ಮೊದಲನೆಯ ವಾಚನ: ಸಿರಾಖ 4:11-19
ಸುಜ್ಞಾನವೆಂಬಾಕೆ ಮಕ್ಕಳನ್ನು ಉನ್ನತಿಗೆ ಏರಿಸುವಳು
ತನ್ನನ್ನು ಅರಸುವವರನ್ನು ತನಗೇ ವಶಮಾಡಿಕೊಳ್ಳುವಳು,
ಆಕೆಯನ್ನು ಪ್ರೀತಿಸುವವನು, ಪ್ರೀತಿಸುವುದು ಜೀವವನ್ನೇ
ತಡವಿಲ್ಲದೆ ಆಕೆಯನ್ನು ಅರಸುವವನು ಪಡೆವನು ಅಮಿತಾನಂದವನ್ನೇ.
ಆಕೆಯನ್ನು ಬಿಗಿಯಾಗಿ ಹಿಡಿದುಕೊಳ್ಳುವವನು ಆಗುವನು ಕೀರ್ತಿವಂತ
ಅವನು ಹೋದೆಡೆಯಲ್ಲೆಲ್ಲ ಲಭಿಸುವುದವನಿಗೆ ದೇವರ ಆಶೀರ್ವಾದ.
ಆಕೆಗೆ ಸೇವೆಮಾಡುವವನು ಪರಮಪಾವನನನ್ನು ಸೇವೆ ಮಾಡುತ್ತಾನೆ,
ಆಕೆಯನ್ನು ಪ್ರೀತಿಸುವವನನ್ನು ಸರ್ವೇಶ್ವರ ಪ್ರೀತಿಸುತ್ತಾನೆ.
ಆಕೆಗೆ ಕಿವಿಗೊಡುವವರು ಜನಾಂಗಗಳಿಗೆ ನ್ಯಾಯತೀರಿಸುವರು,
ಆಕೆಗೆ ಗಮನಕೊಡುವವರು ಸುರಕ್ಷಿತವಾಗಿ ಬದುಕುವರು.
ಆಕೆಯನ್ನು ನೆಚ್ಚಿಕೊಂಡಿರುವವನು ಪಡೆಯುವನು ಆಕೆಯನ್ನು ಬಾಧ್ಯವಾಗಿ
ಆತನ ಪೀಳಿಗೆಯೂ ಆಕೆಯನ್ನು ಇಟ್ಟುಕೊಳ್ಳುವುದು ತನ್ನ ಸ್ವಾಧೀನವಾಗಿ.
ಪ್ರಾರಂಭದಲ್ಲಿ ಆಕೆ ಮಾನವರೊಂದಿಗೆ ಅಡ್ಡದಿಡ್ಡ ನಡೆಯುವಳು,
ಅವನಲ್ಲಿ ಅಳುಕು ಅಂಜಿಕೆಗಳನ್ನು ಹುಟ್ಟಿಸುತ್ತಾ ಸಾಗುವಳು.
ಆತ್ಮದ ಬಗ್ಗೆ ನಂಬಿಕೆ ಹುಟ್ಟುವ ತನಕ ಶಿಕ್ಷೆಯಿತ್ತು ಬಾಧಿಸುವಳು,
ನೀತಿನಿಯಮಗಳಿಂದ ಆತನನ್ನು ಪರೀಕ್ಷಿಸುವಳು,
ತದನಂತರ ಅವನನ್ನು ನೇರವಾದ ಮಾರ್ಗಕ್ಕೆ ತಿರುಗಿಸುವಳು.
ಅವನಲ್ಲಿ ಸಂತೋಷವನ್ನು ಮೂಡಿಸುವಳು,
ಅವನಿಗೆ ತನ್ನ ಗುಟ್ಟುಗಳನ್ನು ತಿಳಿಸುತ್ತಾ ನಡೆಯುವಳು.
