ಮೊದಲನೇ ವಾಚನ: ಸಿರಾಖನು 2:1-11
ಮಗನೇ, ದೇವರ ಸೇವೆಮಾಡಲು ಬಯಸುವಿಯೋ? ಹಾಗಾದರೆ ಶೋಧನೆಗಳನ್ನೆದುರಿಸಲು ನಿನ್ನಾತ್ಮವನ್ನು ಸಿದ್ಧಪಡಿಸಿಕೊ! ನಿನ್ನ ಹೃದಯದಲ್ಲಿರಲಿ ಪ್ರಾಮಾಣಿಕತೆ, ಸ್ಥಿರತೆ ಕಷ್ಟ ಬಂದಾಗ ನಿನಗಿರದಿರಲಿ ಚಂಚಲತೆ. ಆತನನ್ನು ಸೇರಿಕೊಂಡಿರು; ಬಿಟ್ಟಗಲಬೇಡ ಅಭಿವೃದ್ಧಿ ಹೊಂದುವೆ ಅಂತಿಮ ದಿನ. ನಿನ್ನ ಮೇಲೆ ಬಂದುದೆಲ್ಲವನು ಸ್ವೀಕರಿಸು ಬಡತನ ಬಂದರೂ ದೀರ್ಘಶಾಂತಿಯಿಂದಿರು. ಬಂಗಾರದ ಪರೀಕ್ಷೆ ಯಾಗುವುದು ಬೆಂಕಿಯಲ್ಲಿ ಆತನ ಭಕ್ತರ ಪರೀಕ್ಷೆ ಅವಮಾನದ ಕುಲುಮೆಯಲ್ಲಿ. ಆತನಲ್ಲಿಡು ಭರವಸೆ; ನೆರವೀಯುವನಾತ ನಿನಗೆ, ಸರಿಪಡಿಸಿಕೊ ನಿನ್ನ ನಡತೆಯನು; ನಿರೀಕ್ಷೆಯಿಡು ಆತನಲ್ಲೇ. ದೇವರಲ್ಲಿ ಭಯಭಕ್ತಿಯುಳ್ಳವರೇ, ಆತನ ಕರುಣೆಗಾಗಿ ಕಾದಿರಿ ಸನ್ಮಾರ್ಗವನ್ನು ಬಿಟ್ಟು ತೊಲಗಬೇಡಿ; ಬಿದ್ದು ಹೋದೀರಿ! ದೇವರಿಗೆ ಭಯಪಡುವವರೇ, ಆತನಲ್ಲಿಡಿ ಭರವಸೆ ತಕ್ಕ ಪ್ರತಿಫಲ ದೊರಕುವುದು ನಿಮಗೆ ತಪ್ಪದೆ. ದೇವರಿಗೆ ಭಯಪಡುವವರೇ, ಒಳಿತನ್ನು ನಿರೀಕ್ಷಿಸಿರಿ ನಿತ್ಯ ಸಂತೋಷವನ್ನೂ ಕೃಪೆಯನ್ನೂ ಹಾರೈಸಿರಿ. ಹಿಂದಿನವರನ್ನು ಗಮನಿಸಿರಿ; ತಂದುಕೊಳ್ಳಿರಿ ಲಕ್ಷ್ಯಕೆ ದೇವರನ್ನು ನಂಬಿದವರಿಗೆ ಆಗಿದ್ದುಂಟೆ ನಾಚಿಕೆ? ಭಯಭಕ್ತಿಯಿಂದ ಬಾಳಿದವನನು ಆತ ಕೈಬಿಟ್ಟಿದ್ದುಂಟೆ? ಏಕೆನೆ, ಸರ್ವೇಶ್ವರನು ದಯಾಪೂರಿತನು, ಕನಿಕರವುಳ್ಳವನು ಪಾಪಗಳನ್ನು ಕ್ಷಮಿಸುವವನು, ಕಷ್ಟದಲ್ಲಿ ರಕ್ಷಿಸುವವನು.
