ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

30.01.24

ಮೊದಲನೆಯ ವಾಚನ: 2 ಸಮುವೇಲ 18:9-10,14,24-25, 30-19:3

ಅಬ್ಷಾಲೋಮನು ದಾವೀದನ ಸೇವಕರ ಕೈಗೆ ಸಿಕ್ಕಿದನು. ಅದು ಹೇಗೆಂದರೆ, ಅವನು ಹತ್ತಿದ್ದ ಹೇಸರುಗತ್ತೆ ಒಂದು ದೊಡ್ಡ ಓಕ್ ಮರದ ಕೆಳಗೆ ಹಾದುಹೋಗುವಾಗ ಅವನ ತಲೆ ನಿಬಿಡವಾದ ಅದರ ಕೊಂಬೆಗಳಲ್ಲಿ ಸಿಕ್ಕಿಕೊಂಡಿತು; ಆ ಹೇಸರುಗತ್ತೆ ಅವನ ಕೆಳಗಿನಿಂದ ಓಡಿಹೋಯಿತು. ಅವನು ಭೂಮಿಗೂ ಆಕಾಶಕ್ಕೂ ಮಧ್ಯ ನೇತಾಡಬೇಕಾಯಿತು. ಇದನ್ನು ನೋಡಿದ ಒಬ್ಬ ವ್ಯಕ್ತಿ ಯೋವಾಬನಿಗೆ, " ನೋಡಿ, ಆ ಓಕ್ ಮರದಲ್ಲಿ ಅಬ್ಷಾಲೋಮನು ನೇತಾಡುತ್ತಿರುವುದನ್ನು ಕಂಡೆ, " ಎಂದು ಹೇಳಿದನು. ಆಗ ಯೋವಾಬನು, "ಇಲ್ಲಿ ನಿಂತು ನಿನ್ನೊಡನೆ ಸಮಯ ಕಳೆಯಲಾರೆ, " ಎಂದು ಹೇಳಿ ಕೂಡಲೆ ಕೈಯಲ್ಲಿ ಮೂರು ಈಟಿಗಳನ್ನು ತೆಗೆದುಕೊಂಡು ಹೋಗಿ ಅಬ್ಷಾಲೋಮನ ಎದೆಗೆ ತಿವಿದನು. ದಾವೀದನು ಎರಡು ಬಾಗಿಲುಗಳ ಮಧ್ಯೆ ಕುಳಿತುಕೊಂಡಿದ್ದನು. ಅಷ್ಟರಲ್ಲಿ ಕಾವಲುಗಾರನು ಗೋಪುರದ ಮಾಳಿಗೆಯನ್ನು ಹತ್ತಿ ಪಗಾರದ ಬಳಿಯಲ್ಲಿ ನಿಂತು ನೋಡಲು ಒಂಟಿಗನಾಗಿ ಬರುವ ಒಬ್ಬ ವ್ಯಕ್ತಿಯನ್ನು ಕಂಡನು. ಅವನು ಕೂಡಲೇ ದಾವೀದನಿಗೆ ತಿಳಿಸಿದನು. ದಾವೀದನು, "ಅವನು ಒಬ್ಬನಾಗಿ ಇದ್ದರೆ ಸಮಾಚಾರ ತರುವವನಾಗಿರಬಹುದು, " ಎಂದನು. ಆ ವ್ಯಕ್ತಿ ಬರುಬರುತ್ತಾ ಸಮೀಪವಾದನು. ಆಗ ಅರಸನು, " ನೀನು ಇತ್ತ ನಿಲ್ಲು, " ಎಂದು ಆಜ್ಞಾಪಿಸಿದನು; ಅವನು ಅಂತೆಯೇ ನಿಂತನು. ಅಷ್ಟರಲ್ಲಿ ಆ ಕೂಷ್ಟನೂ ಬಂದು, "ನನ್ನ ಒಡೆಯರಾದ ಅರಸರಿಗೆ ಶುಭವರ್ತಮಾನ ತಂದಿದ್ದೇನೆ. ಸರ್ವೇಶ್ವರಸ್ವಾಮಿ ನಿಮಗೆ ವಿರುದ್ಧ ಬಂಡೆದ್ದವರೆಲ್ಲರಿಗೂ ಮುಯ್ಯಿತೀರಿಸಿದ್ದಾರೆ, " ಎಂದನು. ಅರಸನು ಅವನನ್ನು, " ಆ ಯುವಕ ಅಬ್ಷಾಲೋಮನು ಸುರಕ್ಷಿತನಾಗಿದ್ದಾನೆಯೋ? " ಎಂದು ಕೇಳಿದನು. ಅವನು "ನನ್ನ ಒಡೆಯರಾದ ಅರಸರ ಶತ್ರುಗಳಿಗೂ ಅವರಿಗೆ ಕೇಡುಮಾಡುವುದಕ್ಕೆ ನಿಂತವರೆಲ್ಲರಿಗೂ ಆ ಯುವಕನಿಗಾದ ಗತಿಯೇ ಆಗಲಿ! " ಎಂದು ಉತ್ತರಕೊಟ್ಟನು. ಇದನ್ನು ಕೇಳಿದ್ದೇ ಅರಸನ ಎದೆಯೊಡೆಯಿತು. ಅವನು, " ನನ್ನ ಮಗನೇ, ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗನಾದ ಅಬ್ಷಾಲೋಮನೇ, ನಿನಗೆ ಬದಲಾಗಿ ನಾನು ಸತ್ತಿದ್ದರೆ ಎಷ್ಟೋ ಒಳ್ಳೆಯದಾಗುತ್ತಿತ್ತು. ಅಬ್ಷಾಲೋಮನೇ, ನನ್ನ ಮಗನೇ, ಮಗನೇ " ಎಂದು ಕೂಗಿ ಗೋಳಿಡುತ್ತಾ ಹೆಬ್ಬಾಗಿಲಿನ ಮೇಲಿದ್ದ ಕೋಣೆಗೆ ಹೋದನು. ಅರಸನು ಅಬ್ಷಾಲೋಮನಿಗಾಗಿ ಅಳುತ್ತಾ ಗೋಳಾಡುತ್ತಾ ಇದ್ದಾನೆಂಬ ಸಮಾಚಾರ ಯೋವಾಬನಿಗೆ ಮುಟ್ಟಿತು. ಅರಸನು ಮಗನಿಗಾಗಿ ಪ್ರಲಾಪಿಸುತ್ತಿದ್ದಾನೆಂಬುದು ಎಲ್ಲ ಜನರಿಗೂ ಗೊತ್ತಾಗಿ ಅವರ ಜಯಘೋಷ ಗೋಳಾಟವಾಗಿ ಮಾರ್ಪಟ್ಟಿತು. ಜನರು ಆ ದಿನದ ಯುದ್ದದಲ್ಲಿ ಸೋತು ಓಡಿಬಂದಿರುವವರೋ ಎಂಬಂತೆ, ನಾಚಿಕೆಯಿಂದ ಕಳ್ಳತನವಾಗಿ ಊರನ್ನು ಹೊಕ್ಕರು.

