ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

24.07.24 - "ಒಬ್ಬ ರೈತ ಬಿತ್ತುವುದಕ್ಕೆ ಹೋದ"

ಮೊದಲನೇ ವಾಚನ: ಯೆರೆಮೀಯ 1:1, 4-10


ಪ್ರವಾದಿ ಯೆರೆಮೀಯನ ಗ್ರಂಥ ಪರಿಚಯ ಇವು ಯೆರೆಮೀಯನ ಪ್ರವಚನಗಳು. ಈತ ಬೆನ್ಯವಿೂನ್ ಪ್ರಾಂತ್ಯಕ್ಕೆ ಸೇರಿದ ಅನಾತೋತ್ ಊರಿನ ಯಾಜಕ ವರ್ಗದವನು. ಇವನ ತಂದೆ ಹಿಲ್ಕೀಯನು. ಯೆರೆಮೀಯನಿಗೆ ಪ್ರವಾದಿ ಪಟ್ಟ ಸರ್ವೇಶ್ವರಸ್ವಾಮಿ ಈ ವಾಣಿಯನ್ನು ನನಗೆ ದಯಪಾಲಿಸಿದರು: “ನಿನ್ನನ್ನು ತಾಯಿಯ ಗರ್ಭದಲ್ಲಿ ರೂಪಿಸುವುದಕ್ಕೆ ಮುಂಚೆಯೇ ನಿನ್ನನ್ನು ನಾನು ತಿಳಿದಿದ್ದೆ; ನೀನು ಉದರದಿಂದ ಹೊರ ಬರುವುದಕ್ಕೆ ಮೊದಲೇ ನಿನ್ನನ್ನು ಪವಿತ್ರೀಕರಿಸಿದ್ದೆ; ನಿನ್ನನ್ನು ರಾಷ್ಟ್ರಗಳಿಗೆ ಪ್ರವಾದಿಯನ್ನಾಗಿ ನೇಮಿಸಿದ್ದೇನೆ.” ಅದಕ್ಕೆ ನಾನು, “ಅಯ್ಯೋ, ಸ್ವಾಮಿ ಸರ್ವೇಶ್ವರಾ, ನಾನು ಮಾತುಬಲ್ಲವನಲ್ಲ, ಇನ್ನೂ ತರುಣ,” ಎಂದು ಬಿನ್ನವಿಸಿದೆ. ಆಗ ಸರ್ವೇಶ್ವರ ನನಗೆ, “ನಾನೊಬ್ಬ ತರುಣ ಎನ್ನಬೇಡ; ಯಾರ ಬಳಿಗೆ ನಿನ್ನನ್ನು ಕಳಿಸುತ್ತೇನೋ, ಅವರೆಲ್ಲರ ಬಳಿಗೆ ನೀನು ಹೋಗಲೇಬೇಕು; ನಾನು ಆಜ್ಞಾಪಿಸುವುದನ್ನೆಲ್ಲ ನುಡಿಯಲೇ ಬೇಕು. ಅವರಿಗೆ ಅಂಜಬೇಡ; ನಿನ್ನನ್ನು ಕಾಪಾಡಲು ನಾನೇ ನಿನ್ನೊಂದಿಗೆ ಇರುತ್ತೇನೆ; ಇದು ಸರ್ವೇಶ್ವರನಾದ ನನ್ನ ಮಾತು,” ಎಂದು ಹೇಳಿದರು. ಬಳಿಕ ಸ್ವಾಮಿ ಕೈಚಾಚಿ ನನ್ನ ಬಾಯನ್ನು ಮುಟ್ಟಿ, “ಇಗೋ, ನಿನ್ನ ಬಾಯಲ್ಲಿ ನನ್ನ ಮಾತುಗಳನ್ನು ಇಟ್ಟಿದ್ದೇನೆ; ರಾಷ್ಟ್ರಗಳ ಮೇಲೂ ರಾಜ್ಯಗಳ ಮೇಲೂ ಅಧಿಕಾರವುಳ್ಳವನನ್ನಾಗಿ ನಾನು ನಿನ್ನನ್ನು ಈ ದಿನ ನೇಮಿಸಿದ್ದೇನೆ. ಇದರಿಂದಾಗಿ ಕಿತ್ತುಹಾಕುವ ಹಾಗು ಕೆಡುವುವ, ನಾಶ ಪಡಿಸುವ ಹಾಗು ನೆಲಸಮಮಾಡುವ, ಕಟ್ಟುವ ಹಾಗು ನೆಡುವ ಕಾರ್ಯ ನಿನ್ನದು,” ಎಂದರು.

