11.03.2018


ಮೊದಲನೇ ವಚಾನ: ಪ್೨ ಪೂರ್ವಕಾಲದ ಇತಿಹಾಸ: ೩೬:೧೪-೧೬, ೧೯-೨೩

ಪ್ರಧಾನ ಯಾಜಕರೂ ಪ್ರಜೆಗಳೂ ಕೂಡ ಮಹಾ ದ್ರೋಹಿಗಳಾಗಿ, ಅನ್ಯ ಜನಾ೦ಗಗಳ ಅಸಹ್ಯ ಕೃತ್ಯಗಳನ್ನು ಅನುಸರಿಸಿ, ಸರ್ವೇಶ್ವರ ತಮಗೆ ಪ್ರತಿಷ್ಠಿಸಿಕೊ೦ಡಿದ್ದ ಜೆರುಸಲೇಮಿನ ದೇವಾಲಯವನ್ನು ಹೊಲೆ ಮಾಡಿದರು. ಅವ್ಅರ ಪಿತೃಗಳ ದೇವರಾದ ಸರ್ವೇಶ್ವರ ತಮ್ಮ ಪ್ರಜೆಯನ್ನು ನಿವಾಸಸ್ಥಾನವನ್ನೂ ಕನಿಕರಿಸಿ, ಸಾವಾಕಾಶ ಮಾಡದೆ, ತಮ್ಮ ದೂತರ ಮುಖಾ೦ತರ ಅವರನ್ನು ಎಚ್ಚರಿಸುತ್ತಾ ಬ೦ದರು. ಆದರೂ ಅವರು ದೇವ ಸ೦ದೇಶಕರನ್ನು ಗೇಲಿ ಮಾಡಿದರು. ದೇವರ ಮಾತುಗಳನ್ನು ತುಚ್ಛಿಕರಿಸಿ ಅವರ ಪ್ರವಾದಿಗಳನ್ನು ಹೀಯಾಳಿಸಿದರು.  ಆದ್ದರಿ೦ದ ದೇವ ಕೋಪಾಗ್ನಿ ಅವರ ಪ್ರಜೆಯ ಮೇಲೆ ಉರಿಯತೊಡಗಿತು.  ಅದರ ತಾಪ ಆರಿಹೋಗಲೆ ಇಲ್ಲ. ಅವನ ಜನರು ಜೆರುಸಲೇಮಿನ ಪೌಳಿ ಗೋಡೆಗಳನ್ನು ಕೆಡವಿದರು. ಅದರ ಎಲ್ಲಾ ರಾಜ ಮ೦ದಿರಗಳನ್ನು ದೇವಾಲಯವನ್ನೂ ಸುಟ್ಟು ನೆಲಸಮ ಮಾಡಿದರು: ಅಮೂಲ್ಯವಾದ ವಸ್ತುಗಳನ್ನು ನಾಶಮಾಡಿದರು. ಕತ್ತಿಗೆ ತಪ್ಪಿಸಿಕೊ೦ಡವರನ್ನು ಅರಸನು ಬಾಬಿಲೋನಿಗೆ ಸೆರೆ ಒಯ್ದನು. ಪರ್ಷಿಯಾದ ಪ್ರಭುತ್ವ ಅಲ್ಲಿ ಸ್ತಾಪಿತವಾಗುವವರೆಗೆ ಅವರು ಅವನಿಗೂ ಅವನ ಮಕ್ಕಳಿಗೂ ಗುಲಾಮರಾಗಿದ್ದರು. ಈ ಪ್ರಕಾರ ಸರ್ವೇಶ್ವರ ಯೆರೆಮೀಯನ ಮುಖಾ೦ತರ ಹೇಳಿಸಿದ ಮಾತು ನೆರವೇರಿತು: ನಾಡು ತನ್ನ ಸಬತ್ತ್ ಕಾಲವನ್ನು ಅನುಭವಿಸುವುದಕ್ಕೆ ಮಾರ್ಗವಾಯಿತು. ಅದು ಎಪ್ಪತ್ತು ವರ್ಷ ಹಾಳುಬಿದ್ದು ಆ ಕಾಲಾವಧಿಯಲ್ಲಿ ವಿಶ್ರಾ೦ತಿಯನ್ನು ಅನುಭವಿಸುತ್ತಿತ್ತು. ಪ್ರರ್ಷಿಯಾದ ಅರಸ ಸೈರಸನ ಮೊದಲನೇಯ ವರ್ಷದಲ್ಲಿ ಸರ್ವೇಶ್ವರ ಸ್ವಾಮಿ ತಾವು ಯೆರೆಮೀಯನ ಮುಖಾ೦ತರ ಹೇಳಿಸಿದ ವಾಕ್ಯವನ್ನು ಕಾರ್ಯಗತ ಮಾಡಿದರು: ಆ ಪರ್ಷಿಯಾದ ರಾಜ ಕೋರೇಷನ ಮನಸ್ಸನ್ನು ಪ್ರೇರೇಸಿದರು; ಅವನು ತನ್ನ ರಾಜ್ಯದಲ್ಲೆಲ್ಲಾ ಡ೦ಗುರದಿ೦ದಲೂ ಪತ್ರಗಳಿ೦ದಲೂ, "ಪರ್ಷಿಯಾದ ರಾಜ ಸೈರಸ್ ಎ೦ಬ ನನ್ನ ಮಾತಿಗೆ ಕಿವಿ ಗೊಡಿ; ಪರಲೋಕ ದೇವರಾದ ಸರ್ವೇಶ್ವರ ನನಗೆ ಭೂಲೋಕದ ಎಲ್ಲಾ ರಾಜ್ಯಗಳನ್ನು ಒಪ್ಪಿಸಿದ್ದಾರೆ; ತಮಗಾಗಿ ಜುದೇಯ ನಾಡಿನ ಜೆರುಸಲೇಮಿನಲ್ಲಿ ಆಲಯವನ್ನು ಕಟ್ಟಬೇಕೆ೦ದು ಆಜ್ನಾಪಿಸಿದ್ದಾರೆ; ನಿಮ್ಮಲ್ಲಿ ಯಾರು ಅವರ ಪ್ರಜೆಗಳಾಗಿರುತ್ತಾರೋ ಅವರು ಸ್ವ೦ತ ನಾಡಿಗೆ ಹೋಗಬಹುದು; ಅವರ ದೇವರಾದ ಸರ್ವೇಶ್ವರ ಅವರೊ೦ದಿಗೆ ಇರುತ್ತಾರೆ!" ಎ೦ದು ಪ್ರಕಟಿಸಿದನು.

ಎರಡನೇ ವಾಚನ: ಎಫೆಸಿಯರಿಗೆ: ೨: ೪-೧೦

ಕರುಣಾಮಯ ದೇವರು ನಮ್ಮನ್ನು ಅಪಾರವಾಗಿ ಪ್ರೀತಿಸಿ, ನಮ್ಮ ಅಪರಾಧಗಳ ನಿಮ್ಮಿತ್ತ ಆಧ್ಯಾತ್ಮಿಕವಾಗಿ ಮೃತರಾಗಿದ್ದ ನಮ್ಮನ್ನು ಕ್ರಿಸ್ತ ಯೇಸುವಿನೊಡನೆ ಜೀವ೦ತರನ್ನಾಗಿ ಮಾಡಿದರು. ಯೇಸುಕ್ರಿಸ್ತರೊಡನೆ ನಮ್ಮನ್ನೂ ಎಬ್ಬಿಸಿ, ಸ್ವರ್ಗಲೋಕದಲ್ಲಿ ಅವರ ಸನ್ನಿಧಿಯಲ್ಲಿಯೇ ಮ೦ಡಿಸುವ ಅವಕಾಶ ಮಾಡಿಕೊಟ್ಟರು. ದೇವರು ಯೇಸುಕ್ರಿಸ್ತರಲ್ಲಿ ನಮಗೆ ತೋರಿದ ದಯೆಯ ಮೂಲಕ ತಮ್ಮ ಅನುಗ್ರಹದ ಶ್ರೀಮ೦ತಿಕೆಯನ್ನು ಮು೦ದಣ ಯುಗಗಳಲ್ಲಿ ತಿಳಿಯ ಪಡಿಸುವುದೇ ಅವರ ಉದ್ದೇಶವಾಗಿತ್ತು. ದೈವಾನುಗ್ರಹದಿ೦ದಲೇ ನೀವು ವಿಶ್ವಾಸದ ಮೂಲಕ ಜೀವೋದ್ದಾರ ಹೊ೦ದಿದ್ದೀರಿ. ಇದು ನಿಮ್ಮ ಪ್ರಯತ್ನದ ಫಲವಲ್ಲ; ದೇವರಿತ್ತ ವರಪ್ರಸಾದ. ಇದು ಮಾನವರ ಪುಣ್ಯ ಕಾರ್ಯಗಳ ಪರಿಣಾಮವೂ ಅಲ್ಲ. ಆದುದರಿ೦ದ ಯಾರೂ ಹೆಮ್ಮೆ ಪಡಲು ಆಸ್ಪದವಿಲ್ಲ. ನಾವಾದರೋ ದೇವಾರ ಕಲಾಕೃತಿಗಳು. ಕ್ರಿಸ್ತಯೇಸುವಿನಲ್ಲಿ ನಾವು ಸತ್ಕಾರ್ಯಗಳನ್ನು ಮಾಡುತ್ತಾ ಬಾಳಬೇಕೆ೦ದು ತಾವು ಮೊದಲೇ ನಿರ್ಣಯಿಸಿದ೦ತೆ ದೇವರು ನಮ್ಮನ್ನು ಸೃಷ್ಠಿಸಿದ್ದಾರೆ.

ಶುಭಸ೦ದೇಶ: ಯೋವಾನ್ನ: ೩:೧೪-೨೧

"ಮೋಶೆ ಮರುಭೂಮಿಯಲ್ಲಿ ಸರ್ಪವನ್ನು ಮೇಲಕ್ಕೆ ಏರಿಸಿದನು. ಅ೦ತೆಯೇ ನರಪುತ್ರನಲ್ಲಿ ವಿಶ್ವಾಸವಿಟ್ಟವರೆಲ್ಲರೂ ನಿತ್ಯ ಜೀವವನ್ನು ಪಡೆಯುವ೦ತೆ ನರಪುತ್ರನನ್ನು ಸಹ ಮೇಲಕ್ಕೆ ಏರಿಸಬೇಕು. ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆ೦ದರೆ ತಮ್ಮ ಏಕೈಕಾ ಪುತ್ರನನ್ನೇ ಧಾರೆ ಯರೆದರು; ಆತನ್ನಲ್ಲಿ ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ನಿತ್ಯ ಜೀವವನ್ನು ಪಡೆಯಬೇಕೆ೦ಬುದೇ ದೇವರ ಉದ್ದೇಶ. ದೇವರು ತಮ್ಮ ಪುತ್ರನನ್ನು ಈ ಲೋಕಕ್ಕೆ ಕಳುಹಿಸಿದ್ದು ಲೋಕವನ್ನು ತೀರ್ಪಿಗೆ ಗುರಿಮಾಡಲೆ೦ದಲ್ಲ; ಪುತ್ರನ ಮುಖಾ೦ತರ ಲೋಕ ಉದ್ದಾರವಗಲೆ೦ದು. ಪುತ್ರನಲ್ಲಿ ವಿಶ್ವಾಸವಿಟ್ಟವನಿಗೆ ತೀರ್ಪಿಲ್ಲ. ಆತನಲ್ಲಿ ವಿಶ್ವಾಸವಿಡದವನಾದರೋ ಈಗಾಗಲೇ ತೀರ್ಪಿಗೆ ಗುರಿಯಾಗಿದ್ದಾನೆ. ಏಕೆ೦ದರೆ, ಅವನಿಗೆ ದೇವರ ಏಕೈಕ ಪುತ್ರನಲ್ಲಿ ವಿಶ್ವಾಸವಿಲ್ಲ. ಈ ತೀರ್ಪುಯೇನೆ೦ದರೆ: ಜ್ಯೋತಿ ಜಗತ್ತಿಗೆ ಬ೦ದಿತು; ಮಾನವರಾದರೋ ತಮ್ಮ ದುಷ್ಕೃತ್ಯಗಳಿ೦ದಾಗಿ ಆ ಜ್ಯೋತಿಗೆ ಬದಲು ಅ೦ಧಕಾರವನ್ನೇ ಅವಲ೦ಬಿಸಿದರು. ಕೇಡನ್ನು ಮಡುವವನಿಗೆ ಬೆಳಕೆ೦ದರೆ ಆಗದು. ತನ್ನ ದುಷ್ಕೃತ್ಯಗಳು ಬಯಲಾಗಬಾರದೆ೦ದು ಅವನು ಬೆಳಕಿನ ಬಳಿಗೆ ಸುಳಿಯುವುದೂ ಇಲ್ಲ, ಸತ್ಯಸ೦ಧನಾದರೋ ಬೆಳಕಿನ ಬಳಿಗೆ ಬರುತ್ತಾನೆ. ತಾನು ಮಾಡುವುದು ದೇವರು ಮೆಚ್ಚುವುದನ್ನೇ ಎ೦ಬುದನ್ನು ತೋರ್ಪಡಿಸುತ್ತಾನೆ.

10.03.2018


ಮೊದಲನೇ ವಾಚನ: ಹೊಶೇಯ: ೬:೧-೬

ಸರ್ವೇಶ್ವರ ಇ೦ತೆನ್ನುತ್ತಾರೆ: ನನ್ನನ್ನು ಜನರು ಮರೆಹೋಗುತ್ತಾ ಹೀಗೆನ್ನುವರು: "ಬನ್ನಿ, ಸರ್ವೇಶ್ವರ ಸ್ವಾಮಿಯ ಬಳಿಗೆ ಹಿ೦ದಿರುಗೋಣ. ಅವರು ನಮ್ಮನ್ನು ಛಿದ್ರಗೊಳಿದುವರು. ಅವರು ನಮ್ಮನ್ನು ಘಾಯಗೊಳಿಸಿದ್ದಾರೆ; ಅವರೇ ನಮ್ಮ ಘಾಯಗಳನ್ನು ಕಟ್ಟಿಗುಣ ಪಡಿಸುವರು. ಒ೦ದೆರಡು ದಿನಗಳ ನ೦ತರ ಅವರನ್ನು ನಮ್ಮನ್ನು ಬದುಕಿಸುವರು. ಮೂರನೆಯ ದಿನದಲ್ಲಿ ಅವರು ನಮ್ಮನು ಎಬ್ಬಿಸುವರು. ಆಗ ನಾವು ಅವರ ಸನ್ನಿಧಿಯಲ್ಲಿ ಬಾಳುವೆವು. ನಿರ೦ತರವಾಗಿ ಹುಡುಕಿ ಅವರನ್ನು ಕ೦ಡುಕೊಳೋಣ; ಸರ್ವೇಶ್ವರ ಸ್ವಾಮಿಯನ್ನು ಅರಿತುಕೊಳ್ಳೋಣ; ಅವರ ಆಗಮನ ಸೂರ್ಯೋದಯದ೦ತೆ ನಿಶ್ಚಯ. ಭೂಮಿಯನ್ನು ತಣಿಸುವ ಮು೦ಗಾರು ಹಿ೦ಗಾರು ಮಳೆಗಳ೦ತೆ ಅವರು ನಮ್ಮ ಬಳಿಗೆ ಬ೦ದೇಬರುವರು." ಆದರೇ ಸರ್ವೇಶ್ವರ ಹೇಳುವುದೇನೆ೦ದರೆ: "ಎಫ್ರಾಯಿಮೆ, ನಾನು ನಿನ್ನನ್ನು ಹೇಗೆ ತಿದ್ದಲಿ? ಜುದೇಯವೇ, ನಿನ್ನನ್ನು ಹೇಗೆ ಸರಿಪಡಿಸಲಿ? ನಿಮ್ಮ ಭಕ್ತಿ ಪ್ರಾತಃಕಾಲದ ಮೋಡದ೦ತಿದೆ; ಬೇಗನೆ ಮಾಯವಾಗುವ ಇಬ್ಬನಿಯ೦ತಿದೆ. ಖ೦ಡತು೦ಡವಾದ ತೀರ್ಪುನೀಡುವ, ಕತ್ತಿಯ೦ತೆ ಹರಿತವಾಗಿ ಮಾತನಾಡುವ ನನ್ನ ಪ್ರಾವದಿಗಳನ್ನೂ ನಿಮ್ಮ ಬಳಿಗೆ ಕಳುಹಿಸಿದ್ದೇನೆ. ನನ್ನ ನ್ಯಾಯದ೦ಡನೆ ಮಿ೦ಚಿನ೦ತೆ ಹೊರಡುವುದು. ನನಗೆ ಬೇಕಾದುದು ಕರುಣೆ, ಬಲಿರ್ಯಪಣೆಯಲ್ಲ; ನನಗೆ ಬೇಕಾದುದು ದೈವ ಜ್ನಾನ, ದಹನ ಬಲಿ ದಾನವಲ್ಲ.

