ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

28.07.24

ಮೊದಲನೆಯ ವಾಚನ 2 ಅರಸರುಗಳು 4:42-44

ಒಂದು ದಿನ ಬಾಳ್ ಷಾಲಿಷಾ ಊರಿನ ಒಬ್ಬ ವ್ಯಕ್ತಿ ಇಪ್ಪತ್ತು ಜವೆಗೋದಿಯ ರೊಟ್ಟಿಗಳನ್ನೂ ಒಂದು ಚೀಲ ತುಂಬ ಹಸೀ ತೆನೆಗಳನ್ನೂ ಪ್ರಥಮಫಲದ ಕಾಣಿಕೆಯಾಗಿ ತೆಗೆದುಕೊಂಡು ಬಂದು ದೈವಪುರುಷನಿಗೆ ಸಮರ್ಪಿಸಿದನು. ಎಲೀಷನು ತನ್ನ ಸೇವಕನಿಗೆ, " ಇದನ್ನು ಜನರಿಗೆ ಕೊಡು, ಅವರು ಊಟಮಾಡಲಿ, " ಎಂದು ಹೇಳಿದನು. ಅದಕ್ಕೆ ಅವನು, " ಇಷ್ಟನ್ನು ನೂರು ಮಂದಿಗೆ ಹೇಗೆ ಬಡಿಸಲಿ, " ಎಂದನು. ಎಲಿಷನು, " ಇರಲಿ, ಕೊಡು, ಅವರು ಊಟಮಾಡಲಿ. ಅವರು ಅದನ್ನು ಊಟಮಾಡಿ ತೃಪ್ತರಾಗಿ ಇನ್ನೂ ಉಳಿಸಿಕೊಳ್ಳುವರು ' ಎಂಬುದು ಸರ್ವೇಶ್ವರನ ನುಡಿ, " ಎಂದು ಹೇಳಿದರು. ಸೇವಕನು ಬಡಿಸಿದನು. ಸರ್ವೇಶ್ವರನು ನುಡಿದಂತೆಯೇ ಜನರು ಊಟಮಾಡಿ, ತೃಪ್ತರಾಗಿ ಇನ್ನೂ ಉಳಿಸಿಕೊಂಡರು.

ಕೀರ್ತನೆ: 145:10-11, 16-19.
ಶ್ಲೋಕ: ಎಲ್ಲರ ಕೋರಿಕೆಗಳನು ಈಡೇರಿಸುವವನು ನೀನು ಪ್ರಭೂ.

ಪ್ರಭೂ, ನಿನ್ನನ್ನು ಸ್ತುತಿಪುದು ಸೃಷ್ಟಿಯೆಲ್ಲವೂ
ಕೊಂಡಾಡುವುದು ನಿನ್ನನು ಭಕ್ತಸಮೂಹವು
ಪ್ರಸಿದ್ದಪಡಿಸುವುದು ನಿನ್ನ ರಾಜ್ಯದ ಮಹತ್ವವನು
ವರ್ಣಿಸುವರವರು ನಿನ್ನ ಶಕ್ತಿ ಸಾಮರ್ಥ್ಯವನು

ಎಲ್ಲ ಜೀವಿಗಳ ಕಣ್ಣು, ಪ್ರಭೂ, ನಾಟಿವೆ ನಿನ್ನ ಕಡೆಗೆ
ಕಾಲಕಾಲಕೆ ಕೊಡುವೆ ಆಹಾರವನು ಅವುಗಳಿಗೆ
ಎಲ್ಲ ಜೀವಿಗಳಿಗೆ ನೀ ಕೈ ನೀಡುವವನು
ಎಲ್ಲರ ಕೋರಿಕೆಗಳನು ಈಡೇರಿಸುವವನು

ಪ್ರಭುವಿನ ಮಾರ್ಗ ಧರ್ಮಸಮ್ಮತ
ಆತನ ಕಾರ್ಯವೆಲ್ಲ ಪುನೀತ
ಹತ್ತಿರ ಇಹನು ಪ್ರಭು ಕರೆಯುವವರೆಲ್ಲರಿಗೆ
ಯಥಾರ್ಥವಾಗಿ ಆತನನು ಅರಸುವವರಿಗೆ