ಆಗಲೂ ಅವನು ಅಡ್ಡದಾರಿ ಹಿಡಿದರೆ, ಅವನನ್ನು ತೊರೆದುಬಿಡುವಳು
ತಾನು ಮಾಡಿದ್ದನ್ನು ತಾನೇ ಉಣ್ಣಲೆಂದು ಕೈಬಿಟ್ಟುಬಿಡುವಳು.
ಕೀರ್ತನೆ 119:165, 168,171-172,174-175
ಶ್ಲೋಕ: ಅತಿ ನೆಮ್ಮದಿಯುಂಟು ನಿನ್ನ ಶಾಸ್ತ್ರಪ್ರಿಯರಿಗೆ.
ಅತಿ ನೆಮ್ಮದಿಯುಂಟು ನಿನ್ನ ಶಾಸ್ತ್ರಪ್ರಿಯರಿಗೆ|
ವಿಘ್ನಕರವಾದುದೇನೂ ಇರದು ಅಂಥವರಿಗೆ||
ಅನುಸರಿಸಿದೆ ನಿನ್ನ ನೇಮನಿಯಮಗಳನೆಲ್ಲ|
ನಿನಗೆ ಬಟ್ಟಬಯಲು ನನ್ನ ನಡತೆಯೆಲ್ಲ||
ನನಗೆ ಕಲಿಸಿರುವೆ ನಿನ್ನ ನಿಬಂಧನೆಗಳನು|
ನನ್ನ ಬಾಯಿ ಉಸುರಲಿ ನಿನ್ನ ಗುಣಗಾನವನು||
ವರ್ಣಿಸಲಿ ನನ್ನ ನಾಲಿಗೆ ನಿನ್ನ ನುಡಿಗಳನು|
ನಿನ್ನ ಕೈ ನೀಡಲಿ ನನಗೆ ನೆರವನು||
ನನಗೆ ಇಷ್ಟ ನೀನು ನೀಡುವ ಜೀವೋದ್ಧಾರ|
ನಿನ್ನ ಧರ್ಮಶಾಸ್ತ್ರ ಎನಗೆ ಸಂತೋಷಕರ||
ಉಳಿಸೆನ್ನ ಪ್ರಾಣವನು, ಭಜಿಪೆ ನಿನ್ನನು|
ನೀಡಲಿ ಎನಗೆ ನಿನ್ನ ವಿಧಿಗಳು ನೆರವನು||
ಘೋಷಣೆ ಕೀರ್ತನೆ 119:18
ಅಲ್ಲೆಲೂಯ, ಅಲ್ಲೆಲೂಯ!
ನಿನ್ನ ಶಾಸ್ತ್ರದ ಮಹಿಮೆಯನು ಅರಿಯುವಂತೆ | ನನ್ನ ಕಣ್ಣುಗಳಿಂದ ನೀ ತೆಗೆದುಬಿಡು ಅಂಧತೆ ||
ಅಲ್ಲೆಲೂಯ!
ಶುಭಸಂದೇಶ: ಮಾರ್ಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 9:38-40
ಯೊವಾನ್ನನು ಯೇಸುವಿಗೆ, "ಗುರುವೇ, ಯಾರೋ ಒಬ್ಬನು ತಮ್ಮ ಹೆಸರಿನಲ್ಲಿ ದೆವ್ವಬಿಡಿಸುವುದನ್ನು ಕಂಡೆವು. ಅವನು ನಮ್ಮವನಲ್ಲ, ಆದಕಾರಣ ಅವನನ್ನು ತಡೆದೆವು, "ಎಂದನು. ಅದಕ್ಕೆ ಯೇಸು " ಅವನನ್ನು ತಡೆಯಬೇಡಿ, ನನ್ನ ಹೆಸರಿನಲ್ಲಿ ಅದ್ಭುತ ಮಾಡುವವನು ಮರುಕ್ಷಣವೇ ನನ್ನ ವಿಷಯವಾಗಿ ಅಪಪ್ರಚಾರ ಮಾಡನು. ನಮಗೆ ವಿರೋಧಿ ಅಲ್ಲದವನು ನಮ್ಮ ಪರವಾದಿ, "ಎಂದರು.
No comments:
Post a Comment