ಕೀರ್ತನೆ 86:1-2,3-4,5-6
ಶ್ಲೋಕ: ಹೇ ಪ್ರಭೂ, ನೀಡೆನಗೆ ಸದುತ್ತರವನು |

ಹೇ ಪ್ರಭೂ, ನೀಡೆನಗೆ ಸದುತ್ತರವನು|
ಕಿವಿಗೊಡು; ದೀನನು, ದಲಿತನು ನಾನು||
ಕಾಪಾಡು ಪ್ರಭೂ, ನಾ ನಿನ್ನ ಭಕ್ತನು|
ಉದ್ಧರಿಸು, ನಿನ್ನ ನಂಬಿದ ದಾಸನನು||

ನೀನೆನಗೆ ದೇವನು ಕರುಣಿಸೆನ್ನನು|
ದಿನವೆಲ್ಲ ಪ್ರಭೂ ನಿನಗೆ ಮೊರೆಯಿಡುವೆನು||
ನಿನ್ನ ದಾಸನಿಗೆ ನೀಡು ಮನದಾನಂದವನು|
ನಿನಗೆ ಅಭಿಮುಖವಾಗಿಸಿರುವೆ ಎನ್ನಾತ್ಮವನು||

ಪ್ರಭೂ, ನೀನು ದಯಾವಂತನೂ ಕ್ಷಮಿಸುವವನೂ|
ಮೊರೆಯಿಡುವವರಿಗೆ ನೀನು ಕೃಪಾಪೂರ್ಣನು||
ಕಿವಿಗೊಡು ಪ್ರಭೂ, ನನ್ನ ಪ್ರಾರ್ಥನೆಗೆ|
ನನ್ನ ವಿಜ್ಞಾಪನೆಗಳ ಕೋರಿಕೆಗೆ||

ಘೋಷಣೆ ಕೀರ್ತನೆ 27:11
ಅಲ್ಲೆಲೂಯ, ಅಲ್ಲೆಲೂಯ!

ಬೋಧಿಸೆನಗೆ ಪ್ರಭೂ, ನಿನ್ನ ಮಾರ್ಗವನು | ಶತ್ರುರಹಿತ ಹಾದಿಯಲಿ ನಡೆಸು ಎನ್ನನು ||

ಅಲ್ಲೆಲೂಯ!

