ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

18.09.24 - "ಆದರೆ ದೈವಜ್ಞಾನವೇ ನಿಜವಾದ ಜ್ಞಾನವೆಂದು ಅದನ್ನು ಅಂಗೀಕರಿಸುವ ಎಲ್ಲರೂ ಸಮರ್ಥಿಸುತ್ತಾರೆ,”

ಮೊದಲನೇ ವಾಚನ: 1 ಕೊರಿ0ಥಿಯರಿಗೆ: 12:31--13:13

ಶ್ರೇಷ್ಠವಾದ ವರಗಳನ್ನು ನೀವು ಶ್ರದ್ಧಾಪೂರ್ವಕವಾಗಿ ಅಪೇಕ್ಷಿಸಿರಿ. ನಾನು ನಿಮಗೆ ಇನ್ನೂ ಸರ್ವೋತ್ತಮವಾದ ಮಾರ್ಗವನ್ನು ತೋರಿಸುತ್ತೇನೆ: ಸುರನರರ ನುಡಿಗಳ ನಾನಾಡಬಲ್ಲೆ ನಾದರೂ ಪರಮ ಪ್ರೀತಿಯೊಂದೆನಗಿಲ್ಲದಿರಲು ನಾ ಕೇವಲ ಗಣಗಣಿಸುವ ಘಂಟೆ, ಝಣಝಣಿಸುವ ಜಾಗಟೆ. ಪ್ರವಾದನೆಯ ವರವೆನಗಿರಬಹುದು ಇರಬಹುದು ನಿಗೂಢ ರಹಸ್ಯಗಳರಿವು ಎಲ್ಲದರ ಪರಿಜ್ಞಾನ, ಪರ್ವತವನೇ ಕದಲಿಪ ವಿಶ್ವಾಸ ಪ್ರೀತಿಯೊಂದಿಲ್ಲದಿರೆ ನಾ ಶೂನ್ಯಸಮಾನ. ನನಗಿರುವುದೆಲ್ಲವನು ನಾ ದಾನಮಾಡೆ ದೇಹವನೆ ಸಜೀವ ದಹಿಸಲು ನೀಡೆ ನಾನಾಗಿರೆ ಪರಮ ಪ್ರೀತಿ ವಿಹೀನ ಏನದು ಜೀವನ, ನನಗೇನದು ಪ್ರಯೋಜನ? ಸಹನೆ ಸೈರಣೆ, ದಯೆದಾಕ್ಷಿಣ್ಯ ಪ್ರೀತಿಯಲ್ಲಿವೆ. ಎಡೆಯಿಲ್ಲ ಅದರಲಿ ಗರ್ವಕೆ, ಮರ್ಮಕೆ, ಮೆರೆತಕೆ, ಮತ್ಸರಕೆ, ಸಿಡುಕಿಗೆ, ಸೊಕ್ಕಿಗೆ, ಸ್ವಾರ್ಥಕೆ, ಸೇಡುಗಳೆಣಿಕೆಗೆ. ನಲಿಯದು ಪ್ರೀತಿ ಅನೀತಿಯಲಿ ನಲಿಯದಿರದದು ಸತ್ಯದ ಜಯದಲಿ. ನಂಬುವುದೆಲ್ಲವನು, ನಿರೀಕ್ಷಿಸುವುದೆಲ್ಲವನು, ಸಹಿಸಿಕೊಳ್ಳುವುದು ಸಮಸ್ತವನು ಪ್ರೀತಿಯದೆಂದೂ ಅರಿಯದು ಸೋಲನು. ಅಳಿದುಹೋಗುವುವು ಭವಿಷ್ಯವಾಣಿ ಗತಿಸಿಹೋಗುವುದು ಬಹುಭಾಷಾ ಶಕ್ತಿ ಹೋಗುವುವು ನಶಿಸಿ ಜ್ಞಾನ, ಬುದ್ಧಿ. ಆದರೆ ಅಮರವಾದುದು ಪರಮ ಪ್ರೀತಿ. ಅಪೂರ್ವವಾದುದು ನಮ್ಮಾ ಅರಿವೆಲ್ಲ ಪೂರ್ಣವಾದುದಲ್ಲ ಪ್ರವಾದನವದೆಲ್ಲ; ಪರಿಪೂರ್ಣತೆ ಪ್ರಾಪ್ತವಾಗಲು ಇಲ್ಲವಾಗುವುದು ಅಪೂರ್ಣತೆಯೆಲ್ಲ. ಬಾಲಕ ನಾನಾಗಿರೆ ಆಡಿದೆ, ಮಾತಾಡಿದೆ, ಚಿಂತಿಸಿದೆ, ಸುಖದುಃಖಗಳ ಸವಿದೆ ಬಾಲಕನಂತೆ. ಬಲಿತು ಬೆಳೆದು ಮನುಜನಾದುದೆ ಬಾಲಿಶವಾದುದೆಲ್ಲವನು ಬದಿಗೊತ್ತಿದೆ. ನಾವೀಗ ಕಾಂಬುದು ದರ್ಪಣದ ಬಿಂಬವನು ಮುಸುಕಾಗಿ ತರುವಾಯ ಕಾಂಬೆವು ದೇವರನು ಮುಖಾಮುಖಿಯಾಗಿ. ಈಗಿರುವುದೆನ್ನ ಅರಿವು ತುಂಡುತುಂಡಾಗಿ ನಂತರ ದೇವನೆನ್ನ ಅರಿತಂತೆ ಈ ಮೂರಲಿ ನಾನರಿವೆನು ಅಖಂಡವಾಗಿ ನಿಲ್ಲುವುವು ನಂಬಿಕೆ, ನಿರೀಕ್ಷೆ, ಪ್ರೀತಿ ನೆಲೆಯಾಗಿ; ಈ ಮೂರರಲಿ ಪ್ರೀತಿಯೇ ಪರಮೋನ್ನತ ವೆಂಬುದ ನೀನರಿ.

