17.01.24 - "ಸಬ್ಬತ್ ದಿನದಲ್ಲಿ, ಒಬ್ಬನ ಪ್ರಾಣವನ್ನು ಉಳಿಸುವುದೋ ಅಥವಾ ಅಳಿಸುವುದೋ ಹೇಳಿ"

ಮೊದಲನೇ ವಾಚನ: 1 ಸಮುವೇಲ 17:32-33, 37, 40-51

ದಾವೀದನು ಸೌಲನಿಗೆ, “ಆ ಫಿಲಿಷ್ಟಿಯನ ನಿಮಿತ್ತ ಯಾರೂ ಎದೆಗೆಡಬೇಕಾಗಿಲ್ಲ. ತಮ್ಮ ಸೇವಕನಾದ ನಾನೇ ಹೋಗಿ ಅವನೊಡನೆ ಯುದ್ಧ ಮಾಡುತ್ತೇನೆ,” ಎಂದು ಹೇಳಿದನು. ಅದಕ್ಕೆ ಸೌಲನು, “ಅವನೊಡನೆ ಕಾದಾಡಲು ನಿನ್ನಿಂದ ಆಗದು; ನೀನು ಇನ್ನೂ ಹುಡುಗ. ಅವನಾದರೋ ಚಿಕ್ಕಂದಿನಿಂದಲೆ ಯುದ್ಧ ವೀರ,” ಎಂದು ಹೇಳಿದನು. ನನ್ನನ್ನು ಅಂಥ ಕರಡಿ-ಸಿಂಹಗಳ ಉಗುರುಗಳಿಂದ ತಪ್ಪಿಸಿದ ಸರ್ವೇಶ್ವರ ಈ ಫಿಲಿಷ್ಟಿಯನ ಕೈಯಿಂದಲೂ ತಪ್ಪಿಸುವರು,” ಎಂದು ಹೇಳಿದನು. ಅದಕ್ಕೆ ಸೌಲನು, “ಹೋಗು, ಸರ್ವೇಶ್ವರ ನಿನ್ನೊಂದಿಗೆ ಇರಲಿ!” ಎಂದನು. ಕುರಿಕಾಯುವ ತನ್ನ ಕೋಲನ್ನೇ ತೆಗೆದುಕೊಂಡು ಹೊರಟನು. ಒಂದು ಹಳ್ಳಕ್ಕೆ ಹೋಗಿ ಐದು ನುಣುಪು ಕಲ್ಲುಗಳನ್ನು ಆರಿಸಿಕೊಂಡನು. ಕುರುಬರ ಪದ್ಧತಿಯಂತೆ ಅವುಗಳನ್ನು ತನ್ನ ಸೊಂಟ ಚೀಲದಲ್ಲಿ ಹಾಕಿಕೊಂಡನು. ಕೈಯಲ್ಲಿ ಕವಣೆಯನ್ನು ಹಿಡಿದು, ಆ ಫಿಲಿಷ್ಟಿಯನನ್ನು ಎದುರಿಸಲು ಹೋದನು. ಇತ್ತ ಫಿಲಿಷ್ಟಿಯನು ದಾವೀದನ ಕಡೆ ಧಾವಿಸಿ ಬಂದನು. ಗುರಾಣಿ ಹೊರುವವನು ಅವನ ಮುಂದೆ ಇದ್ದನು. ಫಿಲಿಷ್ಟಿಯನು ದಾವೀದನನ್ನು ಸವಿೂಪಿಸಿ ನೋಡಿದನು. ಕೆಂಬಣ್ಣದವನೂ ಸುಂದರನೂ ಆದ ಆ ಯುವಕನನ್ನು ದಿಟ್ಟಿಸಿ ತಾತ್ಸಾರದಿಂದ, “ನೀನು ಕೋಲು ಹಿಡಿದು ನನ್ನ ಬಳಿಗೆ ಬರಲು ನಾನು ನಾಯಿಯೆಂದು ತಿಳಿದುಕೊಂಡೆಯಾ?” ಎಂದು ಹೇಳಿ ಅವನನ್ನು ತನ್ನ ದೇವರ ಹೆಸರಿನಲ್ಲಿ ಶಪಿಸಿದನು. “ಇಲ್ಲಿ ಬಾ; ನಿನ್ನ ಮಾಂಸವನ್ನು ಆಕಾಶದ ಪಕ್ಷಿಗಳಿಗೆ, ಕಾಡಿನ ಮೃಗಗಳಿಗೆ ಹಂಚಿಕೊಡುತ್ತೇನೆ,” ಎಂದನು. ಅದಕ್ಕೆ ದಾವೀದನು, “ನೀನು