24.12.25 - 'ಹಗೆಗಳಿಂದ, ದ್ವೇಷಿಗಳೆಲ್ಲರ ಹಿಡಿತದಿಂದ ನಿಮಗೆ ಅನುಗ್ರಹಿಸುವೆನು ಸಂರಕ್ಷಣೆ'

ಮೊದಲನೆಯ ವಾಚನ : ಸಮುವೇಲನ ಎರಡನೆ ಗ್ರಂಥದಿಂದ ಇಂದಿನ ವಾಚನ 7:1-5,8-12,14-16


ಸರ್ವೇಶ್ವರನ ಅನುಗ್ರಹದಿಂದ ಸುತಮುತ್ತ ಇದ್ದ ವೈರಿಗಳ ಭಯ ನಿಂತುಹೋಯಿತು. ದಾವೀದನು. ನೆಮ್ಮದಿಯಿಂದ ಅರಮನೆಯಲ್ಲಿ ವಾಸಿಸುತ್ತಿದ್ದನು. ಒಂದು ದಿನ ಅವನು ಪ್ರವಾದಿ ನಾತಾನನಿಗೆ, “ನೋಡು, ನಾನು ವಾಸಮಾಡುತ್ತಿರುವುದು ದೇವದಾರು ಮರದಿಂದ ಮಾಡಿದ ಅರಮನೆಯಲ್ಲಿ; ಆದರೆ ದೇವರ ಮಂಜೂಷ ಇರುವುದು ಬಟ್ಟೆಯ ಗುಡಾರದಲ್ಲಿ!” ಎಂದನು. ಅದಕ್ಕೆ ನಾತಾನನು ಸಮ್ಮತಿಸಿ, “ನಿಮಗೆ ಮನಸ್ಸಿದ್ದಂತೆ ಮಾಡಿ; ಸರ್ವೇಶ್ವರ ನಿಮ್ಮೊಡನೆ ಇದ್ದಾರೆ,” ಎಂದನು. ಆದರೆ ಅದೇ ರಾತ್ರಿ ಸರ್ವೇಶ್ವರ ನಾತಾನನಿಗೆ ಹೀಗೆಂದು ಆಜ್ಞಾಪಿಸಿದರು:  ನೀನು ಹೋಗಿ ನನ್ನ ದಾಸ ದಾವೀದನಿಗೆ ತಿಳಿಸಬೇಕಾದುದು ಇದು: ‘ನೀನು ನನಗೊಂದು ದೇವಾಲಯವನ್ನು ಕಟ್ಟಬೇಕೆಂದಿರುವೆಯೋ?  “ಇದಲ್ಲದೆ, ನೀನು ನನ್ನ ದಾಸ ದಾವೀದನಿಗೆ ಹೇಳು, ಸರ್ವಶಕ್ತ ಸರ್ವೇಶ್ವರನಾದ ನಾನೇ ಹೀಗೆ ಹೇಳಿದೆಯೆಂದು ತಿಳಿಸು: ‘ಕುರಿಗಳ ಹಿಂದೆ ತಿರುಗಾಡುತ್ತಿದ್ದ ನಿನ್ನನ್ನು ಅಡವಿಯಿಂದ ಆಯ್ದುಕೊಂಡು ನನ್ನ ಪ್ರಜೆ ಇಸ್ರಯೇಲರ ಮೇಲೆ ನಾಯಕನನ್ನಾಗಿ ನೇಮಿಸಿದೆ. ನೀನು ಹೋದ ಕಡೆಯೆಲ್ಲಾ ನಿನ್ನ ಸಂಗಡ ಇದ್ದೆ. ನಿನ್ನ ಶತ್ರುಗಳನ್ನೆಲ್ಲ ನಿನ್ನ ಕಣ್ಮುಂದೆಯೆ ಸದೆಬಡಿದೆ. ಜಗದ ಮಹಾತ್ಮರ ಹೆಸರಿನಂತೆ ನಿನ್ನ ಹೆಸರನ್ನು ಪ್ರಸಿದ್ಧಗೊಳಿಸುವೆನು ನನ್ನ ಪ್ರಜೆ ಇಸ್ರಯೇಲರಿಗೆ ಒಂದು ಸ್ಥಳವನ್ನು ಕೊಟ್ಟು ಅದರಲ್ಲಿ ಅವರನ್ನು ನೆಲೆಗೊಳಿಸುವೆನು. ಇನ್ನು ಮೇಲೆ ಅವರು ಯಾವ ಭಯವೂ ಇಲ್ಲದೆ ವಾಸಿಸುವರು. ಪೂರ್ವಕಾಲದಲ್ಲಿ ನಾನು ನನ್ನ ಜನರಿಗೆ ನ್ಯಾಯಸ್ಥಾಪಕರನ್ನು ನೇಮಿಸಿದೆ. ಅಲ್ಲಿಂದೀಚಿಗೆ ಇಸ್ರಯೇಲರು ಶೋಷಣೆಗೆ ಗುರಿಯಾದರು. ಆದರೆ ಇನ್ನು ಮೇಲೆ ಆಗದು. ನೀನು ಶತ್ರುಭಯವಿಲ್ಲದೆ ಸುಖದಿಂದಿರುವಂತೆ ಮಾಡುವೆನು. ಅದು ಮಾತ್ರ ಅಲ್ಲ, ಸರ್ವೇಶ್ವರನಾದ ನಾನು ನಿನಗಾಗಿ ಒಂದು ಮನೆತನವನ್ನು ಕಟ್ಟುವೆನೆಂದು ಮಾತು ಕೊಡುತ್ತೇನೆ. ನಿನ್ನ ಆಯುಷ್ಕಾಲ ಮುಗಿದು ನೀನು ನಿನ್ನ ಪೂರ್ವಜರನ್ನು ಸೇರಿ ವಿಶ್ರಮಿಸುವಾಗ ನಿನ್ನ ಮಕ್ಕಳಲ್ಲಿ ಒಬ್ಬನನ್ನು ನಿನಗೆ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು. ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು. ಅವನು ತಪ್ಪುಮಾಡಿದಾಗ, ಮಗನಿಗೆ ತಂದೆ ಬೆತ್ತದ ರುಚಿತೋರಿಸುವಂತೆ ನಾನು ಅವನನ್ನು ಶಿಕ್ಷಿಸುವೆನು. ನಿನ್ನ ಮನೆತನವೂ ಅರಸುತನವೂ ಸದಾಕಾಲ ಸ್ಥಿರವಾಗಿರುವುವು; ನಿನ್ನ ಸಿಂಹಾಸನ ಶಾಶ್ವತವಾಗಿರುವುದು."

