04.08.24 - "ನಾನೇ ಜೀವದಾಯಕ ರೊಟ್ಟಿ, ನನ್ನ ಬಳಿ ಬರುವವನಿಗೆ ಹಸಿವೇ ಇರದು;"

ಮೊದಲನೆಯ  ವಾಚನ: ವಿಮೋಚನಾಕಾಂಡ    16:2-4,12-15

ಮರುಭೂಮಿಯಲ್ಲಿ  ಇಸ್ರಯೇಲರ  ಸಮಾಜವೆಲ್ಲಾ  ಮೋಶೆ  ಮತ್ತು  ಆರೋನರ  ವಿರುದ್ಧ  ಗೊಣಗುಟ್ಟಿತು.  "ಈ  ಸಮಾಜವನ್ನೆಲ್ಲಾ  ಹಸಿವೆಯಿಂದ  ಸಾಯಿಸಬೇಕೆಂದು  ಈ  ಮರುಭೂಮಿಗೆ  ನಮ್ಮನ್ನು  ಕರೆತಂದಿದ್ದೀರಿ;  ನಾವು  ಈಜಿಪ್ಟಿನಲ್ಲಿದ್ದಾಗ  ಸರ್ವೇಶ್ವರನ  ಕೈಯಿಂದಲೇ  ಸತ್ತಿದ್ದರೆ  ಎಷ್ಟೋ  ಲೇಸಿಗಿತ್ತು.  ಆಗ  ಮಾಂಸ  ಪಾತ್ರೆಗಳ  ಪಕ್ಕದಲ್ಲೇ  ಕುಳಿತು  ಹೊಟ್ಟೆ  ತುಂಬ  ಊಟಮಾಡುತ್ತಿದ್ದೆವು. "ಎಂದು  ಗುಣಗಿದರು.  ಆಗ  ಸರ್ವೇಶ್ವರ  ಮೋಶೆಗೆ,  "ಇಗೋ  ನೋಡು.  ಆಕಾಶದಿಂದ  ನಿಮಗೋಸ್ಕರ  ಆಹಾರವನ್ನು  ಸುರಿಸುವೆನು.  ಈ  ಜನರು  ಪ್ರತಿದಿನವು  ಹೊರಗೆ  ಹೋಗಿ  ಆಯಾ  ದಿನಕ್ಕೆ  ಬೇಕಾದಷ್ಟು  ಮಾತ್ರ  ಕೂಡಿಸಿಕೊಳ್ಳಬೇಕು.  ನನ್ನ  ಕಟ್ಟಳೆಯ  ಪ್ರಕಾರ  ನಡೆಯುವರೋ  ಇಲ್ಲವೋ  ಎಂದು  ಇದರಿಂದ  ಪರೀಕ್ಷಿಸಿ  ತಿಳಿಯುತ್ತೇನೆ.  "ಇಸ್ರಯೇಲರ  ಗೊಣಗಾಟ ನನಗೆ  ಕೇಳಿಸಿತು.  ಅವರಿಗೆ  'ಸಂಜೆ  ಮಾಂಸವನ್ನೂ  ಬೆಳಿಗ್ಗೆ  ಬೇಕಾದಷ್ಟು  ರೊಟ್ಟಿಯನ್ನೂ  ತಿನ್ನುವಿರಿ;  ಇದರಿಂದ  ನಾನು  ನಿಮ್ಮ  ದೇವರಾದ  ಸರ್ವೇಶ್ವರ  ಎಂದು  ನಿಮಗೆ  ಗೊತ್ತಾಗುವುದು'  ಎಂದು  ಹೇಳು, "ಎಂದರು.  ಸಂಜೆಯಾಗುತ್ತಲೇ  ಲಾವಕ್ಕಿಗಳು  ಬಂದು  ಅವರ  ಪಾಳೆಯನ್ನು  ಮುಚ್ಚಿಕೊಂಡವು.  ಬೆಳಿಗ್ಗೆ  ಪಾಳೆಯದ  ಸುತ್ತಲೂ  ಮಂಜುಬಿದ್ದಿತು.  ಆ  ಮಂಜು  ಆರಿಹೋದ  ನಂತರ  ಮರುಭೂಮಿಯ  ನೆಲದಲ್ಲಿ  ಮಂಜಿನ  ಹನಿಗಳಂತೆ  ಏನೋ  ಸಣ್ಣ  ಸಣ್ಣ  ರವೆಗಳು  ಕಾಣಿಸಿದವು.  ಇಸ್ರಯೇಲರು  ಅದನ್ನು  ಕಂಡು  ಇಂಥವೆಂದು  ತಿಳಿಯದೆ  ಒಬ್ಬರಿಗೊಬ್ಬರು  'ಮನ್ನ'  ಎಂದರು.  ಅಂದರೆ  ಇದೇನಿರಬಹುದೆಂದು  ವಿಚಾರಿಸಿದರು.

