ಮೊದಲನೆಯ ವಾಚನ: ಸಿರಾಖನ ಗ್ರಂಥದಿಂದ ಇಂದಿನ ವಾಚನ 6:5-17
ಸವಿ ನುಡಿ ಹೆಚ್ಚಿಸುವುದು ಸ್ನೇಹಿತರನ್ನು. ಸರಳ ನುಡಿ ಹೆಚ್ಚಿಸುವುದು ಸತ್ಕಾರವನ್ನು. ಸಮಾಧಾನದಿಂದ ವರ್ತಿಸು ಹಲವರೊಡನೆ, ಸಲಹೆಗಾರ ಮಾತ್ರ ನಿನಗಿರಲಿ ಸಾವಿರದಲ್ಲೊಬ್ಬನೇ. ಸ್ನೇಹ ಬೆಳೆಸುವ ಮುನ್ನ ವ್ಯಕ್ತಿಯನ್ನು ಪರೀಕ್ಷಿಸು, ಯಾರನ್ನೂ ಕೂಡಲೇ ನಂಬಿ ಬಿಡಲು ಅವಸರಪಡದಿರು. ಸ್ನೇಹ ಬೆಳೆಸುವ ಗೆಳೆಯರಿದ್ದಾರೆ. ಸಮಯ ಸಾಧಕರಾಗಿ, ಕೈಕೊಡುವವರು ನಿನಗೆ ಕಷ್ಟಕಾಲದಲ್ಲಿ. ಇಂದು ಗೆಳೆಯ ನಾಳೆ ಶತ್ರು ಆಗುವವನೂ ಇದ್ದಾನೆ, ಇಂಥವನು ನಿನ್ನೊಡನೆ ಜಗಳವಾಡಿ ನಿನ್ನ ಮಾನ ಕಳೆಯುತ್ತಾನೆ. ಸಹವಾಸ ಮಾಡುವವರಿದ್ದಾರೆ ನಿನ್ನ ತಿಂಡಿ ತೀರ್ಥಕ್ಕಾಗಿ, ನಿನ್ನ ಸಂಗಡ ಇರುವುದಿಲ್ಲ ಕಷ್ಟದಲ್ಲಿ ಸಹಾಯ ಮಾಡಲಿಕ್ಕಾಗಿ. ನಿನ್ನ ಸುಖದ ದಿನಗಳಲ್ಲಿ ಪ್ರಾಣ ಸ್ನೇಹಿತನಂತಿರುವವನು, ನಿನ್ನ ಆಳುಹೋಳುಗಳನ್ನು ಬೆದರಿಸಿ ಕೆಲಸ ಮಾಡಿಸಿಕೊಳ್ಳುವನು. ನಿನ್ನ ದುಃಖದ ದಿನಗಳಲ್ಲಿ ವಿರೋಧಿಯಾಗುವನು, ತನ್ನ ಮುಖವನ್ನು ನಿನ್ನಿಂದ ಮರೆಸಿಕೊಳ್ಳುವನು. ನಿನ್ನ ವೈರಿಗಳಿಂದ ಆದಷ್ಟು ದೂರವಿರು, ನಿನ್ನ ಸಂಗಡಿಗರ ವಿಷಯದಲ್ಲಿ ಎಚ್ಚರಿಕೆಯಿಂದಿರು. ನಂಬಿಗಸ್ಥ ಗೆಳೆಯ, ಸುರಕ್ಷಿತ ಆಶ್ರಯಗಿರಿಯಂತೆ, ಅಂಥವನು ಸಿಕ್ಕುವುದು ಸಂಪತ್ತಿನ ನಿಧಿ ಸಿಕ್ಕಿದಂತೆ. ಯಾವುದೂ ಸಾಟಿಯಿಲ್ಲ ನಂಬಿಗಸ್ಥ ಗೆಳೆಯನಿಗೆ, ಅಷ್ಟಿಷ್ಟಲ್ಲ, ಅಂಥವನ ಶ್ರೇಷ್ಠತೆ. ನಂಬಿಗಸ್ಥ ಗೆಳೆಯ ಸಂಜೀವಿನಿಯಂತೆ, ಸಿಗುವವನು ದೇವರಿಗೆ ಭಯಪಡುವವನಿಗೆ. ದೇವಭಕ್ತನು ಸ್ನೇಹಿತರನ್ನು ಆಪ್ತನನ್ನಾಗಿಸಿಕೋಳ್ಳುವನು, ಏಕೆಂದರೆ ತನ್ನಂತೆಯೇ ಅವನನ್ನು ಕಂಡು ಭಾವಿಸುವರು.
ಕೀರ್ತನೆ 119:12,16,18,27,34,35
ಶ್ಲೋಕ: ನಡಸೆನ್ನ ಪ್ರಭೊ, ನಿನ್ನ ಆಜ್ಞಾಮಾರ್ಗದಲಿ.
