ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

10.09.24 - ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡರು. ಅವರಿಗೆ 'ಪ್ರೇಷಿತರು' ಎಂದು ಹೆಸರಿಟ್ಟರು

ಮೊದಲನೇ ವಾಚನ: 1 ಕೊರಿಂಥಿಯರಿಗೆ  6:1-11 


ನಿಮ್ಮಲ್ಲಿ ಒಬ್ಬನಿಗೆ ಮತ್ತೊಬ್ಬನ ಮೇಲೆ ವ್ಯಾಜ್ಯವಿದ್ದರೆ ನ್ಯಾಯವಿಚಾರಣೆಗೆ ದೇವಜನರ ಮುಂದೆ ಹೋಗದೆ, ಅನ್ಯಜನರ ಮುಂದೆ ಹೋಗುವಷ್ಟು ಸೊಕ್ಕು ನಿಮಗೆಲ್ಲಿಂದ ಬಂದಿತು? ದೇವಜನರು ಈ ಲೋಕಕ್ಕೆ ನ್ಯಾಯತೀರ್ಪು ಮಾಡುತ್ತಾರೆಂದು ನಿಮಗೆ ತಿಳಿಯದೋ? ಲೋಕವೇ ನಿಮ್ಮಿಂದ ತೀರ್ಪು ಪಡೆಯಬೇಕಾಗಿರುವಲ್ಲಿ ಸಣ್ಣಪುಟ್ಟ ವಿಷಯಗಳನ್ನು ತೀರ್ಮಾನಿಸಿಕೊಳ್ಳಲು ನೀವು ಅಸಮರ್ಥರೋ? ದೇವದೂತರಿಗೂ ನಾವು ನ್ಯಾಯತೀರ್ಪು ಮಾಡುವೆವೆಂದು ನಿಮಗೆ ತಿಳಿಯದೋ? ಹೀಗಿರುವಲ್ಲಿ, ಈ ಜೀವನದ ಸಮಸ್ಯೆಗಳನ್ನು ಕುರಿತು ನ್ಯಾಯತೀರ್ಪು ಮಾಡುವುದು ಎಷ್ಟೋ ಸುಲಭವಲ್ಲವೇ? ಇಂಥ ವಿಷಯಗಳು ತಲೆದೋರಿದಾಗ ಧರ್ಮಸಭೆಯಿಂದ ಮಾನ್ಯತೆ ಪಡೆಯದವರನ್ನು ಏಕೆ ನ್ಯಾಯತೀರ್ಪುಗಾರನನ್ನಾಗಿ ಮಾಡುತ್ತೀರಿ? ಇದು ನಿಮಗೆ ನಾಚಿಕೆಗೇಡು! ಸಹೋದರರ ವ್ಯಾಜ್ಯವನ್ನು ತೀರ್ಮಾನಿಸಬಲ್ಲ ಜಾಣನು ನಿಮ್ಮಲ್ಲಿ ಒಬ್ಬನೂ ಇಲ್ಲವೇ? ಸಹೋದರನು ಸಹೋದರನ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದು, ಅದೂ ಅವಿಶ್ವಾಸಿಗಳ ಮುಂದೆ ಹೋಗುವುದು ಸರಿಯೇ? ನಿಮ್ಮ ನಿಮ್ಮಲ್ಲಿರುವ ವ್ಯಾಜ್ಯಗಳೇ ನಿಮ್ಮ ಸೋಲಿನ ಸೂಚನೆಗಳು. ಅದಕ್ಕಿಂತ ಅನ್ಯಾಯವನ್ನು ಸಹಿಸಿಕೊಳ್ಳುವುದು ಒಳ್ಳೆಯದಲ್ಲವೇ? ಸುಲಿಗೆಗೆ ತುತ್ತಾದರೂ ಸಾವಧಾನದಿಂದ ಇರುವುದು ಒಳಿತಲ್ಲವೇ? ಅದಕ್ಕೆ ಬದಲು ನೀವೇ ಅನ್ಯಾಯಮಾಡುತ್ತೀರಿ; ನೀವೇ ಸುಲಿಗೆಮಾಡುತ್ತೀರಿ; ಅದೂ ಸಹೋದರರಿಗೆ ಹೀಗೆ ಮಾಡುತ್ತೀರಿ. ಅಧರ್ಮಿಗಳು ದೇವರ ಸಾಮ್ರಾಜ್ಯಕ್ಕೆ ಬಾಧ್ಯರಲ್ಲವೆಂದು ನೀವು ಬಲ್ಲಿರಿ. ನಿಮ್ಮನ್ನು ನೀವೇ ವಂಚಿಸಿಕೊಳ್ಳಬೇಡಿ. ದುರಾಚಾರಿಗಳು, ವಿಗ್ರಹಾರಾಧಕರು, ವ್ಯಭಿಚಾರಿಗಳು, ಸಲಿಂಗಕಾಮಿಗಳು, ಕಳ್ಳರು, ಲೋಭಿಗಳು, ಕುಡುಕರು, ಪರನಿಂದಕರು, ಸುಲಿಗೆಗಾರರು,  ಇವರಾರೂ ದೇವರ ಸಾಮ್ರಾಜ್ಯಕ್ಕೆ ಬಾಧ್ಯರಲ್ಲ. ಹಿಂದೆ ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ. ಆದರೆ ಈಗ ಪ್ರಭು ಯೇಸುಕ್ರಿಸ್ತರ ನಾಮದಲ್ಲಿ ಮತ್ತು ದೇವರಾತ್ಮನಲ್ಲಿ ನೀವು ಶುದ್ಧರಾಗಿದ್ದೀರಿ, ಪುನಿತರಾಗಿದ್ದೀರಿ ಹಾಗೂ ದೇವರೊಡನೆ ಸತ್ಸಂಬಂದ ಹೊಂದಿದ್ದೀರಿ.