ಕೀರ್ತನೆ: 37:3-4, 18-19, 27-28, 39-40
ಶ್ಲೋಕ: ಒಳಿತನು ಮಾಡು ಪ್ರಭುವಿನಲಿ ಭರವಸೆ ಇಟ್ಟು
ಶುಭಸಂದೇಶ: ಮಾರ್ಕ 9:30-37
ಯೇಸುಸ್ವಾಮಿ ಮತ್ತು ಶಿಷ್ಯರು ಹೊರಟು ಗಲಿಲೇಯದ ಮಾರ್ಗವಾಗಿ ಮುಂದಕ್ಕೆ ಪ್ರಯಾಣ ಮಾಡಿದರು. ಇದು ಯಾರಿಗೂ ತಿಳಿಯಬಾರದು ಎಂಬುದು ಯೇಸುವಿನ ಇಚ್ಛೆಯಾಗಿತ್ತು. ಕಾರಣ, ತಮ್ಮ ಶಿಷ್ಯರಿಗೆ ಪ್ರಬೋಧಿಸುವುದರಲ್ಲಿ ಅವರು ನಿರತರಾಗಿದ್ದರು. "ನರಪುತ್ರನನ್ನು ಜನರ ವಶಕ್ಕೆ ಒಪ್ಪಿಸಲಾಗುವುದು. ಅವರು ಆತನನ್ನು ಕೊಲ್ಲುವರು. ಕೊಂದ ಮೂರನೆಯ ದಿನ ಆತನು ಪುನರುತ್ದಾನ ಹೊಂದುವನು." ಎಂದು ಯೇಸು ಅವರಿಗೆ ತಿಳಿಸಿದರು. ಆದರೆ ಯೇಸು ಹೇಳಿದ ಆ ಮಾತುಗಳನ್ನು ಶಿಷ್ಯರು ಅರ್ಥಮಾಡಿಕೊಳ್ಳಲಿಲ್ಲ. ಅವುಗಳ ಬಗ್ಗೆ ಪ್ರಶ್ನಿಸಲು ಸಹ ಅಂಜಿದರು. ಅನಂತರ ಅವರೆಲ್ಲರೂ ಕಫೆರ್ನವುಮಿಗೆ ಬಂದರು. ಮನೆ ಸೇರಿದಾಗ ಯೇಸುಸ್ವಾಮಿ, "ದಾರಿಯಲ್ಲಿ ಬರುತ್ತಾ ನೀವು ನಿಮ್ಮಲ್ಲೇ ಏನು ಚರ್ಚೆಮಾಡುತ್ತಿದ್ದಿರಿ?" ಎಂದು ಶಿಷ್ಯರನ್ನು ಕೇಳಿದರು. ಅವರು ಮೌನತಾಳಿದರು. ಏಕಂದರೆ, ತಮ್ಮಲ್ಲಿ ಯಾವನು ಅತಿ ಶ್ರೇಷ್ಟನು ಎಂದು ತಮ್ಮ ತಮ್ಮಲ್ಲೇ ವಾದಿಸುತ್ತಾ ಬಂದಿದ್ದರು. ಯೇಸು ಕುಳಿತುಕೊಂಡು, ಹನ್ನೆರಡು ಮಂದಿಯನ್ನು ಕರೆದು, ಅವರಿಗೆ, "ನಿಮ್ಮಲ್ಲಿ ಮೊದಲಿಗನಾಗ ಬಯಸುವವನು ಎಲ್ಲರಿಗೂ ಕಡೆಯವನಾಗಿರಲಿ; ಎಲ್ಲರ ಸೇವೆ ಮಾಡುವವನಾಗಿ ಇರಲಿ," ಎಂದರು. ಅನಂತರ ಯೇಸು, ಒಂದು ಚಿಕ್ಕ ಮಗುವನ್ನು ಕರೆದು ಅವರ ಮಧ್ಯೆ ನಿಲ್ಲಿಸಿ, ಅದನ್ನು ತಬ್ಬಿಕೊಂಡು ತಮ್ಮ ಶಿಷ್ಯರಿಗೆ, "ನನ್ನ ಹೆಸರಿನಲ್ಲಿ ಇಂಥ ಮಗುವೊಂದನ್ನು ಯಾರು ಬರಮಾಡಿಕೊಳ್ಳುತ್ತಾನೋ ಅವನು ನನ್ನನ್ನು ಅಲ್ಲ ನನ್ನನ್ನು ಕಳುಹಿಸಿದಾತನನ್ನೇ ಬರಮಾಡಿಕೊಳ್ಳುತ್ತಾನೆ," ಎಂದರು.
ಮನಸಿಗೊಂದಿಷ್ಟು : ಒಂದು ಮಗು ಯಾವುದೇ ರೀತಿಯಲ್ಲಿ, ಕೋನದಲ್ಲಿ ನೋಡಿದರೂ ಅಸಹಾಯಕ. ಅದಕ್ಕೆ ಬೇಕಾಗಿರುವುದು ನಮ್ಮ ಆರೈಕೆ, ಮುದ್ದು. ಬದಲಿಗೆ ಅದು ನೀಡಬಹುದಾದದ್ದು ಕೇವಲ ಪ್ರೀತಿ ಹಾಗೂ ಆತ್ಮ ತೃಪ್ತಿ. ಒಂದು ಮಗುವಿನಷ್ಟೇ ಅಸಹಾಯಕ ಜನರು, ವರ್ಗ ನಮ್ಮೊಡನೆ ಇದ್ದಾರೆ. ಅವರಿಗೆ ಬೇಕಾಗಿರುವುದು ನಮ್ಮ ಗಮನ, ಪ್ರೀತಿಯಷ್ಟೇ
ಪ್ರಶ್ನೆ : ನಮ್ಮ ಬಾಳಿನಲ್ಲಿ ಕಡೆಯವನಾಗಿರಲು ಬಯಸಿ ಸರಿದು ನಿಂತ ಇತ್ತೀಚಿನ ಉದಾಹರಣೆ ಯಾವುದು?
No comments:
Post a Comment