19.03.2020 - "ನಾನು ನನ್ನ ತಂದೆಯ ಆಲಯದಲ್ಲೇ ಇರಬೇಕೆಂದು ನಿಮಗೆ ತಿಳಿಯದೆಹೋಯಿತೇ?”

ಮೊದಲನೇ ವಾಚನ: 2 ಸಮುವೇಲ -7:4-5, 12-14, 16

ಆದರೆ ಅದೇ ರಾತ್ರಿ ಸರ್ವೇಶ್ವರ ನಾತಾನನಿಗೆ ಹೀಗೆಂದು ಆಜ್ಞಾಪಿಸಿದರು:  “ನೀನು ಹೋಗಿ 
ನನ್ನ ದಾಸ ದಾವೀದನಿಗೆ ತಿಳಿಸಬೇಕಾದುದು ಇದು: ‘ನೀನು ನನಗೊಂದು ದೇವಾಲಯವನ್ನು 
ಕಟ್ಟಬೇಕೆಂದಿರುವೆಯೋ. ನಿನ್ನ ಆಯುಷ್ಕಾಲ ಮುಗಿದು ನೀನು ನಿನ್ನ ಪೂರ್ವಜರನ್ನು ಸೇರಿ ವಿಶ್ರಮಿಸುವಾಗ ನಿನ್ನ ಮಕ್ಕಳಲ್ಲಿ ಒಬ್ಬನನ್ನು ನಿನಗೆ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು. ಅವನು ನನ್ನ ಹೆಸರಿನಲ್ಲಿ ಒಂದು ದೇವಾಲಯವನ್ನು ಕಟ್ಟುವನು. ನಾನು ಅವನ ಸಿಂಹಾಸನವನ್ನು ಸ್ಥಿರಪಡಿಸುವೆನು. ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು. ಅವನು ತಪ್ಪುಮಾಡಿದಾಗ, ಮಗನಿಗೆ ತಂದೆ ಬೆತ್ತದ ರುಚಿತೋರಿಸುವಂತೆ ನಾನು ಅವನನ್ನು ಶಿಕ್ಷಿಸುವೆನು. ಸರ್ವಶಕ್ತರಾದ ಸರ್ವೇಶ್ವರಾ, ಇಸ್ರಯೇಲ್ ದೇವರೇ, ತಾವು ತಮ್ಮ ದಾಸನಿಗೆ, ‘ನಾನು ನಿನಗೊಂದು ಮನೆತನವನ್ನು ಕಟ್ಟುವೆನು’ ಎಂದು ವಾಗ್ದಾನಮಾಡಿದ್ದೀರಿ. ಆದುದರಿಂದಲೇ ಈ ಪ್ರಕಾರ ನಿಮ್ಮನ್ನು ಪ್ರಾರ್ಥಿಸುವುದಕ್ಕೆ ಧೈರ್ಯಗೊಂಡೆ. ಸರ್ವೇಶ್ವರಾ, ಸರ್ವೇಶ್ವರಾ, ನೀವು ನಮ್ಮ ದೇವರು; ನಿಮ್ಮ ವಾಕ್ಯ ಸತ್ಯವಾದದ್ದು; ತಮ್ಮ ದಾಸನಾದ ನನಗೆ ಇಂಥ ಶ್ರೇಷ್ಠ ವಾಗ್ದಾನ ಮಾಡಿದ್ದೀರಿ. ನಿಮ್ಮ ದಾಸನ ಮನೆತನವನ್ನು ಆಶೀರ್ವದಿಸಿರಿ; ಸದಾಕಾಲ ನಿಮ್ಮ ಅನುಗ್ರಹ ಅದರ ಮೇಲಿರಲಿ. ಸರ್ವೇಶ್ವರಾ, ಸರ್ವೇಶ್ವರಾ, ವಾಗ್ದಾನ ಮಾಡಿದವರು ತಾವೇ. ತಮ್ಮ ಆಶೀರ್ವಾದದಿಂದ ತಮ್ಮ ದಾಸನಾದ ನನ್ನ ಮನೆತನದಲ್ಲಿ ನಿತ್ಯ ಸೌಭಾಗ್ಯ ನೆಲಸಿರಲಿ!” ಎಂದನು.

ಕೀರ್ತನೆ: 89:2-3, 4-5, 27, 29

ಶ್ಲೋಕ: 

ಶುಭಸಂದೇಶ: ಲೂಕ - 2: 41-51


ಯೇಸುಸ್ವಾಮಿಯ ತಂದೆತಾಯಿಗಳು ಪ್ರತಿವರ್ಷವೂ ಪಾಸ್ಕಹಬ್ಬಕ್ಕೆ ಜೆರುಸಲೇಮಿಗೆ ಹೋಗುತ್ತಿದ್ದರು.ಯೇಸುವಿಗೆ ಹನ್ನೆರಡು ವರ್ಷವಾದಾಗ ವಾಡಿಕೆಯ ಪ್ರಕಾರ ಹಬ್ಬಕ್ಕೆ ಹೋದರು. ಹಬ್ಬ ಮುಗಿಸಿಕೊಂಡು ಅವರು ಹಿಂದಿರುಗಿ ಬರುವಾಗ ಬಾಲಕಯೇಸು ಜೆರುಸಲೇಮಿನಲ್ಲಿಯೇ ಉಳಿದುಬಿಟ್ಟರು. ಇದು ತಂದೆತಾಯಿಗಳಿಗೆ ತಿಳಿಯದು. ಮಗನು ಯಾತ್ರಿಕರ ಗುಂಪಿನಲ್ಲಿ ಬರುತ್ತಿರಬಹುದೆಂದು ಭಾವಿಸಿ ಒಂದು ದಿನದ ಪ್ರಯಾಣ ಬಂದುಬಿಟ್ಟಿದ್ದರು. ನಂತರ ಮಗನನ್ನು ಕಾಣದೆ ತಮ್ಮ ಬಂಧುಬಳಗದವರಲ್ಲೂ ಪರಿಚಿತರಲ್ಲೂ ಹುಡುಕಾಡಿದರು. ಅಲ್ಲೆಲ್ಲೂ ಕಾಣದೆ ಅವರನ್ನು ಹುಡುಕಿಕೊಂಡು ಜೆರುಸಲೇಮಿಗೆ ಮರಳಿ ಬಂದರು.ಮೂರು ದಿನಗಳ ಮೇಲೆ ಮಹಾದೇವಾಲಯದಲ್ಲಿ ಅವರನ್ನು ಕಂಡಾಗ ಅಲ್ಲಿ ಯೇಸು, ಬೋಧಕರ ಮಧ್ಯೆ ಕುಳಿತುಕೊಂಡು ಅವರ ಉಪದೇಶವನ್ನು ಆಲಿಸುತ್ತಾ ಅವರಿಗೆ ಪ್ರಶ್ನೆಹಾಕುತ್ತಾ ಇದ್ದರು.ಬಾಲಕನ ಪ್ರಶ್ನೋತ್ತರಗಳನ್ನು ಕೇಳುತ್ತಿದ್ದ ಎಲ್ಲರೂ ಆತನ ಜ್ಞಾನವನ್ನು ಕಂಡು ಬೆರಗಾದರು. ತಂದೆತಾಯಿಗಳು ಮಗನನ್ನು ಅಲ್ಲಿ ಕಂಡು ವಿಸ್ಮಯಗೊಂಡರು. ಆಗ ತಾಯಿಯು, “ಕಂದಾ, ನಮಗೆ ಏಕೆ ಹೀಗೆ ಮಾಡಿದೆ? ನಿನ್ನ ತಂದೆಯೂ ನಾನೂ ಎಷ್ಟೋ ಕಳವಳಪಟ್ಟು ನಿನ್ನನ್ನು ಹುಡುಕಾಡಿದೆವಲ್ಲಾ,” ಎಂದಳು. ಅದಕ್ಕೆ ಉತ್ತರವಾಗಿ ಯೇಸು, “ನೀವು ನನ್ನನ್ನು ಹುಡುಕಿದ್ದೇಕೆ? ನಾನು ನನ್ನ ತಂದೆಯ ಆಲಯದಲ್ಲೇ ಇರಬೇಕೆಂದು ನಿಮಗೆ ತಿಳಿಯದೆ ಹೋಯಿತೇ?” ಎಂದರು. ಆದರೆ ಅವರ ಮಾತು ತಂದೆತಾಯಿಗಳಿಗೆ ಅರ್ಥವಾಗಲಿಲ್ಲ.ಬಳಿಕ ಯೇಸು ತಂದೆತಾಯಿಗಳೊಡನೆ ನಜರೇತಿಗೆ ಬಂದರು. ಅಲ್ಲಿ ಅವರಿಗೆ ವಿಧೇಯರಾಗಿ ನಡೆದುಕೊಳ್ಳುತ್ತಿದ್ದರು. ಈ ವಿಷಯಗಳನ್ನೆಲ್ಲಾ ತಾಯಿ ಮರಿಯಳು ತನ್ನ ಮನಸ್ಸಿನಲ್ಲಿ ಸಂಗ್ರಹಿಸಿ ಇಟ್ಟುಕೊಂಡಳು.

ಮನಸ್ಸಿಗೊಂದಿಷ್ಟು : ಇಡೀ ಶುಭ ಸಂದೇಶದಲ್ಲಿ ಜೋಸೆಫರು ಏನಾದರೂ ಮಾತಾಡಿದ್ದು ನಾವು ಕೇಳಿಲ್ಲ. ಆದರೆ ದೇವರ ಚಿತ್ತಕ್ಕೆ ತಲೆ ಬಾಗಿದ ಅವರು ಯೇಸುವಿನ ಜನನದ ಅತ್ಯಂತ ಕಷ್ಟದ ಹಾಗೂ ಆತಂಕದ ಸಮಯದಲ್ಲಿ ತಮ್ಮ ಪಾತ್ರವನ್ನು ವಹಿಸುತ್ತಾರೆ. ಅಪಾಯಗಳಿಗೆ ಎದೆಯೊಡ್ಡುತ್ತಾರೆ. ದೇವರಿಂದ ಕೇವಲ ನಮ್ಮ ಅವಶ್ಯಕತೆಗಳನ್ನು ಕೇಳುವುದರಲ್ಲೇ ನಮ್ಮ ಆಧ್ಯಾತ್ಮಿಕ ಜೀವನವನ್ನು ಕಂಡುಕೊಂಡಿರುವ ನಾವು ಜೋಸೆಫರ ಜೀವನದಿಂದ ಕಲಿಯಬೇಕಾದುದು ಬಹಳಷ್ಟಿದೆ.  

ಪ್ರಶ್ನೆ : ದೇವರ ಚಿತ್ತಕೆ ನಾವೆಷ್ಟು ತಲೆಬಾಗುತ್ತಿದ್ದೇವೆ ?

ಪ್ರಭುವೇ,
ನಿಮಗಾಗಿ ನಿಲ್ಲುವ
ಸ್ಥಿರತೆ  ನನ್ನ 
ಕಾಲುಗಳಿಗಿರಲಿ 
ನಿಮಗಾಗಿ ನಡೆಯುವ 
ನಿರಂತರತೆ  ನನ್ನ 
ಪಾದಗಳಿಗಿರಲಿ 
ನನ್ನ ಶಿರ ನಿಮ್ಮ 
ಚಿತ್ತಕೆ ಬಾಗುತ್ತಿರಲಿ 
ನಿಮ್ಮ ಕಾರ್ಯಗಳಿಗೆ 
ಕೈ ಜೋಡಿಸುವಲ್ಲಿ  
ಈ ನನ್ನ ಕೈ ನಿಮ್ಮ 
ಸದಾ ಸ್ತುತಿಸುತ್ತಿರಲಿ 
-ಚಿತ್ತ 

18.03.20 - "ಮೋಶೆಯ ಧರ್ಮಶಾಸ್ತ್ರವನ್ನಾಗಲಿ, ಪ್ರವಾದಿಗಳ ಪ್ರವಚನಗಳನ್ನಾಗಲಿ ರದ್ದುಮಾಡಲು ನಾನು ಬಂದೆನೆಂದು ತಿಳಿಯಬೇಡಿ"

ಮೊದಲನೇ ವಾಚನ:  ಧರ್ಮೋಪದೇಶಕಾಂಡ 4:1, 5-9

“ಇಸ್ರಯೇಲರೇ, ಕೇಳಿ; ನೀವು ಜೀವದಿಂದುಳಿದು ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರ ನಿಮಗೆ ಕೊಡುವ ನಾಡನ್ನು ಸೇರಿ ಸ್ವಾಧೀನಮಾಡಿಕೊಳ್ಳಬೇಕಾದರೆ ನಾನು ಈಗ ಬೋಧಿಸುವ ಆಜ್ಞಾವಿಧಿಗಳನ್ನು ಗಮನದಿಂದ ಅನುಸರಿಸಬೇಕು. “ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ನಾಡಿನಲ್ಲಿ ಅನುಸರಿಸಬೇಕಾದ ಆಜ್ಞಾವಿಧಿಗಳನ್ನು ನನ್ನ ದೇವರಾದ ಸರ್ವೇಶ್ವರ ನನಗೆ ಆಜ್ಞಾಪಿಸಿದಂತೆಯೇ ನಿಮಗೆ ಬೋಧಿಸಿದ್ದೇನೆ.ಇವುಗಳನ್ನು ಕೈಗೊಂಡು ಅನುಸರಿಸಿರಿ. ಅನುಸರಿಸಿದ್ದೇ ಆದರೆ ಅನ್ಯಜನಗಳು ನಿಮ್ಮನ್ನು ಜ್ಞಾನಿಗಳೂ ವಿವೇಕಿಗಳೂ ಎಂದು ತಿಳಿಯುವರು; ಈ ಆಜ್ಞೆಗಳ ಬಗ್ಗೆ ಅವರು ಅರಿತುಕೊಂಡಾಗ, ‘ಈ ದೊಡ್ಡ ಜನಾಂಗ ಎಂಥಾ ಜ್ಞಾನವಿವೇಕವುಳ್ಳ ಜನಾಂಗ’, ಎಂದು ಮಾತಾಡಿಕೊಳ್ಳುವರು.ನಾವು ಮೊರೆಯಿಡುವಾಗಲೆಲ್ಲಾ ನಮ್ಮ ದೇವರಾದ ಸರ್ವೇಶ್ವರ ನಮಗೆ ಸಮೀಪವಾಗಿರುವಂತೆ ಬೇರೆ ಯಾವ ಜನಾಂಗಕ್ಕೆ, ಅದೆಷ್ಟೇ ದೊಡ್ಡದಾಗಿರಲಿ, ಯಾವ ದೇವರು ಹೀಗೆ ಸಮೀಪವಾಗಿರುತ್ತಾರೆ? ನಾನು ಈ ದಿನ ನಿಮ್ಮ ಮುಂದಿಡುವ ಇಂಥ ನ್ಯಾಯಯುತವಾದ ಆಜ್ಞಾವಿಧಿಗಳನ್ನು ಒಳಗೊಂಡ ಈ ಧರ್ಮಶಾಸ್ತ್ರಕ್ಕೆ ಸಮಾನವಾದುದು ಬೇರೆ ಯಾವ ಜನಾಂಗಕ್ಕೆ ಉಂಟು? ಹೀಗಿರುವಲ್ಲಿ, ನೀವು ಬಹಳ ಜಾಗರೂಕತೆಯಿಂದಿರಿ; ನಿಮ್ಮ ಕಣ್ಣುಗಳಿಂದಲೇ ನೋಡಿದ ಘಟನೆಗಳನ್ನು ಎಷ್ಟು ಮಾತ್ರಕ್ಕೂ ಮರೆಯದಿರಿ; ಜೀವಮಾನಪರ್ಯಂತ ಇವುಗಳನ್ನು ನೆನಪಿನಲ್ಲಿ ಇಡಿ; ನಿಮ್ಮ ಮಕ್ಕಳಿಗೂ ಮೊಮ್ಮಕ್ಕಳಿಗೂ ತಿಳಿಸುತ್ತಾ ಹೋಗಿ

