15.08.2018

ಸಾಧಾರಣ ಕಾಲದ ಹತ್ತೊಂಭತ್ತನೆಯ ವಾರ - ಬುಧವಾರ 

ಪೂಜ್ಯ ಕನ್ಯಾಮರಿಯಮ್ಮನವರ ಸ್ವರ್ಗಾರೋಹಣ
ದೇವಮಾತೆಯ ಹಾಡು ಕೇಳಿ


ಮೊದಲನೇ ವಾಚನ: ಪ್ರಕಟನೆ 11:19; 12:1-6,10



ಆಗ ಸ್ವರ್ಗದಲ್ಲಿನ ದೇವಾಲಯವು ತೆರೆಯಿತು. ದೇವರ ಒಡಂಬಡಿಕೆಯ ಮಂಜೂಷವು ಅಲ್ಲಿರುವುದು ಕಾಣಿಸಿತು; ಇದಲ್ಲದೆ ಮಿಂಚುಗಳು, ಗುಡುಗು, ಗರ್ಜನೆಗಳು ಉಂಟಾದವು. ಭೂಕಂಪವೂ ಆಯಿತು. ಜೋರಾದ ಆಲಿಕಲ್ಲಿನ ಮಳೆ ಸುರಿಯಿತು. ಆಕಾಶದಲ್ಲಿ ಚಿಹ್ನೆಯೊಂದು ಕಾಣಿಸಿಕೊಂಡಿತು. ಮಹಿಳೆಯೊಬ್ಬಳು ಸೂರ್ಯಭೂಷಿತಳಾಗಿದ್ದಳು. ಆಕೆಯ ಪಾದದಡಿ ಚಂದ್ರನಿದ್ದನು. ತಲೆಯ ಮೇಲೆ ಹನ್ನೆರಡು ನಕ್ಷತ್ರ ಖಚಿತವಾದ ಕಿರೀಟವಿತ್ತು. ಆಕೆ ತುಂಬು ಗರ್ಭಿಣಿ, ಪ್ರಸವ ವೇದನೆಯಿಂದ ನರಳುತ್ತಿದ್ದಳು. ಆಕಾಶದಲ್ಲಿ ಮತ್ತೊಂದು ಚಿಹ್ನೆ ಕಾಣಿಸಿಕೊಂಡಿತು. ಅಲ್ಲಿ ಕೆಂಪು ಘಟಸರ್ಪವೊಂದು ಇತ್ತು. ಅದಕ್ಕೆ ಏಳು ತಲೆಗಳಿದ್ದವು, ಹತ್ತು ಕೊಂಬುಗಳಿದ್ದವು; ಅದರ ಏಳು ತಲೆಗಳ ಮೇಲೆ ಏಳು ಮುಕುಟಗಳಿದ್ದವು. ಅದು ತನ್ನ ಬಾಲದಿಂದ ಮೂರನೆಯ ಒಂದು ಭಾಗದಷ್ಟು ನಕ್ಷತ್ರಗಳನ್ನು ಆಕಾಶದಿಂದ ಸೆಳೆದೆಳೆದು ಅವುಗಳನ್ನು ಭೂಮಿಗೆ ಎಸೆಯಿತು. ಮಗು ಹುಟ್ಟಿದ ಕೂಡಲೇ ಅದನ್ನು ನುಂಗಿ ಬಿಡಬೇಕೆಂದು ಘಟ ಸರ್ಪವು ಆ ತುಂಬು ಗರ್ಭಿಣಿಯ ಬಳಿಯಲ್ಲೇ ಕಾಯ್ದುಕೊಂಡಿತು. ಸರ್ವಜನಾಂಗಗಳನ್ನು ಕಬ್ಬಿಣದ ದಂಡದಿಂದ ಆಳ ಬಲ್ಲಂಥ ಒಂದು ಗಂಡು ಮಗುವಿಗೆ ಆಕೆ ಜನ್ಮವಿತ್ತಳು. ಆದರೆ, ಆ ಮಗುವನ್ನು ಸಿಂಹಾಸನದಲ್ಲಿದ್ದ ದೇವರ ಬಳಿಗೆ ಕೊಂಡೊಯ್ಯಲಾಯಿತು. ಆ ಮಹಿಳೆ ಅರಣ್ಯಕ್ಕೆ ಓಡಿ ಹೋದಳು. ಅಲ್ಲಿ ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಆಕೆಗೆ ಶುಶ್ರೂಷೆಯಾಗಬೇಕೆಂದು ದೇವರೇ ಆ ಸ್ಥಳವನ್ನು ಸಜ್ಜುಗೊಳಿಸಿದ್ದರು. ಸ್ವರ್ಗದಿಂದ ಬಂದ ಮಹಾ ಶಬ್ಧವನ್ನು ನಾನು ಕೇಳಿಸಿಕೊಂಡೆ. ಅದು ಇಂತೆಂದಿತು: "ಇಗೋ, ನಮ್ಮ ದೇವನಿತ್ತ ಜೀವೋದ್ಧಾರ ಸಿದ್ಧಿಸಿದೆ. ಆತನ ಶಕ್ತಿ, ಸಾಮ್ರಾಜ್ಯಗಳು ಕಂಗೊಳಿಸುತ್ತಿವೆ. ಆತನ ಕ್ರಿಸ್ತಾದಿಪತ್ಯ ಸ್ಥಾಪಿತವಾಗಿದೆ. ನಮ್ಮ ಸೋದರನು ದೂರಿದವನನ್ನು ದಬ್ಬಲಾಗಿದೆ. ಹಗಲಿರುಳು ನಮ್ಮ ದೇವರೆದುರು ದೂರಿತ್ತಿದ್ದವನನ್ನು ತಳ್ಳಲಾಗಿದೆ.

ಕೀರ್ತನೆ: 45: 10, 11, 12, 16.

ಶ್ಲೋಕ: 
ಪಟ್ಟದ ರಾಣಿಯು ನಿಂತಿಹಳು ನಿನ್ನ ಬಲಪಾರ್ಶ್ವದಲಿ
      ಓಫಿರ್ ನಾಡಿನ ಚಿನ್ನಾಭರಣಗಳಿಂದ ಭೂಷಿತಳಾಗಿ.



ಎರಡನೇ ವಾಚನ: 1 ಕೊರಿಂಥಿಯರಿಗೆ: 15: 20-27

ಕ್ರಿಸ್ತ ಯೇಸು ಪುನರುತ್ಥಾನ ಹೊಂದಿದ್ದೇನೋ 
ಸತ್ಯಸ್ಯ ಸತ್ಯ. ಅವರ ಪುನರುತ್ಥಾನವು, ಸತ್ತವರು ಪುನರುತ್ಥಾನ ಹೊಂದುತ್ತಾರೆ ಎನ್ನುವುದಕ್ಕೆ ಪ್ರಮಾಣ. ಒಬ್ಬ ಮನುಷ್ಯನಿಂದ ಸಾವು ಸಂಭವಿಸಿದಂತೆಯೇ ಒಬ್ಬ ಮನುಷ್ಯನಿಂದಲೇ ಸತ್ತವರಿಗೆ ಪುನರುತ್ಥಾನವು ಪರಿಣಮಿಸಿತು. ಆದಾಮನ ಸಂಬಂಧದಿಂದ ಎಲ್ಲರೂ ಜೀವಂತರಾಗಿ ಏಳುತ್ತಾರೆ. ಈ ಭಾಗ್ಯವನ್ನು ಒಬ್ಬೊಬ್ಬನೂ ಕ್ರಮ ಬದ್ಧ ರೀತಿಯಲ್ಲಿ ಪಡೆಯುತ್ತಾನೆ. ಪ್ರಪ್ರಥಮ ಫಲವಾಗಿ ಕ್ರಿಸ್ತ ಯೇಸುವೇ ಜೀವಂತರಾದರು. ಅನಂತರ, ಕ್ರಿಸ್ತ ಯೇಸುವಿಗೆ ಸೇರಿದವರು ಯೇಸು ಪುನರಾಗಮಿಸುವಾಗ ಜೀವಂತರಾಗುತ್ತಾರೆ. ಅಂತ್ಯ ಬರುವುದು ಅನಂತರವೇ. ಆಗ ಯೇಸು ಎಲ್ಲಾ ಆಧಿಪತ್ಯವನ್ನೂ ಅಧಿಕಾರವನ್ನೂ ಶಕ್ತಿಯನ್ನೂ ನಿರ್ಮೂಲ ಮಾಡಿ ತಂದೆಯಾದ ದೇವರಿಗೆ ಸಾಮ್ರಾಜ್ಯವನ್ನು ಒಪ್ಪಿಸಿಕೊಡುವರು. ಶತ್ರುಗಳೆಲ್ಲರನ್ನು ತಮ್ಮ ಪಾದಪೀಠವಾಗಿಸಿಕೊಳ್ಳುವ ತನಕ ಅವರು ರಾಜ್ಯವಾಳಬೇಕಾಗಿದೆ. ಕಟ್ಟಕಡೆಗೆ ನಿರ್ಮೂಲವಾಗುವ ಶತ್ರುವೆಂದರೆ ಮೃತ್ಯುವೇ. "ದೇವರು ಎಲ್ಲವನ್ನೂ ಅಧೀನ ಪಡಿಸಿ ಆತನ ಪಾದಪೀಠವನ್ನಾಗಿಸಿದ್ದಾರೆ," ಎಂದು ಲಿಖಿತವಾಗಿದೆ. "ಎಲ್ಲವನ್ನೂ ಅಧೀನಪಡಿಸಲಾಗಿದೆ," ಎಂದು ಹೇಳುವಾಗ, ಹಾಗೇ ಅಧೀನ ಪಡಿಸಿದ ದೇವರು ಅದರಲ್ಲಿ ಸೇರಲಿಲ್ಲ ಎಂಬುದು ಸುಸ್ಪಷ್ಟವಾಗಿದೆ.

