27.12.2025 - ಪ್ರಭುವನ್ನು ಸಮಾಧಿಯೊಳಗಿಂದ ತೆಗೆದುಕೊಂಡು ಹೋಗಿಬಿಟ್ಟಿದ್ದಾರೆ; ಅವರನ್ನು ಎಲ್ಲಿ ಇಟ್ಟಿದ್ದಾರೋ ಗೊತ್ತಿಲ್ಲ,

ಮೊದಲನೆಯ ವಾಚನ : ಯೊವಾನ್ನನ ಮೊದಲನೆಯ ಪತ್ರದಿಂದ ಇಂದಿನ ವಾಚನ 1:1-4

ಸಹೋದರರೇ,  ನಿಮಗೆ ನಾವು ಪ್ರಚುರಪಡಿಸುವ ಸಜೀವ ವಾಣಿ ಆದಿಯಿಂದ ಇರುವಂಥಾದ್ದು.  ಇದನ್ನು ಕಣ್ಣಾರೆ ಕಂಡಿದ್ದೇವೆ, ಕಿವಿಯಾರೇ ಕೇಳಿದ್ದೇವೆ,  ಮನಸ್ಸಾರೆ ಗ್ರಹಿಸಿದ್ದೇವೆ ಮತ್ತು ಕೈಯಾರೆ ಮುಟ್ಟಿದ್ದೇವೆ. ಆ ಜೀವ  ಪ್ರತ್ಯಕ್ಷವಾಯಿತು. ಅದನ್ನು ನಾವು ನೋಡಿದ್ದೇವೆ, ಆ ಬಗ್ಗೆ ಸಾಕ್ಷಿ ಹೇಳುತ್ತೇವೆ. ಪಿತನ ಬಳಿಯಿದ್ದು ನಮಗೆ ಪ್ರತ್ಯಕ್ಷವಾದಂಥ ನಿತ್ಯ ಜೀವವನ್ನು ನಿಮಗೆ ಸಾರುತ್ತೇವೆ.  ಪಿತನೊಡನೆಯೂ ಅವರ ಪುತ್ರ ಕ್ರಿಸ್ತ ಯೇಸುವಿನೊಡನೆಯೂ ನಮಗಿರುವಂಥ ಅನ್ಯೋನ್ಯತೆಯಲ್ಲಿ ನೀವು ಸಹಭಾಗಿಗಳಾಗುವಂತೆ ನಾವು ಕಂಡುಕೇಳಿದ್ದನ್ನು ನಿಮಗೆ ಪ್ರಚುರಪಡಿಸುತ್ತೇವೆ.  ನಮ್ಮೆಲ್ಲರ ಆನಂದವು ಪರಿಪೂರ್ಣವಾಗುವಂತೆ ಇದನ್ನು ಬರೆಯುತ್ತಿದ್ದೇವೆ.

ಪ್ರಭುವಿನ ವಾಕ್ಯ

ಕೀರ್ತನೆ 97:1-2,5-6,11-12,v. 12

ಶ್ಲೋಕ:  ಸಜ್ಜನರೇ, ಪ್ರಭುವಿನಲ್ಲಿ ಆನಂದಿಸಿರಿ.

1.  ಇದೆ ಪ್ರಭುವಿನ ಕೈಯಲ್ಲಿ ರಾಜ್ಯಾಧಿಕಾರ|

ಉಲ್ಲಾಸಿಸಲಿ ಧರಣಿಮಂಡಲದಾದ್ಯಂತ||

ಸಂತೋಷಿಸಲಿ ಕಡಲಿನ ದ್ವೀಪಗಳೆಲ್ಲ||

ಇವೆ ಮುಗಿಲು ಕಾರ್ಮುಗಿಲೂ ಆತನ ಸುತ್ತಲು|

ನ್ಯಾಯ ನೀತಿ ಆತನ ಗದ್ದುಗೆಯಸ್ತಿವಾರಗಳು||

ಶ್ಲೋಕ


2.  ಸಾರ್ವಭೌಮನಾದ ಪ್ರಭುವಿನ ಮುಂದೆ|

ಕರಗುತ್ತವೆ ಬೆಟ್ಟಗುಡ್ಡಗಳು ಮೇಣದಂತೆ||

ಘೋಷಿಸುತ್ತದೆ ಗಗನಮಂಡಲ ಆತನ ನೀತಿಯನು|

ಕಾಣುತ್ತವೆ ಸಕಲ ಜನಾಂಗ ಆತನ ಮಹಿಮೆಯನು||

ಶ್ಲೋಕ


3.  ಉದಯವಾಗುವುದು ಜ್ಯೋತಿ ಸಜ್ಜನರಿಗೆ|

ಆನಂದವಿದೆ ಯಥಾರ್ಥ ಹೃದಯಿಗಳಿಗೆ||

ಸಜ್ಜನರೇ ಪ್ರಭುವಿನಲ್ಲಿ ಆನಂದಿಸಿರಿ|

ಆತನ ಶ್ರೀ ನಾಮವನು ಕೊಂಡಾಡಿರಿ||

ಶ್ಲೋಕ

ಘೋಷಣೆ : ಅಲ್ಲೆಲೂಯ, ಅಲ್ಲೆಲೂಯ!

