ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

16.09.24

ಮೊದಲನೇ ವಾಚನ: 1 ಕೊರಿಂಥಿಯರಿಗೆ  11:17-26, 33

ಸಹೋದರರೇ, ಈಗ ನಾನು ಹೇಳಲಿರುವ ವಿಷಯದಲ್ಲಿ ನಿಮ್ಮನ್ನು ಮೆಚ್ಚಿಸಲಾರೆ. ನೀವು ಸಭೆ ಸೇರುವುದು ಒಳಿತಿಗಿಂತಲೂ ಹೆಚ್ಚಾಗಿ ಕೇಡನ್ನೆ ಉಂಟುಮಾಡುತ್ತಿದೆ. ಮೊದಲನೆಯದಾಗಿ, ನೀವು ಸೇರುವ ಸಭೆಯಲ್ಲಿ ಪಂಗಡಗಳಿವೆಯಂತೆ. ಸ್ವಲ್ಪ ಮಟ್ಟಿಗಾದರೂಈ ಸಮಾಚಾರ ನಿಜವೆಂದು ನನಗನಿಸುತ್ತದೆ. ನಿಮ್ಮಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಹಾಗಿರುವಾಗಲೇ ಪ್ರಮಾಣಿಕರು ಯಾರೆಂದು ಕಂಡುಕೊಳ್ಳಲು ಸಾಧ್ಯ. ಆದರೂ ನೀವೆಲ್ಲಾ ಒಂದಾಗಿ ಸೇರುವಾಗ ನೀವು ಮಾಡುವ ಭೋಜನ ಪ್ರಭುವಿನ ಭೋಜನವಲ್ಲ. ಏಕೆಂದರೆ, ಭೋಜನ ಸಮಯದಲ್ಲಿ ಒಬ್ಬೊಬ್ಬನೂ ತಾನು ತಂದಿದ್ದನ್ನು ತಿನ್ನಲು ಇತರರಿಗಿಂತ ಮುಂಚಿತವಾಗಿಯೇ ಕುಳಿತುಕೊಳ್ಳುತ್ತಾನೆ. ಒಬ್ಬನು ಹಸಿದಿರುತ್ತಾನೆ;  ಇನ್ನೊಬ್ಬನು ಕುಡಿದು ಮತ್ತನಾಗಿರುತ್ತಾನೆ. ತಿನ್ನಲು, ಕುಡಿಯಲು ನಿಮಗೆ ಸ್ವಂತ ಮನೆಗಳಿಲ್ಲವೇ? ನಿರ್ಗತಿಕರನ್ನು ನಾಚಿಕೆಗೀಡುಮಾಡಿ, ದೇವರ ಸಭೆಯನ್ನು ಉಪೇಕ್ಷಿಸಬೇಕೆಂದಿರುವಿರೋ? ಇದರ ಬಗ್ಗೆ ನಿಮಗೆ ನಾನು ಏನು ಹೇಳಲಿ? ನಿಮ್ಮನ್ನು ಹೊಗಳುವುದೋ, ತೆಗಳುವುದೋ? ಖಂಡಿತವಾಗಿ ನಿಮ್ಮನ್ನು ಹೊಗಳಲಾರೆ. ನಿಮಗೆ ಮಾಡಿದ ಉಪದೇಶವನ್ನು ನಾನು ಪ್ರಭುವಿನಿಂದಲೇ ಪಡೆದೆನು. ಅದೇನೆಂದರೆ; ಪ್ರಭುಯೇಸು, ತಮ್ಮನ್ನು ಹಿಡಿದುಕೊಡಲಾದ ಆ ರಾತ್ರಿ ರೊಟ್ಟಿಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಸಿ ಅದನ್ನು ಮುರಿದು, "ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ, ಇದನ್ನು ನನ್ನ ಸ್ಮರಣೆಗಾಗಿ ಮಾಡಿ," ಎಂದರು. ಅಂತೆಯೇ ಭೋಜನದ ಕೊನೆಯಲ್ಲಿ ಪಾನ ಪಾತ್ರೆಯನ್ನು ತೆಗೆದುಕೊಂಡು, "ಈ ಪಾತ್ರೆ ನನ್ನ ರಕ್ತದಿಂದ ಮುದ್ರಿತವಾದ ಹೊಸ ಒಡಂಬಡಿಕೆ; ಇದನ್ನು ನೀವು ಪಾನ ಮಾಡುವಾಗಲೆಲ್ಲಾ ನನ್ನ ಸ್ಮರಣೆಗಾಗಿ ಮಾಡಿರಿ," ಎಂದರು. ಎಂದೇ, ನೀವು ಈ ರೊಟ್ಟಿಯನ್ನು ಭುಜಿಸಿ ಈ ಪಾತ್ರೆಯಿಂದ ಪಾನಮಾಡುವಾಗಲೆಲ್ಲಾ ಪ್ರಭು ಬರುವ ತನಕ ಅವರ ಮರಣವನ್ನು ಸಾರುತ್ತೀರಿ. ಆದ್ದರಿಂದ ಪ್ರಿಯ ಸಹೋದರರೇ, ಪ್ರಭುವಿನ ಭೋಜನಕ್ಕಾಗಿ ನೀವು ಒಂದಾಗಿ ಸೇರುವಾಗ ಒಬ್ಬರಿಗೊಬ್ಬರು ಕಾದುಕೊಂಡಿರಿ.