ಶುಭಸಂದೇಶ: ಮಾರ್ಕ 5:21-43

ಆ ಕಾಲದಲ್ಲಿ ಯೇಸು ದೋಣಿಯನ್ನೇರಿ ಸರೋವರದ ಆಚೆದಡಕ್ಕೆ ಮರಳಿದರು. ತೀರವನ್ನು ಸೇರಿಕೊಂಡಿವೆ ಜನರು ದೊಡ್ಡಗುಂಪಾಗಿ ಅವರ ಸುತ್ತಲೂ ನೆರೆದರು. ಪ್ರಾರ್ಥನಾಮಂದಿರದ ಅಧಿಕಾರಿಯೊಬ್ಬನು ಅಲ್ಲಿಗೆ ಬಂದನು. ಅವನ ಹೆಸರು ಯಾಯೀರ. ಅವನು ಯೇಸುವನ್ನು ನೋಡಿದೊಡನೆ ಅವರ ಪಾದಕ್ಕೆರಗಿ, " ನನ್ನ ಪುಟ್ಟ ಮಗಳು ಮರಣಾವಸ್ಥೆಯಲ್ಲಿದ್ದಾಳೆ; ತಾವು ಬಂದು ತಮ್ಮ ಹಸ್ತವನ್ನು ಅವಳ ಮೇಲಿಟ್ಟು, ಅವಳು ಗುಣಹೊಂದಿ ಬದುಕುವಂತೆ ಅನುಗ್ರಹಿಸಬೇಕು, " ಎಂದು ಬಹಳವಾಗಿ ವಿನಂತಿಸಿದನು. ಯೇಸು ಅವನ ಜೊತೆಯಲ್ಲಿ ಹೊರಟರು. ದೊಡ್ಡ ಜನಸ್ತೋಮವು ಯೇಸುವನ್ನು ಮುತ್ತಿಕೊಂಡು ಅವರ ಜೊತೆಯಲ್ಲೇ ಹೊರಟಿತು. ಹನ್ನೆರಡು ವರ್ಷಗಳಿಂದಲೂ ರಕ್ತಸ್ರಾವ ರೋಗದಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಆ ಗುಂಪಿನಲ್ಲಿದ್ದಳು. ಅನೇಕ ವೈದ್ಯರಿಂದ ಚಿಕಿತ್ಸೆ ಪಡೆದಿದ್ದರೂ ಕೈಯಲ್ಲಿದ್ದ ಹಣವನ್ನೆಲ್ಲಾ ವ್ಯಯಮಾಡಿದ್ದರೂ ಅವಳ ರೋಗ ಮಾತ್ರ ಉಲ್ಬಣ ಆಗುತ್ತಿತ್ತೇ ಹೊರತು ಸ್ವಲ್ಪವೂ ಗುಣಮುಖ ಆಗುತ್ತಿರಲಿಲ್ಲ. ಯೇಸುವಿನ ವಿಷಯವಾಗಿ ಜನರು ಹೇಳುತ್ತಿದ್ದುದನ್ನು ಆಕೆ ಕೇಳಿ, ಜನರ ಗುಂಪಿನಲ್ಲಿ ಸೇರಿ, ಯೇಸುವನ್ನು ಹಿಂಬಾಲಿಸಿದಳು. " ನಾನು ಅವರ ಉಡುಪನ್ನು ಮುಟ್ಟಿದರೂ ಸಾಕು, ಗುಣಹೊಂದುವೆನು " ಎಂದುಕೊಂಡು ಯೇಸುವಿನ ಉಡುಪನ್ನು ಮುಟ್ಟಿದಳು. ಅದನ್ನು ಮುಟ್ಟಿದಾಕ್ಷಣ ಅವಳ ರಕ್ತಸ್ರಾವ ನಿಂತು ಹೋಯಿತು. ಕಾಡುತ್ತಿದ್ದ ವ್ಯಾಧಿಯಿಂದ ತಾನು ಗುಣಹೊಂದಿದ್ದೇನೆಂದು ಆಕೆಗೆ ಅರಿವಾಯಿತು. ಇತ್ತ ಯೇಸು, ರೋಗವನ್ನು ಗುಣಪಡಿಸುವ ಶಕ್ತಿ ತಮ್ಮಿಂದ ಹೊರಹೊಮ್ಮಿದ್ದನ್ನು ತಕ್ಷಣ ತಿಳಿದು, ಸುತ್ತಲಿದ್ದ ಜನರತ್ತ ತಮ್ಮ ದೃಷ್ಟಿಯನ್ನು ಹರಸಿ, "ನನ್ನ ಉಡುಪನ್ನು ಮುಟ್ಟಿದವರಾರು? " ಎಂದು ಪ್ರಶ್ನಿಸಿದರು. ಅದಕ್ಕೆ ಶಿಷ್ಯರು, "ತಮ್ಮ ಸುತ್ತಲೂ ಜನರು ಮುತ್ತಿಕೊಂಡಿರುವುದು ತಮಗೆ ತಿಳಿದೇ ಇದೆ. ಆದರೂ ನನ್ನನ್ನು ಮುಟ್ಟಿದವರು ಯಾರೆಂದು ಗುರುತಿಸಲು ಸುತ್ತಲೂ ನೋಡುತ್ತಿದ್ದರು. ತನ್ನಲ್ಲಿ ಸಂಭವಿಸಿದ್ದನ್ನು