ಮೊದಲನೆಯ ವಾಚನ: ಆದಿಕಾಂಡ 8:6-13, 20-22
ನಲವತ್ತು ದಿನಗಳಾದ ಮೇಲೆ ನೋಹನು ತಾನು ಮಾಡಿದ್ದ ನಾವೆಯ ಕಿಟಕಿಯನ್ನು ತೆರೆದು ಕಾಗೆಯೊಂದನ್ನು ಹೊರಕ್ಕೆ ಬಿಟ್ಟನು. ಅದು ಭೂಮಿಯ ಮೇಲಿದ್ದ ನೀರು ಒಣಗುವ ತನಕ ಹೋಗುತ್ತಾ ಬರುತ್ತಾ ಇತ್ತು. ನೀರು ಇಳಿಯಿತೋ ಇಲ್ಲವೋ ಎಂದು ತಿಳಿದುಕೊಳ್ಳಲು ನೋಹನು ಅನಂತರ ಪಾರಿವಾಳವೊಂದನ್ನು ಹೊರಕ್ಕೆ ಬಿಟ್ಟನು. ಭೂಮಿಯ ಮೇಲೆಲ್ಲ ನೀರು ಇದ್ದುದರಿಂದ. ಕಾಲಿಡುವುದಕ್ಕೆ ಸ್ಥಳ ಕಾಣದೆ ಈ ಪಾರಿವಾಳ ನಾವೆಗೆ ಹಿಂದಿರುಗಿತು. ನೋಹನು ಕೈ ಚಾಚಿ ಅದನ್ನು ಹಿಡಿದುಕೊಂಡು ನಾವೆಯೊಳಗೆ ಹಾಕಿಕೊಂಡನು. ಇನ್ನೂ ಏಳು ದಿವಸ ಕಾದು, ಪಾರಿವಾಳವನ್ನು ಹೊರಕ್ಕೆ ಬಿಟ್ಟನು. ಸಂಜೆ ವೇಳೆಗೆ ಆ ಪಾರಿವಾಳ ಅವನ ಬಳಿಗೆ ಮರಳಿತು; ಆಗ ಇಗೋ! ಅದರ ಬಾಯಲ್ಲಿ ಎಣ್ಣೇಮರದ ಹೊಸ ಚಿಗುರಿತ್ತು. ಇದನ್ನು ನೋಡಿ ನೋಹನು ಭೂಮಿಯ ಮೇಲಿಂದ ನೀರು ಇಳಿದುಹೋಗಿದೆಯೆಂದು ತಿಳಿದುಕೊಂಡನು. ಮತ್ತೆ ಏಳು ದಿನಗಳಾದ ಮೇಲೆ ಇನ್ನೊಮ್ಮೆ ಪಾರಿವಾಳವನ್ನು ಹೊರಕ್ಕೆ ಬಿಟ್ಟನು. ಈ ಸಾರಿ ಅದು ಹಿಂದುರುಗಿ ಬರಲೇ ಇಲ್ಲ. ನೋಹನು 601ನೆಯ ವರ್ಷದ ಮೊದಲನೆಯ ತಿಂಗಳಿನ ಮೊದಲನೆಯ ದಿನದಂದು ಭೂಮಿಯ ಮೇಲಿದ್ದ ನೀರು ಇಳಿದಿತ್ತು. ನೋಹನು ನಾವೆಯ ಗವಸಣಿಗೆಯನ್ನು ತೆಗೆದು ನೋಡಿದನು. ಇಗೋ, ಭೂಮಿಯ ತೇವ ಆರುತ್ತಿತ್ತು. ನೋಹನು ಸರ್ವೇಶ್ವರಸ್ವಾಮಿಗೆ ಒಂದು ಬಲಿಪೀಠವನ್ನು ಕಟ್ಟಿದನು. ಶುದ್ದವಾದ ಎಲ್ಲ ಪ್ರಾಣಿಪಕ್ಷಿಗಳಿಂದ ಆಯ್ದು ಆ ಪೀಠದ ಮೇಲೆ ದಹನಬಲಿಯನ್ನು ಅರ್ಪಿಸಿದನು. ಗಮಗಮಿಸುವ ಅದರ ಸುಗಂಧವು ಸ್ವಾಮಿಯನ್ನು ಮುಟ್ಟಿತು. ಅವರು ಮನದಲ್ಲೇ ಹೀಗೆಂದುಕೊಂಡರು: "ಇನ್ನು ಮೇಲೆ ನಾನು ಮನುಷ್ಯರ ನಿಮಿತ್ತ ಭೂಮಿಯನ್ನು ಶಪಿಸುವುದಿಲ್ಲ. ಮನುಷ್ಯರ ಹೃದಯದ ಆಲೋಚನೆ ಚಿಕ್ಕಂದಿನಿಂದಲೇ ಕೆಟ್ಟದ್ದು. ಈಗ ಮಾಡಿದಂತೆ ಇನ್ನು ಮೇಲೆ ಎಲ್ಲ ಜೀವಿಗಳನ್ನು ನಾನು ಸಂಹರಿಸುವುದಿಲ್ಲ. ಬಿತ್ತನೆ -- ಕೊಯಿಲು, ಚಳಿ -- ಬಿಸಿಲು, ಗ್ರೀಷ್ಠ -- ಹೇಮಂತ, ಹಗಲು -- ಇರುಳು ಈ ಕ್ರಮಕ್ಕೆ ಇರದು ಅಂತ್ಯ ಜಗವಿರುವವರೆಗು."