ಕೀರ್ತನೆ: 147:12-13,15-16,19-20

ಶ್ಲೋಕ: ಜೆರುಸಲೆಮೇ, ಕೀರ್ತಿಸು ಪ್ರಭುವನು

ಶುಭಸಂದೇಶ: ಮತ್ತಾಯ - 5 :17-19


ಮೋಶೆಯ ಧರ್ಮಶಾಸ್ತ್ರವನ್ನಾಗಲಿ, ಪ್ರವಾದಿಗಳ ಪ್ರವಚನಗಳನ್ನಾಗಲಿ ರದ್ದುಮಾಡಲು ನಾನು ಬಂದೆನೆಂದು ತಿಳಿಯಬೇಡಿ. ರದ್ದುಮಾಡಲು ಅಲ್ಲ, ಅವುಗಳನ್ನು ಸಿದ್ಧಿಗೆ ತರಲು ಬಂದಿದ್ದೇನೆ. ಭೂಮ್ಯಾಕಾಶಗಳು ಉಳಿದಿರುವ ತನಕ ಧರ್ಮಶಾಸ್ತ್ರವೆಲ್ಲ ನೆರವೇರುವುದೇ ಹೊರತು ಅದರಲ್ಲಿ ಒಂದು ಚಿಕ್ಕ ಅಕ್ಷರವಾಗಲಿ, ಚುಕ್ಕೆಯಾಗಲಿ ನಿರರ್ಥಕವಾಗದೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಹೀಗಿರುವಲ್ಲಿ, ಅದರ ಆಜ್ಞೆಗಳಲ್ಲಿ ಅತಿ ಚಿಕ್ಕದೊಂದನ್ನು ಮೀರುವವನು, ಮೀರುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಅತ್ಯಲ್ಪನೆಂದು ಪರಿಗಣಿತನಾಗುವನು; ಧರ್ಮಶಾಸ್ತ್ರವನ್ನು ಪಾಲಿಸುವವನು, ಪಾಲಿಸುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಮಹಾತ್ಮನೆಂದು ಪರಿಗಣಿತನಾಗುವನು.

ಮನಸ್ಸಿಗೊಂದಿಷ್ಟು : ನಮ್ಮ ಇಡೀ  ಜೀವನವೇ ಈ ಜಗತ್ತನ್ನು , ಈ ಜಗದ ಜನರನ್ನು ಮೆಚ್ಚಿಸುವತ್ತಲೇ ಗಿರಕಿ ಹೊಡೆಯುತ್ತಿರುತ್ತದೆ. ಇದರ ನಡುವೆ  ಸ್ವರ್ಗ ಸಾಮ್ರಾಜ್ಯದಲ್ಲಿ ಮಹಾತ್ಮರೆನಿಸಿಕೊಳ್ಳುವ ಭಾಗ್ಯ ನಮ್ಮದಾಗುವ ದಾರಿಯನ್ನು ಯೇಸು ತಿಳಿಸುತ್ತಿದ್ದಾರೆ. ನಮ್ಮೆಲ್ಲಾ ಧಾರ್ಮಿಕ ಆಚರಣೆಗಳ  ನಡುವೆ ಧರ್ಮಶಾಸ್ತ್ರವನ್ನು ಪಾಲಿಸುವುದೇ ನಮ್ಮ ಗುರಿಯಾಗಬೇಕಲ್ಲವೇ? 

ಪ್ರಶ್ನೆ : ಸ್ವರ್ಗ ಸಾಮ್ರಾಜ್ಯ ನಿಜಕ್ಕೂ ನಮ್ಮ ಬಾಳಿನ ಗುರಿಯಾಗಿದೆಯೇ?

ಪ್ರಭುವೇ,
ಸ್ವರ್ಗಸಾಮ್ರಾಜ್ಯಕ್ಕೆ
ನಾ ಎಷ್ಟು ಹತ್ತಿರ 
ಎಂಬ ಪ್ರಶ್ನೆಗೆ ಹುಡುಕಬೇಕಾಗಿದೆ ಉತ್ತರ
ಸ್ವರ್ಗರಾಜ್ಯದ ಕಣ್ಣಲ್ಲಿ 
ಆಗಲು ನಾ ಮಹಾತ್ಮ 
ಹೆಜ್ಜೆ ಹಾಕುತ್ತಿರಲಿ 
ಈ ಲೋಕದಿ ನನ್ನಾತ್ಮ 

17.03.20 - ಏಳು ಸಲವಲ್ಲ, ಏಳೆಪ್ಪತ್ತುಸಲ ಕ್ಷಮಿಸಬೇಕು ಎಂದು ನಾನು ನಿನಗೆ ಒತ್ತಿ ಹೇಳುತ್ತೇನೆ,


ಅಜರ್ಯನ ಗೀತೆಯಿಂದ ವಾಚನ:  1:2, 11-20

ಆಗ ಅಜರ್ಯನು ಬೆಂಕಿಯ ನಡುವೆ ನಿಂತುಕೊಂಡು ಗಟ್ಟಿಯಾಗಿ ಕೂಗಿ ಹೀಗೆಂದು ಪ್ರಾರ್ಥನೆ ಮಾಡಿದ: ನಮ್ಮ ಪೂರ್ಜರ ದೇವರಾದ ಪ್ರಭು ದೇವಾ, ನಿಮ್ಮ ನಾಮದ ಪ್ರಯುಕ್ತ ನಮ್ಮನ್ನು ಎಂದೆಂದಿಗೂ ತ್ಯಜಿಸಬೇಡಿ, ನಿಮ್ಮ ಒಡಂಬಡಿಕೆಯನ್ನು ರದ್ದುಗೊಳಿಸಬೇಡಿ. ನಿಮ್ಮ ಮಿತ್ರ  ಅಬ್ರಹಾಮನ  ನಿಮಿತ್ತ ನಿಮ್ಮ ದಾಸ ಇಸಾಕನ,  ನಿಮ್ಮ ಭಕ್ತ ಯಕೋಬನ  ಪ್ರಯುಕ್ತ ನಿಮ್ಮ ಕೃಪೆ ನಮ್ಮನ್ನು ಬಿಟ್ಟಗಲದಿರಲಿ.  ಇವರಿಗೆ, "ಇವರಿಗೆ,  "ನಿಮ್ಮ ಸಂತಾನವನ್ನು ಆಕಾಶದ ನಕ್ಷತ್ರಗಳಂತೆ ಸಮುದ್ರ ತೀರದ ಮರಳಿನಂತೆ ಅಸಂಖ್ಯವಾಗಿಸುವೆ" ಎಂದು ನೀವು ವಾಗ್ದಾನ ಮಾಡಿದಿರಲ್ಲವೆ?  ಒಡೆಯಾ, ಉಳಿದ  ರಾಷ್ಟ್ರಗಳಿಗಿಂತ  ನಾವು  ಕನಿಷ್ಟರಾಗಿಬಿಟ್ಟೆವು,  ನಮ್ಮ  ಪಾಪಗಳ  ಕಾರಣ  ಜಗದಲ್ಲಿನ  ಹೀನಸ್ಥಿತಿಗೆ  ಇಳಿದುಬಿಟ್ಟೆವು.  ನಮಗೀಗ  ರಾಜರಿಲ್ಲ, ಪ್ರವಾದಿಗಳಿಲ್ಲ,  ನಾಯಕರಿಲ್ಲ, ಹೋಮವಿಲ್ಲ,  ಬಲಿದಾನವಿಲ್ಲ, ನೈವೇದ್ಯವಿಲ್ಲ, ಧೂಪವಿಲ್ಲ.  ಕಾಣಿಕೆಯನರ್ಪಿಸಿ ನಿಮ್ಮ  ಕೈಪೆ  ಪಡೆಯಲು ಸ್ಥಳವೂ ಇಲ್ಲ,  ಆದರೂ ಪಶ್ಚಾತ್ತಾಪದ  ಹೃದಯ, ದೀನಮನ  ನಿಮಗೆ  ಅಂಗೀಕೃತವಾಗಲಿ.  ಹೋತಹೋರಿಗಳ, ಸಾವಿರಾರು ಕೊಬ್ಬಿದ ಕುರಿಮರಿಗಳ ದಹನಬಲಿದಾನದಂತೆ ನಮ್ಮೀ ಅಂತರಂಗದ ಬಲಿ ನಿಮಗಿಂದು ಅಂಗೀಕೃತವಾಗಲಿ.  ಪೂರ್ಣ ಹೃದಯದಿಂದ ನಾವು ನಿಮ್ಮನ್ನು ಹಿಂಬಾಲಿಸುವಂತೆ  ಅನುಗ್ರಹಿಸಿರಿ.  ಏಕೆಂದರೆ ನಿಮ್ಮಲ್ಲಿ ನಂಬಿಕೆಯಿಡುವವರಿಗೆ ಆಶಾಭಂಗವಾಗುವುದಿಲ್ಲ. ಪೂರ್ಣ ಹೃದಯದಿಂದ ನಿಮ್ಮನ್ನೀಗ ಹಿಂಬಾಲಿಸುತ್ತೇವೆ ನಿಮ್ಮಲ್ಲಿ ಭಯಭಕ್ತಿಯಿಡುತ್ತೇವೆ ನಿಮ್ಮ ಸನ್ನಿಧಿಯನ್ನು ಮತ್ತೆ ಅರಸುತ್ತೇವೆ.  ನಮ್ಮನ್ನು ನಿರಾಶೆಗೊಳಿಸಬೇಡಿ ನಿಮ್ಮ ಕೃಪಾತಿಶಯದ ಪ್ರಕಾರ ನಮ್ಮ ಸಂಗಡ ವರ್ತಿಸಿ.  ಸರ್ವೇಶ್ವರಾ, ನಿಮ್ಮ ಮಹತ್ಕಾರ್ಯಗಳ ಮೂಲಕ ನಮ್ಮನ್ನು ಬಿಡುಗಡೆಮಾಡಿ ನಿಮ್ಮ ಹೆಸರಿಗೆ  ಹೊಸ ಕೀರ್ತಿ ಬರುವಂತೆ  ಮಾಡಿ.
 -ಪ್ರಭುವಿನ ವಾಕ್ಯ 
   
                        
ಕೀರ್ತನೆ: 25:4-5, 6-7, 8-9

ಘೋಷಣೆ:  ನೆನೆಸಿಕೋ ಪ್ರಭೂ, ನಿನ್ನ ನಿರಂತರ ಕರುಣೆಯನು.

ಶುಭಸಂದೇಶ :  ಮತ್ತಾಯನು - 18:21-35

 

ಆ ಕಾಲದಲ್ಲಿ  ಪೇತ್ರನು ಯೇಸುವಿನ ಬಳಿಗೆ ಬಂದು,  "ಸ್ವಾಮಿ,  ನನಗೆ ವಿರುದ್ಧ ದ್ರೋಹ ಮಾಡುತ್ತಾ, ಇರುವ ನನ್ನ ಸಹೋದರನನ್ನು ಎಷ್ಟು ಸಲ ಕ್ಷಮಿಸಬೇಕು ?  ಏಳುಸಲವೇ? "ಎಂದು ಕೇಳಿದನು.  ಏಳು ಸಲವಲ್ಲ, ಏಳೆಪ್ಪತ್ತುಸಲ ಕ್ಷಮಿಸಬೇಕು ಎಂದು ನಾನು ನಿನಗೆ ಒತ್ತಿ ಹೇಳುತ್ತೇನೆ, "ಎಂದು ಯೇಸು ಉತ್ತರವಿತ್ತರು. 
ಯೇಸು ತಮ್ಮ ಮಾತನ್ನು ಮುಂದುವರಿಸುತ್ತಾ,  "ಸ್ವರ್ಗಸಾಮ್ರಾಜ್ಯಕ್ಕೆ ಈ ಹೋಲಿಕೆ ಅನ್ವಯಿಸುತ್ತದೆ: ಒಬ್ಬ ರಾಜನಿದ್ದ.  ಅವನು ತನ್ನ ಸೇವಕರಿಂದ ಲೆಕ್ಕ ಕೇಳಲು ನಿರ್ಧರಿಸಿದ.  ಲೆಕ್ಕ ತೆಗೆದುಕೊಳ್ಳಲು ಆರಂಭಿಸಿದಾಗ  ಹತ್ತು ಸಾವಿರ "ಚಿನ್ನದ ನಾಣ್ಯ" ಗಳನ್ನು ಸಾಲವಾಗಿ ತೆರಬೇಕಾಗಿದ್ದ ಒಬ್ಬನನ್ನು ಅವನ ಸಮ್ಮುಖಕ್ಕೆ ಕರೆತರಲಾಯಿತು.  ಆದರೆ ಸಾಲ ತೀರಿಸಲು ಅವನು ಕೈಯಲ್ಲಿ ಹಣವಿರಲಿಲ್ಲ.  ಆದುದರಿಂದ  ಅವನಿಗಿದ್ದುದೆಲ್ಲವನ್ನು ಮಾತ್ರವಲ್ಲ, ಅವನನ್ನೂ ಅವನ ಮಡದಿ ಮಕ್ಕಳನ್ನೂ ಗುಲಾಮಗಿರಿಗೆ  ಮಾರಿ,  ಸಾಲ ತೀರಿಸುವಂತೆ ರಾಜ ಆಜ್ಞಾಪಿಸಿದ.  ಆಗ ಆ ಸೇವಕ ರಾಜನ ಕಾಲಿಗೆ ಬಿದ್ದು ಬೇಡಿಕೊಂಡ:  'ಸ್ವಲ್ಪ ಸೈರಿಸಿಕೊಳ್ಳಿ ಸ್ವಾಮಿ' ನಿಮ್ಮ ಸಾಲ ತೀರಿಸಿಬಿಡುತ್ತೇನೆ,  'ಎಂದು ಅಂಗಲಾಚಿದ.  ರಾಜನಿಗೆ ಕನಿಕರ ಉಂಟಾಯಿತು.  ಆ ಸೇವಕನನ್ನು ಬಿಡುಗಡೆ ಮಾಡಿ ಅವನ ಸಾಲವನ್ನು ಮನ್ನಿಸಿ ಬಿಟ್ಟ.

