ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

08.08.19 - "ನಿನ್ನ ಹೆಸರು ಪೇತ್ರ; ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು"

ಮೊದಲನೇ ವಾಚನ: ಸಂಖ್ಯಾಕಾಂಡ  20:1-13


ಇಸ್ರಯೇಲ್ ಸಮಾಜದವರು ಮೊದಲನೆಯ ತಿಂಗಳಿನಲ್ಲಿ  "ಚಿನ್"  ಎಂಬ ಮರುಭೂಮಿಗೆ ಬಂದು ಕಾದೇಶಿನಲ್ಲಿ ಇಳಿದುಕೊಂಡರು. ಅಲ್ಲಿ ಮಿರ್ಯಾಮಳು  ಮೃತಳಾದಳು; ಆಕೆಯನ್ನು ಅಲ್ಲೇ ಸಮಾಧಿ ಮಾಡಿದರು. ಜನರಿಗೆ ನೀರು ಇಲ್ಲದೆ ಹೋಯಿತು. ಅವರು ಮೋಶೆ ಮತ್ತು ಆರೋನರ ವಿರುದ್ಧ ಸಭೆ ಸೇರಿ ಮೋಶೆಯ ಸಂಗಡ ವಾದಿಸತೊಡಗಿದರು: "ಸರ್ವೇಶ್ವರನ ಸನ್ನಿಧಿಯಲ್ಲಿ ನಮ್ಮ ಬಂಧು ಬಳಗದವರು ಸತ್ತಂತೆ ನಾವೂ ಸತ್ತು ಹೋಗಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು! ನೀವು ಸರ್ವೇಶ್ವರನ ಪ್ರಜೆಯಾದ ನಮ್ಮನ್ನು ಈ ಮರಳುಗಾಡಿಗೆ ಕರೆದುಕೊಂಡು ಬಂದುದೇಕೆ? ನಾವೂ ನಮ್ಮ ಜಾನುವಾರಗಳೂ ಇಲ್ಲಿ ಸಾಯಬೇಕೆಂದೋ? ಈಜಿಪ್ಟ್ ದೇಶದಿಂದ ನಮ್ಮನ್ನು ಬರ ಮಾಡಿದ್ದು ಈ  ಕೀಳು ಸ್ಥಳಕ್ಕೆ ಸೇರಿಸಲಿಕ್ಕೋ? ಈ ನೆಲದಲ್ಲಿ ದವಸ ಧಾನ್ಯ ಬೆಳೆಯುವಂತಿಲ್ಲ; ಅಂಜೂರವಿಲ್ಲ, ದ್ರಾಕ್ಷಿಯಿಲ್ಲ, ದಾಳಿಂಬೆಯಿಲ್ಲ, ಕುಡಿಯುವುದಕ್ಕೆ ನೀರು ಕೂಡ ಇಲ್ಲ," ಎಂದು ದೂರಿದರು. ಮೋಶೆ ಮತ್ತು ಆರೋನರು ಆ ಜನಸಂದಣಿಯನ್ನು ಬಿಟ್ಟು ದೇವದರ್ಶನದ ಗುಡಾರದ ಬಾಗಿಲ ಬಳಿಗೆ ಬಂದು ಸಾಷ್ಟಾಂಗವೆರಗಿದರು. ಆಗ ಸರ್ವೇಶ್ವರನ ತೇಜಸ್ಸು ಅವರಿಗೆ ಕಾಣಿಸಿತು. ಆಗ ಸರ್ವೇಶ್ವರ ಮೋಶೆಗೆ, "ನೀನು ಆ ಕೋಲನ್ನು ಕೈಗೆ ತೆಗೆದುಕೋ. ನೀನು ಮತ್ತು ನಿನ್ನ ಸಹೋದರ ಆರೋನನು ಜನ ಸಮೂಹದವರನ್ನು ಸಭೆ ಸೇರಿಸಿ. ಜನರೆಲ್ಲರ ಎದುರಿನಲ್ಲೇ ನೀರು ಕೊಡಬೇಕೆಂದು ಆ ಕಡಿದಾದ ಬಂಡೆಗೆ ಆಜ್ಞೆ ಮಾಡು. ಅದರಿಂದ ನೀರು ಹೊರಟು ಬರುವುದು ಅದನ್ನು ಜನ ಸಮೂಹದವರಿಗೂ ಅವರ ಜಾನುವಾರಗಳಿಗೂ ಕುಡಿಯಲು ಕೊಡಬಹುದು," ಎಂದರು. ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮೋಶೆ ಆ ಕೋಲನ್ನು ಅವರ ಸನ್ನಿಧಿಯಿಂದ ತೆಗೆದುಕೊಂಡನು. ಆರೋನನ ಜೊತೆಯಲ್ಲಿ ಜನ ಸಮೂಹದವರ ಬಳಿಗೆ ಹೋಗಿ ಕಡಿದಾದ ಆ ಬಂಡೆಗೆದುರಾಗಿ ಅವರನ್ನು ಸಭೆ ಸೇರಿಸಿದನು. ಅವರನ್ನು ಸಂಬೋಧಿಸುತ್ತಾ, "ದಂಗೆಕಾರರೇ ಕೇಳಿ; ಈ ಬಂಡೆಯಿಂದ ನಿಮಗೆ ನಾವು ನೀರನ್ನು ಬರಮಾಡಬೇಕೋ," ಎಂದು ಹೇಳಿ ಕೈಯೆತ್ತಿ ತನ್ನ ಕೈಯಲ್ಲಿದ್ದ ಕೋಲಿನಿಂದ ಆ ಬಂಡೆಯನ್ನು ಎರಡು ಸಾರಿ ಹೊಡೆದನು. ನೀರು ಪ್ರವಾಹವಾಗಿ ಹೊರಟಿತು. ಜನ ಸಮೂಹದವರೂ ಅವರ ಜಾನುವಾರಗಳೂ ಕುಡಿದರು. ಬಳಿಕ ಸರ್ವೇಶ್ವರ ಮೋಶೆ ಮತ್ತು ಆರೋನರಿಗೆ, "ನೀವು ನನ್ನನ್ನು ನಂಬದೇ ಹೋದಿರಿ. ಇಸ್ರಯೇಲರ ಮುಂದೆ ನನ್ನ ಗೌರವವನ್ನು ಕಾಪಾಡದೆ ಹೋದಿರಿ. ಆದುದರಿಂದ ಈ ಸಮಾಜದವರನ್ನು ನಾನು ವಾಗ್ದಾನ ಮಾಡಿದ ನಾಡಿಗೆ ನೀವು ಕರೆದುಕೊಂಡು ಹೋಗ ಕೂಡದು," ಎಂದು ಹೇಳಿದರು. ಇಸ್ರಯೇಲರು ಅಲ್ಲಿ ಸರ್ವೇಶ್ವರನ ಸಂಗಡ ವಾದ ಮಾಡಿದ್ದರಿಂದ ಆ ನೀರಿನ ಪ್ರವಾಹಕ್ಕೆ "ಮೆರಿಬಾ" ಎಂದು ಹೆಸರಾಯಿತು. ಅಲ್ಲಿ ಸರ್ವೇಶ್ವರ ತಮ್ಮ ಪರಮ ಪಾವನತೆಯನ್ನು ವ್ಯಕ್ತಪಡಿಸಿದರು.

ಕೀರ್ತನೆ: 95:1-2, 6-7, 8-9

ಶ್ಲೋಕ: ಆತನ ಕರೆಗೆ ಕಿವಿಗೊಟ್ಟರೆನಿತೋ ಒಳ್ಳಿತಿ ನೀವಿಂದೇ

ಶುಭಸಂದೇಶ: ಮತ್ತಾಯ  16:13-23

+
ಯೇಸುಸ್ವಾಮಿ  "ಫಿಲಿಪ್ಪನ ಸಜರೇಯ"  ಎಂಬ ಪ್ರಾಂತ್ಯಕ್ಕೆ ಬಂದರು. ಅಲ್ಲಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ನರಪುತ್ರನನ್ನು ಜನರು ಯಾರೆಂದು ಹೇಳುತ್ತಾರೆ?" ಎಂದು ಕೇಳಿದರು. ಅದಕ್ಕೆ ಶಿಷ್ಯರು,  "ಸ್ನಾನಿಕ ಯೊವಾನ್ನ",  ಎಂದು ಕೆಲವರು ಹೇಳುತ್ತಾರೆ?: ಮತ್ತೆ ಕೆಲವರು,  "ಎಲೀಯನು" ಎನ್ನುತ್ತಾರೆ; "ಯೆರೆಮೀಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು," ಎಂಬುದು ಇನ್ನೂ ಕೆಲವರ ಅಭಿಪ್ರಾಯ, ಎಂದು ಉತ್ತರ ಕೊಟ್ಟರು. ಆಗ ಯೇಸು, "ಅದರೆ ನೀವು ನನ್ನನ್ನು ಯಾರೆನ್ನುತ್ತೀರಿ?" ಎಂದು ಪ್ರಶ್ನಿಸಿದರು. ಅದಕ್ಕೆ ಪೇತ್ರನು, "ಅಭಿಷಿಕ್ತರಾದ ಲೋಕೋದ್ಧಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ," ಎಂದನು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಹೀಗೆಂದರು: "ಯೋನ್ನನ ಮಗ ಸಿಮೋನನೇ, ನೀನು ಧನ್ಯ! ಈ ವಿಷಯವನ್ನು ನಿನಗೆ ಶ್ರುತ ಪಡಿಸಿದ್ದು ನರಮಾನವ ಶಕ್ತಿ ಅಲ್ಲ, ಸ್ವರ್ಗದಲ್ಲಿರುವ ನನ್ನ ಪಿತನೇ. ನಾನು ನಿನಗೆ ಹೇಳುತ್ತೇನೆ, ಕೇಳು: "ನಿನ್ನ ಹೆಸರು ಪೇತ್ರ; ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು. ಪಾತಾಳ ಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು. ಸ್ವರ್ಗ ಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತೀಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು." ಆನಂತರ ಯೇಸು ತಮ್ಮ ಶಿಷ್ಯರಿಗೆ ತಾವು "ಅಭಿಷಿಕ್ತರಾದ ಲೋಕೋದ್ಧಾರಕ" ಎಂಬುದನ್ನು ಯಾರಿಗೂ ಹೇಳ ಕೂಡದೆಂದು ಕಟ್ಟಪ್ಪಣೆ ಮಾಡಿದರು. ಯೇಸುಸ್ವಾಮಿ ತಮ್ಮ ಶಿಷ್ಯರಿಗೆ, "ನಾನು ಜೆರುಸಲೇಮಿಗೆ ಹೋಗಬೇಕಾಗಿದೆ; ಅಲ್ಲಿ ಸಭಾ ಪ್ರಮುಖರಿಂದಲೂ ಮುಖ್ಯ ಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಕಠಿಣವಾದ ಯಾತನೆಯನ್ನು ಅನುಭವಿಸಿ, ಮರಣಕ್ಕೆ ತುತ್ತಾಗಿ, ಮೂರನೆಯ ದಿನ ಪುನರುತ್ದಾನ ಹೊಂದಬೇಕಾಗಿದೆ" ಎಂದು ಅಂದಿನಿಂಲೂ ಒತ್ತಿ ಹೇಳಲಾರಂಭಿಸಿದರು. ಇದನ್ನು ಕೇಳಲಾಗದೆ ಪೇತ್ರನು ಯೇಸುವನ್ನು ಪಕ್ಕಕ್ಕೆ ಕರೆದು, "ಪ್ರಭೂ, ಹಾಗೆನ್ನಲೇಬೇಡಿ, ನಿಮಗೆಂದಿಗೂ ಹಾಗೆ ಸಂಭವಿಸದಿರಲಿ," ಎಂದು ಪ್ರತಿಭಟಿಸಿದನು. ಆದರೆ ಯೇಸು ಪೇತ್ರನತ್ತ ತಿರುಗಿ, "ಸೈತಾನನೇ, ತೊಲಗಿಲ್ಲಿಂದ ನೀನು ನನಗೆ ಅಡೆ ತಡೆ; ನಿನ್ನ ಈ ಆಲೋಚನೆ ಮನುಷ್ಯರದ್ದೇ ಹೊರತು, ದೇವರದಲ್ಲ,"ಎಂದರು

