ಮೊದಲನೆಯ ವಾಚನ : ಯೊವಾನ್ನನು ಬರೆದ ಮೊದಲನೆಯ ಪತ್ರದಿಂದ ಇಂದಿನ ವಾಚನ 2:3-11
ಪ್ರಿಯರೇ, ನಾವು ದೇವರ ಆಜ್ಞೆಗಳನ್ನು ಕೈಕೊಂಡು ನಡೆದರೆ ಅದರಿಂದಲೇ ಅವರ ಅರಿವು ನಮಗಿದೆ ಎಂದು ಖಚಿತವಾಗುತ್ತದೆ. ದೇವರನ್ನು ಬಲ್ಲನೆಂದು ಹೇಳಿಕೊಳ್ಳುತ್ತಾ ಅವರ ಆಜ್ಞೆಗಳನ್ನು ಕೈಗೊಳ್ಳದೆ ಇರುವವನು ಸುಳ್ಳುಗಾರ ಮತ್ತು ಸತ್ಯವೆಂಬುದೇ ಅವನಲ್ಲಿ ಇರುವುದಿಲ್ಲ. ಆದರೆ ದೇವರ ವಾಕ್ಯವನ್ನು ಕೈಗೊಂಡು ನಡೆಯುವವನಲ್ಲಿ ಪ್ರೀತಿ ನಿಜಕ್ಕೂ ಸಿದ್ಧಿಗೆ ಬಂದಿರುತ್ತದೆ. ತಾನು ದೇವರಲ್ಲಿ ನೆಲಸಿದ್ದೇನೆಂದು ಹೇಳುವವನು ಕ್ರಿಸ್ತ ಯೇಸು ಜೀವಿಸಿದಂತೆಯೇ ಜೀವಿಸಬೇಕು. ಇದರಿಂದಲೇ ನಾವು ದೇವರಲ್ಲಿ ನೆಲೆಗೊಂಡಿದ್ದೇವೆಂದು ತಿಳಿದುಕೊಳ್ಳುತ್ತೇವೆ. ಪ್ರಿಯರೇ, ನಾನು ನಿಮಗೆ ಬರೆಯುತ್ತಿರುವುದು ಹೊಸ ಆಜ್ಜೆಯೇನೂ ಅಲ್ಲ, ಮೊದಲಿನಿಂದಲೂ ನೀವು ಪಡೆದಿರುವ ಹಳೆಯ ಆಜ್ಞೆಯೇ. ಈ ಆಜ್ಞೆಯೇ ನೀವು ಈಗಾಗಲೇ ಕೇಳಿರುವ ಸಂದೇಶ ಆದರೂ ನಾನೀಗ ನಿಮಗೆ ಬರೆಯುತ್ತಿರುವುದು ಒಂದು ವಿಧದಲ್ಲಿ ಹೊಸ ಆಜ್ಞೆಯೇ ಸರಿ. ಅದರ ನೈಜ ಗುಣವು ಕ್ರಿಸ್ತ ಯೇಸುವಿನಲ್ಲಿ ಬೆಳಗಿದಂತೆ, ನಿಮ್ಮ ಜೀವನದಲ್ಲೂ ಬೆಳಗುತ್ತದೆ. ಏಕೆಂದರೆ, ಕತ್ತಲು ಕಳೆದುಹೋಗುತ್ತಿದೆ; ನಿಜವಾದ ಬೆಳಕು ಈಗಾಗಲೇ ಪ್ರಕಾಶಿಸುತ್ತದೆ. "ನಾನು ಬೆಳಕಿನಲ್ಲಿದ್ದೇನೆ" ಎಂದು ಹೇಳಿಕೊಂಡು ತನ್ನ ಸಹೋದರನನ್ನು ದ್ವೇಷಿಸುವವನು ಇನ್ನೂ ಕತ್ತಲಲ್ಲೇ ಇದ್ದಾನೆ. ತನ್ನ ಸಹೋದರನನ್ನು ಪ್ರೀತಿಸುವವನಾದರೋ ಬೆಳಕಿನಲ್ಲಿ ನೆಲೆಗೊಂಡಿರುತ್ತಾನೆ. ಎಡವಿ ಪಾಪದಲ್ಲಿ ಬೀಳಿಸುವಂಥದ್ದೇನೂ ಅವನಲ್ಲಿ ಇರದು. ತನ್ನ ಸಹೋದರನನ್ನು ದ್ವೇಷಿಸುವವನು ಕತಲಲ್ಲಿ ಇದ್ದಾನೆ; ಕತ್ತಲಲ್ಲೇ ನಡೆಯುತ್ತಾನೆ. ಕತ್ತಲು ಅವನನ್ನು ಕುರುಡಾಗಿಸಿರುವುದರಿಂದ ಎತ್ತ ಹೋಗುತ್ತಿದ್ದಾನೆಂದು ಅವನಿಗೇ ತಿಳಿಯದು.