ಕೀರ್ತನೆ 78 : 3-4, 23-24, 25
ಶ್ಲೋಕ: ಅನುಗ್ರಹಿಸಿದನು ಪ್ರಭು ಸ್ವರ್ಗದ ದವಸಧಾನ್ಯವನು. 

ಪೇಳ್ವೆವು ನಾವು ಕೇಳಿ ತಿಳಿದುಕೊಂಡವುಗಳನೆ
ಪೂರ್ವಜರೆಮಗೆ ತಿಳಿಸಿದ ಸಂಗತಿಗಳನೆ 
ಪ್ರಭುವಿನ ಮಹಿಮೆ ಪರಾಕ್ರಮದ ಪವಾಡಗಳನೆ
ಮರೆಮಾಡೆವು ಅವರ ಸಂತತಿಯಾದ ನಿಮಗೆ

ಮೇಘಮಂಡಲಕೆ ಆಜ್ಞೆಯಿತ್ತನಾತ
ಅಂತರಿಕ್ಷದಾ ದ್ವಾರಗಳನು ತೆರೆದನಾತ
ಸುರಿಸಿದನು ಅವರ ಮೇಲೆ ಉಣಲು ಅನ್ನವನು
ಅನುಗ್ರಹಿಸಿದನು ಸ್ವರ್ಗದ ದವಸಧಾನ್ಯವನು

ನರರಿಗುಣಲು ಕೊಟ್ಟನು ದೇವದೂತರ ಆಹಾರವನು
ಇತ್ತನವರಿಗೆ ತೃಪ್ತಿಕರವಾದ ಔತಣವನು
ಕರೆತಂದನವನು ತನ್ನ ಪವಿತ್ರ ನಾಡಿಗೆ
ಭುಜಬಲದಿಂದ ಗಳಿಸಿದಾ ಪರ್ವತ ಸೀಮೆಗೆ

