ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

28.01.24 - "ನೀವು ಯಾರೆಂದು ನನಗೆ ಗೊತ್ತು. ದೇವರಿಂದ ಬಂದ ಪರಮ ಪೂಜ್ಯರು ನೀವು,”

ಧರ್ಮೊಪದೇಶಕಾ೦ಡದಿ೦ದ ವಾಚನ 18:15-20

ಮೋಶೆ ಇಸ್ರಯೇಲರಿಗೆ ಹೀಗೆಂದನು: “ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಸಹೋದರರಲ್ಲಿ, ನನ್ನಂಥ ಒಬ್ಬ ಪ್ರವಾದಿಯನ್ನು ನಿಮಗೆ ಏರ್ಪಡಿಸುವರು. ಅವನಿಗೆ ಮಾತ್ರ ಕಿವಿಗೊಡಬೇಕು. ಹೋರೇಬಿನಲ್ಲಿ ನೀವು ಸಭೆಕೂಡಿದ ದಿನದಂದು ಇದನ್ನೇ ನೀವು ಕೋರಿಕೊಂಡಿರಿ; ‘ನಮ್ಮ ದೇವರಾದ ಸರ್ವೇಶ್ವರನ ಸ್ವರವನ್ನು ಇನ್ನು ಕೇಳಲು ಹಾಗು ಈ ಘೋರವಾದ ಅಗ್ನಿಜ್ವಾಲೆಯನ್ನು ಇನ್ನು ನೋಡಲು ನಮಗೆ ಮನಸ್ಸಿಲ್ಲ; ಹಾಗೇನಾದರು ಕೇಳಿ, ನೋಡಿದರೆ ಸತ್ತೇವು’ ಎಂದು ನೀವು ಹೇಳಿದಿರಿ. ಆಗ ಸರ್ವೇಶ್ವರ ನನಗೆ, ‘ಇವರು ಹೇಳಿದ್ದು ಸರಿಯಾಗಿದೆ; ಇವರ ಸ್ವದೇಶದವರಲ್ಲಿ ನಿನ್ನಂಥ ಪ್ರವಾದಿಯನ್ನು ಅವರಿಗೆ ಏರ್ಪಡಿಸುವೆನು; ಅವನ ಬಾಯಿಂದ ನನ್ನ ಮಾತುಗಳನ್ನು ನುಡಿಸುವೆನು; ನಾನು ಅವನಿಗೆ ಆಜ್ಞಾಪಿಸಿದ್ದನ್ನೆಲ್ಲಾ ಅವನು ಅವರಿಗೆ ತಿಳಿಸುವನು. ಅವನು ನನ್ನ ಹೆಸರಿನಲ್ಲಿ ಹೇಳಿದ ಮಾತುಗಳಿಗೆ ಯಾರು ಕಿವಿಕೊಡುವುದಿಲ್ಲವೋ ಅಂಥವರನ್ನು ನಾನು ಶಿಕ್ಷಿಸುವೆನು. ಆದರೆ ಯಾವ ಪ್ರವಾದಿ ನನ್ನಿಂದ ಅಧಿಕಾರ ಹೊಂದದೆ ನಾನು ಪ್ರೇರಣೆಮಾಡದ ಮಾತುಗಳನ್ನು ಸರ್ವೇಶ್ವರನ ಮಾತೆಂದು ಜನರಿಗೆ ತಿಳಿಸುವನೋ, ಇಲ್ಲವೆ ಇತರ ದೇವರುಗಳ ಹೆಸರಿನಲ್ಲಿ ಮಾತಾಡುವನೋ, ಅವನಿಗೆ ಮರಣಶಿಕ್ಷೆಯಾಗಬೇಕು,’ ಎಂದು ಹೇಳಿದರು. 
ಪ್ರಭುವಿನ ವಾಕ್ಯ

ಕೀರ್ತನೆ: 95:1-2, 6-7, 7-9

ಶ್ಲೋಕ: ಆತನ ಕರೆಗೆ ಕಿವಿಗೊಟ್ಟರೆನಿತೋ ಒಳಿತು ನೀವೆಂದೇ. 