07.08.19 - "ತಾಯಿ, ನಿನ್ನ ವಿಶ್ವಾಸ ಅಚಲವಾದುದು. ನಿನ್ನ ಕೋರಿಕೆ ನೆರವೇರಲಿ,"

ಮೊದಲನೇ ವಾಚನ: 13:1-2, 25 - 14:1, 26-29, 34-35


ಸರ್ವೇಶ್ವರ ಸ್ವಾಮಿ ಮೋಶೆಗೆ, "ನಾನು ಇಸ್ರಯೇಲರಿಗೆ ಕೊಡಲಿರುವ ಕಾನಾನ್ ನಾಡನ್ನು ಸಂಚರಿಸಿ, ನೋಡಿ ಬರಲು ಒಂದೊಂದು ಕುಲದಿಂದ ಒಬ್ಬೊಬ್ಬ ಮುಖ್ಯಸ್ಥನನ್ನು ಕಳಿಸು," ಎಂದು ಆಜ್ಞಾಪಿಸಿದರು. ನಾಲ್ವತ್ತು ದಿವಸ ಆ ನಾಡನ್ನು ಸಂಚರಿಸಿ ನೋಡಿ ಆದ ಮೇಲೆ ಅವರು ಹಿಂದಿರುಗಿ ಬಂದರು. ಪಾರಾನ್ ಮರುಭೂಮಿಯ ಕಾದೇಶಿನಲ್ಲಿದ್ದ ಮೋಶೆ, ಆರೋನ್ ಹಾಗೂ ಇಸ್ರಯೇಲ್ ಜನ ಸಮೂಹದ ಬಳಿಗೆ ಬಂದು ಅವರಿಗೆ ಸಮಾಚಾರವನ್ನು ತಿಳಿಸಿ ಆ ನಾಡಿನ ಹಣ್ಣುಗಳನ್ನು ತೋರಿಸಿದರು. ಮೋಶೆಗೆ, "ನೀವು ನಮ್ಮನ್ನು ಕಳಿಸಿದ ನಾಡಿಗೆ ಹೋಗಿದ್ದೆವು. ಅದು ಹಾಲು - ಜೇನು ಹರಿಯುವಂಥ ನಾಡು, ಅಲ್ಲಿನ ಹಣ್ಣು ಹಂಪಲುಗಳು ಇಂಥವು. ಅಂತೆಯೇ ಆ ನಾಡಿನ ನಿವಾಸಿಗಳು ಬಲಿಷ್ಠರು. ಅವರಿರುವ ಪಟ್ಟಣಗಳು ದೊಡ್ಡವು; ಅವು ಕೋಟೆಕೊತ್ತಲುಗಳಿಂದ ಕೂಡಿವೆ. ಅದೂ ಅಲ್ಲದೆ ಅಲ್ಲಿ  "ಅನಕಿಮ್"  ವಂಶಸ್ಥರನ್ನು ಕಂಡೆವು. ದಕ್ಷಿಣ ಪ್ರಾಂತ್ಯದಲ್ಲಿ ಅಮಾಲೇಕ್ಯರು, ಮಲೆನಾಡಿನಲ್ಲಿ ಹಿತ್ತಿಯರು,  ಯೆಬೂಸಿಯರು ಹಾಗು ಅಮೋರಿಯರು ಮತ್ತು ಸಮುದ್ರ ತೀರದಲ್ಲಿ ಹಾಗೂ ಜೋರ್ಡಾನ್ ನದಿಯ ಪರಿಸರದಲ್ಲಿ ಕಾನಾನ್ಯರು ವಾಸವಾಗಿದ್ದಾರೆ," ಎಂದು ವರದಿ ಮಾಡಿದರು. ಮೋಶೆಗೆ ವಿರುದ್ಧ ಗೊಣಗುಟ್ಟುತ್ತಿದ್ದವರನ್ನು ಕಾಲೇಬನು ಸಮಾಧಾನಗೊಳಿಸುತ್ತಾ, "ನಾವು ಧೈರ್ಯದಿಂದ ಆ ಮಲೆನಾಡಿಗೆ ಹೋಗಿ ಅದನ್ನು ಸ್ವಾಧೀನಪಡಿಸಿಕೊಳ್ಳೋಣ. ಅದನ್ನು ಜಯಿಸಲು ನಮ್ಮಿಂದ ಸಾಧ್ಯ," ಎಂದನು. ಆದರೆ ಅವನ ಜೊತೆಯಲ್ಲಿ ಹೋಗಿದ್ದವರು, "ಆ ಜನರು ನಮಗಿಂತ ಬಲಿಷ್ಠರು! ಅವರ ಮೇಲೆ ಜಯ ಸಾಧಿಸಲು ನಮಗೆ ಶಕ್ತಿ ಸಾಲದು," ಎಂದರು. ಅದಲ್ಲದೆ ತಾವು ಸಂಚರಿಸಿ ನೋಡಿ ಬಂದ ನಾಡಿನ ವಿಷಯವಾಗಿ ಇಸ್ರಯೇಲರಿಗೆ ಅಶುಭ ಸಮಾಚಾರವನ್ನೇ ಹೇಳುವವರಾದರು. "ನಾವು ಸಂಚಾರ ಮಾಡಿ ನೋಡಿ ಬಂದ ನಾಡು ತನ್ನಲ್ಲಿ ವಾಸಿಸುವವರನ್ನೇ ಕಬಳಿಸುವಂತಿದೆ. ನಾವು ಅಲ್ಲಿ ನೋಡಿದ ಜನರೆಲ್ಲರು ಬಹು ಎತ್ತರವಾದ ವ್ಯಕ್ತಿಗಳು ಅಲ್ಲಿ "ನೆಫೀಲಿಯರನ್ನು" ಅಂದರೆ ನೆಫೀಲಿಯನ ವಂಶದವರಾದ "ಅನಕಿಮ್" ರನ್ನು ನೋಡಿದೆವು. ಅವರ ಮುಂದೆ ನಾವು ಮಿಡತೆಗಳಂತೆ ಇದ್ದೆವು. ಅವರಿಗೂ ನಾವು ಹಾಗೆ ಕಾಣಿಸಿಕೊಂಡೆವು," ಎಂದರು. ಜನರೆಲ್ಲರೂ ಈ ವರದಿಯನ್ನು ಕೇಳಿ ಗಟ್ಟಿಯಾಗಿ ಗೋಳಿಟ್ಟರು. ರಾತ್ರಿಯೆಲ್ಲಾ ಅಳುತ್ತಿದ್ದರು. ಸರ್ವೇಶ್ವರ ಮೋಶೆ ಮತ್ತು ಆರೋನರಿಗೆ: "ನನಗೆ ವಿರೋಧವಾಗಿ ಗೊಣಗುಟ್ಟುವ ಈ ದುಷ್ಟ ಸಮೂಹದವರನ್ನು ನಾನು ಎಷ್ಟು ಕಾಲ ಸಹಿಸಲಿ! ಈ ಇಸ್ರಯೇಲರು ನನಗೆ ವಿರುದ್ಧ ಗೊಣಗುಟ್ಟುವ ಮಾತುಗಳು ನನಗೆ ಕೇಳಿಸಿವೆ. ನೀವು ಅವರಿಗೆ ಹೀಗೆ ಹೇಳಬೇಕು: "ಸರ್ವೇಶ್ವರ ಹೇಳುವುದೇನೆಂದರೆ - ನನ್ನ ಜೀವದಾಣೆ, ನೀವು ನನಗೆ ಕೇಳಿಸುವಂತೆ ಆಡಿಕೊಂಡ ಪ್ರಕಾರವೇ ನಾನು ಮಾಡುತ್ತೇನೆ. ನಿಮ್ಮ ಶವಗಳು ಈ ಮರಭೂಮಿಯಲ್ಲೇ ಬೀಳುವುವು. ನೀವು ನನಗೆ ವಿರೋಧವಾಗಿ ಗೊಣಗಿದ್ದರಿಂದ ನಿಮ್ಮಲ್ಲಿ ಎಣಿಕೆಯಾದವರೆಲ್ಲರೂ ಮರುಭೂಮಿಯಲ್ಲೇ ಸಾಯುವರು. ನೀವು ಆ ನಾಡನ್ನು ನಾಲ್ವತ್ತು ದಿನಗಳು ಸಂಚರಿಸಿ ನೋಡಿದಿರಿ. ಅಂತೆಯೇ ಒಂದು ದಿನಕ್ಕೆ ಒಂದು ವರ್ಷದ ಮೇರೆಗೆ ನಾಲ್ವತ್ತು ವರ್ಷ ನಿಮ್ಮ ಪಾಪದ ಫಲವನ್ನು ಅನುಭವಿಸುವಿರಿ; ನಾನು ಕೈ ಬಿಟ್ಟವರ ಗತಿ ಎಂಥದೆಂದು  ತಿಳಿದುಕೊಳ್ಳುವಿರಿ. ಇದು ಸರ್ವೇಶ್ವರನೆಂಬ ನಾನೇ ಹೇಳಿದ ಮಾತು. ನನಗೆ ವಿರೋಧವಾಗಿ ಒಟ್ಟು ಕೂಡಿಕೊಂಡಿರುವ ಈ ದುಷ್ಟ ಸಮೂಹದವರೆಲ್ಲರಿಗೆ ಈ ಮಾತಿನ ಮೇರೆಗೆ  ಮಾಡಿಯೇ ತೀರುವೆನು. ಮರುಭೂಮಿಯಲ್ಲೇ ಅವರೆಲ್ಲರು ಸಾಯಬೇಕು," ಎಂದು ಹೇಳಿದರು.