ಶುಭಸಂದೇಶ:  ಲೂಕ: 1: 39-56


ಇದಾದ ಕೆಲವು ದಿನಗಳಲ್ಲೇ ಮರಿಯಳು ಪ್ರಯಾಣ ಹೊರಟು ಜುದೇಯದ ಗುಡ್ಡಗಾಡಿನಲ್ಲಿರುವ ಒ೦ದು ಊರಿಗೆ ತ್ವರೆಯಾಗಿ ಬ೦ದಳು. ಅಲ್ಲಿ ಜಕರೀಯನ ಮನೆಗೆ ಹೋಗಿ ಎಲಿಜಬೇತಳನ್ನು ವ೦ದಿಸಿದಳು. ಮರಿಯಳ ವ೦ದನೆಯನ್ನು ಎಲಿಜಬೇತಳು ಕೇಳಿದ್ದೇ ತಡ, ಆಕೆಯ ಗರ್ಭದಲ್ಲಿದ್ದ ಶಿಶು ನಲಿದಾಡಿತು; ಎಲಿಜಬೇತಳು ಪವಿತ್ರಾತ್ಮಭರಿತಳಾಗಿ ಹರ್ಷೋದ್ಗಾರದಿ೦ದ ಹೀಗೆ೦ದಳು: "ಸ್ತ್ರೀಯರರೆಲ್ಲೆಲ್ಲಾ ಧನ್ಯಳು ನೀನು; ನಿನ್ನ ಕರುಳ ಕುಡಿಯೂ ಧನ್ಯ! ನನ್ನ ಪ್ರಭುವಿನ ತಾಯಿ ನೀನು; ನನ್ನ ಬಳಿಗೆ ಬ೦ದುದು ಅದೆ೦ಥ ಭಾಗ್ಯ! ನಿನ್ನ ವ೦ದನೆಯ ದನಿ ನನ್ನ ಕಿವಿ ತಾಕಿದೊಡನೆ ನಲಿದಾಡಿತು ಆನ೦ದದಿ೦ದ, ನನ್ನ ಕರುಳ ಕುಡಿ! ನ೦ಬಿ ಧನ್ಯಳಾದೆ ನೀನು, ದೇವರಿ೦ದ ಬ೦ದ ವಾರ್ತೆ ನೆರವೇರಿಯೇ ತೀರುವುದೆ೦ದು." ಆಗ ಹೀಗೆ೦ದು ಮರಿಯಳು ಹೊಗಳಿದಳು: "ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ! ಉಲ್ಲಾಸಿಸುತ್ತದೆ ಮುಕ್ತಿದಾತ ದೇವನಲಿ! ತನ್ನ ದಾಸಿಯ ದೀನತೆಯನು ನೆನಪಿಗೆ ತ೦ದುಕೊ೦ಡನಾತ! ಧನ್ಯಳೆ೦ದು ಹೊಗಳುವರೆನ್ನನು ಇ೦ದಿನಿ೦ದ ಸರ್ವ ಜನಾ೦ಗ! ಏಕೆನೆ ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ! ನಿಜಕ್ಕೂ ಆತನ ನಾಮಧೇಯ ಪರಮಪೂಜ್ಯ! ಆತನಲ್ಲಿ ಭಯಭಕ್ತಿಯುಳ್ಳವರಿಗೆ! ಆತನ ಪ್ರೀತಿ ತಲತಲಾ೦ತರದವರೆಗೆ! ಗರ್ವಹೃದಯಿಗಳನಾತ ಚದರಿಸುವನು! ಪ್ರದರ್ಶಿಸಿರುವನು ತನ್ನ ಬಾಹುಬಲವನು! ಇಳಿಸಿಹನು ಗದ್ದುಗೆಯಿ೦ದ ಘನಾಧಿಪತಿಗಳನು! ಏರಿಸಿರುವನು ಉನ್ನತಿಗೆ ದೀನದಲಿತರನು! ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ! ಹೊರದೂಡಿರುವನು ಸಿರಿವ೦ತರನು ಬರೀಗೈಯಲಿ! ನೆರವಾದನು ತನ್ನ ದಾಸ ಇಸ್ರಯೇಲನಿಗೆ! ಪೂರ್ವಜರಿಗಿತ್ತ ವಾಗ್ದಾನದ ಮೇರೆಗೆ! ಮರೆಯಲ್ಲಿ ಆತ ಕರುಣೆ ತೋರಲು ಅಬ್ರಹಾಮನಿಗೆ! ಆವನ ಸ೦ತತಿಗೆ, ಯುಗಯುಗಾ೦ತರದವರೆಗೆ! ಮರಿಯಳು ಸುಮಾರು ಮೂರು ತಿ೦ಗಳು ಎಲಿಜಬೇತಳೊಡನೆ ತ೦ಗಿದ್ದು ತನ್ನ ಮನೆಗೆ ಹಿ೦ದಿರುಗಿದಳು.

