ಮೊದಲನೆಯ ವಾಚನ: 2 ಸಮುವೇಲ 1:1-4, 11-12, 17, 19, 23-27
ಸೌಲನು ಸತ್ತನಂತರ ಸಂಭವಿಸಿದ ಘಟನೆಗಳು: ದಾವೀದನು ಅಮಾಲೇಕ್ಯರನ್ನು ಸದೆಬಡಿದು ಬಂದು ಚಿಕ್ಲಗಿನಲ್ಲಿ ಎರಡು ದಿವಸ ತಂಗಿದ್ದನು. ಮೂರನೆಯ ದಿನ ಸೌಲನ ಪಾಳೆಯದಿಂದ ಒಬ್ಬ ವ್ಯಕ್ತಿ ದಾವೀದನ ಬಳಿಗೆ ಬಂದು ನೆಲದ ಮಟ್ಟಿಗೂ ಬಾಗಿ ನಮಸ್ಕರಿಸಿದನು. ಅವನು ಸಂತಾಪದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು ತಲೆಯ ಮೇಲೆ ಮಣ್ಣು ಹಾಕಿಕೊಂಡಿದ್ದನು. ದಾವೀದನು ಅವನನ್ನು ನೋಡಿ, " ನೀನು ಎಲ್ಲಿಂದ ಬಂದೆ? " ಎಂದು ಕೇಳಿದನು. ಅವನು, " ನಾನು ಇಸ್ರಯೇಲರ ಪಾಳೆಯದಿಂದ ತಪ್ಪಿಸಿಕೊಂಡು ಬಂದೆ, " ಎಂದು ಉತ್ತರ ಕೊಟ್ಟನು. ಆಗ ದಾವೀದನು, " ಏನಾಯಿತೆಂದು ತಿಳಿಸು, " ಎನ್ನಲು ಆ ವ್ಯಕ್ತಿ, " ಇಸ್ರಯೇಲರು ರಣರಂಗದಿಂದ ಓಡಿಹೋದರು; ಅನೇಕರು ಮಡಿದರು. ಸೌಲನೂ ಅವನ ಮಗ ಯೋನಾತಾನನೂ ಮರಣಹೊಂದಿದರು, " ಎಂದು ತಿಳಿಸಿದನು. ಸೌಲನು, ಅವನ ಮಗ ಯೋನಾತಾನನು ಹಾಗು ಸರ್ವೇಶ್ವರನ ಪ್ರಜೆಗಳಾದ ಇಸ್ರಯೇಲರು ಕತ್ತಿಯಿಂದ ಮೃತರಾದದ್ದಕ್ಕಾಗಿ ದಾವೀದನೂ ಅವನ ಜನರೂ ದುಃಖದಿಂದ ತಮ್ಮ ಬಟ್ಟೆಗಳನ್ನು ಹರಿದುಕೊಂಡು ಗೋಳಾಡಿದರು. ಸಾಯಂಕಾಲದವರೆಗೆ ಉಪವಾಸಮಾಡಿದರು. ದಾವೀದನು ಸೌಲ -- ಯೋನಾತಾನರ ಮೇಲೆ ಒಂದು ಶೋಕಗೀತೆಯನ್ನು ರಚಿಸಿದನು: ಮಣ್ಣುಪಾಲಾಗಿದೆ, ಓ ಇಸ್ರಯೇಲರೇ, ನಿಮ್ಮ ವೈಭವ ಆ ಗುಡ್ಡಗಳ ಮೇಲೆ ನೀವು ಮಡಿದದ್ದು ಹೇಗೆ, ಓ ಯುದ್ಧವೀರರೇ? ಸೌಮ್ಯರು, ಅತಿಪ್ರಿಯರು, ಆ ಸೌಲ -- ಯೋನಾತಾನರು ಬಾಳಿನಲು, ಸಾವಿನಲು ಬಿಟ್ಟಗಲದವರು. ಹದ್ದಿಗಿಂತ ಅಧಿಕ ವೇಗ ಅವರದು, ಸಿಂಹಕ್ಕಿಂತ ಹೆಚ್ಚಿನ ಶಕ್ತಿ ಅವರದು! ಸೌಲನಿಗಾಗಿ ಅತ್ತು ಪ್ರಲಾಪಿಸಿರಿ ಇಸ್ರಯೇಲಿನ ಮಹಿಳೆಯರೇ, ಉಲ್ಲಾಸಕರ ರಕ್ತಾಂಬರಗಳ ಉಡಿಸಿದವನು ಅವನೇ ಅಲ್ಲವೆ ನಿಮಗೆ? ಅವುಗಳ ಮೇಲೆ ಸುವರ್ಣಾಂಬರಗಳ ತೊಡಿಸಿದವನು ಆತನೇ ಅಲ್ಲವೆ ನಿಮಗೆ? ಯುದ್ದವೀರರೇ, ಹೇಗೆ ಮಡಿದು ಹೋದಿರಿ ರಣರಂಗದಲಿ? ಯೋನಾತಾನನು ಹತನಾಗಿ ಬಿದ್ದಿಹನಲ್ಲಾ ಬೆಟ್ಟಗುಡ್ಡದಲಿ! ಯೋನಾತಾನನೇ, ಸಹೋದರನೇ, ಮನೋಹರನೇ, ನಿನ್ನ ಮರಣ ತಂದಿದೆ ಅತೀವ ಸಂಕಟ ನನಗೆ. ನನ್ನ ಮೇಲೆ ನಿನಗಿದ್ದ ಪ್ರೀತಿ ಅದೆಷ್ಟು ಆಶ್ಚರ್ಯಕರ! ಸತಿಪ್ರೇಮಕ್ಕಿಂತಲೂ ಅದು ಅಮೋಘಕರ! ಅಯ್ಯೋ, ಆ ಪರಾಕ್ರಮಶಾಲಿಗಳು ಹೇಗೆ ಹತರಾದರು! ಯುದ್ಧಾಯುಧಗಳು ಹೇಗೆ ಹಾಳಾದವು!
ಕೀರ್ತನೆ 80:1-2, 4-6
ಶ್ಲೋಕ: ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು ರಕ್ಷಣೆಯನು.
ಕಿವಿಗೊಟ್ಟು ಆಲಿಸೋ, ಇಸ್ರಯೇಲರ ಮೇಷಪಾಲನೇ|
ಜೋಸೆಫನ ವಂಶಜರನು ಕುರಿಹಿಂಡಂತೆ ಕರೆತಂದವನೇ|
ವಿರಾಜಿಸು ಕೆರೂಬಿಯರ ಮಧ್ಯೆ ಆಸೀನನಾದವನೇ|
ಶೋಭಿಸು ಎಫ್ರೆಯಿಮ್, ಬೆನ್ಯಮಿನ್, ಮನಸ್ಸೆ ಕುಲಗಳ ಮುಂದೆ|
ತೋರ್ಪಡಿಸು ನಿನ್ನ ಶೌರ್ಯವನು, ಬಂದು ಜಯಪ್ರದನಾಗು ನಮಗೆ||
ಸ್ವಾಮಿದೇವನೇ, ಸರ್ವಶಕ್ತನೇ|
ಅದೆನಿತು ಕಾಲ ನೀ ಮುನಿದಿರುವೆ?|
ನಿನ್ನವರ ಮೊರೆಯನಾಲಿಸದಿರುವೆ?||
ರೋದನವನೆ ಅವರಿಗೆ ಅನ್ನವಾಗಿಸಿದೆ|
ಹರಿಯುವ ಕಂಬನಿಯನೆ ಪಾನವಾಗಿಸಿದೆ|
ನೆರೆಯವರಿಗೆ ನಮ್ಮನ್ನು ಕಲಹಕಾರಣವಾಗಿಸಿದೆ|
ಶತ್ರುಗಳ ಅಪಹಾಸ್ಯಕ್ಕೆ ನಮ್ಮನ್ನು ಗುರಿಪಡಿಸಿದೆ||
ಶುಭಸಂದೇಶ ವಾಚನ: ಮಾರ್ಕ 3:20-21
ಆ ಕಾಲದಲ್ಲಿ ಯೇಸು ಮನೆಗೆ ಹೋದಾಗ ಜನರು ಮರಳಿ ಗುಂಪುಗುಂಪಾಗಿ ಬಂದರು. ಯೇಸುವಿಗೂ ಶಿಷ್ಯರಿಗೂ ಊಟಮಾಡಲು ಕೂಡ ಬಿಡುವಿಲ್ಲದೆ ಹೋಯಿತು. " ಈತನಿಗೆ ಹುಚ್ಚು ಹಿಡಿದಿದೆ, " ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಆದ್ದರಿಂದ ಯೇಸುವಿನ ಬಂಧುಗಳು ಯೇಸುವನ್ನು ಹಿಡಿದುತರಲು ಹೊರಟರು.
No comments:
Post a Comment