ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

03.01.22 - "ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿರಿ, ದೇವರಿಗೆ ಅಭಿಮುಖರಾಗಿರಿ, ಸ್ವರ್ಗಸಾಮ್ರಾಜ್ಯ ಸಮೀಪಿಸಿತು"

ಮೊದಲನೇ ವಾಚನ: 1 ಯೋವಾನ್ನ 3:22-4:6

ಪ್ರಿಯರೇ, ನಾವು ದೇವರ ಆಜ್ಞೆಗಳಿಗೆ ವಿಧೇಯರಾಗಿ ಅವರಿಗೆ ಮೆಚ್ಚುಗೆಯಾದವುಗಳನ್ನೇ ಮಾಡುವುದರಿಂದ ನಾವು ಕೋರುವುದೆಲ್ಲವನ್ನೂ ಅವರಿಂದ ಪಡೆಯುತ್ತೇವೆ. ನಾವು ದೇವರ ಪುತ್ರ ಯೇಸುಕ್ರಿಸ್ತರ ನಾಮದಲ್ಲಿ ವಿಶ್ವಾಸವಿಟ್ಟು ಅವರು ವಿಧಿಸಿದಂತೆ ಒಬ್ಬರನ್ನೊಬ್ಬರು ಪ್ರೀತಿಸಬೇಕು. ಇದೇ ಅವರ ಆಜ್ಞೆ. ದೇವರ ಆಜ್ಞೆಯನ್ನು ಪಾಲಿಸುವವನು ಅವರಲ್ಲಿ ನೆಲೆಸಿರುತ್ತಾನೆ. ದೇವರೂ ಅವನಲ್ಲಿ ನೆಲೆಸಿರುತ್ತಾರೆ. ದೇವರು ನಮ್ಮಲ್ಲಿ ನೆಲೆಸಿದ್ದಾರೆಂದು ಅವರು ದಯಪಾಲಿಸುವ ಪವಿತ್ರಾತ್ಮರಿಂದಲೇ ತಿಳಿದುಕೊಳ್ಳುತ್ತೇವೆ. ಪ್ರಿಯರೇ, “ನಾವು ಪವಿತ್ರಾತ್ಮ ಪ್ರೇರಿತರು” ಎಂದು ಹೇಳುವ ಎಲ್ಲರನ್ನೂ ನಂಬಬಾರದು. ಆ ಪ್ರೇರಣೆ ದೇವರಿಂದ ಬಂದಿದೆಯೇ ಎಂದು ಪರೀಕ್ಷಿಸಿ ನೋಡಬೇಕು. ಏಕೆಂದರೆ, ಎಷ್ಟೋ ಮಂದಿ ಕಪಟ ಪ್ರವಾದಿಗಳು ಎಲ್ಲೆಡೆಯಲ್ಲೂ ಹರಡಿದ್ದಾರೆ. ದೇವರ ಆತ್ಮದಿಂದ ಬಂದ ಪ್ರೇರಣೆಯನ್ನು ನೀವು ಹೀಗೆ ಗುರುತಿಸಬಹುದು: ಮನುಷ್ಯ ಆಗಿ ಬಂದ ಕ್ರಿಸ್ತಯೇಸುವನ್ನು ಒಪ್ಪಿಕೊಳ್ಳುವ ಆತ್ಮವು ದೇವರಿಂದ ಪ್ರೇರಿತವಾದುದು. ಯೇಸುವನ್ನು ಒಪ್ಪಿಕೊಳ್ಳದ ಆತ್ಮ ದೇವರಿಂದ ಪ್ರೇರಿತವಾದುದಲ್ಲ. ಅದು ಕ್ರಿಸ್ತ ವಿರೋಧಿಯ ಆತ್ಮ. ಅದು ಬರುವುದೆಂದು ನೀವು ಕೇಳಿದ್ದೀರಿ; ಈಗಾಗಲೇ ಅದು ಲೋಕದಲ್ಲಿ ತಲೆದೋರಿದೆ. ಪ್ರಿಯ ಮಕ್ಕಳೇ, ನೀವಂತೂ ದೇವರಿಗೆ ಸೇರಿದವರು. ಲೋಕದಲ್ಲಿರುವ ದುರಾತ್ಮಕ್ಕಿಂತಲೂ ನಿಮ್ಮಲ್ಲಿರುವ ಆತ್ಮವು ಶ್ರೇಷ್ಠವಾದುದು. ಆದ್ದರಿಂದಲೇ ಆ ಕಪಟ ಪ್ರವಾದಿಗಳನ್ನು ಜಯಿಸಿದ್ದೀರಿ. ಅವರು ಲೋಕಕ್ಕೆ ಸೇರಿದವರು. ಆದ್ದರಿಂದ ಅವರು ಲೌಕಿಕವಾದುದನ್ನೇ ಮಾತನಾಡುತ್ತಾರೆ. ಎಂದೇ, ಲೋಕವು ಅವರಿಗೆ ಕಿವಿಗೊಡುತ್ತದೆ. ನಾವಾದರೋ ದೇವರಿಗೆ ಸೇರಿದವರು. ದೇವರನ್ನು ಅರಿತವನು ನಮಗೆ ಕಿವಿಗೊಡುತ್ತಾನೆ. ದೇವರಿಗೆ ಸೇರದವನು ನಮಗೆ ಕಿವಿಗೊಡುವುದಿಲ್ಲ. ಇದರಿಂದಲೇ ಸತ್ಯವನ್ನು ಸಾರುವ ಆತ್ಮ ಯಾವುದು ಮತ್ತು ಅಸತ್ಯವನ್ನು ಸಾರುವ ಆತ್ಮ ಯಾವುದು ಎಂಬುದು ನಮಗೆ ತಿಳಿಯುತ್ತದೆ. 
ಕೀರ್ತನೆ: 2:7-8, 10-11 v.8
ಶ್ಲೋಕ: ಕೇಳಿದೆಯಾದರೆ ನಿನಗಧೀನಮಾಡುವೆನು ರಾಷ್ಟ್ರಗಳನು ಕೊಡುವೆನು ನಿನಗೆ ಸ್ವಾಸ್ತ್ಯವಾಗಿ ಜಗದ ಆದ್ಯಂತ್ಯವನು. 

