ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

12.09.24 - ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ಕೊಡು ನಿನ್ನ ಸೊತ್ತನ್ನು ಕಸಿದುಕೊಳ್ಳುವವನಿಂದ ತಿರುಗಿ ಕೇಳದಿರು.

ಮೊದಲನೇ ವಾಚನ: 1 ಕೊರಿಂಥಿಯರಿಗೆ 8:1-7, 11-13

ವಿಗ್ರಹಗಳಿಗೆ ನೈವೇದ್ಯಮಾಡಿದ ಆಹಾರಪದಾರ್ಥಗಳ ವಿಷಯವಾಗಿ ನಾನು ಹೇಳುವುದೇನೆಂದರೆ: “ನಮಗೆಲ್ಲರಿಗೂ ಜ್ಞಾನೋದಯವಾಗಿದೆ” ಎಂದು ಹೇಳಿಕೊಳ್ಳುತ್ತೀರಿ. ಜ್ಞಾನವು ನಮ್ಮನ್ನು ಅಹಂಕಾರಿಗಳನ್ನಾಗಿ ಮಾಡುತ್ತದೆ. ಪ್ರೀತಿಯಾದರೋ ಭಕ್ತಿಯನ್ನು ವೃದ್ಧಿಗೊಳಿಸುತ್ತದೆ. ಯಾರಾದರೂ ತಾನು ಬಲ್ಲವನೆಂದು ಕೊಚ್ಚಿಕೊಳ್ಳುವುದಾದರೆ ತಾನು ತಿಳಿಯಬೇಕಾದುದನ್ನು ಅವನು ಸರಿಯಾಗಿ ತಿಳಿದಿರುವುದಿಲ್ಲ. ಆದರೆ ದೇವರನ್ನು ಪ್ರೀತಿಸುವವನನ್ನು ದೇವರು ಗುರುತಿಸುತ್ತಾರೆ. ವಿಗ್ರಹಗಳಿಗೆ ನೈವೇದ್ಯಮಾಡಿದ ಪದಾರ್ಥಗಳನ್ನು ತಿನ್ನುವ ಬಗ್ಗೆ ನನ್ನ ಅಭಿಪ್ರಾಯ ಹೀಗಿದೆ: ವಿಗ್ರಹಗಳಿಗೆ ನಿಜವಾದ ಅಸ್ತಿತ್ವವಿಲ್ಲ. ದೇವರು ಒಬ್ಬರೇ ಹೊರತು ಬೇರೆ ದೇವರಿಲ್ಲ. ಇದು ನಮಗೆ ತಿಳಿದ ವಿಷಯ. “ದೇವರುಗಳು” ಎನಿಸಿಕೊಳ್ಳುವವರು ಇಹಪರಗಳಲ್ಲಿ ಇರಬಹುದು; ಅಂಥ ಹಲವಾರು “ದೇವರು"ಗಳನ್ನೂ “ಪ್ರಭು"ಗಳನ್ನೂ ಪೂಜಿಸುವುದುಂಟು. ಆದರೆ ನಮಗೆ ಒಬ್ಬರೇ ದೇವರು. ಅವರು ನಮ್ಮ ಪರಮ ಪಿತ; ಎಲ್ಲ ಸೃಷ್ಟಿಗೂ ಮೂಲಕರ್ತ, ನಾವಿರುವುದು ಅವರಿಗಾಗಿಯೇ. ನಮಗೆ ಒಬ್ಬರೇ ಪ್ರಭು; ಅವರೇ ಯೇಸುಕ್ರಿಸ್ತ. ಅವರ ಮುಖಾಂತರವೇ ಸಮಸ್ತವೂ ಉಂಟಾಯಿತು. ಅವರ ಮುಖಾಂತರವೇ ನಾವು ಜೀವಿಸುತ್ತೇವೆ. ಆದರೆ ಎಲ್ಲರಿಗೂ ಇದರ ಅರಿವಿಲ್ಲ. ಕೆಲವರು ಸಾಂಪ್ರದಾಯಕವಾಗಿ ಬಂದ ವಿಗ್ರಹಾರಾಧನೆಯಲ್ಲಿ ಭಾಗವಹಿಸಿ, ವಿಗ್ರಹಕ್ಕೆ ಅರ್ಪಿತವಾದ ನೈವೇದ್ಯಪದಾರ್ಥವನ್ನು ತಿನ್ನುತ್ತಾರೆ. ಆದರೆ ಅವರ ಮನಸ್ಸಾಕ್ಷಿ ದುರ್ಬಲವಾಗಿರುವುದರಿಂದ ತಾವು ಕಲುಷಿತರಾದೆವೆಂದು ಭಾವಿಸಿಕೊಳ್ಳುತ್ತಾರೆ. ಈ ನಿನ್ನ ಅರಿವಿನಿಂದ ದುರ್ಬಲ ಸೋದರನು ನಾಶಕ್ಕೆ ಗುರಿಯಾಗುತ್ತಾನೆ. ಯೇಸುಕ್ರಿಸ್ತರು ಅವನಿಗಾಗಿಯೂ ಪ್ರಾಣತ್ಯಾಗ ಮಾಡಲಿಲ್ಲವೇ?  ಹೀಗೆ ನೀವು ನಿಮ್ಮ ಸಹೋದರರ ದುರ್ಬಲ ಮನಸ್ಸಾಕ್ಷಿಯನ್ನು ನೋಯಿಸಿ, ಅವರ ವಿರುದ್ಧ ಪಾಪ ಕಟ್ಟಿಕೊಳ್ಳುವುದರಿಂದ ಯೇಸುಕ್ರಿಸ್ತರ ವಿರುದ್ಧವೇ ಪಾಪಮಾಡುತ್ತೀರಿ.  ನಾನು ತಿನ್ನುವ ಆಹಾರ ನನ್ನ ಸಹೋದರನ ವಿಶ್ವಾಸಕ್ಕೆ ಅಡ್ಡಿಯಾಗುವುದಾದರೆ ಎಂದಿಗೂ ನಾನದನ್ನು ತಿನ್ನಲಾರೆ, ಅವನ ವಿಶ್ವಾಸಕ್ಕೆ ಅಡ್ಡಿಯನ್ನು ತರಲಾರೆ.