ಕೀರ್ತನೆ:149:1b-2, 3-4, 5-6a, 9b 

ಶ್ಲೋಕ: ಪ್ರೀತಿಸುತ್ತಾನೆ ಪ್ರಭು ತನ್ನ ಪ್ರಜೆಯನ್ನು. 

ಹಾಡಿರಿ  ಪ್ರಭುವಿಗೆ  ನೂತನ  ಕೀರ್ತನೆಯನು|
ಭಕ್ತರ  ಸಭೆಯಲಿ  ಸ್ತುತಿ  ಮಾಡಿರಿ  ಆತನನು||
ಆನಂದಿಸಲಿ  ತಮ್ಮ  ಸೃಷ್ಟಿಕರ್ತನಲಿ  ಇಸ್ರಯೇಲರು|
ತಮ್ಮಾ  ರಾಜನಿಗೆ  ಜಯಕಾರ  ಮಾಡಲಿ  ಸಿಯೋನಿನವರು||

ಆತನ  ನಾಮವನು  ಕೀತೀಸಲಿ  ಕುಣಿತದಿಂದ|
ಆತನನು  ಭಜಿಸಲಿ  ತಮಟೆ,  ಕಿನ್ನರಿಗಳಿಂದ||
ಪ್ರೀತಿಸುತ್ತಾನೆ  ಪ್ರಭು  ತನ್ನ  ಪ್ರಜೆಯನು|
ಜಯಶೀಲರನ್ನಾಗಿಸುತ್ತಾನೆ  ದೀನದಲಿತರನು||

ಹಿಗ್ಗಲಿ  ಭಕ್ತಾದಿಗಳು  ದೊರೆತ  ವಿಜಯದಲಿ|
ಜಯಕಾರ  ಮಾಡಲಿ  ತಮ್ಮ  ತಮ್ಮ  ಶಿಬಿರಗಳಲಿ||
ಇರಲಿ  ಪ್ರಭುವಿನ  ಸ್ತೋತ್ರ  ಬಾಯಲಿ|
ಇದು  ತರಲಿ  ಭಕ್ತರೆಲ್ಲರಿಗೆ  ಗೌರವವನು||

ಘೋಷಣೆ                      ಕೀರ್ತನೆ  119:34

ಅಲ್ಲೆಲೂಯ, ಅಲ್ಲೆಲೂಯ!
ನೀಡೆನಗೆ  ನಿನ್ನ  ಶಾಸ್ತ್ರದ  ಅರಿವನು,  
ಪೂರ್ಣ  ಮನದಿಂದ  ಆಚರಿಸುವೆನದನು,,
ಅಲ್ಲೆಲೂಯ!