ಸ್ತುತಿ ಸಲ್ಲಲಿ ಪ್ರಭೂ, ನಿನಗೆ|
ನಿನ್ನ ಆಜ್ಞೆಗಳನು ಕಲಿಸು ಎನಗೆ||
ನಿನ್ನ ನಿಯಮಗಳ ನೆನೆದು ನಲಿವೆನಯ್ಯಾ|
ನಿನ್ನ ವಾಕ್ಯವನು ಮರೆಯಲಾರೆನಯ್ಯಾ||
ನಿನ್ನ ಶಾಸ್ತ್ರದ ಮಹಿಮೆಯನು ಅರಿಯುವಂತೆ|
ನನ್ನ ಕಣ್ಗಳಿಂದ ನೀ ತೆಗೆದುಬಿಡು ಅಂಧತೆ||
ನಿನ್ನ ನಿಯಮಗಳ ಪಥವನೆನಗೆ ತಿಳಿಯಪಡಿಸಯ್ಯಾ|
ನಿನ್ನ ಅದ್ಭುತಕಾರ್ಯಗಳನ್ನು ನಾ ಧ್ಯಾನಿಸುವೆನಯ್ಯಾ||
ನೀಡೆನಗೆ ನಿನ್ನ ಶಾಸ್ತ್ರದ ಅರಿವನು|
ಪೂರ್ಣ ಮನದಿಂದ ಆಚರಿಸುವೆನದನು||
ಎನ್ನ ನಡೆಸು ನಿನ್ನ ಆಜ್ಞಾಮಾರ್ಗದಲಿ|
ಪಡೆಯುವೆ ಹರ್ಷಾನಂದವನು ಅದರಲಿ||
ಘೋಷಣೆ
ಅಲ್ಲೆಲೂಯ, ಅಲ್ಲೆಲೂಯ!
ನಿನ್ನಚಲ ಪ್ರೀತಿಗನುಸಾರ ಚೈತನ್ಯಗೊಳಿಸೆನ್ನನು | ಕೈಗೊಳ್ಳುವೆನಾಗ ನಿನ್ನ ಬಾಯುಸುರಿದ ಕಟ್ಟಳೆಗಳನು ||
ಅಲ್ಲೆಲೂಯ!
ಶುಭಸಂದೇಶ: ಮಾರ್ಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 10:1-12
ಆ ಕಾಲದಲ್ಲಿ ಯೇಸು ಜೋರ್ಡಾನ್ ನದಿಯ ಆಚೆ ಕಡೆಯಿದ್ದ ಜುದೇಯ ಪ್ರಾಂತ್ಯಕ್ಕೆ ಬಂದರು. ಯೇಸು ಅವರಿಗೂ ಉಪದೇಶ ಮಾಡಿದರು. ಫರಿಸಾಯರಲ್ಲಿ ಕೆಲವರು, ಅವರನ್ನು ಮಾತಿನಲ್ಲಿ ಸಿಕ್ಕಿಸುವ ಉದ್ದೇಶದಿಂದ "ಗಂಡನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೇ? "ಎಂದು ಕೇಳಿದರು. ಯೇಸು, "ಈ ವಿಷಯವಾಗಿ ಮೋಶೆ ನಿಮಗೆ ಏನೆಂದು ವಿಧಿಸಿದ್ದಾನೆ? " ಎಂದು ಅವರನ್ನೇ ಪುನಃ ಪ್ರಶ್ನಿಸಿದರು. ಅದಕ್ಕೆ ಅವರು "ವಿವಾಹ ವಿಚ್ಛೇದನ ಪತ್ರವನ್ನು ಕೊಟ್ಟು ಹೆಂಡತಿಯನ್ನು ಬಿಟ್ಟುಬಿಡಲು ಮೋಶೆ ಅನುಮತಿ ಇತ್ತಿದ್ದಾನೆ, "ಎಂದರು. ಆಗ ಯೇಸು, "ನಿಮ್ಮ ಹೃದಯ ಕಲ್ಲಾಗಿ ಇದ್ದುದರಿಂದಲೇ ಮೋಶೆ ಈ ನಿಯಮವನ್ನು ಬರೆದಿಟ್ಟನು. ಆದರೆ ಸೃಷ್ಟಿಯ ಆರಂಭದಿಂದಲೇ 'ದೇವರು ಮನುಷ್ಯರನ್ನು ಗಂಡುಹೆಣ್ಣಾಗಿ ನಿರ್ಮಿಸಿದ್ದಾರೆ. ಈ ಕಾರಣದಿಂದ ಗಂಡನು ತಂದೆ ತಾಯಿಗಳನ್ನು ಬಿಟ್ಟು, ತನ್ನ ಹೆಂಡತಿಯನ್ನು ಕೂಡಿಕೊಂಡು ಅವರಿಬ್ಬರೂ ಒಂದಾಗಿ ಬಾಳುವರು' ಎನ್ನುತ್ತದೆ ಪವಿತ್ರಗ್ರಂಥ. ಹೀಗಿರುವಲ್ಲಿ ಇನ್ನು ಮುಂದೆ ಅವರು ಇಬ್ಬರಲ್ಲ, ಒಂದೇ ಶರೀರ. ಆದುದರಿಂದ ದೇವರು ಒಂದುಗೂಡಿಸಿದ್ದನ್ನು ಮನುಷ್ಯನು ಬೇರ್ಪಡಿಸದಿರಲಿ, "ಎಂದರು. ಅಂದು ಮನೆಗೆ ಹೋದ ಬಳಿಕ ಶಿಷ್ಯರು ಅದೇ ವಿಷಯವಾಗಿ ಯೇಸುವನ್ನು ವಿಚಾರಿಸಿದರು. ಅದಕ್ಕೆ ಅವರು, "ಹೆಂಡತಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಯಾಗುವವನು ಆಕೆಗೆ ದ್ರೋಹ ಬಗೆದು ವ್ಯಭಿಚಾರಿಯಾಗುತ್ತಾನೆ. ಅಂತೆಯೇ ಗಂಡನನ್ನು ಬಿಟ್ಟು ಮತ್ತೊಬ್ಬನನ್ನು ವಿವಾಹವಾಗುವವಳು ವ್ಯಭಿಚಾರಿಣಿಯಾಗುತ್ತಾಳೆ, " ಎಂದರು.
No comments:
Post a Comment