ಕೀರ್ತನೆ: 139:1-3, 13-14, 23-24

ಶ್ಲೋಕ: ನಡೆಸೆನ್ನನು ಪ್ರಭೂ, ಆ ಸನಾತನ ಪಥದಲಿ

ಶುಭಸಂದೇಶ: ಲೂಕ 6:27-38


ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: “ನನ್ನನ್ನು ಆಲಿಸುತ್ತಿರುವವರೇ, ನನ್ನ ಮಾತನ್ನು ಕೇಳಿರಿ: ‘ನಿಮ್ಮ ಶತ್ರುಗಳನ್ನು ಪ್ರೀತಿಸಿರಿ, ನಿಮ್ಮನ್ನು ದ್ವೇಷಿಸುವವರನ್ನು ಸತ್ಕರಿಸಿರಿ. ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ, ನಿಮ್ಮನ್ನು ನಿಂದಿಸುವವರಿಗಾಗಿ ಪ್ರಾರ್ಥಿಸಿರಿ. ನಿನ್ನ ಒಂದು ಕೆನ್ನೆಗೆ ಹೊಡೆಯುವವನಿಗೆ ಇನ್ನೊಂದು ಕೆನ್ನೆಯನ್ನು ಒಡ್ಡು, ನಿನ್ನ ಮೇಲಂಗಿಯನ್ನು ಕಿತ್ತುಕೊಳ್ಳುವವನಿಗೆ ಒಳ ಅಂಗಿಯನ್ನೂ ತೆಗೆದುಕೊಳ್ಳಲು ಬಿಡು. ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ಕೊಡು ನಿನ್ನ ಸೊತ್ತನ್ನು ಕಸಿದುಕೊಳ್ಳುವವನಿಂದ ತಿರುಗಿ ಕೇಳದಿರು. ಅಲ್ಲದೆ, ಇತರರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ. ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸಿದರೆ ಅದೇನು ಪುಣ್ಯ? ಪಾಪಿಷ್ಠರು ಸಹ ತಮ್ಮನ್ನು ಪ್ರೀತಿಸುವವರನ್ನು ಪ್ರೀತಿಸುತ್ತಾರಲ್ಲವೆ? ಉಪಕಾರ ಮಾಡಿದವರಿಗೇ ಉಪಕಾರ ಮಾಡಿದರೆ ಅದೇನು ಪುಣ್ಯ? ಪಾಪಿಷ್ಠರು ಸಹ ಹಾಗೆಯೇ ಮಾಡುತ್ತಾರಲ್ಲವೆ? ಸಾಲತೀರಿಸುವಂಥ ನಂಬಿಗಸ್ಥರಿಗೇ ಸಾಲಕೊಟ್ಟರೆ ಅದೇನು ಪುಣ್ಯ? ಕೊಟ್ಟಷ್ಟೂ ಬರುತ್ತದೆಂದು ಪಾಪಿಷ್ಠರು ಸಹ ಸಾಲ ಕೊಡುತ್ತಾರಲ್ಲವೆ?’ “ಆದುದರಿಂದ ನಿಮ್ಮ ಶತ್ರುಗಳನ್ನು ಪ್ರೀತಿಸಿರಿ. ಅವನಿಗೆ ಒಳಿತನ್ನೇ ಮಾಡಿರಿ. ಪ್ರತಿಯಾಗಿ ಪಡೆಯುವ ಆಶೆಯಿಡದೆ ಸಾಲಕೊಡಿ. ಆಗ ನಿಮಗೆ ಮಹತ್ತಾದ ಸಂಭಾವನೆ ದೊರಕುವುದು. ನೀವು ಮಹೋನ್ನತ ದೇವರ ಮಕ್ಕಳಾಗುವಿರಿ. ದೇವರು ದುರ್ಜನರಿಗೂ ಒಳ್ಳೆಯವರು, ಕೃತಘ್ನರಿಗೂ ಒಳ್ಳೆಯವರು.  ನಿಮ್ಮ ತಂದೆಯಾದ ದೇವರಂತೆ ನೀವೂ ದಯಾವಂತರಾಗಿರಿ. “ನೀವು ಇತರರ ಬಗ್ಗೆ ತೀರ್ಪು ಕೊಡಬೇಡಿ. ಆಗ ದೇವರು ನಿಮ್ಮ ಬಗ್ಗೆ ತೀರ್ಪು ಕೊಡುವುದಿಲ್ಲ; ಪರರನ್ನು ದಂಡನೆಗೆ ಗುರಿಮಾಡಬೇಡಿ, ದೇವರು ನಿಮ್ಮನ್ನೂ ದಂಡನೆಗೆ ಗುರಿಮಾಡುವುದಿಲ್ಲ.  ಪರರನ್ನು ಕ್ಷಮಿಸಿರಿ, ದೇವರು ನಿಮ್ಮನ್ನೂ ಕ್ಷಮಿಸುವರು; ಪರರಿಗೆ ಕೊಡಿ, ದೇವರು ನಿಮಗೂ ಕೊಡುವರು; ಅಳತೆಯಲ್ಲಿ ತುಂಬಿ, ಕುಲುಕಿ, ಅದುಮಿ ತುಳುಕುವಂತೆ ಅಳೆದು ನಿಮ್ಮ ಮಡಿಲಿಗೆ ಹಾಕುವರು. ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದುಕೊಡುವರು,” ಎಂದರು.

No comments:

Post a Comment