ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

31.01.22 - “ನನ್ನನ್ನು ನಿಮ್ಮ ಜೊತೆಯಲ್ಲೇ ಕರೆದುಕೊಂಡು ಹೋಗಿ,”

ಮೊದಲನೇ ವಾಚನ: 2 ಸಮುವೇಲ 15:13-14, 30; 16:15-13

ಇಸ್ರಯೇಲರ ಮನಸ್ಸು ಅಬ್ಷಾಲೋಮನ ಕಡೆಗೆ ತಿರುಗಿಕೊಂಡಿತೆಂಬ ವರ್ತಮಾನ ದಾವೀದನಿಗೆ ಮುಟ್ಟಿತು. ಆಗ ಅವನು ಜೆರುಸಲೇಮಿನಲ್ಲಿದ್ದ ತನ್ನ ಸೇವಕರಿಗೆ, “ಏಳಿ, ಓಡಿ ಹೋಗೋಣ; ಇಲ್ಲೇ ಇದ್ದರೆ ನಾವು ಅಬ್ಷಾಲೋಮನ ಕೈಯಿಂದ ತಪ್ಪಿಸಿಕೊಳ್ಳಲಾರೆವು. ಬೇಗ ಹೊರಡೋಣ; ಅವನು ಅಕಸ್ಮಾತ್ತಾಗಿ ನಮ್ಮ ಮೇಲೆ ಬಿದ್ದು ನಮಗೆ ದುರ್ಗತಿಯನ್ನುಂಟು ಮಾಡಿ ಪಟ್ಟಣದವರನ್ನೆಲ್ಲಾ ಕತ್ತಿಯಿಂದ ಸಂಹರಿಸಾನು,” ಎಂದು ಹೇಳಿದನು. ದಾವೀದನು, ಮುಖವನ್ನು ಮರೆಮಾಚಿಕೊಂಡು ಅಳುತ್ತಾ, ಬರಿಗಾಲಿನಿಂದ ಎಣ್ಣೇ ಮರಗಳ ಗುಡ್ಡವನ್ನೇರಿದನು. ಅವನ ಜೊತೆಯಲ್ಲಿದ್ದ ಜನರೂ ಮೋರೆಮುಚ್ಚಿಕೊಂಡು ಅಳುತ್ತಾ ಏರಿದರು. ಅರಸನಾದ ದಾವೀದನು ಬಹುರೀಮಿಗೆ ಬಂದಾಗ ಸೌಲನ ವಂಶದವನೂ ಗೇರನ ಮಗನೂ ಆದ ಶಿಮ್ಮಿ ಎಂಬವನು ದಾವೀದನನ್ನು ಶಪಿಸುತ್ತಾ ಆ ಊರಿನಿಂದ ಹೊರಗೆ ಬಂದನು. ಅವನು ದಾವೀದನ, ಅವನ ಎಲ್ಲ ಸೇವಕರ, ಎಡಬಲದಲ್ಲಿದ್ದ ಸೈನಿಕರ ಹಾಗು ಶೂರರ ಕಡೆಗೆ ಕಲ್ಲೆಸೆಯತೊಡಗಿದನು. ಅಲ್ಲದೆ, ಅವನು ದಾವೀದನನ್ನು ಶಪಿಸುತ್ತಾ, “ನಡೆ, ಕೊಲೆಗಾರನೇ, ನೀಚನೇ, ನಡೆ; ಸೌಲನ ರಾಜ್ಯವನ್ನು ಕಬಳಿಸಿಕೊಂಡು, ಅವನ ಮನೆಯವರನ್ನು ಕೊಂದದ್ದಕ್ಕಾಗಿ ಸರ್ವೇಶ್ವರ ನಿನಗೆ ಮುಯ್ಯಿ ತೀರಿಸಿದ್ದಾರೆ. ಅವರು, ರಾಜ್ಯವನ್ನು ನಿನ್ನ ಮಗ ಅಬ್ಷಾಲೋಮನಿಗೆ ಕೊಟ್ಟುಬಿಟ್ಟರು. ಕೊಲೆಗಾರನೇ, ಇಗೋ, ನಿನಗೆ ಈಗ ತಕ್ಕ ಆಪತ್ತು ಬಂದಿದೆ,” ಎಂದನು. ಆಗ ಚೆರೂಯಳ ಮಗ ಅಬೀಷೈಯು ಅರಸನಿಗೆ, “ಈ ಸತ್ತನಾಯಿ ಅರಸನಾದ ನನ್ನ ಒಡೆಯರನ್ನು ಶಪಿಸುವುದೇನು? ಅಪ್ಪಣೆಯಾಗಲಿ, ನಾನು ಅವನಿರುವಲ್ಲಿಗೇ ಹೋಗಿ, ಅವನ ತಲೆ ಹಾರಿಸಿಕೊಂಡು ಬರುತ್ತೇನೆ,” ಎಂದನು. ಅದಕ್ಕೆ ಅರಸನು, “ಚೆರೂಯಳ ಮಕ್ಕಳೇ, ನನಗೆ ನಿಮ್ಮ ಗೊಡವೆಯೇ ಬೇಡ; ಬಿಡಿ, ಅವನು ಶಪಿಸಲಿ; ದಾವೀದನನ್ನು ಶಪಿಸೆಂದು ಸರ್ವೇಶ್ವರಸ್ವಾಮಿಯೇ ಅವನಿಗೆ ಆಜ್ಞಾಪಿಸಿದ ಮೇಲೆ ‘ನೀನು ಹೀಗೇಕೆ ಮಾಡಿದೆ’ ಎಂದು ಅವನನ್ನು ಯಾರು ಕೇಳಲಾದೀತು?” ಎಂದು ಉತ್ತರಕೊಟ್ಟನು. ಇದಲ್ಲದೆ ಅವನು ಅಬೀಷೈಗೂ ತನ್ನ ಎಲ್ಲಾ ಸೇವಕರಿಗೂ, “ನೋಡಿ, ನನ್ನಿಂದ ಹುಟ್ಟಿದ ನನ್ನ ಮಗನೇ ನನ್ನ ಪ್ರಾಣವನ್ನು ತೆಗೆಯಬೇಕೆಂದಿರುವಲ್ಲಿ ಈ ಬೆನ್ಯಾವಿೂನ್ಯನು ಹೀಗೆ ಮಾಡುವುದು ಯಾವ ಲೆಕ್ಕ? ಬಿಡಿ, ಅವನು ಶಪಿಸಲಿ; ಹೀಗೆ ಮಾಡಬೇಕೆಂದು ಸರ್ವೇಶ್ವರನೇ ಅವನಿಗೆ ಆಜ್ಞಾಪಿಸಿದ್ದಾರೆ. ಬಹುಶಃ ಸರ್ವೇಶ್ವರ ನನ್ನ ಕಷ್ಟವನ್ನು ನೋಡಿ ಈ ದಿನ ಶಾಪಕ್ಕೆ ಬದಲಾಗಿ ನನಗೆ ಶುಭವನ್ನು ಅನುಗ್ರಹಿಸಿಯಾರು,” ಎಂದು ಹೇಳಿದನು. ದಾವೀದನೂ ಅವನ ಜನರೂ ದಾರಿಹಿಡಿದು ಹೋಗುವಾಗ ಶಿಮ್ಮಿಯು ಶಪಿಸುತ್ತಾ ಕಲ್ಲುಮಣ್ಣು ತೂರುತ್ತಾ, ಗುಡ್ಡದ ಓರೆಯಲ್ಲಿ ಸಮಾನಾಂತರದಲ್ಲೇ ನಡೆಯುತ್ತಿದ್ದನು.