ಪ್ರಭುವಿನ ವಾಕ್ಯ

ಕೀರ್ತನೆ - 89:2-3,4-5,27-29,V.1

ಶ್ಲೋಕ:  ಪ್ರಭೂ, ಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು.


1.  ಪ್ರಭೂ, ಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು|

ಸಾರುವೆನು ತಲತಲಾಂತರಕೂ ನಿನ್ನ ಸತ್ಯತೆಯನು||

ನಿನ್ನಚಲ ಪ್ರೀತಿ ಪ್ರಭೂ, ನನಗೆ ಶಾಶ್ವತ ಸಿದ್ದ|

ನಿನ್ನ ಸತ್ಯತೆ ಆಗಸದಂತೆ ಸ್ಥಿರ ಸ್ಥಾಪಿತ||

ಶ್ಲೋಕ


2.  ನಾನಾರಿಸಿದವನೊಡನೆ ಮಾಡಿರುವೆ ಒಪ್ಪಂದ|

ನನ್ನ ದಾಸ ದಾವೀದನಿಗಿತ್ತಿರುವೆ ಈ ತೆರನಾದ ಶಪಥ||

ಸ್ಥಾಪಿಸುವೆ ಶಾಶ್ವತವಾಗಿ ನಿನ್ನ ಸಂತತಿಯನು|

ಸ್ಥಿರಪಡಿಸುವೆ ಯುಗಯುಗಕೂ ನಿನ್ನ ಸಿಂಹಾಸನವನು||

ಶ್ಲೋಕ


3.  ನನಗೆ ಪಿತ, ದೈವ, ದುರ್ಗ, ಉದ್ದಾರಕ ನೀನು|

ಇಂತೆಂದೇ ನನ್ನನು ಸಂಬೋಧಿಸುವನವನು||

ಉಳಿಸುವೆನು ಅವನ ಸಂತಾನವನು ನಿರಂತರವಾಗಿ|

ಅವನ ಸಿಂಹಾಸನವಿರುವುದು ಗಗನದಂತೆ ಸ್ಥಿರವಾಗಿ||

ಶ್ಲೋಕ

ಘೋಷಣೆ : ಅಲ್ಲೆಲೂಯ, ಅಲ್ಲೆಲೂಯ!

ಓ ಉದಯಕಾಲದ ನಕ್ಷತ್ರವೇ, ಅನಂತ ಜ್ಯೋತಿಯ ಪ್ರಭೆಯೇ, ನೀತಿಯ ಸೂರ್ಯನೇ | ಕತ್ತಲೆಯಲ್ಲಿಯೂ ಮರಣದ ನೆರಳಿನಲ್ಲಿಯೂ ವಾಸಿಸುತ್ತಿರುವ ನಮಗೆ ಪ್ರಕಾಶ ನೀಡಲು ಬನ್ನಿ ||

ಅಲ್ಲೆಲೂಯ!


