ಮೊದಲನೇ ವಾಚನ: 1 ಸಮುವೇಲ 15:16-23
ಆಗ ಸಮುವೇಲನು, “ಅದಿರಲಿ; ಸರ್ವೇಶ್ವರ ಕಳೆದ ರಾತ್ರಿ ನನಗೆ ಹೇಳಿದ್ದನ್ನು ತಿಳಿಸುತ್ತೇನೆ ಕೇಳು,” ಎಂದನು. ಅವನು, “ಹೇಳು” ಎನ್ನಲು ಸಮುವೇಲನು, “ನೀನು ನಿನ್ನ ದೃಷ್ಟಿಯಲ್ಲಿ ಅಲ್ಪನಾಗಿದ್ದರೂ ಸರ್ವೇಶ್ವರ ನಿನಗೆ ಇಸ್ರಯೇಲರಲ್ಲಿ ರಾಜಾಭಿಷೇಕ ಮಾಡಿದ್ದರಿಂದ ನೀನು ಎಲ್ಲಾ ಕುಲಗಳಿಗೆ ಶಿರಸ್ಸಾದೆ. ಅವರು ನಿನಗೆ, ‘ಹೊರಟು ಹೋಗಿ ದುಷ್ಟರಾದ ಅಮಾಲೇಕ್ಯರೊಡನೆ ಯುದ್ಧಮಾಡಿ ಅವರೆಲ್ಲರನ್ನೂ ಸಂಪೂರ್ಣವಾಗಿ ನಾಶಮಾಡು’ ಎಂದು ಹೇಳಿದರು. ಆದರೆ ನೀನು ಸರ್ವೇಶ್ವರನ ಮಾತನ್ನು ಕೇಳದೆ, ಕೊಳ್ಳೆಗಾಗಿ ಮನಸೋತು, ಅವರಿಗೆ ದ್ರೋಹಮಾಡಿದ್ದೇಕೆ?” ಎಂದನು. ಆಗ ಸೌಲನು ಸಮುವೇಲನಿಗೆ, “ಏನು? ನಾನು ಸರ್ವೇಶ್ವರನ ಮಾತನ್ನು ಕೇಳಲಿಲ್ಲವೇ? ಅವರು ಕಳುಹಿಸಿದಲ್ಲಿಗೆ ಹೋಗಿ ಅಮಾಲೇಕ್ಯರನ್ನೆಲ್ಲ ಸಂಹರಿಸಿ ಅವರ ಅರಸನಾದ ಅಗಾಗನನ್ನು ಹಿಡಿದುತಂದೆ. ಆದರೆ ಜನರು ಸಂಪೂರ್ಣವಾಗಿ ಸಂಹರಿಸಬೇಕಾದ ಕೊಳ್ಳೆಯಲ್ಲಿ ಉತ್ತಮವಾದ ಕುರಿದನಗಳನ್ನು ನಿಮ್ಮ ದೇವರಾದ ಸರ್ವೇಶ್ವರನಿಗೆ ಗಿಲ್ಗಾಲಿನಲ್ಲಿ ಬಲಿಯರ್ಪಣೆ ಮಾಡುವುದಕ್ಕಾಗಿ ಉಳಿಸಿ ತಂದರು,” ಎಂದು ಉತ್ತರಕೊಟ್ಟನು. ಅದಕ್ಕೆ ಸಮುವೇಲನು ಇಂತೆಂದನು: “ವಿಧೇಯತೆಯನ್ನು ಮೆಚ್ಚುವಷ್ಟು ಬಲಿ ಹೋಮಗಳನ್ನು ಮೆಚ್ಚು ತ್ತಾರೆಯೇ ಸರ್ವೇಶ್ವರಾ? ಇಲ್ಲ. ಬಲಿಯರ್ಪಣೆಗಿಂತ ಆಜ್ಞಾಪಾಲನೆ ಶ್ರೇಷ್ಠ; ಟಗರುಗಳ ಕೊಬ್ಬಿಗಿಂತ ವಿಧೇಯತೆ ವಿಶಿಷ್ಟ. ತಂತ್ರಮಂತ್ರಗಳಷ್ಟೇ ಕೆಟ್ಟದು ಪ್ರತಿಭಟನೆ ಕಳ್ಳಭಕ್ತಿಗೂ ವಿಗ್ರಹಾರಾಧನೆಗೂ ಸಮಾನ ಹಟಮಾರಿತನ ನೀ ತಳ್ಳಿಬಿಟ್ಟೆ ಸರ್ವೇಶ್ವರನ ಆದೇಶವನ್ನು; ತಳ್ಳಿಬಿಟ್ಟರವರು ನಿನ್ನ ಅರಸುತನವನ್ನು” ಎಂದು ನುಡಿದನು.
