28.12.2025 - ಏಳು, ಹೆರೋದನು ಮಗುವನ್ನು ಕೊಂದುಹಾಕಲು ಹವಣಿಸುತ್ತಿದ್ದಾನೆ. ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಈಜಿಪ್ಟ್ ದೇಶಕ್ಕೆ ಓಡಿಹೋಗು


ಮೊದಲನೆಯ ವಾಚನ : ಸಿರಾಖನ ಗ್ರಂಥದಿಂದ ಇಂದಿನ ಮೊದಲನೆಯ ವಾಚನ 3:2-6,12-14

ಸರ್ವೇಶ್ವರ ಮಕ್ಕಳಿಗಿಂತ ಮಿಗಿಲಾಗಿ ತಂದೆಗೆ ಗೌರವ ನೀಡಿದ್ದಾರೆ; ಗಂಡುಮಕ್ಕಳ ಮೇಲೆ ತಾಯಿಗೆ ಅಧಿಕಾರವನ್ನು ಅನುಗ್ರಹಿಸಿದ್ದಾರೆ.  ತಂದೆಯನ್ನು ಸನ್ಮಾನಿಸುವವನು ತನ್ನ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿದವನಂತೆ; ತಾಯಿಯನ್ನು ಗೌರವಿಸುವವನು, ನಿಧಿ ಶೇಖರಿಸಿಟ್ಟುಕೊಂಡವನಂತೆ.  ತಂದೆಯನ್ನು ಗೌವವಿಸುವವನಿಗೆ ತನ್ನ ಸ್ವಂತ ಮಕ್ಕಳಿಂದ ಆಗುವುದು ಸಂತೋಷ; ಅವನು ಪ್ರಾರ್ಥನೆ ಮಾಡುವಾಗಲೆಲ್ಲ ದೊರಕುವುದವನಿಗೆ ಪ್ರತ್ಯುತ್ತರ.  ತಂದೆಯನ್ನು ಗೌರವಿಸುವವನು ಬದುಕುವನು ಬಹು ಕಾಲ, ಸರ್ವೇಶ್ವರನಿಗೆ ವಿಧೇಯನಾಗಿರುವವನು ತಾಯಿಗೆ ಬರಮಾಡುವನು ಸಮಾಧಾನ.  ಮಗನೇ, ನಿನ್ನ ಮುಪ್ಪಿನ ತಂದೆಗೆ ಸಹಾಯಕನಾಗಿರು, ಅವನು ಬದುಕಿರುವವರೆಗೆ ಅವನ ಮನಸ್ಸನ್ನು ನೋಯಿಸದಿರು.  ತಾಳ್ಮೆಯಿಂಂದಿರು ಅವನ ಬುದ್ಧಿ ಮಂಕಾದಾಗ, ಅವನನ್ನು ಹೀನೈಸಬೇಡ ನೀನು ಬಲವಂತನಾಗಿರುವಾಗ, ತಂದೆಗೆ ಮಾಡಿದ ಉಪಶಮನ ಅಳಿದು ಹೋಗದು; ಬದಲಿಗೆ, ನಿನ್ನ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಪರಿಣಮಿಸುವುದು.

- ಪ್ರಭುವಿನ ವಾಕ್ಯ

ಕೀರ್ತನೆ 128:1-5, v. 1

ಶ್ಲೋಕ:  ಪ್ರಭುವಿನಲಿ ಭಯಭಕ್ತಿಯುಳ್ಳವನು ಧನ್ಯನು, ಆತನ ಮಾರ್ಗಗಳಲೇ ನಡೆಯುವವನು ಧನ್ಯನು!

