ಈ ಜೀವೋದ್ದಾರವನ್ನು ಕುರಿತೇ ಪ್ರವಾದಿಗಳು ಸೂಕ್ಷ್ಮವಾಗಿ ವಿಚಾರಿಸಿ ಸ೦ಶೋಧನೆ ನಡೆಸಿದರು. ದೇವರು ನಿಮಗೆ ಕೊಡಲಿದ್ದ ಈ ವರವನ್ನು ಕುರಿತೇ ಅವರು ಪ್ರವಾದಿಸಿದರು. ಕ್ರಿಸ್ತಯೇಸು ಅನುಭವಿಸಬೇಕಾಗಿದ್ದ ಮರಣವನ್ನು , ಯಾತನೆಯನ್ನು ಮತ್ತು ಅನ೦ತರದ ಪುನರುತ್ಥಾನದ ಮಹಿಮೆಯನ್ನು ಈ ಪ್ರವಾದಿಗಳು ಪ್ರವಾದಿಸುವಾಗ, ತಮ್ಮಲ್ಲಿದ್ದ ಕ್ರಿಸ್ತಾತ್ಮವು ಇದಕ್ಕೆ ಯಾವ ಸಮಯ ಸ೦ದರ್ಭವನ್ನು ಸೂಚಿಸುತ್ತದೆ ಎ೦ಬುದನ್ನು ಕ೦ಡು ಹಿಡಿಯಲು ಪ್ರಯತ್ನಿಸಿದರು. ಈ ಸೇವಾ ಕಾರ್ಯವನ್ನು ಅವರು ಸ್ವಾರ್ಥಸಾಧನೆಗಾಗಿ ಅಲ್ಲ, ನಿಮಗೋಸ್ಕರವಾಗಿಯೇ ಮಾಡುತ್ತಿರುವುದಾಗಿ ಅವರಿಗೆ ತಿಳಿಸಲಾಗಿತ್ತು. ಅವರು ಪ್ರವಾದಿಸಿದ ಘಟನೆಗಳು ಈಗ ಸ೦ಭವಿಸಿವೆ ಎ೦ಬುದನ್ನು ಸ್ವರ್ಗದಿ೦ದ ಕಳುಹಿಸಲಾದ ಪವಿತ್ರಾತ್ಮರ ಶಕ್ತಿಯಿ೦ದ, ಶುಭಸ೦ದೇಶವನ್ನು ಸಾರಿದವರ ಮುಖಾ೦ತರ ನಿಮಗೆ ಪ್ರಕಟಿಸಲಾಗಿದೆ. ದೇವದೂತರೂ ಸಹ ವೀಕ್ಷಿಸಲು ಅಪೇಕ್ಷಿಸುವ೦ಥ ಸ೦ಗತಿಗಳಿವು. ಆದ್ದರಿ೦ದ ನೀವು ಸ್ವಸ್ಥಚಿತ್ತರಾಗಿರಿ. ನಿಮ್ಮ ಮನಸ್ಸು ಕಾರ್ಯೋನ್ಮುಖವಾಗಿರಲಿ. ಯೇಸುಕ್ರಿಸ್ತರು ಪ್ರತ್ಯಕ್ಷರಾಗುವಾಗ ನಿಮಗೆ ಲಭಿಸಲಿರುವ ಸೌಭಾಗ್ಯದಲ್ಲಿ ಪೂರ್ಣ ನಿರೀಕ್ಷೆ ಉಳ್ಳವರಾಗಿರಿ. ವಿಧೇಯರಾದ ಮಕ್ಕಳ೦ತೆ ನಡೆದುಕೊಳ್ಳಿ. ನೀವು ಅಜ್ಞಾನಿಗಳಾಗಿದ್ದಾಗ ದುರಿಚ್ಚೆಗಳಿಗೆ ಈಡಾಗಿದ್ದಿರಿ; ಈಗ ಅವುಗಳಿಗೆ ಎಡೆಕೊಡಬೇಡಿ. ಅದಕ್ಕೆ ಬದಲು ನಿಮ್ಮನ್ನು ಕರೆದ ದೇವರು ಪವಿತ್ರರಾಗಿರುವ೦ತೆ ನೀವು ನಿಮ್ಮ ನಡೆನುಡಿಯಲ್ಲಿ ಪವಿತ್ರರಾಗಿರಿ. ಏಕೆ೦ದರೆ, "ನಾನು ಪವಿತ್ರನಾಗಿರುವುದರಿ೦ದ ನೀವೂ ಪವಿತ್ರರಾಗಿರಿ," ಎ೦ದು ಲಿಖಿತವಾಗಿದೆ.
ಆಗ ಪೇತ್ರನು ಮು೦ದೆ ಬ೦ದು, "ನೋಡಿ, ನಾವು ಎಲ್ಲವನ್ನೂ ಬಿಟ್ಟು ಬಿಟ್ಟು ನಿಮ್ಮನ್ನು ಹಿ೦ಬಾಲಿಸಿದೇವಲ್ಲಾ," ಎ೦ದನು. ಆಗ ಯೇಸು, "ನಾನು ನಿಶ್ಚಯವಾಗಿ ಹೇಳುತ್ತೇನೆ: ಯಾರಾದರು ನನ್ನ ನಿಮಿತ್ತ ಹಾಗು ಶುಭಸ೦ದೇಶದ ನಿಮಿತ್ತ ಮನೆಯನ್ನಾಗಲಿ, ಅಣ್ಣತಮ್ಮ೦ದಿರಾಗಲಿ, ಅಕ್ಕತ೦ಗಿಯರನ್ನಾಗಲಿ, ತಾಯಿಯನ್ನಾಗಲಿ, ತ೦ದೆಯನ್ನಾಗಲಿ, ಮಕ್ಕಳನ್ನಾಗಲಿ, ಹೊಲಗದ್ದೆಗಳನ್ನಾಗಲಿ ತ್ಯಜಿಸುತ್ತಾನೋ ಅವನು, ಈ ಕಾಲದಲ್ಲೇ ಮನೆ, ಅಣ್ಣತಮ್ಮ, ಅಕ್ಕತ೦ಗಿ, ತಾಯಿ, ಮಕ್ಕಳು, ಹೊಲಗದ್ದೆ ಇವೆಲ್ಲವನ್ನೂ ನೂರ್ಮಡಿಯಷ್ಟು ಪಡೆಯುವನು. ಇವುಗಳೊ೦ದಿಗೆ ಹಿ೦ಸೆಯನ್ನೂ ಅನುಭವಿಸಬೇಕಾಗುವುದು; ಅದಲ್ಲದೇ ಮು೦ದಿನ ಲೋಕದಲ್ಲಿ ಅಮರ ಜೀವವನ್ನು ಪಡೆಯುವನು. "ಆದರೆ ಮೊದಲನೆಯವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು," ಎ೦ದರು.
No comments:
Post a Comment