ಕೀರ್ತನೆ: 106:6-7, 13-14, 21-22, 23

ಶ್ಲೋಕ: ಮರೆಯಬೇಡೆನ್ನನು ಪ್ರಭೂ , ನಿನ್ನ ಪ್ರಜೆಗೆ ದಯೆತೋರುವಾಗ

ಶುಭಸಂದೇಶ: ಮತ್ತಾಯ 15:21-28



ಯೇಸುಸ್ವಾಮಿ  ನಸರೇತಿನಿಂದ ಹೊರಟು ಟೈರ್ ಹಾಗೂ ಸಿದೋನ್ ಪ್ರಾಂತ್ಯಕ್ಕೆ ಹೋದರು. ಅಲ್ಲಿ ವಾಸವಾಗಿದ್ದ ಕಾನಾನ್ ನಾಡಿನ ಮಹಿಳೆಯೊಬ್ಬಳು ಅವರ ಬಳಿಗೆ ಬಂದಳು. "ಸ್ವಾಮೀ ದಾವೀದ ಕುಲಪುತ್ರರೇ, ನನಗೆ ದಯೆತೋರಿ, ನನ್ನ ಮಗಳಿಗೆ ದೆವ್ವ ಹಿಡಿದು ಬಹಳ ಸಂಕಟ ಪಡುತ್ತಿದ್ದಾಳೆ," ಎಂದು ಕೂಗಿಕೊಂಡಳು. ಯೇಸು ಆಕೆಗೆ ಒಂದು ಮಾತನ್ನೂ ಹೇಳಲಿಲ್ಲ. ಶಿಷ್ಯರು ಹತ್ತಿರಕ್ಕೆ ಬಂದು, "ಇವಳನ್ನು ಕಳಿಸಿಬಿಡಿ, ಒಂದೇ ಸಮನೆ ಗೋಳಿಡುತ್ತಾ, ನಮ್ಮನ್ನು ಬೆಂಬತ್ತಿ ಬರುತ್ತಿದ್ದಾಳೆ," ಎಂದು ಕೇಳಿಕೊಂಡರು. ಆಗ ಯೇಸು, "ನನ್ನನ್ನು ಕಳಿಸಿರುವುದು ತಪ್ಪಿ ಹೋದ ಕುರಿಗಳಂತಿರುವ ಇಸ್ರಯೇಲ್ ಜನಾಂಗದವರ ಬಳಿಗೆ ಮಾತ್ರ," ಎಂದರು. ಆದರೂ ಆಕೆ ಯೇಸುವಿಗೆ ಅಡ್ಡ ಬಿದ್ದು, "ಸ್ವಾಮೀ  ಸಹಾಯ ಮಾಡಿ," ಎಂದು ಯಾಚಿಸಿದಳು. ಅದಕ್ಕೆ ಯೇಸು, ಮಕ್ಕಳ ಆಹಾರವನ್ನು ತೆಗೆದು ನಾಯಿಗಳಿಗೆ ಎಸೆಯುವುದು ಸರಿಯಲ್ಲ ಎಂದರು. ಆಗ ಆಕೆ,  "ಅದು ನಿಜ ಸ್ವಾಮೀ, ನಾಯಿಗಳಾದರೂ ತಮ್ಮ ಯಜಮಾನನ ಮೇಜಿನಿಂದ ಕೆಳಕ್ಕೆ ಬೀಳುವ ಚೂರುಪಾರನ್ನು ತಿನ್ನುತ್ತವೆ ಅಲ್ಲವೇ?" ಎಂದು ಮರುತ್ತರ ಕೊಟ್ಟಳು. ಆಗ ಯೇಸು, "ತಾಯಿ, ನಿನ್ನ ವಿಶ್ವಾಸ ಅಚಲವಾದುದು. ನಿನ್ನ ಕೋರಿಕೆ ನೆರವೇರಲಿ," ಎಂದರು. ಅದೇ ಕ್ಷಣದಲ್ಲಿ ಆಕೆಯ ಮಗಳು ಗುಣಹೊಂದಿದಳು.

06.08.19 - ಅವರ ಉಡುಪು ಬೆಳ್ಳಗೆ ಪ್ರಜ್ವಲಿಸಿತು

ಮೊದಲನೇ ವಾಚನ: ದಾನಿಯೇಲ 7:9-10, 13-14

ನಾನು ನೋಡುತ್ತಿದ್ದ ಹಾಗೆ ಸಿಂಹಾಸನಗಳನ್ನು ಹಾಕಲಾಯಿತು. ಮಹಾವೃದ್ಧನೊಬ್ಬನು ಆಸೀನನಾದನು. ಆತನ ಉಡುಪು ಬೆಳ್ಳಗಿತ್ತು ಹಿಮದಂತೆ. ಆತನ ತಲೆಗೂದಲಿತ್ತು ನಿರ್ಮಲವಾದ ಬಿಳಿಯ ಉಣ್ಣೆಯಂತೆ. ಆತನ ಸಿಂಹಾಸನ ಅಗ್ನಿಜ್ವಾಲೆಗಳು ಧಗಧಗಿಸುವ ಬೆಂಕಿ ಅದರ ಚಕ್ರಗಳು. ಆ ಸಿಂಹಾಸನದ ಸಮ್ಮುಖದಿಂದ ಪ್ರಜ್ವಲ ಪ್ರವಾಹವೊಂದು ಉಕ್ಕಿ ಹರಿದು ಬಂದಿತು. ಲಕ್ಷೋಪಲಕ್ಷ  ದೂತರು ಆತನಿಗೆ ಸೇವೆ ಸಲ್ಲಿಸುತ್ತಿದ್ದರು. ಕೋಟ್ಯಾನುಕೋಟಿ ಕಿಂಕರರು ಆತನ ಮುಂದೆ ನಿಂತಿದ್ದರು. ನ್ಯಾಯಸಭೆಯವರು ತೀರ್ಪು ನೀಡಲು ಕುಳಿತುಕೊಂಡರು. ಪಟ್ಟಿ ಪುಸ್ತಕಗಳನ್ನು ತೆರೆಯಲಾಯಿತು. ನಾನು ಕಂಡ ರಾತ್ರಿಯ ಕನಸಿನಲ್ಲಿ ನರಪುತ್ರನಂತಿರುವವನು ಆಕಾಶದ ಮೇಘಗಳೊಂದಿಗೆ ಬಂದು ಆ ಮಹಾವೃದ್ಧನನ್ನು ಸಮೀಪಿಸಿದನು. ಅವನನು ಆತನ ಸನ್ನಿಧಿಗೆ ತಂದರು. ಸಕಲ ರಾಷ್ಟ್ರ-ಕುಲ-ಭಾಷೆಗಳವರು ಅವನಿಗೆ ಸೇವೆ ಸಲ್ಲಿಸಲೆಂದು ಅವನಿಗೆ ದೊರೆತನ, ಘನತೆ, ರಾಜ್ಯತ್ವ ಇವುಗಳನ್ನು ಕೊಡಲಾಯಿತು. ಅವನ ಆಳ್ವಿಕೆಗೆ ಅಂತ್ಯವಿಲ್ಲ, ಅದು ಶಾಶ್ವತವಾದುದು, ಅವನ ರಾಜ್ಯ ಎಂದಿಗೂ ಅಳಿಯದು!

ಕೀರ್ತನೆ: 97:1-2, 5-6, 9

ಶ್ಲೋಕ: ಪ್ರಭುವೇ, ಸರ್ವಾಧಿಕಾರಿ ನೀನು ಲೋಕಕ್ಕೆಲ್ಲಾ

ಎರಡನೇ ವಾಚನ: 2 ಪೇತ್ರ  1:16-19

ನಮ್ಮ ಪ್ರಭು ಯೇಸುಕ್ರಿಸ್ತರ ಶಕ್ತಿ ಸಾಮರ್ಥ್ಯವನ್ನು ಮತ್ತು ಅವರ ಪುನರಾಗಮನವನ್ನು ನಿಮಗೆ ತಿಳಿಯಪಡಿಸುವಾಗ ಚಮತ್ಕಾರದಿಂದ ಕಲ್ಪಿಸಿದ ಕಟ್ಟುಕತೆಗಳನ್ನು ಆಧರಿಸಿ ನಾವು ಮಾತಾನಾಡಲಿಲ್ಲ. ನಾವೇ ಅವರ ಮಹತ್ತನ್ನು ಕಣ್ಣಾರೆಕಂಡು ಅದನ್ನು ತಿಳಿಯಪಡಿಸಿದ್ದೇವೆ. ತಂದೆಯಾದ ದೇವರಿಂದ ಅವರು ಗೌರವವನ್ನೂ ಮಹಿಮೆಯನ್ನೂ ಪಡೆದಾಗ, "ಈತನು ನನ್ನ ಪುತ್ರ, ನನಗೆ ಪ್ರಿಯನಾದವನು; ನನ ಅಪಾರ ಮೆಚ್ಚುಗೆಗೆ ಪಾತ್ರನು," ಎಂದು ಅವರನ್ನು ಕುರಿತೇ ವಾಣಿಯೊಂದು ಮಹೋನ್ನತ ವೈಭವದಿಂದ ಕೇಳಿಬಂದಿತು. ಆಗ ನಾವು ಆ ಪುನಿತ ಪರ್ವತದ ಮೇಲೆ ಅವರೊಡನೆ ಇದ್ದೆವು; ಸ್ವರ್ಗದಿಂದ ಆ ವಾಣಿಯನ್ನು ನಾವು ಕೇಳಿದೆವು. ಆದ್ದರಿಂದ ಪ್ರವಾದನೆಯ ಸಂದೇಶವು ನಮಗೆ ಮತ್ತಷ್ಟು ಖಚಿತವಾಗಿ ಗೊತ್ತಾಗಿದೆ. ಇದನ್ನು  ನೀವು ಕತ್ತಲಲ್ಲಿ ಬೆಳಗುವ ದೀಪವೆಂದು ಪರಿಗಣಿಸಿ ಲಕ್ಷ್ಯಕೊಟ್ಟರೆ ಒಳ್ಳೆಯದು. ನಿಮ್ಮ ಹೃದಯದಲ್ಲಿ ಬೆಳಕು ಹರಿದು ಅರುಣೋದಯದ ನಕ್ಷತ್ರವು ಮೂಡುವವರೆಗೂ ಈ ದೀಪವು ಬೆಳಗುತ್ತಿರುತ್ತದೆ.

