ಮೊದಲನೆಯ ವಾಚನ: ಆದಿಕಾಂಡ 11:1-9
ಭೂಜನರೆಲ್ಲರಿಗೂ ಇದ್ದಿದ್ದು ಒಂದೇ ಭಾಷೆ, ಒಂದೇ ನುಡಿ. ಅವರು ಪೂರ್ವದಿಕ್ಕಿಗೆ ಪ್ರಯಾಣ ಮಾಡುತ್ತಾ ಇದ್ದಾಗ ಬಾಬಿಲೋನಿಯ ಕಾಡಿನ ಬಯಲುಸೀಮೆ ಸಿಕ್ಕಿತು. ಅವರು ಅಲ್ಲೇ ನೆಲೆಸಲು ತೊಡಗಿದರು. " ಬನ್ನಿ, ಒಳ್ಳೊಳ್ಳೆ ಸುಟ್ಟ ಇಟ್ಟಿಗೆಗಳನ್ನು ಮಾಡೋಣ; ಒಂದು ಪಟ್ಟಣವನ್ನು ಕಟ್ಟೋಣ; ಆಕಾಶವನ್ನು ಮುಟ್ಟುವಂಥ ಗೋಪುರವನ್ನು ನಿರ್ಮಿಸಿ ಪ್ರಖ್ಯಾತಿ ಪಡೆಯೋಣ. ಹೀಗೆ ಮಾಡಿದರೆ ನಾವು ಜಗದಲ್ಲೆಲ್ಲಾ ಚದರಿಹೋಗುವುದಕ್ಕೆ ಆಸ್ಪದವಿರುವುದಿಲ್ಲ, " ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು. ಕಟ್ಟುವಾಗ ಕಲ್ಲಿಗೆ ಬದಲಾಗಿ ಇಟ್ಟಿಗೆಯನ್ನೂ ಗಾರೆಗೆ (ಸುಣ್ಣಕ್ಕೆ) ಬದಲಾಗಿ ಕಲ್ಲರಗನ್ನೂ ಉಪಯೋಗಿಸಿದರು. ನರಮಾನವರು ಕಟ್ಟುತ್ತಿದ್ದ ಆ ಪಟ್ಟಣವನ್ನು ಹಾಗೂ ಗೋಪುರವನ್ನು ನೋಡಲು ಸರ್ವೇಶ್ವರಸ್ವಾಮಿ ಇಳಿದು ಬಂದರು. ನೋಡಿದ ಮೇಲೆ, "ಇವರು ಒಂದೇ ಜನಾಂಗ; ಇವರೆಲ್ಲರಿಗೂ ಒಂದೇ ಭಾಷೆ. ಇದು ಇವರು ಕೈಗೊಂಡಿರುವ ಕಾರ್ಯದ ಪ್ರಾರಂಭ ಮಾತ್ರ. ಮುಂದಕ್ಕೆ ಇವರು ಏನು ಬೇಕಾದರೂ ಮಾಡಿಯಾರು! ನಾವು ಹೋಗಿ ಇವರಲ್ಲಿ ಒಬ್ಬರ ಮಾತು ಒಬ್ಬರಿಗೆ ತಿಳಿಯದಂತೆ ಇವರ ಭಾಷೆಯನ್ನು ಗಲಿಬಿಲಿಗೊಳಿಸೋಣ, " ಎಂದರು. ಅಂತೆಯೇ ಮಾಡಿ ಅವರನ್ನು ಅಲ್ಲಿಂದ ಜಗದೆಲ್ಲೆಡೆಗೆ ಚದರಿಸಿಬಿಟ್ಟರು. ಜನರು ಆ ಪಟ್ಟಣ ಕಟ್ಟುವುದನ್ನು ನಿಲ್ಲಿಸಿಬಿಟ್ಟರು. ಹೀಗೆ ಸರ್ವೇಶ್ವರ ಇಡೀ ಜಗತ್ತಿನ ಭಾಷೆಯನ್ನು ಗಲಿಬಿಲಿಗೊಳಿಸಿ ಅಲ್ಲಿಂದ ಜನರನ್ನು ಜಗದೆಲ್ಲೆಡೆಗೆ ಚದರಿಸಿದರು.