14.08.2018

ಸಾಧಾರಣ ಕಾಲದ ಹತ್ತೊಂಭತ್ತನೆಯ ವಾರ - ಮಂಗಳವಾರ 




ಮೊದಲನೇ ವಾಚನ: ಯೆಜೆಕಿಯೇಲ: 2:8 -3:4
"ನರಪುತನೇ, ನಾನು ನಿನಗೆ ನುಡಿಯುವ ಮಾತನ್ನು ಕೇಳು; ಅವಿಧೇಯರಾದ ಆ ವಂಶದವರಂತೆ ನೀನು ಅವಿಧೇಯನಾಗಬೇಡ; ನಾನು ಕೊಡುವುದನ್ನು ಬಾಯಿ ತೆರೆದು ತಿಂದುಬಿಡು," ಎಂದರು. ಇಗೋ, ನಾನು ನೋಡುತ್ತಿದ್ದಂತೆ ಒಂದು ಕೈ ನನ್ನ ಕಡೆಗೆ ಚಾಚಿತ್ತು; ಅದರಲ್ಲಿ ಗ್ರಂಥದ ಸುರುಳಿಯೊಂದು ಕಾಣಿಸಿತು. ಆ ಸುರುಳಿಯನ್ನು ನನ್ನೆದುರಿನಲ್ಲೇ  ಬಿಚ್ಚಿದರು. ಅದರ ಎರಡು ಬದಿಗಳಲ್ಲಿಯೂ ಬರೆದಿತ್ತು: ಅದು ಪ್ರಲಾಪ, ಶೋಕ, ಶಾಪ ಇವುಗಳ ಬರಹದಿಂದ ಕೂಡಿತ್ತು. ಬಳಿಕ ಸರ್ವೇಶ್ವರ ನನಗೆ, "ನರಪುತ್ರನೆ, ನಿನಗೆ ಕೊಟ್ಟ ಈ ಸುರುಳಿಯನ್ನು ತಿನ್ನು; ಅನಂತರ ಇಸ್ರಯೇಲ್ ವಂಶವರಿಗೆ ಸಾರು, ಹೋಗು," ಎಂದು ಆಜ್ಞಾಪಿಸಿದರು. ನಾನು ಬಾಯಿ ತೆರೆದೆ; ಅವರೇ ಆ ಸುರುಳಿಯನ್ನು ನನಗೆ ತಿನ್ನಿಸಿದರು. ತಿನ್ನಿಸುತ್ತಾ, "ನರಪುತ್ರನೆ, ನಾನು ಕೊಡುವ ಈ ಸುರುಳಿಯನ್ನು ತಿಂದು ಹೊಟ್ಟೆ ತುಂಬಿಸಿಕೋ," ಎಂದರು. ನಾನು ಅದನ್ನು ತಿಂದು ಬಿಟ್ಟೆ; ಅದು ನನ್ನ ಬಾಯಿಗೆ ಜೇನಿನಂತೆ ಸಿಹಿಯಾಗಿತ್ತು. ಆಮೇಲೆ ಸರ್ವೇಶ್ವರ ನನಗೆ ಹೀಗೆಂದರು: "ನರಪುತ್ರನೆ, ನೀನು ಇಸ್ರಯೇಲ್ ವಂಶದವರ ಬಳಿಗೆ ಹೋಗಿ ನಾನು ತಿಳಿಸುವ ಮಾತುಗಳನ್ನು ಹೇಳು.

ಕೀರ್ತನೆ: 119: 14, 24, 72, 103, 111. 131
ಶ್ಲೋಕ: ನಿನ್ನ ನುಡಿ ಎನಿತೋ ರುಚಿ ನನ್ನ ನಾಲಿಗೆಗೆ.

ಶುಭಸಂದೇಶ: ಮತ್ತಾಯ: 18: 1-5, 10, 12-14
ಆ ಸಮಯದಲ್ಲಿ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, "ಸ್ವರ್ಗ ಸಾಮ್ರಾಜ್ಯದಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರು?" ಎಂದು ಕೇಳಿದರು. ಯೇಸು ಒಂದು ಚಿಕ್ಕ ಮಗುವನ್ನು ತಮ್ಮ ಹತ್ತಿರಕ್ಕೆ ಕರೆದು, ಅದನ್ನು ಶಿಷ್ಯರ ನಡುವೆ ನಿಲ್ಲಿಸಿ ಹೀಗೆಂದರು: "ನೀವು ಪರಿವರ್ತನೆ ಹೊಂದಿ ಮಕ್ಕಳಂತೆ ಆಗದಿದ್ದರೆ ಸ್ವರ್ಗಸಾಮ್ರಾಜ್ಯವನ್ನು ಸೇರಲಾರಿರಿ, ಎಂದು ನಿಶ್ಚಯವಾಗಿ ಹೇಳುತ್ತೇನೆ. ಈ ಮಗುವಿನಂತೆ ನಮ್ರ ಭಾವವುಳ್ಳವನೇ ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತ ದೊಡ್ಡವನು. ನನ್ನ ಹೆಸರಿನಲ್ಲಿ ಇಂತಹ ಮಗುವೊಂದನ್ನು ಸ್ವೀಕರಿಸುವವನು ನನ್ನನ್ನೇ ಸ್ವೀಕರಿಸುತ್ತಾನೆ. ಎಚರಿಕೆ! ಈ ಚಿಕ್ಕವರಲ್ಲಿ ಯಾರನ್ನೂ ತೃಣೀಕರಿಸಬೇಡಿ. "ನಿಮ್ಮಲ್ಲಿ ಒಬ್ಬನಿಗೆ ನೂರು ಕುರಿಗಳು ಇವೆಯೆನ್ನೋಣ, ಅವುಗಳಲ್ಲಿ ಒಂದು  ಕುರಿ ತಪ್ಪಿಸಿಕೊಂಡು ಹೋಯಿತೆಂದು ಇಟ್ಟುಕೊಳ್ಳಿ. ಆಗ ನಿಮಗೇನು ಅನ್ನಿಸುತ್ತದೆ? ಅವನು ಉಳಿದ ತ್ತೊಂಭತ್ತೊಂಭತ್ತು ಕುರಿಗಳನ್ನು ಗುಡ್ಡದಲ್ಲೇ ಬಿಟ್ಟು, ತಪ್ಪಿಸಿಕೊಂಡು  ಹೋದ ಆ ಒಂದು ಕುರಿಯನ್ನು ಹುಡುಕಿಕೊಂಡು ಹೋಗುವುದಿಲ್ಲವೇ? ಅದು ಸಿಕ್ಕಿತು ಅನ್ನಿ; ತಪ್ಪಿಸಿಕೊಳ್ಳದ ಈ ತ್ತೊಂಭತ್ತೊಂಭತ್ತು ಕುರಿಗಳಿಗಿಂತ ಸಿಕ್ಕಿದ ಈ ಒಂದು ಕುರಿಗಾಗಿ ಅವನು ಹೆಚ್ಚು ಆನಂದ ಪಡುತ್ತಾನೆ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಅಂತೆಯೇ, ಈ ಚಿಕ್ಕವರಲ್ಲಿ ಒಬ್ಬನು ಕೂಡ ಕಳೆದು ಹೋಗಬಾರದು; ಇದೇ ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತ".

