ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

27.07.24 - "ಸುಗ್ಗಿಯ ಕಾಲದಲ್ಲಿ ಮೊದಲು ಕಳೆ ಕಿತ್ತು, ಸುಟ್ಟು ಹಾಕಲು ಕಟ್ಟಿಡಿ;"

ಮೊದಲನೇ ವಾಚನ: ಯೆರೆಮೀಯ 7:1-11


ಸರ್ವೇಶ್ವರ ಯೆರೆಮೀಯನಿಗೆ ಹೇಳಿದ ಮಾತು: “ನೀನು ನನ್ನ ಆಲಯದ ಬಾಗಿಲಲ್ಲಿ ನಿಂತು ಈ ವಾಕ್ಯವನ್ನು ಸಾರು – ‘ಸರ್ವೇಶ್ವರಸ್ವಾಮಿಗೆ ಅಡ್ಡಬೀಳಲು ಈ ದ್ವಾರಗಳನ್ನು ಪ್ರವೇಶಿಸುವ ಎಲ್ಲ ಯೆಹೂದ್ಯರೇ, ಸರ್ವೇಶ್ವರನ ನುಡಿಯನ್ನು ಕೇಳಿ; ಇಸ್ರಯೇಲಿನ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಹೀಗೆನ್ನುತ್ತಾರೆ: “ನೀವು ನಿಮ್ಮ ನಡತೆಯನ್ನೂ ಕೃತ್ಯಗಳನ್ನೂ ತಿದ್ದುಕೊಳ್ಳಿ. ಹಾಗೆ ಮಾಡಿದರೆ ನಾನು ನಿಮ್ಮನ್ನು ಈ ಸ್ಥಳದಲ್ಲಿ ನೆಲೆಗೊಳಿಸುವೆನು. ‘ಇದು ಸರ್ವೇಶ್ವರನ ಗರ್ಭಗುಡಿ, ಸರ್ವೇಶ್ವರನ ಗರ್ಭಗುಡಿ, ಸರ್ವೇಶ್ವರನ ಗರ್ಭಗುಡಿ, (ಆದುದರಿಂದ ಎಲ್ಲ ಸುಭದ್ರ)’ ಎಂಬ ಮೋಸಕರ ಮಾತುಗಳಲ್ಲಿ ಭರವಸೆ ಇಡಬೇಡಿ. “ನೀವು ನಿಮ್ಮ ನಡೆಯನ್ನೂ ಕೃತ್ಯಗಳನ್ನೂ ಪೂರ್ತಿಯಾಗಿ ತಿದ್ದುಕೊಳ್ಳಿ. ಒಬ್ಬರು ಮತ್ತೊಬ್ಬರೊಡನೆ ನ್ಯಾಯನೀತಿಯಿಂದ ವರ್ತಿಸಿರಿ. ಅನ್ಯರನ್ನಾಗಲಿ, ಅನಾಥರನ್ನಾಗಲಿ, ವಿಧವೆಯರನ್ನೇ ಆಗಲಿ ಶೋಷಣೆಗೆ ಗುರಿಪಡಿಸಬೇಡಿ! ಇಲ್ಲೆಲ್ಲೂ ನಿರ್ದೋಷಿಗಳ ರಕ್ತವನ್ನು ಸುರಿಸಬೇಡಿ. ನಿಮಗೆ ಹಾನಿಕರವಾದ ಅನ್ಯದೇವತಾ ಭಕ್ತಿಯನ್ನು ಬಿಟ್ಟುಬಿಡಿ. ಆಗ ನಾನು ನಿಮ್ಮನ್ನು ಈ ಸ್ಥಳದಲ್ಲೆ ನೆಲೆಗೊಳಿಸುವೆನು. ನಿಮ್ಮ ಪೂರ್ವಜರಿಗೆ ನಾನು ಶಾಶ್ವತವಾಗಿ ದಯಪಾಲಿಸಿದ ಈ ನಾಡಿನಲ್ಲೆ ನೆಲೆಗೊಳಿಸುವೆನು.” “ನಿಷ್ಪ್ರಯೋಜಕವಾದ ಹಾಗೂ ಮೋಸದ ಮಾತುಗಳಲ್ಲಿ ನೀವು ಭರವಸೆ ಇಟ್ಟಿದ್ದೀರಿ. ಕಳವು, ಕೊಲೆ, ವ್ಯಭಿಚಾರಗಳನ್ನು ಮಾಡುತ್ತೀರಿ. ಸುಳ್ಳುಸಾಕ್ಷಿ ಹೇಳುತ್ತೀರಿ. ಬಾಳನಿಗೆ ಧೂಪಾರತಿ ಎತ್ತುತ್ತೀರಿ. ಕಂಡು ಕೇಳದ ಅನ್ಯದೇವತೆಗಳನ್ನು ಆರಾಧಿಸುತ್ತೀರಿ. ನನ್ನ ಹೆಸರು ಪಡೆದಿರುವ ಈ ದೇವಾಲಯಕ್ಕೆ ಬಂದು ನನ್ನ ಸನ್ನಿಧಿಯಲ್ಲಿ ನಿಂತು – ‘ನಾವು ಸುರಕ್ಷಿತರು’ ಎನ್ನುತ್ತೀರಿ. ಈ ಎಲ್ಲ ಅಸಹ್ಯಕಾರ್ಯಗಳನ್ನು ನಡೆಸುವುದಕ್ಕೋ ಈ ಸುರಕ್ಷತೆ? ನನ್ನ ಹೆಸರಿನಲ್ಲಿ ಕಟ್ಟಿರುವ ದೇವಾಲಯ ನಿಮ್ಮ ದೃಷ್ಟಿಗೆ ಕಳ್ಳರ ಗುಹೆ ಆಗಿದೆಯೋ? ಹೌದು, ಇದನ್ನೆಲ್ಲ ನಾನೆ ಖುದ್ದಾಗಿ ನೋಡಿದ್ದೇನೆ. ಇದು ಸರ್ವೇಶ್ವರನಾದ ನನ್ನ ನುಡಿ.