ಕೀರ್ತನೆ: 33:10-11,12-13,14-15.V.12
ಶ್ಲೋಕ: ಸ್ವಜನರಾಗಿ ಪ್ರಭು ಆಯ್ದುಕೊಂಡ ಜನತೆ ಧನ್ಯ.
ವ್ಯರ್ಥವಾಗಿಪನು ಪ್ರಭು ರಾಷ್ಟ್ರಯೋಜನಗಳನು|
ನಿರರ್ಥಕವಾಗಿಪನು ಜನರ ದುಷ್ಟ ಸಂಕಲ್ಪಗಳನು||
ಪ್ರಭುವಿನ ಯೋಜನೆ ಶಾಶ್ವತ|
ಅವನ ಸಂಕಲ್ಪ ಅನವರತ||
ಪ್ರಭುವನು ದೇವರಾಗಿ ಪಡೆದ ಜನತೆ ಧನ್ಯ|
ಸ್ವಜನರಾಗಿ ಆತನಾಯ್ದುಕೊಂಡ ಜನತೆ ಧನ್ಯ||
ವೀಕ್ಷಿಸುತಿಹನು ಪ್ರಭು ಸಮಸ್ತವನು ಪರದಿಂದ|
ಲಕ್ಷಿಸುತಿಹನು ಮನುಜರನು ಸಿಂಹಾಸನದಿಂದ||
ಸ್ಥಾವರ ಸಿಂಹಾಸನದಿಂದ ನೋಡುತಿಹನು|
ಸರ್ವ ಭೂನಿವಾಸಿಗಳನು ಪರಿಶೀಲಿಸುತಿಹನು ||
ಅವರೆಲ್ಲರ ಹೃದಯಗಳನು ನಿರ್ಮಿಸಿದಾತನವನು|
ಅವರವರ ಕೃತ್ಯಗಳನ್ನು ಪರೀಕ್ಷಿಸುತಿಹನು||
ಶುಭಸಂದೇಶ: ಮಾರ್ಕ 8:34--9:1
ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರನ್ನೂ ಜನರ ಗುಂಪನ್ನೂ ಒಟ್ಟಾಗಿ ತಮ್ಮ ಬಳಿಗೆ ಕರೆದು, " ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ, ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನು ಹಿಂಬಾಲಿಸಲಿ; ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ಹಾಗೂ ಶುಭಸಂದೇಶದ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೋಳ್ಳುವವನು ಅದನ್ನು ನಿತ್ಯಕ್ಕೂ ಉಳಿಸಿಕೊಳ್ಳುವನು. ಒಬ್ಬನು ಪ್ರಪಂಚವನ್ನೆಲ್ಲಾ ಗೆದ್ದು, ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಬರುವ ಲಾಭವಾದರೂ ಏನು? ಮನುಷ್ಯನು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು? ದೈವನಿಷ್ಠೆಯಿಲ್ಲದ ಈ ಪಾಪಿಷ್ಠ ಪೀಳಿಗೆಯವರಲ್ಲಿ ಯಾರು ನನ್ನನ್ನೂ ನನ್ನ ಮಾತುಗಳನ್ನು ಕುರಿತು ನಾಚಿಕೆಪಡುತ್ತಾರೋ ಅಂಥವರನ್ನು ಕುರಿತು ನರಪುತ್ರನು ಸಹ ತನ್ನ ಪಿತನ ಪ್ರಭಾವದೊಡನೆ ದೇವದೂತರ ಪರಿವಾರ ಸಮೇತವಾಗಿ ಬರುವಾಗ ನಾಚಿಕೆಪಡುವನು, " ಎಂದರು. ಪುನಃ ಯೇಸು, ಅವರಿಗೆ "ಇಲ್ಲಿರೀವವರಲ್ಲಿ ಕೆಲವರು ದೇವರ ಸಾಮ್ರಾಜ್ಯವು ಪ್ರಭಾವದೊಡನೆ ಜಗತ್ತಿನಲ್ಲಿ ಪ್ರತ್ಯಕ್ಷವಾಗುವುದನ್ನು ನೋಡದೆ ಮರಣಹೊಂದುವುದಿಲ್ಲ ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ, " ಎಂದು ಹೇಳಿದರು.
No comments:
Post a Comment