ಪ್ರವಾದಿ ಯೆಶಾಯನ ಗ್ರಂಥದಿಂದ ಇಂದಿನ ಮೊದಲನೆಯ ವಾಚನ 66:10-14
ಜೆರುಸಲೇಮನ್ನು ಪ್ರೀತಿಸುವವರೇ, ನೀವೆಲ್ಲರೂ ಆನಂದಿಸಿರಿ ಆಕೆಯೊಂದಿಗೆ, ಹರ್ಷಗೊಳ್ಳಿರಿ ಆಕೆಯ ಬಗ್ಗೆ. ಆಕೆಯ ನಿಮಿತ್ತ ದುಃಖಿಸುವವರೇ, 'ಸಾಂತ್ವನ ನೀಡುವ ಆಕೆಯ ಸ್ತನ್ಯದಿಂದ ತೃಪ್ತಿಗೊಳ್ಳುವೆವು, ಆಕೆಯ ಸಿರಿಸಮೃದ್ಧಿಯನ್ನು ಹೀರುತ್ತಾ ಹಿಗ್ಗುವೆವು, 'ಎಂದು ನೀವೆಲ್ಲರು ಉಲ್ಲಾಸಪಡಿ ಆಕೆಯೊಂದಿಗೆ. ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ "ಇಗೋ, ಆಕೆಗೆ ಹರಿಯ ಮಾಡುವೆನು ಸುಖಶಾಂತಿಯನು ನದಿಯಂತೆ, ನೀಡುವೆ ರಾಷ್ಟ್ರಗಳ ವೈಭವವನು ತುಂಬಿತುಳುಕುವ ತೊರೆಯಂತೆ, ನೀವಿರುವಿರಿ ಹಾಲುಕುಡಿವ ಹಸುಳೆಯಂತೆ, ಎತ್ತಿಕೊಳ್ಳಲಾಗುವುದು ನಿಮ್ಮನು ತಾಯ ಕಂಕುಳಲಿ, ನಲಿದಾಡುವಿರಿ ನೀವು ಆಕೆಯ ಮಡಿಲಲಿ. ನಾನೇ ನಿಮ್ಮನ್ನು ಸಂತೈಸುವೆನು ತಾಯಿಯಂತೆ, ಸಾಂತ್ವನ ದೊರಕುವುದು ನಿಮಗೆ ಜೆರುಸಲೇಮಿನಲೇ. ಇದನ್ನು ಕಂಡಾಗ ನಿಮ್ಮೆದೆ ಸಂತಸದಿಂದ ಉಬ್ಬುವುದು. ಚಿಗುರುವುದು ಹಸಿ ಹುಲ್ಲಂತೆ ನಿಮ್ಮೆಲುಬು. 'ಸರ್ವೇಶ್ವರನ ಕೈಪಾಹಸ್ತ ತನ್ನ ಭಕ್ತರ ಮೇಲೆ' ಎಂಬುವುದು ವ್ಯಕ್ತವಾಗುವುದು ನಿಮಗೆ."
ಪ್ರಭುವಿನ ವಾಕ್ಯ
ದೇವರಿಗೆ ಕೃತಜ್ಞತೆ ಸಲ್ಲಲಿ
ಕೀರ್ತನೆ 130:1-3
ಶ್ಲೋಕ: ಹೇ ಪ್ರಭೂ, ನನ್ನಾತ್ಮವನ್ನು ನಿಮ್ಮ ಕೃಪೆ ಶಾಂತಿಯಿಂದ ರಕ್ಷಿಸಿರಿ
1. ಹಮ್ಮಿಲ್ಲ ಪ್ರಭೂ, ನನ್ನೆದೆಯೊಳು| ನನಗಿಲ್ಲ ಸೊಕ್ಕಿನ ಕಣ್ಣುಗಳು||
ಶಕ್ತಿಮೀರಿದ ಕಾರ್ಯಕ್ಕೆ ನಾ ಕೈ ಹಾಕಿಲ್ಲ|
ಅಸಾಧ್ಯವಾದುದನು ನಾ ಕೈಗೊಂಡಿಲ್ಲ||
ಶ್ಲೋಕ
2. ಎಂದೇ ನನ್ನಾತ್ಮ ಸಮಾಧಾನದಿಂದಿದೆ|
ಮೌನದಿಂದಿದೆ ತಾಯ್ಮಡಿಲಾ ಕೂಸಂತೆ|
ನೆಮ್ಮದಿಯಿಂದಿದೆ ತಾಯ್ಮಡಿಲಾ ಶಿಶುವಂತೆ||
ಶ್ಲೋಕ
3. ಇಸ್ರಯೇಲೇ, ಪ್ರಭುವಿನಲಿ ನಂಬಿಕೆಯಿಂದಿರು|
ಇಂದಿಗೂ ಎಂದೆಂದಿಗೂ ಭರವಸೆಯಿಂದಿರು||
ಶ್ಲೋಕ
ಎರಡನೆಯ ವಾಚನ : ಹಿಬ್ರಿಯರಿಗೆ ಬರೆದ ಪತ್ರದಿಂದ ಇಂದಿನ ಎರಡನೆಯ ವಾಚನ 1:2-3