13.08.2018

ಸಾಧಾರಣ ಕಾಲದ ಹತ್ತೊಂಭತ್ತೆನೆಯ ವಾರ

ಮೊದಲನೇ ವಾಚನ: ಯೆಜೆಕಿಯೇಲ: 1: 2-5, 24-28
ಅದೇ ತಿಂಗಳಿನ ಐದನೆಯ ದಿನ, ಅಂದರೆ, ಯೆಹೋಯಾಖೀನನು ಸೆರೆಯಾದ ಐದನೆಯ ವರ್ಷ, ಬಾಬಿಲೋನಿಯಾ ದೇಶದ ಕೇಬಾರ್ ನದಿಯ ಹತ್ತಿರ, ಬೂಜಿಯ ಮಗ ಹಾಗೂ ಯಾಜಕನಾದ ಯೆಜೆಕಿಯೇಲ ಎಂಬ ನನಗೆ ಸರ್ವೇಶ್ವರ ಸ್ವಾಮಿಯ ವಾಣಿ ನೇರವಾಗಿ ಕೇಳಿಸಿತು; ಅವರ ಹಸ್ತ ಸ್ಪರ್ಶದಿಂದ ನಾನು ಪರವಶನಾದೆ. ನಾನು ಕಂಡ ದರ್ಶನ ಹೀಗಿತ್ತು: ಇಗೋ, ಉತ್ತರ ದಿಕ್ಕಿನಿಂದ ಬಿರುಗಾಳಿ ಬೀಸಿತು. ಎಡೆಬಿಡದೆ ಝಗಝಗಿಸುವ ಜ್ವಾಲೆಯಿಂದ ಕೂಡಿದ ಮಹಾ ಮೇಘವೊಂದು ಕಾಣಿಸಿತು. ಅದರ ಸುತ್ತಲೂ ಮಿಂಚು ಹೊಳೆಯಿತು. ಅದರ ನಡುವೆ, ಆ ಜ್ವಾಲೆಯ ಮಧ್ಯೆ, ಸುವರ್ಣದಂತ ಕಾಂತಿ ಬೆಳಗಿತು. ಅದರ ಮಧ್ಯದಿಂದ ನಾಲ್ಕು ಜೀವಿಗಳ ಆಕಾರಗಳು ಕಂಡುಬಂದವು. ಅವುಗಳ ರೂಪ ಮನುಷ್ಯ ರೂಪದಂತಿತ್ತು.  ಅವು ಮುಂದುವರಿಯುವಾಗ ಅವುಗಳ ರೆಕ್ಕೆಗಳ ಶಬ್ದವು ಜಲ ಪ್ರವಾಹದ ಘೋಷದಂತೆ, ಸರ್ವಶಕ್ತನ ಧ್ವನಿಯಂತೆ, ಆರ್ಭಟಿಸುವ ಸೈನ್ಯದ ಕೋಲಾಹಲದಂತೆ ನನಗೆ ಕೇಳಿಸಿತು; ಅವು ನಿಂತಾಗ ರೆಕ್ಕೆಗಳನ್ನು ಮುದುರಿಕೊಳ್ಳುತ್ತಿದ್ದವು. ಅವುಗಳ ತಲೆಗಳ ಮೇಲ್ಗಡೆಯ ಗವಿಯಾಕೃತಿಯ ಮೇಲಿಂದ ಒಂದು ಧ್ವನಿ ನನ್ನ ಕಿವಿಗೆ ಬಿತ್ತು. ಅವುಗಳ ತಲೆಗಳ ಮೇಲ್ಗಡೆಯ ಗವಿಯಾಕೃತಿಯ ಮೇಲೆ ಇಂದ್ರ ನೀಲ ಮಣಿಯಂತೆ ಹೊಳೆಯುವ ಸಿಂಹಾಸನ ಕಾರವು ಕಾಣಿಸಿತು; ಅದರ ಮೇಲೆ ನರನ ರೂಪವುಳ್ಳ ಒಬ್ಬಾತನು ಆಸೀನನಾಗಿದ್ದನು. ಸೊಂಟದ ಹಾಗೆ ತೋರುವ ಆತನ ಮಧ್ಯೆ ಭಾಗದಿಂದ ಮೇಲ್ಗಡೆ ಸುವರ್ಣವು ಥಳಥಳಿಸುತ್ತದೋ, ಬೆಂಕಿಯು ಆ ರೂಪದೊಳಗೆಲ್ಲಾ ಪ್ರಜ್ವಲಿಸುತ್ತದೋ ಎಂಬಂತಿರುವ ಅದ್ಬುತ ಕಾಂತಿಯನ್ನು ನಾನು ಕಂಡೆ; ಸೊಂಟದ ಹಾಗೆ ತೋರುವ ಆತನ ಮಧ್ಯೆ ಭಾಗದಿಂದ ಕೆಲಗಡೆ ಬೆಂಕಿ ಉರಿಯುತ್ತದೋ ಎಂಬಂತಿರುವ ಮಹಾ ತೇಜಸ್ಸನ್ನು ನೋಡಿದೆ; ಪ್ರಕಾಶವು ಆತನನ್ನು ಆವರಿಸಿಕೊಂಡಿತು. ಮಳೆಗಾಲದಲ್ಲಿ ಮೇಘಮಂಡಲದೊಳಗೆ ಕಾಮನ ಬಿಲ್ಲು ಹೊಳೆಯುವಂತೆ ಆತನ ಸುತ್ತಲು ಪ್ರಕಾಶ ಹೊಳೆಯುತ್ತಿತ್ತು. ಹೀಗೆ ಸರ್ವೇಶ್ವರ ಮಹಿಮಾದ್ಬುತ ದರ್ಶನವು ಆಯಿತು. ಇದನ್ನು ಕಂಡು ನಾನು ಅಡ್ಡ ಬಿದ್ದೆ; ಮಾತಾಡುವಾತನ ವಾಣಿಯನ್ನು ಕೇಳಿದೆ.

ಕೀರ್ತನೆ: 148: 1-2, 11-12, 13,14
ಶ್ಲೋಕ: ಹೊಗಳಲಿ ಎಲ್ಲರು ಭೂಮ್ಯಾಕಾಶ ಮೀರಿದ ಆತನ ಮಹಿಮೆಯನು.

ಶುಭಸಂದೇಶ: ಮತ್ತಾಯ: 17: 22-27
ಶಿಷ್ಯರೆಲ್ಲರು ಒಮ್ಮೆ ಗಲಿಲೇಯದಲ್ಲಿ ಒಟ್ಟಿಗೆ ಸೇರಿದ್ದರು. ಆಗ ಯೇಸು ಅವರಿಗೆ, "ನರಪುತ್ರನನ್ನು ಜನರ ವಶಕ್ಕೆ ಒಪ್ಪಿಸಲಾಗುವುದು; ಅವರು ಆತನನ್ನು ಕೊಳ್ಳುವರು. ಆದರೆ ಮೂರನೆಯ ದಿನ ಆತನನ್ನು ಪುನರುತ್ಥಾನಗೊಳಿಸಲಾಗುವುದು," ಎಂದರು. ಅದನ್ನು ಕೇಳಿ ಶಿಷ್ಯರು ತುಂಬ ವ್ಯಥೆಗೊಂಡರು. ಯೇಸು ಮತ್ತು ಶಿಷ್ಯರು ಕಫೆರ್ನವುಮಿಗೆ ಹೋದರು. ದೇವಾಲಯದ ತೆರಿಗೆಯನ್ನು ವಸೂಲಿ ಮಾಡುತ್ತಿದ್ದವರು ಪೇತ್ರನ ಬಳಿಗೆ ಬಂದು, "ನಿಮ್ಮ ಗುರು ತೆರಿಗೆ ಕಟ್ಟುವುದಿಲ್ಲವೇ?" ಎಂದು ವಿಚಾರಿಸಿದರು. ಅದಕ್ಕೆ ಪೇತ್ರನು, "ಹೌದು ಕಟ್ಟುತ್ತಾರೆ," ಎಂದು ಉತ್ತರವಿತ್ತನು. ಬಳಿಕ ಮನೆಗೆ ಬಂದಾಗ, ಅವನು ಮಾತೆತ್ತುವುದಕ್ಕೆ ಮೊದಲೇ ಯೇಸು "ಸಿಮೋನಾ, ನಿನಗೆ ಏನನಿಸುತ್ತದೆ? ಇಹಲೋಕದ ರಾಜರು ಕಂದಾಯವನ್ನಾಗಲಿ, ತೆರಿಗೆಯನ್ನಾಗಲಿ ಯಾರಿಂದ ವಸೂಲಿ ಮಾಡುತ್ತಾರೆ? ತಮ್ಮ ಪುತ್ರರಿಂದಲೋ ಅಥವಾ ಪರರಿಂದಲೋ?" ಎಂದು ಕೇಳಿದರು. "ಪರರಿಂದಲೇ," ಎಂದು ಪೇತ್ರನು ಉತ್ತರ ಕೊಟ್ಟನು. ಯೇಸು, "ಹಾಗಾದರೆ, ಪುತ್ರರು ತೆರಿಗೆ ಕಟ್ಟಬೇಕಾಗಿಲ್ಲ ತಾನೇ? ಆದರೂ ನಾವು ಇವರಿಗೆ ಅಡ್ಡಿಯಾಗಬಾರದು ಎಂದೇ ನೀನು ಸರೋವರಕ್ಕೆ ಹೋಗಿ ಗಾಳ ಹಾಕು. ಮೊದಲು ಸಿಕ್ಕುವ ಮೀನನ್ನು ಎತ್ತಿಕೊಂಡು ಅದರ ಬಾಯಿ ತೆರೆದು ನೋಡು. ಅದರಲ್ಲಿ ಒಂದು ಬೆಳ್ಳಿ ನಾಣ್ಯ ದೊರಕುವುದು. ಅದನ್ನು ತಂದು ನನ್ನ ಮತ್ತು ನಿನ್ನ ಪರವಾಗಿ ಅವರಿಗೆ ಕೊಡು," ಎಂದರು.

12.08.2018


ಸಾಧಾರಣ ಕಾಲದ ಹತ್ತೊಂಭತ್ತನೆಯ ಭಾನುವಾರ 



ಮೊದಲನೆಯ ವಾಚನ 1 ಅರಸುಗಳು 19 : 4-8

ಎಲೀಯನು ತಾನೊಬ್ಬನೇ, ಮರುಭೂಮಿಯಲ್ಲಿ ಒಂದು ದಿವಸದ ಪ್ರಯಾಣದಷ್ಟು ದೂರ ಹೋಗಿ, ಒಂದು ಜಾಲೀಗಿಡದ ಕೆಳಗೆ ಕುಳಿತುಕೊಂಡು ಮರಣವನ್ನು ಅಪೇಕ್ಷಿಸಿದನು. " ಸರ್ವೇಶ್ವರಾ, ನನಗೆ ನನಗೆ ಸಾಕಾಯಿತು ನನ್ನ ಪ್ರಾಣವನ್ನು ತೆಗೆದು ಬಿಡಿ; ನನ್ನ ಪೂರ್ವಜರಿಗಿಂತ ನಾನು ಉತ್ತಮನಲ್ಲ." ಎಂದು ದೇವರನ್ನು ಪ್ರಾರ್ಥಿಸಿದನು ಬಳಿಕ ಅದೇ ಗಿಡದ ಕೆಳಗೆ ಮಲಗಿಕೊಂಡು ನಿದ್ರೆ ಮಾಡಿದನು. ಕೂಡಲೇ ಒಬ್ಬ ದೇವದೂತನು ಅವನನ್ನು ತಟ್ಟಿ, "ಎದ್ದು ಊಟ ಮಾಡು," ಎಂದು ಹೇಳಿದನು. ಎಲೀಯನು ಎದ್ದು ಸುತ್ತಲೂ ನೋಡಿದನು. ಕೆಂಡದ ಮೇಲೆ ಸುಟ್ಟ ರೊಟ್ಟಿಯೂ ಒಂದು ತಂಬಿಗೆ ನೀರೂ ತನ್ನ ತಲೆಯ ಹತ್ತಿರ ಇದ್ದವು.  ಅವುಗಳನ್ನು ತೆಗೆದುಕೊಂಡು ತಿಂದು, ಕುಡಿದು ಪುನ: ಮಲಗಿದನು. ಸರ್ವೇಶ್ವರನ ದೂತನು ಎರಡನೆಯ ಸಾರಿ ಬಂದು ಅವನನ್ನು ತಟ್ಟಿ, "ಎದ್ದು ಊಟ ಮಾಡು; ನೀನು ನಿನ್ನ ಶಕ್ತಿ ಮೀರುವಷ್ಟು ಪ್ರಯಾಣ ಮಾಡಬೇಕಾಗಿದೆ," ಎಂದನು ಅವನು ಎದ್ದು ತಿಂದು ಕುಡಿದು ಅದರ ಬಲದಿಂದ ನಾಲ್ವತ್ತು ದಿವಸ ಹಗಲಿರುಳು ಪ್ರಯಾಣ ಮಾಡಿದನು  

ಕೀರ್ತನೆ 34: 2-3 , 4-5, 6-7, 8-9  

ಶ್ಲೋಕ : ಸವಿದು ನೋಡು ಪ್ರಭುವಿನ ಮಾಧುರ್ಯವನು
ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ


ಎರಡನೆಯ ವಾಚನ ಎಫಸಿಯರಿಗೆ 4:30 - 5:2

ದೇವರ ಪವಿತ್ರಾತ್ಮರನ್ನು ನೋಯಿಸದಿರಿ; ವಿವೇಚನೆಯ ದಿನದಂದು ನಿಮಗೆ ದೇವರಿಗೆ ಸೇರಿದವರು ಎಂಬುದನ್ನು ತೋರಿಸಲು ನಿಮ್ಮ ಮೇಲೆ ಒತ್ತಲಾಗಿರುವ ಮುದ್ರೆಯು ಅವರೇ ಎಲ್ಲಾ ವಿಧವಾದ ದ್ವೇಷ ದೂಷಣೆ ಕೋಪ ಕ್ರೋಧ ಮತ್ತು ಕೆಡಕುತನವನ್ನು ನಿಮ್ಮಿಂದ ದೂರ ಮಾಡಿರಿ. ಪರಸ್ಪರ ಕರುಣೆಯಿಂದಲೂ ಕನಿಕರದಿಂದಲೂ ವರ್ತಿಸಿರಿ. ಯೇಸುಕ್ರಿಸ್ತರಲ್ಲಿ ದೇವರು ನಿಮ್ಮನ್ನು ಕ್ಷಮಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಕ್ಷಮಿಸಿರಿ. ದೇವರ ಅಕ್ಕರೆಯ ಮಕ್ಕಳು ನೀವು. ಆದ್ದರಿಂದ ದೇವರನ್ನೇ ಅನುಸರಿಸಿ ಬಾಳಿರಿ. ಕ್ರಿಸ್ತೇಸು ನಮ್ಮನ್ನು ಪ್ರೀತಿಸಿ ನಮಗೋಸ್ಕರ ತಮ್ಮನ್ನೇ ಸಮರ್ಪಿಸಿದರು. ದೇವರಿಗೆ ಸುಗಂಧ ಕಾಣಿಕೆಯನ್ನಾಗಿಯೂ ಬಲಿಯನ್ನಾಗಿಯೂ ಅರ್ಪಿಸಿದರು. ಅಂತೆಯೇ ನೀವೂ  ಪ್ರೀತಿಯಿಂದ ಬಾಳಿರಿ.



ಶುಭಸಂದೇಶ : ಯೊವಾನ್ನ 6:41- 51 

ಸ್ವರ್ಗದಿಂದ ಇಳಿದು ಬಂದ ರೊಟ್ಟಿ ನಾನೇ ಎಂದು ಹೇಳಿದ್ದಕ್ಕೆ ಯಹೂದ್ಯರು ಗೊಣಗತೊಡಗಿದರು. ಅವರು, " ಈತನು ಜೋಸೆಫನ ಮಗನಾದ ಯೇಸು ಅಲ್ಲವೇ? ಈತನ ತಂದೆ ತಾಯಿ ನಮಗೆ ಗೊತ್ತಿಲ್ಲವೇ? ಅಂದಮೇಲೆ, "ನಾನು ಸ್ವರ್ಗದಿಂದ ಬಂದಿದ್ದೇನೆ" ಎಂದು ಈತನು ಹೇಳುವುದಾದರೂ ಹೇಗೆ?"  ಎಂದರು. ಅದಕ್ಕೆ ಯೇಸು, " ನಿಮ್ಮ ನಿಮ್ಮೊಳಗೆ ಗೊಣಗುಟ್ಟದಿರಿ. ನನ್ನನ್ನು ಕಳುಹಿಸಿಕೊಟ್ಟ ಪಿತನು, ನನ್ನತ್ತ ಸೆಳೆಯದ ಹೊರತು, ಯಾರೂ ನನ್ನ ಬಳಿಗೆ ಬರಲಾರರು. ಬಂದವರನ್ನು ನಾನು ಅಂತಿಮ ದಿನದಂದು ಜೀವಕ್ಕೆ ಎಬ್ಬಿಸುತ್ತೇನೆ. ದೇವರಿಂದಲೇ, ಅವರೆಲ್ಲರೂ ಬೋಧನೆ ಪಡೆಯುವರು,’ ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದಿದೆ. ಪಿತನಿಗೆ ಕಿವಿಗೊಟ್ಟು ಅವರಿಂದಲೇ ಕಲಿತುಕೊಂಡ ಪ್ರತಿಯೊಬ್ಬನೂ ನನ್ನ ಬಳಿಗೆ ಬರುತ್ತಾನೆ. ಹಾಗೆಂದ ಮಾತ್ರಕ್ಕೆ ಪಿತನನ್ನು ಯಾರಾದರೂ ಕಣ್ಣಾರೆ ಕಂಡಿದ್ದಾರೆ ಎಂದಲ್ಲ, ದೇವರಿಂದ ಬಂದಿರುವ ಒಬ್ಬನು ಮಾತ್ರ ಪಿತನನ್ನು ಕಂಡಿದ್ದಾನೆ. ವಿಶ್ವಾಸವುಳ್ಳವನಲ್ಲಿ ನಿತ್ಯ ಜೀವ ಇದೆಯೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.  ಜೀವದಾಯಕ ರೊಟ್ಟಿ ನಾನೇ. ನಿಮ್ಮ ಪೂರ್ವಜರು ಮರಳುಗಾಡಿನಲ್ಲಿ ’ಮನ್ನಾ’ ವನ್ನು ತಿಂದರು; ಆದರೂ ಸಾವಿಗೆ ತುತ್ತಾದರು. ಸ್ವರ್ಗದಿಂದ ಇಳಿದು ಬಂದ ರೊಟ್ಟಿಯಾದರೂ ಹಾಗಲ್ಲ. ಇದನ್ನು ತಿನ್ನುವ ಯಾರಿಗೂ ಸಾವೆಂಬುದು ಇಲ್ಲ ನಾನೇ ಸ್ವರ್ಗದಿಂದ ಇಳಿದು ಬಂದ ಜೀವಂತ ರೊಟ್ಟಿ. ಈ ರೊಟ್ಟಿಯನ್ನು ತಿಂದವನು ಚಿರಕಾಲ ಬಾಳುತ್ತಾನೆ. ಲೋಕೋದ್ಧಾರಕ್ಕಾಗಿ ನಾನು ಅರ್ಪಿಸುವ ನನ್ನ ಮಾಂಸವೇ ನಾನು ಕೊಡುವ ರೊಟ್ಟಿ," ಎಂದು ಹೇಳಿದರು.