ಕೀರ್ತನೆ: 84:2-3, 4-5, 9
ಶ್ಲೋಕ: ಪ್ರಭೂ, ನಿನ್ನ ನಿವಾಸಗಳೆನಿತೋ ಸುಂದರ!

ಹಂಬಲಿಸಿ  ಸೊರಗಿಹೋಗಿದೆ  ಎನ್ನ  ಮನ|
ಕಾಣಬೇಕೆಂದು  ಪ್ರಭುವಿನ  ಪ್ರಾಂಗಣ||

ಸ್ವಾಮಿದೇವಾ,  ಎನ್ನರಸ,  ಸ್ವರ್ಗಸೇನಾಧೀಶ್ವರ|
ದೊರಕಿದೆ  ಗುಬ್ಬಿಗೆ  ಗೂಡು  ನಿನ್ನ  ವೇದಿಕೆಯ  ಹತ್ತಿರ|
ಪಾರಿವಾಳಕ್ಕೂ  ಅಲ್ಲೇ  ಮರಿಯಿಡಲು  ಆಗರ||

ನಿನ್ನ  ಮಂದಿರದಲಿ  ವಾಸಿಸುವವರು  ಧನ್ಯರು|
ನಿರಂತರವು  ನಿನ್ನ  ಗುಣಗಾನ  ಮಾಡುವರವರು|
ನಿನ್ನಿಂದ  ಶಕ್ತಿಪಡೆಯುವವರು  ಧನ್ಯರು||

ನಿನ್ನ  ಮಂದಿರದಲಿ  ಕಳೆದ  ದಿನವೊಂದು|
ತಿಳಿವೆನು  ಸಾವಿರ  ದಿನಕೂ  ಮೇಲೆಂದು||
ದುರುಳರ  ಬಿಡಾರದಲಿ  ನಾ  ವಾಸಮಾಡುವುದರ  ಬದಲು|
ನಿನ್ನಾಲಯ  ದ್ವಾರಪಾಲಕನಾಗಿರುವುದೇ  ಮೇಲು||

ಘೋಷಣೆ                   ಮತ್ತಾಯ 11:25
ಅಲ್ಲೆಲೂಯ, ಅಲ್ಲೆಲೂಯ!
ಪ್ರಭುವಿಗಾಗಿ  ಎನ್ನ  ಮನ  ಕಾದಿದೆ,
ಆತನ  ವಾಕ್ಯದಲಿ  ನಂಬಿಕೆ  ನನಗಿದೆ,,
ಅಲ್ಲೆಲೂಯ!