ಎರಡನೆಯ ವಾಚನ: ಎಫೆಸಿಯರಿಗೆ 4:17, 20-24

ಪ್ರಭುವಿನ ಹೆಸರಿನಲ್ಲಿ ನಾನು ನಿಮಗೆ ಒತ್ತಿಹೇಳುತ್ತೇನೆ: ಇನ್ನು ಮುಂದೆ ನೀವು ಅನ್ಯಜನರಂತೆ ಜೀವಿಸುವುದನ್ನು ತ್ಯಜಿಸಿರಿ. ಅವರ ಆಲೋಚನೆಗಳು ಹುರುಳಿಲ್ಲದವು. ಕ್ರಿಸ್ತಯೇಸುವಿನಿಂದ ನೀವು ಇಂಥದ್ದೇನನ್ನು ಕಲಿಯಲಿಲ್ಲ. ಅವರ ವಿಷಯವಾಗಿ ನೀವು ಕೇಳಿದ್ದು ಮತ್ತು ಕಲಿತದ್ದು ಅವರಲ್ಲಿರುವ ಸತ್ಯಕ್ಕೆ ಅನುಸಾರವಾಗಿತ್ತಲ್ಲವೇ? ಆದ್ದರಿಂದ ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೆ ಹಳೆಯ ಸ್ವಭಾವವನ್ನು ಕಿತ್ತೊಗೆಯಿರಿ; ಅದು ಕಾಮಾಭಿಲಾಷೆಯಿಂದ ಕಲುಷಿತವಾಗಿದೆ. ಆದ್ದರಿಂದಲೇ, “ದೇವರು ಆತನನ್ನು ತಮ್ಮೊಂದಿಗೆ ಸತ್ಸಂಬಂಧದಲ್ಲಿ ಇರುವುದಾಗಿ ಪರಿಗಣಿಸಿದರು,” ಎಂದು ಲಿಖಿತವಾಗಿದೆ. ನಿಮ್ಮ ಹೃನ್ಮನಗಳು ನವೀಕೃತವಾಗಲಿ. ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ. ಇದು ದೇವರ ಅನುರೂಪದಲ್ಲಿ ನಿರ್ಮಿತವಾದ ಸ್ವಭಾವ; ದೇವರೊಂದಿಗೆ ಸತ್ಸಂಬಂಧವುಳ್ಳ ಹಾಗೂ ನೈಜವಾದ ಪಾವನ ಸ್ವಭಾವ.

