ಮೊದಲನೇಯ ವಾಚನ : 2 ಸಮುವೇಲ 7:4-17
ಆದರೆ ಅದೇ ರಾತ್ರಿ ಸರ್ವೇಶ್ವರ ನಾತಾನನಿಗೆ ಹೀಗೆಂದು ಆಜ್ಞಾಪಿಸಿದರು: ನೀನು ಹೋಗಿ ನನ್ನ ದಾಸ ದಾವೀದನಿಗೆ ತಿಳಿಸಬೇಕಾದುದು ಇದು: ‘ನೀನು ನನಗೊಂದು ದೇವಾಲಯವನ್ನು ಕಟ್ಟಬೇಕೆಂದಿರುವೆಯೋ? ನಾನು ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಬರಮಾಡಿದಂದಿನಿಂದ ಇಂದಿನವರೆಗೆ ದೇವಾಲಯದಲ್ಲಿ ವಾಸಮಾಡಲಿಲ್ಲ; ಗುಡಾರದಲ್ಲೇ ವಾಸಿಸುತ್ತಾ ಅವರೊಡನೆ ಸಂಚರಿಸಿದೆ. ಹೀಗೆ ಇಸ್ರಯೇಲರ ಮಧ್ಯೆ ಸಂಚರಿಸುತ್ತಿದ್ದಾಗ ನನ್ನ ಜನರಾದ ಅವರನ್ನು ಪಾಲಿಸುವುದಕ್ಕೆ ಕುಲನಾಯಕನನ್ನು ನೇಮಿಸಿದೆ. ಅವರಾರಿಂದಲೂ ‘ನೀವೇಕೆ ನನಗೆ ದೇವದಾರು ಮರದಿಂದ ದೇವಾಲಯವನ್ನು ಕಟ್ಟಿಸಲಿಲ್ಲ?’ ಎಂದು ಕೇಳಿದ್ದಿಲ್ಲ!” “ಇದಲ್ಲದೆ, ನೀನು ನನ್ನ ದಾಸ ದಾವೀದನಿಗೆ ಹೇಳು, ಸರ್ವಶಕ್ತ ಸರ್ವೇಶ್ವರನಾದ ನಾನೇ ಹೀಗೆ ಹೇಳಿದೆಯೆಂದು ತಿಳಿಸು: ‘ಕುರಿಗಳ ಹಿಂದೆ ತಿರುಗಾಡುತ್ತಿದ್ದ ನಿನ್ನನ್ನು ಅಡವಿಯಿಂದ ಆಯ್ದುಕೊಂಡು ನನ್ನ ಪ್ರಜೆ ಇಸ್ರಯೇಲರ ಮೇಲೆ ನಾಯಕನನ್ನಾಗಿ ನೇಮಿಸಿದೆ. ನೀನು ಹೋದ ಕಡೆಯೆಲ್ಲಾ ನಿನ್ನ ಸಂಗಡ ಇದ್ದೆ. ನಿನ್ನ ಶತ್ರುಗಳನ್ನೆಲ್ಲ ನಿನ್ನ ಕಣ್ಮುಂದೆಯೆ ಸದೆ ಬಡಿದೆ. ಜಗದ ಮಹಾತ್ಮರ ಹೆಸರಿನಂತೆ ನಿನ್ನ ಹೆಸರನ್ನು ಪ್ರಸಿದ್ಧಗೊಳಿಸುವೆನು. ನನ್ನ ಪ್ರಜೆ ಇಸ್ರಯೇಲರಿಗೆ ಒಂದು ಸ್ಥಳವನ್ನು ಕೊಟ್ಟು ಅದರಲ್ಲಿ ಅವರನ್ನು ನೆಲೆಗೊಳಿಸುವೆನು. ಇನ್ನು ಮೇಲೆ ಅವರು ಯಾವ ಭಯವೂ ಇಲ್ಲದೆ ವಾಸಿಸುವರು. ಪೂರ್ವಕಾಲದಲ್ಲಿ ನಾನು ನನ್ನ ಜನರಿಗೆ ನ್ಯಾಯಸ್ಥಾಪಕರನ್ನು ನೇಮಿಸಿದೆ. ಅಲ್ಲಿಂದೀಚಿಗೆ ಇಸ್ರಯೇಲರು ಶೋಷಣೆಗೆ ಗುರಿಯಾದರು. ಆದರೆ ಇನ್ನು ಮೇಲೆ ಆಗದು. ನೀನು ಶತ್ರುಭಯವಿಲ್ಲದೆ ಸುಖದಿಂದಿರುವಂತೆ ಮಾಡುವೆನು. ಅದು ಮಾತ್ರ ಅಲ್ಲ, ಸರ್ವೇಶ್ವರನಾದ ನಾನು ನಿನಗಾಗಿ ಒಂದು ಮನೆತನವನ್ನು ಕಟ್ಟುವೆನೆಂದು ಮಾತು ಕೊಡುತ್ತೇನೆ. ನಿನ್ನ ಆಯುಷ್ಕಾಲ ಮುಗಿದು ನೀನು ನಿನ್ನ ಪೂರ್ವಜರನ್ನು ಸೇರಿ ವಿಶ್ರಮಿಸುವಾಗ ನಿನ್ನ ಮಕ್ಕಳಲ್ಲಿ ಒಬ್ಬನನ್ನು ನಿನಗೆ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು. ಅವನು ನನ್ನ ಹೆಸರಿನಲ್ಲಿ ಒಂದು ದೇವಾಲಯವನ್ನು ಕಟ್ಟುವನು. ನಾನು ಅವನ ಸಿಂಹಾಸನವನ್ನು ಸ್ಥಿರಪಡಿಸುವೆನು. ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು. ಅವನು ತಪ್ಪುಮಾಡಿದಾಗ, ಮಗನಿಗೆ ತಂದೆ ಬೆತ್ತದ ರುಚಿ ತೋರಿಸುವಂತೆ ನಾನು ಅವನನ್ನು ಶಿಕ್ಷಿಸುವೆನು. ಆದರೆ ನನ್ನ ಕೃಪೆ, ನಿನ್ನ ಕಣ್ಮುಂದೆಯೇ ಸೌಲನನ್ನು ಬಿಟ್ಟು ಹೋದ ಹಾಗೆ, ಅವನನ್ನು ಬಿಟ್ಟು ಹೋಗುವುದಿಲ್ಲ. ನಿನ್ನ ಮನೆತನವೂ ಅರಸುತನವೂ ಸದಾಕಾಲ ಸ್ಥಿರವಾಗಿರುವುವು; ನಿನ್ನ ಸಿಂಹಾಸನ ಶಾಶ್ವತವಾಗಿರುವುದು.” ನಾತಾನನು ತನಗಾದ ದರ್ಶನದ ಈ ಮಾತುಗಳನ್ನೆಲ್ಲ ದಾವೀದನಿಗೆ ಹೇಳಿದನು.
ಕೀರ್ತನೆ: 89:4-5, 27-28, 29-30
ಶ್ಲೋಕ : ಮೆಲ್ಕಿಸದೆಕ್ ಪರಂಪರೆಯ ಯಾಜಕ ನೀ ನಿರುತ
ಶುಭಸಂದೇಶ: ಮಾರ್ಕ 4:1-20
ಯೇಸುಸ್ವಾಮಿ ಗಲಿಲೇಯ ಸರೋವರದ ತೀರದಲ್ಲಿ ಮತ್ತೆ ಬೋಧಿಸಲಾರಂಭಿಸಿದರು. ಜನರು ಕಿಕ್ಕಿರಿದು ಸುತ್ತಲೂ ನೆರೆದುಬಂದಿದ್ದರು. ಆದುದರಿಂದ ಅವರು ಸರೋವರದಲ್ಲಿದ್ದ ದೋಣಿಯೊಂದನ್ನು ಹತ್ತಿ ಕುಳಿತರು. ಜನರು ದಡದಲ್ಲೇ ಉಳಿದರು. ಆಗ ಯೇಸು ಅವರಿಗೆ ಅನೇಕ ವಿಷಯಗಳನ್ನು ಸಾಮತಿಗಳ ಮೂಲಕ ಬೋಧಿಸುತ್ತಾ ಹೀಗೆಂದರು: “ಕೇಳಿ, ಒಬ್ಬ ರೈತ ಬಿತ್ತುವುದಕ್ಕೆ ಹೊರಟ. ಬಿತ್ತನೆ ಮಾಡುತ್ತಾ ಇದ್ದಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದವು. ಬಿದ್ದುದೇ ಹಕ್ಕಿಗಳು ಬಂದು ಅವುಗಳನ್ನು ತಿಂದು ಬಿಟ್ಟವು. ಬೇರೆ ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಕಲ್ಲುನೆಲದ ಮೇಲೆ ಬಿದ್ದವು. ಅಲ್ಲಿ ಮಣ್ಣು ಬಹಳ ತೆಳ್ಳಗಿದ್ದುದರಿಂದ ಅವು ಬೇಗನೆ ಮೊಳೆತವು; ಬಿಸಿಲೇರಿದಾಗ ಬಾಡಿದವು; ಆಳವಾಗಿ ಬೇರೂರಲು ಆಗದ ಕಾರಣ ಅವು ಒಣಗಿ ಹೋದವು. ಇನ್ನು ಕೆಲವು ಬೀಜಗಳು ಮುಳ್ಳು ಪೊದೆಗಳ ನಡುವೆ ಬಿದ್ದವು. ಮುಳ್ಳು ಪೊದೆಗಳು ಸಸ್ಯಗಳ ಸಮೇತ ಅವುಗಳನ್ನು ಅದುಮಿಬಿಟ್ಟವು. ಆದುದರಿಂದ ಅವು ಫಲ ಕೊಡಲಿಲ್ಲ. ಇನ್ನೂ ಕೆಲವು ಬೀಜಗಳು ಹದವಾದ ಭೂಮಿಯಲ್ಲಿ ಬಿದ್ದವು. ಅವು ಮೊಳೆತು, ಬೆಳೆದು ತೆನೆಬಿಟ್ಟವು. ಅವುಗಳಲ್ಲಿ ಕೆಲವು ಮೂವತ್ತರಷ್ಟು, ಕೆಲವು ಅರವತ್ತರಷ್ಟು ಮತ್ತೆ ಕೆಲವು ನೂರರಷ್ಟು ಫಸಲನ್ನು ಕೊಟ್ಟವು.” ಈ ಸಾಮತಿಯನ್ನು ಹೇಳಿದ ಬಳಿಕ ಯೇಸು, “ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ,” ಎಂದರು. ಈ ಉಪದೇಶವನ್ನು ಕೇಳಿದವರಲ್ಲಿ ಕೆಲವರು, ಯೇಸುಸ್ವಾಮಿ ಒಬ್ಬರೇ ಇದ್ದಾಗ, ಹನ್ನೆರಡು ಮಂದಿ ಶಿಷ್ಯರೊಡನೆ ಬಂದು, ಅವರು ಹೇಳಿದ ಸಾಮತಿಗಳನ್ನು ವಿವರಿಸಬೇಕೆಂದು ಕೇಳಿಕೊಂಡರು. ಅದಕ್ಕೆ ಯೇಸು, “ದೇವರ ಸಾಮ್ರಾಜ್ಯದ ರಹಸ್ಯವನ್ನು ನಿಮಗೆ ತಿಳಿಸಲಾಗಿದೆ. ಮಿಕ್ಕವರಿಗಾದರೋ ಅದೆಲ್ಲವೂ ಸಾಮತಿಗಳ ರೂಪದಲ್ಲಿ ಮರೆಯಾಗಿದೆ. ಏಕೆಂದರೆ. ‘ಕಣ್ಣಾರೆ ನೋಡಿಯೂ ಅವರು ಕಾಣರು; ಕಿವಿಯಾರೆ ಕೇಳಿಯೂ ಅವರು ಗ್ರಹಿಸರು. ಕಂಡು ಗ್ರಹಿಸಿದರೆ ಅವರು ದೇವರತ್ತ ತಿರುಗಿಯಾರರು; ಪಾಪಕ್ಷಮೆ ಹೊಂದಿಯಾರರು,” ಎಂದರು. ಅನಂತರ ಯೇಸುಸ್ವಾಮಿ ಅವರಿಗೆ, “ಈ ಸಾಮತಿಯನ್ನು ನೀವು ಅರ್ಥಮಾಡಿಕೊಳ್ಳಲಿಲ್ಲವೇ? ಹಾಗಾದರೆ ಬೇರೆಲ್ಲಾ ಸಾಮತಿಗಳನ್ನು ಹೇಗೆ ಅರ್ಥಮಾಡಿಕೊಳ್ಳುವಿರಿ? ಈ ಸಾಮತಿಯಲ್ಲಿ, ಬಿತ್ತುವವನು ‘ದೇವರ ಸಂದೇಶ’ ಎಂಬ ಬೀಜವನ್ನು ಬಿತ್ತುತ್ತಾನೆ. ಕೆಲವರು ದೇವರ ಸಂದೇಶವನ್ನು ಕೇಳುತ್ತಾರೆ; ಸೈತಾನನು ತಕ್ಷಣವೇ ಬಂದು ಆ ಸಂದೇಶವನ್ನು ತೆಗೆದು ಬಿಡುತ್ತಾನೆ. ಕಾಲ್ದಾರಿಯಲ್ಲಿ ಬಿದ್ದ ಬೀಜಕ್ಕೆ ಹೋಲಿಕೆಯಾಗಿರುವವರು ಇವರೇ. ಇನ್ನೂ ಕೆಲವರು ದೇವರ ಸಂದೇಶವನ್ನು ಕೇಳಿದ ಕೂಡಲೇ ಅದನ್ನು ಸಂತಸದಿಂದ ಸ್ವೀಕರಿಸುತ್ತಾರೆ. ಆದರೆ ಅವರಲ್ಲಿ ಅದು ಆಳವಾಗಿ ಬೇರೂರದ ಕಾರಣ ಕೊಂಚ ಕಾಲ ಮಾತ್ರ ಉಳಿಯುತ್ತದೆ. ದೇವರ ಸಂದೇಶದ ನಿಮಿತ್ತ ಕಷ್ಟಕೋಟಲೆಗಳು ಬಂದೊದಗಿದಾಗ ಕೂಡಲೇ ಎಡವಿ ಬೀಳುತ್ತಾರೆ. ಇವರೇ ಕಲ್ಲುನೆಲದ ಮೇಲೆ ಬಿದ್ದ ಬೀಜಕ್ಕೆ ಸಮಾನರಾದವರು. ಇನ್ನೂ ಕೆಲವರು ದೇವರ ಸಂದೇಶವನ್ನು ಕೇಳುತ್ತಾರೆ. ಆದರೆ ಅವರೊಳಗೆ ಇರುವ ಪ್ರಾಪಂಚಿಕ ಚಿಂತನೆಗಳೂ ಐಶ್ವರ್ಯದ ವ್ಯಾಮೋಹಗಳೂ ಇನ್ನಿತರ ಅಭಿಲಾಷೆಗಳೂ ದೇವರ ಸಂದೇಶವನ್ನು ಅದುಮಿ, ಅದು ಫಲ ಬಿಡದಂತೆ ಮಾಡುತ್ತವೆ. ಇವರೇ ಮುಳ್ಳು ಪೊದೆಗಳ ನಡುವೆ ಬಿದ್ದ ಬೀಜಕ್ಕೆ ಅನುರೂಪ ಆದವರು. ಮತ್ತೆ ಕೆಲವರಾದರೋ ದೇವರ ಸಂದೇಶವನ್ನು ಕೇಳಿ ಅದನ್ನು ಸ್ವಾಗತಿಸುತ್ತಾರೆ. ಅಂಥವರಲ್ಲಿ ಕೆಲವರು ಮೂವತ್ತರಷ್ಟು, ಕೆಲವರು ಅರವತ್ತರಷ್ಟು, ಇನ್ನು ಕೆಲವರು ನೂರರಷ್ಟು ಫಲಕೊಡುತ್ತಾರೆ. ಇವರೇ ಹದವಾದ ಭೂಮಿಯಲ್ಲಿ ಬಿದ್ದ ಬೀಜಕ್ಕೆ ಸಮಾನರು,” ಎಂದರು.
No comments:
Post a Comment