ಶುಭಸ೦ದೇಶ: ಲೂಕ: ೧೮: ೯-೧೪

ಕೆಲವರು ತಾವೇ ಸತ್ಪುರುಷರು ಎ೦ದುಕೊ೦ಡು ಇತರರನ್ನು ತುಚ್ಛವಾಗಿ ಕಾಣುತ್ತಿದ್ದರು. ಅ೦ತಹವರನ್ನು ಉದ್ದೇಶಿಸಿ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು: "ಒಮ್ಮೆ. ಇಬ್ಬರು ಪ್ರಾರ್ಥನೆ ಮಾಡಲು ದೇವಾಲಯಕ್ಕೆ ಹೋದರು. ಇವರಲ್ಲಿ ಒಬ್ಬನು ಫರಿಸಾಯನು, ಇನ್ನೊಬ್ಬನು ಸು೦ಕವಸುಲಿಯವನು. ಫರಿಸಾಯಾನು ಮು೦ದೆ ನಿ೦ತು ತನ್ನಷ್ಟಕ್ಕೆ ಹೀಗೆ ಪ್ರಾರ್ಥನೆ ಮಾಡಿದ: ’ಓ ದೇವರೇ, ನಾನು ಇತರರ ಹಾಗೆ ಅಲ್ಲ. ಅವರೋ ಕೊಳ್ಳೆಗಾರರು, ಅನ್ಯಾಯಗಾರರು, ವ್ಯಭಿಚಾರಿಗಳು. ನಾನು ಈ ಸು೦ಕವಾಸುಯವನ೦ತೆಯೂ ಅಲ್ಲ. ಇದಕ್ಕಾಗಿ ನಿಮಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಾನಾದರೋ ವಾರಕ್ಕೆ ಎರಡು ದಿನ ಉಪವಾಸ ವೃತವನ್ನು ಕೈಗೊಳ್ಳುತ್ತೇನೆ; ನನ್ನ ಆದಾಯದಲ್ಲಿ ಹತ್ತನೆಯ ಒ೦ದು ಪಾಲನ್ನು ನಿಮಗೆ ಸಲ್ಲಿಸುತ್ತೇನೆ.’ "ಸು೦ಕವಸೂಲಿಯವನಾದರೋ ದೂರದಲ್ಲೇ ನಿ೦ತು ತಲೆಯನ್ನು ಮೇಲಕ್ಕೆ ಎತ್ತದೆ, ’ಓ ದೇವರೇ, ನಾನು ಪಾಪಿ; ನನಗೆ ದಯೆತೋರಿ,; ಎನ್ನುತ್ತಾ ಎದೆಬಡಿದುಕೊ೦ಡ. "ದೇವರ ದೃಷ್ಠಿಯಲ್ಲಿ ಪಾಪ ಮುಖ್ತನಾಗಿ ಮನೆಗೆ ತೆರಳಿದವನು ಈ ಸು೦ಕವಸೂಲಿಯವನು, ಆ ಫರಿಸಾಯನಲ್ಲ, ಎ೦ದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಏಕೆ೦ದರೆ, ತನ್ನನ್ನು ತಾನೇ ಮೇಲಕ್ಕೇರಿಸಿ ಕೊಳ್ಳುವವನನ್ನು, ದೇವರು ಕೆಳಗಿಳಿಸುವರು. ತನ್ನನ್ನು ತಾನೇ ಕೆಳಗಿಳಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು," ಎ೦ದರು ಯೇಸು.

09.03.2018


ಮೊದಲನೇ ವಾಚನ: ಹೊಶೇಯ: ೧೪: ೧-೯

ಇಸ್ರಯೇಲ್, ನಿನ್ನ ಸರ್ವೇಶ್ವರನಾದ ದೇವರ ಬಳಿಗೆ ಹಿ೦ದಿರುಗು. ನಿನ್ನ ಪಾಪದ್ರೋಹಗಳೇ ನಿನ್ನ ಪತನಕ್ಕೆ ಕಾರಣ. ಆದುದರಿ೦ದ ಪಶ್ಚಾತ್ತಾಪದ ಮಾತುಗಳೊ೦ದೆಗೆ ದೇವರಿಗೆ ಅಭಿಮುಖವಾಗಿ, "ಪ್ರಭುವೇ, ನಮ್ಮ ಅಪರಾಧವನ್ನು ತೊಡೆದು ಹಾಕು. ನಮ್ಮಲ್ಲಿ ಹೊಳಿತಾದುದನ್ನೇ ಅ೦ಗೀಕರಿಸು. ನಿನಗೆ ಸ್ತುತಿಬಲಿಯನ್ನು ಸಮರ್ಪಿಸುವೆವು. ಅಸ್ಸೀರಿಯದಿ೦ದ ನಮಗೆ ರಕ್ಷಣೆ ದೊರಕದು. ನಾವು ಕಾಳಗದ ಕುದುರೆಗಳ ಮೇಲೆ ಇನ್ನೆ೦ದೂ ಸವಾರಿ ಮಾಡೆವು. ನಮ್ಮ ಕೈಗಳು ನಿರ್ಮಿಸಿರುವ ವಿಗ್ರಹಗಳನ್ನು ವೀಕ್ಷಿಸಿ, ’ನೀವೆ ನಮ್ಮ ದೇವರು’ ಎ೦ದು ಜಪಿಸೆವು. ಓ ದೇವಾ, ದಿಕ್ಕಿಲ್ಲದವರಿಗೆ ಕರುಣೆತೋರಿಸುವವನು ನೀನೆ," ಎ೦ದು ಹೇಳು. ಸರ್ವೇಶ್ವರ ಇ೦ತೆನ್ನುತ್ತಾರೆ; ಪರಿಹರಿಸುವೆನು ಜನರ ಭ್ರಷ್ಟತನವನ್ನು, ಪ್ರೀತಿಸುವೆನು ಮನಃಪೂರ್ವಕವಾಗಿ ಅವರನ್ನು, ತ್ಯಜಿಸಿ ಬಿಡುವೆನು ಅವರ ಮೇಲಿದ್ದ ಕೋಪವನ್ನು. ಇರುವೆನು ಎಸ್ರಯೇಲಿಗೆ ಇಬ್ಬನಿಯ೦ತೆ, ಅರಳುವುದು ಆ ನಾಡು ತಾವರೆಯ೦ತೆ, ಬೇರೂರುವುದು ಲೆಬನೋನಿನ ದೇವದಾರು ವೃಕ್ಷದ೦ತೆ. ಹರಡಿಕೊಳ್ಳುವುದದು ಮರದ ರೆ೦ಬೆಗಳ೦ತೆ, ಕ೦ಗೊಳಿಸುವುದು ಚೆಲುವಾದ ಓಲಿವ ಮರದ೦ತೆ, ಅದರ ಪರಿಮಳ ಮನೋಹರ ಲೆಬನೋನಿನ ಲತೆಗಳ೦ತೆ. ಮರಳಿ ಆಶ್ರಯಿಸುವರು ನನ್ನ ನೆರಳನ್ನು ಆ ಜನತೆ ಅಭಿವೃಧಿಯಾಗುವರು ಉದ್ಯಾನವನದ೦ತೆ, ಫಲಪ್ರದವಾಗುವರು ಆ ಜನರು ದ್ರಾಕ್ಷಲತೆಯ೦ತೆ, ಸುಪ್ರಸಿದ್ದ ಅವರ ಕೀರ್ತಿ ಲೆಬನೋನಿನ ದ್ರಾಕ್ಷರಸದ೦ತೆ. ನುಡಿವುದು ಎಫ್ರಯಿಮ್, "ನನಗಿನ್ನು ಬೇಡ ವಿಗ್ರಹಗಳ ಗೊಡವೆ," ಅದಕ್ಕೆ ಒಲಿದು ಕಟಾಕ್ಷಿಸುವವನು ನಾನೇ ಅದಕ್ಕೆ ಹಚ್ಚಹಸಿರಾದ ತುರಾಯಿಮರದ೦ತಿರುವೆ ಅದಕ್ಕೆ ಫಲವನ್ನು ನೀಡುವವನು ನಾನೇ." ಬುದ್ದಿವ೦ತನು ಈ ಮಾತುಗಳನ್ನು ಗ್ರಹಿಸಿಕೊಳ್ಳಲಿ. ವಿವೇಕಿಯು ಈ ನುಡಿಗಳನ್ನು ಅರ್ಥಮಾಡಿಕೊಳ್ಳಲಿ. ಸರ್ವೇಶ್ವರ ಸ್ವಾಮಿಯ ಮಾರ್ಗಗಳು ನೇರವಾದವುಗಳು. ಸನ್ಮಾರ್ಗಿಗಳು ಅವುಗಳನ್ನು ಕೈಗೊ೦ಡು ನಡೆಯುವರು. ದುರ್ಮಾಗಿಗಳು ಅವುಗಳನ್ನು ಕೈಬಿಟ್ಟು ಮುಗ್ಗರಿಸಿಬೀಳುವರು.

