ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

31.01.24 - "ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು. ಆದರೆ ಸ್ವಗ್ರಾಮದಲ್ಲಿ, ಸ್ವಜನರಲ್ಲಿ, ಸ್ವಗೃಹದಲ್ಲಿ ಗೌರವ ದೊರಕದು,"

ಮೊದಲನೆಯ ವಾಚನ: 2 ಸಮುವೇಲ 24:2,9-17


ಅರಸನು ತನ್ನ ಹತ್ತಿರದಲ್ಲಿದ್ದ ಸೇನಾಪತಿಯಾದ ಯೋವಾಬನಿಗೆ, " ಜನಸಂಖ್ಯೆ ಗೊತ್ತಾಗುವ ಹಾಗೆ ನೀನು ದಾನ್ ಊರಿನಿಂದ ಬೇರ್ಷಬದವರೆಗೆ ಸಂಚರಿಸಿ ಇಸ್ರಾಯೇಲ್ ಕುಲಗಳ ಎಲ್ಲ ಜನರನ್ನು ಲೆಕ್ಕಮಾಡಿಕೊಂಡು ಬಾ, " ಎಂದು ಆಜ್ಞಾಪಿಸಿದನು. ಯೋವಾಬನು ಅರಸನಿಗೆ ಒಪ್ಪಿಸಿದ ಜನಗಣತಿಯ ಅಂಕೆಸಂಖ್ಯೆಗಳಲ್ಲಿ ಇಸ್ರಯೇಲರಲ್ಲಿ ಯುದ್ದಕ್ಕೆ ಹೋಗತಕ್ಕ ಸೈನಿಕರು ಎಂಟು ಲಕ್ಷ ಹಾಗು ಯೆಹೂದ್ಯರಲ್ಲಿ ಐದು ಲಕ್ಷ ಇದ್ದರು. ಜನರ ಎಣಿಕೆ ಮಾಡಿಸಿದನಂತರ ದಾವೀದನನ್ನು ಮನಸ್ಸಾಕ್ಷಿ ಕಾಡತೊಡಗಿತು. ಆದುದರಿಂದ ಅವನು, " ಸರ್ವೇಶ್ವರಾ, ನಾನು ಬುದ್ಧಿಹೀನ ಕಾರ್ಯವನ್ನು ಮಾಡಿ ಪಾಪಿಯಾದೆ; ದಯವಿಟ್ಟು ನಿಮ್ಮ ದಾಸನ ಅಪರಾಧವನ್ನು ಕ್ಷಮಿಸಿ, " ಎಂದು ಪ್ರಾರ್ಥಿಸಿದನು. ಅವನು ಮರುದಿನ ಬೆಳಿಗ್ಗೆ ಏಳುವಷ್ಟರಲ್ಲಿ ಅವನ ದರ್ಶಿಯಾದ ಗಾದ್ ಪ್ರವಾದಿಗೆ ಸರ್ವೇಶ್ವರ ದರ್ಶನವಿತ್ತು, "ನೀನು ದಾವೀದನ ಹತ್ತಿರ ಹೋಗಿ ಅವನಿಗೆ, 'ನಾನು ಮೂರು ವಿಧವಾದ ಶಿಕ್ಷೆಗಳನ್ನು ನಿನ್ನ ಮುಂದೆ ಇಡುತ್ತೇನೆ; ಅವುಗಳಲ್ಲಿ ಯಾವುದನ್ನು ನಿನ್ನ ಮೇಲೆ ಬರಮಾಡಿಕೋ ಅದನ್ನು ಆರಿಸಿಕೋ, 'ಎಂದು ಸರ್ವೇಶ್ವರ ನುಡಿಯುತ್ತಾರೆ ಎಂದು ಹೇಳು, " ಎಂದು ಆಜ್ಞಾಪಿಸಿದರು. ಆಗ ಗಾದನು ದಾವೀದನ ಬಳಿಗೆ ಬಂದು, "ನಿಮ್ಮ ನಾಡಿನಲ್ಲಿ ಏಳು ವರ್ಷಗಳ ಬರಗಾಲ ಉಂಟಾಗಬೇಕೋ? ಇಲ್ಲವೆ ನಿನ್ನ ಶತ್ರುಗಳು ನಿನ್ನನ್ನು ಸೋಲಿಸಿ ಮೂರು ತಿಂಗಳ ತನಕ ನಿನ್ನನ್ನು ಓಡಿಸಿಬಿಡಬೇಕೋ? ಇಲ್ಲವೆ ನಿನ್ನ ನಾಡಿನಲ್ಲಿ ಮೂರುದಿನಗಳವರೆಗೂ ಘೋರವ್ಯಾಧಿ ಬರಬೇಕೋ? ನನ್ನನ್ನು ಕಳುಹಿಸಿದವರಿಗೆ ಯಾವ ಉತ್ತರವನ್ನು ತೆಗೆದುಕೊಂಡು ಹೋಗಬೇಕು, ಆಲೋಚಿಸಿ ಹೇಳು, " ಎಂದನು. ಅದಕ್ಕೆ ದಾವೀದನು, " ನಾನು ಬಲು ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದೇನೆ. ಸರ್ವೇಶ್ವರನ ಕೈಯಲ್ಲೆ ಬೀಳುತ್ತೇನೆ; ಅವರು ಕೃಪಾಪೂರ್ಣರು. ಮನುಷ್ಯರ ಕೈಯಲ್ಲಿ ಬೀಳಲೊಲ್ಲೆ, "ಎಂದು ಹೇಳಿ ವ್ಯಾಧಿಯನ್ನು ಆಯ್ದುಕೊಂಡನು. ಆಗ ಸರ್ವೇಶ್ವರ ಇಸ್ರಯೇಲರ ಮೇಲೆ ವ್ಯಾಧಿಯನ್ನು ಬರಮಾಡಿದರು. ಅದು ಹೊತ್ತಾರೆಯಿಂದ ನೇಮಕವಾದ ಹೊತ್ತಿನವರೆಗೂ ಇತ್ತು. ದಾನಿನಿಂದ ಬೇರ್ಷಬದವರೆಗೆ ವಾಸವಾಗಿದ್ದ ಇಸ್ರಯೇಲರಲ್ಲಿ ಎಪ್ಪತ್ತು ಸಾವಿರ ಜನರು ಸತ್ತರು. ದೇವದೂತನು ಜೆರುಸಲೇಮನ್ನೂ ಸಂಹರಿಸುವುದಕ್ಕೆ ಕೈಚಾಚಿದಾಗ ಸರ್ವೇಶ್ವರ ಆ ಕೇಡಿನ ವಿಷಯದಲ್ಲಿ ನೊಂದುಕೊಂಡು, ಸಂಹಾರಕ ದೂತನಿಗೆ, " ಈಗ ಸಾಕು, ನಿನ್ನ ಕೈಯನ್ನು ಹಿಂತೆಗೆ, ," ಎಂದು ಆಜ್ಞಾಪಿಸಿದರು. ಆಗ ಆ ದೂತನು ಯೆಬೂಸಿಯನಾದ ಅರೌನನ ಕಣದಲ್ಲಿದ್ದನು. ದಾವೀದನು ಜನಸಂಹಾರಕ ದೂತನನ್ನು ಕಂಡಾಗ ಸರ್ವೇಶ್ವರನಿಗೆ, "ಮೂರ್ಖತನದಿಂದ ಪಾಪಮಾಡಿದವನು ನಾನು; ಕುರಿಗಳಂತಿರುವ ಈ ಜನರು ಏನು ಮಾಡಿದ್ದಾರೆ? ನಿಮ್ಮ ಕೈ ನನ್ನನ್ನೂ ನನ್ನ ಮನೆಯವರನ್ನೂ ಶಿಕ್ಷಿಸಲಿ, "ಎಂದು ಬೇಡಿಕೊಂಡನು.