ಕೀರ್ತನೆ:116:12-13,14-15,18-19. V.17
ಶ್ಲೋಕ: ಅರ್ಪಿಸುವೆ ನಾ ನಿನಗೆ ಕೃತಜ್ಞತಾಬಲಿಯನು.
ಪ್ರಭು ಎನಗೆ ಮಾಡಿದ ಮಹೋಪಕಾರಗಳಿಗಾಗಿ|
ನನ್ನಿಂದೇನು ಮಾಡಲು ಸಾಧ್ಯ ಪ್ರತಿಯಾಗಿ?||
ಎತ್ತಿ ಹಿಡಿವೆನು ರಕ್ಷಣೆಯ ಪಾನಪಾತ್ರೆಯನು|
ಪ್ರಖ್ಯಾತಿಪಡಿಸುವೆನು ಪ್ರಭುವಿನ ನಾಮವನು||
ಆತನಿಗೆ ನಾ ಹೊತ್ತ ಹರಕೆಗಳನು|
ಆತನ ಸಭೆಯ ಮುಂದೆಯೇ ತೀರಿಸುವೆನು||
ಪ್ರಭು ಅಲ್ಪವೆಂದೆಣಿಸನು|
ತನ್ನ ಭಕ್ತರ ಮರಣವನು||
ಹೇ ಜೆರುಸಲೇಮೇ, ನಿನ್ನ ಮಧ್ಯದೊಳು|
ಆತನಿರುವ ಮಂದಿರದ ಅಂಗಳದೊಳು||
ತೀರಿಸುವೆನು ಆತನ ಸಭೆಯ ಸಮ್ಮುಖದೊಳು|
ಅರ್ಪಿಸುವೆ ನಾ ಹೊತ್ತ ಆ ಹರಕೆಗಳನು||
ಶುಭಸಂದೇಶ: ಮಾರ್ಕ 8:22-26
ಆ ಕಾಲದಲ್ಲಿ ಯೇಸು ಮತ್ತು ಅವರ ಶಿಷ್ಯರು ಬೆತ್ಸಾಯಿದಕ್ಕೆ ಬಂದರು. ಕೆಲವರು ಯೇಸುವಿನ ಬಳಿಗೆ ಕುರುಡನೊಬ್ಬನನ್ನು ಕರೆತಂದು ಅವನನ್ನು ಮುಟ್ಟಬೇಕೆಂದು ಬೇಡಿಕೊಂಡರು. ಯೇಸು ಕುರುಡನ ಕೈಯಿಡಿದು, ಅವನನ್ನು ಊರ ಹೊರಗೆ ಕರೆದೊಯ್ದರು. ಅವನ ಮೇಲೆ ಕೈಯಿಟ್ಟು, " ನಿನಗೆ ಏನಾದರೂ ಕಾಣುತ್ತಿದೆಯೇ? " ಎಂದು ಕೇಳಿದರು. ಆಗ ಅವನು ಕಣ್ಣೆತ್ತಿ ನೋಡಿ, " ನನಗೆ ಮನುಷ್ಯರು ಮರಗಳಂತೆ ಕಾಣಿಸುತ್ತಾರೆ. ಅದರೂ ಅವರು ನಡೆದಾಡುತ್ತಿದ್ದಾರೆ, " ಎಂದನು. ಯೇಸು ಪುನಃ ಅವನ ಕಣ್ಣುಗಳ ಮೇಲೆ ಕೈಯಿಟ್ಟರು. ಅವನು ಕಣ್ಣರಳಿಸಿ ನೋಡಿದಾಗ ಪೂರ್ಣ ದೃಷ್ಟಿಯನ್ನು ಹೊಂದಿದ್ದನು. ಎಲ್ಲವೂ ಆತನಿಗೆ ಸ್ಪಷ್ಟವಾಗಿ ಕಾಣಿಸಿತು. ಅನಂತರ ಯೇಸು, " ನೀನು ಊರೊಳಗೆ ಹೋಗುವುದೇ ಬೇಡ, " ಎಂದು ಅವನಿಗೆ ಆಜ್ಞಾಪಿಸಿ, ಮನೆಗೆ ಕಳುಹಿಸಿಬಿಟ್ಟರು.
No comments:
Post a Comment