ಕೀರ್ತನೆ: 3:2-3, 4-5, 6-7
ಶ್ಲೋಕ: ಎದ್ದೇಳು ದೇವಾ, ಕಾಪಾಡ ಬಾ ಪ್ರಭುವೇ

ಶುಭಸಂದೇಶ: ಮಾರ್ಕ 5:1-20

ಅವರೆಲ್ಲರು ಗಲಿಲೇಯ ಸರೋವರವನ್ನು ದಾಟಿ ಆಚೆಯ ಕಡೆಯಲ್ಲಿದ್ದ ಗೆರಸೇನರ ಪ್ರಾಂತ್ಯವನ್ನು ಸೇರಿದರು. ಯೇಸುಸ್ವಾಮಿ ದೋಣಿಯಿಂದ ಇಳಿಯುತ್ತಲೇ, ದೆವ್ವ ಹಿಡಿದಿದ್ದ ಒಬ್ಬನು ಸಮಾಧಿಯ ಗುಹೆಯೊಳಗಿಂದ ಅವರ ಎದುರಿಗೆ ಬಂದನು. ಸಮಾಧಿಯ ಗುಹೆಗಳೇ ಅವನಿಗೆ ವಾಸ ಸ್ಥಳವಾಗಿದ್ದವು. ಅವನನ್ನು ಬಂಧಿಸಲು ಯಾರಿಂದಲೂ ಆಗುತ್ತಿರಲಿಲ್ಲ; ಸಂಕೋಲೆಯಿಂದ ಬಂಧಿಸುವುದೂ ಅಸಾಧ್ಯವಾಗಿತ್ತು. ಸರಪಳಿ ಸಂಕೋಲೆಗಳಿಂದ ಅವನನ್ನು ಕಟ್ಟಿದಾಗ ಅವುಗಳನ್ನು ತುಂಡು ತುಂಡು ಮಾಡುತ್ತಿದ್ದನು. ಅವನನ್ನು ಹತೋಟಿಗೆ ತರುವ ಸಾಮರ್ಥ್ಯ  ಯಾರಿಗೂ ಇರಲಿಲ್ಲ. ಹಗಲಿರುಳೆನ್ನದೆ ಸಮಾಧಿಯ ಗುಹೆಗಳಲ್ಲಿಯೂ ಬೆಟ್ಟಗುಡ್ಡಗಳಲ್ಲಿಯೂ ಅವನು ಅಲೆದಾಡುತ್ತಾ ಅರಚಾಡುತ್ತಾ ಕಲ್ಲುಗಳಿಂದ ತನ್ನನ್ನು ತಾನೇ ಚಚ್ಚಿಕೊಳ್ಳುತ್ತಾ ಇದ್ದನು. ದೂರದಲ್ಲಿ ಬರುತ್ತಿದ್ದ ಯೇಸುಸ್ವಾಮಿಯನ್ನು ಕಂಡು, ಅವನು ಓಡಿಬಂದು ಅವರಿಗೆ ಸಾಷ್ಟಾಂಗವೆರಗಿ, “ಸ್ವಾಮಿ ಯೇಸುವೇ, ಪರಮೋನ್ನತ ದೇವರ ಪುತ್ರರೇ, ನಿಮಗೇಕೆ ನನ್ನ ಗೊಡವೆ? ದೇವರಾಣೆ, ನನ್ನನ್ನು ಪೀಡಿಸಬೇಡಿ, ನಿಮ್ಮನ್ನು ಬೇಡಿಕೊಳ್ಳುತ್ತೇನೆ,” ಎಂದು ಅಬ್ಬರಿಸಿದನು. ಕಾರಣ - ಅವನನ್ನು ಬಿಟ್ಟು ತೊಲಗಬೇಕೆಂದು ಯೇಸು ದೆವ್ವಕ್ಕೆ ಈ ಮೊದಲೇ ಕಟ್ಟಪ್ಪಣೆ ಮಾಡಿದ್ದರು. “ನಿನ್ನ ಹೆಸರೇನು?” ಎಂದು ಯೇಸು ಅವನನ್ನು ಕೇಳಲು, “ನನ್ನ ಹೆಸರು ‘ಗಣ’; ಏಕೆಂದರೆ ನಾವು ಬಹುಮಂದಿ ಇದ್ದೇವೆ,” ಎಂದನು. ಅಲ್ಲದೆ, “ನಮ್ಮನ್ನು ಆ ಪ್ರಾಂತ್ಯದಿಂದ ಹೊರಗಟ್ಟಬೇಡಿ,” ಎಂದು ಯೇಸುವನ್ನು ಬಹಳವಾಗಿ ಬೇಡಿಕೊಂಡನು. ಸಮೀಪದಲ್ಲೇ ಹಂದಿಗಳ ದೊಡ್ಡ ಹಿಂಡೊಂದು ಬೆಟ್ಟದ ತಪ್ಪಲಲ್ಲಿ ಮೇಯುತ್ತಿತ್ತು. ಆ ದೆವ್ವಗಳು, “ನಾವು ಆ ಹಂದಿಗಳೊಳಗೆ ಸೇರಿಕೊಳ್ಳುವಂತೆ ನಮ್ಮನ್ನು ಕಳುಹಿಸಿಕೊಡಿ,” ಎಂದು ಯೇಸುವನ್ನು ಬೇಡಿಕೊಂಡವು. ಅವರು ಹಾಗೆಯೆ ಅಪ್ಪಣೆ ಮಾಡಿದರು. ಕೂಡಲೇ ದೆವ್ವಗಳು ಆ ವ್ಯಕ್ತಿಯಿಂದ ಹೊರಬಂದು ಹಂದಿಗಳೊಳಗೆ ಹೊಕ್ಕವು.