ಕೀರ್ತನೆ: 32:1-2,5,6-7
ಶ್ಲೋಕ: ಪ್ರಭು ಮುಂದೆ ನನ್ನ ತಪ್ಪುಗಳನ್ನೊಪ್ಪಿಕೊಳ್ವೆ |

ಯಾರ ಪಾಪ ಪರಿಹಾರವಾಗಿದೆಯೋ|
ಯಾರ ದ್ರೋಹ ವಿಮೋಚನೆಯಾಗಿದೆಯೋ ಅವರೇ ಧನ್ಯರು||
ಯಾರಪರಾಧವನು ಪ್ರಭು ಎಣಿಸಿಲ್ಲವೋ|
ಯಾರಂತರಂಗದಲಿ ಕುತಂತ್ರವಿಲ್ಲವೋ ಅವರೇ ಧನ್ಯರು||

ಆಗ ನಾನು ನಿವೇದಿಸಿದೆ ನಿನಗೆ ನನ್ನ ಪಾಪವನು|
ಮರೆಮಾಡಲಿಲ್ಲ ನಿನ್ನಿಂದ ನನ್ನ ದ್ರೋಹವನು||
ಪ್ರಭು ಮುಂದೆ ನನ್ನ ತಪ್ಪುಗಳನ್ನೊಪ್ಪಿಕೊಳ್ವೆ ಎಂದೆನು|
ಆಗ ನೀ ಪರಿಹರಿಸಿದೆ ನನ್ನ ಪಾಪ ದೋಷವನು||

