27.01.22 - "ಬೆಳಕಿಗೆ ಬಾರದ ಮುಚ್ಚು ಮರೆಯಿಲ್ಲ, ರಟ್ಟಾಗದ ಗುಟ್ಟಿಲ್ಲ"

ಮೊದಲನೇಯ ವಾಚನ : 2 ಸಮುವೇಲ 7:18-19, 24-29

ಬಳಿಕ ದಾವೀದನು ಸರ್ವೇಶ್ವರನ ಸನ್ನಿಧಿಗೆ ಹೋಗಿ ಅಲ್ಲಿ ಕುಳಿತುಕೊಂಡು, “ಹೇ ಸರ್ವೇಶ್ವರಾ, ಸರ್ವೇಶ್ವರಾ, ತಾವು ನನ್ನನ್ನು ಇಷ್ಟು ಮುಂದಕ್ಕೆ ತರಲು ನಾನೆಷ್ಟರವನು! ನನ್ನ ಕುಟುಂಬ ಎಷ್ಟರದು! ಸರ್ವೇಶ್ವರಾ, ಸರ್ವೇಶ್ವರಾ, ಇದೂ ಸಾಲದೆಂದೆಣಿಸಿ, ನಿಮ್ಮ ದಾಸನ ಬಹು ಮುಂದಿನ ಸಂತಾನದ ವಿಷಯದಲ್ಲೂ ತಾವು ವಾಗ್ದಾನ ಮಾಡಿರುವಿರಿ. ಸರ್ವೇಶ್ವರಾ, ಸರ್ವೇಶ್ವರಾ, ತಾವು ಹೀಗೆ ವರ್ತಿಸುವುದು ನರಮಾನವರಿಗೆ ಎಂಥಾ ಭಾಗ್ಯ! ಇಸ್ರಯೇಲರು ಸದಾಕಾಲ ನಿಮ್ಮ ಪ್ರಜೆಗಳಾಗಿರಬೇಕೆಂದು ನಿರ್ಣಯಿಸಿದಿರಿ; ಸರ್ವೇಶ್ವರಾ, ತಾವಾದಿರಿ ಅವರಿಗೆ ದೇವರು! “ದೇವರೇ, ಸರ್ವೇಶ್ವರಾ, ತಾವು ತಮ್ಮ ದಾಸನನ್ನೂ ಅವನ ಕುಟುಂಬವನ್ನೂ ಕುರಿತು ಮಾಡಿದ ವಾಗ್ದಾನವನ್ನು ನೆರವೇರಿಸಿರಿ. ಅದು ಸದಾ ಸ್ಥಿರವಾಗಿರಲಿ. ‘ಸರ್ವಶಕ್ತರಾದ ಸರ್ವೇಶ್ವರ, ಇಸ್ರಯೇಲರ ದೇವರು,’ ಎಂಬ ತಮ್ಮ ನಾಮಧೇಯಗಳಿಗೆ ಸದಾಕಾಲವೂ ಮಹಿಮೆ ಉಂಟಾಗಲಿ! ತಮ್ಮ ದಾಸ ದಾವೀದನ ಮನೆತನವು ನಿಮ್ಮ ಸನ್ನಿಧಿಯಲ್ಲಿ ಸ್ಥಿರವಾಗಿರಲಿ. ಸರ್ವಶಕ್ತರಾದ ಸರ್ವೇಶ್ವರಾ, ಇಸ್ರಯೇಲ್ ದೇವರೇ, ತಾವು ತಮ್ಮ ದಾಸನಿಗೆ, ‘ನಾನು ನಿನಗೊಂದು ಮನೆತನವನ್ನು ಕಟ್ಟುವೆನು’ ಎಂದು ವಾಗ್ದಾನ ಮಾಡಿದ್ದೀರಿ. ಆದುದರಿಂದಲೇ ಈ ಪ್ರಕಾರ ನಿಮ್ಮನ್ನು ಪ್ರಾರ್ಥಿಸುವುದಕ್ಕೆ ಧೈರ್ಯಗೊಂಡೆ. ಸರ್ವೇಶ್ವರಾ, ಸರ್ವೇಶ್ವರಾ, ನೀವು ನಮ್ಮ ದೇವರು; ನಿಮ್ಮ ವಾಕ್ಯ ಸತ್ಯವಾದದ್ದು; ತಮ್ಮ ದಾಸನಾದ ನನಗೆ ಇಂಥ ಶ್ರೇಷ್ಟ ವಾಗ್ದಾನ ಮಾಡಿದ್ದೀರಿ. ನಿಮ್ಮ ದಾಸನ ಮನೆತನವನ್ನು ಆಶೀರ್ವದಿಸಿರಿ; ಸದಾಕಾಲ ನಿಮ್ಮ ಅನುಗ್ರಹ ಅದರ ಮೇಲಿರಲಿ. ಸರ್ವೇಶ್ವರಾ, ಸರ್ವೇಶ್ವರಾ, ವಾಗ್ದಾನ ಮಾಡಿದವರು ತಾವೇ. ತಮ್ಮ ಆಶೀರ್ವಾದದಿಂದ ತಮ್ಮ ದಾಸನಾದ ನನ್ನ ಮನೆತನದಲ್ಲಿ ನಿತ್ಯ ಸೌಭಾಗ್ಯ ನೆಲಸಿರಲಿ!” ಎಂದನು.

ಕೀರ್ತನೆ: 132:1-2, 3-5, 11, 12, 13-14
ಶ್ಲೋಕ : ದಾವೀದರಸನ ಸಿಂಹಾಸನವನ್ನು ದೇವರು ಆತನಿಗೆ ಕೊಡುವರು

ಶುಭಸಂದೇಶ: ಮಾರ್ಕ 4:21-25


ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಂದುವರಿಸುತ್ತಾ, “ಯಾರಾದರೂ ಉರಿಯುವ ದೀಪವನ್ನು ತಂದು ಬಟ್ಟಲ ಒಳಗಾಗಲಿ, ಮಂಚದ ಕೆಳಗಾಗಲಿ ಇಡುವುದುಂಟೇ? ನಿಶ್ಚಯವಾಗಿಯೂ ಇಲ್ಲ. ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. ಬೆಳಕಿಗೆ ಬಾರದ ಮುಚ್ಚು ಮರೆಯಿಲ್ಲ, ರಟ್ಟಾಗದ ಗುಟ್ಟಿಲ್ಲ. ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ. “ನೀವು ಕೇಳುವುದನ್ನು ಎಚ್ಚರಿಕೆಯಿಂದ ಗಮನಿಸಿರಿ; ಇತರರಿಗೆ ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದು ಕೊಡುವರು; ಇನ್ನೂ ಅಧಿಕವಾಗಿ ಕೊಡುವರು. ಉಳ್ಳವನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ. ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ,” ಎಂದರು.

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...