ಮೊದಲನೇ ವಾಚನ: ಬಾರೂಕ 4:5-12, 27-29
ನನ್ನ ಜನರೇ, ಧೈರ್ಯದಿಂದಿರಿ, ಇಸ್ರಯೇಲಿನ ಹೆಸರನ್ನು ನೀವು ಉಳಿಸಬಲ್ಲಿರಿ, ನೀವು ಅನ್ಯರಾಷ್ಟ್ರಗಳಿಗೆ ಮಾರಲ್ಪಟ್ಟಿರುವುದು ವಿನಾಶಕ್ಕಾಗಿ ಅಲ್ಲ ನೀವು ಶತ್ರುಗಳ ವಶವಾಗಿರುವುದು ದೇವರನ್ನು ಸಿಟ್ಟಿಗೆಬ್ಬಿಸಿದ್ದರಿಂದ; ದೇವರನ್ನು ತೊರೆದು ದೆವ್ವಗಳಿಗೆ ಬಲಿಯರ್ಪಿಸಿದ್ದರಿಂದ ನಿಮ್ಮ ಸೃಷ್ಟಿಕರ್ತನ ಕೋಪವನ್ನು ಕೆರಳಿಸಿದ್ದರಿಂದ; ನಿಮ್ಮನ್ನು ಸಾಕಿಸಲಹಿದ ನಿತ್ಯ ದೇವರನ್ನು ಮರೆತದ್ದರಿಂದ ನಿಮ್ಮನ್ನು ಪೋಷಿಸಿದ ಮಾತೆ ಜೆರುಸಲೇಮನ್ನು ನೋಯಿಸಿದ್ದರಿಂದ. ನಿಮ್ಮ ಮೇಲೆ ಎರಗಲಿದ್ದ ದೇವಕೋಪವನ್ನು ಆಕೆ ಹೀಗೆಂದು ಬಣ್ಣಿಸಿದಳು: "ಸಿಯೋನಿನ ನೆರೆಹೊರೆಯಲ್ಲಿ ವಾಸಿಸಿದವರೇ ಕೇಳಿ; ದೇವರು ನನ್ನ ಮೇಲೆ ಬರಮಾಡಿದ್ದಾರೆ ಮಹಾಕಸ್ತಿ ಶಾಶ್ವತರಾದ ದೇವರು ನನ್ನ ಪುತ್ರ ಪುತ್ರಿಯರ ಮೇಲೆ ಬರಮಾಡಿರುವ ಗಡೀಪಾರನ್ನು ನಾನು ಅರಿತಿರುವೆ. ಮುದದಿಂದ ನಾನಿವರನ್ನು ಸಲಹಿದೆ, ದುಃಖದಿಂದ ಕಣ್ಣೀರಿಡುತ್ತಾ ಕಳುಹಿಸಿಕೊಟ್ಟೆ. ನಾನೊಬ್ಬ ವಿಧವೆ, ಹಲವರಿಂದ ನಿರಾಕೃತಳು ನನ್ನನ್ನು ನೋಡಿ ಯಾರೂ ಆನಂದಿಸಬಾರದು; ದೇವರ ಧರ್ಮಶಾಸ್ತ್ರವನ್ನು ಬಿಟ್ಟು ನನ್ನ ಮಕ್ಕಳು ದೂರಸರಿದರು ಅವರ ಪಾಪ ಕೃತ್ಯಗಳ ನಿಮಿತ್ತ ನಾನು ಹಾಳುಬೀಳಬೇಕಾಯಿತು. ಮಕ್ಕಳೇ, ಧೈರ್ಯದಿಂದಿರಿ, ಮೊರೆಯಿಡಿ ದೇವರಿಗೆ; ಇದನ್ನೆಲ್ಲಾ ಬರಮಾಡಿದಾತ ತಂದುಕೊಳ್ಳುವನು ನಿಮ್ಮನ್ನು ನೆನಪಿಗೆ. ದೇವರಿಗೆ ವಿಮುಕರಾಗಲು ಮನಸ್ಸು ಮಾಡಿದಿರಿ ಈಗ ಅವರಿಗೆ ಅಭಿಮುಖರಾಗಲು ಹತ್ತರಷ್ಟು ಮನಸ್ಸುಮಾಡಿರಿ. ನಿಮಗೆ ಈ ವಿಪತ್ತನ್ನು ಬರಮಾಡಿದಾತನು ನಿಮ್ಮ ಉದ್ಧಾರದೊಂದಿಗೆ ಶಾಶ್ವತ ಸಂತಸವನ್ನುಂಟುಮಾಡುವನು."
ಕೀರ್ತನೆ: 69:33-35, 36-37
ಶ್ಲೋಕ: ಬಡಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು.
ಶುಭಸಂದೇಶ: ಲೂಕ 10:17-24
"ನಿಮ್ಮ ಹೆಸರುಗಳು ಸ್ವರ್ಗದಲ್ಲಿ ಲಿಖಿತವಾಗಿವೆ ಎಂದು ಸಂತೋಷಪಡಿ." ಕಳುಹಿಸಲಾಗಿದ್ದ ಎಪ್ಪತ್ತೆರಡು ಮಂದಿ ಸಂತೋಷಭರಿತರಾಗಿ ಹಿಂದಿರುಗಿ ಬಂದು, "ಸ್ವಾಮೀ, ನಿಮ್ಮ ಹೆಸರಿನಲ್ಲಿ ಆಜ್ಞೆ ಮಾಡಿದಾಗ ದೆವ್ವಗಳು ಕೂಡ ನಮಗೆ ಅಧೀನವಾಗುತ್ತವೆ," ಎಂದು ವರದಿ ಮಾಡಿದರು. ಅದಕ್ಕೆ ಯೇಸು, "ಸೈತಾನನು ಆಕಾಶದಿಂದ ಸಿಡಿಲಿನಂತೆ ಬೀಳುವುದನ್ನು ಕಂಡೆನು. ಇಗೋ, ಸರ್ಪಗಳನ್ನು ಹಾಗೂ ಚೇಳುಗಳನ್ನು ತುಳಿಯುವುದಕ್ಕೂ ಶತ್ರುವಿನ ಸಮಸ್ತ ಶಕ್ತಿಯನ್ನು ಜಯಿಸುವುದಕ್ಕೂ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವುದೂ ನಿಮಗೆ ಹಾನಿಮಾಡದು. ಆದರೂ ದೆವ್ವಗಳು ನಿಮಗೆ ಅಧೀನವಾಗಿವೆಯೆಂದು ಸಂತೋಷಪಡುವುದಕ್ಕಿಂತ ನಿಮ್ಮ ಹೆಸರುಗಳು ಸ್ವರ್ಗದಲ್ಲಿ ಲಿಖಿತವಾಗಿವೆ ಎಂದು ಸಂತೋಷಪಡಿ," ಎಂದು ಹೇಳಿದರು. ಅದೇ ಗಳಿಗೆಯಲ್ಲಿ ಯೇಸುಸ್ವಾಮಿ ಪವಿತ್ರಾತ್ಮರಿಂದ ಹರ್ಷಾವೇಶಗೊಂಡು, "ಪಿತನೇ, ಭೂಸ್ವರ್ಗಗಳ ಒಡೆಯನೇ, ಈ ವಿಷಯಗಳನ್ನು ಜ್ಞಾನಿಗಳಿಗೂ ಮೇಧಾವಿಗಳಿಗೂ ಮರೆ ಮಾಡಿ, ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ; ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ಹೌದು ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ. ನನ್ನ ಪಿತ ಸಮಸ್ತವನ್ನೂ ನನ್ನ ವಶಕ್ಕೆ ಒಪ್ಪಿಸಿದ್ದಾರೆ. ಪುತ್ರನು ಯಾರೆಂದು ಪಿತನ ಹೊರತು ಬೇರಾರೂ ಅರಿಯರು. ಪಿತನು ಯಾರೆಂದು ಪುತ್ರನು ಮತ್ತು ಯಾರಿಗೆ ಪುತ್ರನು ಅವರನ್ನು ಶ್ರುತಪಡಿಸಲು ಇಚ್ಛಿಸುತ್ತಾನೋ ಅವರೇ ಹೊರತು ಮತ್ತಾರೂ ಅರಿಯರು," ಎಂದು ಹೇಳಿದರು. ಆನಂತರ ಯೇಸು ಶಿಷ್ಯರ ಕಡೆ ತಿರುಗಿ, ಅವರಿಗೆ ಪ್ರತ್ಯೇಕವಾಗಿ, "ನೀವು ಕಾಣುವುದನ್ನು ಕಾಣುವ ಕಣ್ಣುಗಳು ಭಾಗ್ಯವುಳ್ಳವು. ಏಕೆಂದರೆ, ಎಷ್ಟೋ ಪ್ರವಾದಿಗಳು ಹಾಗೂ ಅರಸರು ನೀವು ನೋಡಿರುವುದನ್ನು ನೋಡುವುದಕ್ಕೂ, ನೀವು ಕೇಳುವುದನ್ನು ಕೇಳುವುದಕ್ಕೂ ಆಶಿಸಿದರು. ಆದರೂ ಅದನ್ನು ಅವರು ನೋಡಲೂ ಇಲ್ಲ, ಕಾಣಲೂ ಇಲ್ಲ ಎಂದು ನಿಮಗೆ ಹೇಳುತ್ತೇನೆ," ಎಂದರು.
No comments:
Post a Comment