ಶುಭಸಂದೇಶ: ಯೋವಾನ್ನ 6:24-35


ಯೇಸು ಆಗಲಿ, ಅವರ ಶಿಷ್ಯರಾಗಲಿ ಇಲ್ಲದ್ದನ್ನು ನೋಡಿ ಜನರು ಆ ದೋಣಿಗಳನ್ನು ಹತ್ತಿ ಯೇಸುವನ್ನು ಹುಡುಕುತ್ತಾ ಕಫೆರ್ನವುಮಿಗೆ ಬಂದರು. ಜನರು ಯೇಸುಸ್ವಾಮಿಯನ್ನು ಸರೋವರದ ಆಚೆದಡದಲ್ಲಿ ಕಂಡೊಡನೆ, “ಗುರುದೇವಾ, ತಾವಿಲ್ಲಿಗೆ ಬಂದುದು ಯಾವಾಗ?” ಎಂದು ಕೇಳಿದರು. ಯೇಸು ಅವರಿಗೆ, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ನನ್ನನ್ನು ಹುಡುಕಿಕೊಂಡು ಬಂದದ್ದು ಸೂಚಕಕಾರ್ಯಗಳನ್ನು ನೋಡಿ ಗ್ರಹಿಸಿಕೊಂಡಿದ್ದರಿಂದ ಅಲ್ಲ, ಹೊಟ್ಟೆತುಂಬುವಷ್ಟು ರೊಟ್ಟಿ ಸಿಕ್ಕಿದ್ದರಿಂದ. ಅಳಿದುಹೋಗುವ ಆಹಾರಕ್ಕಾಗಿ ದುಡಿಯಬೇಡಿ; ಉಳಿಯುವ ಮತ್ತು ನಿತ್ಯಜೀವವನ್ನು ಈಯುವ ಆಹಾರಕ್ಕಾಗಿ ದುಡಿಯಿರಿ. ಇಂಥ ಆಹಾರವನ್ನು ನಿಮಗೆ ನೀಡುವವನು ನರಪುತ್ರನೇ. ಏಕೆಂದರೆ, ಪಿತನಾದ ದೇವರು ತಮ್ಮ ಅಧಿಕಾರ ಮುದ್ರೆಯನ್ನು ಆತನ ಮೇಲೆ ಒತ್ತಿದ್ದಾರೆ,” ಎಂದು ಉತ್ತರಕೊಟ್ಟರು. ಆಗ ಆ ಜನರು, “ದೇವರು ಮೆಚ್ಚುವ ಕಾರ್ಯಗಳನ್ನು ನಾವು ಮಾಡಬೇಕಾದರೆ, ಏನು ಮಾಡಬೇಕು?” ಎಂದು ಕೇಳಿದರು. ಅದಕ್ಕೆ ಯೇಸು, “ದೇವರು ಕಳುಹಿಸಿದಾತನನ್ನು ನೀವು ವಿಶ್ವಾಸಿಸಬೇಕು. ಇದೇ ಅವರು ಮೆಚ್ಚುವ ಕಾರ್ಯ,” ಎಂದರು. ಅದಕ್ಕೆ ಆ ಜನರು, “ನಾವು ನೋಡಿ ನಿಮ್ಮಲ್ಲಿ ವಿಶ್ವಾಸ ಇಡುವಂತೆ ನೀವು ಏನು ಮಾಡುವಿರಿ? ಯಾವ ಸೂಚಕಕಾರ್ಯವನ್ನು ತೋರಿಸುವಿರಿ? ನಮ್ಮ ಪೂರ್ವಜರಿಗೆ ಮರುಭೂಮಿಯಲ್ಲಿ ತಿನ್ನಲು ‘ಮನ್ನಾ’ ಸಿಕ್ಕಿತು, ತಿನ್ನಲು ಅವರಿಗೆ ಸ್ವರ್ಗದಿಂದ ರೊಟ್ಟಿ ದೊರಕಿತು, ಎಂದು ಪವಿತ್ರಗ್ರಂಥವೇ ಹೇಳುತ್ತದೆಯಲ್ಲವೇ?” ಎಂದರು. ಯೇಸು ಅವರಿಗೆ, “ನಿಮಗೆ ಸತ್ಯವಾಗಿ ಹೇಳುತ್ತೇನೆ; ಸ್ವರ್ಗದಿಂದ ನಿಮಗೆ ರೊಟ್ಟಿಯನ್ನು ಕೊಟ್ಟವನು ಮೋಶೆಯಲ್ಲ; ನಿಮಗೆ ಸ್ವರ್ಗದಿಂದ ನಿಜವಾದ ರೊಟ್ಟಿಯನ್ನು ಕೊಡುವವರು ನನ್ನ ಪಿತನೇ. ಏಕೆಂದರೆ, ಸ್ವರ್ಗದಿಂದ ಇಳಿದು ಬಂದು ಲೋಕಕ್ಕೆ ಸಜ್ಜೀವವನ್ನೀಯುವಾತನೇ ದೇವರು ಕೊಡುವ ರೊಟ್ಟಿ,” ಎಂದು ಹೇಳಿದರು. ಅದಕ್ಕೆ ಆ ಜನರು, “ಅಂಥಾ ರೊಟ್ಟಿಯನ್ನೇ ನಮಗೆ ಯಾವಾಗಲೂ ಕೊಡಿ,” ಎಂದು ಕೇಳಿದರು. ಆಗ ಯೇಸು, “ನಾನೇ ಜೀವದಾಯಕ ರೊಟ್ಟಿ, ನನ್ನ ಬಳಿ ಬರುವವನಿಗೆ ಹಸಿವೇ ಇರದು; ನನ್ನಲ್ಲಿ ವಿಶ್ವಾಸವಿಡುವವನಿಗೆ ಎಂದಿಗೂ ದಾಹವಾಗದು.

No comments:

Post a Comment

29.08.2026 - ಸ್ನಾನಿಕ ಯೊವಾನ್ನನ ತಲೆಯನ್ನು ಕೇಳು

  ಸಂತ ಸ್ನಾನಿಕ ಯೊವಾನ್ನನ ಶಿರಚ್ಛೇದನ ಮೊದಲನೇ ವಾಚನ: ಯೆರೆಮಿಯ: 1: 17-19 ಆದುದರಿಂದ ನೀನು ನಿನ್ನ ನಡುವನ್ನು ಕಟ್ಟಿ ನಿಂತುಕೊಂಡು ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲ...