10.01.22 - "ನನ್ನನ್ನು ಹಿಂಬಾಲಿಸಿ ಬನ್ನಿ, ನಿಮ್ಮನ್ನು ಮನುಷ್ಯರನ್ನೇ ಹಿಡಿಯುವರನ್ನಾಗಿ ಮಾಡುವೆನು,"

ಮೊದಲನೇ ವಾಚನ: 1 ಸಮುವೇಲ 1:1-8

ಎಫ್ರಯಿಮ್ ಬೆಟ್ಟದ ಪ್ರದೇಶದಲ್ಲಿ ರಾಮಾ ಒಂದು ಊರು. ಆ ಊರಲ್ಲಿ ’ಎಲ್ಕಾನ’ ಎಂಬ ಒಬ್ಬ ಮನುಷ್ಯನಿದ್ದ. ಇವನು ಯೆರೋಹಾಮನ ಮಗ, ಎಲೀಹುವಿನ ಮೊಮ್ಮಗ ಹಾಗು ತೋಹುವಿನ ಮರಿಮಗ. ಈ ತೋಹು ಎಂಬುವನು ಎಫ್ರಯಿಮ್ಯನಾದ ಚೂಫನ ಮಗ. ಎಲ್ಕಾನನಿಗೆ ಇಬ್ಬರು ಹೆಂಡತಿಯರು. ಒಬ್ಬಳು ಹನ್ನ, ಇನ್ನೊಬ್ಬಳು ಪೆನಿನ್ನ. ಪೆನಿನ್ನಗೆ ಮಕ್ಕಳು ಇದ್ದರು; ಆದರೆ ಹನ್ನಳಿಗೆ ಇರಲಿಲ್ಲ. ಎಲ್ಕಾನನು ಪ್ರತಿ ವರ್ಷ ರಾಮಾದಿಂದ ಶಿಲೋವಿಗೆ ಹೋಗಿ ಸೇನಾಧೀಶ್ವರರಾದ ಸರ್ವೇಶ್ವರಸ್ವಾಮಿಗೆ ಬಲಿದಾನವನ್ನು ಸಮರ್ಪಿಸಿ ಆರಾಧಿಸುತ್ತಿದ್ದನು. ಅಲ್ಲಿ ಏಲಿಯನ ಮಕ್ಕಳಾದ ಹೊಫ್ನಿ, ಫೀನೆಹಾಸ ಎಂಬುವರು ಸರ್ವೇಶ್ವರನ ಯಾಜಕರಾಗಿದ್ದರು. ಎಲ್ಕಾನನು ಬಲಿಯರ್ಪಿಸಿದಾಗಲೆಲ್ಲಾ ತನ್ನ ಹೆಂಡತಿಯಾದ ಪೆನಿನ್ನಳಿಗೂ ಆಕೆಯ ಎಲ್ಲ ಗಂಡು ಹೆಣ್ಣುಮಕ್ಕಳಿಗೂ ಬಲಿಭೋಜನದ ಒಂದೊಂದು ಭಾಗವನ್ನು ಕೊಡುತ್ತಿದ್ದನು. ಅವನು ಹನ್ನಳನ್ನು ಬಹಳವಾಗಿ ಪ್ರೀತಿಸುತ್ತಿದ್ದರೂ ಒಂದು ಭಾಗವನ್ನು ಮಾತ್ರ ಆಕೆಗೆ ಕೊಡುತ್ತಾ ಇದ್ದನು. ಏಕೆಂದರೆ ಸರ್ವೇಶ್ವರ ಆಕೆಗೆ ಮಕ್ಕಳನ್ನು ಕೊಟ್ಟಿರಲಿಲ್ಲ. ಇದಲ್ಲದೆ, "ಸರ್ವೇಶ್ವರ ನಿನ್ನನ್ನು ಬಂಜೆಯಾಗಿ ಮಾಡಿದ್ದಾರೆ," ಎಂಬ ಚುಚ್ಚು ಮಾತುಗಳಿಂದ ನೋಯಿಸುತ್ತಿದ್ದಳು ಅವಳ ಸವತಿಯಾದ ಪೆನಿನ್ನಳು. ವರ್ಷ ವರ್ಷವೂ ಇದು ಹಾಗೆಯೇ ನೆಡೆಯುತ್ತಿತ್ತು: ಸರ್ವೇಶ್ವರನ ಮಂದಿರಕ್ಕೆ ಹೋದಾಗಲೆಲ್ಲ ಪೆನಿನ್ನಳು ಹನ್ನಳನ್ನು ಕೆಣಕುತ್ತಿದ್ದಳು. ಇದರಿಂದಾಗಿ ಒಮ್ಮೆ ಹನ್ನಳು ಊಟ ಮಾಡಲೊಲ್ಲದೆ ಅಳುತ್ತಾ ಇದ್ದಳು. ಆಗ ಆಕೆಯ ಗಂಡ ಎಲ್ಕಾನನು ಆಕೆಗೆ, "ಹನ್ನಾ, ಏಕೆ ಅಳುತ್ತಿರುವೆ? ಊಟಮಾಡದಿರುವುದಕ್ಕೆ ಕಾರಣ ಏನು? ವ್ಯಸನಪಡುವುದು ಏಕೆ? ಹತ್ತು ಮಕ್ಕಳಿಗಿಂತಲೂ ನಾನು ನಿನಗೆ ಹೆಚ್ಚಲ್ಲವೆ?" ಎಂದನು.

ಕೀರ್ತನೆ: 116:12-13, 14-17, 18-10
ಶ್ಲೋಕ: ಪ್ರಭುವೇ, ಅರ್ಪಿಸುವೆ ನಾ ನಿನಗೆ ಕೃತಜ್ಞತಾಬಲಿಗಳನ್ನು

ಶುಭಸಂದೇಶ: ಮಾರ್ಕ 1:14-20

ಯೊವಾನ್ನನು ಬಂಧಿತನಾದ ಬಳಿಕ ಯೇಸುಸ್ವಾಮಿ ಗಲಿಲೇಯಕ್ಕೆ ಹೋಗಿ ದೇವರ ಶುಭಸಂದೇಶವನ್ನು ಸಾರಿದರು: "ಕಾಲವು ಪರಿಪಕ್ವವಾಗಿದೆ, ದೇವರ ಸಾಮ್ರಾಜ್ಯವು ಸಮೀಪಿಸಿದೆ; ಪಶ್ಚಾತ್ತಾಪಪಟ್ಟು ಪಾಪಜೀವನಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ. ಶುಭಸಂದೇಶದಲ್ಲಿ ವಿಶ್ವಾಸವಿಡಿ," ಎಂದು ಘೋಷಿಸಿದರು. ಯೇಸುಸ್ವಾಮಿ ಗಲಿಲೇಯ ಸರೋವರದ ತೀರದಲ್ಲಿ ನಡೆದು ಹೋಗುತ್ತಿದ್ದಾಗ ಸಿಮೋನನ್ನೂ ಆತನ ಸಹೋದರ ಅಂದ್ರೇಯನನ್ನೂ ಕಂಡರು. ಬೆಸ್ತರಾದ ಇವರು ಸರೋವರದಲ್ಲಿ ಬಲೆ ಬೀಸುತ್ತಾ ಇದ್ದರು. ಯೇಸು ಅವರಿಗೆ, "ನನ್ನನ್ನು ಹಿಂಬಾಲಿಸಿ ಬನ್ನಿ, ನಿಮ್ಮನ್ನು ಮನುಷ್ಯರನ್ನೇ ಹಿಡಿಯುವರನ್ನಾಗಿ ಮಾಡುವೆನು," ಎಂದು ಕರೆದರು. ತಕ್ಷಣವೇ ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು. ಇನ್ನೂ ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಾಗ, ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನರನ್ನು ಯೇಸು ಕಂಡರು. ಅವರು ದೋಣಿಯಲ್ಲಿ ಕುಳಿತು ತಮ್ಮ ಬಲೆಗಳನ್ನು ಸರಿಪಡಿಸುತ್ತಿದ್ದರು. ಕೂಡಲೇ, ಯೇಸು ಅವರನ್ನು ಕರೆದರು. ಅವರೂ ತಮ್ಮ ತಂದೆ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿಯಲ್ಲೇ ಬಿಟ್ಟು ಯೇಸುವನ್ನು ಹಿಂಬಾಲಿಸಿದರು.

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...