ಸಹೋದರರೇ, ಇತ್ತೀಚಿನ ಅಂತಿಮ ದಿನಗಳಲ್ಲಿ ದೇವರು ತಮ್ಮ ಪುತ್ರನ ಮುಖೇನ ನಮ್ಮೊಡನೆ ಮಾತನಾಡಿದ್ದಾರೆ. ದೇವರು ಇಡೀ ವಿಶ್ವವನ್ನು ಉಂಟುಮಾಡಿದ್ದು ಇವರ ಮುಖಾಂತರವೇ; ಸಮಸ್ತಕ್ಕೂ ಬಾಧ್ಯನನ್ನಾಗಿ ನೇಮಿಸಿರುವುದು ಇವರನ್ನೇ. ಅವರೇ ದೇವರ ಮಹಿಮೆಯ ತೇಜಸ್ಸು; ಇವರೇ ದೈವತ್ವದ ಪಡಿಯಚ್ಚು; ತಮ್ಮ ಶಕ್ತಿಯುತ ವಾಕ್ಯದಿಂದ ಇವರೇ ಸಮಸ್ತಕ್ಕೂ ಆಧಾರ; ನಮ್ಮ ಪಾಪಗಳನ್ನು ತೊಡೆದುಹಾಕಿ, ಸ್ವರ್ಗದಲ್ಲಿ ಮಹೋನ್ನತ ದೇವರ ಬಲ ಪಾರ್ಶ್ವದಲ್ಲಿ ಆಸೀನರಾಗಿರುವವರೂ ಇವರೇ.
ಪ್ರಭುವಿನ ವಾಕ್ಯ
ದೇವರಿಗೆ ಕೃತಜ್ಞತೆ ಸಲ್ಲಲಿ
ಘೋಷಣೆ ಮತ್ತಾಯ 11:28
ಅಲ್ಲೆಲೂಯ, ಅಲ್ಲೆಲೂಯ!
ಪಿತನೇ, ಭೂಸ್ವರ್ಗಗಳ ಒಡೆಯನೇ, ಜ್ಞಾನಿಗಳಿಗೂ ಮೇಧಾವಿಗಳಿಗೂ ಈ ವಿಷಯವನ್ನು ಮರೆಮಾಡಿ | ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ ||
ಅಲ್ಲೆಲೂಯ!
ಶುಭಸಂದೇಶ: ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 18:1-5
ಆ ಕಾಲದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರು? "ಎಂದು ಕೇಳಿದರು. ಯೇಸು ಒಂದು ಚಿಕ್ಕ ಮಗುವನ್ನು ತಮ್ಮ ಹತ್ತಿರಕ್ಕೆ ಕರೆದು, ಅದನ್ನು ಶಿಷ್ಯರ ನಡುವೆ ನಿಲ್ಲಿಸಿ ಹೀಗೆಂದರು: "ನೀವು ಪರಿವರ್ತನೆ ಹೊಂದಿ ಮಕ್ಕಳಂತೆ ಆಗದಿದ್ದರೆ ಸ್ವರ್ಗಸಾಮ್ರಾಜ್ಯವನ್ನು ಸೇರಲಾರಿರಿ, ಎಂದು ನಿಶ್ಚಯವಾಗಿ ಹೇಳುತ್ತೇನೆ. ಈ ಮಗುವಿನಂತೆ ನಮ್ರಭಾವವುಳ್ಳವನೇ ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತ ದೊಡ್ಡವನು. ನನ್ನ ಹೆಸರಿನಲ್ಲಿ ಇಂತಹ ಮಗುವೊಂದನ್ನು ಸ್ವೀಕಿರಿಸುವವನು ನನ್ನನ್ನೇ ಸ್ವೀಕರಿಸುತ್ತಾನೆ."
ಪ್ರಭುಕ್ರಿಸ್ತರ ಶುಭಸಂದೇಶ
ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ
Please send bible daily readings
ReplyDelete