"ಆದರೆ ಅದೇ ಸೇವಕ ಹೊರಗೆ ಬಂದದ್ದೇ ತನಗೆ ಕೇವಲ ನೂರು  'ಬೆಳ್ಳಿಕಾಸು' ಸಾಲ ತೆರಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಎದುರುಗೊಂಡ.  ಅವನನ್ನು ಹಿಡಿದು,  'ನನಗೆ  ಕೊಡಬೇಕಾದ ಸಾಲವನ್ನು ಈಗಲೇ ಕೊಟ್ಟು ತೀರಿಸು,  'ಎಂದು ಕುತ್ತಿಗೆ ಹಿಸುಕಿದ.  ಆಗ ಆ ಜೊತೆಗಾರ, 'ಸ್ವಲ್ಪ ಸೈರಿಸಿಕೊ, ಕೊಟ್ಟುಬಿಡುತ್ತೇನೆ,  'ಎಂದು ಕಾಲಿಗೆ ಬಿದ್ದು ಕೇಳಿಕೊಂಡ.  ಆದರೂ ಅವನು ಒಪ್ಪಲಿಲ್ಲ.  ಅಷ್ಟು ಮಾತ್ರವಲ್ಲ, ಸಾಲ ತೀರಿಸುವ ತನಕ ಆ ಜೊತೆಗಾರನನ್ನು ಸೆರೆಗೆ ಹಾಕಿಸಿದ.  ಇದೆಲ್ಲವನ್ನು ಕಂಡ ಇತರ ಸೇವಕರು ಬಹಳವಾಗಿ ನೊಂದುಕೊಂಡರು.  ರಾಜನ ಬಳಿಗೆ ಹೋಗಿ ನಡೆದುದೆಲ್ಲವನ್ನೂ ವರದಿಮಾಡಿದರು.  ರಾಜನು ಅವನನ್ನು ಕರೆಯಿಸಿ,  'ಎಲೋ ನೀಚ,  ನೀನು ಬೇಡಿಕೊಂಡಿದ್ದರಿಂದ ಪೂರ್ತಿ ಸಾಲವನ್ನು ನಾನು ಮನ್ನಾಮಾಡಿದೆ.  ನಾನು ನಿನಗೆ ದಯೆತೋರಿಸಿದಂತೆ ನೀನೂ ನಿನ್ನ ಜೊತೆಗಾರನಿಗೆ  ದಯೆ ತೋರಿಸಬೇಕಿತ್ತು ಅಲ್ಲವೇ?  'ಎಂದು ಸಿಟ್ಟುಗೊಂಡ.  ಬಳಿಕ ತನಗೆ ಬರಬೇಕಾಗಿದ್ದ ಸಾಲವನ್ನು ತೀರಿಸುವವರೆಗೂ ಅನನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿದ. "ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸೋದರನನ್ನು ಮನಃಪೂರ್ವಕವಾಗಿ ಕ್ಷಮಿಸಬೇಕು. ಇಲ್ಲದಿದ್ದರೆ  ಸ್ವರ್ಗದಲ್ಲಿರುವ ನನ್ನ ತಂದೆ ನಿಮಗೆ ಇದರಂತೆಯೇ ಮಾಡುವರು,  'ಎಂದರು.
- ಪ್ರಭುಕ್ರಿಸ್ತರ ಶುಭಸಂದೇಶ


ಮನಸ್ಸಿಗೊಂದಿಷ್ಟು : ಏಳು ಸಲ ಕ್ಷಮಿಸಬೇಕೇ ಎಂದು ಕೇಳಿ ಯೇಸುವಿನ ಮೆಚ್ಚುಗೆ ಪಡಯುವ ಬಯಕೆ ಪೇತ್ರನಿಗಿತ್ತೆನೋ.  ಆದರೆ ಯೇಸು 
ಏಳೆಪ್ಪತ್ತೇಳು ಸಲ ಎನ್ನುತ್ತಾ ನಾವು ಸದಾ ಕ್ಷಮಾವಂತರಾಗಿರಬೇಕು ಎನ್ನುತ್ತಾರೆ. ಕ್ರೈಸ್ತರಾಗಿ ದಾಟಬೇಕಾದ  ಮತ್ತೊಂದು ಕಠಿಣ ಸೇತುವೆ.  ನಮ್ಮ ಬೌದ್ಧಿಕ , ಲೌಕೀಕ ಲೆಕ್ಕಾಚಾರದಲ್ಲಿ ಇದು ಅಸಾಧ್ಯವೇನೊ  ಆದರೆ ಶಿಲುಬೆ ಮೇಲಿಂದ ಕ್ಷಮಿಸಿದ ಕ್ರಿಸ್ತನೇ ನಮ್ಮ ಮೇಲ್ಪಂಕ್ತಿಯಾಗಲಿ. 

ಪ್ರಶ್ನೆ : ಕ್ಷಮೆ ನೀಡುವುದು ನಮಗೆಷ್ಟು ಕಷ್ಟ?

ಪ್ರಭುವೇ,
ನಾ ನಿಮ್ಮ ಅಪರಮಿತ
ಕ್ಷಮೆಯ ಫಲಾನುಭವಿ
ಕ್ಷಮೆ ನೀಡುವುದರಲ್ಲಿ 
ಮಾತ್ರ  ಅನನುಭವಿ
ಕಲಿಸಿ ನಮಗೆ 
ಕ್ಷಮೆಯ ಭಾವ
ನಿರಾಳತೆಯಲ್ಲಿ
ನಲಿಯಲಿ ಈ ಜೀವ   
       

16.03.2020 - "ಯಾವ ಪ್ರವಾದಿಯೂ ಸ್ವಗ್ರಾಮದಲ್ಲಿ ಸನ್ಮಾನಿತನಲ್ಲ"

ಮೊದಲನೇ ವಾಚನ: 2 ಅರಸುಗಳು 5:1-15


ಸಿರಿಯಾದ ರಾಜನಿಗೆ ನಾಮಾನ್ ಎಂಬೊಬ್ಬ ಸೇನಾಪತಿಯಿದ್ದನು. ಸರ್ವೇಶ್ವರಸ್ವಾಮಿ ಇವನ ಮುಖಾಂತರ ಸಿರಿಯಾದವರಿಗೆ ಜಯವನ್ನು ಅನುಗ್ರಹಿಸಿದ್ದರು. ಆದ್ದರಿಂದ ರಾಜನು ಇವನನ್ನು ಮಹಾಪುರುಷನೆಂದೂ ಸನ್ಮಾನ್ಯನೆಂದೂ ಗೌರವಿಸುತ್ತಿದ್ದನು. ಆದರೆ ಪರಾಕ್ರಮ ಶಾಲಿಯಾದ ಇವನು ಭೀಕರ ಚರ್ಮರೋಗದಿಂದ ನರಳುತ್ತಿದ್ದನು. ಸಿರಿಯಾದವರು, ಒಮ್ಮೆ ಸುಲಿಗೆಗಾಗಿ ಇಸ್ರಯೇಲರ ಪ್ರಾಂತ್ಯಕ್ಕೆ ಹೋಗಿಬರುವಾಗ, ಅಲ್ಲಿನ ಒಬ್ಬ ಹುಡುಗಿಯನ್ನು ಹಿಡಿದುಕೊಂಡು ಬಂದರು. ಆಕೆ ನಾಮಾನನ ಹೆಂಡತಿಗೆ ದಾಸಿಯಾದಳು. ಒಂದು ದಿನ ಆಕೆ ತನ್ನ ಯಜಮಾನಿಗೆ, “ನಮ್ಮ ದಣಿಯವರು ಸಮಾರಿಯದಲ್ಲಿರುವ ಪ್ರವಾದಿಯ ಹತ್ತಿರ ಇದ್ದಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು; ಅವರು ಇವರನ್ನು ಈ ಚರ್ಮರೋಗದಿಂದ ಗುಣಪಡಿಸುತ್ತಿದ್ದರು,” ಎಂದು ಹೇಳಿದಳು. ನಾಮಾನನು ರಾಜನ ಸನ್ನಿಧಿಗೆ ಹೋಗಿ, ಇಸ್ರಯೇಲ್ ನಾಡಿನ ಹುಡುಗಿ ಹೇಳಿದ್ದನ್ನು ತಿಳಿಸಿದನು. ಅವನು, “ನೀನು ಅಲ್ಲಿಗೆ ಹೋಗಿ ಬಾ; ನಾನು ನಿನ್ನ ಕೈಯಲ್ಲಿ ಇಸ್ರಯೇಲರ ಅರಸನಿಗೆ ಒಂದು ಪತ್ರವನ್ನು ಕೊಡುತ್ತೇನೆ,” ಎಂದನು. ನಾಮಾನನು ಮೂವತ್ತು ಸಾವಿರ ಬೆಳ್ಳಿ, ಆರುಸಾವಿರ ಬಂಗಾರ ನಾಣ್ಯಗಳನ್ನೂ, ಹತ್ತು ದುಸ್ತು ಬಟ್ಟೆಗಳನ್ನೂ ತೆಗೆದುಕೊಂಡು ಸಮಾರಿಯಕ್ಕೆ ಹೋದನು; ತಂದ ಪತ್ರವನ್ನು ಇಸ್ರಯೇಲರ ಅರಸನಿಗೆ ಕೊಟ್ಟನು. ಅದರಲ್ಲಿ, “ನನ್ನ ಸೇವಕ ನಾಮಾನನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ; ನೀವು ಅವನ ಚರ್ಮರೋಗವನ್ನು ವಾಸಿಮಾಡತಕ್ಕದ್ದೆಂದು ಈ ಪತ್ರದಿಂದ ತಿಳಿದುಕೊಳ್ಳಿ,” ಎಂಬುದಾಗಿ ಬರೆದಿತ್ತು. ಇಸ್ರಯೇಲರ ಅರಸನು ಈ ಪತ್ರವನ್ನು ಓದಿದ ಕೂಡಲೆ, ಸಿಟ್ಟಿನಿಂದ ಬಟ್ಟೆಗಳನ್ನು ಹರಿದುಕೊಡು, ತನ್ನ ಪರಿವಾರದವರಿಗೆ, “ತಾನು ಕಳುಹಿಸಿದ ವ್ಯಕ್ತಿಯನ್ನು ಚರ್ಮರೋಗದಿಂದ ನಾನು ವಾಸಿಮಾಡಬೇಕಂತೆ! ಇದು ಎಂಥ ಅಪ್ಪಣೆ; ನಾನೇನು ದೇವರೋ? ಜೀವದಾನ ಮಾಡುವುದಕ್ಕಾಗಲಿ ಜೀವಹರಣ ಮಾಡುವುದಕ್ಕಾಗಲಿ ನನಗೆ ಸಾಮಥ್ರ್ಯವುಂಟೇ? ಇವನು ನನ್ನೊಡನೆ ಯುದ್ಧಮಾಡುವುದಕ್ಕೆ ನೆಪ ಹುಡುಕುತ್ತಾನಲ್ಲದೆ ಮತ್ತೇನು? ನೀವೇ ಆಲೋಚಿಸಿ ನೋಡಿ,” ಎಂದು ಹೇಳಿದನು. ಇಸ್ರಯೇಲರ ಅರಸನು ಸಿಟ್ಟಿನಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡನೆಂಬುದನ್ನು ದೈವ ಪುರುಷ ಎಲೀಷನು ಕೇಳಿದನು. ದೂತರ ಮುಖಾಂತರ ಅವನಿಗೆ, “ನೀವು ನಿಮ್ಮ ಬಟ್ಟೆಗಳನ್ನು ಹರಿದುಕೊಂಡದ್ದೇಕೆ? ಅವನನ್ನು ನನ್ನ ಬಳಿಗೆ ಕಳುಹಿಸಿ; ಇಸ್ರಯೇಲರಲ್ಲಿ ಒಬ್ಬ ಪ್ರವಾದಿ ಇದ್ದಾನೆಂಬುದು ಅವನಿಗೆ ಗೊತ್ತಾಗಲಿ,” ಎಂದು ಹೇಳಿ ಕಳುಹಿಸಿದನು. ನಾಮಾನನು ರಥರಥಾಶ್ವಗಳೊಡನೆ ಎಲೀಷನ ಮನೆಗೆ ಹೋಗಿ ಬಾಗಿಲಿನ ಮುಂದೆ ನಿಂತನು. ಎಲೀಷನು ಅವನಿಗೆ, “ಹೋಗಿ ಜೋರ್ಡನ್ ನದಿಯಲ್ಲಿ ಏಳು ಸಾರಿ ಸ್ನಾನ ಮಾಡು; ಆಗ ನಿನ್ನ ದೇಹ ಮೊದಲಿದ್ದಂತಾಗುವುದು; ನೀನು ಶುದ್ಧನಾಗುವೆ,” ಎಂದು ಹೇಳಿಕಳುಹಿಸಿದನು. ನಾಮಾನನು ಇದನ್ನು ಕೇಳಿ ಕೋಪಗೊಂಡನು. “ಇದೇನು! ಇವನು ಖಂಡಿತವಾಗಿ ಹೊರಗೆಬಂದು ನಿಂತು, ತನ್ನ ದೇವರಾದ ಸರ್ವೇಶ್ವರನ ಹೆಸರು ಹೇಳಿ, ನನ್ನ ಚರ್ಮದ ಮೇಲೆ ಕೈಯಾಡಿಸಿ, ರೋಗ ವಾಸಿಮಾಡುವನೆಂದು ನೆನಸಿದೆ. ದಮಸ್ಕದ ಅಬಾನಾ ಹಾಗು ಪರ್ಪರ್ ಎಂಬ ನದಿಗಳು ಇಸ್ರಯೇಲರ ಎಲ್ಲಾ ನದಿ ಹೊಳೆಗಳಿಗಿಂತ ಉತ್ತಮವಾಗಿವೆಯಲ್ಲವೇ? ಸ್ನಾನದಿಂದ ವಾಸಿಯಾಗುವ ಹಾಗಿದ್ದರೆ ನಾನು ಅವುಗಳಲ್ಲಿಯೇ ಸ್ನಾನಮಾಡಬಹುದಿತ್ತಲ್ಲವೇ? ಎಂದು ಹೇಳಿ, ಬಹಳ ಸಿಟ್ಟಿನಿಂದ ಹೊರಟುಹೋದನು. ಆಗ ಅವನ ಸೇವಕರು ಹತ್ತಿರ ಬಂದು, “ಯಜಮಾನರೇ, ಪ್ರವಾದಿ ಒಂದು ಕಠಿಣವಾದ ಕೆಲಸವನ್ನು ಹೇಳಿದ್ದರೆ ಅದನ್ನು ಮಾಡುತ್ತಿದ್ದಿರಲ್ಲವೆ? ಹಾಗಾದರೆ ‘ಸ್ನಾನಮಾಡಿ, ಶುದ್ಧರಾಗುವಿರಿ’ ಎಂದು ಹೇಳಿದರೆ ಏಕೆ ಅ
ದರಂತೆ ಮಾಡಬಾರದು?” ಎಂದರು. ಅವನು ಅಂತೆಯೇ ಜೋರ್ಡನಿಗೆ ಹೋಗಿ, ಏಳು ಸಾರಿ ಅದರಲ್ಲಿ ಮುಳುಗಿ ಎದ್ದನು. ಕೂಡಲೆ ದೈವಪುರುಷನ ಮಾತಿಗನುಸಾರ ಅವನ ದೇಹ ಒಂದು ಮಗುವಿನ ದೇಹದಂತೆ ಶುದ್ಧವಾಯಿತು. ಅನಂತರ ನಾಮಾನನು ತನ್ನ ಪರಿವಾರದವರೊಡನೆ ಹಿಂದಿರುಗಿ ದೈವಪುರುಷನ ಬಳಿಗೆ ಹೋಗಿ ಅವನ ಮುಂದೆ ನಿಂತನು. “ಇಸ್ರಯೇಲ್ ನಾಡಿನಲ್ಲಿರುವ ದೇವರ ಹೊರತು, ಲೋಕದಲ್ಲಿ ಬೇರೆ ದೇವರು ಇಲ್ಲವೇ ಇಲ್ಲವೆಂಬುದು ಈಗ ನನಗೆ ಗೊತ್ತಾಯಿತು." ಎಂದು ಹೇಳಿದನು.