11.08.2018

ಸಾಧಾರಣ ಕಾಲದ ಹದಿನೆಂಟನೆಯ ವಾರ - ಶನಿವಾರ

ಮೊದಲನೇ ವಾಚನ: ಹಬಕ್ಕೂಕ  1:12-2:4

ಸರ್ವೇಶ್ವರಾ, ನನ್ನ ದೇವರೇ, ಪರಮಪಾವನ ಸ್ವಾಮಿಯೇ, ಅನಾದಿಯಿಂದ ಇರುವಂಥವರು ನೀವು. ನಾವು ಖಂಡಿತ ಸಾಯುವುದಿಲ್ಲ. ನಮ್ಮನ್ನು ದಂಡಿಸುವಂತೆ ಆ ಬಾಬಿಲೋನಿನವರನ್ನು ನೇಮಿಸಿದವರು ನೀವು; ಅವರನ್ನು ಪ್ರಬಲಗೊಳಿಸಿದವರು ನೀವು. ನಮಗೆ ಪೊರೆಬಂಡೆ ನೀವೇ. ಕೇಡನ್ನು ನೋಡಲಾರದಷ್ಟು ನಿಷ್ಕಳಂಕ ನಿಮ್ಮ ಕಣ್ಣು. ಕೆಡುಕನ್ನು ಸಹಿಸಲಾಗದಷ್ಟು ಪವಿತ್ರರು ನೀವು. ಇಂತಿರಲು ಕೆಡುಕನ್ನು ನೋಡಿಕೊಂಡಿರುವಿರೇಕೆ? ದುಷ್ಟನು ಶಿಷ್ಟನಾದವನನ್ನು ಕಬಳಿಸುತ್ತಿರುವುದನ್ನು ನೋಡಿ ಸುಮ್ಮನಿರುವಿರೇಕೆ? ಮನುಜರನ್ನು ಕಡಲ ಮೀನುಗಳಿಗೆ ಸಮನಾಗಿಸಿರುವಿರಿ, ಏಕೆ? ನಾಯಕನ್ನಿಲ್ಲದ  ಕ್ರೀಮಿಕೀಟಗಳ ಗತಿಗೆ ಇಳಿಸಿರುವಿರಿ, ಏಕೆ? ಈ ಕಾರಣ ಆ ಬಾಬಿಲೋನಿಯರು ಮಾನವರನ್ನು ಗಾಳದಿಂದ ಸೆಳೆದುಕೊಳ್ಳುತ್ತಾರೆ; ಬಲೆಯಿಂದ ಬಾಚಿಕೊಳ್ಳುತ್ತಾರೆ; ತಮ್ಮ ಜಾಲದಲ್ಲಿ ರಾಶಿ ಹಾಕಿಕೊಳ್ಳುತ್ತಾರೆ; ಹಿರಿಹಿರಿ ಹಿಗ್ಗುತ್ತಾರೆ. ತಮ್ಮ ಬಲೆಗೆ ಬಲಿ ಕೊಡುತ್ತಾರೆ; ಧೂಪ ಹಾಕುತ್ತಾರೆ. ಅವುಗಳ ಮೂಲಕವೇ ಅವರ ಜೀವನ ಗಟ್ಟಿ; ಅವರ ಭೋಜನ ಪುಷ್ಟಿ. ಹೀಗೆ ಅವರು ನಿರಂತರವಾಗಿ ತಮ್ಮ ಬಲೆಯಿಂದ ಭಾಗ್ಯವನ್ನು ಪಡೆದುಕೊಳ್ಳುತ್ತಿರಬೇಕೋ? ದಯ ದಾಕ್ಷಿಣ್ಯವಿಲ್ಲದೆ ರಾಷ್ಟ್ರಗಳನ್ನು ನಾಶ ಮಾಡುತ್ತಿರಬೇಕೋ? ನಾನು ಕಾವಲುಗಾರನಾಗಿ ನಿಲ್ಲುವೆನು. ಕಾವಲು ಗೋಪುರವನ್ನೇ ಹತ್ತಿ ನಿಂತುಕೊಳ್ಳುವೆನು. ಸರ್ವೇಶ್ವರ ನನಗೆ ಏನು ಹೇಳುವರೋ, ಯಾವ ಉತ್ತರ ಕೊಡುವರೋ, ಎಂದು ಎದುರು ನೋಡುವೆನು." ಆಗ ಸರ್ವೇಶ್ವರ ನನಗೆ ಕೊಟ್ಟ ಉತ್ತರ ಇದು. "ನೀನು ಕಂಡ ದರ್ಶನವನ್ನು ಬರೆ. ಓದುವವನು ಶೀಘ್ರವಾಗಿ ಓದುವಂತೆ ಹಲಗೆಗಳ ಮೇಲೆ ಅದನ್ನು ಕೆತ್ತು. ನಿಯಮಿತ ಕಾಲದಲ್ಲಿ ಆ ದರ್ಶನ ನೆರವೇರುವುದು. ಅದರ ಅಂತಿಮ ಪರಿಣಾಮ ಶೀಘ್ರದಲ್ಲಿ ಗೊತ್ತಾಗುವುದು. ತಡವಾದರೂ ಕಾದಿರು; ಮೋಸ ಮಾಡದು. ಅದು ಖಂಡಿತವಾಗಿ ಕೈಗೂಡುವುದು; ತಾಮಸವಾಗದು. ನೋಡು, ನೇರ ಮನಸ್ಕನಲ್ಲದವನು, ಉಬ್ಬಿ ಹೋಗಿರುವ ಆ ದುರ್ಜನನು ಉಳಿಯನು; ದೇವರೊಂದಿಗೆ ಸತ್ಸಂಬಧ ಹೊಂದಿರುವ ಸಜ್ಜನನು ವಿಶ್ವಾಸದಿಂದಲೇ ಬಾಳುವನು".

ಕೀರ್ತನೆ: 9: 8-9, 10-11, 12-13
ಶ್ಲೋಕ: ನಿನ್ನನ್ನು ಹರುಸುವವರನು ಹೇ ಪ್ರಭು ನೀ ಕೈಬಿಡುವವನಲ್ಲ.