ಎರಡನೆಯ ವಾಚನ: ಎಫೆಸಿಯರಿಗೆ 4:1-6

ಸಹೋದರರೇ, ಪ್ರಭುವಿನ ಸೇವೆಯ ನಿಮಿತ್ತ ಸೆರೆಯಾಳಾಗಿರುವ ಪೌಲನಾದ ನಾನು ನಿಮ್ಮಲ್ಲಿ ಬಿನ್ನವಿಸುವುದು ಏನೆಂದರೆ: ದೇವರ ಕರೆಗೆ ಅನುಗುಣವಾಗಿ ಯೋಗ್ಯ ಬಾಳುವೆ ನಡೆಸಿರಿ. ಯಾವಾಗಲೂ ದೀನದಯಾಳತೆ, ವಿನಯಶೀಲತೆ ಹಾಗೂ ಶಾಂತಿಸಮಾಧಾನವುಳ್ಳವರಾಗಿರಿ. ಪರಸ್ಪರ ಪ್ರೀತಿಯಿಂದಲೂ ಸಹನೆಯಿಂದಲೂ ವರ್ತಿಸಿರಿ. ಪವಿತ್ರಾತ್ಮರಿಂದ ಉಂಟಾಗುವ ಐಕ್ಯತೆಯನ್ನು ಕಾಪಾಡಿಕೊಳ್ಳಲು ಆಸಕ್ತರಾಗಿರಿ. ಅದು ನಿಮ್ಮನ್ನು ಸಮಾಧಾನದಲ್ಲಿ ಬಂಧಿಸುವುದು. ನೀವೆಲ್ಲರೂ ಒಂದೇ ಶರೀರಕ್ಕೆ ಸೇರಿದವರು, ಒಬ್ಬರೇ ಪವಿತ್ರಾತ್ಮರನ್ನು ಪಡೆದವರು, ಒಂದೇ ನಿರೀಕ್ಷೆಗಾಗಿ ಕರೆಹೊಂದಿದವರು. ನಮ್ಮೆಲ್ಲರಿಗೂ ಪ್ರಭೂ ಒಬ್ಬರೇ, ವಿಶ್ವಾಸವೂ ಒಂದೇ, ದೀಕ್ಷಾಸ್ನಾನವೂ ಒಂದೇ. ದೇವರು ಒಬ್ಬರೇ, ಸರ್ವರ ತಂದೆಯೂ ಅವರೇ, ಸರ್ವಶ್ರೇಷ್ಠರೂ ಅವರೇ, ಸರ್ವರ ಮೂಲಕ ಕಾರ್ಯ ನಿರ್ವಹಿಸುವವರೂ ಅವರೇ ಮತ್ತು ಸಮಸ್ತರಲ್ಲಿ ವಾಸಿಸುವವರೂ ಅವರೇ.