ಬನ್ನಿ, ಸ್ತುತಿಗೀತೆ ಹಾಡೋಣ ಬನ್ನಿ, ಪ್ರಭುವಿಗೆ I
ಜಯಘೋಷ ಮಾಡೋಣ ನಮ್ಮ ರಕ್ಷಕ ದೇವನಿಗೆ II
ಆತನ ಸನ್ನಿಧಿ ಸೇರೋಣ ಕೃತಜ್ಞತಾಸ್ತುತಿಯೊಂದಿಗೆ I
ಜಯಜಯಕಾರ ಮಾಡೋಣ ಕೀರ್ತನೆಗಳಿಂದಾತನಿಗೆ II

ಬನ್ನಿ ಆರಾಧಿಸೋಣ ಬನ್ನಿ, ಬಾಗಿ ವಂದಿಸೋಣ I
ನಮ್ಮನು ಸೃಜಿಸಿದಾ ಪ್ರಭುವಿಗೆ ಸಾಷ್ಟಾಂಗವೆರಗೋಣ II
ಆತನೆಮ್ಮ ದೇವರು, ನಾವು ಆತನ ಕೈಮಂದೆ I

ಆತನಿಂದಲೇ ಪಾಲನೆಪೋಷಣೆ ಪಡೆದ ಜನತೆ II
ನೋಡಿದರಾದರೂ ನನ್ನ ಮಹತ್ಕಾರ್ಯಗಳನು I
ಅಲ್ಲವರು ಕೆಣಕಿದರು, ಪರಿಶೋಧಿಸಿದರು ನನ್ನನು II

ಎರಡನೇ ವಾಚನ: 1 ಕೊರಿಂಥಿಯರಿಗೆ 7:32-35 


ಸಹೋದರರೇ, ನೀವು ಚಿಂತೆಯಿಲ್ಲದೆ ಇರಬೇಕೆಂಬುದೇ ನನ್ನ ಇಷ್ಟ. ಮದುವೆಯಾಗದವನು ಪ್ರಭುವಿನ ಸೇವೆಯಲ್ಲಿ ತತ್ಪರನಾಗಿರುತ್ತಾನೆ; ಪ್ರಭುವನ್ನು ಮೆಚ್ಚಿಸಲು ಶ್ರಮಿಸುತ್ತಾನೆ. ಮದುವೆ ಆದವನು ಲೋಕವ್ಯವಹಾರಗಳಲ್ಲಿ ಮಗ್ನನಾಗುತ್ತಾನೆ. ತನ್ನ ಸತಿಯನ್ನು ಮೆಚ್ಚಿಸಲು ಪ್ರಯತ್ನಿಸುತ್ತಾನೆ. ಅಂಥವನು ಉಭಯ ಸಂಕಟಕ್ಕೆ ಸಿಕ್ಕಿಕೊಳ್ಳುತ್ತಾನೆ. ಮದುವೆಯಾಗದ ಮಹಿಳೆ ಅಥವಾ ಕನ್ನಿಕೆ ಪ್ರಭುವಿನ ಸೇವೆಯಲ್ಲಿ ನಿರತಳಾಗಿರುತ್ತಾಳೆ. ದೇಹಾತ್ಮಗಳೆರಡನ್ನೂ ಪ್ರಭುವಿಗೆ ಮೀಸಲಾಗಿಡುತ್ತಾಳೆ. ಆದರೆ ವಿವಾಹಿತ ಸ್ತ್ರೀ ಲೋಕವ್ಯವಹಾರಗಳಲ್ಲಿ ಮಗ್ನಳಾಗಿರುತ್ತಾಳೆ. ತನ್ನ ಪತಿಯನ್ನು ಮೆಚ್ಚಿಸಲು ಪ್ರಯತ್ನಿಸುತ್ತಾಳೆ. ನಿಮ್ಮನ್ನು ಬಂಧಿಸಲು ಅಲ್ಲ, ಬೆಂಬಲಿಸಲು ಇದನ್ನು ಹೇಳುತ್ತಿದ್ದೇನೆ. ನೀವು ಸಜ್ಜನರಾಗಿ ನಡೆದುಕೊಂಡು, ಭಿನ್ನಭಾವವಿಲ್ಲದೆ ಪ್ರಭುವಿನ ಪಾದಸೇವೆ ಮಾಡಬೇಕೆಂಬುದೇ ನನ್ನ ಆಶೆ. ಪ್ರಭುವಿನ ವಾಕ್ಯ

