ಮೊದಲನೆಯ ವಾಚನ: ಸಿರಾಖನ ಗ್ರಂಥದಿಂದ ಇಂದಿನ ವಾಚನ 5:1-8
ನಿನ್ನ ಆಸ್ತಿಯನ್ನೇ ನೆಚ್ಚಿಕೊಂಡಿರಬೇಡ, ಅದರಲ್ಲೇ ಸಂತುಷ್ಟನಾಗಿರಬೇಡ. ಕೊಚ್ಚಿಕೊಳ್ಳಬೇಡ, ನನ್ನನ್ನು ಕಟ್ಟಿ ಆಳುವವರಾರೆಂದು ಸರ್ವೇಶ್ವರ ನಿನ್ನ ಸೊಕ್ಕನ್ನು ಮುರಿದುಬಿಟ್ಟಾನು! ಪಾಪಮಾಡದ ನನಗೇನಿಯಿತು? ಎಂದುಕೊಳ್ಳಬೇಡ, ಏಕೆಂದರೆ ದೀರ್ಘ ಶಾಂತನು ಸರ್ವೇಶ್ವರ! ಪಾಪಕ್ಕೆ ಪಾಪವನ್ನು ಕೂಡಿಸಿ ಹಾಕಿಕೊಳ್ಳಬೇಡ, ದೇವರಿಂದ ಕ್ಷಮೆ ಪಡೆಯುವ ಬಗ್ಗೆ ನಿರ್ಭಯದಿಂದಿರಬೇಡ. ದೇವರು ಕರುಣಾಸಾಗರ ಎಂದು ನೆಪ ಹೇಳಬೇಡ, ಲೆಕ್ಕವಿಲ್ಲದ ಪಾಪ ಮಾಡಿದರೂ ಕ್ಷಮೆ ದೊರಕುವುದು ಎಂದು ನೆನೆಯಬೇಡ. ದಯೆಯಿದ್ದಂತೆ ಕೋಪವೂ ಅತನಲ್ಲಿದೆ ಪಾಪಿಗಳ ಮೇಲೆ ಅತನ ಕೋಪ ಎರಗಲಿದೆ. ಸರ್ವೇಶ್ವರನಿಗೆ ಅಭಿಮುಖನಾಗಲು ತಡಮಾಡಬೇಡ. 'ಇಂದು, ನಾಳೆ' ಎಂದು ದಿನವನ್ನು ಮುಂದೂಡಬೇಡ. ಸರ್ವೇಶ್ವರನ ಕೋಪ ಎರಗಬಹುದು ದಿಢೀರೆಂದು, ನೀ ಹಾಳಾಗಿ ಹೋಗುವೆ ಮುಯ್ಯಿ ತೀರಿಸುವ ದಿನದಂದು. ಮನಸ್ಸಿಡಬೇಡ ಅನ್ಯಾಯದ ಗಳಿಕೆಯಲಿ ಅದರಿಂದ ಯಾವ ಲಾಭವಿರದು ವಿನಾಶದ ದಿನದಲಿ.
ಕೀರ್ತನೆ 1:1-2,3, 4, 6
ಶ್ಲೋಕ: ಪ್ರಭುವಿನ ಧರ್ಮಶಾಸ್ತ್ರದದಲಿ ಹರ್ಷಗೊಳ್ಳುವವನಾರೋ - ಅವನೇ ಧನ್ಯನು.
ದುರ್ಜನರ ಆಲೋಚನೆಯಂತೆ ನಡೆಯದೆ|
ಪಾಪಾತ್ಮರ ಪಥದಲಿ ಕಾಲೂರದೆ||
ಧರ್ಮನಿಂದಕರ ಕೂಟದಲಿ ಕೂರದೆ|
ಪ್ರಭುವಿನ ಧರ್ಮಶಾಸ್ತ್ರದಲ್ಲಿ ಹರ್ಷಗೊಳ್ಳುವವನಾರೋ ಅವನೇ ಧನ್ಯನು||
ಹಗಲಿರುಳೆನ್ನದೆ ಅದನೇ ಧ್ಯಾನಿಸುತ್ತಿರುವವನಾರೋ ಅವನೇ ಧನ್ಯನು||
ನದಿಯ ಬದಿಯಲೇ ಬೆಳೆದಿಹ ಮರದಂತೆ|
ಸಕಾಲಕೆ ಫಲವೀವ ವೃಕ್ಷದಂತೆ||
ಎಲೆ ಬಾಡದೆ ಪಸಿರಿರುವ ತರುವಂತೆ|
ಸಿಗುವುದು ಅವನ ಕಾರ್ಯಗಳಿಗೆ ಸಫಲತೆ||
ದುರಳರಾದರೂ ತೂರಿಹೋಗುವರು|
ಬಿರುಗಾಳಿಗೆ ತರಗೆಲೆಯಾಗುವರು||
ಸಜ್ಜನರ ಮಾರ್ಗಕ್ಕಿದೆ ಪ್ರಭುವಿನ ಪಾಲನ|
ದುರ್ಜನರ ಮಾರ್ಗಕ್ಕಿದೆ ಸಂಪೂರ್ಣ ವಿನಾಶನ||
ಘೋಷಣೆ ಕೀರ್ತನೆ 119:33
ಅಲ್ಲೆಲೂಯ, ಅಲ್ಲೆಲೂಯ!