ಓ  ದೇವಾ  ನಿಮ್ಮನ್ನು  ಸ್ತುತಿಸುತ್ತೇವೆ,  ನೀವೇ  ನಮ್ಮ  ಪ್ರಭುವೆಂದು  ಅಂಗೀಕರಿಸುತ್ತೇವೆ |  ಪ್ರೇಷಿತ  ಮಹಿಮಾ ವೃಂದವು ನಿಮ್ಮನ್ನು  ಸ್ತುತಿಸುತ್ತದೆ, ಓ  ಪ್ರಭೂ||

ಅಲ್ಲೆಲೂಯ!

ಶುಭಸಂದೇಶ : ಯೊವಾನ್ನನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 20:2-8


ವಾರದ ಮೊದಲನೆಯ ದಿನ, ಮಗ್ಗಲದ ಮರಿಯಳು     ಸಿಮೋನ ಪೇತ್ರನ ಮತ್ತು ಯೇಸುವಿಗೆ ಆಪ್ತನಾಗಿದ್ದ ಇನ್ನೊಬ್ಬ ಶಿಷ್ಯನ ಬಳಿಗೆ ಓಡಿ ಬಂದು, “ಪ್ರಭುವನ್ನು ಸಮಾಧಿಯೊಳಗಿಂದ ತೆಗೆದುಕೊಂಡು ಹೋಗಿಬಿಟ್ಟಿದ್ದಾರೆ; ಅವರನ್ನು ಎಲ್ಲಿ ಇಟ್ಟಿದ್ದಾರೋ ಗೊತ್ತಿಲ್ಲ,” ಎಂದು ಹೇಳಿದಳು. ಇದನ್ನು ಕೇಳಿ ಪೇತ್ರನೂ ಇನ್ನೊಬ್ಬ ಶಿಷ್ಯನೂ ಸಮಾಧಿಯ ಕಡೆಗೆ ಹೊರಟರು.  ಇಬ್ಬರೂ ಓಡಿದರು.  ಆ ಇನ್ನೊಬ್ಬ ಶಿಷ್ಯನು ಪೇತ್ರನಿಗಿಂತ ಮುಂದೆ ಓಡಿ ಸಮಾಧಿಯನ್ನು ಮೊದಲು ತಲುಪಿದನು. ಅವನು ಬಗ್ಗಿ ನೋಡಿದಾಗ ಅಲ್ಲಿ ನಾರುಬಟ್ಟೆಗಳು ಬಿದ್ದಿರುವುದು ಕಾಣಿಸಿತು. ಆದರೆ ಅವನು ಒಳಗೆ ನುಗ್ಗಲಿಲ್ಲ. ಅವನ ಹಿಂದೆಯೇ ಸಿಮೋನ ಪೇತ್ರನು ಬಂದು ನೆಟ್ಟಗೆ ಸಮಾಧಿ ಒಳಗೆ ನುಗ್ಗಿದನು; ಅಲ್ಲಿ ನಾರುಮಡಿಗಳು ಬಿದ್ದಿರುವುದನ್ನು ಕಂಡನು.  ಯೇಸುವಿನ ತಲೆಗೆ ಸುತ್ತಿದ್ದ ಬಟ್ಟೆ, ಆ ನಾರುಮಡಿಗಳೊಡನೆ ಇರದೆ, ಅದನ್ನು ಮಡಚಿ ಪ್ರತ್ಯೇಕವಾಗಿ ಇಟ್ಟಿರುವುದನ್ನು ಕಂಡನು.  ಸಮಾಧಿಯನ್ನು ಮೊದಲು ತಲುಪಿದ್ದ ಇನ್ನೊಬ್ಬ ಶಿಷ್ಯನೂ ಆಮೇಲೆ ಒಳಗೆ ನುಗ್ಗಿ ನೋಡಿದನು; ನೋಡಿ ನಂಬಿದನು. 

- ಪ್ರಭುವಿನ ಶುಭಸಂದೇಶ

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...