 ಶುಭಸಂದೇಶ: ಲೂಕ 9:26-36


ಯಾರು ನನ್ನನ್ನೂ ನನ್ನ ಮಾತುಗಳನ್ನೂ ಕುರಿತು ನಾಚಿಕೆಪಡುತ್ತಾರೋ, ಅಂಥವರನ್ನು ಕುರಿತು ನರಪುತ್ರನು ಸಹ, ತನ್ನ ಪಿತನ ಹಾಗೂ ದೇವದೂತರ ಪ್ರಭಾವದೊಡನೆ ಬರುವಾಗ, ನಾಚಿಕೆಪಡುವನು," ಇಲ್ಲಿರುವವರಲ್ಲಿ ಕೆಲವರು, ದೇವರ ಸಾಮ್ರಾಜ್ಯವನ್ನು ನೋಡದೆ ಸಾವನ್ನು ಸವಿಯುವುದಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ," ಎಂದರು. ಇದನ್ನೆಲ್ಲ ಹೇಳಿ ಸುಮಾರು ಎಂಟು ದಿನಗಳಾದ ಬಳಿಕ ಪೇತ್ರ, ಯೊವಾನ್ನ ಮತ್ತು ಯಕೋಬ ಇವರನ್ನು ತಮ್ಮೊಡನೆ ಕರೆದುಕೊಂಡು ಯೇಸುಸ್ವಾಮಿ ಪ್ರಾರ್ಥನೆ ಮಾಡಲು ಬೆಟ್ಟವನ್ನು ಹತ್ತಿದರು.  ಪ್ರಾರ್ಥನೆ ಮಾಡುವ ಸಮಯದಲ್ಲಿ ಯೇಸುವಿನ ಮುಖಚರ್ಯೆಯು ಮಾರ್ಪಟ್ಟಿತು. ಅವರ ಉಡುಪು ಬೆಳ್ಳಗೆ ಪ್ರಜ್ವಲಿಸಿತು. ಇದ್ದಕಿದ್ದ ಹಾಗೆ ಮೋಶೆ ಮತ್ತು  ಎಲೀಯ ಎಂಬ ಇಬ್ಬರು ಪ್ರವಾದಿಗಳು ಅವರೊಡನೆ ಮಾತನಾಡುತ್ತಿದ್ದರು. ದಿವ್ಯ ವೈಭವದಿಂದ ಕಂಗೊಳಿಸುತ್ತಿದ್ದ ಇವರಿಬ್ಬರು ಯೇಸು ಜೆರುಸಲೇಮಿನಲ್ಲಿ ಪ್ರಾಣತ್ಯಾಗಮಾಡಿ ದೈವೇಚ್ಛೆಯನ್ನು ನೆರವೆರಿಸಲಿದ್ದ ವಿಷಯವಾಗಿ ಸಂಭಾಷಿಸುತ್ತಿದ್ದರು. ಗಾಢ ನಿದ್ರೆಯಲ್ಲಿದ್ದ ಪೇತ್ರ ಮತ್ತು ಸಂಗಡಿಗರು ಎಚ್ಚೆತ್ತಾಗ ಯೇಸುವಿನ ಮಹಿಮೆಯನ್ನೂ ಅವರೊಡನೆ ನಿಂತಿದ್ದ ಆ ಇಬ್ಬರನ್ನೂ ಕಂಡರು. ಅವರಿಬ್ಬರೂ ಯೇಸುವನ್ನು ಬಿಟ್ಟು ಹೋಗುತ್ತಿರುವಾಗ, ಪೇತ್ರನು ಯೇಸುವಿಗೆ ,  "ಗುರುದೇವಾ, ನಾವು ಇಲ್ಲೇ ಇರುವುದು ಒಳ್ಳೆಯದು; ಅಪ್ಪಣೆಯಾಗಲಿ, ಮೂರು ಗುಡಾರಗಳನ್ನು ಕಟ್ಟುವೆವು - ತಮಗೊಂದು, ಮೋಶೆಗೊಂದು ಮತ್ತು ಎಲೀಯನಿಗೊಂದು," ಎಂದನು. ತಾನು ಏನು ಹೇಳುತ್ತಿರುವೆನೆಂದೇ ಪೇತ್ರನು ಗ್ರಹಿಸಲಿಲ್ಲ. ಆತನು ಇದನ್ನು ಹೇಳುತ್ತಿದ್ದ ಹಾಗೆ ಮೇಘವೊಂದು ಬಂದು ಅವರನ್ನಾವರಿಸಿತು. ಆ ಮೇಘದಲ್ಲಿ ಅವರು ಅದೃಶ್ಯರಾದಾಗ ಶಿಷ್ಯರು ದಿಗಿಲುಗೊಂಡರು. ಅದರೊಳಗಿಂದ, "ಈತನು ನನ್ನ ಪುತ್ರನು; ನಾನು ಆರಿಸಿಕೊಂಡವನು. ಈತನ ಮಾತಿಗೆ ಕಿವಿಗೊಡಿರಿ," ಎಂಬ ವಾಣಿ ಕೇಳಿಸಿತು. ಆ ವಾಣಿ ಆದಮೇಲೆ ಕಾಣಿಸಿಕೊಂಡವರು ಯೇಸು ಮಾತ್ರ, ಶಿಷ್ಯರು ತಾವು ನೋಡಿದ್ದನ್ನು ಕುರಿತು ಆ ದಿನಗಳಲ್ಲಿ ಏನನ್ನೂ ಹೇಳದೆ, ಯಾರಿಗೂ ತಿಳಿಸದೆ, ತತ್ಕಾಲ ಮೌನದಿಂದ ಇದ್ದರು.

05.08.19 - "ಹೆಂಗಸರು, ಮಕ್ಕಳು ಬಿಟ್ಟರೆ, ಗಂಡಸರೇ ಸುಮಾರು ಐದು ಸಾವಿರ ಇದ್ದರು"

ಮೊದಲನೇ ವಾಚನ: ಸಂಖ್ಯಾಕಾಂಡ 11:4-15

ಇಸ್ರಯೇಲರೊಡನೆ ಪ್ರಯಾಣ ಮಾಡುತ್ತಿದ್ದ ಅನ್ಯ ಜನರು ಮಾಂಸಕ್ಕಾಗಿ ಹಂಬಲಿಸಿದರು. ಇಸ್ರಯೇಲರು ಕೂಡ ಕಣ್ಣೀರಿಡುತ್ತಾ: "ಅಯ್ಯೋ, ನಮಗೆ ಮಾಂಸ ಕೊಡುವವರಾರು? ಈಜಿಪ್ಟ್ ದೇಶದಲ್ಲಿ ನಾವು ಬಿಟ್ಟಿಯಾಗಿ ತಿನ್ನುತ್ತಿದ್ದ ಮೀನು, ಸೌತೆಕಾಯಿ, ಕರ್ಬೂಜ, ಉಳ್ಳಿಗಡ್ಡೆ, ನೀರುಳ್ಳಿ, ಬೆಳ್ಳುಳ್ಳಿ ಇವೆಲ್ಲಾ ನೆನಪಿಗೆ ಬರುತ್ತವೆ. ಇಲ್ಲಿಯಾದರೋ ನಮ್ಮ ಜೀವ ಬತ್ತಿ ಹೋಯಿತು. ಈ "ಮನ್ನ"ವನ್ನು ಬಿಟ್ಟರೆ ನಮಗೆ ಇನ್ನೇನು ಗತಿಯಿಲ್ಲ," ಎಂದು ನಿಷ್ಠುರವಾಗಿ ಮಾತಾನಾಡಿಕೊಳ್ಳುತ್ತಿದ್ದರು. ಆ  "ಮನ್ನ" ಕೊತ್ತಂಬರಿ ಬೀಜದಂತಿತ್ತು, ಗುಗ್ಗುಲದಂತೆ ಕಾಣಿಸುತ್ತಿತ್ತು. ಜನರು ಹೊರಗೆ ಹೋಗಿ ಅದನ್ನು ಕೂಡಿಸಿಕೊಂಡು ಬಂದು ಬೀಸುವ ಕಲ್ಲುಗಳಿಂದ ಬೀಸಿ, ಇಲ್ಲವೆ ಒರಳಲ್ಲಿ ಕುಟ್ಟಿ, ಮಡಕೆಗಳಲ್ಲಿ ಬೇಯಿಸಿ ರೊಟ್ಟಿಗಳನ್ನು ಮಾಡಿಕೊಳ್ಳುತ್ತಿದ್ದರು. ಅದರ ರುಚಿ ಎಣ್ಣೆ ಬೆರೆಸಿ ಮಾಡಿದ ತಿಂಡಿಯಂತೆ ಇರುತ್ತಿತ್ತು. ರಾತ್ರಿಯಲ್ಲಿ ಮಂಜು ಪಾಳೆಯದ ಮೇಲೆ ಬೀಳುತ್ತಿದ್ದಾಗ ಅದರೊಂದಿಗೆ  "ಮನ್ನ"ವೂ ಬೀಳುತ್ತಿತ್ತು. ಎಲ್ಲಾ ಕುಟುಂಬದವರು ತಮ್ಮ ತಮ್ಮ ಡೇರೆಗಳ ಬಾಗಿಲುಗಳಲ್ಲಿ ನಿಂತು ನಿಷ್ಠುರವಾಗಿ ಮಾತನಾಡಿಕೊಳ್ಳುತ್ತಿದ್ದುದ್ದು ಮೋಶೆಗೆ ಕೇಳಿಸಿತು. ಆಗ ಸರ್ವೇಶ್ವರನ ಕೋಪ ಉಕ್ಕೇರಿತು; ಮೋಶೆಗೆ ಇದನ್ನು ಸಹಿಸಲಾಗಲಿಲ್ಲ. ಆತ ಸರ್ವೇಶ್ವರನಿಗೆ, "ನಿಮ್ಮ ದಾಸನಾದ ನನಗೇಕೆ ಈ ಜನರನ್ನು ಕರೆದೊಯ್ಯುವ ಭಾರವನ್ನು ಹಾಕಿದಿರಿ. ನಿಮ್ಮ ದಯೆಗೆ ನಾನು ಅಯೋಗ್ಯನಾದೆನೇ? ಮೊಲೆಗೂಸನ್ನು ಎತ್ತಿಕೊಂಡು ಹೋಗುವವಳಂತೆ ಈ ಜನರನ್ನು ತೋಳ ತೆಕ್ಕೆಯಲ್ಲಿರಿಸಿ, ಅವರ ಪೂರ್ವಜರಿಗೆ ನಾನು ಪ್ರಯಾಣ ಮಾಡಿದ ನಾಡಿಗೆ ಒಯ್ಯಿ" ಎಂದು ಹೇಳುತ್ತೀರಲ್ಲವೆ? ನಾನು ಅವರಿಗೆ ಹೆತ್ತ ತಾಯಿಯೋ? ಇವರು ನಿಷ್ಠುರವಾಗಿ ಮಾತನಾಡುತ್ತಾ ನನ್ನ ಬಳಿಗೆ ಬಂದು ತಿನ್ನಲಿಕೆ ನನಗೆ ಮಾಂಸವನ್ನು ಕೊಡು ಎಂದು ಕೇಳುತ್ತಿದ್ದಾರಲ್ಲಾ. ಇಷ್ಟು ಜನಕ್ಕೆ ಬೇಕಾದ ಮಾಂಸ ನನಗೆಲ್ಲಿ ದೊರಕೀತು? ಇಷ್ಟು ಜನರ ಭಾರವನ್ನು ನಾನೊಬ್ಬನೇ ಹೊರುವುದು ಅಸಾಧ್ಯ. ಅದು ನನ ಶಕ್ತಿಗೆ ಮೀರಿದ ಕೆಲಸ. ನೀವು ಹೀಗೆ ಮಾಡುವುದಕಿಂತಲೂ ನನ್ನನ್ನು ಈ ಕೂಡಲೆ ಕೊಂದು ಹಾಕಿದರೆ ಉಪಕಾರವಾದೀತು; ನನಗೆ ಆಗುತ್ತಿರುವ ಸಂಕಟವನ್ನು ಸಹಿಸಲಾರೆ," ಎಂದನು.