ಎಂತಲೇ ಭಕ್ತರೆಲ್ಲರು ನಿನ್ನ ಪ್ರಾರ್ಥಿಸಲಿ ಸಕಾಲದಲಿ|
ಹುಚ್ಚುಹೊಳೆ ಉಕ್ಕಿಬಂದಾಗ ನೀ ಸಿಕ್ಕಲಿಲ್ಲವೆನ್ನದಿರಲಿ||
ನೀನೇ ನನಗೆ ಮರೆಯು, ಆಪತ್ತಿನಲಾಸರೆಯು|
ನನ್ನನ್ನು ಆವರಿಸುವ ಉದ್ದಾರಕ ನಾದವು||

ಘೋಷಣೆ ಕೀರ್ತನೆ 110:7,8

ಅಲ್ಲೆಲೂಯ, ಅಲ್ಲೆಲೂಯ!

ಸುಸ್ಥಿರವಾದವು ಆತನ ನಿಯಮ ನಿಬಂಧನೆಗಳು | ಯುಗಯುಗಾಂತರಕು ದೃಢವಾಗಿರುವುವು, ಸತ್ಯನೀತಿಗಳು ಅವುಗಳಿಗೆ ಅಡಿಪಾಯವು ||
ಅಲ್ಲೆಲೂಯ!

ಶುಭಸಂದೇಶ: ಮಾರ್ಕ 6:1-6


ಆ ಕಾಲದಲ್ಲಿ ಯೇಸು ಅಲ್ಲಿಂದ ಹೊರಟು ತಮ್ಮ ಸ್ವಂತ ಊರಿಗೆ ಹೋದರು. ಶಿಷ್ಯರು ಅವರನ್ನು ಹಿಂಬಾಲಿಸಿದರು. ಸಬ್ಬತ್ ದಿನ ಅಲ್ಲಿಯ ಪ್ರಾರ್ಥನಾಮಂದಿರದಲ್ಲಿ ಉಪದೇಶ ಮಾಡತೊಡಗಿದರು ಕಿಕ್ಕಿರಿದು ನೆರೆದಿದ್ದ ಜನರು ಯೇಸುವಿನ ಬೋಧನೆಯನ್ನು ಕೇಳಿ ಬೆರಗಾದರು. "ಇದೆಲ್ಲ ಇವನಿಗೆ ಎಲ್ಲಿಂದ ಬಂದಿತು? ಇವನು ಪಡೆದಿರುವ ಜ್ಞಾನವಾದರೂ ಎಂಥಾದ್ದು? ಇವನಿಂದ ಮಹತ್ಕಾರ್ಯಗಳು ಆಗುವುದಾದರೂ ಹೇಗೆ? ಇವನು ಆ ಬಡಗಿಯಲ್ಲವೆ? ಮರಿಯಳ ಮಗನಲ್ಲವೆ? ಯಕೋಬ, ಯೋಸೆ, ಯೂದ ಮತ್ತು ಸಿಮೋನರ ಸಹೋದರನಲ್ಲವೆ? ಇವನ ಸಹೋದರಿಯರು ಇಲ್ಲಿಯೇ ವಾಸಮಾಡುತ್ತಿಲ್ಲವೆ? " ಎಂದು ಹೇಳುತ್ತಾ ಯೇಸುವನ್ನು ತಾತ್ಸಾರಮಾಡಿದರು. ಆಗ ಯೇಸು, " ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು. ಆದರೆ ಸ್ವಗ್ರಾಮದಲ್ಲಿ, ಸ್ವಜನರಲ್ಲಿ, ಸ್ವಗೃಹದಲ್ಲಿ ಗೌರವ ದೊರಕದು, " ಎಂದರು. ಕೆಲವು ರೋಗಿಗಳ ಮೇಲೆ ಕೈಗಳನ್ನಿರಿಸಿ ಅವರನ್ನು ಗುಣಪಡಿಸಿದ್ದನ್ನು ಬಿಟ್ಟರೆ ಇನ್ನಾವ ಮಹತ್ತಾದ ಕಾರ್ಯಗಳನ್ನೂ ಅವರು ಅಲ್ಲಿ ಮಾಡಲಾಗಲಿಲ್ಲ. ಆ ಜನರ ಅವಿಶ್ವಾವನ್ನು ಕಂಡು ಯೇಸುವಿಗೆ ಬಹಳ ಅಚ್ಚರಿಯಾಯಿತು.

No comments:

Post a Comment