ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

08.09.24

ಮೊದಲನೇ ವಾಚನ: ಯೆಶಾಯ 35: 4-7

ಚಂಚಲ ಹೃದಯರಿಗೆ ಹೀಗೆಂದು ಹೇಳಿ: “ಭಯಪಡಬೇಡಿ; ಎದೆಗುಂದಬೇಡಿ; ಬರುವನು ಆ ದೇವನು ಮುಯ್ಯಿತೀರಿಸಲು ಬರುವನು ಆ ದೇವನು ಪ್ರತೀಕಾರವೆಸಗಲು ತಾನೇ ಬರುವನು ನಿಮ್ಮನ್ನು ರಕ್ಷಿಸಲು.” ಕುರುಡರ ಕಣ್ಣು ಕಾಣುವುದಾಗ ಕಿವುಡರ ಕಿವಿ ತೆರೆಯುವುದಾಗ. ಜಿಗಿಯುವನು ಕುಂಟನು ಜಿಂಕೆಯಂತೆ ಹಾಡುವುದು ಮೂಕನ ನಾಲಿಗೆ ಹರ್ಷಗೀತೆ. ಒರತೆಗಳು ಒಡೆಯುವುವು ಅರಣ್ಯದಲಿ ನದಿಗಳು ಹುಟ್ಟಿಹರಿಯುವುವು ಒಣನೆಲದಲಿ. ಸರೋವರವಾಗುವುದಾ ಉರಿಗಾಡು ಬುಗ್ಗೆಯಾಗುವುದಾ ಬುವಿ ಬರಡು. ನರಿಗಳು ನಿವಾಸಿಸುವ ಗುಹೆಗಳು ಆಗುವುವು ಹುಲುಸಾದ ಹುಲ್ಲುಗಾವಲುಗಳು.

ಕೀರ್ತನೆ: 146: 6-7, 8-10
ಶ್ಲೋಕ: ಮನವೇ, ವಂದಿಸು ಪ್ರಭುವನು. 

ದೊರಕಿಸುವನು ನ್ಯಾಯ ದಲಿತರಿಗೆ I
ಒದಗಿಸುವನು ಆಹಾರ ಹಸಿದವರಿಗೆ I
ನೀಡುವನು ಬಿಡುಗಡೆ ಬಂಧಿತರಿಗೆ II ಶ್ಲೋಕ

ಕಣ್ಣನ್ನೀಯುವನು ಪ್ರಭು ಕುರುಡರಿಗೆ I
ಉದ್ಧಾರಕನಾ ಪ್ರಭು ಕುಗ್ಗಿದವರಿಗೆ I
ಆತನ ಒಲವಿರುವುದು ಸಾಧು ಸಜ್ಜನರಿಗೆ II
ರಕ್ಷಿಸುವನು ಪ್ರಭು ಪರದೇಶಿಗಳನು I ಶ್ಲೋಕ

ಆದರಿಸುವನು ಅನಾಥರನು, ವಿಧವೆಯರನು I
ನಿರ್ಮೂಲ ಮಾಡುವನು ದುರ್ಜನರ ಮಾರ್ಗವನು II
ಪ್ರಭುವೇ ಅರಸನು ಸದಾಕಾಲಕು I
ಸಿಯೋನ್, ನಿನ್ನ ದೇವನಾಳ್ವನು ತಲತಲಾಂತರಕು I ಶ್ಲೋಕ