ಈಟಿ, ಕತ್ತಿ, ಭರ್ಜಿಗಳೊಡನೆ ನನ್ನ ಬಳಿಗೆ ಬರುತ್ತಿರುವೆ; ನೀನು ಹೀಯಾಳಿಸಿದ ಸೇನಾಧೀಶ್ವರರು ಹಾಗು ಇಸ್ರಯೇಲ್ ಯೋಧರ ದೇವರು ಆದಂಥ ಸರ್ವೇಶ್ವರನ ನಾಮದೊಡನೆ ನಾನು ನಿನ್ನ ಬಳಿಗೆ ಬರುತ್ತಿದ್ದೇನೆ. ಅವರು ಈ ದಿನ ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಡುವರು. ನಾನು ನಿನ್ನನ್ನು ಕೊಂದು, ನಿನ್ನ ತಲೆಯನ್ನು ಕಡಿದು, ಫಿಲಿಷ್ಟಿಯ ಸೈನ್ಯದ ಶವಗಳನ್ನು ಆಕಾಶದ ಪಕ್ಷಿಗಳಿಗೂ ವನ್ಯ ಮೃಗಗಳಿಗೂ ಹಂಚಿಕೊಡುವೆನು. ಇದರಿಂದ ಇಸ್ರಯೇಲರ ಸಂಗಡ ದೇವರಿದ್ದಾರೆಂಬುದು ಜಗತ್ತಿಗೆಲ್ಲಾ ತಿಳಿದು ಬರುವುದು. ಈಟಿ, ಕತ್ತಿಗಳಿಲ್ಲದೆ ಸರ್ವೇಶ್ವರ ರಕ್ಷಿಸಬಲ್ಲನೆಂಬುದು ಇಲ್ಲಿ ಕೂಡಿರುವವರೆಲ್ಲರಿಗೆ ಗೊತ್ತಾಗುವುದು. ಏಕೆಂದರೆ ಸಮರದ ಪರಿಣಾಮ ಇರುವುದು ಸರ್ವೇಶ್ವರನ ಕೈಯಲ್ಲಿ; ಅವರು ತಪ್ಪದೆ ನಿಮ್ಮನ್ನು ನಮ್ಮ ಕೈಗೆ ಒಪ್ಪಿಸಿಕೊಡುವರು,” ಎಂದನು. ಕೂಡಲೆ ಆ ಫಿಲಿಷ್ಟಿಯನು ದಾವೀದನ ಮೇಲೆ ಎರಗಲು ಮತ್ತೆ ಧಾವಿಸಿದನು. ದಾವೀದನೂ ಫಿಲಿಷ್ಟಿಯರ ಸೈನ್ಯದ ಕಡೆಗೆ ನುಗ್ಗಿ ಆ ಫಿಲಿಷ್ಟಿಯನನ್ನು ಎದುರುಗೊಳ್ಳಲು ಓಡಿದನು. ಕೈಯನ್ನು ಚೀಲದಲ್ಲಿ ಹಾಕಿ, ಒಂದು ಕಲ್ಲನ್ನು ತೆಗೆದು, ಅವನ ಕಣ್ಣಿಗೆ ಗುರಿಯಿಟ್ಟು, ಕವಣೆಯನ್ನು ಬೀಸಿ ಹೊಡೆದನು. ಆ ಕಲ್ಲು ಅವನ ಹಣೆಯನ್ನು ಹೊಕ್ಕಿತು. ಅವನು ಮುಖ ಕೆಳಗಾಗಿ ನೆಲಕ್ಕೆ ಉರುಳಿದನು. ಕೂಡಲೆ ದಾವೀದನು ಹೋಗಿ ಆ ಫಿಲಿಷ್ಟಿಯನ ಮೇಲೆ ನಿಂತು, ಅವನ ಕತ್ತಿಯನ್ನೇ ಹಿರಿದು, ಅವನ ತಲೆಯನ್ನು ಕಡಿದು ಸಾಯಿಸಿದನು. ಹೀಗೆ ದಾವೀದನು ಕತ್ತಿಯಿಂದಲ್ಲ, ಬರೀ ಒಂದು ಕವಣೆಕಲ್ಲಿನಿಂದ ಆ ಫಿಲಿಷ್ಟಿಯನನ್ನು ಸೋಲಿಸಿ ಕೊಂದುಹಾಕಿದನು. ತಮ್ಮ ರಣವೀರನು ಸತ್ತು ಹೋದದ್ದನ್ನು ಕಂಡು ಫಿಲಿಷ್ಟಿಯರು ಓಡಿ ಹೋದರು.