ಕೀರ್ತನೆ: 81:12-13, 14-15, 16-17

ಶ್ಲೋಕ: ಬಲಪ್ರದನಾದ ದೇವನಿಗೆ ಮಾಡಿರಿ ಜಯಕಾರವನು

ಶುಭಸಂದೇಶ: ಮತ್ತಾಯ 14:13-21


ಯೊವಾನ್ನನ ಮರಣದ ಸಮಾಚಾರವನ್ನು ಕೇಳಿದ ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು ದೋಣಿ ಹತ್ತಿ ನಿರ್ಜನ ಪ್ರದೇಶಕ್ಕೆ  ಒಬ್ಬಂಟಿಗರಾಗಿ ಹೊರಟರು. ಇದನ್ನು ತಿಳಿದುಕೊಂಡ ಜನರು ಊರೂರುಗಳಿಂದ ಹೊರಟು ಗುಂಪು ಗುಂಪಾಗಿ ಅವರ ಹಿಂದೆಯೇ ಕಾಲ್ದಾರಿಯಲ್ಲಿ ನಡೆದುಕೊಂಡು ಹೋದರು.  ಯೇಸು ದೋಣಿಯಿಂದ ಇಳಿದಾಗ, ದೊಡ್ಡ ಜನ ಸಮೂಹ ಆಗಲೇ ಅಲ್ಲಿ ಸೇರಿತ್ತು. ಆ ಸಮೂಹವನ್ನು ಕಂಡು ಅವರ ಮನ ಕರಗಿತು; ಅವರಲ್ಲಿ ಅಸ್ವಸ್ಥರಾಗಿದ್ದವರನ್ನು ಗುಣಪಡಿಸಿದರು. ಸಂಜೆಯಾದಾಗ, ಶಿಷ್ಯರು ಯೇಸುವಿನ ಬಳಿಗೆ ಬಂದು,  "ಇದು ನಿರ್ಜನ ಪ್ರದೇಶ, ಈಗಾಗಲೇ ಹೊತ್ತು ಮೀರಿ ಹೋಗಿದೆ. ಜನಸಮೂಹವನ್ನು ಕಳುಹಿಸಿಬಿಡಿ, ಹಳ್ಳಿಪಳ್ಳಿಗಳಿಗೆ ಹೋಗಿ ಅವರಿಗೆ ಬೇಕಾದ ತಿಂಡಿ ತಿನುಸುಗಳನ್ನು ಕೊಂಡುಕೊಳ್ಳಲಿ,"  ಎಂದರು. ಅದಕ್ಕೆ ಯೇಸು, "ಅವರು ಹೋಗಬೇಕಾಗಿಲ್ಲ, ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿ," ಎಂದರು. ಶಿಷ್ಯರು ಪ್ರತ್ಯುತ್ತರವಾಗಿ, "ನಮ್ಮ ಬಳಿ ಐದೇ ಐದು ರೊಟ್ಟಿ ಮತ್ತು ಎರಡು ಮೀನುಗಳು ಮಾತ್ರ ಇವೆ," ಎಂದರು. ಯೇಸು, "ಅವನ್ನು ಇಲ್ಲಿಗೆ ತನ್ನಿ,"ಎಂದು ಹೇಳಿ, ಜನರೆಲ್ಲರೂ ಹುಲ್ಲಿನ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆ ಮಾಡಿದರು. ಬಳಿಕ ಆ ಐದು ರೊಟ್ಟಿಗಳನ್ನೂ ಎರಡು ಮೀನುಗಳನ್ನೂ ತೆಗೆದುಕೊಂಡು, ಸ್ವರ್ಗದತ್ತ ಕಣ್ಣೆತ್ತಿ ನೋಡಿ, ದೇವರಿಗೆ ಸ್ತೋತ್ರ ಸಲ್ಲಿಸಿದರು. ತರುವಾಯ ರೊಟ್ಟಿಗಳನ್ನು ಮುರಿದು ಶಿಷ್ಯರಿಗೆ ಕೊಟ್ಟರು. ಶಿಷ್ಯರು ಜನರಿಗೆ ಹಂಚಿದರು. ಎಲ್ಲರೂ ಹೊಟ್ಟೆ ತುಂಬ ತಿಂದು ತೃಪ್ತರಾದರು. ಉಳಿದಿದ್ದ ತುಂಡುಗಳನ್ನು ಒಟ್ಟುಗೂಡಿಸಿದಾಗ ಅವು ಹನ್ನೆರಡು ಬುಟ್ಟಿಗಳ ತುಂಬ ಆದವು. ಊಟ ಮಾಡಿದವರಲ್ಲಿ ಹೆಂಗಸರು, ಮಕ್ಕಳು ಬಿಟ್ಟರೆ, ಗಂಡಸರೇ ಸುಮಾರು ಐದು ಸಾವಿರ ಇದ್ದರು.

04.08.2019 - "ಒಬ್ಬನಿಗೆ ಎಷ್ಟೇ ಸಿರಿ ಸಂಪತ್ತಿರಲಿ, ಅವನ ನಿಜವಾದ ಜೀವನ ಅದನ್ನು ಅವಲಂಬಿಸಿಲ್ಲ"

ಮೊದಲನೇ ವಾಚನ: ಉಪದೇಶಕ 1:2, 2:21-23 

ಉಪದೇಶಕನು ಹೇಳುವುದನ್ನು ಕೇಳಿ: ವ್ಯರ್ಥಗಳಲ್ಲಿ ವ್ಯರ್ಥ, ವ್ಯರ್ಥವೇ ವ್ಯರ್ಥ, ಎಲ್ಲವೂ ವ್ಯರ್ಥ, ಒಬ್ಬನು ಜ್ಞಾನದಿಂದಲೂ ತಿಳುವಳಿಕೆಯಿಂದಲೂ ಕೆಲಸಮಾಡಿ ಕಾರ್ಯವನ್ನು ಸಿದ್ಧಿಗೆ ತಂದಮೇಲೆ, ಅದಕ್ಕಾಗಿ ಪ್ರಯಾಸಪಡದವನಿಗೆ ಅದನ್ನು ವಾರಸುದಾರನಾಗಿ ಬಿಡಬೇಕಾಗುತ್ತದೆ. ಇದು ಸಹ ವ್ಯರ್ಥವಲ್ಲವೆ? ಇದು ಅನ್ಯಾಯವಲ್ಲವೆ? ಲೋಕದಲ್ಲಿ ಮಾನವನು ಹೃತ್ಪೂರ್ವಕವಾಗಿ ಪಡುವ ಪ್ರಯಾಸದಿಂದ ಅವನಿಗೆ ಸಿಗುವ ಲಾಭವಾದರೂ ಏನು? ಅವನ ಮನಸ್ಸಿಗೆ ನೆಮ್ಮದಿ ಇಲ್ಲ. ಇದು ಸಹ ವ್ಯರ್ಥವೇ ಸರಿ.