ಕೀರ್ತನೆ: 42:2, 3; 43:3, 4

ಶ್ಲೋಕ: ಜೀವಂತ ದೇವನಿಗಾಗಿ ದಾಹದಿಂದೆ ಎನ್ನ ಮನ,
              ನಾ ತೆರಳಿ ಪಡೆವುದೆಂತು ಆ ದೇವನ ಮುಖದರ್ಶನ

ಶುಭಸಂದೇಶ: ಲೂಕ 4:24-30

ಯೇಸುಸ್ವಾಮಿ ತಾವು ಬೆಳೆದ ಊರಾದ ನಜರೇತಿಗೆ ಬಂದರು. ಅಲ್ಲಿನ ಪ್ರಾರ್ಥನಾಮಂದಿರದಲ್ಲಿ ಬೋಧಿಸುತ್ತಾ ಹೀಗೆಂದರು: "ಯಾವ ಪ್ರವಾದಿಯೂ ಸ್ವಗ್ರಾಮದಲ್ಲಿ ಸನ್ಮಾನಿತನಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಹಿಂದೆ ನಡೆದ ಒಂದು ಸಂಗತಿಯನ್ನು ಕೇಳಿ: ಎಲೀಯನ ಕಾಲದಲ್ಲಿ ಮೂರು ವರ್ಷ ಆರು ತಿಂಗಳು ಮಳೆ ಬಾರದೆ ದೇಶದಲ್ಲೆಲ್ಲಾ ದೊಡ್ಡ ಕ್ಷಾಮ ಬಂದೊದಗಿತ್ತು. ಆಗ ಇಸ್ರಯೇಲ್ ನಾಡಿನಲ್ಲಿ ಎಷ್ಟೋ ಮಂದಿ ವಿಧವೆಯರಿದ್ದರು. ಅವರಾರ ಬಳಿಗೂ ದೇವರು ಎಲೀಯನನ್ನು ಕಳಿಸಲಿಲ್ಲ. ಸಿದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳಿಸಿದರು. ಅಂತೆಯೇ, ಎಲೀಷನೆಂಬ ಪ್ರವಾದಿಯ ಕಾಲದಲ್ಲಿ ಇಸ್ರಯೇಲ್ ನಾಡಿನಲ್ಲಿ ಅನೇಕ ಕುಷ್ಠರೋಗಿಗಳು ಇದ್ದರು. ಅವರಲ್ಲಿ ಸಿರಿಯ ದೇಶದ ನಾಮನನನ್ನು ಬಿಟ್ಟು ಮಿಕ್ಕ ಯಾರೂ ಗುಣಮುಖರಾಗಲಿಲ್ಲ,” ಎಂದು ಹೇಳಿದರು. ಇದನ್ನು ಕೇಳಿ, ಪ್ರಾರ್ಥನಾಮಂದಿರದಲ್ಲಿ ಇದ್ದ ಎಲ್ಲರೂ ಕಡುಗೋಪಗೊಂಡರು. ಯೇಸುವನ್ನು ಆ ಊರ ಹೊರಕ್ಕೆ ಎಳೆದುಕೊಂಡು, ತಮ್ಮ ಊರಿದ್ದ ಗುಡ್ಡದ ತುದಿಗೆ ಕೊಂಡೊಯ್ದು, ಅಲ್ಲಿಂದ ಅವರನ್ನು ಕೆಳಕ್ಕೆ ದಬ್ಬಬೇಕೆಂದಿದ್ದರು. ಯೇಸುವಾದರೋ, ಅವರ ನಡುವೆಯೇ ನಡೆದು, ತಮ್ಮ ದಾರಿ ಹಿಡಿದು ಹೋದರು.

ಮನಸ್ಸಿಗೊಂದಿಷ್ಟು : 'ಸ್ವಂತ ಊರಿನಲ್ಲಿ ಸನ್ಮಾನಿತನಲ್ಲ'  ಎಂಬ ಯೇಸುವಿನ ಮಾತನ್ನು ನಮ್ಮಲೇ ಅನೇಕರು ತಮ್ಮಗಾಗಿ ಬಳಸಿಕೊಳ್ಳುವುದನ್ನು ಕಾಣುತ್ತೇವೆ. ತಮಗೆ  ಸಿಗಬೇಕಾದ ಗೌರವ ತಮ್ಮ ಜನರಿಂದ ಸಿಗುತ್ತಿಲ್ಲ ಎಂಬ ದುಃಖ ಅವರದು.  ಆದರೆ ಪ್ರವಾದಿಗಳು ಹಾಗು ತಾವು ತಂದ  ದೇವರ ವಾಕ್ಯಗಳನ್ನು, ಕೃಪೆಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ , ಪುರಸ್ಕರಿಸುತ್ತಿಲ್ಲ ಎಂಬ ನೋವು ಕ್ರಿಸ್ತನದು. ಕ್ರಿಸ್ತನ  ಸ್ವಂತ ಜನರಾದ ನಾವು ಅವರನ್ನು ತಿರಸ್ಕರಿಸದಿರೋಣ. 

ಪ್ರಶ್ನೆ : ನಾವು ಕ್ರಿಸ್ತನ ಹತ್ತಿರದವರೇ? ಸ್ವಂತ ಜನರಂತೆ ಬಾಳುತ್ತಿದ್ದೇವೆಯೇ?

ಪ್ರಭುವೇ,
ನಿಮ್ಮ ಆಶಯಗಳ 
ನಯವಾಗಿ ತಿರಸ್ಕರಿಸಿ
ನಿಮ್ಮ ನುಡಿಯಂತೆ 
ನಡೆಯದೆ ಅದನ್ನು 
ದಬ್ಬಿ ಬಾಳುತ್ತಿರುವ 
ನಮ್ಮ ಬಾಳ ನಡುವೆ 
ನಡೆದು ಹೋಗದಿರಿ 
ನಮ್ಮಲ್ಲೇ ತಂಗಿ 
ನೆಲಸಿರಿ  

15.03.2020 - "ಲೋಕೋದ್ಧಾರಕ ಇವರೇ ಎಂದು ನಮಗೀಗ ತಿಳಿಯಿತು,”

ಮೊದಲನೇ ವಾಚನ: ವಿಮೋಚನಕಾಂಡ 17:3-7

ಜನರು ನೀರಿಲ್ಲದೆ ಬಾಯಾರಿಕೆಯ ಬೇಸರದಿಂದ, ಮೋಶೆಯ ವಿರುದ್ಧ ಗೊಣಗುಟ್ಟಿದರು. “ನೀನು ನಮ್ಮನ್ನು, ನಮ್ಮ ಮಕ್ಕಳನ್ನು ಹಾಗು ದನಕರುಗಳನ್ನು ಈಜಿಪ್ಟಿನಿಂದ ಕರೆದು ತಂದದ್ದು ಏಕೆ? ನೀರಿಲ್ಲದೆ ಸಾಯಿಸುವುದಕ್ಕೋ?” ಎಂದು ದೂರಿದರು. ಆಗ ಮೋಶೆ ಸರ್ವೇಶ್ವರನಿಗೆ ಮೊರೆ ಇಟ್ಟನು. “ಈ ಜನರಿಗಾಗಿ ನಾನೇನು ಮಾಡಲಿ? ಅವರು ನನ್ನನ್ನು ಕಲ್ಲೆಸೆದು ಕೊಲ್ಲುವಂತಿದ್ದಾರೆ” ಎಂದು ಪ್ರಾರ್ಥಿಸಿದನು. ಅದಕ್ಕೆ ಸರ್ವೇಶ್ವರ, “ನೀನು ನೈಲ್ ನದಿಯನ್ನು ಹೊಡೆದ ಕೋಲನ್ನು ಕೈಯಲ್ಲಿ ಹಿಡಿದುಕೊಂಡು, ಇಸ್ರಯೇಲರ ಹಿರಿಯರಲ್ಲಿ ಕೆಲವರನ್ನು ಕರೆದುಕೊಂಡು, ನಾನು ತೋರಿಸುವ ಸ್ಥಳಕ್ಕೆ ಜನರ ಮುಂದೆ ಹೋಗು. ಅಲ್ಲೇ ಹೋರೇಬಿನಲ್ಲಿರುವ ಬಂಡೆಯೊಂದರ ಮೇಲೆ ನಾನೇ ನಿನ್ನ ಮುಂದೆ ನಿಲ್ಲುವೆನು. ಆ ಬಂಡೆಯನ್ನು ನೀನು ಹೊಡೆ. ಆಗ ಅದರಿಂದ ನೀರು ಹೊರಡುವುದು; ಜನರು ಕುಡಿಯಲಿ,” ಎಂದು ಅಪ್ಪಣೆಕೊಟ್ಟರು. ಹಾಗೆಯೇ ಮೋಶೆ ಇಸ್ರಯೇಲರ ಹಿರಿಯರ ಕಣ್ಣೆದುರಿನಲ್ಲೆ ಮಾಡಿದನು. ಸರ್ವೇಶ್ವರಸ್ವಾಮಿ ತಮ್ಮ ಮಧ್ಯೆ ಇದ್ದಾರೋ ಇಲ್ಲವೋ ಎಂದು ಇಸ್ರಯೇಲರು ಅಲ್ಲಿ ಪರೀಕ್ಷಿಸಿದ್ದರಿಂದ ಮೋಶೆ ಆ ಸ್ಥಳಕ್ಕೆ ‘ಮಸ್ಸಾ’ ಎಂತಲೂ ಜನರು ತನ್ನೊಡನೆ ವಾಗ್ವಾದ ಮಾಡಿದ್ದರಿಂದ ‘ಮೆರೀಬಾ’ ಎಂತಲೂ ಹೆಸರಿಟ್ಟನು.

ಕೀರ್ತನೆ: 95:1-2, 6-7, 8-9

ಶ್ಲೋಕ: ಪ್ರಭು ಸಹನಶೀಲನು, ಪ್ರೀತಿಮಯನು

ಎರಡನೇ ವಾಚನ: ರೋಮನರಿಗೆ 5:1-2,  5-8

ವಿಶ್ವಾಸದ ಮೂಲಕ ದೇವರೊಡನೆ ಸತ್ಸಂಬಂಧದಲ್ಲಿರುವ ನಾವು ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ದೇವರೊಡನೆ ಶಾಂತಿಸಮಾಧಾನದಿಂದಿರುತ್ತೇವೆ. ವಿಶ್ವಾಸದ ಮೂಲಕ ನಾವು ದೈವಾನುಗ್ರಹವನ್ನು ಸವಿಯುವಂತೆ ಯೇಸುಕ್ರಿಸ್ತರು ದಾರಿ ತೋರಿಸಿದರು. ನಾವೀಗ ನೆಲೆಗೊಂಡಿರುವುದು ಆ ಅನುಗ್ರಹದಲ್ಲಿಯೇ. ಆದ್ದರಿಂದಲೇ, ದೇವರ ಮಹಿಮೆಯಲ್ಲಿ ನಾವೂ ಪಾಳುಗೊಳ್ಳುತ್ತೇವೆಂಬ ಭರವಸೆಯಿಂದ ಹೆಮ್ಮೆಪಡುತ್ತೇವೆ. ಈ ನಂಬಿಕೆ ನಿರೀಕ್ಷೆಯು ನಮಗಿರುವುದರಿಂದ ನಮಗೆ ಆಶಾಭಂಗವಾಗುವುದಿಲ್ಲ. ಏಕೆಂದರೆ, ನಮಗೆ ದಾನವಾಗಿ ದಯಪಾಲಿಸಿರುವ ಪವಿತ್ರಾತ್ಮ ಅವರ ಮುಖಾಂತರ ದೇವರು ತಮ್ಮ ಪ್ರೀತಿಯನ್ನು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿಸಿದ್ದಾರೆ. ನಾವು ಪಾಪದಿಂದ ದುರ್ಬಲರಾಗಿದ್ದಾಗಲೇ ನಿಯಮಿತ ಕಾಲದಲ್ಲಿ ಕ್ರಿಸ್ತಯೇಸು ಪಾಪಿಗಳಿಗೋಸ್ಕರ ಪ್ರಾಣತ್ಯಾಗಮಾಡಿದರು. ನೀತಿವಂತನಿಗಾಗಿ ಒಬ್ಬನು ತನ್ನ ಪ್ರಾಣಕೊಡುವುದು ವಿರಳ. ಸತ್ಪುರುಷನಿಗಾಗಿ ಒಬ್ಬನು ತನ್ನ ಪ್ರಾಣವನ್ನು ಕೊಟ್ಟರೂ ಕೊಟ್ಟಾನು. ಆದರೆ ನಾವಿನ್ನೂ ಪಾಪಿಗಳಾಗಿರುವಾಗಲೇ ಕ್ರಿಸ್ತಯೇಸು ನಮಗೋಸ್ಕರ ಪ್ರಾಣತ್ಯಾಗ ಮಾಡಿದರು. ಇದರಿಂದ ನಮ್ಮ ಮೇಲೆ ದೇವರಿಗಿರುವ ಪ್ರೀತಿ ಎಷ್ಟೆಂದು ವ್ಯಕ್ತವಾಗುತ್ತದೆ.

ಶುಭಸಂದೇಶ: ಯೊವಾನ್ನ 4:5-42


ಯೇಸು ಸಮಾರಿಯದ ಸಿಖಾರೆಂಬ ಊರನ್ನು ತಲುಪಿದರು. ಈ ಊರಿನ ಪಕ್ಕದಲ್ಲೇ ಯಕೋಬನು ತನ್ನ ಮಗನಾದ ಜೋಸೆಫನಿಗೆ ಕೊಟ್ಟ ಭೂಮಿ ಇದೆ. ಅಲ್ಲೇ ಯಕೋಬನ ಬಾವಿಯೂ ಇದೆ. ಪಯಣದಿಂದ ಬಳಲಿದ್ದ ಯೇಸು ಬಾವಿಯ ಬಳಿ ಕುಳಿತುಕೊಂಡರು. ಆಗ ಸುಮಾರು ಮಧ್ಯಾಹ್ನದ ಹೊತ್ತು. ಒಬ್ಬ ಸಮಾರಿಯದ ಮಹಿಳೆ ನೀರು ಸೇದಲು ಅಲ್ಲಿಗೆ ಬಂದಳು. ಆಗ ಯೇಸು, “ಕುಡಿಯಲು ಕೊಂಚ ನೀರು ಕೊಡು,” ಎಂದು ಕೇಳಿದರು. ಶಿಷ್ಯರು ಊಟಕ್ಕೆ ಏನಾದರೂ ಕೊಂಡು ತರುವುದಕ್ಕೆ ಊರಿನೊಳಗೆ ಹೋಗಿದ್ದರು. ಅದಕ್ಕೆ ಆಕೆ, “ನೀವು ಯೆಹೂದ್ಯರು, ನಾನು ಸಮಾರಿಯದವಳು. ಹೀಗಿರುವಲ್ಲಿ ನೀವು ನನ್ನಿಂದ ನೀರು ಕೇಳಬಹುದೇ?” ಎಂದಳು. (ಯೆಹೂದ್ಯರಿಗೂ ಸಮಾರಿಯದವರಿಗೂ ಹೊಕ್ಕುಬಳಕೆ ಇರಲಿಲ್ಲ). ಆಗ ಯೇಸು, “ದೇವರು ಕೊಡುವ ವರದಾನವನ್ನು ಮತ್ತು ಕುಡಿಯಲು ನಿನ್ನಿಂದ ನೀರು ಕೇಳುತ್ತಿರುವ ವ್ಯಕ್ತಿಯನ್ನು ನೀನು ಅರಿತಿದ್ದರೆ ಆಗ ನೀನೇ ಆತನಲ್ಲಿ ಬೇಡುತ್ತಿದ್ದೆ. ಆತನು ನಿನಗೆ ಜೀವಜಲವನ್ನು ಕೊಡುತ್ತಿದ್ದನು,” ಎಂದು ಉತ್ತರಕೊಟ್ಟರು. ಅದಕ್ಕೆ ಆಕೆ, “ನೀರು ಸೇದುವುದಕ್ಕೆ ನಿಮ್ಮಲ್ಲಿ ಏನೂ ಇಲ್ಲ, ಬಾವಿಯೂ ಆಳವಾಗಿದೆ; ಹೀಗಿರುವಲ್ಲಿ ನಿಮಗೆ ಜೀವಜಲ ಎಲ್ಲಿಂದ ಬಂದೀತು? ನಮಗೆ ಈ ಬಾವಿಯನ್ನು ಕೊಟ್ಟವನು ನಮ್ಮ ಪಿತಾಮಹ ಯಕೋಬನು. ಆತನು, ಆತನ ಮಕ್ಕಳು ಮತ್ತು ದನಕರುಗಳು ಇದೇ ಬಾವಿಯ ನೀರನ್ನು ಕುಡಿದರು. ಅಂಥ ಪಿತಾಮಹನಿಗಿಂತ ತಾವು ದೊಡ್ಡವರೋ?” ಎಂದಳು. ಆಗ ಯೇಸು, “ಈ ನೀರನ್ನು ಕುಡಿಯುವ ಎಲ್ಲರಿಗೂ ಮತ್ತೆ ದಾಹವಾಗುತ್ತದೆ. ಆದರೆ ನಾನು ಕೊಡುವ ನೀರನ್ನು ಕುಡಿದವನಿಗೆ ಎಂದಿಗೂ ದಾಹವಾಗದು; ಆ ನೀರು ಅವನಲ್ಲಿ ಉಕ್ಕಿ ಹರಿಯುವ ಬುಗ್ಗೆಯಾಗಿ, ನಿತ್ಯಜೀವವನ್ನು ತರುತ್ತದೆ,” ಎಂದು ಉತ್ತರಕೊಟ್ಟರು. ಅದಕ್ಕೆ ಆಕೆ, “ಸ್ವಾವಿೂ, ಅಂಥ ನೀರನ್ನು ಕೊಡಿ; ಇನ್ನು ಮುಂದೆ ನನಗೆ ದಾಹವಾಗದಿರಲಿ. ನೀರು ಸೇದಲು ಇಷ್ಟು ದೂರ ಬರುವುದು ತಪ್ಪಲಿ,” ಎಂದಳು. ಅದಕ್ಕೆ ಯೇಸು, “ಹೋಗಿ ನಿನ್ನ ಗಂಡನನ್ನು ಕರೆದುಕೊಂಡು ಬಾ,” ಎಂದು ಹೇಳಿದರು. ಆಕೆ, “ನನಗೆ ಗಂಡನಿಲ್ಲ,” ಎಂದಳು. ಗಂಡನಿಲ್ಲವೆಂದು ಸರಿಯಾಗಿ ಹೇಳಿದೆ. ನಿನಗೆ ಐದು ಜನ ಗಂಡಂದಿರು ಇದ್ದರು. ಈಗ ನಿನ್ನೊಡನೆ ಇರುವವನು ನಿನ್ನ ಗಂಡನಲ್ಲ, ನೀನು ಹೇಳಿದ್ದು ಸರಿಯೇ,” ಎಂದರು ಯೇಸುಸ್ವಾಮಿ. ಅದಕ್ಕೆ ಆ ಮಹಿಳೆ, “ಸ್ವಾವಿೂ, ತಾವು ಪ್ರವಾದಿ ಎಂದು ನನಗೀಗ ತಿಳಿಯಿತು. ನಮ್ಮ ಪೂರ್ವಜರು ಈ ಬೆಟ್ಟದ ಮೇಲೆ ದೇವರನ್ನು ಆರಾಧಿಸುತ್ತಿದ್ದರು. ಆದರೆ ಆರಾಧಿಸತಕ್ಕ ಕ್ಷೇತ್ರ ಇರುವುದು ಜೆರುಸಲೇಮಿನಲ್ಲೇ ಎಂದು ಯೆಹೂದ್ಯರಾದ ನೀವು ಹೇಳುತ್ತೀರಲ್ಲ” ಎಂದಳು. ಆಗ ಯೇಸು, “ತಾಯಿ, ನಾನು ಹೇಳುವುದನ್ನು ಕೇಳು. ಪಿತನ ಆರಾಧನೆಗೆ ಈ ಬೆಟ್ಟಕ್ಕೂ ಬರಬೇಕಾಗಿಲ್ಲ; ಜೆರುಸಲೇಮಿಗೂ ಹೋಗಬೇಕಾಗಿಲ್ಲ. ಅಂಥ ಕಾಲವೂ ಬರುವುದು. ನೀವು ಆರಾಧಿಸುವುದು ಯಾರೆಂದು ನಿಮಗೇ ತಿಳಿಯದು. ನಾವು ಆರಾಧಿಸುವುದು ಯಾರೆಂದು ನಮಗೆ ತಿಳಿದಿದೆ. ಏಕೆಂದರೆ ಲೋಕೋದ್ಧಾರಕ ಬರುವುದು ಯೆಹೂದ್ಯರಿಂದಲೇ. ಕಾಲ ಬರುವುದು; ಅದು ಈಗಲೇ ಬಂದಿದೆ. ಇನ್ನು ಮೇಲೆ ನಿಜವಾದ ಆರಾಧಕರು ಪಿತನನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವರು. ಅಂಥವರೇ ತಮ್ಮನ್ನು ಆರಾಧಿಸಬೇಕೆಂದು ಪಿತ ಆಶಿಸುತ್ತಾರೆ. ದೇವರು ಆತ್ಮಸ್ವರೂಪಿ. ಅವರನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸತಕ್ಕದ್ದು,” ಎಂದು ಹೇಳಿದರು. ಆಕೆ “ಅಭಿಷಿಕ್ತನಾದ ಲೋಕೋದ್ಧಾರಕ ಬರುವನೆಂದು ನಾನು ಬಲ್ಲೆ. ಆತನು ಬಂದಾಗ ಎಲ್ಲವನ್ನೂ ತಿಳಿಸುವನು,” ಎಂದು ಹೇಳಿದಳು. ಆಗ ಯೇಸು, “ನಿನ್ನೊಡನೆ ಮಾತನಾಡುತ್ತಿರುವ ನಾನೇ ಆತನು,” ಎಂದು ನುಡಿದರು. ಅಷ್ಟರಲ್ಲಿ ಹಿಂದಿರುಗಿ ಬಂದ ಶಿಷ್ಯರು ಯೇಸು ಆ ಮಹಿಳೆಯೊಡನೆ ಮಾತನಾಡುತ್ತಿರುವುದನ್ನು ಕಂಡು ಆಶ್ಚರ್ಯಪಟ್ಟರು. ಆದರೆ, “ಏನು ಬೇಕು?” ಎಂದು ಆಕೆಯನ್ನಾಗಲಿ, “ಆಕೆಯೊಡನೆ ಏಕೆ ಮಾತನಾಡುತ್ತಿದ್ದೀರಿ?” ಎಂದು ಯೇಸುವನ್ನಾಗಲಿ ಅವರು ಕೇಳಲಿಲ್ಲ. ಆ ಮಹಿಳೆ ತನ್ನ ಕೊಡವನ್ನು ಅಲ್ಲಿಯೇ ಬಿಟ್ಟು ಊರಿಗೆ ನಡೆದಳು. “ನಾನು ಮಾಡಿದ್ದ ಕೃತ್ಯಗಳನ್ನೆಲ್ಲಾ ಕಂಡಂತೆ ತಿಳಿಸಿದ ಒಬ್ಬ ವ್ಯಕ್ತಿ ಅಲ್ಲಿ ಇದ್ದಾರೆ. ಬಂದು ನೋಡಿ. ಅವರೇ ಅಭಿಷಿಕ್ತನಾದ ಲೋಕೋದ್ಧಾರಕ ಏಕಾಗಿರಬಾರದು?” ಎಂದು ಊರಿನ ಜನರನ್ನು ಕರೆದಳು. ಅವರು ಯೇಸುವಿನ ಬಳಿಗೆ ಬಂದರು. ಈ ಮಧ್ಯೆ ಶಿಷ್ಯರು, “ಗುರುದೇವಾ, ಊಟಮಾಡಿ,” ಎಂದು ಯೇಸುವನ್ನು ಒತ್ತಾಯ ಮಾಡಿದರು. ಆಗ ಯೇಸು, “ನಿಮಗೆ ತಿಳಿಯದಂಥ ಆಹಾರ ನನ್ನಲ್ಲಿದೆ,” ಎಂದರು. ಶಿಷ್ಯರು, “ಯಾರಾದರೂ ಅವರಿಗೆ ತಿನ್ನಲು ತಂದು ಕೊಟ್ಟಿರಬಹುದೇ?” ಎಂದು ಮಾತನಾಡಿಕೊಂಡರು. ಯೇಸು ಅವರಿಗೆ, “ನನ್ನನ್ನು ಕಳುಹಿಸಿದಾತನ ಚಿತ್ತವನ್ನು ನೆರವೇರಿಸುವುದೇ ನನಗೆ ಆಹಾರ. ಆತನು ಕೊಟ್ಟ ಕಾರ್ಯಗಳನ್ನು ಪೂರೈಸುವುದೇ ನನಗೆ ತಿಂಡಿತೀರ್ಥ. ಇನ್ನು ನಾಲ್ಕು ತಿಂಗಳು ಆದ ಮೇಲೆ ಸುಗ್ಗಿ ಬರುತ್ತದೆ ಎಂದು ನೀವು ಹೇಳುವುದಿಲ್ಲವೆ? ಇಗೋ, ಕಣ್ಣುಹಾಯಿಸಿ ನೋಡಿ; ಬಲಿತು ಕೊಯ್ಲಿಗೆ ಬಂದಿರುವ ಹೊಲಗಳನ್ನು ನೋಡಿ. ಕೊಯ್ದವನು ಈಗಾಗಲೇ ಕೂಲಿಯನ್ನು ಪಡೆಯುತ್ತಾನೆ. ಅವನು ನಿತ್ಯಜೀವಕ್ಕೆ ಫಲವನ್ನು ಕೂಡಿಸಿಡುತ್ತಾನೆ. ಹೀಗೆ ಬಿತ್ತುವವನೂ ಕೊಯ್ಯುವವನೂ ಒಟ್ಟಿಗೆ ಸಂತೋಷಪಡುತ್ತಾರೆ. ‘ಬಿತ್ತುವವನೊಬ್ಬ, ಕೊಯ್ಯುವವನಿನ್ನೊಬ್ಬ,’ ಎಂಬ ನಾಣ್ನುಡಿ ನಿಜವಾದುದು. ನೀವು ದುಡಿಯದ ಎಡೆಯಲ್ಲಿ ಕೊಯ್ಲು ಮಾಡಲು ನಾನು ನಿಮ್ಮನ್ನು ಕಳುಹಿಸಿದ್ದೇನೆ. ದುಡಿದವರು ಬೇರೆ. ಅವರ ದುಡಿಮೆಯ ಫಲ ಬರುವುದು ನಿಮ್ಮ ಪಾಲಿಗೆ,” ಎಂದು ಹೇಳಿದರು. ‘ನಾನು ಮಾಡಿದ ಕೃತ್ಯಗಳನ್ನೆಲ್ಲಾ ಕಂಡಂತೆ ಹೇಳಿದ ವ್ಯಕ್ತಿ’ ಎಂದು ಸಾರಿದ ಮಹಿಳೆಯ ಮಾತಿನಿಂದ ಸಮಾರಿಯ ಊರಿನ ಹಲವು ಮಂದಿಗೆ ಯೇಸುವಿನಲ್ಲಿ ನಂಬಿಕೆ ಹುಟ್ಟಿತು. ಎಂದೇ ಆ ಊರಿನ ಜನರು ಯೇಸುವಿನ ಬಳಿಗೆ ಬಂದು ತಮ್ಮಲ್ಲಿಯೇ ತಂಗಬೇಕೆಂದು ಬೇಡಿಕೊಂಡರು. ಅಂತೆಯೇ ಯೇಸು, ಅಲ್ಲಿ ಎರಡು ದಿನ ಉಳಿದರು. ಇನ್ನೂ ಅನೇಕರಿಗೆ ಯೇಸುವಿನ ಬೋಧನೆಯನ್ನು ಅವರ ಬಾಯಿಂದಲೇ ಕೇಳಿ ಅವರಲ್ಲಿ ನಂಬಿಕೆ ಮೂಡಿತು. ಆಗ ಅವರು, ಆ ಮಹಿಳೆಗೆ, “ನೀನು ಹೇಳಿದುದರಿಂದ ಮಾತ್ರವೇ ಈಗ ನಾವು ನಂಬುತ್ತಿಲ್ಲ, ನಾವೇ ಕಿವಿಯಾರೆ ಕೇಳಿ ನಂಬಿದ್ದೇವೆ; ಲೋಕೋದ್ಧಾರಕ ಇವರೇ ಎಂದು ನಮಗೀಗ ತಿಳಿಯಿತು,” ಎಂದರು. 