ನಿನ್ನ ನಿಬಂಧನೆಯನು ಪ್ರಭೂ, ಕಲಿಸೆನಗೆ | ಅದರಂತೆಯೇ ನಡೆಯುವೆನು ಕಡೆಯವರೆಗೆ ||
ಅಲ್ಲೆಲೂಯ!
ಶುಭಸಂದೇಶ: ಮಾರ್ಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 9:41-50
ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ "ನೀವು ಕ್ರಿಸ್ತ ಭಕ್ತರು ಎಂದು ಯಾವನಾದರೂ ನಿಮಗೆ ಕುಡಿಯಲು ಒಂದು ಲೋಟ ನೀರನ್ನು ಕೊಟ್ಟರೂ ಅದಕ್ಕೆ ತಕ್ಕ ಪ್ರತಿಫಲವನ್ನು ಅವನು ತಪ್ಪದೆ ಪಡೆಯುವನು. ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ, "ಎಂದರು. ಯೇಸು ತಮ್ಮ ಬೋಧನೆಯನ್ನು ಮುಂದುವರಿಸುತ್ತಾ, "ನನ್ನಲ್ಲಿ ವಿಶ್ವಾಸ ಇಟ್ಟಿರುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವನಾದರೂ ಪಾಪಕ್ಕೆ ಕಾರಣವಾದರೆ, ಅಂಥವನ ಕೊರಳಿಗೆ ದೊಡ್ಡ ಬೀಸುಕಲ್ಲನ್ನು ಕಟ್ಟಿ ಅವನನ್ನು ಸಮುದ್ರದಲ್ಲಿ ದಬ್ಬುವುದೇ ಅವನಿಗೆ ಲೇಸು. ನಿನ್ನ ಕೈ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿ ಹಾಕು; ಎರಡು ಕೈಗಳಿದ್ದು ನರಕದ ಆರದ ಬೆಂಕಿಗೆ ಗುರಿಯಾಗುವುದಕ್ಕಿಂತ ಅಂಗಹೀನನಾಗಿ ಅಮರಜೀವವನ್ನು ಪಡೆಯುವುದೇ ಲೇಸು, ನಿನ್ನ ಕಾಲು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿಹಾಕು; ಎರಡು ಕಾಲುಳ್ಳವನಾಗಿ ನರಕಕ್ಕೆ ತಳ್ಳಿಸಿಕೊಳ್ಳುವುದಕ್ಕಿಂತ ಕುಂಟನಾಗಿ ಅಮರಜೀವವನ್ನು ಪಡೆಯುವುದೇ ಲೇಸು. ನಿನ್ನ ಕಣ್ಣು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತುಹಾಕು; ಎರಡು ಕಣ್ಣುಳ್ಳವನಾಗಿ ನರಕಕ್ಕೆ ತಳ್ಳಿಸಿಕೊಳ್ಳುವುದಕ್ಕಿಂತ ಒಕ್ಕಣ್ಣನಾಗಿ ದೇವರ ಸಾಮ್ರಾಜ್ಯ ಸೇರುವುದೇ ಲೇಸು. ನರಕದಲ್ಲಿ ಅವರನ್ನು ಕಡಿಯುವ ಹುಳ ಸಾಯದು, ಸುಡುವ ಬೆಂಕಿ ಆರದು. ಊಟಕ್ಕೆ ಉಪ್ಪಿನಂತೆ ಪ್ರತಿಯೊಬ್ಬನಿಗೆ ಅಗ್ನಿ ಪರೀಕ್ಷೆ ಅವಶ್ಯಕ. ಉಪ್ಪೇನೊ ಪ್ರಯೋಜನಕರ; ಆದರೆ ಉಪ್ಪೇ ಸಪ್ಪೆಯಾದರೆ, ಇನ್ನು ಯಾವುದರಿಂದ ಅದನ್ನು ಪುನಃ ರುಚಿಗೊಳಿಸಲಾದೀತು? ನೀವು ಉಪ್ಪಿನಂತೆ ಒಬ್ಬರಿಗೊಬ್ಬರು ಒಪ್ಪಿಗೆಯಾಗಿ ಸಮಾಧಾನದಿಂದಿರಿ, "ಎಂದರು.
No comments:
Post a Comment