ಕೀರ್ತನೆ: 90:3-4, 5-6, 12-13, 14, 17

ಶ್ಲೋಕ: ಆತನ ಕರೆಗೆ ಕಿವಿಗೊಟ್ಟರೆನಿತೋ ಒಳಿತು ನೀವಿಂದೇ

ಎರಡನೇ ವಾಚನ: ಕೊಲೊಸ್ಸೆಯರಿಗೆ: 3:1-5, 9-11

ನೀವು ಯೇಸುಕ್ರಿಸ್ತನೊಂದಿಗೆ ಪುನರುತ್ಥಾನ  ಹೊಂದಿರುವುದಾದರೆ ಸ್ವರ್ಗೀಯ ವಿಷಯಗಳ ಕಡೆಗೆ ಗಮನಕೊಡಿ. ಕ್ರಿಸ್ತ ಯೇಸು ಸ್ವರ್ಗದಲ್ಲಿ ದೇವರ ಬಲಗಡೆಯಲ್ಲಿ ಆಸೀನರಾಗಿದ್ದಾರೆ .ನೀವು ಕ್ರಿಸ್ತ ಯೇಸುವಿನೊಂದಿಗೆ ಮರಣ ಹೊಂದಿರುವುದರಿಂದ ಅವರೊಂದಿಗೆ ನಿಮ್ಮ ಜೀವ ದೇವರಲ್ಲಿ ಮರೆಯಾಗಿದೆ. ನಿಮ್ಮ ಮನಸ್ಸು ಪ್ರಾಪಂಚಿಕ  ವಿಷಯಗಳ ಮೇಲೆ ಅಲ್ಲ, ಸ್ವರ್ಗೀಯ ವಿಷಯಗಳ ಮೇಲೆ ಕೇಂದ್ರಿಕೃತವಾಗಿರಲಿ. ಕ್ರಿಸ್ತ ಯೇಸುವೇ ನಿಮ್ಮ ನೈಜ ಜೀವವಾಗಿದ್ದಾರೆ. ಅವರು ಪುನರಾಗಮಿಸುವಾಗ ನೀವು ಸಹ ಅವರ ಮಹಿಮೆಯಲ್ಲಿ ಪಾಲುಗಾರರಾಗಿ ಆವರೊಂದಿಗೆ ಪ್ರತ್ಯಕ್ಷರಾಗುವಿರಿ. ನಿಮ್ಮಲ್ಲಿರುವ ಪ್ರಾಪಂಚಿಕ ಆಸೆ ಆಕಾಂಕ್ಷೆಗಳನ್ನು ತ್ಯಜಿಸಿರಿ. ಹಾದರ, ಅನೈತಿಕತೆ, ಕಾಮಾಭಿಲಾಷೆ, ದುರಾಲೋಚನೆ, ವಿರ್ಗಹಾರಾಧನೆಗೆ ಸಮವಾಗಿರುವ ಲೋಭ - ಇವುಗಳನ್ನು ದಮನಮಾಡಿರಿ, ಒಬ್ಬರಿಗೊಬ್ಬರು ಸುಳ್ಳು ಹೇಳಬೇಡಿ. ಏಕೆಂದರೆ ನೀವು ಪೂರ್ಣ ಸ್ವಭಾವವನ್ನು ಅದರ ಕೃತ್ಯಗಳ ಕೂಡ ತೆಗೆದಿಟ್ಟು ನೂತನ ಸ್ವಭಾವವನ್ನು ಧರಿಸಿಕೊಂಡಿದ್ದೀರಲ್ಲವೇ? ಈ ಸ್ವಭಾವವನ್ನು ಅದನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ದಿನೇದಿನೇ ನೂತನವಾಗುತ್ತಾ ಪೂರ್ವ ಜ್ಞಾನವನ್ನು ಉಂಟುಮಾಡುತ್ತವೆ. ಇದನ್ನು ಧರಿಸಿಕೊಂಡಿರುವುದರಲ್ಲಿ ಗ್ರೀಕನು - ಯೆಹೂದ್ಯನು ಎಂಬ ಬೇಧವಿಲ್ಲ. ಸುನ್ನತಿ ಮಾಡಿಸಿಕೊಂಡವನು - ಸುನ್ನತಿ ಮಾಡಿಸಿಕೊಳ್ಳದವನು ಎಂಬ ಭೇದವಿಲ್ಲ. ನಾಗರಿಕ - ಅನಾಗರಿಕ, ಆಳು ಒಡೆಯ, ಎಂಬ ಬೇಧವಿಲ್ಲ, ಆದರೆ ಕ್ರಿಸ್ತರೇ ಸಮಸ್ತರಲ್ಲಿಯೂ ಸಮಸ್ತವೂ ಆಗಿರುವರು.

ಶುಭಸಂದೇಶ: ಲೂಕ 12:13-21

ಜನಸಮೂಹದಿಂದ ಒಬ್ಬನು, "ಬೋಧಕರೇ, ನಮ್ಮ ಪಿತ್ರಾರ್ಜಿತ ಸೊತ್ತನ್ನು ನನಗೆ ಭಾಗ ಮಾಡಿ ಕೊಡುವಂತೆ ನನ್ನ ಸೋದರನಿಗೆ ಹೇಳಿ," ಎಂದು ಯೇಸುಸ್ವಾಮಿಯನ್ನು ಕೇಳಿಕೊಂಡನು. ಅದಕ್ಕೆ ಯೇಸು, "ಏನಯ್ಯಾ, ನಿಮ್ಮಿಬ್ಬರ ನ್ಯಾಯ ತೀರಿಸುವುದಕ್ಕೂ ನಿಮ್ಮ ಸ್ವತ್ತನ್ನು ಭಾಗ ಮಾಡಿಕೊಡುವುದಕ್ಕೂ ನನ್ನನ್ನು ನೇಮಿಸಿದವರು ಯಾರು?" ಎಂದು ಮರುಪ್ರಶ್ನೆ ಹಾಕಿದರು. ಆನಂತರ ಜನರನ್ನುದ್ದೇಶಿಸಿ, "ಎಚ್ಚರಿಕೆ,  ಯಾವ ವಿಧವಾದ ಲೋಭಕ್ಕೂ ಒಳಗಾಗದಂತೆ ಜಾಗರೂಕರಾಗಿರಿ. ಏಕೆಂದರೆ, ಒಬ್ಬನಿಗೆ ಎಷ್ಟೇ ಸಿರಿ ಸಂಪತ್ತಿರಲಿ, ಅವನ ನಿಜವಾದ ಜೀವನ ಅದನ್ನು ಅವಲಂಬಿಸಿಲ್ಲ," ಎಂದು ಹೇಳಿದರು. ಆನಂತರ ಅವರಿಗೆ ಈ ಸಾಮತಿಯನ್ನು ಹೇಳಿದರು:  "ಒಬ್ಬ ಧನಿಕನಿದ್ದ. ಅವನ ಭೂಮಿ ಒಮ್ಮೆ ಸಮೃದ್ಧಿಯಾದ ಬೆಳೆ ಕೊಟ್ಟಿತು. ಆಗ ಅವನು , "ಆಗ ಅವನು, "ನನ್ನ ಬೆಳೆಯನ್ನೆಲ್ಲಾ ತುಂಬಿಡಲು ಸ್ಥಳವಿಲ್ಲವಲ್ಲಾ, ಏನು ಮಾಡಲಿ?" ಎಂದು ತನ್ನಲ್ಲೇ ಆಲೋಚಿಸುತ್ತಾ, "ಹೌದು, ಹೀಗೆ ಮಾಡುತ್ತೇನೆ: ಇರುವ ಕಣಜಗಳನ್ನು ಕಿತ್ತು ಹಾಕಿಸಿ ಇನ್ನೂ ದೊಡ್ಡವುಗಳನ್ನು ಕಟ್ಟಿಸುತ್ತೇನೆ. ಅಲ್ಲಿ ನನ್ನ ಎಲ್ಲಾ ದವಸ ಧಾನ್ಯಗಳನ್ನೂ ಸರಕು ಸಾಮಗ್ರಿಗಳನ್ನೂ ತುಂಬಿಸಿಡುತ್ತೇನೆ. ಅಲ್ಲದೆ, ಎಲೈ ಮನವೇ, ಅನೇಕ ವರ್ಷಗಳಿಗೆ ಬೇಕಾದಷ್ಟು ಸರಕು ಬಿದ್ದಿದೆ; ಅರಾಮವಾಗಿರು, ತಿನ್ನು, ಕುಡಿ, ಸುಖಪಡು ಎಂದು ಹೇಳಿಕೊಳ್ಳುತ್ತೇನೆ ಎಂದುಕೊಂಡ. ಆಗ ದೇವರು, "ಎಲವೋ ಮೂರ್ಖ, ಇದೇ ರಾತ್ರಿ ನೀನು ಸಾಯಬೇಕಾಗಿದೆ, ನಿನಗಾಗಿ ಸಿದ್ಧ ಮಾಡಿಟ್ಟಿರುವುದೆಲ್ಲ ಯಾರ ಪಾಲಾಗುವುದು?" ದೇವರ ದೃಷ್ಟಿಯಲ್ಲಿ ಧನಿಕನಲ್ಲದವನು ಇವನಿಗೆ ಸಮಾನನು," ಎಂದರು ಯೇಸು.

03.08.2019 - "ನೀವು ಒಬ್ಬರಿಗೊಬ್ಬರು ಅನ್ಯಾಯ ಮಾಡಬಾರದು"

ಮೊದಲನೇ ವಾಚನ: ಯಾಜಕಕಾಂಡ 25:1, 8-17

ಇಸ್ರಯೇಲರಿಗೆ ಹೀಗೆ ಆಜ್ಞಾಪಿಸಬೇಕೆಂದು ಸರ್ವೇಶ್ವರಸ್ವಾಮಿ ಮೋಶೆಗೆ ಸಿನಾಯಿ ಬೆಟ್ಟದಲ್ಲಿ ಹೇಳಿದರು: ಏಳುವರ್ಷಕ್ಕೆ ಒಂದರಂತೆ ಏಳು ಸಬ್ಬತ್ ವರ್ಷಗಳನ್ನು ಎಣಿಸಬೇಕು. ಆ ಏಳು ಸಬ್ಬತ್ ಸಂವತ್ಸರಗಳ ಕಾಲ , ಅಂದರೆ ನಾಲ್ವತ್ತೊಂಬತ್ತು ವರ್ಷಗಳು ಕಳೆದಮೇಲೆ ಏಳನೆಯ ತಿಂಗಳಿನ ಹತ್ತನೆಯ ದಿವಸ ನಿಮ್ಮ ನಾಡಿನಲ್ಲೆಲ್ಲಾ ಕೊಂಬೂದಿಸಬೇಕು. ನೀವು ಆ ಐವತ್ತನೆಯ ವರ್ಷವನ್ನು ದೇವರಿಗೆ ಮೀಸಲಾದ ವರ್ಷವೆಂದು ಭಾವಿಸಬೇಕು. ಆ ವರ್ಷನಾಡಿನ ನಿವಾಸಿಗಳೆಲ್ಲರಿಗೂ ಬಿಡುಗಡೆಯಾಯಿತೆಂದು ಸಾರಬೇಕು. ಅದು "ಜೂಬಿಲಿ" ಸಂವತ್ಸರವಾದುದರಿಂದ ನೀವೆಲ್ಲರು ನಿಮ್ಮನಿಮ್ಮ ಸ್ವಂತ ಭೂಮಿಗಳಿಗೂ ಹಾಗು ಸ್ವಜನರ ಬಳಿಗೂ ಹೋಗಿ ಇರಬಹುದು. ಆ ಐವತ್ತನೆಯ ವರ್ಷದಲ್ಲಿ, ಅಂದರೆ "ಜೂಬಿಲಿ" ಸಂವತ್ಸರದಲ್ಲಿ ನೀವು ಬಿತ್ತನೆ ಮಾಡಬಾರದು; ತಾನಾಗಿ ಬೆಳೆದ ಫಸಲನ್ನು ಕೂಡಿಸಿಟ್ಟುಕೊಳ್ಳಬಾರದು; ನೀವು ಕೃಷಿಮಾಡದೆ ಬಿಟ್ಟ ದ್ರಾಕ್ಷಿತೋಟದ ಹಣ್ಣನು ಸಂಗ್ರಹಿಸಬಾರದು. ಅದು ಜೂಬಿಲಿ ವರ್ಷವಾದುದರಿಂದ ನೀವು ಅದನ್ನು ಮೀಸಲಾದುದೆಂದು ಭಾವಿಸಬೇಕು. ಹೊಲದಲ್ಲಿ ತಾನಾಗಿ ಬೆಳದದ್ದನ್ನು ಊಟಮಾಡಬಹುದು. ಜೂಬಿಲಿ ವರ್ಷದಲ್ಲಿ ನಿಮ್ಮನಿಮ್ಮ ಸ್ವಂತ ಭೂಮಿಗಳು ಮರಳಿ ನಿಮ್ಮ ವಶಕ್ಕೆ ಬರುವುವು. ನೀವು ಸ್ಥಿರಸೊತ್ತನ್ನು ಸ್ವದೇಶದವರೊಡನೆ ಕ್ರಯ -  ವಿಕ್ರಯ ಮಾಡುವಾಗ ಇದರ ವಿಷಯದಲ್ಲಿ ಅನ್ಯಾಯ ಮಾಡಬಾರದು. ಕಳೆದ ಜೂಬಿಲಿ ವರ್ಷದಿಂದ ಇಷ್ಟು ವರ್ಷ ಆಯಿತೆಂದು ಲೆಕ್ಕಿಸಿ ಸ್ವದೇಶದವನಿಂದ ಕ್ರಯಕ್ಕೆ ತೆಗೆದುಕೊಳ್ಳಬಹುದು; ಅಂತೆಯೇ ಮಾರುವವನು ಇಷ್ಟುಗಳ ಬಳೆಯಾಯಿತೆಂದು ಲೆಕ್ಕಿಸಿ ಕ್ರಯಕ್ಕೆ ಕೊಡಬೇಕು. ಮುಂದಣ ಜೂಬಿಲಿ ಸಂವತ್ಸರದ ತನಕ ಹೆಚ್ಚು ವರ್ಷಗಳಾದರೆ ಭೂಮಿಯ ಕ್ರಯವನ್ನು ಹೆಚ್ಚಿಸಬೇಕು. ಕಡಿಮೆಯಾದರೆ ತಗ್ಗಿಸಬೇಕು, ಏಕೆಂದರೆ ಮಾರುವವನು ಭೂಮಿಯನ್ನಲ್ಲ. ಬೆಳೆಗಳನ್ನು ಲೆಕ್ಕಿಸಿ ಮಾರುತ್ತಾನಷ್ಟೆ. ಆದುದರಿಂದ ನೀವು ಒಬ್ಬರಿಗೊಬ್ಬರು ಅನ್ಯಾಯ ಮಾಡಬಾರದು. ನಿಮ್ಮ ದೇವರಲ್ಲಿ ಭಯ ಭಕ್ತಿಯುಳ್ಳವರಾಗಿರಬೇಕು. ನಾನು ನಿಮ್ಮ ದೇವರಾದ ಸರ್ವೇಶ್ವರ.

