ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

03.08.24 - “ನನಗೆ ಸ್ನಾನಿಕ ಯೊವಾನ್ನನ ತಲೆಯನ್ನು ಒಂದು ತಟ್ಟೆಯಲ್ಲಿ ತರಿಸಿಕೊಡಿ,”

ಪ್ರವಾದಿ ಯೆರೆಮೀಯನ ಗ್ರಂಥ 26:11-16, 24


ಯಾಜಕರೂ ಪ್ರವಾದಿಗಳೂ, “ಇವನು ಮರಣದಂಡನೆಗೆ ಪಾತ್ರನು; ನಗರಕ್ಕೆ ಅಹಿತವಾದುದನ್ನು ನುಡಿದಿದ್ದಾನೆ. ಇದನ್ನು ನೀವೇ ಕೇಳಿದ್ದೀರಿ,” ಎಂದು ನಾಯಕರಿಗೂ ಜನರೆಲ್ಲರಿಗೂ ದೂರು ಇತ್ತರು. ಆಗ ಯೆರೆಮೀಯನು, “ನೀವು ಕೇಳಿದ ಮಾತುಗಳನ್ನೆಲ್ಲ, ಅಂದರೆ ಈ ದೇವಾಲಯಕ್ಕೂ ನಗರಕ್ಕೂ ವಿರುದ್ಧವಾದ ಮಾತುಗಳನ್ನು ನುಡಿಯಲು ನನ್ನನ್ನು ಕಳಿಸಿದವರು ಸರ್ವೇಶ್ವರನೇ. ಇದೀಗಲೇ ನೀವು ನಿಮ್ಮ ಮಾರ್ಗಗಳನ್ನೂ ನಡತೆಗಳನ್ನೂ ತಿದ್ದುಕೊಳ್ಳಿ. ನಿಮ್ಮ ದೇವರಾದ ಸರ್ವೇಶ್ವರನ ನುಡಿಗೆ ಕಿವಿಗೊಡಿ. ಆಗ ನಿಮಗೆ ತಿಳಿಸಿದ ಕೇಡು ಒದಗದಂತೆ ಸರ್ವೇಶ್ವರ ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳುವರು. ನಾನೋ ನಿಮ್ಮ ಕೈಯಲ್ಲಿದ್ದೇನೆ. ನಿಮಗೆ ಯಾವುದು ಒಳ್ಳೆಯದು, ಯಾವುದು ನ್ಯಾಯವಾದುದು ಎಂದು ತೋರುತ್ತದೆಯೋ ಅದನ್ನು ನನಗೆ ಮಾಡಿ. ಆದರೆ ಒಂದು ವಿಷಯ ನಿಮಗೆ ಚೆನ್ನಾಗಿ ತಿಳಿದಿರಲಿ - ನೀವು ನನ್ನನ್ನು ಕೊಂದುಹಾಕಿದ್ದೇ ಆದರೆ, ನಿರ್ದೋಷಿಯ ರಕ್ತ ಸುರಿಸಿದ ಅಪರಾಧಕ್ಕೆ ನೀವೂ ಈ ನಗರವೂ ಇದರ ನಿವಾಸಿಗಳೂ ಗುರಿಯಾಗುವಿರಿ. ಏಕೆಂದರೆ ಈ ಮಾತುಗಳನ್ನೆಲ್ಲ ನಿಮ್ಮ ಕಿವಿಗೆ ಮುಟ್ಟಿಸುವಂತೆ ನನ್ನನ್ನು ಕಳಿಸಿದವರು ಸರ್ವೇಶ್ವರ ಎಂಬುದು ಸತ್ಯ,” ಎಂದು ಹೇಳಿದನು. ಇದನ್ನು ಕೇಳಿದ ನಾಯಕರು ಮತ್ತು ಸಕಲ ಜನರು ಯಾಜಕ - ಪ್ರವಾದಿಗಳಿಗೆ, “ಇವನು ಮರಣದಂಡನೆಗೆ ಪಾತ್ರನಲ್ಲ. ಏಕೆಂದರೆ ನಮ್ಮ ದೇವರಾದ ಸರ್ವೇಶ್ವರನ ಹೆಸರಿನಲ್ಲೇ ಇದನ್ನು ನಮಗೆ ನುಡಿದಿದ್ದಾನೆ,” ಎಂದರು. ಇತ್ತ ಯಾಜಕರೂ ಪ್ರವಾದಿಗಳೂ ಯೆರೆಮೀಯನನ್ನು ಜನರ ಕೈಗೆ ಸಿಕ್ಕಿಸಿ ಕೊಲ್ಲಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಯೆರೆಮೀಯನಿಗೆ ಶಾಫಾನನ ಮಗ ಅಹೀಕಾಮನ ಸಹಾಯ ದೊರಕಿತ್ತು.