ಇದರ ಪರಿಣಾಮವಾಗಿ ಎರಡು ಸಾವಿರ ಹಂದಿಗಳಿದ್ದ ಆ ಹಿಂಡು, ಬೆಟ್ಟದ ಕಡಿದಾದ ಬದಿಯಿಂದ ಸರೋವರದತ್ತ ಧಾವಿಸಿ, ಅದರಲ್ಲಿ ಬಿದ್ದು ಮುಳುಗಿ ಹೋಯಿತು. ಹಂದಿಗಳನ್ನು ಮೇಯಿಸುತ್ತಿದ್ದವರು ಓಡಿ ಹೋಗಿ ಊರುಕೇರಿಗಳಲ್ಲಿ ಈ ವಿಷಯವನ್ನು ತಿಳಿಸಿದರು. ನಡೆದ ಸಂಗತಿ ಏನೆಂಬುದನ್ನು ನೋಡಲು ಜನರು ಹೊರಟು, ಯೇಸುಸ್ವಾಮಿಯ ಬಳಿಗೆ ಬಂದರು. ದೆವ್ವಗಣದಿಂದ ಪೀಡಿತನಾಗಿದ್ದವನು ಈಗ ಬಟ್ಟೆಯನ್ನು ತೊಟ್ಟುಕೊಂಡು, ಸ್ವಸ್ಥಬುದ್ಧಿಯುಳ್ಳವನಾಗಿ ಕುಳಿತಿರುವುದನ್ನು ಕಂಡು ಅವರೆಲ್ಲರೂ ಗಾಬರಿಗೊಂಡರು. ನಡೆದುದನ್ನು ಕಣ್ಣಾರೆ ನೋಡಿದವರು ದೆವ್ವ ಹಿಡಿದಿದ್ದವನು ಸ್ವಸ್ಥನಾದ ವಿಧವನ್ನು ಮತ್ತು ಹಂದಿಗಳಿಗಾದ ಗತಿಯನ್ನು ಅವರಿಗೆ ವಿವರಿಸಿದರು. ಇದನ್ನು ಕೇಳಿದ ಜನರು ಯೇಸುವಿಗೆ, ತಮ್ಮ ಪ್ರಾಂತ್ಯವನ್ನು ಬಿಟ್ಟು ಹೋಗಬೇಕೆಂದು ಮನವಿಮಾಡಿಕೊಂಡರು. ಯೇಸು ದೋಣಿಯನ್ನು ಹತ್ತುತ್ತಿದ್ದಾಗ ದೆವ್ವ ಹಿಡಿದಿದ್ದವನು, “ನನ್ನನ್ನು ನಿಮ್ಮ ಜೊತೆಯಲ್ಲೇ ಕರೆದುಕೊಂಡು ಹೋಗಿ,” ಎಂದು ಬಿನ್ನವಿಸಿಕೊಂಡನು. ಯೇಸು ಅದಕ್ಕೊಪ್ಪದೆ, “ನೀನು ನಿನ್ನ ಮನೆಗೂ ನಿನ್ನ ಸ್ವಜನರ ಬಳಿಗೂ ಹೋಗು. ಸರ್ವೇಶ್ವರ ನಿನಗೆ ಎಂಥಾ ಉಪಕಾರ ಮಾಡಿದ್ದಾರೆ, ಎಷ್ಟು ಕರುಣೆ ತೋರಿಸಿದ್ದಾರೆ, ಎಂದು ಅವರಿಗೆ ವಿವರಿಸು,” ಎಂದರು. ಅಂತೆಯೇ ಅವನು ಹೊರಟು ಹೋಗಿ, ಯೇಸು ತನಗೆ ಮಾಡಿದ ಮಹಾದುಪಕಾರವನ್ನು ದೆಕಪೊಲಿ ಎಂಬ ನಾಡಿನಲ್ಲಿ ಪ್ರಕಟಿಸಿದನು. ಕೇಳಿದವರೆಲ್ಲರೂ ಆಶ್ಚರ್ಯ ಚಕಿತರಾದರು. 

No comments:

Post a Comment