ಕೀರ್ತನೆ: 67:2-3, 5, 7-8

ಶ್ಲೋಕ: ನಿನ್ನ ಕೀರ್ತಿಸಲಿ ದೇವಾ, ಜನರೆಲ್ಲರೂ

ಶುಭಸಂದೇಶ: ಮತ್ತಾಯ 14:1-12

ಯೇಸುಸ್ವಾಮಿಯ ಸಮಾಚಾರ ಆಗ ಗಲಿಲೇಯ ಪ್ರಾಂತ್ಯಕ್ಕೆ ಸಾಮಂತ ರಾಜನಾಗಿದ್ದ ಹೆರೋದನ ಕಿವಿಗೆ ಬಿದ್ದಿತು. ಅವನು ತನ್ನ ಪರಿಚಾರಕರಿಗೆ, "ಮಡಿದ ಸ್ನಾನಿಕ ಯೊವಾನ್ನನೇ ಮರಳಿ ಜೀವಂತವಾಗಿ ಬಂದಿದ್ದಾನೆ; ಆದ್ದರಿಂದಲೇ ಮಹತ್ಕಾರ್ಯಗಳನ್ನು ಮಾಡುವ ಶಕ್ತಿ ಅವನಿಗಿದೆ," ಎಂದನು. ಹೆರೋದನು ತನ್ನ  ಸಹೋದರ ಫಿಲಿಪ್ಪನ ಧರ್ಮಪತ್ನಿಯಾದ ಹೆರೋದಿಯಳನ್ನು ಇಟ್ಟುಕೊಂಡಿದ್ದನು. ಅವಳ ಪ್ರಯುಕ್ತ ಯೊವಾನ್ನನನ್ನು ಹಿಡಿದು ಬಂಧಿಸಿ ಸೆರೆಯಲ್ಲಿ ಹಾಕಿದ್ದನು. ಏಕೆಂದರೆ ಆತನು, "ನಿನ್ನ ಸಹೋದರನ ಧರ್ಮಪತ್ನಿಯನ್ನು ನೀನು ಇಟ್ಟುಕೊಂಡಿರುವುದು ಅಕ್ರಮ," ಎಂದು ಹೆರೋದನಿಗೆ ಹೇಳುತ್ತಿದ್ದನು. ಯೊವಾನ್ನನನ್ನು ಕೊಲ್ಲಿಸಬೇಕೆಂದಿದ್ದರೂ ಹೆರೋದನು ಜನರಿಗೆ ಹೆದರಿದ್ದನು. ಅವರು ಆತನನ್ನು ಪ್ರವಾದಿಯೆಂದು ಭಾವಿಸಿದ್ದರು. ಹೀಗಿರುವಲ್ಲಿ ಹೆರೋದನ ಹುಟ್ಟುಹಬ್ಬ ಬಂದಿತು. ಹೆರೋದಿಯಳ ಮಗಳು ಆಹ್ವಾನಿತರ ಮುಂದೆ ನರ್ತನಮಾಡಿ ಹೆರೋದನನ್ನು ಮೆಚ್ಚೀಸಿದಳು. ಆಗ ಅವಳು ಏನು ಕೇಳಿದರು ಕೊಡುವುದಾಗಿ ಅವನು ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದನು. ಅವಳು ತನ್ನ ತಾಯಿಯ ಸಲಹೆ ಪಡೆದು, "ನನಗೆ ಸ್ನಾನಿಕ ಯೊವಾನ್ನನ ತಲೆಯನ್ನು ಒಂದು ತಟ್ಟೆಯಲ್ಲಿ ತರಿಸಿಕೊಡಿ," ಎಂದಳು. ಇದನ್ನು ಕೇಳಿ ರಾಜನಿಗೆ ವ್ಯಥೆಯಾಯಿತು. ಆದರೆ ಅತಿಥಿಗಳ ಮುಂದೆ ಮಾಡಿದ ಪ್ರಮಾಣವನ್ನು ಮುರಿಯಲಾಗದೆ ಅವಳ ಇಚ್ಛೆಯನ್ನು ಪೂರೈಸುವಂತೆ ಆಜ್ಞೆಮಾಡಿದನು. ಅದರಂತೆಯೇ ಆಳುಗಳನ್ನು ಕಳುಹಿಸಿ, ಸೆರೆಮನೆಯಲ್ಲಿದ್ದ ಯೊವಾನ್ನನ ತಲೆಯನ್ನು ಕಡಿಸಿದನು; ಅದನ್ನು ಒಂದು ತಟ್ಟೆಯಲ್ಲಿ ತಂದು ಆ ಹುಡುಗಿಗೆ ಕೊಡಲಾಯಿತು. ಅವಳು ಅದನ್ನು ತನ್ನ ತಾಯಿಯ ಬಳಿಗೆ ತೆಗೆದುಕೊಂಡು ಹೋದಳು. ಯೊವಾನ್ನನ ಶಿಷ್ಯರು ಶವವನ್ನು ತೆಗೆದುಕೊಂಡು ಹೋಗಿ ಸಮಾಧಿ ಮಾಡಿದರು. ಆನಂತರ ಹೋಗಿ ಯೇಸುವಿಗೆ ಈ ವಿಷಯವನ್ನು ತಿಳಿಸಿದರು.

