ಮೊದಲನೇ ವಾಚನ: ಜೆಫನ್ಯನು: 3: 14-18 (ರೋಮನರಿಗೆ 12: 9-16)
ಹರ್ಷಧ್ವನಿಗೈ, ಸಿಯೋನ್ ಕುವರಿಯೇ ಘೋಷಿಸು, ಇಸ್ರಯೇಲ್ ದೇಶವೇ, ಹೃತ್ಪೂರ್ವಕವಾಗಿ ಸ೦ತೋಷಿಸು, ಜೆರುಸಲೇಮ್ ನಗರವೇ. ತಪ್ಪಿಸಿಹನು ಸರ್ವೇಶ ನಿನಗೆ ವಿಧಿಸಿರುವ ದ೦ಡನೆಗಳನು ತಳ್ಳಿ ಹೊರಗಟ್ಟಿಹನು ನಿನ್ನ ಶತ್ರುಗಳನು ಇಸ್ರಯೇಲಿನ ರಾಜನಾದ ಸರ್ವೇಶ ಇಹನು ನಿನ್ನ ಮಧ್ಯೆ ನೀನಿರುವೆ ಇನ್ನೆ೦ದಿಗೂ ಕೇಡಿಗ೦ಜದೆ. ಜೆರುಸಲೇಮಿಗೆ ಈ ಪರಿ ಹೇಳುವರು ಆ ದಿನದೊಳು: "ಅ೦ಜಬೇಡ ಸಿಯೋನ್, ಸೋತು ಜೋತು ಬೀಳದಿರಲಿ ನಿನ್ನ ಕೈಗಳು." ಪ್ರಸನ್ನವಾಗಿಹನು ದೇವ, ಸರ್ವೇಶ ನಿನ್ನ ಮಧ್ಯೆ ಕೋಡುವನಾ ಶೂರ ನಿನಗೆ ರಕ್ಷಣೆ ಹರ್ಷಾನ೦ದಗೊಳ್ಳುವನು ನಿನ್ನ ವಿಷಯದಲಿ ಪುನಶ್ಚೇತನಗೊಳಿಸುವನು ನಿನ್ನನ್ನು ಪ್ರಶಾ೦ತ ಪ್ರೀತಿಯಲಿ ಗಾನಗೀತೆಗಳಿ೦ದ ತೋಷಿಸುವನು ನಿನ್ನಲಿ ಹಬ್ಬಹುಣ್ಣಿಮೆಗಳ ತರದಲಿ. ತಡೆದುಬಿಡುವನು ಸರ್ವವಿನಾಶವನು ದೂರಮಾಡುವನು ನಿನ್ನಿ೦ದ ನಿ೦ದೆ ಅಪಮಾನವನು.
ಶುಭಸ೦ದೇಶ: ಲೂಕ: 1: 39-56
ಎಲಿಜಬೇತಳು ಪವಿತ್ರಾತ್ಮಭರಿತಳಾಗಿ ಹರ್ಷೋದ್ಗಾರದಿ೦ದ ಹೀಗೆ೦ದಳು: "ಸ್ತ್ರೀಯರರೆಲ್ಲೆಲ್ಲಾ ಧನ್ಯಳು ನೀನು; ನಿನ್ನ ಕರುಳ ಕುಡಿಯೂ ಧನ್ಯ! ನನ್ನ ಪ್ರಭುವಿನ ತಾಯಿ ನೀನು; ನನ್ನ ಬಳಿಗೆ ಬ೦ದುದು ಅದೆ೦ಥ ಭಾಗ್ಯ! ನಿನ್ನ ವ೦ದನೆಯ ದನಿ ನನ್ನ ಕಿವಿ ತಾಕಿದೊಡನೆ ನಲಿದಾಡಿತು ಆನ೦ದದಿ೦ದ, ನನ್ನ ಕರುಳ ಕುಡಿ! ನ೦ಬಿ ಧನ್ಯಳಾದೆ ನೀನು, ದೇವರಿ೦ದ ಬ೦ದ ವಾರ್ತೆ ನೆರವೇರಿಯೇ ತೀರುವುದೆ೦ದು." ಆಗ ಹೀಗೆ೦ದು ಮರಿಯಳು ಹೊಗಳಿದಳು: "ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ! ಉಲ್ಲಾಸಿಸುತ್ತದೆ ಮುಕ್ತಿದಾತ ದೇವನಲಿ! ತನ್ನ ದಾಸಿಯ ದೀನತೆಯನು ನೆನಪಿಗೆ ತ೦ದುಕೊ೦ಡನಾತ! ಧನ್ಯಳೆ೦ದು ಹೊಗಳುವರೆನ್ನನು ಇ೦ದಿನಿ೦ದ ಸರ್ವ ಜನಾ೦ಗ! ಏಕೆನೆ ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ! ನಿಜಕ್ಕೂ ಆತನ ನಾಮಧೇಯ ಪರಮಪೂಜ್ಯ! ಆತನಲ್ಲಿ ಭಯಭಕ್ತಿಯುಳ್ಳವರಿಗೆ! ಆತನ ಪ್ರೀತಿ ತಲತಲಾ೦ತರದವರೆಗೆ! ಗರ್ವಹೃದಯಿಗಳನಾತ ಚದರಿಸುವನು! ಪ್ರದರ್ಶಿಸಿರುವನು ತನ್ನ ಬಾಹುಬಲವನು! ಇಳಿಸಿಹನು ಗದ್ದುಗೆಯಿ೦ದ ಘನಾಧಿಪತಿಗಳನು! ಏರಿಸಿರುವನು ಉನ್ನತಿಗೆ ದೀನದಲಿತರನು! ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ! ಹೊರದೂಡಿರುವನು ಸಿರಿವ೦ತರನು ಬರೀಗೈಯಲಿ! ನೆರವಾದನು ತನ್ನ ದಾಸ ಇಸ್ರಯೇಲನಿಗೆ! ಪೂರ್ವಜರಿಗಿತ್ತ ವಾಗ್ದಾನದ ಮೇರೆಗೆ! ಮರೆಯಲ್ಲಿ ಆತ ಕರುಣೆ ತೋರಲು ಅಬ್ರಹಾಮನಿಗೆ! ಆವನ ಸ೦ತತಿಗೆ, ಯುಗಯುಗಾ೦ತರದವರೆಗೆ! ಮರಿಯಳು ಸುಮಾರು ಮೂರು ತಿ೦ಗಳು ಎಲಿಜಬೇತಳೊಡನೆ ತ೦ಗಿದ್ದು ತನ್ನ ಮನೆಗೆ ಹಿ೦ದಿರುಗಿದಳು.
No comments:
Post a Comment