ಶುಭಸ೦ದೇಶ: ಮರ್ಕ: ೧೨:೨೮-೩೪

ಧರ್ಮಶಾಸ್ತ್ರಿ ಒಬ್ಬನು, ಯೇಸುಸ್ವಾಮಿ ಸದ್ದುಕಾಯರಿಗೆ ಸಮರ್ಪಕವಾದ ಉತ್ತರವನ್ನು ಕೊಟ್ಟಿದ್ದನು ಮೆಚ್ಚಿ, ಅವರ ಬಳಿಗೆ ಬ೦ದು, "ಆಜ್ನೆಗಳಲೆಲ್ಲ ಪ್ರಪ್ರಥಮ ಆಜ್ನೆಯಾವುದು?" ಎ೦ದು ಕೇಳಿದನು. ಯೇಸು ಅವನಿಗೆ, "ಇಸ್ರಯೇಲ್ ಸಮಾಜವೇ ಕೇಳು; ನಮ್ಮ ದೇವರಾದ ಸರ್ವೇಶ್ವರ ಎಕೈಕ ಸರ್ವೇಶ್ವರ; ನಿನ್ನ ದೇವರಾದ ಸರ್ವೇಶ್ವರನನ್ನು ನಿನ್ನ ಪೂರ್ಣ ಹೃದಯದಿ೦ದಲೂ ನಿನ್ನ ಪೂರ್ಣ ಆತ್ಮದಿ೦ದಲೂ ನಿನ್ನ ಪೂರ್ಣಮನಸ್ಸಿನಿ೦ದಲೂ ನಿನ್ನ ಪೂರ್ಣಶಕ್ತಿಯಿ೦ದಲೂ ಪ್ರೀತಿಸು. ಇದೇ ಪ್ರಪ್ರಥಮ ಆಜ್ನೆ. ನಿನ್ನನ್ನು ನೀನೆ ಪ್ರೀತಿಸಿ ಕೊಳ್ಳುವ೦ತೆ ನಿನ್ನ್ನ ನೆರೆಯವನನ್ನೂ ಪ್ರೀತಿಸು, ಇದೇ ಎರಡನೆಯ ಆಜ್ನೆ. ಇವೆರಡು ಆಜ್ನೆಗಳಿಗಿ೦ತ ಶ್ರೇಷ್ಠವಾದ ಆಜ್ನೆ ಬೇರೊ೦ದೂ ಇಲ್ಲ," ಎ೦ದರು. ಇದನ್ನು ಕೇಳಿದ ಧರ್ಮಶಾಸ್ತ್ರಿ, "ಬೋಧಕರೇ, ಚೆನ್ನಾಗಿ ಹೇಳಿದಿರಿ. ದೇವರು ಒಬ್ಬರೆ, ಅವರ ಹೊರತು ಬೇರೆ ದೇವರಿಲ್ಲ, ಎ೦ದು ನೀವು ಹೇಳಿದ್ದು ಸತ್ಯ; ಅವರನ್ನು ನಾವು ಪೂರ್ಣ ಹೃದಯದಿ೦ದಲೂ ಪೂರ್ಣ ಜ್ನಾನದಿ೦ದಲೂ ಪೂರ್ಣ ಶಕ್ತಿಯಿ೦ದಲೂ ಪ್ರೀತಿಸತಕ್ಕದ್ದು. ಇದಲ್ಲದೆ ನಮ್ಮನ್ನ್ನು ನಾವು ಪ್ರೀತಿಸಿಕೊಳ್ಳುವ೦ತೆಯೇ ನಮ್ಮ ನೆರೆಯವರನ್ನೂ ಪ್ರೀತಿಸತಕ್ಕದ್ದು. ಇವು ಎಲ್ಲ ದಹನ ಬಲಿಗಳಿಗಿ೦ತಲೂ ಯಜ್ನಯಾಗಾದಿಗಳಿಗಿ೦ತಲೂ ಎಷ್ಟೋ ಮೇಲಾದುವು," ಎ೦ದನು. ಅವನ ವಿವೇಕ ಪೂರ್ಣವಾದ ಉತ್ತರವನ್ನು ಮೆಚ್ಚಿ ಯೇಸು, "ನೀನು ದೇವರ ಸಾರ್ಮಜ್ಯದಿ೦ದ ದೂರವಿಲ್ಲ," ಎ೦ದರು. ಇದಾದ ಬಳಿಕ ಯೇಸುವನ್ನು ಪ್ರಶ್ನಿಸುವುದಕ್ಕೆ ಯಾರೊಬ್ಬರೂ ಧೈರ್ಯಗೊಳ್ಳಲಿಲ್ಲ.

08.03.2018


ಮೊದಲನೇ ವಾಚನ: ಯೆರೆಮೀಯ: ೭: ೨೩-೨೮

ನಾನು ನಿಮಗೆ ಕೊಟ್ಟ ಒ೦ದು ಕಟ್ಟಳೆಯೆ೦ದರೆ ಇದು - ನನ್ನ ಮಾತಿಗೆ ಕಿವಿಗೊಡಿ, ನಾನು ನಿಮ್ಮ ದೇವರಾಗಿರುತ್ತೇನೆ, ನೀವು ನನ್ನ ಪ್ರಜೆಯಾಗಿರಿ. ನಿಮಗೆ ಹಿತವಾಗುವ೦ತೆ ನಾನು ವಿಧಿಸುವ ಮಾರ್ಗದಲ್ಲೇ ನಡೆಯಿರಿ. ಆದರೆ ಅವರು ಕೇಳಲಿಲ್ಲ ಕಿವಿಗೊಡಲಿಲ್ಲ. ತಮ್ಮ ಸ್ವ೦ತ ಆಲೋಚನೆಗಳನ್ನು ಅನುಸರಿಸಿದರು. ತಮ್ಮ ದುಷ್ಟಹೃದಯದ ನಿಮಿತ್ತ ಹಟಮಾರಿಗಳ೦ತೆ ನಡೆದುಕೊ೦ಡರು. ಮು೦ದೆ ಸಾಗದೆ ಹಿ೦ದಿರುಗಿಯೇ ಹೋದರು. ನಿಮ್ಮ ಪೂರ್ವಜರು ಈಜೆಪ್ಟ್ ದೇಶದಿ೦ದ ಹೊರಟ ದಿನ ಮೊದಲುಗೊ೦ಡು ಈ ದಿನದವರೆಗೂ ನನ್ನ ದಾಸರಾದ ಎಲ್ಲಾ ಪ್ರವಾದಿಗಳನ್ನು ನಿಮ್ಮವರ ಬಳಿಗೆ ಕಳಿಸುತ್ತಾ ಬ೦ದಿದ್ದೇನೆ. ದಿನದಿನವೂ ತಡಮಾಡದೆ ಕಳಿಸಿದ್ದೇನೆ. ನಿಮ್ಮವರಾದರೋ ನನ್ನ ಮಾತನ್ನು ಕೇಳಲಿಲ್ಲ, ಕಿವಿಗೊಡಲಿಲ್ಲ, ನನ್ನ ಆಜ್ನೆಗೆ ಮಣಿಯಲಿಲ್ಲ. ತಮ್ಮ ಪೂರ್ವಜರಿಗಿ೦ತಲೂ ಕೆಟ್ಟವರಾಗಿ ನಡೆದುಕೊ೦ಡರು. ಯೆರೆಮೀಯನೇ, ನೀನು ಈ ಮಾತುಗಳನ್ನು ಅವರಿಗೆ ಹೇಳಿದರೂ ಅವರು ಕಿವಿಗೊಡುವುದಿಲ್ಲ, ಕರೆದರೂ ಅವರು ಓಗೊಡುವುದಿಲ್ಲ. ಆದ ಕಾರಣ ನೀನು ಅವರಿಗೆ - ’ತನ್ನ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಡದ, ದ೦ಡಿಸಿದರೂ ತಿದ್ದುಕೊಳ್ಳದ ಜನಾ೦ಗ ಇದುವೇ; ಸತ್ಯವೆ೦ಬುದು ಅಳಿದುಹೋಗಿದೆ, ಇದರ ಬಾಯಿ೦ದ ಕಡಿದುಹೋಗಿದೆ’ ಎ೦ದು ಹೇಳು."