ಕೀರ್ತನೆ: 71:1-4, 5-6, 15, 17

ಶ್ಲೋಕ: ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯನೀತಿಯನು

1.  ಆಶ್ರಯಕೋರಿ  ಹೇ  ಪ್ರಭೂ,  ನಾ  ಬಂದಿರುವೆ|
ಆಶಾಭಂಗವಾಗದಿರಲೆಂದು  ನಾ  ಬೇಡುವೆ||
ಸತ್ಯಸ್ವರೂಪನೇ,  ನನ್ನ  ಬಿಡಿಸಿ  ರಕ್ಷಿಸಯ್ಯಾ||

2.  ನಿನಾಗಿರು  ನನಗಾಶ್ರಯದುರ್ಗ,  ಕೋಟೆಕೊತ್ತಲು|
ನೀನೇ  ನನ್ನ  ದುರ್ಗ, ಕೋಟೆ,  ನನ್ನನು  ರಕ್ಷಿಸಲು|
ದುರುಳರ  ಕೈಯಿಂದೆನ್ನನು  ದೇವಾ,  ಬಿಡಿಸಯ್ಯಾ||

3.  ಸ್ವಾಮಿ  ದೇವಾ,  ನೀನೇ  ನನ್ನ  ಭರವಸೆ|
ಬಾಲ್ಯದಿಂದಲೂ  ನೀನೇ  ನನ್ನ  ನಂಬಿಕೆ||
ಹುಟ್ಟಿನಿಂದಲೇ  ನಾ  ನಿನಗಂಟಿಕೊಂಡಿರುವೆನಯ್ಯಾ|
ಗರ್ಭದಿಂದಲೇ  ನೀ  ಎನ್ನನು  ಕರೆದುತಂದೆಯಯ್ಯಾ||

4.  ವರ್ಣಿಸುವೆನು  ದಿನವೆಲ್ಲ  ನಿನ್ನ  ನ್ಯಾಯನೀತಿಯನು|
ವಿವರಿಸಲು  ಅಸದಳವಾದ  ನಿನ್ನಗಣಿತ  ರಕ್ಷಣೆಯನು||
ದೇವಾ,  ಬಾಲ್ಯಾರಭ್ಯ,  ನನಗೆ  ಭೋಧಿಸಿರುವೆಯಲ್ಲವೆ?||

ಘೋಷಣೆ                    ಕೀರ್ತನೆ  119:105
ಅಲ್ಲೆಲೂಯ, ಅಲ್ಲೆಲೂಯ!
ನಿನ್ನ  ವಾಕ್ಯ,  ನನಗೆ  ದಾರಿದೀಪ,
ನನ್ನ  ಕಾಲಿನ  ನಡೆಗೆ  ಕೈದೀಪ,,
ಅಲ್ಲೆಲೂಯ!

ಶುಭಸಂದೇಶ: ಮತ್ತಾಯ 13:1-9


ಅದೇ ದಿನ ಯೇಸುಸ್ವಾಮಿ ಮನೆಯಿಂದ ಹೊರಟು ಸರೋವರದ ತೀರದಲ್ಲಿ ಕುಳಿತರು. ಜನರು ತಂಡೋಪತಂಡವಾಗಿ ಕೂಡಿ ಬಂದುದರಿಂದ ದೋಣಿ ಹತ್ತಿ ಕುಳಿತುಕೊಳ್ಳಬೇಕಾಯಿತು. ಜನರು ದಡದಲ್ಲೇ ನಿಂತರು. ಆಗ ಯೇಸು ಅವರಿಗೆ ಅನೇಕ ವಿಷಯಗಳನ್ನು ಸಾಮತಿಯ ರೂಪದಲ್ಲಿ ಹೇಳಿದರು: "ಒಬ್ಬ ರೈತ ಬಿತ್ತುವುದಕ್ಕೆ ಹೋದ. ಬಿತ್ತನೆ ಮಾಡುತ್ತಿದ್ದಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದವು. ಬಿದ್ದದ್ದೇ ಹಕ್ಕಿಗಳು ಬಂದು ಆ ಬೀಜವನ್ನು ತಿಂದುಬಿಟ್ಟವು. ಬೇರೆ ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಕಲ್ಲು ನೆಲದ ಮೇಲೆ ಬಿದ್ದವು. ಅಲ್ಲಿ ಮಣ್ಣು ತೆಳ್ಳಗಿದ್ದುದರಿಂದ ಅವು ಬೇಗನೆ ಮೊಳೆತವು. ಆದರೆ ಬಿಸಿಲೇರಿದಾಗ ಬಾಡಿದವು. ಬೇರು ಬಲವಾಗಿಲ್ಲದ ಕಾರಣ ಒಣಗಿಹೋದವು. ಮತ್ತೆ ಕೆಲವು ಬೀಜಗಳು ಮುಳ್ಳುಪೊದೆಗಳ ನಡುವೆ ಬಿದ್ದವು. ಆ ಪೊದೆಗಳು ಸಸ್ಯಗಳ ಸಮೇತ ಬೆಳೆದು, ಅವುಗಳನ್ನು ಅಡಗಿಸಿ ಬಿಟ್ಟವು. ಇನ್ನೂ ಕೆಲವು ಬೀಜಗಳು ಹದವಾದ ಭೂಮಿಯಲ್ಲಿ ಬಿದ್ದವು. ಅವು ಮೊಳೆತು, ಬೆಳೆದು, ತೆನೆಬಿಟ್ಟವು. ಕೆಲವು ನೂರರಷ್ಟು, ಮತ್ತೆ ಕೆಲವು ಅರವತ್ತರಷ್ಟು, ಇನ್ನು ಕೆಲವು ಮೂವತ್ತರಷ್ಟು ಫಸಲನ್ನು ಕೊಟ್ಟವು. ಕೇಳಲು ಕಿವಿಯುಳ್ಳವನು ಕೇಳಿಸಿಕೊಳ್ಳಲಿ," ಎಂದು ಒತ್ತಿ ಹೇಳಿದರು.




No comments:

Post a Comment