ಕೀರ್ತನೆ: 33:2-3, 4-5, 12, 22

ಶ್ಲೋಕ: ಸ್ವಜನರಾಗಿ ಪ್ರಭು ಆಯ್ದುಕೊಂಡ ಜನತೆ ಧನ್ಯ

ಶುಭಸಂದೇಶ: ಲೂಕ 7:31-35



ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಂದುವರಿಸುತ್ತಾ, “ಈ ಕಾಲದ ಜನರನ್ನು ಯಾರಿಗೆ ಹೋಲಿಸಲಿ? ಇವರು ಯಾರನ್ನು ಹೋಲುತ್ತಾರೆ?  ಪೇಟೆಬೀದಿಯಲ್ಲಿ ಕುಳಿತು, ‘ನಾವು ಕೊಳಲನೂದಲು ನೀವು ಕುಣಿದಾಡಲಿಲ್ಲ; ನಾವು ಶೋಕಗೀತೆಗಳ ಹಾಡಲು ನೀವು ಕಣ್ಣೀರಿಡಲಿಲ್ಲ.’ ಎಂದು ಒಬ್ಬರಿಗೊಬ್ಬರು ಕೂಗಾಡುವ ಮಕ್ಕಳನ್ನು ಹೋಲುತ್ತಾರೆ.  ಸ್ನಾನಿಕ ಯೊವಾನ್ನನು ಬಂದಾಗ ಅನ್ನ ಆಹಾರವನ್ನು ಸೇವಿಸಲಿಲ್ಲ, ದ್ರಾಕ್ಷಾರಸವನ್ನು ಮುಟ್ಟಲಿಲ್ಲ; ನೀವು, ‘ಅವನಿಗೆ ದೆವ್ವ ಹಿಡಿದಿದೆ’ ಎಂದು ಹೇಳಿದಿರಿ;  ನರಪುತ್ರನು ಬಂದಾಗ ಅನ್ನ ಪಾನೀಯಗಳನ್ನು ಸೇವಿಸಿದನು; ನೀವು, ‘ಇವನೊಬ್ಬ ಹೊಟ್ಟೆಬಾಕ, ಕುಡುಕ, ಸುಂಕದವರ ಹಾಗೂ ಪಾಪಿಷ್ಠರ ಗೆಳೆಯ,’ ಎನ್ನುತ್ತೀರಿ.  ಆದರೆ ದೈವಜ್ಞಾನವೇ ನಿಜವಾದ ಜ್ಞಾನವೆಂದು ಅದನ್ನು ಅಂಗೀಕರಿಸುವ ಎಲ್ಲರೂ ಸಮರ್ಥಿಸುತ್ತಾರೆ,” ಎಂದರು.

No comments:

Post a Comment