ಶುಭಸಂದೇಶ: ಮತ್ತಾಯ 13:24-30


ಯೇಸುಸ್ವಾಮಿ ಜನರಿಗೆ ಮತ್ತೊಂದು ಸಾಮತಿಯನ್ನು ಹೇಳಿದರು: "ಸ್ವರ್ಗಸಾಮ್ರಾಜ್ಯವು ತನ್ನ ಹೊಲದಲ್ಲಿ ಒಳ್ಳೆಯ ಗೋದಿಯನ್ನು ಬಿತ್ತಿದ ರೈತನನ್ನು ಹೋಲುತ್ತದೆ. ಒಂದು ರಾತ್ರಿ ಎಲ್ಲರೂ ನಿದ್ರಿಸುತ್ತಿರುವಾಗ, ಅವನ ವೈರಿ ಬಂದು, ಗೋದಿಯ ನಡುವೆ ಕಳೆಗಳನ್ನು ಬಿತ್ತಿ ಹೋದ. ಗೋದಿ ಬೆಳೆದು ತೆನೆಬಿಟ್ಟಾಗ ಕಳೆ ಬೆಳೆದಿರುವುದೂ ಗೋಚರವಾಯಿತು. ಆಗ ಆಳುಗಳು ತಮ್ಮ ಯಜಮಾನನ ಬಳಿಗೆ ಬಂದು, "ಸ್ವಾವಿೂ, ನಿಮ್ಮ ಹೊಲದಲ್ಲಿ ಬಿತ್ತಿದ್ದು ಉತ್ತಮವಾದ ಗೋದಿ ಅಲ್ಲವೆ? ಜೊತೆಗೆ ಕಳೆಯೂ ಕಾಣಿಸಿಕೊಂಡಿದೆಯಲ್ಲಾ, ಅದೆಲ್ಲಿಂದ ಬಂತು?" ಎಂದರು. ಯಜಮಾನ, ‘ಇದು ನನ್ನ ವೈರಿ ಮಾಡಿರುವ ಕೆಲಸ,’ ಎಂದ. ‘ಹಾಗಾದರೆ, ಕಳೆಯನ್ನು ಕಿತ್ತು ಹಾಕೋಣವೇ?’ ಎಂದರು ಆಳುಗಳು, ಅದಕ್ಕೆ ಯಜಮಾನ ‘ಬೇಡ, ಬೇಡ; ಕಳೆಯನ್ನು ಕೀಳುವಾಗ, ಗೋದಿಯನ್ನೂ ಕಿತ್ತು ಬಿಟ್ಟೀರಿ. ಸುಗ್ಗಿಯವರೆಗೆ ಎರಡೂ ಒಟ್ಟಿಗೆ ಬೆಳೆಯಲಿ; ಸುಗ್ಗಿಯ ಕಾಲದಲ್ಲಿ ಮೊದಲು ಕಳೆ ಕಿತ್ತು, ಸುಟ್ಟು ಹಾಕಲು ಕಟ್ಟಿಡಿ; ಬಳಿಕ ಗೋದಿಯನ್ನು ಒಕ್ಕಣೆಮಾಡಿ ನನ್ನ ಕಣಜಕ್ಕೆ ತುಂಬಿರಿ, ಎಂದು ಕೊಯ್ಲುಗಾರರಿಗೆ  ಹೇಳುತ್ತೇನೆ, ' ಎಂದ."



No comments:

Post a Comment