ಕೀರ್ತನೆ: 144:1-2, 9-10
ಶ್ಲೋಕ: ಸ್ತುತಿಸ್ತೋತ್ರ ಪ್ರಭುವಿಗೆ, ನನ್ನ ಆಶ್ರಯ ದುರ್ಗಕೆ

ಶುಭಸಂದೇಶ: ಮಾರ್ಕ 3:1-6

ಯೇಸುಸ್ವಾಮಿ ಪ್ರಾರ್ಥನಾಮಂದಿರಕ್ಕೆ ಪುನಃ ಹೋದರು. ಅಲ್ಲಿ ಒಬ್ಬ ಬತ್ತಿದ ಕೈಯುಳ್ಳವನು ಇದ್ದನು. ಅವನನ್ನು ಸಬ್ಬತ್‍ ದಿನದಲ್ಲಿ ಗುಣಪಡಿಸಿದ್ದೇ ಆದರೆ ಯೇಸುವಿನ ವಿರುದ್ಧ ತಪ್ಪು ಹೊರಿಸಬಹುದೆಂಬ ಉದ್ದೇಶದಿಂದ ಕೆಲವರು ಹೊಂಚು ಹಾಕುತ್ತಿದ್ದರು. ಯೇಸು ಬತ್ತಿದ ಕೈಯುಳ್ಳವನಿಗೆ, “ಎದ್ದು ಮುಂದಕ್ಕೆ ಬಾ,” ಎಂದರು. ಬಳಿಕ ಅಲ್ಲಿದ್ದವರನ್ನು ಉದ್ದೇಶಿಸಿ, “ಸಬ್ಬತ್ ದಿನದಲ್ಲಿ ಏನು ಮಾಡುವುದು ಧರ್ಮ? ಒಳಿತನ್ನೋ ಅಥವಾ ಕೆಡುಕನ್ನೋ? ಒಬ್ಬನ ಪ್ರಾಣವನ್ನು ಉಳಿಸುವುದೋ ಅಥವಾ ಅಳಿಸುವುದೋ ಹೇಳಿ,” ಎಂದು ಕೇಳಲು ಅವರು ಮಾತೇ ಎತ್ತಲಿಲ್ಲ. ಯೇಸು ಸುತ್ತಲೂ ಇದ್ದವರನ್ನು ಕೋಪದಿಂದ ದಿಟ್ಟಿಸಿ, ಅವರ ಹೃದಯ ಕಲ್ಲಾಗಿರುವುದನ್ನು ಕಂಡು, ಮನನೊಂದು, ಬತ್ತಿದ ಕೈಯುಳ್ಳವನಿಗೆ, “ನಿನ್ನ ಕೈಯನ್ನು ಚಾಚು,” ಎಂದರು. ಅವನು ಚಾಚಿದನು, ಅದು ಸಂಪೂರ್ಣವಾಗಿ ಸ್ವಸ್ಥವಾಯಿತು. ಫರಿಸಾಯರು ಅಲ್ಲಿಂದ ಹೊರಗೆ ಹೋದರು. ಕೂಡಲೇ ಹೆರೋದಿಯರೊಡನೆ ಸೇರಿಕೊಂಡು ಯೇಸುವನ್ನು ಕೊಲೆ ಮಾಡಲು ಒಳಸಂಚು ಹೂಡಿದರು.

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...