ಅರಿತಿದ್ದ ಆ ಮಹಿಳೆ ಭಯದಿಂದ ನಡುಗುತ್ತಾ ಮುಂದೆ ಬಂದು ಯೇಸುವಿನ ಪಾದಕ್ಕೆ ಎರಗಿ, ಅವರಿಗೆ ನಡೆದ ಸಂಗತಿಯನ್ನು ತಿಳಿಸಿದಳು. ಯೇಸು ಆಕೆಗೆ, "ಮಗಳೇ, ನಿನ್ನ ವಿಶ್ವಾಸ ನಿನ್ನನ್ನು ಗುಣಪಡಿಸಿದೆ; ಸಮಾಧಾನದಿಂದ ಹೋಗು, ವ್ಯಾಧಿಮುಕ್ತಳಾಗಿ ಆರೋಗ್ಯದಿಂದಿರು, " ಎಂದು ಅನುಗ್ರಹಿಸಿದರು. ಯೇಸುಸ್ವಾಮಿ ಇನ್ನೂ ಮಾತನಾಡುತ್ತ ಇರುವಾಗಲೇ ಯಾಯಿರನ ಮನೆಯಿಂದ ಕೆಲವರು ಬಂದು ಅವನಿಗೆ, "ನಿಮ್ಮ ಮಗಳು ತೀರಿಹೋದಳು; ಇನ್ನೇಕೆ ಗುರುವಿಗೆ ತೊಂದರೆಕೊಡುತ್ತೀರಿ? " ಎಂದರು. ಅವರು ಹೇಳಿದ ಮಾತುಗಳನ್ನು ಯೇಸು ಕೇಳಿಯೂ ಅವನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ ಯಾಯಿರನಿಗೆ, "ಭಯಪಡಬೇಡ; ನಿನ್ನಲ್ಲಿ ವಿಶ್ವಾಸ ಒಂದಿದ್ದರೆ ಸಾಕು, " ಎಂದರು. ಅನಂತರ ಪೇತ್ರ, ಯಕೋಬ ಹಾಗು ಅವನ ಸೋದರ ಯೊವಾನ್ನ, ಇವರನ್ನು ಮಾತ್ರ ತಮ್ಮ ಜೊತೆಯಲ್ಲಿ ಕರೆದುಕೊಂಡು ಯಾಯಿರನ ಮನೆಯನ್ನು ತಲುಪಿದರು. ಅಲ್ಲಿ ಜನರ ಗೋಳಾಟ, ಗೊಂದಲದ ದೃಶ್ಯ ಕಣ್ಣಿಗೆ ಬಿತ್ತು. ಯೇಸು ಮನೆಯೊಳಕ್ಕೆ ಹೋಗಿ, "ಏತಕ್ಕೆ ಇಷ್ಟೆಲ್ಲಾ ಗಲಭೆ, ಗೋಳಾಟ? ಬಾಲಕಿ ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ, "ಏಂದರು. ಇದನ್ನು ಕೇಳಿದ ಜನರು, ಯೇಸುವನ್ನು ಪರಿಹಾಸ್ಯ ಮಾಡಿದರು. ಆದರೆ ಯೇಸು ಎಲ್ಲರನ್ನೂ ಹೊರಗೆ ಕಳುಹಿಸಿ ಬಾಲಕಿಯ ತಂದೆತಾಯಿಯನ್ನು ಮತ್ತು ತಮ್ಮೊಂದಿಗಿದ್ದ ಮೂವರು ಶಿಷ್ಯರನ್ನು ಮಾತ್ರ ಕರೆದುಕೊಂಡು ಆ ಬಾಲಕಿಯನ್ನು ಮಲಗಿಸಿದ್ದ ಕೊಠಡಿಯನ್ನು ಪ್ರವೇಶಿಸಿದರು. ಆಕೆಯ ಕೈಯನ್ನು ಹಿಡಿದು, "ತಲಿಥಾಕೂಮ್" ಎಂದರು. ('ಮಗಳೇ, ನಿನಗೆ ಹೇಳುತ್ತೇನೆ, ಎದ್ದೇಳು' ಎಂಬುದು ಆ ಮಾತಿನ ಅರ್ಥ). ಅವಳು ತಟ್ಟನೆ ಎದ್ದು ನಡೆದಾಡತೊಡಗಿದಳು. ಅಲ್ಲಿದ್ದವರೆಲ್ಲರೂ ಆಶ್ಚರ್ಯಭರಿತರಾದರು. ಅವಳಿಗೆ ಹನ್ನೆರಡು ವರ್ಷ ವಯಸ್ಸು ಆಗಿತ್ತು. ಈ ವಿಷಯವನ್ನು ಬೇರೆ ಯಾರಿಗೂ ತಿಳಿಸಬಾರದೆಂದು ಯೇಸು ಅವರಿಗೆ ಕಟ್ಟಪ್ಪಣೆ ಮಾಡಿದರು. ಬಾಲಕಿಗೆ ತಿನ್ನಲು ಏನಾದರೂ ಕೊಡುವಂತೆ ತಿಳಿಸಿದರು.

No comments:

Post a Comment