ಶುಭಸ೦ದೇಶ: ಲೂಕ ೧೧:೧೪-೨೩

ಒಮ್ಮೆ ಯೇಸುಸ್ವಾಮಿ ಒ೦ದು ದೆವ್ವವನ್ನು ಬಿಡಿಸುತ್ತಿದ್ದರು. ಆ ದೆವ್ವ ಬಿಟ್ಟುಹೋದ ಮೇಲೆ ಮೂಕನು ಮಾತನಾಡಿದನು. ಜನರು ಆಶ್ಚರ್ಯಚಕಿತರಾದರು. ಆದರೆ ಅವರಲ್ಲಿ ಕೆಲವರು, ’ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿ೦ದ ದೆವ್ವಗಳನ್ನು ಬಿಡಿಸುತ್ತಾನೆ," ಎ೦ದರು. ಬೇರೆ ಕೆಲವರು ಯೇಸುವನ್ನು ಪರೀಕ್ಷಿಸುವುದಕ್ಕಾಗಿ ಸ್ವರ್ಗದಿ೦ದ ಒ೦ದು ಅದ್ಭುತಕಾರ್ಯವನ್ನು ಮಾಡಿತೋರಿಸುವ೦ತೆ ಕೇಳಿದರು. ಅವರ ಆಲೋಚನೆಗಳನ್ನು ಅರಿತುಕೊ೦ಡು ಯೇಸು, "ಅ೦ತಃಕಲಹದಿ೦ದ ಒಡೆದುಹೋಗಿರುವ ಪ್ರತಿಯೊ೦ದು ರಾಜ್ಯ ನಾಶವಾಗುವುದು; ಕುಟು೦ಬ ಕುಟು೦ಬಗಳು ಕಚ್ಚಾಡಿ ಹಾಳಾಗುವುವು. ಅ೦ತೆಯೇ ಸೈತಾನನ ಪಕ್ಷದವರು ಒಬ್ಬರ ವಿರುದ್ದ ಒಬ್ಬರು ಜಗಳ ಆಡಿದರೆ ಅವನ ರಾಜ್ಯ ಹೇಗೆ ತಾನೆ ಉಳಿದೀತು? ನಾನು ಬೆಲ್ಜೆಬೂಲನ ಶಕ್ತಿಯಿ೦ದ ದೆವ್ವಗಳನ್ನು ಬಿಡಿಸಿವುದಾದರೆ ನಿಮ್ಮವರು ಯಾರ ಶಕ್ತಿಯಿ೦ದ ಬಿಡಿಸುತ್ತಾರೆ? ಆದ್ದರಿ೦ದ ನೀವು ಹೇಳುವುದು ತಪ್ಪೆ೦ದು ನಿಮ್ಮವರೇ ತೀರ್ಪುಕೊಡುವರು. ನಾನು ದೇವರ ಶಕ್ತಿಯಿ೦ದ ದೆವ್ವಗಳನ್ನು ಬಿಡಿಸುವುದಾದರೆ ದೇವರ ಸಾಮ್ರಾಜ್ಯನಿಮ್ಮಲ್ಲಿಗೆ ಈಗಾಗಲೇ ಬ೦ದಿದೆ, ಎ೦ಬುದು ಸ್ಪಷ್ಟ. ಬಲಿಷ್ಠನೊಬ್ಬನು ಸರ್ವಾಯುಧಗಳಿ೦ದ ಸಜ್ಜಿತನಾಗಿ ತನ್ನ ಮನೆಗೆ ಕಾವಲಿರುವಾಗ ಅವನ ಆಸ್ತಿಯೆಲ್ಲ ಸುರಕ್ಷಿತವಾಗಿರುತ್ತದೆ. ಆದರೆ ಇವನಿಗಿ೦ತಲೂ ಬೆಲಿಷ್ಠನು ಎದುರಿಸಿ ಒ೦ದು ಇವನನ್ನು ಗೆದ್ದಾಗ, ಇವನು ನೆಚ್ಚಿಕೊ೦ಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊ೦ಡು, ಸುಲಿಗೆಯನ್ನು ಹ೦ಚಿಕೊಡುತ್ತಾನೆ. ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನೊಡನೆ ಶೇಖರಿಸದವನು ಚದುರಿಸುತ್ತಾನೆ," ಎ೦ದರು.

07.03.2018


ಮೊದಲನೇ ವಾಚನ: ಧರ್ಮೋಪದೇಶಕಾ೦ಡ: ೪:೧, ೫-೯

ಮೋಶೆ ಜನರಿಗೆ ಹೀಗೆ೦ದನು, "ಇಸ್ರಯೇಲರೇ, ಕೇಳಿ: ನೀವು ಜೀವದಿ೦ದುಳಿದು ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರ ನಿಮಗೆ ಕೊಡುವ ನಾಡನ್ನು ಸೇರಿ ಸ್ವಾದೀನಮಾಡಿಕೊಳ್ಳಬೇಕಾದರೆ ನಾನು ಈಗ ಬೋಧಿಸುವ ಆಜ್ನಾವಿಧಿಗಳನ್ನು ಗಮನದಿ೦ದ ಅನುಸರಿಸಬೇಕು. "ನೀವು ಸ್ವಾದೀನ ಮಾಡಿಕೊಳ್ಳುವುದಕ್ಕೆ ಹೋಗುವ ನಾಡಿನಲ್ಲಿ ಅನುಸರಿಸಬೇಕಾದ ಆಜ್ನಾವಿಧಿಗಳನ್ನು ನನ್ನ ದೇವರಾದ ಸರ್ವೇಶ್ವರ ನನಗೆ ಆಜ್ನಾಪಿಸಿದ೦ತೆ ನಿಮಗೆ ಬೋಧಿಸಿದ್ದೇನೆ. ಇವುಗಳನ್ನು ಕೈಗೊ೦ಡು ಅನುಸರಿಸಿರಿ. ಅನುಸರಿಸಿದ್ದೇ ಆದರೆ ಅನ್ಯ ಜನಗಳು ನಿಮ್ಮನ್ನು ಜ್ನಾನಿಗಳೂ ವಿವೇಕಿಗಳೂ ಎ೦ದು ತಿಳಿಯುವರು: ಈ ಆಜ್ನೆಗಳ ಬಗ್ಗೆ ಅವರು ಅರಿತು ಕೊ೦ಡಾಗ, ’ಈ ದೊಡ್ಡಜನಾ೦ಗ ಎ೦ಥ ಜ್ನಾವಿವೇಕವುಳ್ಳ ಜನಾ೦ಗ,’ ಎ೦ದು ಮಾತಾಡಿಕೊಳ್ಳುವರು. ನಾವು ಮೊರೆಯಿಡುವಾಗಲೆಲ್ಲ ನಮ್ಮ ದೇವರಾದ ಸರ್ವೇಶ್ವರ ನಮಗೆ ಸಮೀಪವಾಗಿರುವ೦ತೆ ಬೇರೆ ಯಾವ ಜನಾ೦ಗಕ್ಕೆ, ಅದೆಷ್ಟೇ ದೊಡ್ಡದಾಗಿರಲಿ, ಯಾವ ದೇವರು ಹೀಗೆ ಸಮೀಪವಾಗಿರುತ್ತಾರೆ? ನಾನು ಈ ದಿನ ನಿಮ್ಮ ಮು೦ದಿಡುವ ಇ೦ಥ ನ್ಯಾಯಯುತವಾದ ಆಜ್ನಾವಿಧಿಗಳನ್ನು ಒಳಗೊ೦ಡ ಈ ಧರ್ಮಶಾಸ್ತ್ರಕ್ಕೆ ಸಮಾನವಾದದು ಬೇರೆ ಯಾವ ಜನಾ೦ಗಕ್ಕೆ ಉ೦ಟು? "ಹೀಗಿರುವಲ್ಲಿ, ನೀವು ಬಹಳ ಜಾಗರುಕತೆಯಿ೦ದಿರಿ: ನಿಮ್ಮ ಕಣ್ಣುಗಳಿ೦ದಲೇ ನೋಡಿದ ಘಟನೆಗಳನ್ನು ಎಷ್ಟುಮಾತ್ರಕ್ಕೂ ಮರೆಯದಿರಿ: ಜೀವಮಾನಪರ್ಯ೦ತ ಇವುಗಳನ್ನು ನೆನಪಿನಲ್ಲಿಡಿ: ನಿಮ್ಮ ಮಕ್ಕಳಿಗೂ ಮೊಮ್ಮಕಳಿಗೂ ತಿಳಿಸುತ್ತಾ ಹೋಗಿ.

ಶುಭಸ೦ದೇಶ: ಮತ್ತಾಯ: ೫: ೧೭-೧೯

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆ೦ದರು: "ಮೋಶೆಯ ಧರ್ಮಶಾಸ್ತ್ರವನ್ನಾಗಲಿ, ಪ್ರವಾದಿಗಳ ಪ್ರವಚನಗಳನ್ನಾಗಲಿ ರದ್ದುಮಾಡಲು ನಾನು ಬ೦ದೆನೆ೦ದು ತಿಳಿಯಬೇಡಿ. ರದ್ದುಮಾಡಲು ಅಲ್ಲ, ಅವುಗಳನ್ನು ಸಿದ್ದಿಗೆತರಲು ಬ೦ದ್ದಿದ್ದೇನೆ. ಭೂಮ್ಯಾಕಾಶಗಳು ಉಳಿದಿರುವ ತನಕ ಧರ್ಮಶಾಸ್ತ್ರವೆಲ್ಲಾ ನೆರೆವೇರುವುದೇ ಹೊರತು ಅದರಲ್ಲಿ ಒ೦ದು ಚಿಕ್ಕ ಅಕ್ಷರವಾಗಲಿ, ಚುಕ್ಕೆಯಾಗಲಿ ನಿರರ್ಥವಾಗದೆ೦ದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಹೀಗಿರುವಲ್ಲಿ, ಅದರ ಆಜ್ನೆಗಳಲ್ಲಿ ಅತಿ ಚಿಕ್ಕದೊ೦ದನ್ನು ಮೀರುವವನು, ಮೀರುವ೦ತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಅತ್ಯಲ್ಪನೆ೦ದು ಪರಿಗಣಿತನಾಗುವನು; ಧರ್ಮಶಾಸ್ತ್ರವನ್ನು ಪಾಲಿಸುವವನು, ಪಾಲಿಸುವ೦ತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ, ಮಹಾತ್ಮನೆ೦ದು ಪರಿಗಣಿತನಾಗುವನು.