ಶುಭಸಂದೇಶ: ಯೊವಾನ್ನ 6:1-15

ಆ ಕಾಲದಲ್ಲಿ ಯೇಸು ಗಲಿಲೇಯ ಸರೋವರವನ್ನು ದಾಟಿ, ಆಚೆಯ ದಡಕ್ಕೆ ಹೋದರು. ಅದಕ್ಕೆ ತಿಬೇರಿಯ ಸರೋವರವೆಂದು ಹೆಸರು. ಜನರ ದೊಡ್ಡ ಗುಂಪೊಂದು ಅವರ ಹಿಂದೆ ಹೋಯಿತು. ಏಕೆಂದರೆ, ಯೇಸು ಸೂಚಕಕಾರ್ಯಗಳನ್ನು ಮಾಡುತ್ತಾ ರೋಗಪೀಡಿತರನ್ನು ಗುಣಪಡಿಸುತ್ತಾ ಇದ್ದುದನ್ನು ಆ ಜನರು ನೋಡಿದ್ದರು. ಯೇಸು ಬೆಟ್ಟವನ್ನು ಹತ್ತಿ ತಮ್ಮ ಶಿಷ್ಯರ ಸಂಗಡ ಕುಳಿತುಕೊಂಡರು. ಯೆಹೂದ್ಯರ ಪಾಸ್ಕ ಹಬ್ಬವು ಹತ್ತಿರವಾಗಿತ್ತು. ಯೇಸು ಕಣ್ಣು ಹಾಯಿಸಿ ನೋಡಿದಾಗ ಆ ದೊಡ್ಡ ಗುಂಪು ತಮ್ಮ ಕಡೆಗೆ ಬರುವುದನ್ನು ಕಂಡರು. " ಈ ಜನರ ಊಟಕ್ಕೆ ರೊಟ್ಟಿಯನ್ನು ನಾವು ಎಲ್ಲಿಂದ ಕೊಂಡುಕೊಳ್ಳುವುದು? " ಎಂದು ಯೇಸು ಫಿಲಿಪ್ಪನನ್ನು ಕೇಳಿದರು. ಫಿಲಿಪ್ಪನನ್ನು ಪರೀಕ್ಷಿಸುವ ಸಲುವಾಗಿ ಅವರು ಹಾಗೆ ಹೇಳಿದರು. ಏಕೆಂದರೆ, ತಾವು ಮಾಡಲಿರುವುದು ಅವರಿಗೆ ತಿಳಿದಿತ್ತು. ಅದಕ್ಕೆ ಫಿಲಿಪ್ಪನು, " ಇನ್ನೂರು ದಿನಾರಿ ನಾಣ್ಯಗಳನ್ನು ಕೊಟ್ಟು ರೊಟ್ಟಿಯನ್ನು ತಂದರೂ ಆಳಿಗೊಂದು ತುಂಡೂ ಬಾರದು, " ಎಂದನು. ಆಗ ಶಿಷ್ಯರಲ್ಲಿ ಒಬ್ಬನು, ಅಂದರೆ, ಸಿಮೋನ್ ಪೇತ್ರನ ಸಹೋದರನಾದ ಅಂದ್ರೇಯನು, " ಇಲ್ಲಿ ಒಬ್ಬ ಹುಡುಗನ ಬಳಿ ಜವೆಗೋದಿಯ ಐದು ರೊಟ್ಟಿಗಳೂ ಎರಡು ಮೀನುಗಳೂ ಇವೆ. ಆದರೆ ಈ ಜನಸಮೂಹಕ್ಕೆ ಇವೆಲ್ಲಿ ಸಾಕಾಗುತ್ತವೆ? " ಎಂದನು. ಯೇಸು " ಜನರನ್ನು ಊಟಕ್ಕೆ ಕೂರಿಸಿರಿ, " ಎಂದರು. ಅಲ್ಲಿ ಹುಲುಸಾಗಿದ್ದ ಹುಲ್ಲಿನ ಮೇಲೆ ಜನರು ಕುಳಿತುಕೊಂಡರು. ಗಂಡಸರ ಸಂಖ್ಯೆಯೇ ಐದುಸಾವಿರದಷ್ಟಿತ್ತು. ಯೇಸು, ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರವನ್ನು ಸಲ್ಲಿಸಿ, ಕುಳಿತಿದ್ದ ಜನರಿಗೆ ಅವುಗಳನ್ನು ಹಂಚಿದರು. ಹಾಗೆಯೇ ಮೀನುಗಳನ್ನು ಹಂಚಿಕೊಟ್ಟರು. ಎಲ್ಲರೂ ತಮಗೆ ಬೇಕಾದಷ್ಟು ತಿಂದರು. ಅವರೆಲ್ಲರೂ ತಿಂದು ತೃಪ್ತರಾದ ಮೇಲೆ ಯೇಸು, " ತಿಂದುಳಿದ ತುಂಡುಗಳನ್ನೆಲ್ಲಾ ಒಟ್ಟುಗೂಡಿಸಿ, ಒಂದು ತುಂಡೂ ಹಾಳಾಗಬಾರದು, " ಎಂದು ತಮ್ಮ ಶಿಷ್ಯರಿಗೆ ಹೇಳಿದರು. ತಿಂದುಳಿದ ಆ ಐದು ರೊಟ್ಟಿಗಳ ತುಂಡುಗಳನ್ನು ಒಟ್ಟುಗೂಡಿಸಲು ಅವು ಹನ್ನೆರಡು ಬುಟ್ಟಿಗಳ ತುಂಬಾ ಆದವು. ಯೇಸು ಮಾಡಿದ ಈ ಸೂಚಕಕಾರ್ಯಗಳನ್ನು ಕಂಡ ಜನರು, " ಲೋಕ ಬರಬೇಕಾಗಿದ್ದ ಪ್ರವಾದಿ ನಿಜವಾಗಿಯೂ ಇವರೇ, " ಎಂದು ಹೇಳತೊಡಗಿದ್ದರು. ಅವರೆಲ್ಲರೂ ಬಂದು ತಮ್ಮನ್ನು ಹಿಡಿದು ಅರಸನನ್ನಾಗಿ ಮಾಡುವ ಯೋಚನೆಯಲ್ಲಿದ್ದಾರೆ ಎಂಬುದನ್ನು ಅರಿತ ಯೇಸು ತಾವೊಬ್ಬರೇ ಬೆಟ್ಟದ ಕಡೆಗೆ ಹೊರಟುಬಿಟ್ಟಿರು.

No comments:

Post a Comment