ಮನಸ್ಸಿಗೊಂದಿಷ್ಟು: ಆಕಸ್ಮಿಕವಾಗಿ ಯೇಸುವನ್ನು ಕಂಡು, ಸಂಭಾಷಣೆಗಿಳಿಯುತ್ತಾಳೆ ಸಮಾರಿಯಾದ ಹೆಂಗಸು. ಕೆಲವೇ ನಿಮಿಷಗಳ ಈ ಭೇಟಿಯ ಕೊನೆಗೆ 'ಯೇಸುವೇ ಲೋಕೊದ್ಧಾರಕ'  ಎಂದು ತಾನು ನಂಬುವುದು ಮಾತ್ರವಲ್ಲದೆ ಇಡೀ ಹಳ್ಳಿಗೆ ಹೋಗಿ ಹೇಳುತ್ತಾಳೆ. ಹೀಗೆ ತಾನೇ ಶುಭಸಂದೇಶದ ಮೊದಲ ಪ್ರಚಾರಕಿ ಆಗುತ್ತಾಳೆ.  ಹುಟ್ಟಿನಿಂದಲೇ  ಯೇಸುವಿನ ಅನುಯಾಯಿಗಳಾದ ನಮಗೆ ಯೇಸುವಿನ ಬಗ್ಗೆ ಆ ಅಭಿಮಾನ, ವಿಶ್ವಾಸ ಹಾಗೂ ಶುಭ ಸಂದೇಶ ಸಾರುವ ಕಾತುರ ಇದೆಯೇ? 

ಪ್ರಶ್ನೆ: ಇದುವರೆಗಿನ ನಮ್ಮ ಜೀವನದಲ್ಲಿ ಶುಭಸಂದೇಶದ ಪ್ರಚಾರದಲ್ಲಿ ನಾವು ತೊಡಗಿಕೊಂಡದೆಷ್ಟು?

ಪ್ರಭುವೇ,
ಜಾರಿಯಲ್ಲಿರಲಿ  
ಸದಾ  ನನ್ನ ನಿಮ್ಮ 
ನಡುವೆ ಸಂಭಾಷಣೆ    
ಅದರೊಂದಿಗೆ 
ನಾನ್ಯಾರೆಂಬ 
ಅನ್ವೇಷಣೆ 
ನನ್ನಲಿರಿಸಿ 
ಜೀವಜಲಕ್ಕಂಬಲಿಸುವ   
ಕಾತುರ 
ಲೋಕೋದ್ಧಾರಕ ನೀವೇ 
ಎಂದು ಜಗಕ್ಕೆ 
ಸಾರುವ ಆತುರ 
-ಚಿತ್ತ 

14.03.2020 - "ತಪ್ಪಿ ಹೋಗಿದ್ದ, ಈಗ ಸಿಕ್ಕಿದ್ದಾನೆ. ಆದುದರಿಂದ ನಾವು ಹಬ್ಬಮಾಡಿ ಆನಂದಿಸುವುದು ಸಹಜವಲ್ಲವೇ?"

ಮೊದಲನೇ ವಾಚನ: ಮೀಕ 7:14-15, 18-20

ಸರ್ವೇಶ್ವರಾ, ನಿಮ್ಮ ಮಂದೆಗೆ ಸೇರಿದ ಜನರನ್ನು ಕುರಿಗಾಹಿಯಂತೆ ಪರಿಪಾಲಿಸಿರಿ. ನಿಮ್ಮ ಸ್ವಾಸ್ತ್ಯವಾಗಿ, ಮಂದೆಯಾಗಿ ಇರುವಂಥ ಜನರು, ಸುತ್ತಮುತ್ತಲು ಫಲವತ್ತಾದ ಹಸಿರು ಭೂಮಿಯಿದ್ದರೂ ಮರಳುಗಾಡಿನಲ್ಲಿ ಪ್ರತ್ಯೇಕವಾಗಿ ಜೀವಿಸುತ್ತಿರುವರು. ಪೂರ್ವಕಾಲದಲ್ಲಿದ್ದಂತೆ, ಈಗ ಅವರು ಬಾಷಾನ್ ಮತ್ತು ಗಿಲ್ಯಾದ್ ನಾಡುಗಳಿಗೆ ತೆರಳಿ ಪೋಷಣೆ ಪಡೆಯಲಿ. ಈಜಿಪ್ಟ್ ದೇಶದಿಂದ ನಮ್ಮನ್ನು ಹೊರತಂದ ದಿನಗಳಲ್ಲಿ ನೀವು ಮಾಡಿದ ಮಹತ್ಕಾರ್ಯಗಳನ್ನು ಮರಳಿ ಮಾಡಿತೋರಿಸಿರಿ. ನಿಮ್ಮಂಥ ದೇವರು ಯಾರಿದ್ದಾರೆ? ತಮ್ಮ ಸ್ವಂತ ಜನರಲ್ಲಿ ಅಳಿದುಳಿದವರ ಅಪರಾಧಗಳನ್ನು ಲೆಕ್ಕಿಸದೆ, ಅವರ ದ್ರೋಹಗಳನ್ನು ಕ್ಷಮಿಸುವಂಥ ದೇವರು ಯಾರಿದ್ದಾರೆ? ನೀವು ನಿತ್ಯಕ್ಕೂ ಕೋಪಿಷ್ಠರಾಗಿರದೆ ಕರುಣೆ ತೋರಿಸುವುದರಲ್ಲೇ ಸಂತುಷ್ಟರಾಗುವಿರಿ. ಮತ್ತೊಮ್ಮೆ ನಮಗೆ ದಯೆತೋರಿ. ನಮ್ಮ ಅಪರಾಧಗಳನ್ನು ಅಳಿಸಿಬಿಡಿ; ಅವನ್ನು ತುಳಿದು ಸಮುದ್ರದ ತಳಕ್ಕೆ ತಳ್ಳಿಬಿಡಿ. ಪುರಾತನ ಕಾಲದಲ್ಲಿ ನಮ್ಮ ಪಿತೃಗಳಿಗೆ ಪ್ರಮಾಣಮಾಡಿದಂತೆ ಯಕೋಬ ವಂಶದವರಿಗೆ ನಂಬಿಕಸ್ಥರಾಗಿರಿ. ಅಬ್ರಹಾಮನ ವಂಶದವರಿಗೆ ಪ್ರೀತಿಪರರಾಗಿರಿ.