ಶುಭಸಂದೇಶ: ಮತ್ತಾಯ 4:12-17, 23-25


ಯೊವಾನ್ನನು ಬಂಧಿತನಾದನೆಂದು ಯೇಸುಸ್ವಾಮಿ ಕೇಳಿ, ಆ ಪ್ರಾಂತ್ಯವನ್ನು ಬಿಟ್ಟು ಗಲಿಲೇಯಕ್ಕೆ ಹೊರಟುಹೋದರು. ನಜರೇತ್ ಊರಿನಲ್ಲಿ ತಂಗದೆ ಗಲಿಲೇಯ ಸರೋವರದ ಸವಿೂಪದಲ್ಲಿರುವ ಕಫೆರ್ನವುಮ್ ಎಂಬ ಊರಿನಲ್ಲಿ ವಾಸಮಾಡಿದರು. ಇದು ಜೆಬುಲೋನ್ ಹಾಗೂ ನೆಫ್ತಲೀಮ್ ನಾಡುಗಳ ಸರಹದ್ದಿನಲ್ಲಿದೆ. ಹೀಗೆ: "ಜೆಬುಲೋನ್ ನಾಡೇ, ನೆಫ್ತಲೀಮ್ ನಾಡೇ, ಸರೋವರದ ಹತ್ತಿರವಿರುವ ಹಾದಿಬೀದಿಯೇ, ಜೋರ್ಡನಿನ ಹೊರವಲಯವೇ, ಕಾರ್ಗತ್ತಲಲ್ಲಿ ವಾಸಿಸುವವರಿಗೆ ದಿವ್ಯ ಜ್ಯೋತಿಯೊಂದು ಕಾಣಿಸಿತು. ಮರಣಛಾಯೆ ಕವಿದ ನಾಡಿಗರಿಗೆ ಅರುಣೋದಯವಾಯಿತು,"ಎಂದು ನುಡಿದ ಪ್ರವಾದಿ ಯೆಶಾಯನ ವಚನಗಳು ಈಡೇರಿದವು. ಅಂದಿನಿಂದ ಯೇಸು, "ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿರಿ, ದೇವರಿಗೆ ಅಭಿಮುಖರಾಗಿರಿ, ಸ್ವರ್ಗಸಾಮ್ರಾಜ್ಯ ಸಮೀಪಿಸಿತು," ಎಂಬ ಸಂದೇಶವನ್ನು ಬೋಧಿಸತೊಡಗಿದರು. ಯೇಸುಸ್ವಾಮಿ ಗಲಿಲೇಯ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಅಲ್ಲಿನ ಪ್ರಾರ್ಥನಾ ಮಂದಿರಗಳಲ್ಲಿ ಉಪದೇಶ ಮಾಡುತ್ತಿದ್ದರು. ದೈವರಾಜ್ಯದ ಸಂದೇಶವನ್ನು ಪ್ರಬೋಧಿಸುತ್ತಿದ್ದರು. ಜನರ ಎಲ್ಲಾ ತರಹದ ರೋಗರುಜಿನಗಳನ್ನೂ ಬೇನೆ ಬವಣೆಗಳನ್ನೂ ಗುಣಪಡಿಸುತ್ತಿದ್ದರು. ಅವರ ಕೀರ್ತಿ ಸಿರಿಯಾ ದೇಶದಲ್ಲೆಲ್ಲಾ ಹಬ್ಬಿತು. ದೆವ್ವ ಹಿಡಿದವರನ್ನೂ ಮೂರ್ಛಾರೋಗಿಗಳನ್ನೂ ಪಾರ್ಶ್ವವಾಯು ಪೀಡಿತರನ್ನೂ ನಾನಾ ತರಹದ ವ್ಯಾಧಿ ಹಾಗೂ ವೇದನೆಯಿಂದ ನರಳುತ್ತಿದ್ದ ಎಲ್ಲ ರೋಗಿಗಳನ್ನೂ ಅವರ ಬಳಿಗೆ ಕರೆ ತಂದರು. ಯೇಸು ಅವರೆಲ್ಲರನ್ನು ಸ್ವಸ್ಥಪಡಿಸಿದರು. ಗಲಿಲೇಯ, ದೆಕಪೊಲಿ, ಜೆರುಸಲೇಮ್, ಜುದೇಯ ಎಂಬ ಸ್ಥಳಗಳಿಂದಲೂ ಜೋರ್ಡನ್ ನದಿಯ ಆಚೆಕಡೆಯಿಂದಲೂ ಜನರು ತಂಡೋಪ ತಂಡವಾಗಿ ಬಂದು ಯೇಸುವನ್ನು ಹಿಂಬಾಲಿಸಿದರು.

No comments:

Post a Comment