02.08.2019 - ಯಾವ ಪ್ರವಾದಿಯೂ ಸ್ವಗ್ರಾಮದಲ್ಲಿ ಸನ್ಮಾನಿತನಲ್ಲ

ಮೊದಲನೇ  ವಾಚನ : ಯಾಜಕಕಾಂಡ 23:1, 4-11, 15-16, 27, 34-37 


ಇಸ್ರಯೇಲರಿಗೆ ಈ ಪ್ರಕಾರ ಆಜ್ಞಾಪಿಸಬೇಕೆಂದು ಸರ್ವೇಶ್ವರಸ್ವಾಮಿ ಮೋಶೆಗೆ ಹೇಳಿದರು. "ಸರ್ವೇಶ್ವರನಿಂದ ನೇಮಕವಾದ ಹಬ್ಬದ ಕಾಲಗಳಲ್ಲಿ ದೇವರ ಆರಾಧನೆಗಾಗಿ ಜನರು ಸಭೆಸೇರಬೇಕು. ಆ ಹಬ್ಬದ ದಿನಗಳನ್ನು ನಿಯಮಿತ ಕಾಲದಲ್ಲಿ ಪ್ರಕಟಿಸಬೇಕು: ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆ ವೇಳೆಯಲ್ಲಿ ಸರ್ವೇಶ್ವರ ನೇಮಿಸಿದ ಪಾಸ್ಕಹಬ್ಬವಾಗಬೇಕು. ಅದೇ ತಿಂಗಳಿನ ಹದಿನೈದನೆಯ ದಿನದಲ್ಲಿ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ಹಬ್ಬವನ್ನು ಸರ್ವೇಶ್ವರನ ಗೌರವಾರ್ಥ ಆಚರಿಸಬೇಕು. ಅಂದು ಮೊದಲ್ಗೊಂಡು ಏಳು ದಿನಗಳಲ್ಲೂ ಹುಳಿರಹಿತ ರೊಟ್ಟಿಯನ್ನು ಊಟ ಮಾಡಬೇಕು. ಮೊದಲನೆಯ ದಿನ ದೇವಾರಾಧನೆಗಾಗಿ ಸಭೆಸೇರಬೇಕು. ಆ ದಿನ ಯಾವ ದುಡಿಮೆಯನ್ನು ಮಾಡಬಾರದು. ಆ ಏಳು ದಿನಗಳಲ್ಲೂ ನೀವು ಸರ್ವೇಶ್ವರನಿಗೆ ದಹನಬಲಿಯನ್ನು ಸಮರ್ಪಿಸಬೇಕು. ಏಳನೆಯ ದಿನ ದೇವಾರಾಧನೆಗಾಗಿ ಸಭೆಸೇರಬೇಕು. ಅಂದು ಯಾವ ದುಡಿಮೆಯನ್ನೂ  ಕೈಗೊಳ್ಳಬಾರದು,"  ಮೋಶೆಯ ಮುಖಾಂತರ ಇಸ್ರಯೇಲರಿಗೆ  ಸರ್ವೇಶ್ವರ ಹೀಗೆ ಆಜ್ಞಾಪಿಸಿದರು:  "ನಾನು ನಿಮಗೆ ಕೊಡುವ ನಾಡನ್ನು ನೀವು ಸೇರಿದ ನಂತರ ಅಲ್ಲಿನ  (ಜವೆಗೋದಿ)  ಪೈರನ್ನು ಕೊಯ್ಯುವಾಗ ಪ್ರತಮ ಫಲದ ಸಿವುಡನ್ನು ಯಾಜಕನ ಬಳಿಗೆ ತಂದೊಪ್ಪಿಸಬೇಕು. ನೀವು ಅಂಗೀಕೃತರಾಗುವಂತೆ ಯಾಜಕನು ಅದನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ನೈವೇದ್ಯವಾಗಿ ಆರತಿ ಎತ್ತಬೇಕು. ಸಬ್ಬತ್ ದಿನದ ಮಾರನೆಯ ದಿನ ಮೊದಲ್ಗೊಂಡು, ಅಂದರೆ ಆ ಪ್ರಥಮ ಸಿವುಡನ್ನು ನೈವೇದ್ಯವಾಗಿ ಆರತಿ ಎತ್ತಿದ ದಿನ ಮೊದಲುಗೊಂಡು, ಪೂರ್ಣವಾಗಿ ಏಳು ವಾರಗಳು ಮುಗಿಯುವಂತೆ, ಐವತ್ತು ದಿನಗಳನ್ನು ಎಣಿಸಬೇಕು. ಏಳನೆಯ ಸಬ್ಬತ್ ದಿನದ ಮರುದಿನದಲ್ಲಿ ಸರ್ವೇಶ್ವರನಿಗೆ ಹೊಸಬೆಳೆಯ ನೈವೇದ್ಯವನ್ನು ಸಮರ್ಪಿಸಬೇಕು. ಅದೇ ಏಳನೆಯ ತಿಂಗಳಿನ ಹತ್ತನೆಯ ದಿನವನ್ನು ಸರ್ವದೋಷಪರಿಹಾರ ದಿನವನ್ನಾಗಿ ಆಚರಿಸಬೇಕು.  ಅಂದು ದೇವಾರಾಧನೆಗಾಗಿ ಸಭೆಕೂಡಬೇಕು. ಪೂರ್ಣವಾಗಿ ಉಪವಾಸ ಮಾಡಬೇಕು. ಸರ್ವೇಶ್ವರನ ಸನ್ನಿಧಿಯಲ್ಲಿ ದಹನ ಬಲಿದಾನಮಾಡಬೇಕು.  ಏಳನೆಯ ತಿಂಗಳಿನ ಹದಿನೈದನೆಯ ದಿನ ಮೊದಲ್ಗೊಂಡು ಏಳು ದಿನಗಳವರೆಗೆ ಪರ್ಣಕುಟೀರಗಳ ಜಾತ್ರೆಯನ್ನು ಸರ್ವೇಶ್ವರನ  ಗೌರವಾರ್ಥ ಆಚರಿಸಬೇಕು. ಮೊದಲನೆಯ ದಿನ ದೇವಾರಾಧನೆಗಾಗಿ ಸಭೆ ಸೇರಬೇಕು; ಯಾವ ದುಡಿಮೆಯನ್ನೂ ಕೈಗೊಳ್ಳಬಾರದು. ಆ ಏಳು ದಿನಗಳಲ್ಲೂ ನೀವು ಸರ್ವೇಶ್ವರನ ಸನ್ನಿಧಿಯಲ್ಲಿ ದಹನ ಬಲಿದಾನ ಮಾಡಬೇಕು. ಎಂಟನೆಯ ದಿನದಂದು ದೇವಾರಾಧನೆಗಾಗಿ ಸಭೆಸೇರಬೇಕು. ಸರ್ವೇಶ್ವರನ ಸನ್ನಿಧಿಯಲ್ಲಿ ದಹನ ಬಲಿದಾನ ಮಾಡಬೇಕು. ಅದು ಸಭೆಸೇರುವ ದಿನವಾದುದರಿಂದ ಅಂದು ಎಲ್ಲ ದುಡಿಮೆಯನ್ನು ನಿಲ್ಲಿಸಬೇಕು. ಸರ್ವೇಶ್ವರ ನೇಮಿಸಿರುವ ಸಬ್ಬತ್ ದಿನಗಳನ್ನು ಮತ್ತು ಮೇಲೆ ಹೇಳಿದ ಸ್ವಾಮಿಯ ಹಬ್ಬದ ದಿನಗಳನ್ನು ನೀವು ಆಚರಿಸಬೇಕು. ಆ ದಿನಗಳಲ್ಲಿ ನೀವು ದೇವಾರಾಧನೆಗಾಗಿ ಸಭೆಸೇರುವಂತೆ ಜನರಿಗೆ ಪ್ರಕಟಿಸಬೇಕು. ಸರ್ವೇಶ್ವರನಿಗೆ ಒಪ್ಪಿಸಬೇಕಾದ ಕಪ್ಪಕಾಣಿಕೆಗಳನ್ನೂ ಹರಕೆಗಳನ್ನೂ ಸಲ್ಲಿಸಬೇಕಲ್ಲದೆ, ಮೇಲೆ ಸೂಚಿಸಿರುವ ಹಬ್ಬಗಳಲ್ಲಿ ಆಯಾ ದಿನಕ್ಕೆ ನೇಮಿಸಿರುವ ಪ್ರಕಾರ ದಹನಬಲಿ, ನೈವೇದ್ಯದ್ರವ್ಯ, ಶಾಂತಿ ಸಮಾಧಾನದ ಬಲಿ, ಪಾನದ್ರವ್ಯ ಇವುಗಳನ್ನು ತಂದು ಸರ್ವೇಶ್ವರನ ಸನ್ನಿಧಿ ಯಲ್ಲಿ ಹೋಮ ಮಾಡಬೇಕು.

ಕೀರ್ತನೆ: 81:3-4, 5-6, 10-11

ಶ್ಲೋಕ: ಹಾಡಿರಿ ಶುಭಗೀತೆಯನ್ನು ಬಲಪ್ರಧನಾದ ದೇವನಿಗೆ

 ಶುಭಸಂದೇಶ: ಮತ್ತಾಯ 13:54-58

 ಯೇಸು ತಮ್ಮ ಸ್ವಂತ ಊರಿಗೆ ಮರಳಿ ಬಂದು ಅಲ್ಲಿಯ ಪ್ರಾರ್ಥನಾಮಂದಿರದಲ್ಲಿ ಬೋಧನೆ ಮಾಡಿದರು. ಅದನ್ನು ಕೇಳುತ್ತಿದ್ದ ಜನರು ಆಶ್ಚರ್ಯಚಕಿತರಾಗಿ, "ಈ ಪರಿಜ್ಞಾನ ಇವನಿಗೆಲ್ಲಿಂದ ಬಂತು? ಈ ಮಹತ್ಕಾರ್ಯಗಳನ್ನು ಇವನು ಮಾಡುವುದಾದರೂ ಹೇಗೆ?   ಇವನು ಆ ಬಡಗಿಯ ಮಗನಲ್ಲವೇ? ಮರಿಯಳು ಇವನ ತಾಯಲ್ಲವೇ? ಯಕೋಬ, ಜೋಸೆಫ್, ಸಿಮೋನ, ಯೂದ ಇವರು ಇವನ ಸೋದರರಲ್ಲವೇ? ಇವನ ಸೋದರಿಯರೆಲ್ಲಾ ಇಲ್ಲೇ ವಾಸಮಾಡುತ್ತಿಲ್ಲವೇ? ಹಾಗಾದರೆ ಇವನಿಗೆ ಇದೆಲ್ಲಾ  ಎಲ್ಲಿಂದ ಬಂತು?" ಎಂದು ಮಾತಾಡಿಕೊಂಡು ಯೇಸುವನ್ನು ತಿರಸ್ಕರಿಸಿದರು. ಅವರಿಗೆ ಯೇಸು, "ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು




ಮನಸಿಗೊಂದಿಷ್ಟು ಅದೆಷ್ಟೋ ಬಾರಿ ನಮ್ಮ ನಡುವೆಯೇ ಇರುವ ಶ್ರೇಷ್ಠತೆಯನ್ನು ನಾವು ಗುರುತಿಸಿಯೂ ಪುರಸ್ಕರಿಸುವುದಿಲ್ಲ. "ಶಂಖದಿಂದ ಬಂದರೆ ಮಾತ್ರ ತೀರ್ಥ" ವೆಂಬಂತೆ ನಮ್ಮನ್ನು ಉದ್ಧರಿಸುವ ಸಂಗತಿಗಳು ಕಾಣದ, ದೂರದ ಮೂಲದಿಂದ ಬರಲಿ ಎಂದು ಕಾಯುತ್ತೇವೆ, ಕಾತರಿಸುತ್ತೇವೆ. ಇದು ನಮ್ಮ ಬೆಳವಣಿಗೆಗೆ, ಆತ್ಮೋದ್ಧಾರಕ್ಕೆ ದೊಡ್ಡ ತೊಡಕು. ತಮ್ಮ ಸ್ವಂತ ಜನರು ತಮ್ಮ ಮಾತು ಕೇಳಲಿಲ್ಲವೆಂಬ ಕೊರಗು ಯೇಸುವನ್ನು ಕಾಡುತಿತ್ತು. ಇಂದು ಅವರ ಸ್ವಂತ ಜನರಿಗಿಂತ, ಬಂಧುಗಳಿಗಿಂತ ಹತ್ತಿರವಾಗಿರುವ ನಮ್ಮ ಬಗ್ಗೆಯೂ ಅದೇ ಕೊರಗು ಯೇಸುವಿಗಿರಬಹುದು. ಅವರ   ವಾಕ್ಯಗಳನ್ನು ಪಾಲಿಸದೇ, ಗೌರವಿಸದೇ ಹೋದರೆ ಅವರ ಆ ಕೊರಗು ದೂರವಾಗುವುದಿಲ್ಲ. ನಮ್ಮೆಲ್ಲಾ ಕೊರಗು, ಹೊರೆಯನ್ನು ದೂರ ಮಾಡುವ ನಮ್ಮ ಪ್ರಭುಕ್ರಿಸ್ತರನ್ನು ನಾವು ನಮ್ಮ ದಿನ ನಿತ್ಯದ ಜೀವನದ ಮೂಲಕ ಪುರಸ್ಕರಿಸೋಣ.ಅವರ ಕೊರಗನ್ನು ದೂರವಾಗಿಸೋಣ.