ಕೀರ್ತನೆ: 103:1-2, 3-4, 9-10, 11-12

ಶ್ಲೋಕ: ಪ್ರಭು ದಯಾಳು, ಕೃಪಾಪೂರ್ಣನು ಸಹನಶೀಲನು, ಪ್ರೀತಿಮಯನು

ಶುಭಸಂದೇಶ: ಲೂಕ 15:1-3, 11-32

ಯೇಸುಸ್ವಾಮಿಯ ಉಪದೇಶವನ್ನು ಕೇಳಲು ಎಲ್ಲಾ ಸುಂಕದವರೂ ಪಾಪಿಗಳೂ ಬರುತ್ತಿದ್ದರು. ಇದನ್ನು ಕಂಡ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು, “ಈ ಮನುಷ್ಯ ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರೊಡನೆ ಊಟಮಾಡುತ್ತಾನೆ,” ಎಂದು ಗೊಣಗಿದರು. ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು: “ಒಬ್ಬಾತನಿಗೆ ಇಬ್ಬರು ಮಕ್ಕಳಿದ್ದರು. ಅವರಲ್ಲಿ ಕಿರಿಯವನು ‘ಅಪ್ಪಾ, ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಕೊಟ್ಟುಬಿಡು,’ ಎಂದು ಕೇಳಿದ. ತಂದೆ ಅವರಿಬ್ಬರಿಗೂ ಆಸ್ತಿಯನ್ನು ಹಂಚಿಕೊಟ್ಟ. ಕೆಲವು ದಿವಸಗಳಾದ ಮೇಲೆ ಕಿರಿಯ ಮಗ ತನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ತೆಗೆದುಕೊಂಡು ಮನೆಬಿಟ್ಟು ಹೋದ. ದೂರದೇಶಕ್ಕೆ ಹೋಗಿ, ದುಂದು ಜೀವನ ನಡೆಸಿ ಹಣವನ್ನೆಲ್ಲಾ ಪೋಲು ಮಾಡಿಬಿಟ್ಟ. ಹೀಗೆ ಅವನು ಎಲ್ಲವನ್ನು ಹಾಳುಮಾಡಿಕೊಂಡಮೇಲೆ ಆ ದೇಶದಾದ್ಯಂತ ಘೋರವಾದ ಕ್ಷಾಮ ತಲೆದೋರಿತು. ನಿರ್ಗತಿಕನಾದ ಅವನು ಹೋಗಿ, ಆ ದೇಶದ ನಿವಾಸಿಯೊಬ್ಬನನ್ನು ಆಶ್ರಯಿಸಿದ. ಆತ ಇವನನ್ನು ಹಂದಿ ಮೇಯಿಸಲು ತನ್ನ ರೊಪ್ಪಗಳಿಗೆ ಕಳುಹಿಸಿದ. ಅಲ್ಲಿ ಹಂದಿ ತಿನ್ನುತ್ತಿದ್ದ ಕಾಳುಗಳನ್ನಾದರೂ ತಿಂದು ಹಸಿವನ್ನು ನೀಗಿಸಿಕೊಳ್ಳಲು ಹಂಬಲಿಸಿದ. ಆದರೆ ಅದನ್ನೂ ಅವನಿಗೆ ಯಾರೂ ಕೊಡಲಿಲ್ಲ. ಆಗ ಅವನಿಗೆ ಬುದ್ಧಿ ಬಂದಿತು. ‘ನನ್ನ ತಂದೆಯ ಮನೆಯಲ್ಲಿ ಎಷ್ಟೋ ಮಂದಿ ಕೂಲಿಯಾಳುಗಳಿಗೆ ತಿಂದು ತೇಗುವಷ್ಟು ಆಹಾರವಿದೆ. ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತಾ ಇದ್ದೇನೆ. ನಾನು ಇದೀಗಲೇ ಹೊರಟು, ತಂದೆಯ ಬಳಿಗೆ ಹೋಗಿ, ‘ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನು ಎನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ; ನನ್ನನ್ನು ನಿಮ್ಮ ಮನೆಯ ಕೂಲಿಯಾಳುಗಳಲ್ಲಿ ಒಬ್ಬನನ್ನಾಗಿ ಇಟ್ಟುಕೊಳ್ಳಿ ಎಂದು ಬೇಡಿಕೊಳ್ಳುತ್ತೇನೆ,’ ಎಂದುಕೊಂಡ. ಅಂತೆಯೇ ಎದ್ದು ತಂದೆಯ ಬಳಿಗೆ ಹೊರಟ. “ಮಗನು ಇನ್ನೂ ಅಷ್ಟುದೂರದಲ್ಲಿ ಇರುವಾಗಲೇ ತಂದೆ ನೋಡಿದ. ಆತನ ಹೃದಯ ಕನಿಕರದಿಂದ ಕರಗಿಹೋಯಿತು. ಓಡಿಹೋಗಿ, ಮಗನನ್ನು ಬಿಗಿಯಾಗಿ ತಬ್ಬಿಕೊಂಡು ಮುತ್ತಿಟ್ಟ. ಆದರೂ ಮಗನು, ‘ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನೆನಿನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ’ ಎಂದ. ತಂದೆಯಾದರೋ ಆಳುಗಳನ್ನು ಕರೆದು, ‘ಅತ್ಯುತ್ತಮವಾದ ಅಂಗಿಯನ್ನು ತಕ್ಷಣವೇ ತಂದು ಇವನಿಗೆ ಉಡಿಸಿರಿ. ಬೆರಳಿಗೆ ಉಂಗುರವನ್ನು ತೊಡಿಸಿರಿ, ಕಾಲಿಗೆ ಪಾದರಕ್ಷೆಯನ್ನು ಮೆಟ್ಟಿಸಿರಿ; ಕೊಬ್ಬಿಸಿದ ಪ್ರಾಣಿಯನ್ನು ತಂದು ಕೊಯ್ಯಿರಿ; ಹಬ್ಬ ಮಾಡೋಣ, ಆನಂದಿಸೋಣ. ಏಕೆಂದರೆ, ಈ ನನ್ನ ಮಗ ಸತ್ತುಹೋಗಿದ್ದ, ಈಗ ಬದುಕಿ ಬಂದಿದ್ದಾನೆ. ತಪ್ಪಿ ಹೋಗಿದ್ದ, ಈಗ ಸಿಕ್ಕಿದ್ದಾನೆ,’ ಎಂದು ಹೇಳಿದ. ಒಡನೆಯೇ ಹಬ್ಬದ ಸಡಗರ ತೊಡಗಿತು. “ಇತ್ತ ಹೊಲಕ್ಕೆ ಹೋಗಿದ್ದ ಹಿರಿಯ ಮಗ ಹಿಂದಿರುಗಿ ಮನೆಯನ್ನು ಸಮೀಪಿಸುವಾಗ ಗಾನ, ನರ್ತನಗಳ ಶಬ್ದವು ಅವನ ಕಿವಿಗೆ ಬಿತ್ತು. ಮನೆಯಲ್ಲೇನು ವಿಶೇಷ?’ ಎಂದು ಒಬ್ಬ ಆಳನ್ನು ಕರೆದು ವಿಚಾರಿಸಿದ. ‘ನಿಮ್ಮ ತಮ್ಮ ಬಂದಿದ್ದಾರೆ; ಅವರು ಮರಳಿ ಸುರಕ್ಷಿತವಾಗಿ ಬಂದುದಕ್ಕಾಗಿ ಕೊಬ್ಬಿಸಿದ ಪ್ರಾಣಿಯನ್ನು ನಿಮ್ಮ ತಂದೆ ಕೊಯ್ಯಿಸಿದ್ದಾರೆ,’ ಎಂದು ಆಳು ತಿಳಿಸಿದ. ಇದನ್ನು ಕೇಳಿದ ಹಿರಿಯ ಮಗನಿಗೆ ಸಿಟ್ಟು ಬಂದಿತು. ಮನೆಯೊಳಕ್ಕೆ ಕಾಲಿಡಲೂ ಒಪ್ಪಲಿಲ್ಲ. ತಂದೆಯೇ ಹೊರಗೆ ಬಂದು ಬೇಡಿಕೊಂಡಾಗ ಅವನು, ‘ನೋಡಿ, ನಾನು ಇಷ್ಟು ವರ್ಷಗಳಿಂದ ನಿಮಗೆ ಗುಲಾಮನಂತೆ ಸೇವೆ ಮಾಡುತ್ತಿದ್ದೇನೆ. ನಿಮ್ಮ ಮಾತನ್ನು ಎಂದೂ ಮೀರಿಲ್ಲ; ಆದರೂ ನಾನು ನನ್ನ ಸ್ನೇಹಿತರೊಡನೆ ಹಬ್ಬಮಾಡಲು ಒಂದು ಆಡುಮರಿಯನ್ನು ಕೂಡ ನೀವು ಕೊಟ್ಟಿಲ್ಲ. ಆದರೆ ನಿಮ್ಮ ಆಸ್ತಿಪಾಸ್ತಿಯನ್ನೆಲ್ಲಾ ವೇಶ್ಯೆಯರಿಗೆ ಸುರಿದ ಈ ನಿಮ್ಮ ಮಗ ಬಂದದ್ದೇ ಕೊಬ್ಬಿಸಿದ ಪ್ರಾಣಿಯನ್ನು ಕೊಯ್ಯಿಸಿದ್ದೀರಿ!’ ಎಂದು ವಾದಿಸಿದ. ಆಗ ತಂದೆ ಅವನಿಗೆ, ‘ಮಗನೇ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ; ನನ್ನ ಸರ್ವಸ್ವವೂ ನಿನ್ನದೇ ಆಗಿದೆ. ಈ ನಿನ್ನ ತಮ್ಮ ನಮ್ಮ ಪಾಲಿಗೆ ಸತ್ತುಹೋಗಿದ್ದ, ಈಗ ಬದುಕಿ ಬಂದಿದ್ದಾನೆ. ತಪ್ಪಿ ಹೋಗಿದ್ದ, ಈಗ ಸಿಕ್ಕಿದ್ದಾನೆ. ಆದುದರಿಂದ ನಾವು ಹಬ್ಬಮಾಡಿ ಆನಂದಿಸುವುದು ಸಹಜವಲ್ಲವೇ?’ ಎಂದನು.”

ಮನಸ್ಸಿಗೊಂದಿಷ್ಟು : ತನ್ನ ತಂದೆಯಿಂದ ದೂರ ಹೋಗಿದ್ದ ರಾಜನ ಮಗನೊಬ್ಬ ಮತ್ತೆ ತನ್ನ ತಂದೆಯ  ಬಳಿಗೆ ಬರಲು ಮನಸು ಮಾಡುತ್ತಾನೆ. ಆದರೆ ತಂದೆಯನ್ನು ಮತ್ತೆ ಎದುರಿಸುವ ಧೈರ್ಯ ಸಾಲದೆ  ಹಿಂಜರಿಯುತ್ತಾನೆ. ಇದನ್ನು ತಿಳಿದ ರಾಜ ಮಗನಿಗೆ ಹೇಳಿ ಕಳುಹಿಸುತ್ತಾನೆ, " ನಿನಗೆಷ್ಟು ಸಾಧ್ಯವೋ ಅಷ್ಟು ದೂರ ಮರಳಿ ಬಾ, ಮಿಕ್ಕ  ದಾರಿ ನಾನೇ ಬಂದು ಕರೆದುಕೊಂಡು ಬರುತ್ತೇನೆ. ಇದು ದೇವರ ಪ್ರೀತಿಯ ಅಗಾಧತೆಯ ಅನಂತತೆಯ ಉದಾಹರಣೆ.  ದೇವರಿಂದ ನಾವೆಷ್ಟೇ ದೂರ ಹೋದರೂ , ಅವರು ನಮ್ಮ ಮರಳುವಿಕೆಯ ಸಣ್ಣ ಹೆಜ್ಜೆಯನ್ನು ನಿರೀಕ್ಷಿಸುತ್ತಾರೆ, ಅವರೇ ಬಂದು ನಮ್ಮನ್ನು ತಬ್ಬಿ ಸ್ವಾಗತಿಸುತ್ತಾರೆ. ಮರಳುವ ಮನಸ್ಸು ನಮ್ಮದಾಗಬೇಕು    

ಪ್ರಶ್ನೆ : ದೇವರತ್ತ ಮತ್ತೆ ಮರಳಲು ನಮ್ಮ ಅಡೆ ತಡೆಗಳೇನು?

ಪ್ರಭುವೆ,
ನಿನ್ನತ್ತ ಮತ್ತೆ ಮರಳಿ 
ಬಾರಲಾಗದಷ್ಟು 
ದೂರಕ್ಕೆ ಈ ನನ್ನ 
ಮನಸ್ಸು ಸಾಗದಿರಲಿ  
ನಾನೆಷ್ಟೇ ದೂರ ಹೋದರೂ 
ಮರಳಿ ಬರುವ ದಾರಿ 
ಮರೆಯಾಗದಿರಲಿ 

13.03.2020 - ‘ದೇವರ ಸಾಮ್ರಾಜ್ಯವನ್ನು ನಿಮ್ಮಿಂದ ಕಿತ್ತುಕೊಂಡು ತಕ್ಕ ಫಲ ಕೊಡುವ ಜನತೆಗೆ ನೀಡಲಾಗುವುದು.

ಮೊದಲನೇ ವಾಚನ: ಆದಿಕಾಂಡ 37:3-4, 12-13, 17-28


ಜೋಸೆಫನು ಯಕೋಬನಿಗೆ ಮುಪ್ಪಿನಲ್ಲಿ ಹುಟ್ಟಿದ ಮಗ. ಎಂದೇ ಯಕೋಬನಿಗೆ ಅವನ ಮೇಲೆ ಮಿಕ್ಕ ಮಕ್ಕಳಿಗಿಂತ ಮಿಗಿಲಾದ ಪ್ರೀತಿ. ಅಲಂಕೃತವಾದ ಒಂದು ನಿಲುವಂಗಿಯನ್ನೂ ಅವನಿಗೆ ಮಾಡಿಸಿಕೊಟ್ಟಿದ್ದ. ತಂದೆ ತನ್ನ ಎಲ್ಲ ಮಕ್ಕಳಿಗಿಂತ ಇವನನ್ನೇ ಹೆಚ್ಚಾಗಿ ಪ್ರೀತಿಸುವುದನ್ನು ಕಂಡು, ಅಣ್ಣಂದಿರು ಆ ಜೋಸೆಫನನ್ನು ಹಗೆ ಮಾಡಿದರು. ಅವನೊಡನೆ ಸ್ನೇಹಭಾವದಿಂದಲೂ ಮಾತಾಡದೆ ಹೋದರು. ಒಮ್ಮೆ ಜೋಸೆಫನ ಅಣ್ಣಂದಿರು ತಂದೆಯ ಆಡುಕುರಿಗಳನ್ನು ಮೇಯಿಸಲು ಶೆಕೆಮಿಗೆ ಯಕೋಬನು ಜೋಸೆಫನಿಗೆ, “ನಿನ್ನ ಅಣ್ಣಂದಿರು ಶೆಕೆಮಿನಲ್ಲಿ ಆಡುಕುರಿಗಳನ್ನು ಮೇಯಿಸುತ್ತಿದ್ದಾರೆ, ಅಲ್ಲವೇ? ಅವರ ಬಳಿಗೆ ನಿನ್ನನ್ನು ಕಳಿಸಬೇಕೆಂದಿದ್ದೇನೆ,” ಎನ್ನಲು. ಅದಕ್ಕೆ ಆ ಮನುಷ್ಯ, “ಅವರು ಇಲ್ಲಿಂದ ಹೊರಟುಹೋದರು; ‘ದೋತಾನಿಗೆ ಹೋಗೋಣ’ ಎಂದು ಮಾತಾಡುವುದನ್ನು ಕೇಳಿದೆ,” ಎಂದ. ಜೋಸೆಫನು ಅವರನ್ನು ಹುಡುಕುತ್ತಾ ಹೋಗಿ, ದೋತಾನಿನಲ್ಲಿ ಅವರನ್ನು ಕಂಡ. ಅಣ್ಣಂದಿರು ಅವನನ್ನು ದೂರದಿಂದಲೇ ನೋಡಿದರು. ಅವನು ತಮ್ಮ ಬಳಿಗೆ ಬರುವಷ್ಟರೊಳಗೆ ಅವನನ್ನು ಕೊಲ್ಲಲು ಒಳಸಂಚು ಮಾಡಿಕೊಂಡರು. “ಅಗೋ ಆ ಕನಸುಗಾರ ಬರುತ್ತಾ ಇದ್ದಾನೆ! ನಾವು ಅವನನ್ನು ಕೊಂದು ಈ ಬಾವಿಯೊಂದರಲ್ಲಿ ಹಾಕಿಬಿಡೋಣ. ‘ಕಾಡುಮೃಗ ಅವನನ್ನು ತಿಂದುಬಿಟ್ಟಿತು’; ಎಂದು ಹೇಳಿದರೆ ಆಯಿತು, ಬನ್ನಿ. ಆಗ ಅವನ ಕನಸುಗಳು ಏನಾಗುತ್ತವೋ ನೋಡೋಣ,” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು. ರೂಬೇನನು ಈ ಮಾತನ್ನು ಕೇಳಿಸಿಕೊಂಡು, ಅವನನ್ನು ಅವರ ಕೈಯಿಂದ ತಪ್ಪಿಸುವ ಉದ್ದೇಶದಿಂದ, “ನಾವು ಅವನ ಪ್ರಾಣತೆಗೆಯಬೇಕಾಗಿಲ್ಲ, ರಕ್ತಪಾತ ಕೂಡದು. ಕಾಡಿನಲ್ಲಿರುವ ಈ ಬಾವಿ ಒಂದರಲ್ಲಿ ಹಾಕಿಬಿಡಿ, ಅವನ ಮೇಲೆ ಕೈಹಾಕಬೇಡಿ,” ಎಂದು ಅವರಿಗೆ ಹೇಳಿದ. ಅವನನ್ನು ಅವರಿಂದ ತಪ್ಪಿಸಿ ತಂದೆಗೆ ಮತ್ತೆ ಒಪ್ಪಿಸಬೇಕೆಂಬ ಗುರಿ ರೂಬೇನನದಾಗಿತ್ತು. ಜೋಸೆಫನು ತನ್ನ ಅಣ್ಣಂದಿರ ಹತ್ತಿರಕ್ಕೆ ಬಂದಾಗ ಅವರು ಅವನ ಮೇಲಿದ್ದ ನಿಲುವಂಗಿಯನ್ನು ತೆಗೆದುಬಿಟ್ಟರು. ಅವನನ್ನು ಹಿಡಿದು ಬಾವಿಯೊಳಗೆ ಹಾಕಿದರು. ಆ ಬಾವಿ ನೀರಿಲ್ಲದೆ ಬರಿದಾಗಿತ್ತು. ತರುವಾಯ ಅವರು ಊಟಕ್ಕೆ ಕುಳಿತುಕೊಂಡರು. ಅಷ್ಟರಲ್ಲಿ, ಇಷ್ಮಾಯೇಲರ ಗುಂಪೊಂದು ಗಿಲ್ಯಾದಿನಿಂದ ಬರುವುದು ಅವರ ಕಣ್ಣಿಗೆ ಕಾಣಿಸಿತು. ಇವರು ತಮ್ಮ ಒಂಟೆಗಳ ಮೇಲೆ ಪರಿಮಳ ಪದಾರ್ಥ, ಸುಗಂಧ ತೈಲ, ರಸಗಂಧ ಇವುಗಳನ್ನು ಹೇರಿಕೊಂಡು, ಈಜಿಪ್ಟಿಗೆ ಪ್ರಯಾಣಮಾಡುತ್ತಿದ್ದರು. ಆಗ ಯೆಹೂದನು ತನ್ನ ಅಣ್ಣತಮ್ಮಂದಿರಿಗೆ, “ನಾವು ನಮ್ಮ ತಮ್ಮನನ್ನು ಕೊಂದು ಆ ಕೊಲೆಯನ್ನು ಮರೆಮಾಡಿದರೆ ಪ್ರಯೋಜನವೇನು? ಅವನನ್ನು ಆ ಇಷ್ಮಾಯೇಲರಿಗೆ ಮಾರಿ ಬಿಡೋಣ, ಬನ್ನಿ; ನಾವು ಅವನ ಮೇಲೆ ಕೈ ಹಾಕಬಾರದು, ಅವನು ನಮ್ಮ ತಮ್ಮನಲ್ಲವೆ? ರಕ್ತ ಸಂಬಂಧಿಯಲ್ಲವೆ?” ಎಂದು ಹೇಳಿದ. ಅವನ ಆ ಮಾತಿಗೆ ಅಣ್ಣತಮ್ಮಂದಿರು ಒಪ್ಪಿದರು. ಅಷ್ಟರಲ್ಲಿ, ಮಿದ್ಯಾನಿನ ವರ್ತಕರು ಹಾದು ಹೋಗುತ್ತಿದ್ದರು. ಅವರು ಜೋಸೆಫನನ್ನು ಬಾವಿಯೊಳಗಿಂದ ಎತ್ತಿ ಈ ಇಷ್ಮಾಯೇಲರಿಗೆ ಇಪ್ಪತ್ತು ಬೆಳ್ಳಿನಾಣ್ಯಗಳಿಗೆ ಮಾರಿಬಿಟ್ಟರು. ಇವರು ಅವನನ್ನು ಈಜಿಪ್ಟ್ ದೇಶಕ್ಕೆ ತೆಗೆದುಕೊಂಡು ಹೋದರು.