ಕೀರ್ತನೆ: 69:15-16, 30-31, 33-34
ಶ್ಲೋಕ: ಪ್ರೀತಿಮಯ ದೇವಾ, ಸದುತ್ತರ ನೀಡೆನಗೆ

ಶುಭಸಂದೇಶ: ಮತ್ತಾಯ 14:1-12

ಯೇಸುಸ್ವಾಮಿಯ ಸಮಾಚಾರ ಆಗ ಗಲಿಲೇಯ ಪ್ರಾಂತ್ಯಕ್ಕೆ ಸಾಮಂತರಾಜನಾಗಿದ್ದ ಹೆರೋದನ ಕಿವಿಗೆ ಬಿದ್ದಿತು. ಅವನು ತನ್ನ ಪರಿಚಾರಕರಿಗೆ, “ಮಡಿದ ಸ್ನಾನಿಕ ಯೊವಾನ್ನನೇ ಮರಳಿ ಜೀವಂತವಾಗಿ ಬಂದಿದ್ದಾನೆ; ಆದ್ದರಿಂದಲೇ ಮಹತ್ಕಾರ್ಯಗಳನ್ನು ಮಾಡುವ ಶಕ್ತಿ ಇವನಿಗಿದೆ,” ಎಂದನು ಹೆರೋದನು ತನ್ನ ಸಹೋದರ ಫಿಲಿಪ್ಪನ ಧರ್ಮಪತ್ನಿಯಾದ ಹೆರೋದಿಯಳನ್ನು ಇಟ್ಟುಕೊಂಡಿದ್ದನು. ಅವಳ ಪ್ರಯುಕ್ತ ಯೊವಾನ್ನನನ್ನು ಹಿಡಿದು ಬಂಧಿಸಿ ಸೆರೆಯಲ್ಲಿ ಹಾಕಿದ್ದನು. ಏಕೆಂದರೆ ಆತನು, ‘ನಿನ್ನ ಸಹೋದರನ ಧರ್ಮಪತ್ನಿಯನ್ನು ನೀನು ಇಟ್ಟುಕೊಂಡಿರುವುದು ಅಕ್ರಮ,” ಎಂದು ಹೆರೋದನಿಗೆ ಹೇಳುತ್ತಿದ್ದನು. ಯೊವಾನ್ನನನ್ನು ಕೊಲ್ಲಿಸಬೇಕೆಂದಿದ್ದರೂ ಹೆರೋದನು ಜನರಿಗೆ ಹೆದರಿದ್ದನು. ಅವರು ಆತನನ್ನು ಪ್ರವಾದಿಯೆಂದು ಭಾವಿಸಿದ್ದರು. ಹೀಗಿರುವಲ್ಲಿ ಹೆರೋದನ ಹುಟ್ಟುಹಬ್ಬ ಬಂದಿತು. ಹೆರೋದಿಯಳ ಮಗಳು ಆಹ್ವಾನಿತರ ಮುಂದೆ ನರ್ತನಮಾಡಿ ಹೆರೋದನನ್ನು ಮೆಚ್ಚಿಸಿದಳು. ಆಗ ಅವಳು ಏನು ಕೇಳಿದರೂ ಕೊಡುವುದಾಗಿ ಅವನು ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದನು. ಅವಳು ತನ್ನ ತಾಯಿಯ ಸಲಹೆ ಪಡೆದು, “ನನಗೆ ಸ್ನಾನಿಕ ಯೊವಾನ್ನನ ತಲೆಯನ್ನು ಒಂದು ತಟ್ಟೆಯಲ್ಲಿ ತರಿಸಿಕೊಡಿ,” ಎಂದಳು. ಇದನ್ನು ಕೇಳಿ ರಾಜನಿಗೆ ವ್ಯಥೆಯಾಯಿತು. ಆದರೆ ಅತಿಥಿಗಳ ಮುಂದೆ ಮಾಡಿದ ಪ್ರಮಾಣ ಮುರಿಯಲಾಗದೆ ಅವಳ ಇಚ್ಛೆಯನ್ನು ಪೂರೈಸುವಂತೆ ಆಜ್ಞೆಮಾಡಿದನು. ಅದರಂತೆಯೇ ಆಳುಗಳನ್ನು ಕಳುಹಿಸಿ, ಸೆರೆಮನೆಯಲ್ಲಿದ್ದ ಯೊವಾನ್ನನ ತಲೆಯನ್ನು ಕಡಿಸಿದನು;  ಅದನ್ನು ಒಂದು ತಟ್ಟೆಯಲ್ಲಿ ತಂದು ಆ ಹುಡುಗಿಗೆ ಕೊಡಲಾಯಿತು. ಅವಳು ಅದನ್ನು ತನ್ನ ತಾಯಿಯ ಬಳಿಗೆ ತೆಗೆದುಕೊಂಡು ಹೋದಳು.  ಯೊವಾನ್ನನ ಶಿಷ್ಯರು ಶವವನ್ನು ತೆಗೆದು ಕೊಂಡುಹೋಗಿ ಸಮಾಧಿಮಾಡಿದರು. ಅನಂತರ ಹೋಗಿ ಯೇಸುವಿಗೆ ಈ ವಿಷಯವನ್ನು ತಿಳಿಸಿದರು.

No comments:

Post a Comment