-ಪ್ರಭುವಿನ ವಾಕ್ಯ
ಕೀರ್ತನೆ : 96:1-3,5-6, v. 11
ಶ್ಲೋಕ: ಹರ್ಷಿಸಲಿ ಆಕಾಶವು, ಸಂತೋಷಿಸಲಿ ಭೂಲೋಕವು.
1. ಹೊಸಗೀತೆಯನು ಹಾಡಿರಿ ಪ್ರಭುವಿಗೆ|
ವಿಶ್ವವೆಲ್ಲವು ಹಾಡಲಿ ಆತನಿಗೆ|
ಪ್ರಭುವಿಗೆ ಹಾಡಿರಿ, ಆತನ ನಾಮವನು ಕೊಂಡಾಡಿರಿ||
ಶ್ಲೋಕ
2. ಆತನ ಮುಕ್ತಿಮಾರ್ಗವನು ಪ್ರತೀನಿತ್ಯವೂ ಸಾರಿರಿ|
ಪ್ರಸಿದ್ಧಪಡಿಸಿರಿ ಆತನ ಘನತೆಯನು ರಾಷ್ಟ್ರಗಳಿಗೆ|
ಆತನದ್ಬುತ ಕಾರ್ಯಗಳನು ಸಕಲ ಜನಾಂಗಗಳಿಗೆ||
ಶ್ಲೋಕ
3. ಪ್ರಭುವಿನಿಂದಲೇ ಉಂಟಾಯಿತು ಆಕಾಶಮಂಡಲವೆಲ್ಲ|
ಇವೆ ಮಹಿಮೆ, ಮಹತ್ವ ಆತನ ಸನ್ನಿಧಿಯಲಿ|
ಶಕ್ತಿ ಸೌಂದರ್ಯ ಆತನ ಗರ್ಭಗುಡಿಯಲಿ||
ಶ್ಲೋಕ
ಘೋಷಣೆ : ಯೊವಾನ್ನ 1:14,12
ಆ ದಿವ್ಯವಾಣಿ ಮನುಷ್ಯ ಆದರು, ಮನುಷ್ಯರಾಗಿ ನಮ್ಮೊಡನೆ ವಾಸಮಾಡಿದರು | ಕೆಲವರಾದರೋ ಅವರನ್ನು ಬರಮಾಡಿಕೊಂಡರು ಅಂಥವರಿಗೆ, ದೇವರ ಮಕ್ಕಳಾಗುವ ಹಕ್ಕನ್ನು ಕೊಟ್ಟರು||
ಅಲ್ಲೆಲೂಯ !
ಶುಭಸಂದೇಶ : ಲೂಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 2:22-35
ಆ ಕಾಲದಲ್ಲಿ ಮೋಶೆಯ, ನಿಯಮದ ಪ್ರಕಾರ ಸೂತಕ ದಿನಗಳು ಮುಗಿದು ಶುದ್ಧೀಕರಣ ದಿನ ಬಂದಾಗ, ತಂದೆತಾಯಿಗಳು ಆ ಮಗುವನ್ನು ಎತ್ತಿಕೊಂಡು ಜೆರುಸಲೇಮಿಗೆ ಹೋದರು. ಏಕೆಂದರೆ, ‘ಮೊದಲು ಜನಿಸಿದ ಪ್ರತಿಯೊಂದು ಗಂಡು ಮಗುವನ್ನು ಸರ್ವೇಶ್ವರನಿಗೆ ಸಮರ್ಪಿಸಬೇಕಾಗಿತ್ತು. ಅಲ್ಲದೆ, ಧರ್ಮಶಾಸ್ತ್ರದಲ್ಲೇ ಉಲ್ಲೇಖಿಸಿರುವಂತೆ ಒಂದು ಜೋಡಿ ಬೆಳವಹಕ್ಕಿಗಳನ್ನಾಗಲಿ, ಎರಡು ಪಾರಿವಾಳದ ಮರಿಗಳನ್ನಾಗಲಿ, ಬಲಿಯನ್ನಾಗಿ ಅರ್ಪಿಸಬೇಕಾಗಿತ್ತು. ಆಗ ಜೆರುಸಲೇಮಿನಲ್ಲಿ ಸಿಮೆಯೋನನೆಂಬ ಒಬ್ಬನು ವಾಸವಾಗಿದ್ದನು. ಸತ್ಪುರುಷನೂ ದೈವಭಕ್ತನೂ ಆದ ಇವನು, ಇಸ್ರಯೇಲ್ ಜನತೆಯ ಉದ್ಧಾರಕ ಯಾವಾಗ ಬರುವನೋ ಎಂದು ನಿರೀಕ್ಷಿಸುತ್ತಾ ಇದ್ದನು. ಪವಿತ್ರಾತ್ಮ ಇವನಲ್ಲಿ ನೆಲೆಸಿದ್ದರು. ಸರ್ವೇಶ್ವರ ಕಳುಹಿಸಲಿರುವ ಅಭಿಷಿಕ್ತನಾದ ಲೋಕೋದ್ಧಾರಕನ ದರ್ಶನವಾಗುವವರೆಗೆ ತನಗೆ ಸಾವಿಲ್ಲವೆಂದು ಪವಿತ್ರಾತ್ಮರಿಂದಲೇ ಆಶ್ವಾಸನೆ ಪಡೆದಿದ್ದನು. ಆ ಪವಿತ್ರಾತ್ಮರಿಂದ ಪ್ರೇರಿತನಾಗಿ ಅವನು ಮಹಾದೇವಾಲಯಕ್ಕೆ ಬಂದನು. ಧರ್ಮಶಾಸ್ತ್ರದ ವಿಧಿಯನ್ನು ಪೂರೈಸಲು ಬಾಲ ಯೇಸುವನ್ನು ತಂದೆತಾಯಿಗಳು ದೇವಾಲಯಕ್ಕೆ ತಂದಾಗ, ಸಿಮೆಯೋನನು ಆ ಮಗುವನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ದೇವರನ್ನು ಹೀಗೆಂದು ಸ್ತುತಿಸಿದನು: “ನಿನ್ನ ಮಾತು ಸರ್ವೇಶ್ವರಾ, ನೆರವೇರಿತಿಂದು; ಇನ್ನು ತೆರಳಬಿಡು ಶಾಂತಿಯಿಂದ ನಿನ್ನ ದಾಸನಾದ ಎನ್ನನು. ನೀನಿತ್ತ ಉದ್ದಾರಕನನು ನಾ ಕಂಡೆ ಕಣ್ಣಾರೆ, ಜನರೆಲ್ಲರ ಸಮ್ಮುಖದಲ್ಲಿ ನೀನೀತನನು ಪ್ರತ್ಯಕ್ಷ ಮಾಡಿರುವೆ. ಈತ ಅನ್ಯ ಜನರನ್ನು ಬೆಳಗಿಸುವ ಜ್ಯೋತಿ; ನಿನ್ನ ಜನ ಇಸ್ರಯೇಲರಿಗೆ ತರುವನು ಕೀರ್ತಿ!” ಮಗುವಿನ ವಿಷಯವಾಗಿ ಹೇಳಿದ ಈ ಮಾತುಗಳನ್ನು ಕೇಳಿ ತಂದೆ ತಾಯಿಗಳು iಆಶ್ಚರ್ಯಪಟ್ಟರು. ಅವರನ್ನು ಸಿಮೆಯೋನನು ಆಶೀರ್ವದಿಸಿದನು. ತಾಯಿ ಮರಿಯಳಿಗೆ, “ಇಗೋ, ಈ ಮಗು ಇಸ್ರಯೇಲರಲ್ಲಿ ಅನೇಕರ ಉನ್ನತಿಗೂ ಅನೇಕರ ಅವನತಿಗೂ ಕಾರಣನಾಗುವನು. ಅನೇಕರು ಪ್ರತಿಭಟಿಸುವ ದೈವ ಸಂಕೇತವಾಗುವನು. ಇದರಿಂದ ಅನೇಕರ ಹೃದಯದಾಳದ ಭಾವನೆಗಳು ಬಯಲಾಗುವುವು. ನಿನ್ನ ವಿಷಯದಲ್ಲಿ ಹೇಳುವುದಾದರೆ, ದುಃಖವೆಂಬ ಅಲಗೊಂದು ನಿನ್ನ ಅಂತರಂಗವನ್ನು ಸೀಳುವುದು,” ಎಂದು ಹೇಳಿದನು.
- ಪ್ರಭುವಿನ ಶುಭಸಂದೇಶ
Please upload today gospel readings
ReplyDelete