ಕೀರ್ತನೆ: 105:16-17, 18-19, 20-21

ಶ್ಲೋಕ: ನೆನೆಯಿರಿ ಆತನದ್ಭುತಗಳನು, ಮಹತ್ಕಾರ್ಯಗಳನು

ಶುಭಸಂದೇಶ: ಮತ್ತಾಯ 21:33-43, 45-46

ಯೇಸುಸ್ವಾಮಿ ಮುಖ್ಯ ಯಾಜಕರಿಗೂ ಪ್ರಜಾಪ್ರಮುಖರಿಗೂ ಈ ಸಾಮತಿಯನ್ನು ಹೇಳಿದರು: "ಒಬ್ಬ ಯಜಮಾನ ಒಂದು ದ್ರಾಕ್ಷಿತೋಟ ಮಾಡಿಸಿದ. ಅದರ ಸುತ್ತ ಬೇಲಿಯನ್ನು ಹಾಕಿಸಿದ. ದ್ರಾಕ್ಷಾರಸವನ್ನು ತೆಗೆಯಲು ಅಲೆಯನ್ನು ಹೂಡಿಸಿ, ಕಾವಲಿಗಾಗಿ ಅಟ್ಟಣೆಯನ್ನು ಕಟ್ಟಿಸಿದ. ಅನಂತರ ಅದನ್ನು ಗೇಣಿದಾರರಿಗೆ ವಹಿಸಿ ಹೊರನಾಡಿಗೆ ಹೊರಟುಹೋದ. ಫಲ ಕೊಡುವ ಕಾಲ ಹತ್ತಿರವಾದಾಗ, ತನಗೆ ಬರಬೇಕಾದ ಪಾಲನ್ನು ತರುವುದಕ್ಕಾಗಿ ಆಳುಗಳನ್ನು ಗೇಣಿದಾರರ ಬಳಿಗೆ ಕಳುಹಿಸಿದ. ಇವರು ಆ ಆಳುಗಳ ಮೇಲೆ ಬಿದ್ದು ಒಬ್ಬನನ್ನು ಬಡಿದರು, ಇನ್ನೊಬ್ಬನನ್ನು ಕಡಿದರು, ಮತ್ತೊಬ್ಬನ ಮೇಲೆ ಕಲ್ಲು ತೂರಿದರು. ತೋಟದ ಯಜಮಾನ ಮೊದಲಿಗಿಂತಲೂ ಹೆಚ್ಚು ಆಳುಗಳನ್ನು ಕಳುಹಿಸಿದ. ಅವರಿಗೂ ಅದೇ ಗತಿ ಆಯಿತು. ಕಟ್ಟಕಡೆಗೆ ಯಜಮಾನ, ‘ನನ್ನ ಮಗನಿಗೆ ಇವರು ಮರ್ಯಾದೆ ಕೊಟ್ಟೇಕೊಡುವರು’ ಎಂದುಕೊಂಡು ತನ್ನ ಮಗನನ್ನೇ ಕಳುಹಿಸಿದ. ಆದರೆ ಗೇಣಿದಾರರು ಮಗನನ್ನು ಕಂಡೊಡನೇ, ‘ಈ ತೋಟಕ್ಕೆ ಇವನೇ ಉತ್ತರಾಧಿಕಾರಿ; ಬನ್ನಿ, ಇವನನ್ನು ಮುಗಿಸಿ ಬಿಡೋಣ. ಇವನಿಗೆ ಬರುವ ಸೊತ್ತನ್ನು ನಮ್ಮದಾಗಿಸಿಕೊಳ್ಳೋಣ,’ ಎಂದು ತಮ್ಮ ತಮ್ಮಲ್ಲೇ ಒಳಸಂಚು ಮಾಡಿಕೊಂಡರು. ಅಂತೆಯೇ ಅವನನ್ನು ಹಿಡಿದು, ತೋಟದಿಂದ ಹೊರಕ್ಕೆ ದಬ್ಬಿಕೊಂಡು ಹೋಗಿ, ಕೊಂದುಹಾಕಿದರು. “ಈಗ ನೀವೇ ಹೇಳಿ: ತೋಟದ ಯಜಮಾನ ಬಂದಾಗ ಆ ಗೇಣಿದಾರರರಿಗೆ ಏನು ಮಾಡುವನು?” ಎಂದು ಯೇಸು ಕೇಳಿದರು. “ಆ ಕೇಡಿಗರನ್ನು ಕ್ರೂರವಾಗಿ ಸಂಹರಿಸುವನು. ತರುವಾಯ ಕಾಲಕಾಲಕ್ಕೆ ಸರಿಯಾಗಿ ಪಾಲನ್ನು ಸಲ್ಲಿಸುವ ಬೇರೆಯವರಿಗೆ ತೋಟವನ್ನು ಗೇಣಿಗೆ ಕೊಡುವನು,” ಎಂದು ಅಲ್ಲಿದ್ದವರು ಉತ್ತರ ಕೊಟ್ಟರು. ಬಳಿಕ ಯೇಸು ಇಂತೆಂದರು: “ ‘ಮನೆ ಕಟ್ಟುವವರು ಬೇಡವೆಂದು ಬಿಸಾಡಿದ ಆ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು! ಸರ್ವೇಶ್ವರನಿಂದಲೇ ಆದ ಈ ಕಾರ್ಯ ನಮ್ಮ ಕಣ್ಣಿಗೆ ಅದೆಂಥ ಆಶ್ಚರ್ಯ!’ ಎಂಬ ವಾಕ್ಯವನ್ನು ನೀವು ಪವಿತ್ರ ಗ್ರಂಥದಲ್ಲಿ ಓದಿಲ್ಲವೆ? ಆದುದರಿಂದ ನಾನು ನಿಮಗೆ ಹೇಳುತ್ತೇನೆ, ‘ದೇವರ ಸಾಮ್ರಾಜ್ಯವನ್ನು ನಿಮ್ಮಿಂದ ಕಿತ್ತುಕೊಂಡು ತಕ್ಕ ಫಲ ಕೊಡುವ ಜನತೆಗೆ ನೀಡಲಾಗುವುದು. ಮುಖ್ಯ ಯಾಜಕರೂ ಫರಿಸಾಯರೂ ಸ್ವಾಮಿ ಹೇಳಿದ ಸಾಮತಿಗಳನ್ನು ಕೇಳಿ, ‘ಇವನು ನಮ್ಮನ್ನು ಕುರಿತೇ ಹೀಗೆ ಮಾತನಾಡುತ್ತಿದ್ದಾನೆ,’ ಎಂದು ಅರ್ಥ ಮಾಡಿಕೊಂಡರು. ಯೇಸುವನ್ನು ಹಿಡಿದು ಬಂಧಿಸಲು ಯತ್ನಿಸಿದರು. ಆದರೆ ಜನಸಮೂಹಕ್ಕೆ ಭಯಪಟ್ಟರು. ಏಕೆಂದರೆ, ಜನರು ಯೇಸುವನ್ನು ಪ್ರವಾದಿ ಎಂದು ಸನ್ಮಾನಿಸುತ್ತಿದ್ದರು.

ಮನಸ್ಸಿಗೊಂದಿಷ್ಟು : ನಮ್ಮದೇ  ರೀತಿಯಲ್ಲಿ ಬಾಳಲು  ಮುಕ್ತ ಅವಕಾಶ ಕೊಟ್ಟ ದೇವರ ಹೃದಯ ವೈಶಾಲ್ಯವನ್ನು ದುರುಪಯೋಗ ಪಡಿಸುಕೊಳ್ಳುವವರಿಗೆ ಕಾದಿರುವ  ಶಿಕ್ಷೆಯ ಬಗ್ಗೆ ಇಂದಿನ ಶುಭಸಂದೇಶ ಹೇಳುತ್ತದೆ. ದೇವರು ಪ್ರೀತಿಮಯಿ, ಆದರೆ ಅವರ ಸಹನೆಯನ್ನು ಪರೀಕ್ಷಿಸುವ ದುಸ್ಸಾಹಸ ನಮ್ಮದಾಗಬಾರದು. ದೇವರ ಸಾಮ್ರಾಜ್ಯವನ್ನು ನಮ್ಮಿಂದ ಕಿತ್ತುಕೊಂಡು ತಕ್ಕ ಫಲ ಕೊಡುವ ಜನತೆಗೆ ನೀಡಲಾಗುವುದನ್ನು ಅಸಹಾಯತೆಯಿಂದ ನೋಡಬೇಕಾಗುತ್ತದೆ. ಫಲ ನೀಡುವವರಾಗೋಣ. 

ಪ್ರಶ್ನೆ : ದೇವರ ಸಾಮ್ರಾಜ್ಯದ  ಆಸೆ ನಮ್ಮದಾಗಿದೆಯೇ ಇಲ್ಲವೇ?

ಪ್ರಭುವೇ,
ನಡೆಯುತ್ತಿದ್ದರೂ ನಾ 
ನಿಮ್ಮ ವಾಕ್ಯದ ವಿರುದ್ಧ 
ಈ ನಿಮ್ಮ ಸಹನೆ ಅಗಾಧ
ಪದೇ ಪದೇ ನಿಮ್ಮ ಕೃಪೆಗೆ 
ವಿಮುಖನಾಗುವ ಪ್ರಮಾದ 
ಆಗದಿರಲಿ ನನ್ನಿಂದ
ದೈವ ಸಾಮ್ರಾಜ್ಯದ 
ಹಂಬಲಿಕೆಯೊಂದೇ  
ಆಗಲೀ ಹೃದಯದ ನಿನಾದ

-ಚಿತ್ತ 

29.10.2026 - ಸರ್ವೇಶ್ವರನ ನಾಮದಲ್ಲಿ ಬರುವವರು ಧನ್ಯರು, ' ಎಂದು ನೀವಾಗಿ ಹೇಳುವ ದಿನದವರೆಗೂ ನೀವು ನನ್ನನ್ನು ಕಾಣಲಾರಿರಿ, ಎಂಬುದು ನಿಶ್ಚಯ,

ಮೊದಲನೆಯ ವಾಚನ : ಪೌಲನು ರೋಮನರಿಗೆ ಬರೆದ ಪತ್ರದಿಂದ ಇಂದಿನ ವಾಚನ 8:31-39 ಸಹೋದರರೇ, ಹೀಗಿರುವಲ್ಲಿ ನಾವು ಏನು ಹೇಳೋಣ?  ದೇವರೆ ನಮ್ಮ ಪರ ಇರುವಾಗ ನಮ್ಮನ್ನು ವಿರೋಧಿಸುವ...