1.  ಪ್ರಭುವಿನಲಿ ಭಯಭಕ್ತಿಯುಳ್ಳವನು ಧನ್ಯನು|

ಆತನ ಮಾರ್ಗಗಳಲೇ ನಡೆಯುವವನು ಧನ್ಯನು||

ನಿನ್ನ ಕೈ ಕೆಸರಾದರೆ ಬಾಯಿ ಮೊಸರಾಗುವುದು|

ಧನ್ಯನಾಗುವೆ ನೀನು;  ನಿನಗೆ ಶುಭವಾಗುವುದು||

ಶ್ಲೋಕ


2.  ಇರುವಳು ನಿನ್ನ ಪತ್ನಿ ಮನೆಯಲ್ಲಿ|

ಫಲಭರಿತ ದ್ರಾಕ್ಷಾಲತೆಯಂತೆ||

ಕೂರುವರು ನಿನ್ನ ಮಕ್ಕಳು ಊಟದ ಪಂಕ್ತಿಯಲಿ|

ಓಲಿವ್ ಸಸಿಗಳಂತೆ||

ಶ್ಲೋಕ


3.  ಹೊಂದುವನು ಅಂತಹ ಆಶೀರ್ವಾದವನು|

ಪ್ರಭುವಿನಲಿ ಭಯಭಕ್ತಿಯುಳ್ಳವನು|

ಸಿಯೋನಿನಲ್ಲಿರುವ ಪ್ರಭು ನಿನ್ನನ್ನು ಆಶೀರ್ವದಿಸಲಿ|

ಜೆರುಸಲೇಮಿನ ಏಳ್ಗೆಯನು ಕಾಣು ಇಡೀ ಇಡೀ ಜೀವಮಾನದಲಿ||

ಶ್ಲೋಕ


ಎರಡನೆಯ ವಾಚನ : ಪೌಲನು ಕೊಲೊಸ್ಸೆಯರಿಗೆ ಬರೆದ ಪತ್ರದಿಂದ ಇಂದಿನ ಎರಡನೆಯ ವಾಚನ 3:12-21

 ಸಹೋದರರೇ,  ನೀವು ದೇವರಿಂದ ಆಯ್ಕೆಯಾದವರು.  ದೇವರಿಗೆ ಪ್ರಿಯವಾದವರು.

ದೇವರ ಸ್ವಂತ ಜನರು. 

ಹೀಗಿರಲಾಗಿ ಕನ್ನಿಕರ ಧಯೇ ದೀನತೆ ವಿನಯಶೀಲತೆ  ಶಾಂತಿ ಸಹನೆ ಎಂಬ ಸದ್ಗುಣಗಳೇ ನಿಮ್ಮ ಆಭರಣಗಳಾಗಿರಲಿ.

ಒಬ್ಬರನ್ನೋಬ್ಬರು ಸೈರಿಸಿಕೊಳ್ಳಿ.

ಒಬ್ಬನ ಮೇಲೆ ತಪ್ಪು ಹೊರಿಸಲು ಕಾರಣವಿದ್ದರೂ ಕ್ಷಮಿಸಿಬಿಡಿ.

ಪ್ರಭು ಯೇಸು ನಿಮ್ಮನ್ನು ಕ್ಷಮಿಸಿದಂತೆ ನೀವೂ ಇತರರನ್ನು ಕ್ಷಮಿಸಿರಿ.

ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮಲ್ಲಿ ಪ್ರೀತಿಯಿರಲಿ.

ಪ್ರೀತಿಯೇ ಸಮಸ್ತವನ್ನು ಸಂಪೂರ್ಣಗೊಳಿಸುವ ಬಂಧನ.

ನಿಮ್ಮ ಹೃನ್ಮನಗಳು ಕ್ರಿಸ್ತ ಯೇಸುವಿನ ಶಾಂತಿ ಸಮಾಧಾನದಿಂದ ತುಂಬಿರಲಿ.

ನೀವು ಒಂದೇ ಶರೀರವಾಗಿ ಬಾಳಲು ಕರೆಯಲ್ಪಟ್ಟಿದ್ದೀರಿ;

ಕೃತಜ್ಞತೆ ಉಳ್ಳವರಾಗಿ ಜೀವಿಸಿರಿ.

ಕ್ರಿಸ್ತ ಯೇಸುವಿನ ವಾಕ್ಯ ನಿಮ್ಮಲ್ಲಿ ನೆಲೆಸಿ ಸಮೃದ್ಧಿಯಾಗಿ ಬೆಳೆಯಲಿ.