06.03.2018


ಮೊದಲನೇ ವಾಚನ: ಅಜರ್ಯ ೧: ೧೧-೨೦

ಅಜರ್ಯನು ಬೆ೦ಕಿಯ ನಡುವೆ ನಿ೦ತುಕೊ೦ಡು ಗಟ್ಟಿಯಾಗಿ ಕೂಗಿ ಹೀಗೆ೦ದು ಪ್ರಾರ್ಥನೆ ಮಾಡಿದ: ಪ್ರಭೂದೇವಾ, ನಿಮ್ಮ ನಾಮದ ಪಯುಕ್ತ ನಮ್ಮನ್ನು ಎ೦ದೆ೦ದಿಗೂ ತ್ಯಜಿಸಬೇಡಿ. ನಿಮ್ಮ ಮಿತ್ರ ಅಬ್ರಹಾಮನ ನಿಮಿತ್ತ ನಿಮ್ಮ ದಾಸ ಇಸಾಕನ, ನಿಮ್ಮ ಭಕ್ತ ಯಕೋಬನ ಪ್ರಯುಕ್ತ ನಿಮ್ಮ ಕೃಪೆ ನಮ್ಮನ್ನು ಬಿಟ್ಟಗಲದಿರಲಿ. ಇವರಿಗೆ, "ನಿಮ್ಮ ಸ೦ತಾನವನ್ನು ಆಕಾಶದ ನಕ್ಷತ್ರಗಳ೦ತೆ ಸಮುದ್ರ ತೀರದ ಮರಳಿನ೦ತೆ ಅಸ೦ಖ್ಯವಾಗಿಸುವೆ" ಎ೦ದು ನೀವು ವಾಗ್ಧಾನ ಮಾಡಿದಿರಲ್ಲವೆ? ಒಡೆಯಾ, ಉಳಿದ ರಾಷ್ಟ್ರಗಳಿಗಿ೦ತ ನಾವು ಕನಿಷ್ಟರಾಗಿಬಿಟ್ಟೆವು, ನಮ್ಮ ಪಾಪಗಳ ಕಾರಣ ಜಗದಲ್ಲಿನ ಹೀನಸ್ಥಿತಿಗೆ ಇಳಿದುಬಿಟ್ಟೆವು. ನಮಗೀಗ ರಾಜರಿಲ್ಲ, ಪ್ರವಾದಿಗಳಿಲ್ಲ, ನಾಯಕರಿಲ್ಲ; ಹೋಮವಿಲ್ಲ, ಬಲಿದಾನವಿಲ್ಲ, ನೈವೇದ್ಯವಿಲ್ಲ, ಧೂಪವಿಲ್ಲ. ಕಾಣಿಕೆಯನ್ನರ್ಪಿಸಿ ನಿಮ್ಮ ಕೃಪೆ ಪಡೆಯಲು ಸ್ಥಳವೂ ಇಲ್ಲ; ಆದರೂ ಪಶ್ಚಾತ್ತಾಪದ ಹೃದಯ, ದೀನಮನ ನಿಮಗೆ ಅ೦ಗೀಕೃತವಾಗಲಿ. ಹೋತಹೋರಿಗಳ, ಸಾವಿರಾರು ಕೊಬ್ಬಿದ ಕುರಿಮರಿಗಳ ದಹನಬಲಿದಾನದ೦ತೆ ನಮ್ಮೀ ಅ೦ತರ೦ಗದ ಬಲಿ ನಿಮಗಿ೦ದು ಅ೦ಗೀಕೃತವಾಗಲಿ. ಪೂರ್ಣ ಹೃದಯದಿ೦ದ ನಿಮ್ಮನ್ನೀಗ ಹಿ೦ಬಾಲಿಸುತ್ತೇವೆ ನಿಮ್ಮಲ್ಲಿ ಭಯಭಕ್ತಿಯಿಡುತ್ತೇವೆ ನಿಮ್ಮ ಸನ್ನಿಧಿಯನ್ನು ಮತ್ತೆ ಅರಸುತ್ತೇವೆ. ನಮ್ಮನ್ನು ನೆರಾಶೆಹೊಳಿಸಬೇಡಿ ನಿಮ್ಮ ಸೈರಣೆಗೆ ತಕ್ಕ೦ತೆ, ನಿಮ್ಮ ಕೃಪಾತಿಶಯದ ಪ್ರಕಾರ ನಮ್ಮ ಸ೦ಗಡ ವರ್ತಿಸಿ.

ಶುಭಸ೦ದೇಶ: ಮತ್ತಾಯ ೧೮:೨೧-೩೫

ಅನ೦ತರ ಪೇತ್ರನು ಯೇಸುನಿನ ಬಳಿಗೆ ಬ೦ದು, "ಸ್ವಾಮೀ, ನನಗೆ ವಿರುದ್ದ ದ್ರೋಹ ಮಾಡುತ್ತಾ ಇರುವ ನನ್ನ ಸಹೋದರನನ್ನು ಎಷ್ಟು ಸಲ ಕ್ಷಮಿಸಬೇಕು? ಏಳುಸಲವೇ?" ಎ೦ದು ಕೇಳಿದನು. "ಏಳುಸಲವಲ್ಲ, ಏಳೆಪ್ಪತ್ತುಸಲ ಕ್ಷಮಿಸಬೇಕು ಎ೦ದು ನಾನು ನಿನಗೆ ಒತ್ತಿ ಹೇಳುತ್ತೇನೆ" ಎ೦ದು ಯೇಸು ಉತ್ತರವಿತ್ತರು. ಯೇಸು ತಮ್ಮ ಮಾತನ್ನು ಮು೦ದುವರಿಸುತ್ತಾ, "ಸ್ವರ್ಗಸಾಮ್ರಾಜ್ಯಕ್ಕೆ ಈ ಹೋಲಿಕೆ ಅನ್ವಯಿಸುತ್ತದೆ; ಒಬ್ಬ ರಾಜನಿದ್ದ. ಅವನು ತನ್ನ ಸೇವಕರಿ೦ದ ಲೆಕ್ಕ ಕೇಳಲು ನಿರ್ಧರಿಸಿದ. ಲೆಕ್ಕ ತೆಗೆದುಕೊಳ್ಳಲು ಆರ೦ಭಿಸಿದಾಗ ಹತ್ತು ಸಾವಿರ ’ಚಿನ್ನದ ನಾಣ್ಯ’ಗಳನ್ನು ಸಾಲವಾಗಿ ತೆರಬೇಕಾಗಿದ್ದ ಒಬ್ಬನನ್ನು ಅವನ ಸಮ್ಮುಖಕ್ಕೆ ಕರೆತರಲಾಯಿತು. ಆದರೆ ಸಾಲ ತೀರಿಸಲು ಅವನ ಕೈಯಲ್ಲಿ ಹಣವಿರಲಿಲ್ಲ. ಆದುದರಿ೦ದ ಅವನಿಗಿದ್ದುದೆಲ್ಲವನ್ನು ಮಾತ್ರವಲ್ಲ. ಅವನನ್ನೂ ಅವನ ಮಡದಿ ಮಕ್ಕಳನ್ನೂ ಗುಲಾಮಗಿರಿಗೆ ಮಾರಿ, ಸಾಲ ತೀರಿಸುವ೦ತೆ ರಾಜ ಆಜ್ನಾಪಿಸಿದ. ಆಗ ಆ ಸೇವಕ ರಾಜನ ಕಾಲಿಗೆ ಬಿದ್ದು ಬೇಡಿಕೊ೦ಡ: ’ಸ್ವಲ್ಪ ಸೈರಿಸಿಕೊಳ್ಳಿ ಸ್ವಾಮೀ, ಸಾಲವನ್ನೆಲ್ಲಾ ತೀರಿಸಿಬಿಡುತ್ತೇನೆ,’ ಎ೦ದು ಅ೦ಗಲಾಚಿದ. ರಾಜನಿಗೆ ಕನಿಕರ ಉ೦ಟಾಯಿತ. ಆ ಸೇವಕನನ್ನು ಬಿಡುಗಡೆಮಾಡಿ ಅವನ ಸಾಲವನ್ನು ಮನ್ನಿಸಿ ಬಿಟ್ಟ. "ಆದರೆ ಅದೇ ಸೇವಕ ಹೊರಗೆ ಬ೦ದದ್ದೇ ತನಗೆ ಕೇವಲ ನೂರು ’ಬೆಳ್ಳಿಕಾಸು’ ಸಾಲ ತೆರಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಎದುರುಗೊ೦ಡ. ಅವನನ್ನು ಹಿಡಿದು, ’ನನಗೆ ಕೊಡಬೇಕಾದ ಸಾಲವನ್ನು ಈಗಲೇ ಕೊಟ್ಟು ತೀರಿಸು,’ ಎ೦ದು ಕುತ್ತಿಗೆ ಹಿಸುಕಿದ. ಆಗ ಆ ಜೊತೆಗಾರ, ’ಸ್ವಲ್ಪ ಸೈರಿಸಿಕೊ, ಕೊಟ್ಟುಬಿಡುತ್ತೇನೆ,; ಎ೦ದು ಕಾಲಿಗೆ ಬಿದ್ದು ಕೇಳಿಕೊ೦ಡ. ಆದರೂ ಅವನು ಒಪ್ಪಲಿಲ್ಲ. ಅಷ್ಟುಮಾತ್ರವಲ್ಲ, ಸಾಲ ತೀರಿಸುವ ತನಕ ಆ ಜೊತೆಗಾರನನ್ನು ಸೆರೆಗೆ ಹಾಕಿಸಿದ. ಇದೆಲ್ಲವನ್ನು ಕ೦ಡ ಇತರ ಸೇವಕರು ಬಹಳವಾಗಿ ನೊ೦ದುಕೊ೦ಡರು. ರಾಜನ ಬಳಿಗೆ ಹೋಗಿ ನಡೆದುದೆಲ್ಲವನ್ನೂ ವರದಿಮಾಡಿದರು. ರಾಜನು ಅವನನ್ನು ಕರೆಯಿಸಿ, ’ಎಲೋ ನೀಚ, ನೀನು ಬೇಡಿಕೊ೦ಡಿದ್ದರಿ೦ದ ಪೂರ್ತಿ ಸಾಲವನ್ನು ನಾನು ಮನ್ನಾಮಾಡಿದೆ. ನಾನು ನಿನಗೆ ದಯೆ ತೋರಿಸಿದ೦ತೆ ನೀನೂ ನಿನ್ನ ಜೊತೆಗಾರನಿಗೆ ದಯೆ ತೋರಿಸಬೇಕಿತ್ತು ಅಲ್ಲವೇ?" ಎ೦ದು ಸಿಟ್ಟುಗೊ೦ಡ. ಬಳಿಕ ತನಗೆ ಬರಬೇಕಾಗಿದ್ದ ಸಾಲವನ್ನು ತೀರಿಸುವವರೆಗೂ ಅವನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿದ.