ಶುಭಸಂದೇಶ: ಲೂಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 1:67-79


ಕಾಲದಲ್ಲಿ ಮಗುವಿನ ತಂದೆಯಾದ ಜಕರೀಯನು ಪವಿತ್ರಾತ್ಮಭರಿತನಾಗಿ ಹೀಗೆಂದು ಪ್ರವಾದಿಸಿದನು:

ಸ್ತುತಿಸ್ತೋತ್ರ ಇಸ್ರಯೇಲಿನ ದೇವರಾದ ಸರ್ವೇಶ್ವರನಿಗೆ,

ತಾನಾಗಿ ಬಂದು ತನ್ನ ಪ್ರಜೆಯನ್ನು ಬಿಡುಗಡೆ ಮಾಡಿದಾತನಿಗೆ.

ಉದಯಗೊಳಿಸಿರುವನಾತ ತನ್ನ ದಾಸ ದಾವೀದನ ವಂಶದೊಳು ನಮಗೊಬ್ಬ ಶಕ್ತಿಯುತ ಮುಕ್ತಿದಾತನನು.

ಪುರಾತನ ಕಾಲದಿಂದಲೆ, ಪೂಜ್ಯ ಪ್ರವಾದಿಗಳ ಬಾಯಿಂದಲೆ ಅರುಹಿಸಿರುವನು ಇಂತೆಂದು ನಮಗೆ

'ಹಗೆಗಳಿಂದ, ದ್ವೇಷಿಗಳೆಲ್ಲರ ಹಿಡಿತದಿಂದ ನಿಮಗೆ ಅನುಗ್ರಹಿಸುವೆನು ಸಂರಕ್ಷಣೆ

ವ್ಯಕ್ತಪಡಿಸಿರುವನು ಪೂರ್ವಜರಿಗೆ ಪ್ರಾಮಾಣಿಸಿದ ಪ್ರೀತಿಯನು,

ಸ್ಮರಿಸಿಕೊಂಡಿರುವನು ತನ್ನ ಪವಿತ್ರ ಒಡಂಬಡಿಕೆಯನು.  

ಪಿತಾಮಹ ಅಬ್ರಹಾಮನಿಗಿತ್ತ ಮಾತಿಗನುಸಾರ ನಮಗಿತ್ತಿರುವರು 

ಶತ್ರುಗಳಿಂದ ರಕ್ಷಿಸುವೆನೆಂಬ ಅಭಯ.

ಹೀಗೆ ಜೀವಮಾನವೆಲ್ಲ ನಾವು ಆತನ ಸೇವೆ ಮಾಡುವಂತಾಯಿತು ನಿರ್ಭೀತರಾಗಿ.

ಆತನ ಸನ್ನಿಧಿಯಲಿ ಬಾಳುವಂತಾಯಿತು ಪುನೀತರಾಗಿ, ಸದ್ಭಕ್ತರಾಗಿ.

ಸುಕುಮಾರಾ, ನೀನೆನಿಸಿಕೊಳ್ಳುವೆ 'ಪರಾತ್ಪರನ ಪವಾದಿ'

ಸರ್ವೇಶ್ವರನ ಮಾರ್ಗವನು ಸಜ್ಜುಗೊಳಿಸುವೆ,

ಮುಂದಾಗಿ ತೆರಳಿ ಪಾಪಕ್ಷಮೆಯನು ಸಾರುವೆ ಆತನ ಪ್ರಜೆಗೆ.

ಮೂಲಕ ಜೀವೋದ್ಧಾರದ ಜ್ಞಾನವನ್ನೀಯುವೆ ಜನರಿಗೆ.

ಕೃಪಾಸಾಗರ, ದಯಾಮಯ, ನಮ್ಮ ದೇವನು,

ಆತನ ಕರುಣೆಯಿಂದ ನಮಗಾಯಿತು ಮೇಲಿಂದ ಅರುಣೋದಯವು 

ಬೆಳಗಿಸಲು ಇರುಳಿನಲು, ಮರಣದ ಮುಸುಕಿರಲು ಬಾಳುವವರನು,

ನಮ್ಮ ಕಾಲುಗಳನ್ನೂರಿಸಿ ನಡೆಸಲು ಶಾಂತಿಪಥದೊಳು.

- ಪ್ರಭುವಿನ ಶುಭಸಂದೇಶ

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...