ಕೀರ್ತನೆ: 50:8-9, 16-17, 21, 23
ಶ್ಲೋಕ: ಸನ್ಮಾರ್ಗ ಹಿಡಿದವನಿಗೆ ಪರಮ ಜೀವೋದ್ದಾರವನು
ಶುಭಸಂದೇಶ: ಮಾರ್ಕ 2:18-22
ಯೊವಾನ್ನನ ಶಿಷ್ಯರು ಮತ್ತು ಫರಿಸಾಯರು ಉಪವಾಸವ್ರತವನ್ನು ಕೈಗೊಂಡಿದ್ದ ಒಂದು ಸಂದರ್ಭದಲ್ಲಿ, ಕೆಲವು ಜನರು ಯೇಸುಸ್ವಾಮಿಯ ಬಳಿಗೆ ಬಂದರು. ಅವರು, “ಯೊವಾನ್ನನ ಶಿಷ್ಯರು ಮತ್ತು ಫರಿಸಾಯರ ಶಿಷ್ಯರು ಉಪವಾಸವ್ರತವನ್ನು ಕೈಗೊಳ್ಳುತ್ತಾರೆ, ಆದರೆ ನಿನ್ನ ಶಿಷ್ಯರೇಕೆ ಹಾಗೆ ಮಾಡುವುದಿಲ್ಲ?” ಎಂದು ಕೇಳಿದರು. ಅದಕ್ಕೆ ಯೇಸು, “ಮದುವಣಿಗನು ಜೊತೆಯಲ್ಲಿ ಇರುವಾಗ ಅವನ ಆಪ್ತರು ಉಪವಾಸ ಮಾಡುವುದುಂಟೆ? ಖಂಡಿತವಾಗಿಯೂ ಇಲ್ಲ. ಅವನು ತಮ್ಮ ಜೊತೆಯಲ್ಲಿರುವಷ್ಟು ಕಾಲ ಅವರು ಉಪವಾಸ ಮಾಡಲಾಗದು. ಮದುವಣಿಗನು ಅವರಿಂದ ಅಗಲಬೇಕಾಗುವ ಕಾಲ ಬರುವುದು. ಆಗ ಅವರು ಉಪವಾಸ ಮಾಡುವರು. “ಹಳೆಯ ಅಂಗಿಗೆ ಹೊಸ ಬಟ್ಟೆಯ ತೇಪೆಯನ್ನು ಯಾರೂ ಹಾಕುವುದಿಲ್ಲ. ಹಾಕಿದಲ್ಲಿ, ಹೊಸ ತೇಪೆಯು ಹಳೆಯ ಅಂಗಿಯನ್ನು ಹಿಂಜುವುದರಿಂದ ಹರಕು ಹೆಚ್ಚಾಗುತ್ತದೆ. ಅಂತೆಯೇ ಹಳೆಯ ಬುದ್ದಲಿಗಳಲ್ಲಿ ಹೊಸ ಮದ್ಯವನ್ನು ಯಾರೂ ತುಂಬಿಡುವುದಿಲ್ಲ. ತುಂಬಿಟ್ಟರೆ ಅದರಿಂದ ಬುದ್ದಲಿಗಳು ಬಿರಿಯುತ್ತವೆ. ಮದ್ಯವು ಮತ್ತು ಬುದ್ದಲಿಗಳು ಎರಡೂ ನಷ್ಟವಾಗುತ್ತವೆ. ಆದುದರಿಂದ ಹೊಸ ಮದ್ಯವನ್ನು ಹೊಸ ಬುದ್ದಲಿಗಳಲ್ಲೇ ತುಂಬಿಡಬೇಕು,” ಎಂದರು.
ಕೀತ೯ನೆ ಚರಣಗಳು ಇದ್ದರೆ ಒಳ್ಳೆಯದು ನನ್ನ ಅನಿಸಿಕೆ🙏
ReplyDeleteಅಲ್ಲೆಲೂಯ ಶ್ಲೋಕ ಸಹ ಇದ್ದರೆ ಇನ್ನು ಒಳ್ಳೆಯದು
ReplyDeleteಸರಿ ಪ್ರಯತ್ನಿಸುತ್ತೇವೆ
Delete