ಕೀರ್ತನೆ: 40:7-8, 8-9, 10, 17
ಶ್ಲೋಕ: ಪ್ರಭು ಬರುವ ತನಕ ಅವರ ಮರಣವನ್ನು ಸಾರುತ್ತೀರಿ .

ಶುಭಸಂದೇಶ: ಲೂಕ 7:1-10

ಜನರಿಗೆ ಮನ ಮುಟ್ಟುವಂತೆ ಭೋಧನೆ ಮಾಡಿದ ನಂತರ ಯೇಸುಸ್ವಾಮಿ ಕಫೆರ್ನವುಮ್ ಎಂಬ ಊರಿಗೆ ಬಂದರು. ಅಲ್ಲಿ ರೋಮ್ ಶತಾಧಿಪತಿಯೊಬ್ಬನ ನೆಚ್ಚಿನ ಸೇವಕನು ಕಾಯಿಲೆಯಿಂದ ಸಾಯುವುದರಲ್ಲಿದ್ದನು. ಶತಾಧಿಪತಿ ಯೇಸುವಿನ ವಿಷಯವನ್ನು ಕೇಳಿ ಅವರ ಬಳಿಗೆ ಯೆಹೂದ್ಯ ಪ್ರಮುಖರನ್ನು ಕಳುಹಿಸಿ, ತನ್ನ ಸೇವಕನನ್ನು ಗುಣಪಡಿಸಲು ಬರಬೇಕೆಂದು ಮನವಿ ಮಾಡಿಕೊಂಡನು. ಅವರು ಯೇಸುವಿನ ಬಳಿಗೆ ಬಂದು, "ಆ ಶತಾಧಿಪತಿ ನಿಮ್ಮ ಉಪಕಾರಕ್ಕೆ ಅರ್ಹನು; ನಮ್ಮ ಜನರ ಮೇಲೆ ಅವನಿಗೆ ಪ್ರೀತಿ ಇದೆ; ಅಲ್ಲದೆ ನಮ್ಮ ಪ್ರಾರ್ಥನಾಮಂದಿರವನ್ನು ಕಟ್ಟಿಸಿಕೊಟ್ಟವನೂ ಅವನೇ," ಎಂದು ಬಹಳವಾಗಿ ವಿನಂತಿಸಿದರು. ಯೇಸು ಅವರ ಸಂಗಡವೇ ಹೊರಟರು. ಮನೆಯಿಂದ ಸ್ವಲ್ಪ ದೂರವಿರುವಾಗಲೇ, ಶತಾಧಿಪತಿ ತನ್ನ ಗೆಳೆಯರ ಮುಖಾಂತರ, ಪ್ರಭುವೇ, ಇಷ್ಟು ಶ್ರಮ ತೆಗೆದುಕೊಳ್ಳಬೇಡಿ; ತಾವು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ. ನಾನೇ ತಮ್ಮಲ್ಲಿಗೆ ಬರೋಣವೆಂದರೆ ಆ ಯೋಗ್ಯತೆಯೂ ನನಗಿಲ್ಲ. ತಾವು ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು. ಏಕೆಂದರೆ, ನಾನೂ ಮತ್ತೊಬ್ಬರ ಕೈಕೆಳಗಿರುವವನು; ನನ್ನ ಅಧೀನದಲ್ಲೂ ಸೈನಿಕರಿದ್ದಾರೆ. ಅವರಲ್ಲಿ ಒಬ್ಬನಿಗೆ ನಾನು 'ಬಾ', ಎಂದರೆ ಬರುತ್ತಾನೆ. ಇನ್ನೊಬ್ಬನಿಗೆ "ಹೋಗು,' ಎಂದರೆ ಹೋಗುತ್ತಾನೆ. ಸೇವಕನಿಗೆ 'ಇಂಥದ್ದನ್ನು ಮಾಡು,' ಎಂದರೆ ಮಾಡುತ್ತಾನೆ. ಎಂದು ಹೇಳಿ ಕಳುಹಿಸಿದನು. ಅವನ ಈ ಮಾತನ್ನು ಕೇಳಿದಾಗ ಯೇಸುವಿಗೆ ಆಶ್ಚರ್ಯವಾಯಿತು. ತಮ್ಮ ಹಿಂದೆ ಬರುತ್ತಿದ್ದ ಜನರ ಗುಂಪಿನ ಕಡೆ ತಿರುಗಿ ನೋಡಿ, "ಇಂಥ ಗಾಢ  ವಿಶ್ವಾಸವನ್ನು ನಾನು ಇಸ್ರಯೇಲ್ ಜನರಲ್ಲೂ ಕಾಣಲಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ," ಎಂದರು.ಇತ್ತ ಶತಾಧಿಪತಿಯ ಕಡೆಯಿಂದ ಬಂದವರು ಮನೆಗೆ ಹಿಂದಿರುಗಿದಾಗ ಕಾಯಿಲೆ ಬಿದ್ದಿದ್ದ ಆ ಸೇವಕನು ಸ್ವಸ್ಥನಾಗಿದ್ದುದನ್ನು ಕಂಡರು.


No comments:

Post a Comment