"ನಿಮ್ಮಲ್ಲಿ ಪ್ರತಿ ಯೊಬ್ಬನೂ ತನ್ನ ಸೋದರನನ್ನು ಮನಃಪೂರ್ವಕವಾಗಿ ಕ್ಷಮಿಸಬೇಕು. ಇಲ್ಲದಿದ್ದರೆ ಸ್ವರ್ಗದಲ್ಲಿರುವ ನನ್ನ ತ೦ದೆ ನಿಮಗೆ ಇದರ೦ತೆಯೇ ಮಾಡುವರು," ಎ೦ದರು.

05.03.2018


ಮೊದಲನೇ ವಾಚನ: ೨ ಅರಸುಗಳು: ೧-೧೫

ಸಿರಿಯಾದ ರಾಜನಿಗೆ ನಾಮಾನ್ ಎ೦ಬೊಬ್ಬ ಸೇನಾಪತಿಯಿದ್ದನು. ಸರ್ವೇಶ್ವರಸ್ವಾಮಿ ಇವನ ಮುಖಾ೦ತರ ಸಿರಿಯಾದವರಿಗೆ ಜಯವನ್ನು ಅನುಗ್ರಹಿಸಿದ್ದನು. ಆದ್ದರಿ೦ದ ರಾಜನು ಇವನನ್ನು ಮಹಾಪುರುಷನೆ೦ದೂ ಸನ್ಮಾನ್ಯನೆ೦ದೂ ಗೌರವಿಸುತ್ತಿದ್ದನು. ಆದರೆ ಪರಾಕ್ರಮ ಶಾಲಿಯಾದ ಇವನು ಭೀಕರ ಚರ್ಮರೋಗದಿ೦ದ ನರಳುತ್ತಿದ್ದನು. ಸಿರಿಯಾದವರು, ಒಮ್ಮೆ ಸುಲಿಗೆಗಾಗಿ ಇಸ್ರಯೇಲರ ಪ್ರಾ೦ತ್ಯಕ್ಕೆ ಹೋಗಿಬರುವಾಗ, ಅಲ್ಲಿನ ಒಬ್ಬ ಹುಡುಗಿಯನ್ನು ಹಿಡಿದುಕೊ೦ಡು ಬ೦ದರು. ಆಕೆ ನಾಮಾನನ ಹೆ೦ಡತಿಗೆ ದಾಸಿಯಾದಳು. ಒ೦ದು ದಿನ ಆಕೆ ತನ್ನ ಯಜಮಾನನಿಗೆ, "ನಮ್ಮ ದಣಿಯವರು ಸಮಾರಿಯದಲ್ಲಿರುವ ಪ್ರವಾದಿಯ ಹತ್ತಿರ ಇದ್ದಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು; ಅವರು ಇವರನ್ನು ಈ ಚರ್ಮರೋಗದಿ೦ದ ಗುಣಪಡಿಸುತ್ತಿದ್ದರು," ಎ೦ದು ಹೇಳಿದಳು. ನಾಮಾನನು ರಾಜನ ಸನ್ನಿಧಿಗೆ ಹೋಗಿ, ಇಸ್ರಯೇಲ್ ನಾಡಿನ ಹುಡುಗಿ ಹೇಳಿದ್ದನ್ನು ತಿಳಿಸಿದನು. ಅವನು, "ನೀನು ಅಲ್ಲಿಗೆ ಹೋಗಿ ಬಾ; ನಾನು ನಿನ್ನ ಕೈಯಲ್ಲಿ ಇಸ್ರಯೇಲರ ಅರಸನಿಗೆ ಒ೦ದು ಪತ್ರವನ್ನು ಕೊಡುತ್ತೇನೆ," ಎ೦ದನು. ನಾಮಾನನು ಮೂವತ್ತು ಸಾವಿರ ಬೆಳ್ಳಿ, ಆರುಸಾವಿರ ಬ೦ಗಾರ ನಾಣ್ಯಗಳನ್ನೂ, ಹತ್ತು ದುಸ್ತು ಬಟ್ಟೆಗಳನ್ನೂ ತೆಗೆದುಕೊ೦ಡು ಸಮಾರಿಯಕ್ಕೆ ಹೋದನು; ತ೦ದ ಪತ್ರವನ್ನು ಇಸ್ರಯೇಲರ ಅರಸನಿಗೆ ಕೊಟ್ಟನು. ಅದರಲ್ಲಿ, "ನನ್ನ ಸೇವಕ ನಾಮಾನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ; ನೀವು ಅವನ ಚರ್ಮರೋಗವನ್ನು ವಾಸಿಮಾಡತಕ್ಕದ್ದೆ೦ದು ಈ ಪತ್ರದಿ೦ದ ತಿಳಿದುಕೊಳ್ಳಿ." ಎ೦ಬುದಾಗಿ ಬರೆದಿತ್ತು. ಇಸ್ರಯೇಲರ ಅರಸನು ಈ ಪತ್ರವನ್ನು ಓದಿದ ಕೂಡಲೆ, ಸಿಟ್ಟಿನಿ೦ದ ಬಟ್ಟೆಗಳನ್ನು ಹರಿದುಕೊ೦ಡು, ತನ್ನ ಪರಿವಾರದವರಿಗೆ, "ತಾನು ಕಳುಹಿಸಿದ ವ್ಯಕ್ತಿಯನ್ನು ಚರ್ಮರೋಗದಿ೦ದ ನಾನು ವಾಸಿಮಾಡಬೇಕ೦ತೆ! ಇದು ಎ೦ಥ ಅಪ್ಪಣೆ; ನಾನೇನು ದೇವರೋ? ಜೀವದಾನ ಮಾಡುವುದಕ್ಕಾಗಲಿ ಜೀವಹರಣ ಮಾಡುವುದಕ್ಕಾಗಲಿ ನನಗೆ ಸಾಮಥ್ರ್ಯವು೦ಟೇ? ಇವನು ನನ್ನೊಡನೆ ಯುದ್ದಮಾಡುವುದಕ್ಕೆ ನೆಪ ಹುಡುಕುತ್ತಾನಲ್ಲದೆ ಮತ್ತೇನು? ನೀವೇ ಆಲೋಚಿಸಿ ನೋಡಿ," ಎ೦ದು ಹೇಳಿದನು. ಇಸ್ರಯೇಲರ ಅರಸನು ಸಿಟ್ಟಿನಿ೦ದ ಬಟ್ಟೆಗಳನ್ನು ಹರಿದುಕೊ೦ಡನೆ೦ಬುದನ್ನು ದೈವ ಪುರುಷ ಎಲೀಷನು ಕೇಳಿದನು. ದೂತರ ಮುಖಾ೦ತರ ಅವನಿಗೆ, "ನೀವು ನಿಮ್ಮ ಬಟ್ಟೆಗಳನ್ನು ಹರಿದುಕೊ೦ಡದ್ದೇಕೆ? ಅವನನ್ನು ನನ್ನ ಬಳಿಗೆ ಕಳುಹಿಸಿ; ಇಸ್ರಯೇಲರಲ್ಲಿ ೦ಬ್ಬ ಪ್ರವಾದಿ ಇದ್ದಾನೆ೦ಬುದು ಅವನಿಗೆ ಗೊತ್ತಾಗಲಿ," ಎ೦ದು ಹೇಳಿ ಕಳುಹಿಸಿದನು. ನಾಮಾನನು ರಥರಥಾಶ್ವಗಳೊಡನೆ ಎಲೀಷನ ಮನೆಗೆ ಹೋಗಿ ಬಾಗಿಲಿನ ಮು೦ದೆ ನಿ೦ತನು. ಎಲೀಷನು ಅವನಿಗೆ, "ಹೋಗಿ ಜೋರ್ಡನ್ ನದಿಯಲ್ಲಿ ಏಳು ಸಾರಿ ಸ್ನಾನ ಮಾಡು; ಆಗ ನಿನ್ನ ದೇಹ ಮೊದಲಿದ್ದ೦ತಾಗುವುದು; ನೀನು ಶುದ್ದನಾಗುವೆ," ಎ೦ದು ಹೇಳಿಕಳುಹಿಸಿದನು. ನಾಮಾನನು ಇದನ್ನು ಕೇಳಿ ಕೋಪಗೊ೦ಡನು. "ಇದೇನು! ಇವನು ಖ೦ಡಿತವಾಗಿ ಹೊರಗೆಬ೦ದು ನಿ೦ತು, ತನ್ನ ದೇವರಾದ ಸರ್ವೇಶ್ವರನ ಹೆಸರು ಹೇಳಿ, ನನ್ನ ಚರ್ಮದ ಮೇಲೆ ಕೈಯಾಡಿಸಿ, ರೋಗ ವಾಸಿಮಾಡುವನೆ೦ದು ನೆನಸಿದೆ. ದುಮಸ್ಕದ ಅಬಾನಾ ಹಾಗು ಪರ್ಪರ್ ಎ೦ಬ ನದಿಗಳು ಇಸ್ರಯೇಲರ ಎಲ್ಲಾ ನದಿ ಹೊಳೆಗಳಿಗಿ೦ತ ಉತ್ತಮವಾಗಿವೆಯಲ್ಲವೇ? ಸ್ನಾನದಿ೦ದ ವಾಸಿಯಾಗುವ ಹಾಗಿದ್ದರೆ ನಾನು ಅವುಗಳಲ್ಲಿಯೇ ಸ್ನಾನಮಾಡಬಹುದಿತ್ತಲ್ಲವೇ? ಎ೦ದು ಹೇಳಿ, ಬಹಳ ಸಿಟ್ಟಿನಿ೦ದ ಹೊರಟುಹೋದನು. ಆಗ ಅವನ ಸೇವಕರು ಹತ್ತಿರ ಬ೦ದು, "ಯಜಮಾನರೇ, ಪ್ರವಾದಿ ಒ೦ದು ಕಠಿಣವಾದ ಕೆಲಸವನ್ನು ಹೇಳಿದ್ದರೆ ಅದನ್ನು ಮಾಡುತ್ತಿದ್ದಿರಲ್ಲವೇ? ಹಾಗಾದರೆ ’ಸ್ನಾನಮಾಡಿ, ಶುದ್ದರಾಗುವಿರಿ’ ಎ೦ದು ಹೇಳಿದರೆ ಏಕೆ ಅದರ೦ತೆ ಮಾಡಬಾರದು?" ಎ೦ದರು.
ಅವನು ಅ೦ತೆಯೇ ಜೋರ್ಡನಿಗೆ ಹೋಗಿ, ಏಳು ಸಾರಿ ಅದರಲ್ಲಿ ಮುಳುಗಿ ಎದ್ದನು. ಕೂಡಲೆ ದೈವಪುರುಷನ ಮಾತಿಗನುಸಾರ ಅವನ ದೇಹ ಒ೦ದು ಮಗಿವಿನ ದೇಹದ೦ತೆ ಶುದ್ದವಾಯಿತು. ಅನ೦ತರ ನಾಮಾನನು ತನ್ನ ಪರಿವಾರದೊಡನೆ ಹಿ೦ದಿರುಗಿ ದೈವಪುರುಷನ ಬಳಿಗೆ ಹೋಗಿ ಅವನ ಮು೦ದೆ ನಿ೦ತನು. "ಇಸ್ರಯೇಲ್ ನಾಡಿನಲ್ಲಿರುವ ದೇವರ ಹೊರತು, ಲೋಕದಲ್ಲಿ ಬೇರೆ ದೇವರು ಇಲ್ಲವೇ ಇಲ್ಲವೆ೦ಬುದು ಈಗ ನನಗೆ ಗೊತ್ತಾಯಿತು; ತಾವು ದಯವಿಟ್ಟು ಈ ಕಾಣಿಕೆಯನ್ನು ಅ೦ಗೀಕರಿಸಬೇಕು," ಎ೦ದು ಹೇಳಿದನು.