ಎರಡನೇ ವಾಚನ: ಯಾಕೋಬ 2: 1-5

ನನ್ನ ಸಹೋದರರೇ, ಮಹಿಮಾನ್ವಿತ ಪ್ರಭು ಯೇಸುಕ್ರಿಸ್ತರಲ್ಲಿ ವಿಶ್ವಾಸವಿಟ್ಟಿರುವ ನೀವು ಪಕ್ಷಪಾತ ಮಾಡಲೇಬಾರದು. ಉದಾಹರಣೆಗೆ: ಇಬ್ಬರು ನಿಮ್ಮ ಪ್ರಾರ್ಥನಾಲಯಕ್ಕೆ ಬಂದರೆಂದು ಇಟ್ಟುಕೊಳ್ಳಿ. ಅವರಲ್ಲಿ ಒಬ್ಬನು ಚಿನ್ನದುಂಗುರವನ್ನು ತೊಟ್ಟು, ಸೊಗಸಾದ ಉಡುಪನ್ನು ಧರಿಸಿದವನು. ಮತ್ತೊಬ್ಬನು ಹರಕು ಬಟ್ಟೆಯನ್ನು ಉಟ್ಟ ಬಡವನು. ಆಗ, ನೀವು ಸೊಗಸಾದ ಉಡುಪನ್ನು ಧರಿಸಿದವನಿಗೆ ಗೌರವದಿಂದ, “ಬನ್ನಿ ಸ್ವಾವಿೂ ಬನ್ನಿ, ದಯವಿಟ್ಟು ಈ ಪೀಠವನ್ನು ಅಲಂಕರಿಸಿ,” ಎನ್ನುತ್ತೀರಿ. ಬಡವನಿಗೆ “ನೀನು ಅಲ್ಲಿಯೇ ನಿಂತುಕೋ, ಇಲ್ಲವೇ ಕೆಳಗೆ, ನನ್ನ ಕಾಲ ಬಳಿ ಕುಳಿತುಕೋ,” ಎನ್ನುತ್ತೀರಿ. ಹೀಗಿರಲು ನೀವು ನಿಮ್ಮಲ್ಲೇ ಭೇದಭಾವ ಮಾಡುತ್ತೀರಿ; ಅಲ್ಲದೆ ನೀವು ಮಾಡುವ ಈ ತೀರ್ಪು ದುರುದ್ದೇಶದಿಂದ ಕೂಡಿರುತ್ತದೆ. ನನ್ನ ಪ್ರಿಯ ಸಹೋದರರೇ, ಪ್ರಪಂಚದ ದೃಷ್ಟಿಗೆ ಬಡವರಾಗಿ ಕಾಣುವವರನ್ನು ವಿಶ್ವಾಸದಲ್ಲಿ ಸಿರಿವಂತರನ್ನಾಗಿಸಲು ದೇವರು ಆರಿಸಿಕೊಳ್ಳಲಿಲ್ಲವೇ? ತಮ್ಮನ್ನು ಪ್ರೀತಿಸುವವರು ಸ್ವರ್ಗಸಾಮ್ರಾಜ್ಯಕ್ಕೆ ಬಾಧ್ಯಸ್ಥರೆಂದು ದೇವರೇ ವಾಗ್ದಾನ ಮಾಡಿಲ್ಲವೇ?

ಶುಭಸಂದೇಶ: ಮಾರ್ಕ 7: 31-37

ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು ಸಿದೋನಿನ ಮಾರ್ಗವಾಗಿ ದೆಕಪೊಲಿ ಪ್ರದೇಶವನ್ನು ಹಾದು ಗಲಿಲೇಯ ಸರೋವರದ ತೀರಕ್ಕೆ ಹಿಂದಿರುಗಿದರು. ಮಾತನಾಡಲಾಗದ ಒಬ್ಬ ಕಿವುಡನನ್ನು ಜನರು ಅವರ ಬಳಿಗೆ ಕರೆತಂದರು. ಅವನ ಮೇಲೆ ಕೈಗಳನ್ನಿಡಬೇಕೆಂದು ಬೇಡಿಕೊಂಡರು. ಯೇಸು ಅವನನ್ನು ಜನರ ಗುಂಪಿನಿಂದ ಪ್ರತ್ಯೇಕವಾಗಿ ಕರೆದೊಯ್ದು, ತಮ್ಮ ಬೆರಳುಗಳನ್ನು ಅವನ ಕಿವಿಯೊಳಗೆ ಇಟ್ಟರು. ತಮ್ಮ ಉಗುಳಿನಿಂದ ಅವನ ನಾಲಗೆಯನ್ನು ಮುಟ್ಟಿದರು. ಬಳಿಕ ಸ್ವರ್ಗದತ್ತ ಕಣ್ಣೆತ್ತಿ ನೋಡಿ, ದೀರ್ಘವಾಗಿ ಉಸಿರೆಳೆದು, ‘ಎಪ್ಫಥಾ’ ಎಂದರೆ ‘ತೆರೆಯಲಿ’ ಎಂದರು. ತಕ್ಷಣವೇ ಅವನ ಕಿವಿಗಳು ತೆರೆದವು; ನಾಲಗೆಯ ಬಿಗಿ ಸಡಿಲಗೊಂಡಿತು; ಅವನು ಸರಾಗವಾಗಿ ಮಾತನಾಡತೊಡಗಿದನು. ಇದನ್ನು ಯಾರಿಗೂ ಹೇಳಕೂಡದೆಂದು ಯೇಸು ಜನರಿಗೆ ಕಟ್ಟಪ್ಪಣೆ ಮಾಡಿದರು. ಆದರೆ ಎಷ್ಟು ಹೇಳಿದರೂ ಕೇಳದೆ ಅವರು ಮತ್ತಷ್ಟು ಆಸಕ್ತಿಯಿಂದ ಈ ಕಾರ್ಯವನ್ನು ಪ್ರಚಾರ ಮಾಡಿದರು. ಎಲ್ಲರೂ ಆಶ್ಚರ್ಯಭರಿತರಾಗಿ, “ಇವರು ಎಲ್ಲಾ ಕಾರ್ಯವನ್ನು ಚೆನ್ನಾಗಿ ಮಾಡುತ್ತಾರೆ; ಕಿವುಡರು ಕೇಳುವಂತೆಯೂ ಮೂಕರು ಮಾತನಾಡುವಂತೆಯೂ ಮಾಡುತ್ತಾರಲ್ಲಾ!” ಎಂದುಕೊಳ್ಳುತ್ತಿದ್ದರು.


No comments:

Post a Comment