ಶುಭಸಂದೇಶ: ಮತ್ತಾಯ: 17: 14-20


ಜನರ ಗುಂಪು ಇದ್ದಲ್ಲಿಗೆ ಅವರೆಲ್ಲರು ಮರಳಿ ಬಂದರು. ಆಗ ಒಬ್ಬನು ಯೇಸುಸ್ವಾಮಿಯ ಬಳಿಗೆ ಬಂದು, "ಪ್ರಭು, ನನ್ನ ಮಗನ ಮೇಲೆ ಕನಿಕರವಿಡಿ, ಅವನು ಮೂರ್ಛಾರೋಗಿ, ಅವನ ಕಷ್ಟ ಹೇಳತೀರದು, ಆಗಾಗ ಬೆಂಕಿಯಲ್ಲೋ ನೀರಿನಲ್ಲೋ ಬಿದ್ದು ಬಿಡುತ್ತಾನೆ. ಅವನನ್ನು ತಮ್ಮ ಶಿಷ್ಯರ ಬಳಿಗೆ ಕರೆದುಕೊಂಡು ಬಂದೆ. ಆದರೆ ಅವನನ್ನು ಗುಣ ಪಡಿಸಲು ಅವರಿಂದಾಗಲಿಲ್ಲ," ಎಂದು ಮೊಣಕಾಲೂರಿ ಯಾಚಿಸಿದನು. ಅದಕ್ಕೆ ಯೇಸು, "ಅಯ್ಯೋ ವಿಶ್ವಾಸವಿಲ್ಲದ ವಕ್ರ ಪೀಳಿಗೆಯೇ, ಇನ್ನೆಷ್ಟು ಕಾಲ ನಾನು ನಿಮ್ಮೊಂದಿಗಿರಲಿ? ಇನ್ನೆಷ್ಟು ಕಾಲ ನಿಮ್ಮನ್ನು ಸಹಿಸಿಕೊಳ್ಳಲಿ?" ಎಂದು ಹೇಳಿ, "ಆ ಹುಡುಗನನ್ನು ಇಲ್ಲಿ ನನ್ನ ಬಳಿಗೆ ಕರೆದುಕೊಂಡು ಬನ್ನಿ," ಎಂದರು. ಅನಂತರ ಆ ಹುಡುಗನಲ್ಲಿದ್ದ ದೆವ್ವವನ್ನು ಅವರು ಗದರಿಸಿದೊಡನೆಯೇ ಅದು ಅವನನ್ನು ಬಿಟ್ಟು ಹೋಯಿತು. ಅವನು ತಕ್ಷಣವೇ ಸ್ವಸ್ಥನಾದನು. ತರುವಾಯ ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, "ಆ ದೆವ್ವವನ್ನು ಬಿಡಿಸಲು ನಮ್ಮಿಂದಾಗಲಿಲ್ಲವಲ್ಲಾ, ಅದೇಕೇ?" ಎಂದು ಕೇಳಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ನಿಮ್ಮ ಅಲ್ಪ ವಿಶ್ವಾಸವೇ ಅದಕ್ಕೆ ಕಾರಣ. ನಾನು ನಿಶ್ಚಯವಾಗಿ ಹೇಳುತ್ತೇನೆ: ನಿಮಗೆ ಸಾಸಿವೆ ಕಾಳಿನಷ್ಟು ವಿಶ್ವಾಸವಾದರು ಇದ್ದಲ್ಲಿ, ಈ ಬೆಟ್ಟಕ್ಕೆ ಇಲ್ಲಿಂದ ಆ ಸ್ಥಳಕ್ಕೆ ಹೋಗು, ಎಂದು ಹೇಳಿದರೆ ಅದು ಹೋಗುತ್ತದೆ. ನಿಮ್ಮಿಂದ ಅಸಾಧ್ಯವಾದುದು ಒಂದೂ ಇರದು," ಎಂದರು.

10.08.2018

ಮೊದಲನೇ ವಾಚನ: 2 ಕೊರಿಂಥಿ 9:6-10 


ವಿರಳವಾಗಿ ಬಿತ್ತುವವನು ವಿರಳವಾಗಿ ಕೊಯ್ಯುತ್ತಾನೆ.  ಹೇರಳವಾಗಿ ಬಿತ್ತುವವನು ಹೇರಳವಾಗಿ ಕೊಯ್ಯುತ್ತಾನೆ. ಇದು ನಿಮಗೆ ತಿಳಿದಿರಲಿ. ಪ್ರತಿಯೊಬ್ಬನೂ ತನ್ನ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಷ್ಟು ನೀಡಲಿ. ಒಲ್ಲದ ಮನಸ್ಸಿನಿಂದಾಗಲೀ, ಬಲಾತ್ಕಾರದಿಂದಾಗಲೀ ಕೊಡುವುದು ಬೇಡ. ನಗುನಗುತ್ತಾ ನೀಡುವಾತನನ್ನು ದೇವರು ಪ್ರೀತಿಸುತ್ತಾರೆ. ಸಕಲ ವಿಧವಾದ ವರದಾನಗಳನ್ನು ನಮಗೆ ಯಥೇಚ್ಛವಾಗಿ ನೀಡಬಲ್ಲ ಶಕ್ತಿ ದೇವರಿಗಿದೆ. ನೀವು ಸದಾ ಸಮೃದ್ಧಿಯಿಂದಿರುವಿರಿ. ಹೀಗೆ ಸಕಲ ಸತ್ಕಾರ್ಯಗಳಿಗೆ ಹೃತ್ಪೂರ್ವಕವಾಗಿ ನೆರವಾಗುವಿರಿ. "ದೀನದಲಿತರಿಗೆ ಧಾರಾಳವಾಗಿ ನೀಡುವವನು; ಅನವರತ ಇರುವುದು ಅವನ ದಾನಧರ್ಮದ ಫಲವು," ಎಂದು ಪವಿತ್ರ  ಗ್ರಂಥದಲ್ಲಿ ಬರೆದಿದೆ. ಬಿತ್ತುವವನಿಗೆ ಬೀಜವನ್ನೂ ಉಣ್ಣುವವನಿಗೆ ಊಟವನ್ನೂ ಒದಗಿಸುವ ದೇವರು, ಬಿತ್ತನೆಗೆ ಬೇಕಾದ ಬೀಜವನ್ನು ನಿಮಗೂ ಕೊಟ್ಟು ಅದನ್ನು ಬೆಳೆಸುವರು. ನಿಮ್ಮ ದಾನಧರ್ಮದ ಫಲಗಳು ಸಮೃದ್ಧಿಗೊಳ್ಳುವಂತೆ ಮಾಡುವರು.

ಕೀರ್ತನೆ: 112:1-2,5-6, 7-8, 9 
ಶ್ಲೋಕ: ದಯೆತೋರಿ ಧನಸಹಾಯ ಮಾಡುವವನು ಭಾಗ್ಯವಂತನು. 


ಶುಭಸಂದೇಶ: ಯೊವಾನ್ನ 12:24-26 


ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಗೋಧಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಅದು ಒಂಟಿಯಾಗಿ ಉಳಿಯುತ್ತದೆ; ಅದು ಸತ್ತರೆ ಮಾತ್ರ ಸಮೃದ್ಢಿಯಾದ ಫಲವನ್ನು ಕೊಡುತ್ತದೆ. ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ತನ್ನ ಪ್ರಾಣವನ್ನು ಈ ಲೋಕದಲ್ಲಿ ದ್ವೇಷಿಸುವವನು ಅದನ್ನು ನಿತ್ಯ ಜೀವಕ್ಕಾಗಿ ಕಾಯ್ದಿರಿಸಿಕೊಳ್ಳುತ್ತಾನೆ.  ನನ್ನ ಸೇವೆ ಮಾಡಬೇಕೆಂದಿರುವವನು ನನ್ನನ್ನು ಹಿಂಬಾಲಿಸಲಿ. ಆಗ ನಾನಿರುವಲ್ಲಿಯೇ ನನ್ನ ಸೇವಕನೂ ಇರುತ್ತಾನೆ. ನನ್ನ ಸೇವೆ ಮಾಡುವವನು ನನ್ನ ಪಿತನಿಂದ ಸನ್ಮಾನ ಹೊಂದುತ್ತಾನೆ," ಎಂದರು.