ಶುಭಸಂದೇಶ: ಲೂಕ 6:12-19 



ಒಮ್ಮೆ ಯೇಸುಸ್ವಾಮಿ ಪ್ರಾರ್ಥನೆ ಮಾಡಲು  ಬೆಟ್ಟವನ್ನೇರಿದರು. ರಾತ್ರಿಯೆಲ್ಲಾ ದೇವರ ಪ್ರಾರ್ಥನೆಯಲ್ಲಿ ಕಳೆದರು. ಬೆಳಗಾದಾಗ ತಮ್ಮ ಶಿಷ್ಯರನ್ನು ಕರೆದು, ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡರು. ಅವರಿಗೆ 'ಪ್ರೇಷಿತರು ಎಂದು  ಹೆಸರಿಟ್ಟರು. ಹೀಗೆ ಆಯ್ಕೆ ಆದವರು ಪೇತ್ರನೆಂದು ಹೆಸರು ಪಡೆದ ಸಿಮೋನ ಮತ್ತು ಅವನ ಸಹೋದರ ಅಂದ್ರೆಯ, ಯಕೋಬ ಮತ್ತು ಯೊವಾನ್ನ, ಫಿಲಿಪ್ಪ ಮತ್ತು ಬಾರ್ತೊಲೊಮಾಯ, ಮತ್ತಾಯ ಮತ್ತು ತೋಮ, ಆಲ್ಫಾಯನ ಮಗ ಯಕೋಬ ಮತ್ತು ದೇಶಾಭಿಮಾನಿ ಎನಿಸಿಕೊಂಡಿದ್ದ ಸಿಮೋನ, ಯಕೋಬನ ಮಗ ಯೂದ ಮತ್ತು ಗುರುದ್ರೋಹಿಯಾಗಲಿದ್ದ ಯೂದ ಇಸ್ಕರಿಯೋತ. ಅನಂತರ ಯೇಸುಸ್ವಾಮಿ ಅವರೊಂದಿಗೆ ಬೆಟ್ಟದಿಂದ ಇಳಿದು, ಸಮತಟ್ಟಾದ ಸ್ಥಳಕ್ಕೆ ಬಂದರು. ಶಿಷ್ಯರ ದೊಡ್ಡ ಗುಂಪು ಅಲ್ಲಿ ನೆರೆದಿತ್ತು. ಜುದೇಯ ಪ್ರಾಂತ್ಯದಿಂದಲೂ ಜೆರುಸಲೇಮ್ ಪಟ್ಟಣದಿಂದಲೂ ಜನಸಮೂಹ ಅಲ್ಲಿಗೆ ಬಂದಿತ್ತು. ಯೇಸುವಿನ ಭೋಧನೆ ಕೇಳುವುದಕ್ಕೂ ತಮ್ಮ ರೋಗರುಜಿನಗಳಿಂದ ವಿಮುಕ್ತರಾಗುವುದಕ್ಕೂ ಜನರು ಅಲ್ಲಿಗೆ ಬಂದು ಸೇರಿದ್ದರು. ದೆವ್ವಪೀಡಿತರು ಕೂಡ ಬಂದು ಸ್ವಸ್ಥರಾಗುತ್ತಿದ್ದರು. ಯೇಸುವಿನಿಂದ ದಿವ್ಯಶಕ್ತಿ ಹರಿದು ಎಲ್ಲರನ್ನೂ ಗುಣಪಡಿಸುತ್ತಿತ್ತು. ಆದುದರಿಂದ ಅಲ್ಲಿದ್ದ ಜನರೆಲ್ಲರೂ ಯೇಸುವನ್ನು ಮುಟ್ಟಲು ತವಕಪಡುತ್ತಿದ್ದರು.

No comments:

Post a Comment