ಜ್ಞಾನಸಂಪನ್ನರಾಗಿ ಒಬ್ಬರಿಗೊಬ್ಬರು ಉಪದೇಶ ಮಾಡಿರಿ ಹಾಗೂ ಬುದ್ಧಿಹೇಳಿಕೊಳ್ಳಿರಿ.

ಕೃತಜ್ಞತೆಯುಳ್ಳವರಾಗಿ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಭಕ್ತಿಗೀತೆಗಳಿಂದಲೂ ಹೃದಯಾಂತರಾಳದಿಂದ ದೇವರಿಗೆ ಹಾಡಿರಿ.

ನುಡಿಯಲ್ಲಾಗಲೀ ನಡೆಯಲ್ಲಾಗಲಿ ನೀವು ಏನು ಮಾಡಿದರೂ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ.

ಅವರ ಮುಖಾಂತರವೇ ಪಿತನಾದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ.

ಮಹಿಳೆಯರೇ ನಿಮ್ಮ ನಿಮ್ಮ ಪತಿಯರಿಗೆ ಪ್ರಭು ಮೆಚ್ಚುವಂತೆ ತಗ್ಗಿ ನಡೆದುಕೊಳ್ಳಿರಿ.

ಪುರುಷರೇ, ನಿಮ್ಮ ನಿಮ್ಮ ಪತ್ನಿಯರನ್ನು ಪ್ರೀತಿಸಿರಿ. 

ಅವರೊಡನೆ ಕಠಿಣವಾಗಿ ವರ್ತಿಸದಿರಿ.

ಮಕ್ಕಳೇ, ಎಲ್ಲದರಲ್ಲೂ ನಿಮ್ಮ ತಂದೆತಾಯಿಗಳ ಮಾತು ಕೇಳಿರಿ.

ಹೀಗೆ ಮಾಡಿದರೆ ಪ್ರಭುವಿಗೆ ಮೆಚ್ಚುಗೆಯಾಗುತ್ತದೆ.

ತಂದೆತಾಯಿಗಳೇ, ನಿಮ್ಮ ಮಕ್ಕಳನ್ನು ಕೆರಳಿಸಿ ಮನ ಕುಗ್ಗಿಸದಿರಿ.

- ಪ್ರಭುವಿನ ವಾಕ್ಯ

ಘೋಷಣೆ : ಅಲ್ಲೆಲೂಯ, ಅಲ್ಲೆಲೂಯ!

ನಿಮ್ಮ  ಹೃನ್ಮನಗಳು  ಕ್ರಿಸ್ತ  ಯೇಸುವಿನ  ಶಾಂತಿ  ಸಮಾಧಾನದಿಂದ  ತುಂಬಿರಲಿ| ಕ್ರಿಸ್ತ  ಯೇಸುವಿನ  ವಾಕ್ಯ  ನಿಮ್ಮಲ್ಲಿ  ನೆಲಸಿ  ಸಮೃದ್ಧಿಯಾಗಿ  ಬೆಳೆಯಲಿ ||

ಅಲ್ಲೆಲೂಯ!