ಮಾರ್ಕನು ಬರೆದ ಶುಭಸ೦ದೇಶ 1:21-28 


ಬಳಿಕ ಅವರೆಲ್ಲರೂ ಕಫೆರ್ನವುಮ್ ಎಂಬ ಊರನ್ನು ಸೇರಿದರು. ಸಬ್ಬತ್‍ ದಿನ ಬಂದ ಕೂಡಲೇ ಯೇಸುಸ್ವಾಮಿ ಪ್ರಾರ್ಥನಾಮಂದಿರಕ್ಕೆ ಹೋಗಿ ಬೋಧಿಸತೊಡಗಿದರು. ಅವರ ಉಪದೇಶವನ್ನು ಕೇಳಿ ಜನರು ಬೆರಗಾದರು. ಏಕೆಂದರೆ ಯೇಸು, ಧರ್ಮಶಾಸ್ತ್ರಿಗಳಂತೆ ಬೋಧಿಸದೆ ಅಧಿಕಾರವಾಣಿಯಿಂದ ಪ್ರಬೋಧಿಸುತ್ತಿದ್ದರು. ಅಲ್ಲಿ ದೆವ್ವ ಹಿಡಿದ ಒಬ್ಬನಿದ್ದನು. ಅವನು, “ನಜರೇತಿನ ಯೇಸುವೇ, ನಿಮಗೇಕೆ ನಮ್ಮ ಗೊಡವೆ? ನೀವು ನಮ್ಮ ವಿನಾಶಕ್ಕಾಗಿ ಬಂದವರೇನು? ನೀವು ಯಾರೆಂದು ನನಗೆ ಗೊತ್ತು. ದೇವರಿಂದ ಬಂದ ಪರಮ ಪೂಜ್ಯರು ನೀವು,” ಎಂದು ಕಿರುಚಿದನು. ಆದರೆ ಯೇಸುಸ್ವಾಮಿ ಅವನನ್ನು ಗದರಿಸಿ, “ಸುಮ್ಮನಿರು, ಇವನನ್ನು ಬಿಟ್ಟು ತೊಲಗು,” ಎಂದು ಆ ದೆವ್ವಕ್ಕೆ ಆಜ್ಞಾಪಿಸಿದರು. ದೆವ್ವವು ಆ ಮನುಷ್ಯನನ್ನು ಒದ್ದಾಡಿಸಿ, ಗಟ್ಟಿಯಾಗಿ ಚೀರುತ್ತಾ ಅವನನ್ನು ಬಿಟ್ಟುಹೋಯಿತು. ಜನರೆಲ್ಲರೂ ಆಶ್ಚರ್ಯಚಕಿತರಾದರು. “ಇದೇನು ಹೊಸ ಬೋಧನೆ!? ಈತ ದೆವ್ವಗಳಿಗೆ ಕೂಡ ಅಧಿಕಾರದಿಂದ ಆಜ್ಞಾಪಿಸುತ್ತಾನೆ; ಅವು ಈತ ಹೇಳಿದ ಹಾಗೆ ಕೇಳುತ್ತವೆಯಲ್ಲ!” ಎಂದು ಪರಸ್ಪರ ಮಾತಾಡಿಕೊಂಡರು. ಕೂಡಲೇ ಗಲಿಲೇಯ ಪ್ರಾಂತ್ಯದ ಎಲ್ಲೆಡೆಗೂ ಯೇಸುವಿನ ಸಮಾಚಾರ ಹಬ್ಬಿಹರಡಿತು. 
ಪ್ರಭು ಕ್ರಿಸ್ತರ ಶುಭಸ೦ದೇಶ

No comments:

Post a Comment