವಿಸುತ್ತಿರುವ ಕಷ್ಟಸಂಕಟಗಳು ಮುಂದೆ ನಮಗೆ ಪ್ರತ್ಯಕ್ಷವಾಗಲಿರುವ ಮಹಿಮೆಯೊಂದಿಗೆ ಹೋಲಿಸುವುದಕ್ಕೂ ಬಾರದವುಗಳೆಂದು ನಾನು ಎಣಿಸುತ್ತೇನೆ. ದೇವರ ಮಕ್ಕಳ ಮಹಿಮೆಯು ಯಾವಾಗ ಪ್ರತ್ಯಕ್ಷವಾದೀತೋ ಎಂದು ಸೃಷ್ಟಿ ಸಮಸ್ತವು ಬಹು ಉತ್ಸುಕತೆಯಿಂದ ಎದುರು ನೋಡುತ್ತಿದೆ. ಸರ್ವಸೃಷ್ಟಿಯು ನಿರರ್ಥಕತೆಗೆ ಒಳಗಾಯಿತು. ಇದು ಅದರ ಸ್ವಂತ ಇಚ್ಛೆಯಿಂದಲ್ಲ, ದೇವರ ಇಚ್ಛೆಯಿಂದಲೇ ಆಯಿತು. ಆದರು ಸೃಷ್ಟಿಗೆ ನಿರೀಕ್ಷೆಯೊಂದಿದೆ. ಅದೇನೆಂದರೆ, ಸೃಷ್ಟಿಯು ಸಹ ವಿನಾಶವಿಧಿಯಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮಾಯುತ ಸ್ವಾತಂತ್ರ್ಯದಲ್ಲಿ ಪಾಲುಗೊಳ್ಳುತ್ತದೆ, ಎಂಬುದೇ. ಸೃಷ್ಟಿಸಮಸ್ತವು ಇಂದಿನವರೆಗೆ ನರಳುತ್ತಾ ಪ್ರಸವವೇದನೆಪಡುತ್ತಾ ಇದೆ ಎಂಬುದು ನಮಗೆ ತಿಳಿದಿದೆ. ಸೃಷ್ಟಿಮಾತ್ರವಲ್ಲ, ದೇವರ ವರದಾನಗಳಲ್ಲಿ ಪ್ರಥಮಫಲವಾಗಿ ಪವಿತ್ರಾತ್ಮ ಅವರನ್ನೇ ಪಡೆದಿರುವ ನಾವು ಸಹ ನಮ್ಮೊಳಗೆ ನರಳುತ್ತಿದ್ದೇವೆ. ದೇವರ ಮಕ್ಕಳಿಗೆ ದೊರೆಯುವ ಸೌಭಾಗ್ಯವನ್ನೂ ನಮ್ಮ ಸಪೂರ್ಣ ವಿಮೋಚನೆಯನ್ನೂ ನಿರೀಕ್ಷಿಸುತ್ತಿದ್ದೇವೆ. ನಾವು ಜೀವೋದ್ಧಾರ ಹೊಂದಿದವರೂ ಇನ್ನೂ ನಿರೀಕ್ಷಿಸುವವರಾಗಿದ್ದೇವೆ. ನಾವು ನಿರೀಕ್ಷಿಸುವುದು ಪ್ರತ್ಯಕ್ಷವಾಗಿದ್ದರೆ ಅದನ್ನು ನಿರೀಕ್ಷೆಯೆನ್ನುವುದಿಲ್ಲ; ಪ್ರತ್ಯಕ್ಷವಾಗಿರುವುದನ್ನು ಯಾರಾದರೂ ನಿರೀಕ್ಷಿಸುವುದುಂಟೇ? ಪ್ರತ್ಯಕ್ಷವಾಗದೆ ಇರುವುದನ್ನು ನಾವು ನಿರೀಕ್ಷಿಸುವವರಾಗಿದ್ದರೆ ಅದಕ್ಕಾಗಿ ತಾಳ್ಮೆಯಿಂದ ಕಾದುಕೊಂಡಿರುತ್ತೇವೆ.
ಕೀರ್ತನೆ: 126:1-2, 2-3, 4-5, 6
ಶ್ಲೋಕ: ಪ್ರಭು ನಮಗೆ ಮಹತ್ಕಾರ್ಯ ಮಾಡಿದುದು ಖಚಿತ
ಶುಭಸಂದೇಶ: ಲೂಕ 13:18-21
ಆಗ ಯೇಸುಸ್ವಾಮಿ, "ದೇವರ ಸಾಮ್ರಾಜ್ಯವು ಏನನ್ನು ಹೋಲುತ್ತದೆ? ಅದನ್ನು ಯಾವುದಕ್ಕೆ ಹೋಲಿಸಲಿ? ಅದು ಒಂದು ಸಾಸಿವೆಕಾಳಿನಂತೆ ಇದೆ. ಒಬ್ಬನು ಅದನ್ನು ತೆಗೆದುಕೊಂಡು ಹೋಗಿ ತನ್ನ ತೋಟದಲ್ಲಿ ಬಿತ್ತಿದನು. ಅದು ಬೆಳೆದು ಮರವಾಯಿತು. ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ರೆಂಬೆಗಳಲ್ಲಿ ಗೂಡುಕಟ್ಟಿ ವಾಸಮಾಡತೊಡಗಿದವು," ಎಂದರು. ಪನಃ ಯೇಸುಸ್ವಾಮಿ, "ದೇವರ ಸಾಮ್ರಾಜ್ಯವನ್ನು ಯಾವುದಕ್ಕೆ ಹೋಲಿಸಲಿ? ಅದು ಹುಳಿಹಿಟ್ಟಿನಂತೆ ಇದೆ. ಅದನ್ನು ಒಬ್ಬಾಕೆ ತೆಗೆದುಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಸಿದಳು. ಆ ಹಿಟ್ಟೆಲ್ಲಾ ಹುಳಿಯಾಯಿತು," ಎಂದರು.
No comments:
Post a Comment