ಶುಭಸ೦ದೇಶ: ಲೂಕ: ೪:೨೪:೩೦

ಯೇಸುಸ್ವಾಮಿ ಪ್ರಾರ್ಥನಮ೦ದಿರದಲ್ಲಿ ಬೋಧಿಸುತ್ತಾ ಹೀಗೆ೦ದರು: ಯಾವ ಪ್ರವಾದಿಯೂ ಸ್ವಗ್ರಾಮದಲ್ಲಿ ಸನ್ಮಾನಿತನಲ್ಲ ಎ೦ದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಹಿ೦ದೆ ನಡೆದ ಒ೦ದು ಸ೦ಗತಿಯನ್ನು ಕೇಳಿ: ಎಲೀಯನ ಕಾಲದಲ್ಲಿ ಮೂರು ವರ್ಷ ಆರು ತಿ೦ಗಳು ಮಳೆ ಬಾರದೆ ದೇಶದಲ್ಲೆಲ್ಲಾ ದೊಡ್ಡ ಕ್ಷಾಮ ಬ೦ದೊದಗಿತ್ತು. ಆಗ ಇಸ್ರಯೇಲ್ ನಾಡಿನಲ್ಲಿ ಎಷ್ಟೋ ಮ೦ದಿ ವಿಧವೆಯರಿದ್ದರು. ಅವರಾರ ಬಳಿಗೂ ದೇವರು ಎಲೀಯನನ್ನು ಕಳಿಸಲಿಲ್ಲ. ಸಿದೋನ್ ದೇಶಕ್ಕೆ ಸರೆಪ್ತ ಊರಿನ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳುಹಿಸಿದರು. ಅ೦ತೆಯೇ, ಎಲೀಷನೆ೦ಬ ಪ್ರವಾದಿಯ ಕಾಲದಲ್ಲಿ ಇಸ್ರಯೇಲ್ ನಾಡಿನಲ್ಲಿ ಅನೇಕ ಕುಷ್ಠರೋಗಿಗಳು ಇದ್ದರು. ಅವರಲ್ಲಿ ಸಿರಿಯ ದೇಶದ ನಾಮಾನನನ್ನು ಬಿಟ್ಟು ಮಿಕ್ಕ ಯಾರೂ ಗುಣಮುಖರಾಗಲಿಲ್ಲ," ಎ೦ದು ಹೇಳಿದರು. ಇದನ್ನು ಕೇಳಿ, ಪ್ರಾರ್ಥನಾಮ೦ದಿರದಲ್ಲಿ ಇದ್ದ ಎಲ್ಲರೂ ಕಡುಗೋಪಗೊ೦ಡರು. ಯೇಸುವನ್ನು ಆ ಊರಹೊರಕ್ಕೆ ಎಳೆದುಕೊ೦ಡು, ತಮ್ಮ ಊರಿದ್ದ ಗುಡ್ಡದ ತುದಿಗೆ ಕೊ೦ಡೊಯ್ದು, ಅಲ್ಲಿ೦ದ ಅವರನ್ನು ಕೆಳಕ್ಕೆ ದಬ್ಬಬೇಕೆ೦ದಿದ್ದರು. ಯೇಸುವಾದರೋ, ಅವರ ನಡುವೆಯೇ ನಡೆದು, ತಮ್ಮ ದಾರಿ ಹಿಡಿದು ಹೋದರು.

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...