09.08.2018

ಮೊದಲನೇ ವಾಚನ: ಯೆರೆಮೀಯ 31:31-34 

ಸರ್ವೇಶ್ವರ ಹೇಳುವುದನ್ನು ಕೇಳಿ: "ನಾನು ಇಸ್ರಯೇಲ್ ವಂಶದವರೊಂದಿಗೂ ಯೆಹೂದ್ಯ ವಂಶದವರೊಂದಿಗೂ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವುವು. ಈ ಒಡಂಬಡಿಕೆ ನಾನು ಅವರ ಪೂರ್ವಜರನ್ನು ಕೈ ಹಿಡಿದು ಈಜಿಪ್ಟಿನಿಂದ ಕರೆದು ತಂದಾಗ ಅವರೊಡನೆ ಮಾಡಿಕೊಂಡ ಒಡಬಂಡಿಕೆ ಅಂಥದಾಗಿ ಇರುವುದಿಲ್ಲ. ನಾನು ಅವರಿಗೆ ಯಜಮಾನನಾಗಿ ಇದ್ದರೂ ಆ ನನ್ನ ಒಡಂಬಡಿಕೆಯನ್ನು ಅವರು ಮೀರಿ ನಡೆದರು. ಸರ್ವೇಶ್ವರನಾದ ನಾನು ಹೇಳುತ್ತೇನೆ ಕೇಳಿ: "ಆ ದಿನಗಳು ಬಂದಮೇಲೆ ನಾನು ಇಸ್ರಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆ ಹೀಗಿರುವುದು - ನನ್ನ ಧರ್ಮಶಾಸ್ತ್ರವನ್ನು ಅವರ ಅಂತರಂಗದಲ್ಲಿ ಇಡುವೆನು. ಅವರ ಹೃದಯದ ಹಲಗೆಯ ಮೇಲೆ ಬರೆಯುವೆನು. ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು. ಒಬ್ಬನು ತನ್ನ ನೆರೆಹೊರೆರವರನ್ನು ಕುರಿತು ಅಥವಾ ಅಣ್ಣ ತಮ್ಮಂದಿರನ್ನು ಕುರಿತು, "ಸರ್ವೇಶ್ವರನನ್ನು ಅರಿತುಕೋ" ಎಂದ ಬೋಧಿಸಬೇಕಾಗಿರುವುದಿಲ್ಲ, ಚಿಕ್ಕವರಿಂದ ಮೊದಲ್ಗೊಂಡು ದೊಡ್ಡವರ ತನಕ ಎಲ್ಲರು ನನ್ನನ್ನು ಅರಿತುಕೊಳ್ಳುವರು. ನಾನು ಅವರ ಅಪರಾಧವನ್ನು ಕ್ಷಮಿಸಿ, ಅವರ ಪಾಪಗಳನ್ನು ಎಂದಿಗೂ ನೆನಪಿಗೆ ತಂದುಕೊಳ್ಳುವುದಿಲ್ಲ. ಇದು ಸರ್ವೇಶ್ವರನಾದ ನನ್ನ ನುಡಿ." 

ಕೀರ್ತನೆ: 51:12-13, 14-15, 18-29 
ಶ್ಲೋಕ ವಿಧೇಯನಾಗಿ ನಡೆದ ಸಿದ್ದಮನಸ್ಸನ್ನು ನೀಡು ಪ್ರಭು 

ಶುಭಸಂದೇಶ: ಮತ್ತಾಯ  16:13-23 
ಯೇಸುಸ್ವಾಮಿ "ಫಿಲಿಪ್ಪನ ಸೆಜರೇಯ" ಎಂಬ ಪ್ರಾಂತ್ಯಕ್ಕೆ ಬಂದರು. ಅಲ್ಲಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ನರಪುತ್ರನನ್ನು ಜನರು ಯಾರೆಂದು ಹೇಳುತ್ತಾರೆ?" ಎಂದು ಕೇಳಿದರು. ಅದಕ್ಕೆ ಶಿಷ್ಯರು, "ಸ್ನಾನಿಕ ಯೊವಾನ್ನ", ಎಂದು ಕೆಲವರು ಹೇಳುತ್ತಾರೆ; ಮತ್ತೆ ಕೆಲವರು, "ಎಲಿಯನು" ಎನ್ನುತ್ತಾರೆ", "ಯೆರೆಮೀಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು." ಎಂಬುದು ಇನ್ನೂ ಕೆಲವರ ಅಭಿಪ್ರಾಯ, ಎಂದು ಉತ್ತರ ಕೊಟ್ಟರು. ಆಗ ಯೇಸು, "ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?" ಎಂದು ಪ್ರಶ್ನಿಸಿದರು. ಅದಕ್ಕೆ ಪೇತ್ರನು, "ಅಭಿಷಿಕ್ತರಾದ ಲೋಕೋದ್ದಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ," ಎಂದನು. ಅದಕ್ಕೆ ಪ್ರತ್ಯತ್ತರವಾಗಿ ಯೇಸು ಹೀಗೆಂದರು: "ಯೋನ್ನನ ಮಗ ಸಿಮೋನನೇ, ನೀನು ಧನ್ಯ! ಈ ವಿಷಯವನ್ನು ನಿನಗೆ ಶ್ರುತ ಪಡಿಸಿದ್ದು ನರಮಾನವರ ಶಕ್ತಿ ಅಲ್ಲ, ಸ್ವರ್ಗದಲ್ಲಿರುವ ನನ್ನ ಪಿತನೇ. ನಾನು ನಿನಗೆ ಹೇಳುತ್ತೇನೆ, ಕೇಳು: ನಿನ್ನ ಹೆಸರು ಪೇತ್ರ; ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು. ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು. ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತೀಯೋ ಅದನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿ ಬಿಚ್ಚಲಾಗುವುದು." ಆನಂತರ ಯೇಸು ತಮ್ಮ ಶಿಷ್ಯರಿಗೆ ತಾವು "ಅಭಿಷಿಕ್ತರಾದ ಲೋಕೋದ್ಧಾರಕ" ಎಂಬುದನ್ನು ಯಾರಿಗೂ ಹೇಳಕೂಡದುದೆಂದು ಕಟ್ಟಪ್ಪಣೆ ಮಾಡಿದರು. ಯೇಸುಸ್ವಾಮಿ ತಮ್ಮ ಶಿಷ್ಯರಿಗೆ, " ನಾನು ಜೆರುಸಲೇಮಿಗೆ ಹೋಗಬೇಕಾಗಿದೆ; ಅಲ್ಲಿ ಸಭಾ ಪ್ರಮುಖರಿಂದಲೂ ಮುಖ್ಯ ಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಕಠಿಣವಾದ ಯಾತನೆಯನ್ನು ಅನುಭವಿಸಿ, ಮರಣಕ್ಕೆ ತುತ್ತಾಗಿ, ಮೂರನೆಯ ದಿನ ಪುನರುತ್ದಾನ ಹೊಂದಬೇಕಾಗಿದೆ" ಎಂದು ಅಂದಿನಿಂದಲೂ ಒತ್ತಿ ಹೇಳಲಾರಂಭಿಸಿದರು. ಇದನ್ನು ಕೇಳಲಾಗದೆ ಪೇತ್ರನು ಯೇಸುವನ್ನು ಪಕ್ಕಕ್ಕೆ ಕರೆದು, "ಪ್ರಭೂ ಹಾಗೆನ್ನಲೇಬೇಡಿ, ನಿಮಗೆಂದಿಗೂ ಹಾಗೆ ಸಂಭವಿಸದಿರಲಿ." ಎಂದು ಪ್ರತಿಭಟಿಸಿದನು. ಆದರೆ ಯೇಸು ಪೇತ್ರನತ್ತ ತಿರುಗಿ, "ಸೈತಾನನೇ, ತೊಲಗಿಲ್ಲಿಂದ; ನೀನು ನನಗೆ ಅಡತಡೆ; ನಿನ್ನ ಈ ಆಲೋಚನೆ ಮನುಷ್ಯರದ್ದೇ ಹೊರತು, ದೇವರದಲ್ಲ," ಎಂದರು


16.10.2026 - IIಶುಕ್ರವಾರ IIನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಭಯಪಡಬೇಡಿ

  ಮೊದಲನೆಯ ವಾಚನ: ರೋಮನರಿಗೆ 4:1-8 ಸಹೋದರರೇ, ವಂಶಾನುಕ್ರಮವಾಗಿ ನಮ್ಮ ಮೂಲಪಿತನಾದ ಅಬ್ರಹಾಮನ ಅನುಭವವನ್ನು ಕುರಿತು ಏನು ಹೇಳೋಣ? ಆತನು ತನ್ನ ಸತ್ಕಾರ್ಯಗಳಿಂದ ದೇವರೊಡನೆ...