- ಶುಭಸಂದೇಶ


ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 2:13-15,19-23


ಆ ಕಾಲದಲ್ಲಿ ಜ್ಯೋತಿಷಿಗಳು ಹೊರಟು ಹೋದಮೇಲೆ ದೇವದೂತನು ಜೋಸೆಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, "ಏಳು, ಹೆರೋದನು ಮಗುವನ್ನು ಕೊಂದುಹಾಕಲು ಹವಣಿಸುತ್ತಿದ್ದಾನೆ. ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಈಜಿಪ್ಟ್ ದೇಶಕ್ಕೆ ಓಡಿಹೋಗು. ನಾನು ಪುನಃ ಹೇಳುವ ತನಕ ಅಲ್ಲೇ ಇರು," ಎಂದನು. ಅದರಂತೆ ಜೋಸೆಫನು ಕೂಡಲೇ ಎದ್ದು ಮಗುವನ್ನೂ ತಾಯಿಯನ್ನೂ ರಾತ್ರೋರಾತ್ರಿಯಲ್ಲೇ ಕರೆದುಕೊಂಡು ಈಜಿಪ್ಟಿಗೆ ತೆರಳಿದನು. ಹೆರೋದನು ಸಾಯುವ ತನಕ ಅಲ್ಲೇ ಇದ್ದನು. ಹೆರೋದನು ಸತ್ತುಹೋದನಂತರ ಈಜಿಪ್ಟಿನಲ್ಲಿದ್ದ ಜೋಸೆಫನಿಗೆ ದೇವದೂತನು ಕನಸಿನಲ್ಲಿ ಕಾಣಿಸಿಕೊಂಡು, “ಏಳು, ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಇಸ್ರಯೇಲ್ ದೇಶಕ್ಕೆ ಹಿಂದಿರುಗು; ಮಗುವನ್ನು ಕೊಲ್ಲಬೇಕೆಂದಿದ್ದವರು ಸತ್ತುಹೋದರು," ಎಂದು ತಿಳಿಸಿದನು. ಜೋಸೆಫನು ಎದ್ದು ತಾಯಿಯನ್ನೂ ಮಗುವನ್ನೂ ಕರೆದುಕೊಂಡು ಇಸ್ರಯೇಲ್ ದೇಶಕ್ಕೆ ಬಂದನು. ಆದರೆ ಹೆರೋದನ ಮಗ ಅರ್ಖೆಲಾಯನು ತಂದೆಯ ಬದಲಿಗೆ ಜುದೇಯ ಪ್ರಾಂತ್ಯವನ್ನು ಆಳುತ್ತಿದ್ದಾನೆಂದು ಕೇಳಿ ಜೋಸೆಫನು ಅಲ್ಲಿಗೆ ಹೋಗಲು ಅಂಜಿದನು. ಕನಸಿನಲ್ಲಿ ತಾನು ಪಡೆದ ಆದೇಶದ ಪ್ರಕಾರ ಗಲಿಲೇಯ ಪ್ರಾಂತ್ಯಕ್ಕೆ ತೆರಳಿದನು. ಅಲ್ಲಿರುವ ನಜರೇತ್ ಊರನ್ನು ಸೇರಿ ವಾಸಮಾಡಿದನು. ಹೀಗೆ, "ಆತನನ್ನು ನಜರೇತಿನವನೆಂದು ಕರೆಯುವರು" ಎಂಬ ಪ್ರವಚನ ನೆರವೇರಿತು.

- ಪ್ರಭುವಿನ ಶುಭಸಂದೇಶ

1 comment:

  1. ಪ್ರತಿ ದಿನದ ವಾಕ್ಯಗಳು ಸರಿಯಾಗಿ ಬರುತ್ತಿಲ್ಲ, ದಿನಾಂಕಗಳು ವ್ಯತ್ಯಾಸವಾಗುತ್ತಿವೆ, ಜೊತೆಗೆ ಮತ್ತೆ ಇನ್ನೂ ಹಲವಾರು ಜನರಿಗೆ ಈ ವಾಕ್ಯಗಳನ್ನು ತಲುಪಿಸುತ್ತಿದ್ದೇವೆ ಆದುದರಿಂದ ದಯಮಾಡಿ ಈ ಬ್ಲಾಗ್ ನನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕಾಗಿ ವಿನಂತಿ.

    ReplyDelete

25.02.2026 - ಈ ಪೀಳಿಗೆ ಕೆಟ್ಟ ಪೀಳಿಗೆ. ಇದು ಅದ್ಭುತಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು

  ಮೊದಲನೇ ವಾಚನ: ಯೋನ 3: 1-10 ಯೋನನಿಗೆ ಆ ಸ್ವಾಮಿಯ ವಾಣಿ ಪುನಃ ಕೇಳಿಸಿತು: “ಎದ್ದು ಮಹಾನಗರವಾದ ನಿನೆವೆಗೆ ಹೋಗು. ನಾನು ನಿನಗೆ ತಿಳಿಸಿದ ಸಂದೇಶವನ್ನು ಅಲ್ಲಿಯ ನಿವಾಸಿ...